17. ಸಾಂಪ್ರದಾಯಿಕ ಹಾಡುಗಳ ಸಂಗ್ರಾಹಕಿ
ಅಜ್ಜಂಪುರ ಅಚ್ಚಮ್ಮ ಸೀತಾರಾಮ ಭಟ್
ಅವರು ಅಜ್ಜಂಪುರದವರು. ೧೯-೦೪-೧೯೨೫ರಲ್ಲಿ ಜನಿಸಿದರು. ತಂದೆ ಶಂಕರಪ್ಪ. ಅವರು ಸ್ಕೌಟ್ ಮಾಸ್ತರರು. ಅಚ್ಚಮ್ಮನವರು ಎರಡು ವರ್ಷದವರಿದ್ದಾಗಲೇ ತೀರಿಕೊಂಡರು. ಅಂದಿನ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ತಂದೆಯಿಲ್ಲದೆ ಬೆಳೆದರೂ, ಅವರಿಗೆ ತಂದೆಯ ಪ್ರೀತಿಯ ವಿನಾ, ಇನ್ನಾವ ತೊಂದರೆಗಳೂ ಕಾಡಲಿಲ್ಲ. ಅದು ಬಾಲ್ಯ ವಿವಾಹದ ಕಾಲ. ತಮ್ಮ ೧೨ನೇ ವಯಸ್ಸಿನಲ್ಲಿ ಹಿರೇಮಗಳೂರಿನ ಸಂಸ್ಕೃತ ವಿದ್ವಾಂಸರಾಗಿದ್ದ ಸೀತಾರಾಮಭಟ್ಟರನ್ನು ವಿವಾಹವಾದರು. ಅಂದಿನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳಲ್ಲಿ ದೈನಂದಿನ ಕೆಲಸ-ಕಾರ್ಯಗಳ ಜತೆಗೇ, ಸಾಹಿತ್ಯ, ಸಂಗೀತಗಳ ಅಭ್ಯಾಸಕ್ರಮವನ್ನು ರೂಢಿಸುತ್ತಿದ್ದರು. ಮುಂದೆ ಅದು ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತಿತ್ತು. ಅಚ್ಚಮ್ಮನವರು ತಮ್ಮ ತಾಯಿ ವೇಂಕಟಲಕ್ಷ್ಮಮ್ಮ, ಅಜ್ಜಿ ಬನಶಂಕರಮ್ಮ, ಸೋದರತ್ತೆ ಗೌರಮ್ಮ ಮುಂತಾದ ಹಿರಿಯರೊಡನೆ ಕುಳಿತು, ಅವರು ಹಾಡುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಅಭ್ಯಾಸಮಾಡಿದರು. ವಿವಾಹ, ಉಪನಯನ, ಗೌರೀ ಹಬ್ಬ, ಗಣಪತಿ ಹಬ್ಬ, ದೀವಳಿಗೆ, ಸಂಕ್ರಾಂತಿ ಮುಂತಾದ ಸಂದರ್ಭಗಳಲ್ಲಿ, ಅವುಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಿಂದಿನವರು ರಚಿಸಿದ್ದಾರೆ. ಅವುಗಳನ್ನು ಸೂಕ್ತ ಸಮಯದಲ್ಲಿ ಹಾಡುತ್ತಿದ್ದಾಗ, ಆಯಾ ಹಬ್ಬ, ಉತ್ಸವಗಳ ಆಚರಣೆಯ ಹಿಂದಿನ ಉದ್ದೇಶ, ಸಂಭ್ರಮಗಳು ಆ ಹಾಡುಗಳಲ್ಲಿ ಪ್ರತಿಧ್ವನಿಸುತ್ತಿದ್ದವು. ಅವು ಯಾವುವೂ ಶಾಸ್ತ್ರೀಯ ಸಂಗೀತದ ಚೌಕಟ್ಟಿಗೆ ಒಳಪಟ್ಟವುಗಳಲ್ಲ. ವಾದ್ಯ ಪರಿಕರಗಳ ಬೆಂಬಲವೂ ಅವಕ್ಕಿರುತ್ತಿರಲಿಲ್ಲ. ಆದರೆ ಅದೊಂದು ಉತ್ತಮ ಮೌಖಿಕ ಪರಂಪರೆಯೆನ್ನಲು ಅಡ್ಡಿಯಿಲ್ಲ.
ಅಚ್ಚಮ್ಮನವರನ್ನು ನೆನಪಿಸಿಕೊಂಡರೆ ಅವರ ಅನೇಕ ಉತ್ತಮ ಗುಣಗಳು ಕಣ್ಮುಂದೆ ನಿಲ್ಲುತ್ತವೆ. ಆಕೆ ಮುಗ್ಧೆ, ಓದಿ ಬರೆಯಬಲ್ಲಷ್ಟು ವಿದ್ಯಾವಂತೆ, ಜೀವಕಾರುಣ್ಯವೇ ಅವರ ಬದುಕಿನ ಪ್ರಭಾವೀ ಅಂಶವಾಗಿತ್ತು. ಅವರ ಪರಿಚಯವಿರುವವರು ಇದನ್ನು ಸಮ್ಮತಿಸದಿರಲಾರರು. ಅಜ್ಜಂಪುರದ ಸ್ಥಳ ಪುರೋಹಿತ ಭೈರಾಭಟ್ಟರ ವಂಶದ ಕುಡಿಯಾಗಿದ್ದ ಈಕೆಯ ಬಾಲ್ಯವೆಲ್ಲವೂ ಕಳೆದದ್ದು ಅಜ್ಜಂಪುರದಲ್ಲೇ. ಪುರೋಹಿತರ ಮನೆಯಾದ್ದರಿಂದ ಹಬ್ಬ-ಹರಿದಿನಗಳ ಆಚರಣೆ ಸಂಭ್ರಮದಿಂದಲೇ ನಡೆಯುತ್ತಿತ್ತು. ಚೌಲ, ಉಪನಯನ, ವಿವಾಹ ಮುಂತಾದ ಧಾರ್ಮಿಕ ಸಂಸ್ಕಾರ ವಿಧಿಗಳಲ್ಲಿ, ಅವುಗಳ ಮಹತ್ವ ಮತ್ತು ಸ್ವಾರಸ್ಯವನ್ನು ಬಣ್ಣಿಸುವ ಅನೇಕ ಸಾಂದರ್ಭಿಕ ಹಾಡುಗಳು ಕಳೆದ ೫-೬ ದಶಮಾನಗಳ ಹಿಂದೆ ಪ್ರಚಲಿತವಿತ್ತು. ಗೌರಿ, ಗಣಪತಿ, ವರಮಹಾಲಕ್ಷ್ಮಿ, ಎಳೆಯಾಷ್ಟಮಿ, ಹಾಡುಗಳ ಸಂಗ್ರಹದಲ್ಲಿ ಅವುಗಳ ಆಚರಣಾ ವಿಧಾನಗಳು ಸಾಂಪ್ರದಾಯಿಕ ಹಾಡುಗಳಲ್ಲಿ ಚಿತ್ರವತ್ತಾಗಿ ಮೂಡಿಬಂದಿವೆ. ಈ ಹಾಡುಗಳಲ್ಲಿ ಅಡಗಿರುವ ಸ್ವಾರಸ್ಯದ ಅಂಶಗಳನ್ನು, ಅದರ ಸಾಹಿತ್ಯವನ್ನು ಸುಮ್ಮನೇ ಒಂದು ಬಾರಿ ಓದಿದರೆ ತಿಳಿಯುವಂತೆ ಸರಳಗನ್ನಡದಲ್ಲಿ ರಚಿಸಲಾಗಿದೆ. ಕೇದಾರೇಶ್ವರ, ಧಾನ್ಯಶಂಕರ ಮತ್ತು ಮಹಾಲಕ್ಷ್ಮೀ ವ್ರತವು ಒಂದು ವಿಶೇಷ. ಈ ಮೂರೂ ದೇವತೆಗಳ ಆರಾಧನೆಯನ್ನು ೩-೪ ಗಂಟೆಗಳ ಕಾಲ ಸಂಸ್ಕೃತಮಯ ಮಂತ್ರಗಳಲ್ಲಿ ಆಚರಿಸುವ ಪದ್ಧತಿಯಿತ್ತು. ಇಷ್ಟು ವಿಸ್ತಾರವಾದ ಪೂಜಾಕ್ರಮವನ್ನು ಹಾಡುಗಳ ರೂಪದಲ್ಲಿ ಆ ವ್ರತದ ಸಂದರ್ಭದಲ್ಲಿ ಹಾಡಲಾಗುತ್ತಿತ್ತು. ವಿಶೇಷವೆಂದರೆ, ಸಂಸ್ಕೃತ ಮಂತ್ರಮಯ ಪೂಜಾ ವಿಧಾನವನ್ನೇ, ಅನುಸರಿಸಿ ಮಾಡಲಾಗಿದ್ದ ಈ ವ್ರತಕಥೆಯು ಸರಳಗನ್ನಡದಲ್ಲಿ ಹಾಡಿನರೂಪದಲ್ಲಿತ್ತು.
ನಮ್ಮ ಎಲ್ಲ ಜಾನಪದ ಕಲಾವಿದರ ವಿಶೇಷ ಗುಣವಾದ ಅಗಾಧ ನೆನಪಿನ ಶಕ್ತಿ ಅಚ್ಚಮ್ಮನವರಲ್ಲೂ ಇತ್ತು. ಮೌಖಿಕವಾಗಿದ್ದ ಅನೇಕ ಪೌರಾಣಿಕ ಕಥಾನಕಗಳು ನಶಿಸಿ ಹೋಗುತ್ತವೆ ಎಂಬ ಭಯದಿಂದ ಅವನ್ನು ಬರಹರೂಪದಲ್ಲಿ ಸಂಗ್ರಹಿಸಲು ಪ್ರಯತ್ನಿಸಿದರು. ತಾವು ಕಲಿತ, ಸಂಗ್ರಹಿಸಿದ ಹಾಡುಗಳು ಮುಂದಿನ ತಲೆಮಾರಿಗೆ ಉಳಿಯಬೇಕೆಂಬ ಹಂಬಲವಿತ್ತು. ಆದರೆ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿಲು ಅಗತ್ಯವಾದ ಆರ್ಥಿಕ ನೆರವು ಮತ್ತು ತಿಳುವಳಿಕೆಗಳು ಇರಲಿಲ್ಲ. ಹೀಗಾಗಿ ತಮ್ಮೆಲ್ಲ ೬೦೦-೮೦೦ ಪುಟಗಳ ಸಂಗ್ರಹವನ್ನು ಕೈಬರವಣಿಗೆಯಲ್ಲಿ ಬರೆದಿಟ್ಟರು. ಈ ಹಸ್ತಪ್ರತಿಯನ್ನು ಕಂಡು ಬೆರಗಾದ ಹಿರಿಯ ಜಾನಪದ ವಿದ್ವಾಂಸ ಮತ್ತು ಸಂಗ್ರಾಹಕ ಶ್ರೀ ಮತಿಘಟ್ಟ ಕೃಷ್ಣಮೂರ್ತಿಯವರು, ಇದನ್ನು ಮುದ್ರಣ ಮಾಡಿ ಪ್ರಕಟಿಸಲು ಸಂಕಲ್ಪಿಸಿ ಸಾಧಿಸಿದರು. ಈ ಕೃತಿಯನ್ನು "ಗೃಹಿಣೀ ಗೀತೆಗಳು" ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ೧೯೮೩ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾದೆಮಿಯ ಅಧ್ಯಕ್ಷರಾದ ಹಿರಿಯ ಜಾನಪದ ವಿದ್ವಾಂಸ ಡಾ| ಎಚ್.ಎಲ್. ನಾಗೇಗೌಡರ ಉಪಸ್ಥಿತಿಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಿಸಲಾಯಿತು.
ಬಂಡೀ ಹಾಡು, ಹಾಲುರಾಮೇಶ್ವರ ಮಹಾತ್ಮೆ, ಕೃಷ್ಣ ಸೂಳೆಯ ಮನೆಗೆ ಹೋಗಿದ್ದು, ದೂರ್ವಾಸರು ಅನ್ನ ಬೇಡಿದ್ದು, ತಿರುಪತಿ ಶೃಂಗಾರ, ಭಸ್ಮಾಸುರನ ಕಾಳಗ, ಲವಕುಶರ ಕಾಳಗ ಮುಂತಾದ ಶೀರ್ಷಿಕೆಗಳುಳ್ಳ ಅವರ ಅಪ್ರಕಟಿತ ಹಾಡುಗಳ ಸಂಗ್ರಹವೇ ಇನ್ನೊಂದು ಸಂಪುಟವಾಗುವಷ್ಟು ಉಳಿದುಕೊಂಡಿವೆ.
ಇಂದಿಗೂ ಮನೆಗಳಲ್ಲಿ ಆರತಿ ಮಾಡುವಾಗ ಹಾಡುಹೇಳಿ ಆರತಿ ಬೆಳಗಬೇಕೆಂಬ ಸಂಪ್ರದಾಯವಿದೆ. ಆದರೆ ಚಿಕ್ಕದೊಂದು ಆರತಿ ಹಾಡು ಹೇಳಲು ಇಂದಿನ ಗೃಹಿಣಿಯರು ಹಿಂಜರಿಯುವರು ಇಲ್ಲವೇ ಅನಾವಶ್ಯಕವೆಂದು ಭಾವಿಸುವರು. ಆರತಿ ಹಾಡಿನಲ್ಲಿರುವ ಮುಖ್ಯ ಸತ್ವವೆಂದರೆ, ಕಿರಿಯರನ್ನು ಹರಸಿ, ಆಶೀರ್ವದಿಸಬೇಕೆಂಬ ಭಾವ.ಅದಕ್ಕೆ ಪೂರಕವಾದ ಸಾಹಿತ್ಯ ಇಂದು ಸಾಕಷ್ಟು ಲಭ್ಯವಿದೆಯಾದರೂ ಆಸಕ್ತಿ ಮಾತ್ರ ಕುಂದುತ್ತಿದೆ. ಅಚ್ಚಮ್ಮನವರಂಥ ಸಂಗ್ರಾಹಕರು ಅವುಗಳನ್ನು ಗ್ರಂಥಸ್ಥಗೊಳಿಸಿರುವುದರಿಂದ ಮುಂದೊಂದು ಕಾಲಕ್ಕೆ ಅವು ಬೆಳಗಬಹುದು, ಅವುಗಳ ಬಗ್ಗೆ ಯಾರಾದರೂ ಸಂಶೋಧನೆ ಮಾಡಲು ಪ್ರೇರಿಸಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ