17. ಸಾಂಪ್ರದಾಯಿಕ ಹಾಡುಗಳ ಸಂಗ್ರಾಹಕಿ
ಅಜ್ಜಂಪುರ ಅಚ್ಚಮ್ಮ ಸೀತಾರಾಮ ಭಟ್ ಅವರು ಅಜ್ಜಂಪುರದವರು. ೧೯-೦೪-೧೯೨೫ರಲ್ಲಿ ಜನಿಸಿದರು. ತಂದೆ ಶಂಕರಪ್ಪ. ಅವರು ಸ್ಕೌಟ್ ಮಾಸ್ತರರು. ಅಚ್ಚಮ್ಮನವರು ಎರಡು ವರ್ಷದವರಿದ್ದಾಗಲೇ ತೀರಿಕೊಂಡರು. ಅಂದಿನ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ತಂದೆಯಿಲ್ಲದೆ ಬೆಳೆದರೂ, ಅವರಿಗೆ ತಂದೆಯ ಪ್ರೀತಿಯ ವಿನಾ, ಇನ್ನಾವ ತೊಂದರೆಗಳೂ ಕಾಡಲಿಲ್ಲ. ಅದು ಬಾಲ್ಯ ವಿವಾಹದ ಕಾಲ. ತಮ್ಮ ೧೨ನೇ ವಯಸ್ಸಿನಲ್ಲಿ ಹಿರೇಮಗಳೂರಿನ ಸಂಸ್ಕೃತ ವಿದ್ವಾಂಸರಾಗಿದ್ದ ಸೀತಾರಾಮಭಟ್ಟರನ್ನು ವಿವಾಹವಾದರು. ಅಂದಿನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳಲ್ಲಿ ದೈನಂದಿನ ಕೆಲಸ-ಕಾರ್ಯಗಳ ಜತೆಗೇ, ಸಾಹಿತ್ಯ, ಸಂಗೀತಗಳ ಅಭ್ಯಾಸಕ್ರಮವನ್ನು ರೂಢಿಸುತ್ತಿದ್ದರು. ಮುಂದೆ ಅದು ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತಿತ್ತು. ಅಚ್ಚಮ್ಮನವರು ತಮ್ಮ ತಾಯಿ ವೇಂಕಟಲಕ್ಷ್ಮಮ್ಮ, ಅಜ್ಜಿ ಬನಶಂಕರಮ್ಮ, ಸೋದರತ್ತೆ ಗೌರಮ್ಮ ಮುಂತಾದ ಹಿರಿಯರೊಡನೆ ಕುಳಿತು, ಅವರು ಹಾಡುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಅಭ್ಯಾಸಮಾಡಿದರು. ವಿವಾಹ, ಉಪನಯನ, ಗೌರೀ ಹಬ್ಬ, ಗಣಪತಿ ಹಬ್ಬ, ದೀವಳಿಗೆ, ಸಂಕ್ರಾಂತಿ ಮುಂತಾದ ಸಂದರ್ಭಗಳಲ್ಲಿ, ಅವುಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಿಂದಿನವರು ರಚಿಸಿದ್ದಾರೆ. ಅವುಗಳನ್ನು ಸೂಕ್ತ ಸಮಯದಲ್ಲಿ ಹಾಡುತ್ತಿದ್ದಾಗ, ಆಯಾ ಹಬ್ಬ, ಉತ್ಸವಗಳ ಆಚರಣೆಯ ಹಿಂದಿನ ಉದ್ದೇಶ, ಸಂಭ್ರಮಗಳು ಆ ಹಾಡುಗಳಲ್ಲಿ ಪ್ರತಿಧ್ವನಿಸುತ್ತಿದ್ದವು. ಅವು ಯಾವುವೂ ಶಾಸ್ತ್ರೀಯ ಸಂಗೀತದ ಚೌಕಟ್ಟಿಗೆ ಒ...