95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ


ಹಣ್ಣೆ ಸಂಜೀವಯ್ಯನವರ ಭಾಷಣವನ್ನು ಶ್ರೀ ಕೆಂಗಲ್ ಹನುಮಂತಯ್ಯನವರು ಗಮನವಿರಿಸಿ ಆಲಿಸುತ್ತಿರುವುದು. ಪಕ್ಕದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಶ್ರೀ ತಗಡೂರು ರಾಮಚಂದ್ರರಾಯರು.
ಶಂಕರ ಅಜ್ಜಂಪುರ, ರಾಮಚೆಂದಿರ್ ಹಾಗೂ
ಹಣ್ಣೆ ಸಂಜೀವಯ್ಯನವರ ಮೊಮ್ಮಗ ಶ್ರೀ ರಾಮಚಂದ್ರ 

ನಾನು ಅಂತರಜಾಲದಲ್ಲಿ ಅಜ್ಜಂಪುರ ಎಂಬ ಈ ಬ್ಲಾಗನ್ನು ಆರಂಭಿಸಿ ಎಂಟು ವರ್ಷಗಳೇ ಸಂದಿವೆ. ಪ್ರತಿ ತಿಂಗಳಿಗೆ ಒಂದು ಲೇಖನದಂತೆ, ನಾನೂ ಬರೆಯುತ್ತ, ಅಜ್ಜಂಪುರದ ಬಂಧು-ಮಿತ್ರರನ್ನು  ಕಾಡಿ ಬೇಡಿ ಅವರಿಂದಲೂ ಲೇಖನಗಳನ್ನು ಬರೆಸುತ್ತ, ಇದೀಗ ನೂರನೆಯ ಲೇಖನದತ್ತ ಬಂದಿದ್ದಾಯಿತು. 

ಆರಂಭದಲ್ಲಿ ಕೇವಲ ಅಜ್ಜಂಪುರದ ವ್ಯಕ್ತಿಗಳು, ವಿಶೇಷಗಳಿಗೆ ಮಾತ್ರ  ಸಂಬಂಧಿಸಿದ ಲೇಖನಗಳನ್ನು ಬರೆಯುತ್ತೇನೆಂದು ಭಾವಿಸಿದ್ದರೂ ಅದು ಹಾಗಾಗಲು ಬಿಡಲಿಲ್ಲ. ಅಜ್ಜಂಪುರದ ಸುತ್ತಮುತ್ತಣ ವ್ಯಕ್ತಿಗಳು, ಸ್ಥಳಗಳು ಅಜ್ಜಂಪುರವನ್ನು ಪ್ರಭಾವಿಸಿದ್ದು ಇದೆಯಾಗಿ, ಅವುಗಳನ್ನು ಸ್ಮರಿಸದೇ ಹೋದರೆ, ಅದು ಅಪೂರ್ಣ ಕಾರ್ಯವಾದೀತೆಂಬ ತಿಳುವಳಿಕೆ ನಂತರ ಮೂಡಿತು. ಹೀಗಾಗಿಯೇ ಈ ಸಂಕಲನದಲ್ಲಿ ಅಜ್ಜಂಪುರದ ಸಮೀಪದ ಗಡಿಹಳ್ಳಿ, ಹಣ್ಣೆ, ಬಗ್ಗವಳ್ಳಿ ಮುಂತಾದ ಗ್ರಾಮಗಳ ಪ್ರಸ್ತಾಪ ಬಂದಿದೆ. ಇದು ಅಜ್ಜಂಪುರದ ವಿಷಯ ವ್ಯಾಪ್ತಿಗೆ ಪೂರಕವಾಗಿರುವುದರಿಂದ ಹೆಚ್ಚಿನ ಮಾಹಿತಿಗಳನ್ನು ಅರಿಯಲು ಸಹಾಯಕವಾಯಿತು.
ಅದಂತಿರಲಿ. ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಶ್ರೀ ಹಣ್ಣೆ ಸಂಜೀವಯ್ಯನವರು ಅಜ್ಜಂಪುರದೊಡನೆ ತುಂಬ ಒಡನಾಟ ಹೊಂದಿದ್ದವರು. ಅವರ ಬಂಧು-ಬಳಗದಲ್ಲಿ ಅಜ್ಜಂಪುರದವರು ತುಂಬ ಇದ್ದು, ಅವರ ಸಾಹಿತ್ಯದಿಂದ ಪ್ರಭಾವಿತರಾಗಿರುವುದರಿಂದ ಸಂಜೀವಯ್ಯನವರು ಅಜ್ಜಂಪುರದವರೇ ಆಗಿದ್ದಾರೆ. ನಾನು ಹಣ್ಣೆ ಸಂಜೀವಯ್ಯನವರ ಹೆಸರನ್ನು ಐವತ್ತು ವರುಷಗಳ ಹಿಂದೆ ಕೇಳಿದ್ದುಂಟು. ಅವರೊಬ್ಬ ಆಶುಕವಿ, ಪ್ರಾಪಂಚಿಕ ವಿಷಯಗಳಲ್ಲಿ ಅಷ್ಟಾಗಿ ಆಸಕ್ತಿಯಿರದ, ಆದರೆ ದೈವಭೀರು ವ್ಯಕ್ತಿತ್ವದವರೆಂದು ಕೇಳಿ ತಿಳಿದಿದ್ದೆ. 

ಅವರು ಅಜ್ಜಂಪುರ ಸಮೀಪದ ಹಣ್ಣೆ ಗ್ರಾಮದ ಶಾನುಭೋಗರಾಗಿದ್ದವರು. ಅವರು ತೀರಿಕೊಂಡೇ ಐವತ್ತು ವರುಷಗಳಾಗಿರಬಹುದು. ಅವರು ಸುಮಾರು ಅರವತ್ತು ವರುಷ ಜೀವಿಸಿದ್ದರು ಎಂಬ ಮಾಹಿತಿಗಳಿವೆ. ಎಂದರೆ ಈಗ್ಗೆ ಸುಮಾರು ನೂರ ಹತ್ತು ವರ್ಷಗಳ ಹಿಂದೆ ಜೀವಿಸಿದ್ದು, ಅವರ ಜೀವನ ಶೈಲಿ, ಸಾಹಿತ್ಯಾಭಿಮಾನ ಮತ್ತು ತಮ್ಮ ಸುತ್ತಮುತ್ತಲ ಪ್ರಾಂತದಲ್ಲಿ ತಮ್ಮ ಸಾಹಿತ್ಯಕ ಚಟುವಟಿಕೆಗಳಿಂದ ಪ್ರಸಿದ್ಧರಾಗಿದ್ದ ಕಾರಣಕ್ಕೆ ಅವರು ಇಂದೂ ಪ್ರಸ್ತುತರಾಗಿದ್ದಾರೆ.

ಬಹುಶಃ ಇದೇ ಮೊದಲ ಬಾರಿಗೆ ಈ ವಿದ್ಯುನ್ಮಾನ ಬ್ಲಾಗ್ ಮಾಧ್ಯಮದಲ್ಲಿ ಅವರ ಪ್ರಸ್ತಾಪವಾಗಿದೆ ಎಂದುಕೊಳ್ಳುತ್ತೇನೆ. ನಾನು ಕೇಳಿ ತಿಳಿದಂತೆ, ಅವರ ಆಶುಕವಿತ್ವವನ್ನು ಹೊಗಳುತ್ತಿದ್ದ, ಅವರ ಸಮಯಸ್ಫೂರ್ತಿಗೆ ಬೆರಗಾಗಿ ಅವರನ್ನು ಸ್ಮರಿಸುತ್ತಿದ್ದ ಅನೇಕ ಹಿರಿಯರೊಡನೆ ಮಾತನಾಡಿದ್ದುಂಟು. ಅವರನ್ನು ದಾಖಲಿಸಲು ಬೇಕಿರುವ ಮಾಹಿತಿಗಳಾಗಲೀ, ಸಾಹಿತ್ಯವಾಗಲೀ ನಾನು ಭೇಟಿಮಾಡಿದ ಯಾರೊಡನೆಯೂ ಇರಲಿಲ್ಲ. ಇತ್ತೀಚೆಗೆ ನಿಧನರಾದ ಮಾಧವರಾವ್ ರೊಡನೆ ಇವರ ಬಗ್ಗೆ ಕೇಳಿದಾಗ, ಅವರ ಬಂಧುಗಳ ಪೈಕಿ ಕೆಲವರ ಹೆಸರುಗಳನ್ನು ಹೇಳಿದ್ದರು. ಆದರೆ ಅವರನ್ನು ಭೇಟಿಯಾಗಿರಲಿಲ್ಲ. 

ಮುಂದೊಮ್ಮೆ ಪ್ರಸಂಗವಶಾತ್, ಚಿಕ್ಕಮಗಳೂರಿನಲ್ಲಿರುವ ನನ್ನ ಬಾಲ್ಯ ಸ್ನೇಹಿತ ಶ್ರೀ ಸತ್ಯನಾರಾಯಣ ಇವರೊಂದಿಗೆ ಮಾತನಾಡಿದಾಗ, ಅವರು ಸಂಜೀವಯ್ಯನವರ ಮೊಮ್ಮಗ ಬೆಂಗಳೂರಿನಲ್ಲಿರುವ ಶ್ರೀ ರಾಮಚಂದ್ರರನ್ನು ಪರಿಚಯಿಸಿದರು.  ಅವರನ್ನು ಭೇಟಿಮಾಡಿ ಸಂದರ್ಶನ ಮಾಡಿದಾಗ ಅನೇಕ ಮಾಹಿತಿಗಳು ದೊರೆತವು. ಬ್ಲಾಗ್ ನಲ್ಲಿ ಸಂಜೀವಯ್ಯನವರ ವಿಷಯವನ್ನು ಪ್ರಕಟಿಸುವ ಬಗ್ಗೆ ತಿಳಿಸಿದಾಗ, ಮನೆಗೆ ಕರೆದು, ತಮ್ಮಲ್ಲಿದ್ದ ಮಾಹಿತಿಗಳನ್ನು ಹಂಚಿಕೊಂಡರು. ಆಗ ಸಂಜೀವಯ್ಯನವರ ಅಪರೂಪದ ಚಿತ್ರ ಹಾಗೂ ಹಸ್ತಾಕ್ಷರಗಳು ದೊರೆತವು.  ಇವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಹಣ್ಣೆ ಸಂಜೀವಯ್ಯನವರು ತಮ್ಮ ಲಾವಣಿ ಪದಗಳಿಂದಲೇ ಪ್ರಖ್ಯಾತರಾದವರು. ಅವರಿಗೆ ಆರಂಭದಿಂದಲೂ ಅಧ್ಯಾತ್ಮದಲ್ಲಿ ಆಸಕ್ತಿಯಿತ್ತು.  ಲಾವಣ್ಯ ಕವಿರತ್ನ ರಾಯಸಂ ಸಿ.ಬಿ. ಸಂಜೀವಯ್ಯ ಇದು ಅವರ ಪೂರ್ಣ ಹೆಸರು. ಶ್ರೀಶೈಲದ ಸ್ವಾಮಿಗಳಿಂದ ಅವರಿಗೆ ಅವರಿಗೆ ಈ ಬಿರುದು ಸಂದಾಯವಾಗಿತ್ತು. ಚಿಕ್ಕಮಗಳೂರಿನಲ್ಲಿ ಮಹಿಳಾ ಸಮಾಜದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಅದರಲ್ಲಿ ಅಲ್ಲಿಗೆ ಅಂದಿನ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಆಗಮಿಸಿದ್ದರು. ಅಂದಿನ ಸರಕಾರದಲ್ಲಿ ವಿದ್ಯಾ ಸಚಿವರಾಗಿದ್ದ ಕೆಂಗಲ್ ಹನುಮಂತಯ್ಯನವರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಬಗ್ಗೆ ಸ್ಥಳದಲ್ಲೇ ಕವಿತೆಯೊಂದನ್ನು ಬರೆದು ಸಭೆಯಲ್ಲಿ ಸಂಜೀವಯ್ಯನವರು ಓದಿ ಹೇಳಿದರು. ಇದರಿಂದ ಸಭೆಯಲ್ಲಿದ್ದ ಗಣ್ಯವ್ಯಕ್ತಿಗಳು ಪ್ರಭಾವಿತರಾದರು. ಅದರಲ್ಲೂ ಕೆಂಗಲ್ ಹನುಮಂತಯ್ಯನವರಿಗೆ ಕಾವ್ಯ, ಸಾಹಿತ್ಯಗಳ ಉತ್ತಮ ಅಭಿರುಚಿ ಇದ್ದುದರಿಂದ ಅವರು ಸಂಜೀವಯ್ಯನವರ ಭಾಷಣವನ್ನು ಗಮನದಿಂದ ಕೇಳಿಸಿಕೊಳ್ಳುತ್ತಿರುವುದು ಚಿತ್ರದಲ್ಲಿ ದಾಖಲಾಗಿರುವುದನ್ನು ಗಮನಿಸಬಹುದು. 

ನಂತರ ಮುಂದೆ ಅಜ್ಜಂಪುರದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಸಂಜೀವಯ್ಯನವರನ್ನು ಆಹ್ವಾನಿಸಲಾಯಿತು. ಕಾವ್ಯವು ಹೇಗೆಲ್ಲ ಪ್ರಭಾವ ಬೀರಬಲ್ಲದು ಎನ್ನಲು ಕೆಳಗಿನ ಉದಾಹರಣೆಯನ್ನು ಗಮನಿಸಬಹುದು. ಹಣ್ಣೆ ಗ್ರಾಮದ ಕೆರೆ ತೀರ ಹೀನಾಯಸ್ಥಿತಿಯಲ್ಲಿತ್ತು. ಅದರ ದುರಸ್ತಿಗಾಗಿ ಅನೇಕ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಅಜ್ಜಂಪುರದಲ್ಲಿ ನಡೆದ ಸಭೆಯಲ್ಲಿ ಹಣ್ಣೆ ಗ್ರಾಮದ ಕೆರೆಯ ದುಸ್ಥಿತಿಯನ್ನು ಸಂಜೀವಯ್ಯನವರು ಕವಿತೆಯ ಮೂಲಕ ಪ್ರಸ್ತಾಪಿಸಿದರು. ಆಗಿನ ತಹಶೀಲ್ದಾರರು ಇದರಿಂದ ಪ್ರಭಾವಿತರಾಗಿ, ಅಧಿಕಾರಿಗಳನ್ನು ತಕ್ಷಣವೇ ಕರೆಸಿ, ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಆದೇಶಿದರು. 

ಇದನ್ನು ಇಂದಿನ ದಿನಮಾನದಲ್ಲಿ ಯೋಚಿಸಿದರೆ, ಸಂಜೀವಯ್ಯನವರ ಸಾಹಿತ್ಯ ಶಕ್ತಿ ಹಾಗೂ ಅದನ್ನು ಕೇಳಿಸಿಕೊಂಡ ಅಧಿಕಾರಿಯ ಸಾಹಿತ್ಯ ಪ್ರಜ್ಞೆ ಮತ್ತ ಕರ್ತವ್ಯ ಪ್ರಜ್ಞೆಗಳ ದೊಡ್ಡತನ ತಾನಾಗಿಯೇ ಬಿಂಬಿತವಾಗುವಂತಿದೆ. ಮುಂದೆ ಸಂಜೀವಯ್ಯನವರಿಗೆ ಲೌಕಿಕ ಆಸಕ್ತಿಗಳು ಕಡಿಮೆಯಾಗುತ್ತ ಬಂದು ಅಧ್ಯಾತ್ಮದತ್ತ ಹೆಚ್ಚು ಗಮನಹರಿಸಿದರು. ಈ ಕಾರಣದಿಂದಾಗಿ ಶಾನುಭೋಗಿಕೆಯನ್ನು ಅಳಿಯನಿಗೆ ವಹಿಸಿಕೊಟ್ಟು ವಿಶ್ರಾಂತಿ ಹೊಂದಿದರು.

ಸಾಹಿತ್ಯದಲ್ಲಿ ಅವರಿಗಿದ್ದ ಅಭಿರುಚಿಯನ್ನು ಮುಂದೆ ಧರ್ಮಸ್ಥಳದ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರೂ ಗುರುತಿಸಿದ್ದರು. ಸಂಜೀವಯ್ಯನವರೊಡನೆ ಹೆಗ್ಗಡೆಯವರು ಮಾತನಾಡುತ್ತ, ದೀರ್ಘವಾಗಿರುವ ಬಾಹುಬಲಿಯ ಚರಿತ್ರೆಯನ್ನು ಸಂಕ್ಷಿಪ್ತಗೊಳಿಸಿ, ಸರಳ ಕನ್ನಡದಲ್ಲಿ ಬರೆದುಕೊಡಬೇಕೆಂದು ಕೋರಿದರು. ಅವರ ವಿದ್ವತ್ತನ್ನು ಗಮನಿಸಿದ ಹೆಗ್ಗಡೆಯವರು ಸಂಜೀವಯ್ಯನವರನ್ನು ಆಸ್ಥಾನ ವಿದ್ವಾಂಸರಾಗಿರಬೇಕೆಂದು ಆಶಿಸಿದರು. ಅದರೆ ಕುಟುಂಬ, ಮಕ್ಕಳ ಬಗ್ಗೆ ಆಸ್ಥೆಯಿದ್ದ ಸಂಜೀವಯ್ಯನವರು ಅವರ ಆಹ್ವಾನವನ್ನು ನಯವಾಗಿ ನಿರಾಕರಿಸಿ ತಮ್ಮ ಸಾಹಿತ್ಯಕೃಷಿಯಲ್ಲೇ ಸಂತೋಷವನ್ನು ಕಂಡರು. 

ಒಮ್ಮೆ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವಾಗ ಹಾದಿ ತಪ್ಪಿಹೋಯಿತು. ಹಾದಿ ತಿಳಿಯದೇ ಮಂಕಾಗಿ ಕುಳಿತಾಗ ದೇವರನ್ನು ಧ್ಯಾನಿಸಿದರು. ತಮ್ಮ ಭಾವನೆಗಳನ್ನು ಬರೆಯಲು ಕಾಗದ, ಲೇಖನಿಗಳು ಇರಲಿಲ್ಲವಾಗಿ, ತಮ್ಮ ಕಪ್ಪು ಶರೀರದ ಮೇಲೆ ಕಡ್ಡಿಯಿಂದ ಗೀಚಿ ಅಕ್ಷರಗಳನ್ನು ಮೂಡಿಸಿ ಬರೆದ ಕವಿತೆಯ ಸಾಲನ್ನು ರಾಮಚಂದ್ರ ನೆನಪಿಸಿಕೊಂಡು ಹೇಳಿದರು. ದಾರಿ ಯಾವುದು ತೋರಿಸೆನಗೀಗ, ಶ್ರೀ ಗುರುವರೇಣ್ಯನೆ ತೊರೆಯಲಿಲ್ಲದೆ, ಅರುಹುವರು ಬೇಗ ಎಂದು ಬರೆದುಕೊಂಡರು. ಕೆಂಗಲ್ ಹನುಮಂತಯ್ಯನವರು ಆಂಜನೇಯನ ಪರಮಭಕ್ತರು. ಅವರ ಕೋರಿಕೆಯ ಮೇರೆಗೆ ಸಂಜೀವಯ್ಯನವರು ಹನುಮನನ್ನು ಕುರಿತು ಬರೆದ ಪದ್ಯದ ಕೆಲ ಸಾಲುಗಳು ಹೀಗಿವೆ. "ಕಂಡೆ ಕಂಡೆ ಬಾಲ ಬ್ರಹ್ಮಚಾರಿ ಹನುಮನ, ಮಂಡಲಾಧಿಪತಿಯು ಶ್ರೀ ರಾಮಚಂದ್ರನ"  ಎಂಬುದಾಗಿದೆ. ಇದನ್ನು ಅವರ ಮನೆತನದಲ್ಲಿ ನಿತ್ಯದ ಭಜನೆಯಾಗಿ ಹಾಡಲಾಗುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಎಡೆಗಳಲ್ಲಿನ ಭಜನಾವೃಂದಗಳಲ್ಲಿ ಜನಪ್ರಿಯವಾಗಿರುವ ಶ್ರೀಮತ್ ಶಂಕರ ಭಗವತ್ಪಾದರ ಕೋಮಲ ಚರಣಗಳಿಗೆರಗುವೆನು ಎಂಬ ರಚನೆಯಲ್ಲಿ ಲಾವಣಿ ಸಂಜೀವಯ್ಯನವರ ಸಾಹಿತ್ಯದ ಎಲ್ಲ ಲಕ್ಷಣಗಳೂ ಕಾಣುವಂತಿವೆ. ಸಂಜೀವಯ್ಯನವರೇ ರಚಿಸಿರುವ ಗಣಪತಿ ಗುಣಮಣಿ ಎಂದು ಆರಂಭವಾಗುವ ಭಜನೆಯನ್ನು ಇಂದಿಗೂ ಅನೇಕ ಭಜನಾ ಮಂಡಲಿಗಳು ರೂಢಿಯಲ್ಲಿಟ್ಟುಕೊಂಡಿವೆ.  

ಚನ್ನಗಿರಿಯ ಸಮೀಪದಲ್ಲಿ ಕಂಚಿನಾಳು ಎಂಬುದೊಂದು ಗ್ರಾಮ. ಅಲ್ಲಿ ಪರ್ವತಪ್ಪನವರೆಂಬ ಅವಧೂತರಿದ್ದರು. ಅವರು ಸಂಜೀವಯ್ಯನವರ ಅಧ್ಯಾತ್ಮಿಕ ಗುರುಗಳು, ಪವಾಡಪುರುಷರು. ಅವರು ಗೋಲಿಗಜ್ಜುಗದ ಆಟವಾಡುತ್ತಿದ್ದಾಗ. ರೋಗಿಯೋರ್ವರನ್ನು ಕರೆದುಕೊಂಡು ಬರಲು ಹೇಳಿದರು. ರೋಗಿಗೆ ಅವರ ಮಾತುಗಳಲ್ಲಿ ವಿಶ್ವಾಸವಿರಲಿಲ್ಲ. ಆದರೆ ಪ್ರಯೋಗಾರ್ಥವಾಗಿ, ನಂಬಿಕೆಯಿಲ್ಲದೆಯೂ, ತಮ್ಮ ಸೂಚನೆಗಳನ್ನು ಅನುಸರಿಸುವಂತೆ ಪರ್ವತಪ್ಪನವರು ತಿಳಿಸಿದರು. ಅದರಂತೆ ಗುಣಪಡಿಸಿದಾಗ ಅವರಿಗೆ ವಿಶ್ವಾಸ ಬಂದಿತು. 

ಬ್ರಾಹ್ಮಣರಾದ ಸಂಜೀವಯ್ಯನವರಿಗೆ ಪರ್ವತಪ್ಪನವರು ಅಬ್ರಾಹ್ಮಣರು ಎಂಬ ಭಾವವೇನೂ ಇರಲಿಲ್ಲ. ಗುರುಗಳು ಎಂದರೆ ಮುಗಿಯಿತು, ಅಲ್ಲಿ ಜಾತಿಯ ಪ್ರಶ್ನೆ ಬಾರದು ಎನ್ನುವುದು ಅವರ ವಿಶ್ವಾಸ. ಕೃಷ್ಣನು ಗೊಲ್ಲರವನಾದರೂ ಎಲ್ಲರಿಗೂ ದೇವರಲ್ಲವೇ ಎನ್ನುವುದು ಸಂಜೀವಯ್ಯನವರ ಅಚಲ ನಂಬಿಕೆ.  ಅದೇ ಭಾವನೆಗಳು ಕುಟುಂಬದಲ್ಲಿ ಮುಂದುವರೆದ ಪರಿಣಾಮವಾಗಿ ಅನೇಕ ಅನುಭವಗಳನ್ನು ಹೊಂದಿದೆವು ಎಂದು ರಾಮಚಂದ್ರ ತಿಳಿಸಿದರು. ಸಖರಾಯಪಟ್ಟಣದ ವೇಂಕಟಾಚಲ ಅವಧೂತರ ಪರಿಚಯವು ಸಂಜೀವಯ್ಯನವರಿಗೆ ಇದ್ದಿತಂತೆ.

ಹಣಕಾಸಿನ ಅನುಕೂಲವಿರದ ಹಾಗೂ ಮುದ್ರಣಗಳ ಸೌಲಭ್ಯ ದುಬಾರಿಯಾಗಿದ್ದ ಕಾಲದಲ್ಲಿ ಸಂಜೀವಯ್ಯನವರು ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಅವರ ಕೃತಿಗಳನ್ನು ಶೃಂಗೇರಿಯ ಮಠದವರು ಪ್ರಕಟಿಸಿರುವ ಉದಾಹರಣೆಗಳಿವೆ. ಶೃಂಗೇರಿಯ ಮಠದಲ್ಲಿ ತಮ್ಮ ಸಾಹಿತ್ಯವನ್ನು ಆಡಳಿತಾಧಿಕಾರಿಗಳ ಗಮನಕ್ಕೆ ತರದೆ, ನೇರವಾಗಿ ಸ್ವಾಮಿಗಳ ಬಳಿ ಹೋಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ನಂತರ ಅವರ ಕೃತಿಗಳ ಮೌಲ್ಯವನ್ನು ಸ್ವಾಮಿಗಳು ಗ್ರಹಿಸಿದ್ದರಿಂದ ಪರಿಸ್ಥಿತಿ ತಿಳಿಯಾಯಿತು. 

ಇತ್ತೀಚೆಗೆ ಅವರ ಸಾಹಿತ್ಯವನ್ನು ಪ್ರಕಟಿಸಲು ಶಿವಮೊಗ್ಗದ ಶಾಂತಕುಮಾರ್ ಎಂಬ ವರ್ತಕರೋರ್ವರು ಮುಂದಾಗಿದ್ದರಂತೆ. ಆದರೆ ಅವರ ನಿಧನದ ಕಾರಣ ಅದು ಸಾಧ್ಯವಾಗಲಿಲ್ಲ ಎಂದು ರಾಮಚಂದ್ರ ತಿಳಿಸಿದರು. ಅವರ ಬಳಿ ಇದ್ದ ಹಸ್ತಪ್ರತಿಗಳು, ಮುದ್ರಿತ ಪ್ರತಿಗಳ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ. 

ಕನಕದಾಸರ ರಾಮಧಾನ್ಯ ಚರಿತೆಯಂತೆ ರಾಗಿಯ ಮಹತ್ವವನ್ನು ಹೇಳುವ ಪದ್ಯವೊಂದು ಇಲ್ಲಿದೆ. ಮಕ್ಕಳಿಗೆಂದು ರಚಿಸಲಾದ ಅಕ್ಷರ ಮಾಲಿಕೆಯ ಪದ್ಯವೂ ಪ್ರಕಟವಾಗಿದೆ. ಹಿರಿಯ ವಿದ್ವಾಂಸರಾಗಿದ್ದ ಶ್ರೀ ದೇವುಡು ನರಸಿಂಹಶಾಸ್ತ್ರಿಗಳ ಸಂಪರ್ಕವೂ ಇದ್ದಿತೆನ್ನಲು ಅವರು ಪರಿಶೀಲಿಸಿದ್ದ ಅಕ್ಷರಮಾಲಿಕೆಯ ಚಿತ್ರಗಳನ್ನು ಕಾಣಬಹುದು.  

  
ಜಾನಪದದ ದಟ್ಟವಾದ ಪ್ರಭಾವ ಹೊಂದಿದ್ದ ಸಂಜೀವಯ್ಯನವರು ಗ್ರಾಮೀಣರಿಗೆ ಅತ್ಯಂತ ಆಪ್ತರಾಗಿದ್ದರು. ಅವರು ಬರೆದಿರುವ ಹಸ್ತಪ್ರತಿಗಳು ಇನ್ನೂ ಪ್ರಕಟವಾಗಬೇಕಿದೆ. ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಸಂಘ-ಸಂಸ್ಥೆಗಳ ಆಸಕ್ತಿಯಿಂದ ಅವರ ಬರಹಗಳು ಪ್ರಕಟವಾಗುವಂತಾದರೆ, ಅದು ಅವರಿಗೆ ಸಲ್ಲಿಸುವ ಗೌರವವಾದೀತು. 

ಸಂಜೀವ ಎಂಬ ಅಂಕಿತ ನಾಮದೊಡನೆ ಹಾಡುವ ಗೀತೆಗಳು ದಕ್ಷಿಣ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತವಿದೆ. ಅವುಗಳನ್ನು ಸಂಗ್ರಹಿಸಿ, ಹಾಡುವ, ಅದರಲ್ಲಿನ ಸಾಹಿತ್ಯದ ಸೌಂದರ್ಯವನ್ನು ಆಸ್ವಾದಿಸಲಾದರೂ, ಅವರ ಕೃತಿಗಳ ಮರು ಪ್ರಕಟಣೆಯ ಅಗತ್ಯವಿದೆ. ಅಂಥದೊಂದು ದಿನ ಬರಲಿ ಎಂದು ಆಶಿಸೋಣ. 
ಕಾಮೆಂಟ್‌ಗಳು

 1. ಪ್ರೀತಿಯ ಶಂಕರ ಅಜ್ಜಂಪುರ,
  ಹಿರಿಯ ನಾಗರಿಕರಾಗಿರುವ ನಮಗೇ ಪರಿಚಿತರಲ್ಲದ ಮತ್ತು ಬರಿಯ ನಾಮಮಾತ್ರ ಪರಿಚಯವಿರುವ ಹಣ್ಣೆ ಸಂಜೀವಯ್ಯನವರ ಜೀವನ ಚಿತ್ರಣ, ಅವರ ಪ್ರಕಟಿತ ಕೃತಿಗಳ ಪಡಿಯಚ್ಚುಗಳು ಬಹಳ ಒಳ್ಳೆಯ ದಾಖಲೆಗಳಾಗಿವೆ.
  ನಿಮ್ಮ ಈ ಕಾರ್ಯ ಶ್ಲಾಘನೀಯ.
  ಧನ್ಯವಾದಗಳು.

  ಅಂತೆಯೇ, ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ಹೆಸರು ಕೇಳಿದುದೇ ಇತ್ತೀಚಿನ ವರ್ಷಗಳಲ್ಲಿ. ಅರ್ಧ ಶತಮಾನದ ಹಿಂದೆಯೇ ನಿಧನರಾದ ಸಂಜೀವಯ್ಯನವರಿಗೆ ಅವರ ಪರಿಚಯವಿತ್ತೇ? ಇದು ಸರಿಯಾದ ಮಾಹಿತಿಯೇ? ಮತ್ತೊಮ್ಮೆ ಪರಿಶೀಲಿಸಬಹುದು.
  16.2.2019

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ