123. ದಕ್ಷ ಅಧಿಕಾರಿ - ಪುಟ್ಟ ರಂಗಪ್ಪ

ನಾನು ಬಹುದಿನಗಳಿಂದ ಈ ಅಂಕಣದಲ್ಲಿ ದಾಖಲು ಮಾಡಬೇಕೆಂದು ಬಯಸಿದ್ದ ವಿಷಯವನ್ನು ಗೆಳೆಯ ಮಲ್ಲಿಕಾರ್ಜುನ ಇಲ್ಲೊಂದು ಸಮಗ್ರ ಚಿತ್ರ ಲೇಖನದೊಡನೆ ಒದಗಿಸಿದ್ದಾರೆ. ಅವರಿಗೆ ಧನ್ಯವಾದಗಳು.

ಪಾಂಡುರಂಗಪ್ಪ ಮತ್ತು ಅವರ ಪುತ್ರರು ಅಜ್ಜಂಪುರದ ಜನ ಮಾನಸದಲ್ಲಿ ಸ್ಥಾನಗಳಿಸಲು ಅವರು ವಿದ್ಯಾಭ್ಯಾಸಕ್ಕೆ ನೀಡಿದ ಮಹತ್ವ ಮತ್ತು ದೂರದೃಷ್ಟಿಗಳೇ ಕಾರಣವೆಂದು ಹೇಳಬಹುದು.

ಅಜ್ಜಂಪುರದ ಪೇಟೆಯ ಬಳಿ ಇದ್ದ ಚಿತ್ರಮಂದಿರದ ಎದುರಿನಲ್ಲಿ ಇದ್ದ ನಾಲ್ಕಾರು ಮನೆಗಳ ಗುಂಪು, ತನ್ನ ಸ್ವಚ್ಛತೆಯಿಂದ  ಗಮನ ಸೆಳೆಯುವಂತಿತ್ತು. ಸಗಣಿ ಹಾಕಿ ಸಾರಿಸಿದ ನೆಲ, ದೊಡ್ಡ ರಂಗೋಲಿಯ ವಿನ್ಯಾಸಗಳಿಂದಾಗಿ ವಿಶಿಷ್ಟವಾಗಿ ಕಾಣುತ್ತಿತ್ತು. ಈ ಆವರಣದಲ್ಲಿ ವಾಸವಿದ್ದ ಪಾಂಡುರಂಗಪ್ಪನವರು ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿದ್ದವರು.

ಅವರ ಹಿರಿಯ ಮಗ ತಿಪ್ಪಯ್ಯ ಮಾಸ್ತರರು ಶಿಕ್ಷಕರಾಗಿ ನಂತರ ರಾಜಕೀಯದಲ್ಲಿ ಭಾಗವಹಿಸಿ ತಮ್ಮ ಛಾಪನ್ನು ಮೂಡಿಸಿದ್ದರೆ, ಎರಡನೆಯವರಾದ ಪುಟ್ಟರಂಗಪ್ಪನವರು ತಮ್ಮ ಆಡಳಿತ ಶೈಲಿಯಿಂದ ರಾಜ್ಯದಲ್ಲಿ ಜನಪ್ರಿಯರಾದರು. ಪುಟ್ಟರಂಗಪ್ಪನವರ ಅಧಿಕಾರ ಅವಧಿಯಲ್ಲಿ ಜಾತಿಯ ಹಂಗಿಲ್ಲದೆ ಸಮಾಜದ ಎಲ್ಲ ವರ್ಗಗಳ ಅಜ್ಜಂಪುರದ ಜನ ಪ್ರಯೋಜನ ಪಡೆದದ್ದುಂಟು.

ಶಿಕ್ಷಣ ತಂದುಕೊಟ್ಟ ಆತ್ಮ ಗೌರವ ಮತ್ತು ಆತ್ಮ ವಿಶ್ವಾಸಗಳ ಮಹತ್ವವನ್ನು ಸ್ವತಃ ಬದುಕಿ ತೋರಿಸಿದ ಪುಟ್ಟರಂಗಪ್ಪನವರ ಸ್ಮರಣಾರ್ಥ ಅಪರೂಪದ ಚಿತ್ರಗಳೊಂದಿಗೆ ಇರುವ ಈ ಲೇಖನ ಅಜ್ಜಂಪುರವು ನಿಜಕ್ಕೂ ಹೆಮ್ಮೆ ಪಡುವಂಥದ್ದು.

ಶಂಕರ ಅಜ್ಜಂಪುರ
ಸಂಪಾದಕ
ಅಂತರಜಾಲದಲ್ಲಿ ಅಜ್ಜಂಪುರ
****************************

ಅಜ್ಜಂಪುರಕ್ಕೆ ಕೀರ್ತಿ ತಂದ ದಕ್ಷ ಐಎಎಸ್ ಅಧಿಕಾರಿ 
ಶ್ರೀ  ಪುಟ್ಟರಂಗಪ್ಪ

ಲೇಖಕ: 
ಅಜ್ಜಂಪುರ ಮಲ್ಲಿಕಾರ್ಜುನ

ಶ್ರೀ ಪುಟ್ಟರಂಗಪ್ಪ ಇವರು ಶ್ರೀಮತಿ ತಿಪ್ಪಮ್ಮ ಮತ್ತು ಎ. ಪಾಂಡುರಂಗಪ್ಪ ಇವರ ದ್ವಿತೀಯ ಪುತ್ರರಾಗಿ ದಿನಾಂಕ 27 /8/ 1930 ರಂದು ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆಯಲ್ಲಿ ಜನಿಸಿದರು. ಸ್ವತಂತ್ರ ಸಂಗ್ರಾಮದ ಹಿನ್ನೆಲೆಯಲ್ಲಿ ಬಂದ  ಇವರ ಪೂರ್ವಿಕರು ಚಿಕ್ಕರಂಗಪ್ಪ ಆಂಧ್ರಪ್ರದೇಶ ರಾಜ್ಯದ ಆನೆಗೊಂದಿಯಿಂದ ಚಿತ್ರದುರ್ಗಕ್ಕೂ ನಂತರ ಅಜ್ಜಂಪುರಕ್ಕೆ ವಲಸೆ ಬಂದು ನೆಲೆ ನಿಂತವರು. ಇವರ ಹಿರಿಯ ಸಹೋದರ ದಿವಂಗತ ಪಿ ತಿಪ್ಪಯ್ಯ ರವರು ಶಿಕ್ಷಕರಾಗಿ ನಂತರ ವಿಧಾನಸಭಾ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
    
ಇವರ ಕಿರಿಯ ಸಹೋದರ ಡಾಕ್ಟರ್ ಪಿ ಗೋವಿಂದ ಸ್ವಾಮಿ ಇವರು ಮೈಸೂರಿನಲ್ಲಿ ಎ.ಬಿ.ಬಿ.ಎಸ್. ಪದವಿಯನ್ನು ಪಡೆದು ಅಮೆರಿಕದಲ್ಲಿ  ಸ್ನಾತಕೋತ್ತರ  ಪದವಿಯ ಅಧ್ಯಯನದ ನಂತರ ಅಮೆರಿಕದಲ್ಲಿ ಸೇವೆ ಸಲ್ಲಿಸಿ ಈಗ ದಿವಂಗತರಾಗಿದ್ದಾರೆ. 

ಶ್ರೀ ಪುಟ್ಟ ರಂಗಪ್ಪ ಇವರು ಪ್ರಾಥಮಿಕ ಶಿಕ್ಷಣವನ್ನು ಅಜ್ಜಂಪುರ,  ನಂತರದ ಶಿಕ್ಷಣವನ್ನು ಹಾಸನ ಚಿಕ್ಕಮಗಳೂರುಗಳಲ್ಲಿ ವ್ಯಾಸಂಗ ಮಾಡಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆದರು.

ಪ್ರಥಮವಾಗಿ  ಶಿಕ್ಷಕರಾಗಿ ವೃತ್ತಿಯನ್ನು ಪ್ರಾರಂಭಿಸಿ ನಂತರ ಸಹಕಾರ ಇಲಾಖೆ, ರಾಜ್ಯ ಲೆಕ್ಕಪತ್ರ. ಇಲಾಖೆಯಲ್ಲಿ ವೃತ್ತಿಯನ್ನು ಮುಂದುವರೆಸಿ  ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ನಂತರ ಕೆ. ಎ. ಎಸ್. ಪರೀಕ್ಷೆಯಲ್ಲಿ ಆಯ್ಕೆಯಾಗಿ  ಸಹಾಯಕ ಆಯುಕ್ತರಾಗಿ   ಪದೋನ್ನತಿ ಹೊಂದಿ ಐ.ಎ.ಎಸ್. ಅಧಿಕಾರಿಯಾಗಿ ಅಜ್ಜಂಪುರಕ್ಕೆ ಕೀರ್ತಿಯನ್ನು ತಂದಿದ್ದಾರೆ

ಇವರ ಸೇವಾ ಅವಧಿಯಲ್ಲಿ ಮಾಡಿದ ಅನೇಕ ಕಾರ್ಯಗಳನ್ನು ಈಗಲೂ ಕೂಡ ಸ್ಥಳೀಯರು ನೆನೆಸಿಕೊಳ್ಳುವುದನ್ನು ನಾವು ಕಾಣಬಹುದು.

ಕೆ.ಎಸ್.ಆರ್.ಟಿ.ಸಿ.ಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ಸುಮಾರು 729 ಕ್ಕಿಂತಲೂ ಹೆಚ್ಚು ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ವಿಲೇವಾರಿ ಮಾಡಿಸಿ ನೌಕರವರ್ಗಕ್ಕೆ ಪರಿಹಾರವನ್ನು  ಕೊಡಿಸಿ, ಸಂಸ್ಥೆಗೆ ಎರಡು ಕೋಟಿ ರೂಗಳ ಆದಾಯ ಬರಲು ಕಾರಣೀಭೂತರಾದರು.

ಸುಮಾರು 37 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಉಳುವವನೇ ಭೂಮಿಯ ಒಡೆಯ ಹಕ್ಕುಪತ್ರ ವಿತರಣೆ,  ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಅವಧಿಯಲ್ಲಿ ಮೂರು ಕೋಟಿ ರೂಪಾಯಿಗಳ ಬಾಕಿ ಕಂದಾಯಗಳನ್ನು ವಸೂಲಿ ಮಾಡಿ ಸರ್ಕಾರಕ್ಕೆ ಜಮಾ ಮಾಡಿಸಿದ್ದು ಇವರ ಸಾಧನೆಗಳಲ್ಲಿ ಒಂದು.

ಕುವೆಂಪು ವಿಶ್ವವಿದ್ಯಾಲಯಕ್ಕೆ ಸ್ಥಳ ಮಂಜೂರಾತಿ, ರಾಯಚೂರಿನ ಥರ್ಮಲ್ ವಿದ್ಯುತ್ ಸ್ಥಾವರಕ್ಕೆ ರೈತರ ಮನವೊಲಿಸಿ  ಭೂಮಿ ಹಸ್ತಾಂತರ ಕಾರ್ಯಗಳ ಉಪಯುಕ್ತತೆಗಳು ಇಂದು ಸ್ಮರಣೀಯವಾಗಿವೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾಗಿದ್ದ ಅವಧಿಯಲ್ಲಿ   ಕಂಠೀರವ ಕ್ರೀಡಾಂಗಣದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರ  ಅಧ್ಯಕ್ಷತೆಯಲ್ಲಿ  ನೂರಾರು ಫಲಾನುಭವಿಗಳಿಗೆ ಒಂದೇ ಕಾರ್ಯಕ್ರಮದಲ್ಲಿ ಪಿಂಚಣಿ ವೇತನ, ಆಸ್ತಿ ಖಾತೆಗಳ ಹಕ್ಕು ಪತ್ರ   ವಿತರಣೆ, ಅಂಗವಿಕಲ  ಸೌಲಭ್ಯಗಳನ್ನು ವಿತರಿಸಿ ರಾಜ್ಯಕ್ಕೆ ಮಾದರಿ  ಕಾರ್ಯಕ್ರಮ ಎಂದು ಗುರುತಿಸಲ್ಪಟ್ಟಿತ್ತು.

ಅವಿಭಜಿತ ಬೆಂಗಳೂರು. ಶಿವಮೊಗ್ಗ. ರಾಯಚೂರು. ಜಿಲ್ಲೆಗಳ ಜಿಲ್ಲಾಧಿಕಾರಿಗಳಾಗಿ  ಕೆಲವೊಂದು ಮಹತ್ತರವಾದ ಕಾರ್ಯಗಳನ್ನು ಮಾಡಿರುವುದನ್ನು ಈಗಲೂ ಕೂಡ ಜನ ನೆನಪಿಸಿಕೊಳ್ಳುತ್ತಾರೆ

ನನ್ನೂರಿನಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ತಂದೆಯವರ ಹೆಸರಿನಲ್ಲಿ ಪಾಂಡುರಂಗಪ್ಪ ಕಲಾ ಸೇವಾ ಸಂಘ ಪ್ರೌಢಶಾಲೆಯನ್ನು ನಿರ್ಮಿಸಿಕೊಟ್ಟು ಹುಟ್ಟೂರಿನ ಜನರಿಗೆ  ಮಾದರಿಯಾಗಿದ್ದಾರೆ.

ಪ್ರಥಮ ಬಾರಿಗೆ ನಾನು1995 ರಲ್ಲಿ ಇವರನ್ನು ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ  ಭೇಟಿ ಮಾಡಿದಾಗ ಹಿರಿಯ ನಿವೃತ್ತ ಅಧಿಕಾರಿಯಂಬ ಯಾವ ಅಹಂಕಾರವಿಲ್ಲದೆ ನನ್ನ ಯೋಗ ಕ್ಷೇಮ ಮತ್ತು ನನ್ನ ವಿದ್ಯಾ
ಭ್ಯಾಸದ ಬಗ್ಗೆ ಕಾಳಜಿಯಿಂದ ಕೇಳಿದ್ದು ನನಗೆ ಈಗಲೂ ನೆನಪಿದೆ. 

ಊರಿನ ಅನೇಕ ವಿಷಯಗಳನ್ನು ಕೇಳಿ ತಿಳಿದುಕೊಂಡರು ಪ್ರತಿ ಬಾರಿಯೂ ಗ್ರಾಮ ದೇವತೆ ಹಬ್ಬಕ್ಕೆ ಬರುತ್ತಿದ್ದಿದ್ದು ಹಾಗೂ ಆತ್ಮೀಯರು ಮತ್ತು ನೆಂಟರನ್ನು ಭೇಟಿ ಮಾಡಿ ಹೋಗುತ್ತಿದ್ದುದನ್ನು ಈಗಲೂ ಕೂಡ ಊರ ಜನ ನೆನಪಿಸಿಕೊಳ್ಳುತ್ತಾರೆ.

ಕಳೆದ ಬಾರಿ ಹಬ್ಬಕ್ಕೆ ಬಂದಾಗ ನಾನು ಅವರನ್ನು ಕಡೆಯ ಬಾರಿ  ಭೇಟಿ ಮಾಡಿದ್ದು ನಿವೃತ್ತಿಯ  ನಂತರವೂ ಹತ್ತಾರು ಸಂಸ್ಥೆಗಳಲ್ಲಿ ಸೇವೆಯಲ್ಲಿ  ತೊಡಗಿಸಿಕೊಂಡಿದ್ದು 93 ರ ಇಳಿ  ವಯಸ್ಸಿನಲ್ಲಿ ಇತ್ತೀಚೆಗೆ ನಿಧನರಾದರು.  ಆಡಳಿತದಲ್ಲಿ ದಕ್ಷತೆ ಪ್ರಾಮಾಣಿಕತೆ ಮತ್ತು ನಿಷ್ಠೆ ಗಳಿಂದ ಹೆಸರು ಮಾಡಿದ್ದರು.

-೦-೦-೦-೦-೦-೦-೦-


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ