26. ಶ್ರೀ ಸತ್ಯನಾರಾಯಣ ಶೆಟ್ಟರ ಇನ್ನಷ್ಟು ನೆನಪುಗಳ ಸಂಗ್ರಹ



ಅಜ್ಜಂಪುರದ ಬಗ್ಗೆ ಶ್ರೀ ಸತ್ಯನಾರಾಯಣ ಶೆಟ್ಟರ ಇನ್ನಷ್ಟು ನೆನಪುಗಳ ಸಂಗ್ರಹ ಇಲ್ಲಿದೆ. ಇತ್ತೀಚೆಗೆ ಅವರು ನೀಡಿರುವ ವಿವಿಧ ಮಾಹಿತಿಗಳನ್ನು ಆಧರಿಸಿದ ಈ ಬರಹವನ್ನು ನಿಮ್ಮ ಓದಿಗಾಗಿ ಇಲ್ಲಿ ನೀಡಿದ್ದೇನೆ. 

ಸಮಾಜದಲ್ಲಿ ಎಲ್ಲ ಕಾಲಕ್ಕೂ ಒಳ್ಳೆಯವರು ಕೆಟ್ಟವರು ಇರುತ್ತಾರೆ. ವಿವಿಧ ಜಾತಿ, ಜನಾಂಗಗಳಲ್ಲಿ ದುಷ್ಟರು ಇಲ್ಲವೆಂದಲ್ಲ. ಅದನ್ನು ಆಯಾ ಸಮಾಜದವರು ಹೇಳಿಕೊಳ್ಳುವ ಮನೋಧರ್ಮ ತೋರಬೇಕಷ್ಟೆ. ಒಳಿತಿನಂತೆ ಕೆಡುಕನ್ನೂ ಹೇಳಿಕೊಳ್ಳುವುದು ರೂಢಿಯಾಗಬೇಕು. ಬ್ರಾಹ್ಮಣರಲ್ಲಿ ಈ ಕೆಳಗಿನ ಈರ್ವರನ್ನು ಕುರಿತಾಗಿನ ಪ್ರಸ್ತಾಪ ಆಗೀಗ ಬಂದುಹೋಗುವುದುಂಟು.   ಅಜ್ಜಂಪುರದ ಕೆಲವು ಮಹನೀಯರನ್ನು ನೆನಪಿಸಿಕೊಂಡಿರುವಂತೆ ಕುಖ್ಯಾತರನ್ನೂ ಈ ಭಾಗದಲ್ಲಿ ನೆನಪಿಸಿಕೊಂಡಿದ್ದೇನೆ. ಅವರು ಅಂದಿಗೆ ಕುಖ್ಯಾತರಾದರೂ, ಇಂದು ನಡೆಯುತ್ತಿರುವ ಅಪರಾಧಗಳ ಮುಂದೆ ಅವರದೇನೂ ಅಲ್ಲ. ಹಾಗೆಂದು ಕ್ಷಮಾರ್ಹವೂ ಅಲ್ಲ.

ಸೊಕ್ಕೆ ಗಿರಿಯಪ್ಪನೆಂಬಾತನು ಜಾತಿಯಿಂದ ಬ್ರಾಹ್ಮಣ. ಕೇವಲ ಜಾತಿಯಿಂದ ಶ್ರೇಷ್ಟತೆ ಬರುವುದಿಲ್ಲವಷ್ಟೆ. ವ್ಯಕ್ತಿಯ ನಡವಳಿಕೆಯನ್ನು ಜನರು ಮೆಚ್ಚುವರೇ ವಿನಾ ಅವನ ಕುಲ-ಅಂತಸ್ತುಗಳನ್ನಲ್ಲ. ಗಿರಿಯಪ್ಪನು ದುಷ್ಟಸಹವಾಸಕ್ಕೆ ಬಿದ್ದುದರ ಪರಿಣಾಮವಾಗಿ ಮದ್ಯವ್ಯಸನ, ದುಂಡಾವರ್ತಿಗಳನ್ನು ಬೆಳೆಸಿಕೊಂಡಿದ್ದ. ಪೇಟೆಯ ಬೀದಿಯಲ್ಲಿ ಸುತ್ತುತ್ತ ಅಂಗಡಿಗಳನ್ನು ಬೆದರಿಸಿ ಉಪಜೀವನ ನಡೆಸುತ್ತಿದ್ದ ಅವನ ಉಪಟಳಕ್ಕೆ ಜನರು ಬೇಸತ್ತಿದ್ದರು. ನೇರವಾಗಿ ಅವನನ್ನು ಎದುರಿಸುವ ಧೈರ್ಯವಿಲ್ಲದೆ, ಯಾರೋ ಒಬ್ಬರು ಅವನ ಬಗ್ಗೆ ಮೂಗರ್ಜಿಯನ್ನು ನೀಡಿ ಸರಕಾರದಿಂದ ಅವನ ಬಂಧನವಾಗುವಂತೆ ಮಾಡಿದರು.

ಇದು ಇಂದಿಗೆ ಉಲ್ಲೇಖಾರ್ಹ ಸಂಗತಿಯಲ್ಲದಿರಬಹುದು. ಆದರೆ ನ್ಯಾಯ, ನೀತಿಗಳ ಬಗ್ಗೆ ಇದ್ದ ಕಾಳಜಿಯಿಂದಾಗಿ ಅವನಂಥವನನ್ನು ಯಾವ ಕಾಲಕ್ಕೂ ಜನ ಸಹಿಸಿಕೊಳ್ಳರು ಎಂಬುದಕ್ಕೆ ಹೇಳಿದ್ದೇನೆ. ಅದೇ ರೀತಿ ಅಜ್ಜಂಪುರದ ಸಮೀಪದ ಗ್ರಾಮ ಬಗ್ಗವಳ್ಳಿಯಲ್ಲಿದ್ದ ಇನ್ನೋರ್ವ ಶಾನುಭೋಗ ಗುರುರಾಯನ ಕಥೆಯೂ ಕುಖ್ಯಾತವಾದುದೇ. ಈತನ ಬಗ್ಗೆ ಸವಿವರ ಕಥಾ ಮಾಲಿಕೆಯ ಧಾರಾವಾಹಿಯೊಂದು ಸದ್ಯದಲ್ಲೇ ಪ್ರಕಟವಾಗಲಿದೆ.
 



ಕಿರಾಳಮ್ಮ ಗ್ರಾಮ ದೇವತೆಯ ಐತಿಹ್ಯ 

ಕಿರಾಳಮ್ಮ ಗ್ರಾಮ ದೇವತೆ. ಪುರಾತನ ಕಾಲದ ದೇವಾಲಯ. ಮಾಂಸಾಹಾರಿಗಳ ದೈವವಾಗಿದ್ದ ಈ ದೇವಿಗೆ ಮಾಂಸಾಹಾರವನ್ನು ನೈವೇದ್ಯ ಮಾಡುವ ಪದ್ಧತಿಯಿತ್ತು. ಓರ್ವ ಮಹಾತ್ಮರು ಇದಕ್ಕೆ ಹೊಸರೂಪ ನೀಡಲು ನಿರ್ಧರಿಸಿದರು. ವಿಗ್ರಹವು ಶಿಥಿಲವಾಗಿರುವುದರಿಂದ ಅದನ್ನು ಬದಲಾಯಿಸಬೇಕೆಂದು ಸಲಹೆ ನೀಡಿದರು. ಈ ವಿಗ್ರಹವನ್ನು ತೆಗೆದು ಆ ಸ್ಥಳದಲ್ಲಿ ಹೊಸ ದೇವಿಯನ್ನು ರಾಜರಾಜೇಶ್ವರಿಯೆಂದು ಸ್ಧಾಪಿಸಿ ಸಸ್ಯಾಹಾರದ ನೈವೇದ್ಯ ಮಾಡಲಾಗುತ್ತಿದೆ. ಹಳೆಯ ಮೂರ್ತಿಯು ಇನ್ನೂ ಅಲ್ಲಿಯೇ ಇದೆ. ಕಿರಾಳಮ್ಮ ನೆಂಬ ಹೆಸರು ಚಾಲ್ತಿಯಲ್ಲಿದೆಯಾದರೂ, ರಾಜರಾಜೇಶ್ವರಿಯನ್ನು ಪೂಜೆ ಮಾಡಲಾಗುತ್ತಿದೆ. ಹಿಂದೆ ಕಿರಾಳಮ್ಮನ ಸಿಡಿ ಎಂಬ ಉತ್ಸವ ನಡೆಯುತ್ತಿತ್ತು. ದೇವಿಯು ಮೆರವಣಿಗೆಯಲ್ಲಿ ಸಾಗಿ ಅಂತ್ಯಜರು ಇರುವ ಕೇರಿಗಳಿಗೆ ಹೋಗಿ, ಅಲ್ಲಿ ಕೆಲವರನ್ನು ಗುರುತಿಸಿ, ಅವರು ಆ ವರ್ಷ ಸಿಡಿ ಆಡಲು ಅರ್ಹರೆಂದು ನಿಯುಕ್ತಿ ಮಾಡುವ ಪದ್ಧತಿಯಿತ್ತು. ಸಿಡಿ ಮರದ ರಚನೆಯೆಂದರೆ ಲಂಬವಾಗಿ ನಿಲ್ಲಿಸಲಾದ ಕಂಬಕ್ಕೆ, ನೆಲಕ್ಕೆ ಸಮಾನಾಂತರವಾಗಿ, 25-30 ಅಡಿಗಳ ಮೇಲೆ ಇನ್ನೊಂದು ಕಂಬವನ್ನು ಕಟ್ಟಲಾಗಿರುತ್ತಿತ್ತು. ಇದು  360 ಕೋನದಲ್ಲಿ  ತಿರುಗಣಿಯ ಸಹಾಯದಿಂದ ಸುತ್ತುವಂತೆ ವ್ಯವಸ್ಥೆ ಮಾಡಲಾಗಿರುತ್ತಿತ್ತು. ಸಿಡಿಗೆ ನಿಯುಕ್ತಿಗೊಂಡವರನ್ನು ಮೇಲಿನ ಕಂಬಕ್ಕೆ ಸಮಾಂತರವಾಗಿ ಕಟ್ಟಿಹಾಕಿ ಆರೇಳು ಸುತ್ತು ತಿರುಗಿಸಲಾಗುತ್ತಿತ್ತು. ಇದರಲ್ಲಿ ಮಹಿಳೆಯರೂ ಭಾಗವಹಿಸುತ್ತಿದ್ದರು.  ಕಾಲ ಬದಲಾದಂತೆ ಈ ಪದ್ಧತಿಗಳು ಅಮಾನವೀಯ ಎನ್ನಿಸಿದ್ದರಿಂದ ಇದು ರದ್ದಾಯಿತು. ಸ್ತ್ರೀಯರು ಬೇವಿನ ಉಡುಗೆಯನ್ನು ಧರಿಸಿ, ದೇವಿಯ ಸೇವೆ ಮಾಡುತ್ತಿದ್ದರು. ಇದು ಅಂಧ ಶ್ರದ್ಧೆಯೆಂದು ನಿರ್ಣಯಿಸಿ ರದ್ದುಗೊಳಿಸಲಾಯಿತು. ಕಿರಾಳಮ್ಮನ ದೇವಾಲಯಗಳು ಕಡೂರು, ತರೀಕೆರೆ ಮುಂತಾದ ಸಮೀಪದ ಸ್ಥಳಗಳಲ್ಲಿ ಕಂಡುಬರುತ್ತವೆ.


ಅಜ್ಜಂಪುರದ ಧನಿಯಾ

ಅಜ್ಜಂಪುರದ ವಿಶೇಷತೆಗಳಲ್ಲಿ ಒಂದು ಕಾಲಕ್ಕೆ ಕೊತ್ತಂಬರಿ ಬೀಜವು ಪ್ರಸಿದ್ಧಿಯಾಗಿತ್ತು. ಅಜ್ಜಂಪುರದ ಧನಿಯಾ ಎಂದರೆ ಅದಕ್ಕೆ ವಿಶೇಷ ಬೆಲೆ, ಮಾನ್ಯತೆಗಳು ಇತ್ತು. ಸುತ್ತಮುತ್ತಲ ಎಲ್ಲ ಹೊಲಗಳಲ್ಲಿ ಕೊತ್ತಂಬರಿಯಲ್ಲದೇ ಬೇರೇನೂ ಬೆಳೆಯುತ್ತಿರಲಿಲ್ಲ. ಕಪ್ಪುಮಣ್ಣಿನ ಭೂಮಿಯಲ್ಲಿ ಬೆಳೆಯುತ್ತಿದ್ದ ಈ ಬೆಳೆ ಅತ್ಯಂತ ಸುಗಂಧಮಯವಾಗಿ ಇರುತ್ತಿತ್ತು. ರಾಶಿಗಟ್ಟಲೇ ಬೆಳೆಯುತ್ತಿದ್ದ ಈ ಬೆಳೆಯನ್ನು ಯಾರೂ ಕೇಳುವವರೇ ಇಲ್ಲವಾಗಿ, ಇದರ ಉತ್ಪಾದನೆ ಸಂಪೂರ್ಣವಾಗಿ ಅಜ್ಜಂಪುರದಲ್ಲಿ ನಿಂತುಹೋಗಿದೆ. ಇದಕ್ಕೆ ಕಾರಣವೆಂದರೆ, ರೈತರು ಹೇಳುವಂತೆ, ಲಕ್ಕವಳ್ಳಿಯ ಸಮೀಪದಲ್ಲಿ ನಿರ್ಮಾಣವಾದ ಭದ್ರಾ ಅಣೆಕಟ್ಟೆಯಿಂದ ಬೀಸುವ ಶೀತದ ಗಾಳಿ ಕೊತ್ತಂಬರಿಯನ್ನು ಬಲಿತೆಗೆದುಕೊಂಡಿತು. ವೈಜ್ಞಾನಿಕವಾಗಿ ಇದೆಷ್ಟು ಸತ್ಯವೋ ತಿಳಿಯದು. ಈಗೀಗ ಪ್ರಮುಖ ವಾಣಿಜ್ಯಕ ಬೆಳೆಗಳಾದ ಈರುಳ್ಳಿ, ಜೋಳ, ಮೆಣಸಿನಕಾಯಿಗಳನ್ನು ಬೆಳೆಯುತ್ತಿದ್ದಾರೆ. 

ಅದೇ ರೀತಿ  ಅಜ್ಜಂಪುರದಲ್ಲಿ ತೆಂಗಿನ ಬೆಳೆ ಇರಲಿಲ್ಲ. ಸುಬ್ರಹ್ಮಣ್ಯ ಶೆಟ್ಟರು ಅದರ ಬೆಳೆಯನ್ನು ಇಲ್ಲಿ ಅಭಿವೃದ್ಧಿ ಪಡಿಸಿದರು. ಮಳೆಯ ಆಶ್ರಯದಲ್ಲಿ ಮಾತ್ರ ವ್ಯವಸಾಯ ಮಾಡುತ್ತಿದ್ದ ಈ ಪ್ರದೇಶದಲ್ಲಿ, ತೆಂಗಿನಬೆಳೆಯನ್ನು ಬೆಳೆದು ತೋರಿಸಿ ಇಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿದರು.

ಬಿ.  ಈಶ್ವರಪ್ಪ 

ಅಜ್ಜಂಪುರದಲ್ಲಿ ಮರಾಠ ಸಮಾಜದಿಂದ ಅನೇಕರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅಂಥವರಲ್ಲಿ ಬಿ. ಈಶ್ವರಪ್ಪನನವರ ಕೊಡುಗೆ ಸ್ಮರಣೀಯ. ಅವರು ಶಾಲಾ ಅಧ್ಯಾಪಕರಾಗಿದ್ದರು.  ಅವರ ಪೂರ್ವಜರು ಯಕ್ಷಗಾನದ ಹಿನ್ನೆಲೆಯನ್ನು ಹೊಂದಿದ್ದರು. ಅವರಿಂದ ಪ್ರೇರಿತರಾದ ಈಶ್ವರಪ್ಪನವರು ಅನೇಕ ಪುಸ್ತಕಗಳನ್ನು ಬರೆದರು. ಈಶ್ವರಪ್ಪನವರು ಬರೆದ ಕೃತಿಗಳ ಶೀರ್ಷಿಕೆಯೇ  ಅವರ  ಧಾರ್ಮಿಕ ಪ್ರವೃತ್ತಿಯನ್ನು ಹೇಳುತ್ತವೆ. ತುಳಸಿ ರಾಮಾಯಣ, ದೇವಿ ಚರಿತ್ರೆ, ಭಕ್ತಿ ವಿಜಯ, ಶಿವ ಮಹಿಮಾ ವ್ರತ, ಮೈಲಾರಲಿಂಗ ಚರಿತ್ರೆ, ರೇಣುಕಾ ಚರಿತ್ರೆ ಮುಂತಾದ ಸಾಹಿತ್ಯವನ್ನು ಯಕ್ಷಗಾನ ಸ್ವರೂಪದಲ್ಲಿ ಬರೆದರು.   ಆದರೆ ಪ್ರಕಟಣೆಯ ಅವಕಾಶ ದೊರೆಯಲಿಲ್ಲವಾಗಿ ಅವು ಹಾಗೆಯೇ ಉಳಿದವು. ಚಿಕ್ಕ ಅಪಘಾತವೊಂದರಲ್ಲಿ ತಮ್ಮ ಕೈ ಮುರಿದರೂ ತಮ್ಮ ಸಾಹಿತ್ಯ ಪ್ರೀತಿಯನ್ನು ಮೆರೆದರು. ಸದ್ಯ ಬೆಂಗಳೂರಿನಲ್ಲಿ ತಮ್ಮ ಪುತ್ರನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವರು. 


* * * * * * * 






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ