02. ಇದ್ದದ್ದು-ಇಲ್ಲದ್ದು



ಶೀರ್ಷಿಕೆ ಬದಲಾಗಿರುವುದನ್ನು ನೀವು ಗಮನಿಸಿರಬಹುದು. ಸಾಮಾನ್ಯ ಉಪಯೋಗದಲ್ಲಿರುವ ಪದವನ್ನು ನಾನು ಬಳಸಿದ್ದೆ. ಆದರೆ ಅದು ಹಾಗಲ್ಲ, ಶೀರ್ಷಿಕೆ ಸರಿಯಾದ ರೂಪ ಹೀಗಿರಬೇಕು ಎಂದು ಆಧಾರ ಸಹಿತವಾಗಿ ಮಿತ್ರ ಮಂಜುನಾಥ ಅಜ್ಜಂಪುರ  ತಿಳಿಸಿದ್ದಾರೆ. ಕಮೆಂಟ್ ನಲ್ಲಿ ಅವರ ಪ್ರತಿಕ್ರಿಯೆಯನ್ನು ಗಮನಿಸಿ. ಇಂಥ ಸಕ್ರಿಯ ಭಾಗವಹಿಸುವಿಕೆಯೇ ಬ್ಲಾಗ್‌ನ ಗುಣಮಟ್ಟ ಹೆಚ್ಚಿಸಬಲ್ಲದು.

ಅಜ್ಜಂಪುರದ ಬಿ.ಆರ್. ಮಮತಾ ಫೇಸ್ ಬುಕ್‌ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಬರೆಯುವಾಗ ಹೀಗೆ ಹೇಳಿದ್ದಾರೆ :

"very nice blog uncle, ಖುಷಿ ಆಗುತ್ತೆ, ನಮ್ಮ ಊರಿನ ಬಗ್ಗೆ ನನ್ನ ಫ್ರೆಂಡ್ಸ್ ಎಲ್ಲರಿಗೂ ವಿವರಿಸಲು ಈ ಬ್ಲಾಗ್ ತುಂಬಾ ಚೆನ್ನಾಗಿದೆ".  ಹಲವರಿಗೆ ವಿದ್ಯಾಭ್ಯಾಸ, ಉದ್ಯೋಗ ಮುಂತಾದ ಕಾರಣಗಳಿಂದಾಗಿ ಈಗ ಊರಿನಲ್ಲಿ ಇರಲಾಗದಿದ್ದರೂ, ಅದರ ಬಗ್ಗೆ ಅಭಿಮಾನವೇನೂ  ಕುಂದುವುದಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಗುತ್ತದೆ. ಹುಟ್ಟಿದೂರಿನ ಸೆಳೆತವೇ ಅಂಥದು. ಆಕೆ ಹೇಳಿರುವಂತೆ ಊರಿನ ಬಗ್ಗೆ ವಿವರಿಸಲು, ತಿಳಿಯಲು ನನ್ನ ನೆನಪಿನಲ್ಲಿರುವ ಕೆಲ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವೆ. ಇಲ್ಲದ್ದನ್ನು ಇದ್ದಂತೆ ಚಿತ್ರಿಸುವಂತಾಗುವುದೇ ಇಂಥ ಬರವಣಿಗೆಗಳಲ್ಲಿ ಇರುವ ಅಪಾಯ. ಹಾಗಾಗದಂತೆ ನಾನು ಗಮನಿಸಿದ್ದಷ್ಟನ್ನು ಮಾತ್ರವೇ ಇಲ್ಲಿ ದಾಖಲಿಸಿರುವೆ. ಈ ಮಾಹಿತಿಗಳಿಗೆ ಪೂರಕವಾಗಿ ನಿಮ್ಮಿಂದ ಇನ್ನಷ್ಟು ವಿವರಗಳು ಹರಿದುಬರುವಂತಾದರೆ ಸಂತೋಷ. ಈ ಬಗ್ಗೆ ಇನ್ನೂ ಗಾಢವಾದ ನೆನಪುಗಳಿರುವ ಹಿರಿಯರು ಬರೆಯಬಹುದು, ಇಲ್ಲವೇ ಕಿರಿಯರು ಮಾಹಿತಿಗಳನ್ನು ಅವರಿಂದ ಸಂಗ್ರಹಿಸಿ ಬರೆಯಲಿ ಎಂಬುದು ಆಶಯ.

ಅಜ್ಜಂಪುರದಲ್ಲಿ ಹಿಂದೆ ಇದ್ದ, ಆದರೆ ಈಗಿಲ್ಲದ ಕೆಲವು ಸಂಗತಿಗಳ ಬಗ್ಗೆ ಇಲ್ಲಿ ಬರೆಯುತ್ತಿರುವೆ. ನನ್ನೂರನ್ನು ಕುರಿತಾದ ನನ್ನ ನೆನಪು ೫೦ ವರ್ಷಗಳದ್ದಾದರೂ, ನಾನು ಊರಿನಲ್ಲಿ ಇದ್ದುದು ಏಳೆಂಟು ವರ್ಷಗಳು ಮಾತ್ರವೇ. ಆದರೆ ಬಾಲ್ಯದ ನೆನಪು ಅಷ್ಟು ಸುಲಭವಾಗಿ ಅಳಿಯುವಂಥದ್ದಲ್ಲ. ಅಜ್ಜಂಪುರವನ್ನು ಕೋಟೆ, ಪೇಟೆಯೆಂದು ವಿಭಾಗಿಸಿದ್ದ ದಿನಗಳಿದ್ದವು. ಈಗ ಕೋಟೆಯೂ ಇಲ್ಲ, ಪೇಟೆಯೂ ಇಲ್ಲ. ಅವೆರಡರ ಕುರುಹುಗಳು ಅಳಿಸಿಹೋಗಿವೆ. ಏಕೆಂದರೆ ಕೋಟೆಯಿದ್ದ ಜಾಗದಲ್ಲಿ ನಾನು ಅಳಿದುಳಿದ ಗೋಡೆಗಳನ್ನು ನೋಡಿದ್ದೆ. ಆ ಕೋಟೆಯಾದರೂ ಚಿತ್ರದುರ್ಗದ ಕಲ್ಲಿನ ಕೋಟೆಯಂತೆ ಭದ್ರವಾದದ್ದಲ್ಲ. ಮಣ್ಣು-ಕಲ್ಲುಗಳನ್ನು ಪೇರಿಸಿ ತಯಾರಿಸಲಾಗಿದ್ದ ಕೋಟೆಯ ಗೋಡೆಗಳು ೧೮-೨೦ ಅಡಿಗಳಷ್ಟು ಎತ್ತರದಲ್ಲಿತ್ತು. ಶ್ಯಾನುಭೋಗ ವೆಂಕಟೇಶಯ್ಯನವರ ಮನೆಯ ಹಿಂಬದಿಯಲ್ಲಿ  ಅದರ ಅವಶೇಷಗಳನ್ನು ನೋಡಿದ ನೆನಪಿದೆ.  ಆಂಜನೇಯ ದೇವಾಲಯದ ಹಿಂಬದಿಯಲ್ಲಿ ಅಗಳು ಇತ್ತು. ಅಗಳೆಂದರೆ ಈಗಿನ ತಲೆಮಾರಿಗೆ ತಿಳಿಯದ ಪದವೆಂದುಕೊಳ್ಳುತ್ತೇನೆ. ಶತ್ರುಗಳು ಸುಲಭವಾಗಿ ಒಳಬರಲು ಸಾಧ್ಯವಾಗದ ರೀತಿಯಲ್ಲಿ ನಿರ್ಮಿಸಿದ್ದ ಕಂದಕವನ್ನೇ ಅಗಳು ಎಂದು ಕರೆಯುತ್ತಿದ್ದರು. ಇದು ದೇವಾಲಯದ ಹಿಂಬದಿಯನ್ನು ಆವರಿಸಿ ಮುಂದೆ ಈಗ ಬುಕ್ಕಾಂಬುಧಿ ರಸ್ತೆಯ ನೇರಕ್ಕೆ, ಈಗ ಬಸ್ ನಿಲ್ದಾಣವಿರುವವರೆಗೂ ವ್ಯಾಪಿಸಿತ್ತು.  ಅಲ್ಲಿಂದ ಮುಂದೆ ಅದರ ಕುರುಹುಗಳನ್ನು ನೋಡಿದ ನೆನಪಿಲ್ಲ. ೫-೬ ದಶಕಗಳ ಹಿಂದೆ ೧೫-೨೦ ಅಡಿಗಳಷ್ಟು ಆಳವಾಗಿರುತ್ತಿದ್ದ ಈ ಕಂದಕಗಳು ಇದೀಗ ನೆಲಸಮವಾಗಿವೆ, ನಿವೇಶನಗಳಾಗಿವೆ. 


ಕುಡಿಯುವ ನೀರಿನ ವಿಷಯಕ್ಕೆ ಬಂದರೆ ಇಂದಿಗೂ ಊರಿನಲ್ಲಿ  ನೀರಿನ ಸೌಕರ್ಯ ಸಮರ್ಪಕವಾಗಿದೆಯೆಂದೇನಲ್ಲ. ನೀರು ಸರಬರಾಜು ಈಗ ನಲ್ಲಿಗಳ ಮೂಲಕ ನಡೆಯುತ್ತಿದೆ. ಅದೂ ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ. ಆಗೆಲ್ಲ ಕುಡಿಯುವ ನೀರಿಗೆ ಕೋಟೆಯ ಆವರಣದಲ್ಲಿದ್ದ ನಾಲ್ಕಾರು ಬಾವಿಗಳನ್ನೇ ಆಶ್ರಯಿಸಿದ್ದರು. ಅವುಗಳಲ್ಲಿ ಬಸವನ ಬಾವಿಯೇ ಹೆಚ್ಚು ಬಳಕೆಯಾಗಿದ್ದು ಎನ್ನಬಹುದು. ಅಗಳಿನ ಒಳ ಆವರಣದಲ್ಲಿ ಒಂದು ಸಿಹಿನೀರಿನ ಬಾವಿಯಿದೆ. ಅದು ಅಗಳಬಾವಿ ಎಂದೇ ಪ್ರಸಿದ್ಧವಾಗಿತ್ತು. ಮತ್ತೆರಡು ಬಾವಿಗಳು ಕೋಟೆಯೊಳಗಿದ್ದವು. ಅದರಲ್ಲೊಂದು ಈಗ ಡಾ| ನಾಗರಾಜ್‌ರವರ ಮನೆಯ ಸಮೀಪದಲ್ಲಿತ್ತು, ಮತ್ತೊಂದು ಕನ್ನಡ ಪಂಡಿತರಾಗಿದ್ದ ಶ್ರೀ ಆರ್. ಕೃಷ್ಣಭಟ್ಟರ ಮನೆಯೆದುರಿಗೆ ಇತ್ತು. ಈಗ ಅವೆರಡನ್ನೂ ಮುಚ್ಚಲಾಗಿದೆ.   ಬಾವಿಗಳ ಬಗ್ಗೆ ಜನರಿಗೆ ಕಾಳಜಿ ಇರುತ್ತಿತ್ತು. ಅನೇಕ ವರ್ಷಗಳ ಅಂತರದಲ್ಲಿ ಬಾವಿಗಳನ್ನು ಸೋಸುತ್ತಿದ್ದರು. ಅದರಲ್ಲಿ ಇರಬಹುದಾದ ಕಶ್ಮಲಗಳನ್ನು ಹೊರತೆಗೆದು, ಜಲಮೂಲವನ್ನು ಶುಚಿಗೊಳಿಸುವುದು ಊರೊಟ್ಟಿನ ಕೆಲಸವಾಗಿತ್ತು.

ಹಾಗೆಯೇ ಈಗ ಕನ್ಯಕಾಪರಮೇಶ್ವರಿ ದೇವಾಲಯದ ಹಿಂಬದಿಯಲ್ಲಿ ಒಂದು ದೊಡ್ಡ ಗುಂಡಿಯಿತ್ತು. ಚರಂಡಿಯ ವ್ಯವಸ್ಥೆಯಿನ್ನೂ ಇರದಿದ್ದ ಆ ದಿನಗಳಲ್ಲಿ ಊರಿನ ಕೊಳಚೆಯೆಲ್ಲವೂ ಅಲ್ಲಿ ಸೇರುತ್ತಿತ್ತು. ಅದು ಕೂಡ ಅಗಳಿನ ದೊಡ್ಡಭಾಗವೇ ಆಗಿರಬೇಕು. ಅದನ್ನು ರಾಮರಾಯನ ಗುಂಡಿಯೆಂದು ಕರೆಯುತ್ತಿದ್ದರು. ಅದಾವ ರಾಮರಾಯನೋ, ಅಲ್ಲೇನು ಮಾಡುತ್ತಿದ್ದನೋ ತಿಳಿಯದು. ಊರಿನಲ್ಲಿನ ಮಾತುಕತೆಗಳಲ್ಲಿ ಅದರ ಪ್ರಸ್ತಾಪವಂತೂ ಇರುತ್ತಿತ್ತು. ಅದೇ ರೀತಿ ಅಜ್ಜಂಪುರದ ಮಾಧ್ಯಮಿಕ ಶಾಲೆಯ ಹಿಂಬದಿಯಲ್ಲಿ ೩ ಅಡಿ ಎತ್ತರದ ಕಲ್ಲಿನ ಕಂಭಗಳಿದ್ದವು. ಅವನ್ನು ಕಂಬವೆಂದೂ ಕರೆಯಲಾಗದು. ಏಕೆಂದರೆ ಕಾಡುಗಲ್ಲನ್ನು ಅಲ್ಲಿ ಹೂಳಿದಂತಿತ್ತು. ಅದನ್ನು ಊರ ಕೋಟೆಯ ಹೆಬ್ಬಾಗಿಲು ಎಂದು ಹೇಳುತ್ತಿದ್ದರು. ಕೋಟೆ ಎನ್ನುವುದಕ್ಕೆ ಆಧಾರಸಹಿತವಾಗಿ ಏನನ್ನಾದರೂ ತೋರಿಸಬಹುದಾದ ಭೌತರೂಪವಿದೆಂದು ಕೊಳ್ಳಬಹುದು. ಇಷ್ಟಲ್ಲದೆ ಅದಕ್ಕೆ ವಿಶೇಷ ಮಹತ್ವವೇನೂ ಇರಲಾರದು.

ಹನುಮಪ್ಪ ಯಾವಾಗಲೂ ಊರಿನ ಹೊರಗೆ ಎನ್ನುವುದು ಪ್ರತೀತಿ. ಆ ಅಂದಾಜಿನಲ್ಲಿ ಊರ ಹೊರಗೇ ಹನುಮಂತನ ದೇಗುಲವಿದ್ದಿತೆಂದರೆ, ಅದು ಕೋಟೆಯ ಹೊರಗೆ ಇದ್ದಿರಬೇಕು. ಈಗಾಗಿರುವ ಭೌಗೋಳಿಕ ಬದಲಾವಣೆಯ ಅನ್ವಯ ಕೂಡ ಈ ದೇಗುಲ ಊರಿನ ಅಂಚಿನಲ್ಲೇ ಇದೆಯಷ್ಟೆ.  ಕೋಟೆಯಲ್ಲಿರುವ ಆಂಜನೇಯ ದೇವಾಲಯದ ಬಗ್ಗೆ ಮತ್ತು ಇತರ ದೇವಾಲಯಗಳ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ. ತೀರ ಹಳೆಯದೆಂದು ಹೇಳಿಕೊಳ್ಳಬಹುದಾದ ನಮ್ಮೂರಿನ ದೇಗುಲಗಳ ಪೈಕಿ ಕೋಟೆಯಲ್ಲಿರುವ ಈಶ್ವರನ ಗುಡಿಯನ್ನು ಹೆಸರಿಸಬಹುದು. ಏಕೆಂದರೆ ಈ ದೇಗುಲದ ಗರ್ಭಗುಡಿಯಲ್ಲಿರುವ ಶಿವಲಿಂಗ ಮತ್ತು ಅಲ್ಲಿರುವ ೧ ಅಡಿ ಎತ್ತರದ ಸುಂದರ ಗಣಪತಿಯ ವಿಗ್ರಹ ಹಾಗೂ ನವರಂಗದಲ್ಲಿರುವ ಬಳಪದ ಕಲ್ಲಿನಲ್ಲಿ ನಿರ್ಮಿಸಿರುವ ಕಂಭಗಳು ಇದನ್ನು ಸಾರಿ ಹೇಳುತ್ತವೆ. ಇದಲ್ಲದೆ ಹೊಯ್ಸಳ ಮಾದರಿಯ ದೇಗುಲವೂ ಹಿಂದೆ ಕೋಟೆಯಿದ್ದ ಆವರಣದಲ್ಲಿ ಇರಬಹುದು. ಯಾವುದೇ ಉತ್ಖತನಗಳು ಈ ವರೆಗೆ ನಡೆದಿಲ್ಲವಾದ ಕಾರಣ ಅವಶೇಷಗಳು ದೊರೆತಿಲ್ಲ. 
ಈಗ್ಗೆ ೩-೪ ದಶಕಗಳ ಹಿಂದೆ ಕೋಟೆಯಲ್ಲಿರುವ ಅರಳಿಕಟ್ಟೆಯ ಬುಡದಲ್ಲಿ ಹೊಯ್ಸಳ ಕಾಲದ ಮಾದರಿಯ ನಾಲ್ಕಾರು ಬಳಪದ ಕಲ್ಲಿನ ಕಂಭಗಳು, (ಅವೂ ೫ ಅಡಿಗಳಿಗಿಂತ ಹೆಚ್ಚಿರಲಿಲ್ಲ) ಬಿದ್ದಿದ್ದವು. ಮುಂದೆ ಅವುಗಳನ್ನು ಶಿಲ್ಪಿಯೊಬ್ಬರಿಗೆ ನೀಡಲಾಯಿತೆಂದು ತಿಳಿಯಿತು.

ಕೋಟೆಯಿದ್ದುದುಕ್ಕೆ  ಏನಾದರೂ ಸುಳಿವುಗಳಿರಬೇಕಷ್ಟೆ. ಅಂಥದೊಂದು ಪ್ರಸಂಗ ಈಗ್ಗೆ ೫೦ವರ್ಷಗಳ ಹಿಂದೆ ನಡೆದುದು ನೆನಪಾಗುತ್ತಿದೆ. ಅಜ್ಜಂಪುರದ ಕೋಟೆಯಲ್ಲಿರುವ ನಮ್ಮ ಮನೆಯ ಮುಂದಣ ರಸ್ತೆಯನ್ನು ಚರಂಡಿ ನಿರ್ಮಾಣಕ್ಕೆಂದು ಅಗೆಯುತ್ತಿದ್ದರು. ಆಗ ೮ ಇಂಚು ವ್ಯಾಸದಿಂದ ೧೨ ಇಂಚು ವ್ಯಾಸದ ಸುತ್ತಳತೆಯ ಕಲ್ಲಿನ ಗುಂಡುಗಳು ದೊರೆತಿದ್ದವು. ಇಂಥ ವಸ್ತುಗಳ ಬಗ್ಗೆ ಕುತೂಹಲವಿರದಿದ್ದ ಕಾಲವದು. ಇಂಥ ಕಲ್ಲುಗುಂಡುಗಳನ್ನು ರಾಜ್ಯದ ಅನೇಕ ವಸ್ತುಸಂಗ್ರಹಾಲಯಗಳಲ್ಲಿ ಕಾಣಬಹುದು. ಸರಿಯಾದ ಏರ್ಪಾಡು ನಡೆದಿದ್ದರೆ ನಮ್ಮೂರಿನ ಕಲ್ಲುಗುಂಡುಗಳಿಗೂ ಅಂತಹ ಯೋಗ ಬಂದಿರಬಹುದಿತ್ತು. ಆದರೆ ಹಾಗಾಗಲಿಲ್ಲ. 

* * * * * * *

ಕಾಮೆಂಟ್‌ಗಳು

  1. ಪ್ರಿಯ ದತ್ತ,
    ನಿನ್ನ ಬ್ಲಾಗ್ ಅದೆಷ್ಟು ಕುಶಿ ಕೊಟ್ಟಿದೆ ಗೊತ್ತಾ ,
    ಆ ಭಾವಿಕಟ್ಟೆ ಬಸವ, ಅರಿಳಿಮರದ ಕಟ್ಟೆ ಇವೆಲ್ಲ ನನಗೆ ಎಷ್ಟು ಹೃದಯಕ್ಕೆ ಹತ್ತಿರ ಗೊತ್ತಾ, ಸುಮಾರು ಐವತ್ತು ವರುಷ ಗಳ ಹಿಂದಿನ ಬಾಲ್ಯದ ನೆನೆಪು ಗಳೆಲ್ಲ ಹೇಗೆ ಉಕ್ಕಿ ಬರುತ್ತಿದೆ ಗೊತ್ತಾ,
    ನಮ್ಮಮ್ಮ ಭಾವಿಕಟ್ಟೆ ಹತ್ತಿರ ನೀರು ಸೇದಿ ಬಟ್ಟೆ ವಗೆದು ಮುಗಿಸುವವರೆಗೂ, ತಲೆ ಇಲ್ಲದ ಬಸವನ ಮೇಲೆ ಕುಳಿತು ಬಸ್ಸ್ ಬಿಡುತ್ತಿದ್ದುದ್ದು, ಅಲ್ಲಿಯ ಹತ್ತಿರದ ಮನೆ ನಾರಾಯನಭಟ್ರು- ಗೌರಮ್ಮನವರ ಮೊಮ್ಮಗ, ಮೂರ್ತಿ , ನನ್ನನ್ನು ದಬ್ಬಿ, ತಾನು ಕುಳಿತು ಕೊಳ್ಳುತ್ತಿದ್ದುದು, ನಮ್ಮಮ್ಮ ಬಂದು ಸಮಾಧಾನ ಮಾಡಿ ಒಬ್ಬರು ಹಿಂದೆ ಕುಳಿತು ಕಂಡೆಕ್ಟರ್ ಆಗಲು ಹೇಳುತ್ತಿದ್ದುದು, ಎಲ್ಲೇ ನೆನಪಾಗುತ್ತೆ. ಮುಂದೆ ಯೋಗಾ ಯೋಗ ನಾನೂ ಕಾಲೇಜ್ ಗೆ ಬರುವ ಹೊತ್ತಿಗೆ- ಅ ಬಸನ ಹಿಂದೆ ಇರುವ ಮನೆ ಯಲ್ಲೇ ನಾವು ವಾಸಿಸುದ್ದು, ಆ ಕಿಟಗಿ ಹಿಂದೆ ನಮ್ಮಜ್ಜ ಕುಳಿತು . ಆ ರಸ್ತೆಯಲ್ಲಿ ಬರುವ ನನ್ನ ಗೆಳೆಯರಿಗೆ, ನಾನೂ ಮನೆಯಲ್ಲಿ ಇಲ್ಲಾಂತ , ಕೈಯಾಡಿಸುತ್ತಿದುದು- ಇದನ್ನು ಈಗಲೂ ಸತ್ಯ ಹೇಳುತ್ತಿರುತ್ತಾನೆ..
    ಆಂಜನೇಯನ ದೇವಸ್ತಾನ ಹಿಂದೆ ಇದ್ದ ಅಗಳು ಗುಂಡಿಯ ಮೇಲೆ ಇದ್ದ ಪೈಪ್ ಮೇಲೆ ಹೋಗುವಾಗ ಬಿದ್ದು , ಹನುಮಂತಪ್ಪ ಮೇಸ್ಟರ ಮಗ ಕೃಷ್ಣಮೂರ್ತಿ ನನ್ನನ್ನು ಎತ್ತಿ, ಹೊರಗೆ ಹಾಕಿದ್ದು, ಎಲ್ಲಾ ನೆನಪು ಒಟ್ಟಿಗೆ ಧುಮ್ಮಿಕ್ಕಿ ಬರುತ್ತೆ, ನಾನು ಸದಾ ಹೃದಯದಲ್ಲಿ ಇಟ್ಟ- ಬಾಲ್ಯದ ನಮ್ಮೂರಿನ ನೆನಪುಗಳನ್ನು ಮತ್ತೆ ಹಸಿರಾಗಿಸಿದ ನಿನಗೆ, ನಿಜಕ್ಕೂ ಅನಂತಾನಂತ ಧನ್ಯವಾದ.
    ಮತ್ತೆ ಬರೆಯುವೆ.
    ಲಕ್ಷ್ಮೀನಾರಾಯಣ ರಾವ್ ( ಪಾಪಣ್ಣಿ ಕಣೊ)

    ಪ್ರತ್ಯುತ್ತರಅಳಿಸಿ
  2. ಬ್ಲಾಗ್ನ ತಮ್ಮ ಲೇಖನದಲ್ಲಿ ಶಂಕರ ಅಜ್ಜಂಪುರ ಅವರು ಹೇಳಿರುವುದು ನಿಜ. ಹಿಂದೆ ಹೀಗಿತ್ತು ಎಂದು ಹೇಳಿದರೆ ನಂಬಲಾಗದ ಅನೇಕ ಬದಲಾವಣೆಗಳು ನಮ್ಮೂರಿನಲ್ಲಿ ಆಗಿವೆ. ಇದು ಎಲ್ಲ ಊರುಗಳಲ್ಲೂ ನಡೆಯುವ ಪ್ರಕ್ರಿಯೆಯಾದರೂ, ಅವರವರ ಊರಿನದು ಅವರವರಿಗೆ ಹೆಚ್ಚೆನ್ನಿಸುತ್ತದೆಯಲ್ಲವೆ. ಹಾಗಾಗಿ ಇದ್ದದ್ದು - ಇಲ್ಲದ್ದು ಲೇಖನಕ್ಕೆ ನನ್ನ ಪ್ರತಿಕ್ರಿಯೆಯಿದು.
    ಅಜ್ಜಂಪುರಕ್ಕೆ ನಾನು ಬಂದದ್ದು ೧೯೫೯ರ ನವೆಂಬರ್ ತಿಂಗಳಿನಲ್ಲಿ. ಆಗಿನ್ನೂ ಸಾಲುಮನೆಗಳು ಪ್ರಾರಂಭವಾಗಿರಲಿಲ್ಲ. ನಮ್ಮ ಮನೆಯನ್ನು ದಿವಂಗತ ಪಟೇಲ್ ಗುಂಡಪ್ಪನವರು ಕಟ್ಟಿ ೧ ವರ್ಷವಾಗಿತ್ತು. ಆಗಿನ ಅಜ್ಜಂಪುರದ ಎಲ್ಲೆಯನ್ನು ಹೇಳಬೇಕೆಂದರೆ, ದಕ್ಷಿಣಕ್ಕೆ ನಮ್ಮ ಮನೆ, ಉತ್ತರಕ್ಕೆ ಪೋಲೀಸ್ ಕ್ವಾರ್ಟರ್ಸ್, ಪಶ್ಚಿಮಕ್ಕೆ ತಿಮ್ಮಪ್ಪಯ್ಯನವರ ಮನೆ ಮತ್ತು ಪೂರ್ವಕ್ಕೆ ರೈಲುನಿಲ್ದಾಣ. ಆಗ ನಮ್ಮ ಮನೆಯ ಹಿಂಭಾಗದಿಂದ ಬಸ್ ನಿಲ್ದಾಣ, ಆಂಜನೇಯ ದೇವಾಲಯದ ಮೂಲಕ ಹಾದು ತಿಮ್ಮಪ್ಪಯ್ಯನವರ ಮನೆಯವರೆಗೆ ಮಾತ್ರ ಮನೆಗಳಿದ್ದವು. ನಮ್ಮೂರಿನ ಮಾಧ್ಯಮಿಕ ಶಾಲೆ ಹಿಂಭಾಗದಲ್ಲಿ ಇದ್ದ ಎರಡು ಕಲ್ಲುಗಳು ಸರ್ವೆ ಸಾಮಾನ್ಯವಾಗಿ ಎಲ್ಲ ಗ್ರಾಮಗಳಲ್ಲಿ ಕಂಡುಬರುವಂಥದು. ಕಾರುಹಬ್ಬವು ಕೃಷಿಪ್ರಧಾನ ಉತ್ಸವ. ಇದು ಸಾಧಾರಣವಾಗಿ ಬೇಸಿಗೆಯಲ್ಲಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬರುವುದು. ರೈತರು ಕೃಷಿಕಾರ್ಯಗಳನ್ನು ಮುಗಿಸಿ ವಿರಾಮವಾಗಿರುವ ಸಂದರ್ಭವಿದು. ಹೀಗಾಗಿ ಬೇವಿನ ಸೊಪ್ಪನ್ನು ಊರಿನ ಬಾಗಿಲಿಗೆ ಕಟ್ಟಿ ಉತ್ಸವವನ್ನು ಆಚರಿಸುತ್ತಿದ್ದರು.
    ಬ್ಲಾಗ್ನ ತಮ್ಮ ಲೇಖನದಲ್ಲಿ ಶಂಕರ ಅಜ್ಜಂಪುರ ಪ್ರಸ್ತಾಪಿಸಿರುವ ರಾಮರಾಯನ ಗುಂಡಿಯ ಬಗ್ಗೆ ಒಂದು ಮಾತು. ನಾನು ಕಂಡಂತೆ ೧೯೬೨-೬೩ರ ವರೆಗೂ ಸಂಜೆ ೬-೭ ಗಂಟೆಯ ಸಮೀಪ ಯಾರೂ ಓಡಾಡುತ್ತಿರಲಿಲ್ಲ. ನಿರ್ಜನವಾದ ಆ ಪ್ರದೇಶದಲ್ಲಿ ತಿರುಗಾಡಿದರೆ ರಾವು ಮೆಟ್ಟುವುದೆಂಬ ನಂಬಿಕೆಯಿತ್ತು. ಅದೇ ರೀತಿ ಈಗಿನ ಪ್ರೌಢಶಾಲೆಯಿರುವ ಜಾಗದಲ್ಲೂ ಜನರು ಓಡಾಡಲು ಭಯಪಡುತ್ತಿದ್ದ ವಾತಾವರಣವಿತ್ತು! ಇಂದು ಅದೆಲ್ಲ ಯಾರೂ ನಂಬುವಂತಿಲ್ಲದಾಗಿದೆ.
    ಬಾವಿಗಳ ಬಗ್ಗೆಯೂ ಪ್ರಸ್ತಾಪವಿದೆಯಲ್ಲವೆ. ನಾನು ತಿಳಿದಿರುವಂತೆ ೧೯೬೧-೬೨ಕ್ಕೂ ಹಿಂದೆ ಇಡೀ ಊರು ಬಾವಿಗಳನ್ನು ಮಾತ್ರ ಅವಲಂಬಿಸಿತ್ತು. ಅದರಲ್ಲೂ ಕುಡಿಯಲಾಗದ, ಆದರೆ ದಿನಬಳಕೆಗೆ ಒದಗುವ ಉಪ್ಪುನೀರಿನ ಬಾವಿಗಳೂ ಇದ್ದವು. ಕೋಟೆ ಪ್ರದೇಶವೊಂದರಲ್ಲೇ ಸುಮಾರು ಆರು ಬಾವಿಗಳಿದ್ದವು. ಬಸವನ ಬಾವಿ ಮತ್ತು ಅಗಳು ಬಾವಿಗಳಿಗೆ ಮಾತ್ರ ಹೆಸರಿದ್ದು, ಉಳಿದವನ್ನು ಆಯಾ ಮನೆಯ ಸಮೀಪದ ಗುರುತುಗಳಿಂದ ನಿರ್ದೇಶಿಸಲಾಗುತ್ತಿತ್ತು. ಕೋಟೆಯಲ್ಲಿ ಶ್ಯಾನುಭೋಗ ವೆಂಕಟೇಶಯ್ಯನವರ ಮನೆಯ ಹಿಂದಿದ್ದ ಬಾವಿ ಕಾಣೆಯಾಗಿದೆ. ಕನ್ನಡ ಪಂಡಿತರಾಗಿದ್ದ ಕೃಷ್ಣಭಟ್ಟರ ಮನೆಯೆದುರಿನ ಬಾವಿ ಮುಚ್ಚಿಹೋಗಿದೆ. ಶ್ರೀನಿವಾಸರಾಯರ ಮನೆಯೆದುರು ಒಂದು ಉಪ್ಪುನೀರಿನ ಬಾವಿಯಿತ್ತು. ಅದೀಗ ನೆಲಸಮವಾಗಿದೆ.
    ಪೇಟೆಯ ಪ್ರದೇಶದಲ್ಲಿ ಎಂದರೆ ಹೊಸದುರ್ಗದ ರಸ್ತೆಯ ಕೊನೆಯಲ್ಲಿ ಎರಡು ಬಾವಿಗಳಿದ್ದವು. ರೈಲುನಿಲ್ದಾಣದ ಸಮೀಪ ಇನ್ನೆರಡು ಬಾವಿಗಳಿದ್ದ ನೆನಪು. ಗೌಡರ ಬಾವಿಯೆಂದೇ ಕರೆಯಲ್ಪಡುವ ದೊಡ್ಡ ಬಾವಿ ಇನ್ನೂ ಇದೆ. ಕೋಟೆಯಲ್ಲಿದ್ದ ಬಸವನ ಬಾವಿಯಲ್ಲಿ ಈಗೆಲ್ಲ ಹೇಳುವಂತೆ ಭಾವೈಕ್ಯತೆಯಿತ್ತು. ಹಿಂದೂ, ಮುಸಲ್ಮಾನರು ಇದನ್ನು ಬಳಸುತ್ತಿದ್ದರು. ಬಾವಿಯನ್ನು ಸೋಸುವಾಗ ಎರಡೂ ಜನಾಂಗದವರು ಸೇರಿ ಆ ಕೆಲಸ ಮಾಡುತ್ತಿದ್ದರು. ಮುಂದೆ ನಲ್ಲಿಯಲ್ಲಿ ನೀರು ಬರುವಂತಾದಾಗ, ಈ ಬಾವಿಗಳ ಬಳಕೆ ಕಡಿಮೆಯಾಗಿ ನೀರು ಮಲೆತು ಕೆಟ್ಟಹೋಯಿತು. ಬಳಸಲಾಗದ ಸ್ಥಿತಿ ಬಂದಾಗ ಅವನ್ನು ಅನಿವಾರ್ಯವಾಗಿ ಮುಚ್ಚಬೇಕಾಯಿತು. ಏನಿದ್ದರೂ ಈ ಬಾವಿಗಳಲ್ಲಿ ವರ್ಷಪೂರ್ತಿ ನೀರು ಇರುತ್ತಿತ್ತು. ಶತಮಾನಗಳ ಕಾಲ ಜನ ಅದನ್ನೇ ಬಳಸಿ ಬದುಕಿದರು ಎನ್ನುವುದೀಗ ಇತಿಹಾಸ !

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಲೋ ಶಂಕರ,
    ಅಜ್ಜಂಪುರದಲ್ಲಿ ಬ್ರಾಹ್ಮನ ಸಂಘ ಫ್ರಾರಂಭವದದ್ದು ೧೯೬೧-೬೨ ಅ ಸಮಯ. ಕರ್ಣಾಟಕದಲ್ಲಿ ಮೊದಲು ಸಂಘ್ಹವದದ್ದು ಅಜ್ಜಂಪುರದಲ್ಲಿ.
    ಕೇಶವಮುರ್ತಿ

    ಪ್ರತ್ಯುತ್ತರಅಳಿಸಿ
  5. ದತ್ತ,
    ಪೂಜ್ಯ ತಿಮ್ಮಪ್ಪನವರು ನನಗೆ ತಿಳಿದಂತೆ ಎಂ.ಎ. ವಿದ್ಯಾರ್ಥಿಗಲಿಗೆ ಕನ್ನಡ ಪಾಠ ಹೇಳಿಕೊಡುತ್ತಿದರು.
    ಅವರಿಗೆ ಹಿಂದಿ, ಚಿತ್ರಕಲೆ, ಬಟ್ಟೆ ಹೊಲಿಯುವುದು ಮುಂತಾದ ವಿಚಾರ ತಿಳಿದ್ದಿತ್ತು. ಜ್ಯೊತೀಶ್ಯ ಚೆನ್ನಾಗಿ ತಿಳಿದ್ದುಕೊಂಡಿದ್ದರು.

    ಕೇಶವ

    ಪ್ರತ್ಯುತ್ತರಅಳಿಸಿ
  6. ಶಂಕರ,
    ಅಜ್ಜಂಪುರದಲ್ಲಿ ಬ್ರಾಹ್ಮನ ಸಂಘ ಫ್ರಾರಂಭವದದ್ದು ೧೯೬೧-೬೨ ಅ ಸಮಯ. ಕರ್ಣಾಟಕದಲ್ಲಿ ಮೊದಲು ಸಂಘವದದ್ದು ಅಜ್ಜಂಪುರದಲ್ಲಿ.
    ಕೇಶವಮುರ್ತಿ

    ಪ್ರತ್ಯುತ್ತರಅಳಿಸಿ
  7. ಲೋ ಶಂಕರ,
    ಅಜ್ಜಂಪುರದಲ್ಲಿ ಬ್ರಾಹ್ಮನ ಸಂಘ ಫ್ರಾರಂಭವದದ್ದು ೧೯೬೧-೬೨ ಅ ಸಮಯ. ಕರ್ಣಾಟಕದಲ್ಲಿ ಮೊದಲು ಸಂಘವದದ್ದು ಅಜ್ಜಂಪುರದಲ್ಲಿ.
    ಕೇಶವಮುರ್ತಿ
    ಬೆರಳು ಆಚ್ಚಿನ ತಪ್ಪಿನಿಂದ ಹಲೋ ಶಂಕರ ಬದಲಿಗೆ ಲೋ ಎಂದಾಗಿದೆ. ತಪ್ಪಿಗೆ ಕ್ಷಮೆ ಕೋರುತ್ತೆನೆ.
    ಕೇಶವ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ