07. ಇವರು ನಮ್ಮ ಹಿರಿಯರು
ನಾನು ಈ ಹಿಂದೆ ತಿಳಿಸಿದ್ದಂತೆ ಅಜ್ಜಂಪುರದಲ್ಲಿ ನಮ್ಮೊಡನಿದ್ದ ಕೆಲವು ಹಿರಿಯರ ಬಗ್ಗೆ ನನ್ನ ನೆನಪಿನಲ್ಲಿರುವ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ಇವರಲ್ಲಿ ಅನೇಕರನ್ನು ನೀವು ನೋಡಿರಬಹುದು, ಒಡನಾಡಿರಬಹುದು. ಇಂಥ ನೆನಪುಗಳನ್ನು ಮೆಲುಕುಹಾಕಲು ಈ ಬಗೆಯ ಚಿತ್ರ - ವಿವರಗಳು ಸಹಾಯಕವಾಗುತ್ತವೆಯೆಂದು ಅನ್ನಿಸಿದ್ದರಿಂದ ಈ ಪ್ರಯತ್ನ. ನನ್ನ ಸಂಗ್ರಹದಲ್ಲಿರುವ ವ್ಯಕ್ತಿಗಳ ಚಿತ್ರಗಳಿಗೆ ಸಂಬಂಧಿಸಿದಂತೆ ಕೆಲವು ಸಾಲುಗಳನ್ನು ಬರೆದಿರುವೆ. ಇದನ್ನು ನೀವೂ ಮುಂದುವರೆಸಲಿ ಎಂಬುದು ನನ್ನ ಆಶಯ. ಇಲ್ಲಿರುವ ಹಿರಿಯರು ಯಾರೂ ದೊಡ್ಡ ಅಧಿಕಾರದ ಹುದ್ದೆಗಳಲ್ಲಿದ್ದ ಪ್ರಭಾವಶಾಲಿಗಳೇನಲ್ಲ. ಆದರೆ ತಾವು ನಡೆಸಿದ ಜೀವನಕ್ರಮದಿಂದ ನಮ್ಮಲ್ಲರಿಗೆ ಪ್ರೀತಿಪಾತ್ರರಾದವರು. ಸರಳ ಜೀವನ ನಡೆಸಿ ತಮ್ಮ ಪ್ರಭಾವವನ್ನು ನಮ್ಮ ತಲೆಮಾರಿನ ಮೇಲೆ ಉಳಿಸಿಹೋಗಿರುವಂಥವರು. ನಿಮ್ಮ ನೆನಪಿನ ಸಂಗ್ರಹದಲ್ಲೂ ಅಜ್ಜಂಪುರದವರಾದ ಇಂಥ ಅನೇಕರು ಇರುತ್ತಾರೆ. ಅವರ ಬಗ್ಗೆ ಚಿತ್ರ ಸಹಿತ ನಿಮ್ಮ ನೆನಪುಗಳನ್ನು ದಾಖಲಿಸಲು ಇಲ್ಲೊಂದು ಅವಕಾಶವಿದೆ. ನಿಮಗೆ ಹಾಗೆ ಮಾಡಲು ಅವಕಾಶವಾಗದಿದ್ದಲ್ಲಿ, ಕೈಬರವಣಿಗೆಯಲ್ಲಿ ನಿಮ್ಮ ಬರಹ ಮತ್ತು ಚಿತ್ರದ ಪ್ರತಿಗಳನ್ನು ನನಗೆ ರವಾನಿಸಿ. ನಾನು ಅದನ್ನು ಪ್ರಕಟಿಸುವ ಕೆಲಸ ಮಾಡುತ್ತೇನೆ. ಶ್ರೀ ಬಿ. ಆರ್. ನರಸಿಂಹಮೂರ್ತಿ ಇವರು ಅಜ್ಜಂಪುರ ಸಮೀಪದ ಗ್ರಾಮ ಬಗ್ಗವಳ್ಳಿಯ ಶಾನುಭೋಗರಾಗಿದ್ದವರು. ಅಜ್ಜಂಪುರ ಬ್ರಾಹ್ಮಣ ಸಂಘದ ಸಂಸ್ಥಾಪಕ ...