120. ಶಿಕ್ಷಣವೇತ್ತ, ವಿದ್ಯಾಭಿಮಾನಿ ಶ್ರೀ ನರಸೀಪುರ ದೊಡ್ಡಮನೆ ನಾಗರಾಜ್ (ಎನ್.ಡಿ.ಎನ್.)

 ಶಿಕ್ಷಣವೇತ್ತ, ವಿದ್ಯಾಭಿಮಾನಿ

ಶ್ರೀ ನರಸೀಪುರ ದೊಡ್ಡಮನೆ ನಾಗರಾಜ್ (ಎನ್.ಡಿ.ಎನ್.)
ಅಜ್ಜಂಪುರದ ಶೆಟ್ರು ಶಿದ್ದಪ್ಪನವರ ಪದವೀಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ, ಅಜ್ಜಂಪುರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ತರೀಕೆರೆಯಲ್ಲಿ ನೆಲೆಸಿದ್ದ ಎನ್.ಡಿ. ನಾಗರಾಜರು ನಿಧನರಾಗಿದ್ದಾರೆ.
ಎನ್.ಡಿ.ಎನ್. ಎಂಬ ಸಂಕ್ಷಿಪ್ತ ನಾಮದಿಂದ ಹೆಸರಾಗಿದ್ದ ನಾಗರಾಜರ ಹೆಚ್ಚಿನ ಪರಿಚಯ ನನಗೆ ಇರಲಿಲ್ಲವಾದರೂ, ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರಿಗೆ ಅವರು ಆಪ್ತರು. ವಿದ್ಯಾಭಿಮಾನಿಗಳಾಗಿದ್ದ ನನ್ನ ತಂದೆಯನ್ನು ಕಂಡರೆ ನಾಗರಾಜರಿಗೂ ಅದೇ ಬಗೆಯ ಗೌರವ. ನಾನು ಅವರನ್ನು ಒಂದೆರಡು ಬಾರಿ ಕಂಡು ಮಾತನಾಡಿದ್ದುಂಟು. ಆಗೆಲ್ಲ ನನ್ನ ತಂದೆಯನ್ನು ಪ್ರೀತಿಯಿಂದ ಸ್ಮರಿಸಿದ್ದರು..
ಸ್ವತಃ ಆಂಗ್ಲ ಪ್ರಾಧ್ಯಾಪಕರಾಗಿದ್ದ ನಾಗರಾಜರಿಗೆ ಸಾಹಿತ್ಯ, ಸಂಸ್ಕೃತಿ, ಕಲೆಗಳಲ್ಲಿ, ರಂಗಭೂಮಿಗಳ ಬಗ್ಗೆ ಅಪಾರ ಅಭಿಮಾನ. ನಿವೃತ್ತಿಯ ನಂತರವೂ ಸಂಸ್ಕೃತದ ಅಧ್ಯಯನದಲ್ಲಿ ತೊಡಗಿದ್ದರು. ನಾನೊಮ್ಮೆ ಇಂಗ್ಲಿಷ್ ಬರಹವೊಂದರ ಪರಿಷ್ಕರಣೆಗಾಗಿ ಅವರನ್ನು ಕೋರಿದಾಗ, ಸಮಯಾಭಾವದಿಂದ ಸಾಧ್ಯವಾಗಲಾರದು ಎಂದು ತುಂಬ ಸಂಕೋಚದಿಂದ ಹೇಳಿಕೊಂಡಿದ್ದರು. ಪ್ರತಿ ಹಬ್ಬಗಳಿಗೂ ಶುಭಾಶಯ ಕೋರುತ್ತಿದ್ದ ಆತ್ಮೀಯರೊಬ್ಬರು ಮರೆಯಾಗಿದ್ದಾರೆ.
ಅವರ ಅಧ್ಯಯನಶೀಲತೆ, ಶಿಕ್ಷಣದ ಬಗೆಗಿನ ಪ್ರೀತಿ, ವಿದ್ಯಾರ್ಥಿಗಳನ್ನು ಕುರಿತಾದ ಕಾಳಜಿಗಳಿಂದಾಗಿ ಅವರು ನನ್ನೂರಿನ ವಿದ್ಯಾವಲಯದಲ್ಲಿ ತುಂಬ ಜನಪ್ರಿಯರಾಗಿದ್ದರು. ದೈವಭಕ್ತರಷ್ಟೇ ಅಲ್ಲ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಈಗೆರಡು ವರ್ಷಗಳ ಹಿಂದೆ ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಆಪ್ತತೆಯಿಂದ ಮಾತನಾಡಿಸಿದ್ದರು.
ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದರು. ಇನ್ನಷ್ಟು ವರ್ಷ ಬಾಳಿ ಬದುಕಿ, ಕಿರಿಯರಿಗೆ ಉತ್ತಮ ಮಾರ್ಗದರ್ಶಿಯಾಗುವಂತಿದ್ದ, ಎನ್.ಡಿ. ನಾಗರಾಜರ ಕುಟುಂಬವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದಯಾಮಯನಾದ ಭಗವಂತನಲ್ಲಿ ಪ್ರಾರ್ಥನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.