08. ಸಾಹಸಿ ಕನ್ನಡಿಗ - ಅಜ್ಜಂಪುರ ಸರ್ಕಸ್ ಸುಬ್ಬರಾವ್





  
ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜರು ಅಜ್ಜಂಪುರದವರೇನೂ ಅಲ್ಲ. ಆದರೆ ಅವರು ನಾಡು-ನುಡಿಯ ಬಗ್ಗೆ ತಳೆದ ವಿಶಾಲ ದೃಷ್ಟಿಕೋನ ಎಲ್ಲರೂ ಅನುಸರಿಸುವಂಥದು. ಅವರೊಂದು ಸಂದರ್ಶನದಲ್ಲಿ ಹೇಳಿದ್ದರು : " ಕರ್ನಾಟಕದಲ್ಲಿ 27000 ಕ್ಕೂ ಹೆಚ್ಚು ಹಳ್ಳಿಗಳಿವೆ. ನಾನು ಕನಿಷ್ಠ 20000  ಹಳ್ಳಿಗಳನ್ನಾದರೂ ಸುತ್ತಿರುವೆ. ಅಲ್ಲಿನ ವಿಶೇಷಗಳು, ಜನ, ಸಂಸ್ಕೃತಿಗಳ ಬಗ್ಗೆ ಅಧ್ಯಯನ ಮಾಡುವ ಅವಕಾಶಗಳನ್ನು ಅರಸಿಹೋದೆ. ಹೀಗಾಗಿ ನಮ್ಮದೇ ಪ್ರದೇಶಗಳ ವೈವಿಧ್ಯ, ಪ್ರತಿಭೆಗಳು ಕಣ್ಣಿಗೆ ಕಾಣುವಂತಾಯಿತು. ಇದು ಪತ್ರಕರ್ತರಿಗೆ ಅತ್ಯವಶ್ಯ. ಕುಳಿತಲ್ಲೇ ವರದಿ ಸಿದ್ಧಪಡಿಸುವ ಕ್ರಮ ಸೂಕ್ತವಲ್ಲ." ಅವರ ಅಧ್ಯಯನಶೀಲತೆಯಿಂದಾಗಿಯೇ ಕನ್ನಡಿಗರು ಮರೆತುಬಿಡಬಹುದಾಗಿದ್ದ ಸರ್ಕಸ್ ಸುಬ್ಬರಾಯರ ಸಾಹಸಗಾಥೆ ನಿಮ್ಮ ಮುಂದೆ ಬರುವಂತಾಗಿದೆ


ಪ್ರಸ್ತುತ ಲೇಖನ ಅವರ ಲೇಖನಗಳ ಸಂಗ್ರಹ " ಗರುಡದೃಷ್ಟಿ"ಯಿಂದ ಆಯ್ದುದು. ಇದೇ ಸಂಗ್ರಹದಲ್ಲಿ  ಕಾಲದವರಾರೂ ನಂಬದಂತಹ ಜೀವನ ನಡೆಸಿಹೋದ ಅನೇಕ ಹಿರಿಯರ ವ್ಯಕ್ತಿಚಿತ್ರಗಳಿವೆ. ಅತ್ಯಂತ ಸಣ್ಣದಾಗಿ ಯೋಚಿಸುವವರಿಂದ ಹಿಡಿದು, ತಾವು ನಂಬಿದ ಸಿದ್ಧಾಂತಗಳಿಗಾಗಿ ಪ್ರಭಾವಶಾಲಿಗಳನ್ನು, ಅಷ್ಟೇಕೆ ಸರಕಾರವನ್ನು ಎದುರುಹಾಕಿಕೊಂಡು ಸೆಣಸಿದವರು ಅಲ್ಲಿ ಕಾಣಸಿಗುತ್ತಾರೆ. ಅವರ ಮತ್ತೊಂದು ಕೃತಿ ಪಾತಾಳಗರಡಿ. ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಒಳಗೊಂಡಿರುವ  ಕೃತಿಗಳಲ್ಲಿ ಕಳೆದುಹೋದ ಕಾಲ ಹೆಪ್ಪುಗಟ್ಟಿದೆ.  


ಅಜ್ಜಂಪುರದವರೇ ಆದ ಸಾಹಸಿ ಸರ್ಕಸ್ ಸುಬ್ಬರಾಯರ ಬಗ್ಗೆ ಅವರ ಲೇಖನವನ್ನು ಓದಿ ಅದನ್ನು ಧ್ವನಿಮುದ್ರಿಸಿಟ್ಟುಕೊಂಡಿದ್ದೆ. ಅದನ್ನು ಬ್ಲಾಗ್ನಲ್ಲಿ ಪ್ರಕಟಿಸುವ ಇರಾದೆಯಿತ್ತು. ಅನುಮತಿಗೆಂದು ಇತ್ತೀಚೆಗೆ ಅವರನ್ನು ಸಂಪರ್ಕಿಸಿದೆ. ತುಂಬ ಆತ್ಮೀಯತೆಯಿಂದ ಮಾತನಾಡಿಸಿದ ಗರುಡನಗಿರಿಯವರು ಅಜ್ಜಂಪುರದ ಬಗ್ಗೆ ಅನೇಕ ಮಾಹಿತಿಗಳನ್ನು ತಿಳಿಸಿದರು. "ಅಜ್ಜಂಪುರ ಸರ್ವ ಸಾಧಾರಣ ಊರಲ್ಲ. ಅನೇಕ ಪ್ರತಿಭಾಶಾಲಿಗಳು ಇಲ್ಲಿ ಜನಿಸಿದರು. ಪ್ರಸಿದ್ಧ ಕತೆಗಾರ ಅಜ್ಜಂಪುರ ಸೀತಾರಾಮ್ ಆನಂದ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಅಜ್ಜಂಪುರದ ಇನ್ನೊಬ್ಬ ಹಿರಿಯರೂ, ಪ್ರತಿಭಾಶಾಲಿಗಳೂ ಆದ ಅಜ್ಜಂಪುರ ಕೃಷ್ಣಸ್ವಾಮಿಗಳು ಇಲ್ಲೇ ಬೆಂಗಳೂರಿನಲ್ಲಿದ್ದಾರೆ, ಅವರನ್ನೂ ಸಂಪರ್ಕಿಸಿ, ನಿಮಗೆ ಇನ್ನಷ್ಟು ಮಾಹಿತಿಗಳು ದೊರೆಯುತ್ತವೆ" ಎಂದರು.


ಗರುಡನಗಿರಿ ನಾಗರಾಜರ ಶ್ರೀಮತಿಯವರ ತಂದೆ ಅಜ್ಜಂಪುರದ ವೆಂಕಪ್ಪನವರು. ಅವರ ಮಕ್ಕಳು ಒಬ್ಬರಿಗಿಂತ ಒಬ್ಬರು ಪ್ರತಿಭಾಶಾಲಿಗಳು.  ಶ್ರೀ ಶಿವಸ್ವಾಮಿ, ಸುಪ್ರಸಿದ್ಧ ಎಂಜಿನಿಯರ್, ಪ್ರಾಮಾಣಿಕರು, ಅವರ ಕಾರ್ಯಕ್ಷಮತೆಗೆ ಗೌರವವಾಗಿ, ದೂರದ ಅಂಡಮಾನ್ನಲ್ಲಿ ಅವರ ಹೆಸರಿನ ಸೇತುವೆಯಿದೆ.  ಶ್ರೀ ಸುಂದರ ರಾವ್, ಅಶ್ವಶಾಸ್ತ್ರ ಪರಿಣಿತರು. ಅವರ ಕಾರ್ಯಸಾಮರ್ಥ್ಯವನ್ನು ಗಮನಿಸಿದ್ದ ಮೈಸೂರರಸರು, ಅವರನ್ನು ಅರೇಬಿಯಾಕ್ಕೆ ಕಳಿಸಿ, ಕುದುರೆಯನ್ನು ತರಿಸಿಕೊಂಡರಂತೆ. ಇವರೀರ್ವರೂ ಅಜ್ಜಂಪುರದವರೇ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ


ಗರುಡನಗಿರಿ ನಾಗರಾಜರು ಕರ್ಮವೀರ ವಾರಪತ್ರಿಕೆ, ಕಸ್ತೂರಿ ಮಾಸಪತ್ರಿಗೆಗಳ ಸಂಪಾದಕರಾಗಿದ್ದವರು, ಕರ್ನಾಟಕ ಪತ್ರಿಕಾ ಅಕಾದೆಮಿಯ ಅಧ್ಯಕ್ಷರಾಗಿದ್ದವರು. ಅವರ ನೆನೆಪಿನ ಸಂಗ್ರಹದಲ್ಲಿ ಕರ್ನಾಟಕದ ರಾಜಕೀಯದ ಏಳುಬೀಳುಗಳ ಸ್ವಾರಸ್ಯಕರ ಮಾಹಿತಿಗಳಿವೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ಬಗ್ಗೆ ನನಗಿದ್ದ ದುರಭಿಪ್ರಾಯವು ಗರುಡನಗಿರಿಯವರ ಲೇಖನವನ್ನು ಓದಿದಮೇಲೆ, ಅದು ತಪ್ಪೆಂದು ತಿಳಿಯಿತು. ಅರಸರ ವಸ್ತುನಿಷ್ಠ ಧೋರಣೆ, ಗೋಪಾಲಕೃಷ್ಣ ಅಡಿಗರ ಸ್ವಾಭಿಮಾನದ ನಡುವಣ ತಾಕಲಾಟವನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.  


ಗರುಡನಗಿರಿಯವರ  ಸೂಚನೆಯಂತೆ,  ನಿವೃತ್ತ ಅರಣ್ಯಾಧಿಕಾರಿ ಅಜ್ಜಂಪುರ ಕೃಷ್ಣಸ್ವಾಮಿಗಳನ್ನೂ ಸಂಪರ್ಕಿಸಿದೆ. ಅವರ ಬಗ್ಗೆ ವಿಸ್ತೃತ ಲೇಖನ ಮುಂದಿನ ಸಂಚಿಕೆಗಳಲ್ಲಿ ಪ್ರಕಟಗೊಳ್ಳಲಿದೆ.  ಸಂಚಿಕೆಯಲ್ಲಿ ಪ್ರಕಟವಾಗಿರುವ ಸರ್ಕಸ್ ಸುಬ್ಬರಾಯರ ಭಾವಚಿತ್ರ ಮತ್ತು ಅದರ ಕೆಳಗಿನ ಕಿರುಲೇಖನವನ್ನು  ಅಜ್ಜಂಪುರ ಕೃಷ್ಣಸ್ವಾಮಿಗಳ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ನಮ್ಮೂರ ಮೇಲಣ ಅಭಿಮಾನದಿಂದ ಇತಿಹಾಸದ ಭಾಗವಾಗಿರುವ  ಮಾಹಿತಿಗಳನ್ನು ಸಂತಸದಿಂದ ನೀಡಿರುವ  ಹಿರಿಯರೀರ್ವರಿಗೂ ಕೃತಜ್ಞತೆಗಳು.


ಇನ್ನೊಂದು ಮಾತು. ಬ್ಲಾಗ್ನಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಿದ ನಂತರ, ಅದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಾಲ್ಕು ಸಾಲುಗಳಲ್ಲಿ ಬರೆಯುವ ಮನಸ್ಸು ಮಾಡಿ. ಹೊಗಳಿಕೆಯಿರಲಿ, ಟೀಕೆಯಿರಲಿ, ಎಲ್ಲವೂ ಆವಶ್ಯಕ. ಬ್ಲಾಗ್‌ ಹೆಚ್ಚು ಜನರನ್ನು ತಲುಪುವಂತಾಗಲು  ಬಗೆಯ  ಸಂವಾದ ಅತ್ಯವಶ್ಯ. ಮನಗಾಣುವಿರೆಂದು ಆಶಿಸುತ್ತೇನೆ.







 

                                                                                                         ಅಜ್ಜಂಪುರ ಕೃಷ್ಣಸ್ವಾಮಿ






                                                                                                                 ಗರುಡನಗಿರಿ ನಾಗರಾಜ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ