07. ಇವರು ನಮ್ಮ ಹಿರಿಯರು
ನಾನು ಈ ಹಿಂದೆ ತಿಳಿಸಿದ್ದಂತೆ ಅಜ್ಜಂಪುರದಲ್ಲಿ ನಮ್ಮೊಡನಿದ್ದ ಕೆಲವು ಹಿರಿಯರ ಬಗ್ಗೆ ನನ್ನ ನೆನಪಿನಲ್ಲಿರುವ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ಇವರಲ್ಲಿ ಅನೇಕರನ್ನು ನೀವು ನೋಡಿರಬಹುದು, ಒಡನಾಡಿರಬಹುದು. ಇಂಥ ನೆನಪುಗಳನ್ನು ಮೆಲುಕುಹಾಕಲು ಈ ಬಗೆಯ ಚಿತ್ರ - ವಿವರಗಳು ಸಹಾಯಕವಾಗುತ್ತವೆಯೆಂದು ಅನ್ನಿಸಿದ್ದರಿಂದ ಈ ಪ್ರಯತ್ನ. ನನ್ನ ಸಂಗ್ರಹದಲ್ಲಿರುವ ವ್ಯಕ್ತಿಗಳ ಚಿತ್ರಗಳಿಗೆ ಸಂಬಂಧಿಸಿದಂತೆ ಕೆಲವು ಸಾಲುಗಳನ್ನು ಬರೆದಿರುವೆ. ಇದನ್ನು ನೀವೂ ಮುಂದುವರೆಸಲಿ ಎಂಬುದು ನನ್ನ ಆಶಯ. ಇಲ್ಲಿರುವ ಹಿರಿಯರು ಯಾರೂ ದೊಡ್ಡ ಅಧಿಕಾರದ ಹುದ್ದೆಗಳಲ್ಲಿದ್ದ ಪ್ರಭಾವಶಾಲಿಗಳೇನಲ್ಲ. ಆದರೆ ತಾವು ನಡೆಸಿದ ಜೀವನಕ್ರಮದಿಂದ ನಮ್ಮಲ್ಲರಿಗೆ ಪ್ರೀತಿಪಾತ್ರರಾದವರು. ಸರಳ ಜೀವನ ನಡೆಸಿ ತಮ್ಮ ಪ್ರಭಾವವನ್ನು ನಮ್ಮ ತಲೆಮಾರಿನ ಮೇಲೆ ಉಳಿಸಿಹೋಗಿರುವಂಥವರು. ನಿಮ್ಮ ನೆನಪಿನ ಸಂಗ್ರಹದಲ್ಲೂ ಅಜ್ಜಂಪುರದವರಾದ ಇಂಥ ಅನೇಕರು ಇರುತ್ತಾರೆ. ಅವರ ಬಗ್ಗೆ ಚಿತ್ರ ಸಹಿತ ನಿಮ್ಮ ನೆನಪುಗಳನ್ನು ದಾಖಲಿಸಲು ಇಲ್ಲೊಂದು ಅವಕಾಶವಿದೆ. ನಿಮಗೆ ಹಾಗೆ ಮಾಡಲು ಅವಕಾಶವಾಗದಿದ್ದಲ್ಲಿ, ಕೈಬರವಣಿಗೆಯಲ್ಲಿ ನಿಮ್ಮ ಬರಹ ಮತ್ತು ಚಿತ್ರದ ಪ್ರತಿಗಳನ್ನು ನನಗೆ ರವಾನಿಸಿ. ನಾನು ಅದನ್ನು ಪ್ರಕಟಿಸುವ ಕೆಲಸ ಮಾಡುತ್ತೇನೆ.
ಶ್ರೀ ಬಿ. ಆರ್. ನರಸಿಂಹಮೂರ್ತಿ
ಇವರು ಅಜ್ಜಂಪುರ ಸಮೀಪದ ಗ್ರಾಮ ಬಗ್ಗವಳ್ಳಿಯ ಶಾನುಭೋಗರಾಗಿದ್ದವರು. ಅಜ್ಜಂಪುರ ಬ್ರಾಹ್ಮಣ ಸಂಘದ ಸಂಸ್ಥಾಪಕ ಅಧ್ಯಕ್ಷರು. ೧೯೬೮ರ ಸುಮಾರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚಟುವಟಿಕೆಗಳು ಆರಂಭಗೊಂಡವು. ಇದೇ ಸಮಯದಲ್ಲಿ ಅಜ್ಜಂಪುರದಲ್ಲಿ ಬ್ರಾಹ್ಮಣ ಸಂಘವನ್ನು ಸ್ಥಾಪಿಸಿ, ಅದರ ಆರಂಭಿಕ ಚಟುವಟಿಕೆಗಳಿಗೆ ಉತ್ತಮ ಚಾಲನೆ ನೀಡಿದರು. ಮುಂದೆ ಸಂಘವು ಸಮಾಜದ ಅಭಿವೃದ್ಧಿಗೆಂದು ಹಲವಾರು ಕಾರ್ಯಕ್ರಮಗಳನ್ನು ನಡೆಸಿತು. ಅದೆಲ್ಲದರಲ್ಲೂ ಸಕ್ರಿಯವಾಗಿ ಭಾಗವಹಿಸಿದರು.
ಸ್ವಭಾವತಃ ಗಂಭೀರವಾಗಿರುತ್ತಿದ್ದ ನರಸಿಂಹಮೂರ್ತಿಗಳನ್ನು ಕಿರಿಯರಾದ ನಾವು ಸುಲಭವಾಗಿ ಮಾತಿಗೆಳೆಯುವಂತಿರಲಿಲ್ಲ. ಆದರೆ ಮುಂದೆ ಅವರ ಸ್ವಭಾವದಲ್ಲಿ ಉಂಟಾದ ಬದಲಾವಣೆಯನ್ನು ನಾವೂ ಗುರುತಿಸುವಂತಾಯಿತು. ಸದಭಿರುಚಿಯ ತಿಳಿಹಾಸ್ಯ, ನಗು, ಮತ್ತು ಕಿರಿಯರನ್ನು ಸಮಾಜಮುಖಿ ಕೆಲಸಮಾಡುವಂತೆ ಅವರು ನೀಡುತ್ತಿದ್ದ ಪ್ರೇರಣೆಗಳು ನಮ್ಮ ಉತ್ಸಾಹವನ್ನು ಬೆಳೆಸಿದವು. ಸಂಘದ ಕಾರ್ಯಾಲಯ ಅವರ ಮನೆಯೇ ಆಗಿರುತ್ತಿದ್ದುದರಿಂದ, ಪಡಸಾಲೆಯಲ್ಲಿ ಸಮಾಜಬಾಂಧವರೊಡನೆ ನಡೆಸುತ್ತಿದ್ದ ಚರ್ಚೆಗಳನ್ನು ನಾನು ಆಗೀಗ ಕೇಳಿಸಿಕೊಳ್ಳುತ್ತಿದ್ದುದುಂಟು. ಪ್ರತಿ ಮನೆಗೂ ಚಂದಾ ವಸೂಲಿಗೆಂದು ಹೋಗುತ್ತಿದ್ದರು. ಸಮಾಜದ ಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ಅನುನಯದಿಂದ ಹೇಳುತ್ತಿದ್ದರು. ಕೋಟೆಯ ಎರಡೂ ದೇವಾಲಯಗಳಲ್ಲಿ ನಿತ್ಯಪೂಜೆ, ರಾಮನವಮಿ, ಹನುಮಜಯಂತಿ, ದಸರೆಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರಮವಾಗಿ ನೆರವೇರಲು ತುಂಬ ಶ್ರಮಿಸಿದರು. ಸಮುದಾಯದವರು ಪರಊರುಗಳಲ್ಲಿ ನಡೆಸುತ್ತಿದ್ದ ಸಭೆ-ಸಮಾರಂಭಗಳಲ್ಲಿ ಇಳಿವಯಸ್ಸಿನಲ್ಲಿಯೂ ಉತ್ಸಾಹದಿಂದ ಭಾಗವಹಿಸಿ, ಹೊಸ ಬೆಳವಣಿಗೆಗಳನ್ನು ಸದಸ್ಯರ ಗಮನಕ್ಕೆ ತರುತ್ತಿದ್ದರು. ಇಂದಿನ ದಿನಮಾನಕ್ಕೆ ಹೋಲಿಸಿದಲ್ಲಿ, ಅಂದೆಲ್ಲ ಬ್ರಾಹ್ಮಣ ಸಂಘದ ವಾರ್ಷಿಕ ವಹಿವಾಟು ಕೆಲವು ಸಾವಿರಗಳಷ್ಟು ಮಾತ್ರ. ಪರಿಸ್ಥಿತಿ ಹಾಗಿದ್ದರೂ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆಯಿರಬೇಕೆಂದು ಕಿರಿಯರನ್ನೂ ಸೇರಿಸಿಕೊಂಡು ಅವುಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು. ಆಗ ಅನವಶ್ಯಕವೆಂದು ನಾವು ಭಾವಿಸಿದ್ದ ಅನೇಕ ಸಂಗತಿಗಳು, ಈಗಿನ ಪರಿಸ್ಥಿತಿಯ ಬೆಳಕಿನಲ್ಲಿ ನೋಡಿದರೆ ಸಾರ್ವಜನಿಕ ಹಣಕಾಸಿನ ಬಗ್ಗೆ ಅವರಿಗಿದ್ದ ಚಚ್ಚರ,ಕಾಳಜಿ ಮತ್ತು ಗೌರವಗಳು ಅನುಕರಣೀಯ. ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಅನೇಕ ಗಣ್ಯರು ಕೋಟೆಯ ದೇವಾಲಯಗಳನ್ನು ಸಂದರ್ಶಿಸಿದರು. ಮತ್ತೂರು ಲಕ್ಷ್ಮೀಕೇಶವ ಶಾಸ್ತಿಗಳನ್ನು ಆಹ್ವಾನಿಸಿ, ನಡೆಸಿಕೊಟ್ಟ ಮಹಾಭಾರತ ವ್ಯಾಖ್ಯಾನ-ವಾಚನದ ಕಾರ್ಯಕ್ರಮದ ನೆನಪು ಚಿರನೂತನ. ಕಾವ್ಯಶಾಸ್ತ್ರ ವಿನೋದೇನ ಕಾಲೋಗಚ್ಛತಿ ಧೀಮತಾಂ ಎಂಬ ನುಡಿಗೆ ಅನುಸಾರವಾದ ಸಮಯವನ್ನು ಅವರು ಕಳೆದರು, ನಮ್ಮಲ್ಲೂ ಕಲೆ, ಕಾವ್ಯ, ಸಂಸ್ಕೃತಿಗಳ ಬಗ್ಗೆ ಅರಿವು ಮತ್ತು ಸಂಸ್ಕಾರಗಳು ಬೆಳೆಯಲು ಪರೋಕ್ಷವಾಗಿ ನೆರವಾದರು.

* * * * * * *
ಶ್ರೀ ಸಿ.ಎಸ್. ತಿಮ್ಮಪ್ಪಯ್ಯ
ಕುಳ್ಳು ಆಕೃತಿ, ಮೆದುವಾದ ದನಿ, ತಾವೇ ಹೊಲಿದುಕೊಂಡು ಹಾಕಿಕೊಳ್ಳುತ್ತಿದ ಬಿಳಿಯ ಬನಿಯನ್. ಸಿ.ಎಸ್. ತಿಮ್ಮಪ್ಪಯ್ಯನವರನ್ನು ನೋಡಿದವರ ಮನದಲ್ಲಿ ಉಳಿದಿರುವ ರೂಪವಿದು. ವೃತ್ತಿಯಲ್ಲಿ ಪ್ರಾಥಮಿಕ/ಮಾಧ್ಯಮಿಕ ಶಾಲೆಯ ಅಧ್ಯಾಪಕರಾಗಿದ್ದರು. ಪ್ರವೃತ್ತಿಯಲ್ಲಿ ಕಾಲೇಜು ಮಟ್ಟದ ಅಧ್ಯಯನ-ಅಧ್ಯಾಪನಗಳನ್ನು ರೂಢಿಸಿಕೊಂಡಿದ್ದರು. ಹಳೆಗನ್ನಡ ಸಾಹಿತ್ಯ ಅವರಿಗೆ ಅತ್ಯಂತ ಪ್ರಿಯವಾದ ವಿಷಯ. ಕಾವ್ಯ, ಜಾಣ ಪರೀಕ್ಷೆಗಳನ್ನು ತೆಗೆದುಕೊಂಡು ಅಧ್ಯಯನ ಮಾಡುವ ಕಾಲವೊಂದಿತ್ತು. ಅಜ್ಜಂಪುರದ ಪರಿಸರದಲ್ಲಿದ್ದ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಕಸುವಿದ್ದ ಬೆರಳೆಣಿಕೆಯ ವಿದ್ವಾಂಸರಲ್ಲಿ ಶ್ರೀ ಸಿ.ಎಸ್. ತಿಮ್ಮಪ್ಪಯ್ಯನವರು ಒಬ್ಬರು. ಶಬ್ದಮಣಿ ದರ್ಪಣದ ಚಿಕ್ಕ ವಿವರಗಳನ್ನು ತಮ್ಮೊಡನೆ ಮಾತನಾಡಲು ಬಂದವರೊಂದಿಗೆ ತಿಳಿಸುವ ಮೂಲಕ ಅವರ ಆಸಕ್ತಿಯನ್ನು ಕೆರಳಿಸುತ್ತಿದ್ದರು.
೮೦ರ ದಶಕದಲ್ಲಿ ನಾನು ಅವರನ್ನು ಕಂಡಾಗ, ನಾನು ಆಗಷ್ಟೇ ಕಲಿಯುತ್ತಿದ್ದ ತಮಿಳು ಅಕ್ಷರ ಜ್ಞಾನದ ಬಗ್ಗೆ ಹೇಳಿಕೊಂಡೆ. ಆಗ ನನ್ನ ಮನಸ್ಸಿನಲ್ಲಿದ್ದುದು, ನಾನೇನೋ ಅವರಿಗೆ ತಿಳಿಯದ ಹೊಸ ವಿಷಯದ ಬಗ್ಗೆ ಹೇಳುತ್ತಿದ್ದೇನೆ ಎಂಬ ಭಾವ. ಆಗ ಅವರು ನನ್ನ ಹೆಸರು ಕೇಳಿದರು. "ಶಂಕರ" ಎಂದೆ. "ನಿನ್ನನ್ನು ದತ್ತ ಎಂದೂ ಕರೆಯುವರಲ್ಲವೇ? ದತ್ತ ಎಂದರೆ ದತ್ತಾತ್ರೇಯ ಎಂದು ತಾನೇ? ಈಗ ಆ ಹೆಸರನ್ನು ತಮಿಳಿನಲ್ಲಿ ಬರೆದುನೋಡು, ಅಲ್ಲೊಂದು ಸ್ವಾರಸ್ಯವಿದೆ" ಎಂದರು.ಈ ಮೊದಲು ನಾನು ಆ ಬಗ್ಗ ಯೋಚಿಸಿರಲಿಲ್ಲ.ಅದರಲ್ಲೇನು ವಿಶೇಷವಿದ್ದೀತು ಎಂದುಕೊಂಡೇ ತಮಿಳಿನಲ್ಲಿ ದತ್ತಾತ್ರೇಯ ಎಂಬ ಪದವನ್ನು ತಮಿಳು ಅಕ್ಷರಗಳಲ್ಲಿ ಬರೆದೆ. ಅದನ್ನೇ ಕನ್ನಡದಲ್ಲಿ ಬರೆದರೆ ಅದು ಹೀಗೆ ಕಾಣುತ್ತದೆ : "ತತ್‌ತ್‌ತಾತ್‌ತ್‌ತ್ತಿರೇಯ" ತಮಿಳಿನಲ್ಲಿ ತ ಎಂಬ ಲಿಪಿಯನ್ನೇ ತ, ಥ, ದ, ಧ ಹೀಗೆ ನಾಲ್ಕು ಅಕ್ಷರಗಳಿಗೂ ಬಳಸುವರು. ಆದರೆ ಉಚ್ಛಾರಣೆಗೆ ಅನುಸಾರವಾಗಿ ಓದುವರು. ಆಗ ನನಗೆ ಆಶ್ಚರ್ಯವೆನ್ನಿಸಿದ್ದೆಂದರೆ, ಅವರಿಗೆ ಇತರ ರಾಜ್ಯಗಳ ಸಂಪರ್ಕವಿಲ್ಲದಿದ್ದರೂ, ಅಚ್ಚ ಕನ್ನಡನ ಪ್ರದೇಶದಲ್ಲಿದ್ದುಕೊಂಡೇ ತಮಿಳಿನ ಬಗ್ಗೆ ತಿಳಿದಿದ್ದರು, ಅದರಲ್ಲಿ ಕಂಡುಬರುವ ಇತರ ಸ್ವಾರಸ್ಯಗಳನ್ನು ನನಗೂ ವಿವರಿಸಿದರು.
೯೬ ವರ್ಷಗಳ ತುಂಬು ಜೀವನ ನಡೆಸಿದ ತಿಮ್ಮಪ್ಪಯ್ಯನವರಿಗೆ ದೃಷ್ಟಿ ಮಂದವಾಗುತ್ತ ಬಂದ ಒಂದೆರಡು ವರ್ಷಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಹಳೆಗನ್ನಡ, ಹೊಸಗನ್ನಡಗಳ ಅಧ್ಯಯನದಲ್ಲಿ ತೊಡಗಿಕೊಂಡಿದ್ದರು. ಧಾರ್ಮಿಕ ಸಾಹಿತ್ಯ, ವೇದಮಂತ್ರಗಳನ್ನು ವಿಶ್ಲೇಷಿಸುವುದು ಅವರ ಮೆಚ್ಚಿನ ಹವ್ಯಾಸಗಳಲ್ಲೊಂದು. ಅವರದು ಕೇವಲ ಸಾಹಿತ್ಯಾಸಕ್ತಿ ಮಾತ್ರವಲ್ಲ, ಕಾಗದದಲ್ಲಿ ಸಾಂಪ್ರದಾಯಿಕ ಚಿತ್ತಾರ ಬಿಡಿಸುವುದು, ಕತ್ತರಿಯ ನೆರವಿನಿಂದ ವಿವಿಧ ಆಕೃತಿಗಳನ್ನು ಕತ್ತರಿಸುವುದು, ಪುಸ್ತಕಗಳಿಗೆ ರಟ್ಟು ಕಟ್ಟುವುದು, ಮುಂತಾದ ಕುಶಲ ಕಲೆಗಳು ಕರಗತವಾಗಿತ್ತು. ಅವರು ತಮ್ಮ ಮನೆಯನ್ನು ತಾವೇ ನಿರ್ಮಿಸಿಕೊಂಡರು. ನಾನು ಅವರೊಡನೆ ಕಳೆದ ಸಮಯ ತೀರ ಕಡಿಮೆಯೇ ಸರಿ. ಅವರೊಡನೆ ಒಡನಾಡಿದವರೆಲ್ಲರ ಅನುಭವವೆಂದರೆ, ಅವರಿಂದ ಹೊಸ ಸಂಗತಿಗಳನ್ನು ತಿಳಿದೆವು, ನಮ್ಮ ಜ್ಞಾನ ವೃದ್ಧಿಯಾಯಿತು ಎನ್ನುತ್ತಿದ್ದರೇ ವಿನಾ . ವೃಥಾ ಕಾಲಕ್ಷೇಪವೆಂದು ಯೂರೂ ಭಾವಿಸುವಂತಿರಲಿಲ್ಲ, ಅದು ತಿಮ್ಮಪ್ಪಯ್ಯನವರ ಹಿರಿಮೆ.
* * * * * * *
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ