ಕೆರೆ ಹಿಂದಿನ ಶ್ರೀ ಶಂಕರ ಲಿಂಗೇಶ್ವರ ದೇವಾಲಯ



ಪರ್ವತರಾಯನ  ಕೆರೆಯಲ್ಲಿ  ಸೂರ್ಯಾಸ್ತ 
 ಕೆರೆಯ ಹಿನ್ನೆಲೆಯಲ್ಲಿ ಹಣ್ಣೆ ಗುಡ್ಡ

ಸಾಮಾನ್ಯವಾಗಿ ಊರಿಗೆ ನೀರು ನೀಡುವ ಜಲಸ್ಥಾನಗಳಲ್ಲಿ ಒಂದು ಚಿಕ್ಕ ಮಂದಿರವಿರುತ್ತಿದ್ದುದು ವಾಡಿಕೆ. 
ದೇವಾಲಯದ ಹೊರನೋಟ 

ಈ ವಿಷಯದಲ್ಲಿ ಅಜ್ಜಂಪುರವೂ ಹೊರತಾಗಿಲ್ಲ. ಈ ಚಿತ್ರದಲ್ಲಿ ಕಾಣುವ ಚಿಕ್ಕ ಮಂದಿರವನ್ನು ಕೆರೆ ಹಿಂದಿನ ದೇವಸ್ಥಾನ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಅದು ಇರುವುದು ಪರ್ವತರಾಯನ ಕೆರೆಯ ಏರಿಯ ಬುಡದಲ್ಲಿ. ಹೀಗಾಗಿ ಈ ಹೆಸರೇ ಪ್ರಚಲಿತವಿದ್ದರೂ, ಅಲ್ಲಿ ನೆಲೆಗೊಂಡಿರುವುದು ಶ್ರೀ ಶಂಕರಲಿಂಗೇಶ್ವರ. 

ನಾಲ್ಕು ಚದರಡಿಯ ಒಂದು ಗರ್ಭಗೃಹ ಮತ್ತು ಹತ್ತು ಚದರಡಿಯ ಮುಖಮಂಟಪವನ್ನು ಮಾತ್ರ ಹೊಂದಿರುವ ಈ ದೇವಾಲಯ ಅಜ್ಜಂಪುರದ ಪ್ರಾಚೀನವೆಂದು ಹೇಳಬಹುದಾದ ಶಿವಮಂದಿರ. ಇಲ್ಲಿ ಹಿಂದೆ ಸಂಭ್ರಮವಿತ್ತು. ಪೂಜಾದಿಗಳು ಯಥಾಕ್ರಮ ನಡೆಯುತ್ತಿದ್ದ ದಿನಗಳಿದ್ದವು. ಇದರ ನಿರ್ವಹಣೆಗೆಂದು ಸಾಕಷ್ಟು ಕೃಷಿ ಜಮೀನನ್ನು ಉಂಬಳಿ ನೀಡಲಾಗಿತ್ತು. ಮಳೆಯ ಅಭಾವವಿರುವ ವರ್ಷಗಳಲ್ಲಿ ಇಲ್ಲಿ ರುದ್ರಾಭಿಷೇಕವನ್ನು ನಡೆಸಿ, ಮಳೆಯನ್ನು ಆಹ್ವಾನಿಸುವ ಪದ್ಧತಿಯಿತ್ತು. ಈಗ ಅದೆಲ್ಲ ಕೇವಲ ನೆನಪು ಮಾತ್ರ. 




ಸಾಧಾರಣವಾಗಿ ಇಂಥ ರಚನೆಯ ದೇವಾಲಯಗಳಲ್ಲಿ ಗರ್ಭಗುಡಿಯ ಮೇಲೆ ಇಟ್ಟಿಗೆ-ಗಾರೆಗಳಿಂದ ನಿರ್ಮಿಸುವ ಶಿಖರವಿರುತ್ತದೆ. ಆದರೆ ಈ ದೇವಾಲಯಕ್ಕೆ ಶಿಖರವನ್ನು ನಿರ್ಮಿಸಲಾಗಿಲ್ಲ. ಇರುವ ಶಿವಲಿಂಗ ಮತ್ತು ಅದರ ಎದುರಿನ ಬಸವಣ್ಣನ ವಿಗ್ರಹಗಳು, ಮಂದಿರದ ಅಳತೆಗೆ ಅನುಗುಣವಾಗಿರುವಂತೆ ಚಿಕ್ಕದಾಗಿ ನಿರ್ಮಿಸಲಾಗಿದೆ. ದೇವಾಲಯದ ಹೊರಗೋಡೆಯ ಮೇಲೆ ಕೆತ್ತಿರುವ ನಾಗಶಿಲ್ಪ ಸುಂದರವಾಗಿದೆ. 

 ಸುಂದರ ನಾಗ ಶಿಲ್ಪ

ಈ  ದೇವಾಲಯವು ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಹಿಂದೆ ಈ ದೇವಾಲಯದ ನಿರ್ವಹಣೆಗೆಂದು ತರೀಕೆರೆ ತಾಲೂಕು, ಶಿವನಿ ಹೋಬಳಿಯ ನಂದೀಪುರ ಗ್ರಾಮದಲ್ಲಿ 18 ಎಕರೆ ತೆಂಗಿನ ತೋಟವನ್ನು ಯಾರೋ ಪುಣ್ಯಾತ್ಮರು ನೀಡಿದ್ದರು. ಆದಾಯವನ್ನು ಹರಾಜು ಹಾಕಿ ಮುಜರಾಯಿ ಇಲಾಖೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಈಗಲೂ ಇದರ ವಹಿವಾಟಿನ ದಾಖಲೆಗಳು ಇಲಾಖೆಯಲ್ಲಿ ಲಭ್ಯವಿವೆ. ಇತ್ತೀಚೆಗೆ ದೇವಾಲಯವನ್ನು ಪುನರ್ ನಿರ್ಮಾಣಮಾಡಿ, ಸುತ್ತ ಗೋಡೆ ನಿರ್ಮಿಸಿ ಸಂರಕ್ಷಿಸುವ ಚಟುವಟಿಕೆಗಳು ಜೀವ ತಳೆದ ಸುದ್ದಿಯಿತ್ತು. ಅರ್ಚಕರಿಗೆ ಇಲಾಖೆಯಿಂದ ಸಂಬಳ ಸಾರಿಗೆಗಳು ಸಲ್ಲುತ್ತಿಲ್ಲವಾದರೂ, ಸಮೀಪದ ಗ್ರಾಮಗಳ ಜನ ಆಗೀಗ ಬಂದು ಅರ್ಚನೆ





ದೇವಾಲಯದ ಸದ್ಯದ ಸ್ಥಿತಿ


ಮಾಡುವ ಪದ್ಧತಿಯನ್ನು ಉಳಿಸಿಕೊಂಡಿದ್ದಾರೆ. ಈ ಕೆರೆಯಂಗಳದ ದೇವಾಲಯ ಮತ್ತು ಸುಂದರ ನಿಸರ್ಗದ ನಡುವೆ ಇರುವ ಪರ್ವತರಾಯನ ಕೆರೆಗಳನ್ನು ಸೂಕ್ತವಾಗಿ ಅಭಿವೃದ್ಧಿ ಪಡಿಸಿದಲ್ಲಿ ಉತ್ತಮ ಪ್ರವಾಸೀ ತಾಣವಾಗಬಲ್ಲ ಎಲ್ಲ ಅರ್ಹತೆಗಳೂ ಈ ಕೆರೆಗೆ ಇದೆ.  ಅಜ್ಜಂಪುರದ ಪುರಸಭೆ ಗಮನಿಸುವಂತಾಗಲಿ, ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ. 


* * * * * * * 
ಸುಭಾಷಿತ

ಗೌರವಂ ಪ್ರಾಪ್ಯತೇ ದಾನಾತ್ ನ ತು ವಿತ್ತಸ್ಯ ಸಂಚಯಾತ್ 
ಸ್ಥಿತಿರುಚ್ಚೈಃ ಪಯೋದಾನಾಂ ಪಯೋಧೀನಾಮಧಃ ಸ್ಥಿತಿಃ 

ಸಾಗರಗಳಿಗೆ ನೀರು ನೀಡುವ ಮೋಡಗಳು ಯಾವಾಗಲೂ ಎತ್ತರದಲ್ಲೇ ಇರುತ್ತವೆ. ಅಂತೆಯೇ ದಾನ ಮಾಡುವುದರಿಂದ ಗೌರವ ಹೆಚ್ಚುತ್ತದೆಯೇ ವಿನಾ ಹಣವನ್ನು ಸಂಗ್ರಹಿಸುವುದರಿಂದಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ