13. ಪಟ್ಟಣಗೆರೆ ಸೋದರರು
ವೆಂಕಟಕೃಷ್ಣಯ್ಯ, ವೆಂಕಟರಾಮಯ್ಯ, ವೆಂಕಟೇಶಯ್ಯ ಮತ್ತು ಹಿರಿಯಣ್ಣಯ್ಯ ಪಟ್ಟಣಗೆರೆ ವೆಂಕಟದಾಸಪ್ಪ ಪಟ್ಟಣಗೆರೆ ವೆಂಕಟದಾಸಪ್ಪ ನವರು ಅಜ್ಜಂಪುರದಲ್ಲಿದ್ದವರು. ಅವರು ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಕೆಲಸಮಾಡುತ್ತಿದ್ದವರು. ಅವರ ಪತ್ನಿ ಗೌರಮ್ಮನವರು. ವೆಂಕಟದಾಸಪ್ಪ ದಂಪತಿಗಳ ಜೀವನ ಬಡತನದಿಂದ ಕೂಡಿದ್ದಾದರೂ, ಅದೊಂದು ಕೊರತೆ ಎಂದು ಎನ್ನಿಸದಂತೆ ಬದುಕಿದರು. ಇವರನ್ನು ನಾನು ನೋಡುವಾಗ ಅವರೀರ್ವರೂ ವೃದ್ಧಾಪ್ಯ ತಲುಪಿದ್ದರು. ಅವರಿಗೆ ೬ ಜನ ಮಕ್ಕಳು. ಅವರೆಂದರೆ ಗಂಡುಮಕ್ಕಳಾದ ವೆಂಕಟಕೃಷ್ಣಯ್ಯ, ವೆಂಕಟರಾಮಯ್ಯ, ವೆಂಕಟೇಶಯ್ಯ ಮತ್ತು ಹಿರಿಯಣ್ಣಯ್ಯ ಹಾಗೂ ಹೆಣ್ಣಮಕ್ಕಳು ವಿಶಾಲಾಕ್ಷಮ್ಮ ಮತ್ತು ರುಕ್ಮಿಣಮ್ಮ. ಇವರೆಲ್ಲರ ಪ್ರಸ್ತಾಪವೇಕೆಂದರೆ ಇವರೆಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರೂ, ಕೆಲವು ಕ್ಷೇತ್ರಗಳಲ್ಲಿ ವಿಶೇಷ ತಿಳುವಳಿಕೆ ಹೊಂದಿದ್ದವರು. ಅವರ ಸಾಧನೆಯನ್ನು ಗುರುತಿಸುವ ಕೆಲಸ ನಡೆಯಲಿಲ್ಲವಾದರೂ, ಅವರೆಲ್ಲರೂ ಮಾನವ ಪ್ರೀತಿ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅಪಾರ ಅಭಿಮಾನ ಹೊಂದಿದವರು ಮತ್ತು ಜನಾನುರಾಗಿ ವ್ಯಕ್ತಿತ್ವವುಳ್ಳವರು. ಹಿರಿಯರಾದ ವೆಂಕಟಕೃಷ್ಣಯ್ಯನವರು ತಮ್ಮ ಜೀವಿತದ ಬಹುಕಾಲವನ್ನು ಮೈಸೂರಿನಲ್ಲೇ ಕಳೆದರು. ರಾಮಾಯಣ ಮತ್ತು ಮಹಾಭಾರತಗಳೆರಡೂ ಅವರಿಗೆ ಅತ್ಯಂತ ಪ್ರಿಯವಾದ ವಿಷಯಗಳು. ಈ ಮಹಾಕಾವ್ಯಗಳ ಬಗ್ಗೆ ಅಧ್ಯಯನ ನಡೆಸಿ, ಕೈ ಬರವಣಿಗೆಯಲ್ಲಿ ತಮ್ಮ ಅಧ್ಯಯನವನ್ನು...