ಅಜ್ಜಂಪುರ ಸೀತಾರಾಂ
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು !

ಪತ್ರಿಕೆಗಳು ರಾಜ್ಯೋತ್ಸವಕ್ಕೆಂದು ವಿಶೇಷ ಸಂಚಿಕೆಗಳನ್ನು ಹೊರತರುತ್ತವೆ. ನಾನು ನನ್ನ ಬ್ಲಾಗ್ ನ ಸಲುವಾಗಿ ಈ ಬಾರಿ ಅಜ್ಜಂಪುರ ಆನಂದರನ್ನು ಕುರಿತಾಗಿನ ವಿಶೇಷ ಲೇಖನ ಪ್ರಕಟಿಸಬೇಕೆಂದುಕೊಂಡಿದ್ದೆ. ಇದಕ್ಕೆಂದು ಸಂಗ್ರಹಿಸಿದ್ದ ಮಾಹಿತಿಗಳು ನಾನು ಅಮೆರಿಕದ ಪ್ರವಾಸದ ಇರುವ ಈ ಹೊತ್ತಿನಲ್ಲಿ ದೊರಕುವಂತಿರಲಿಲ್ಲವೆಂಬ ಯೋಚನೆಯಿತ್ತು. ಆದರೆ ಹೊಯ್ಸಳ ಕರ್ನಾಟಕ ಬಳಗದ ಗೆಳೆಯ ಸುನೀಲ್ ರನ್ನು ಸಂಪರ್ಕಿಸಿದಾಗ ತಮ್ಮ ಮಾಹಿತಿ ಸಂಗ್ರಹದಿಂದ ಕಳಿಸಿಕೊಟ್ಟರು. ಅವರಿಗೆ ಧನ್ಯವಾದಗಳು. ಅವರನ್ನು ಕುರಿತಾದ ಸುನೀಲ್ ಹಳೆಯೂರು ಸಂಗ್ರಹಿಸಿರು ವಿಸ್ತೃತ ಲೇಖನ ಇಲ್ಲಿದೆ. ಅಂತೆಯೇ ಹೊಯ್ಸಳ ಕರ್ನಾಟಕ ಸಾಧಕರು ಮಾಲೆಯಲ್ಲಿ ಒಂದು ಕಿರುಪುಸ್ತಕವೂ ಪ್ರಕಟವಾಗಿದೆ. ಆನಂದ  ನಿಜವಾದ ಹೆಸರು ಅಜ್ಜಂಪುರ ಸೀತಾರಾಂ. ಇವರ ಸಂಬಂಧಿಗಳೇ ಆದ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳ ಬಗ್ಗೆ ಒಂದು ಲೇಖನ ಬ್ಲಾಗ್ ನಲ್ಲಿ ಪ್ರಕಟವಾಗಿದೆ.


ಕೊನೆ ಸಿಡಿ :  ಅಜ್ಜಂಪುರದಲ್ಲಿ ಸೀತಾರಾಂ ಇವರ ಹೆಸರನ್ನು ಒಂದು ರಸ್ತೆಗೆ ಇಡಲಾಗಿದೆಯೆಂದು ತಿಳಿದು ಸಂತೋಷವಾಯಿತು. ಇದಕ್ಕೆಂದು ಅಜ್ಜಂಪುರದಲ್ಲಿರುವ ನನ್ನ ಗೆಳೆಯನಿಗೆ ಈ ಚಿತ್ರವನ್ನು ಕಳಿಸಿಕೊಡಬೇಕೆಂದು ಕೋರಿದೆ. ಈ ಲೇಖನದೊಡನೆ ಚಿತ್ರವನ್ನು ಪ್ರಕಟಿಸಬೇಕೆಂದು ಆಶಿಸಿದೆ. ಅವರು ಅದರಂತೆ ಕಳಿಸಿದರು ಕೂಡ.  ಅವರ ಹೆಸರನ್ನು "ಅಜ್ಜಂಪುರ ಸೀತಾರಾಂ" ಎಂದೂ ಬರೆದಿರಲಿಲ್ಲ, "ಕತೆಗಾರ ಆನಂದ" ಎಂದೂ ಬರೆದಿರಲಿಲ್ಲ. "ಅಜ್ಜಂಪುರ ಆನಂದ" ಎಂದು ಬರೆಯಲಾಗಿದೆ. ಇನ್ನಾವ ಆನಂದನೂ ಅಜ್ಜಂಪುರಕ್ಕೆ ಹೆಸರು ತಂದಿಲ್ಲವಾದ್ದರಿಂದ ಇದು ಸೀತಾರಾಂ ಎಂದೇ ತಿಳಿಯಬೇಕಾಗಿದೆ !

- ಶಂಕರ ಅಜ್ಜಂಪುರ
***********************************************************************************************************************************
ಹೊಯ್ಸಳ ಕರ್ನಾಟಕ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿರುವ ಊರು ಅಜ್ಜಂಪುರ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಮೂಲ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಗ್ರಾಮ ಅಜ್ಜಂಪುರದೊಂದಿಗೆ ಬೆಸೆದುಕೊಂಡಿದೆ.

ಹೊಸಗನ್ನಡ ಕಥಾಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದವರು "ಕಥೆಗಾರ ಆನಂದ" ಎಂದೇ ಗುರುತಿಸಲ್ಪಡುವ ಅಜ್ಜಂಪುರ ಸೀತಾರಾಂ ಅವರು ಜನಿಸಿದ್ದು 1902ರಲ್ಲಿ. ಅಂದಿನ ಮೈಸೂರು ಸರ್ಕಾರದ ರೇಷ್ಮೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು.

ಎಣ್ಣೆಗೆಂಪು ಬಣ್ಣ, ನೀಳ ಮೂಗು, ಅಗಲವಾದ ಹಣೆ. ಚುರುಕಾದ ಕಣ್ಣುಗಳುಳ್ಳ ಎತ್ತರದ ವ್ಯಕ್ತಿ ಆನಂದರು. ತಮ್ಮ ಗೆಳೆಯರ ಬಳಗದಲ್ಲಿ ಕ್ಯಾಪ್ಟನ್ ಪಟ್ಟವನ್ನು ಪಡೆದಿದ್ದ ಕಾರಣಕ್ಕೆಂದು, ದೈಹಿಕವಾಗಿ ಮತ್ತು ವ್ಯಕ್ತಿತ್ವದಿಂದ ಕೂಡ ಸೀತಾರಾಂ ತೂಕದ ವ್ಯಕ್ತಿ ಎಂದು ಚದುರಂಗರಿಂದ ಮೆಚ್ಚುಗೆ ಪಡೆದವರು. ಅವರ ವೇಷಭೂಷಣದಿಂದ ವಿವರಿಸುವುದಾದರೆ, ದೊಗಳೆ ಷರಾಯಿ, ಕೋಟೂ ಅಲ್ಲದ, ಷರಟೂ ಅಲ್ಲದ ವಿಚಿತ್ರವಾದ ಮುಕ್ಕಾಲು ತೋಳಿನ ಬುಷ್ ಷರ್ಟ್. ಅದಕ್ಕೆ ಮೇಲೆ ಕೆಳಗೆ ಸೇರಿದಂತೆ ಎರಡೆರಡು ಜೇಬುಗಳು. ಅವುಗಳ ತುಂಬ ಬರೆಯುವ ಕಾಗದ, ಪೆನ್ನು ಪೆನ್ಸಿಲ್ಲುಗಳ ಚಿಕ್ಕ ಸಂಗ್ರಹ. ಕುತ್ತಿಗೆಗೆ ರಂಗಿನ ಮಫ್ಲರ್, ಕೆಲವೊಮ್ಮೆ ದಪ್ಪ ಟೋಪಿ, ಕೈಯಲ್ಲಿ ಒಂದು ಮೋಟು ದೊಣ್ಣೆ ಅಥವಾ ಚಿಕ್ಕ ಛತ್ರಿ. ಕರಿಯ ಫ್ರೇಮಿನ ಕನ್ನಡಕ. ಇಂಥ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಸೀತಾರಾಂ ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿಯಾಗಿದ್ದು ಸ್ವಾಭಾವಿಕವೇ ಸರಿ. 1945ರಿಂದ 1963ರವರೆಗೆ ಮೈಸೂರಿನ ವಿದ್ಯಾರಣ್ಯಪುರದ ನಿವಾಸಿಯಾಗಿದ್ದ ಇವರು ಇಲ್ಲಿನ ಜನಕ್ಕೆ ತುಂಬ ಪರಿಚಿತರಾಗಿದ್ದವರು.

ಶಿವಮೊಗ್ಗದಲ್ಲಿ ಖ್ಯಾತ ವಕೀಲರಾಗಿದ್ದ ಎ.ಅನಂತಯ್ಯನವರು ತಂದೆ, ತಾಯಿ ವೆಂಕಟಲಕ್ಷ್ಮಮ್ಮ.

ಕನ್ನಡ ಕಥಾಸಾಹಿತ್ಯದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ನಂತರ ಪ್ರಮುಖವಾಗಿ ಕೇಳಿಬರುವ ಹೆಸರು ಕಥೆಗಾರ ಆನಂದ ಅವರದು. ಇವರು ಬರೆದ ಕಥೆಗಳನ್ನು ಯಾರಿಗೂ ತೋರಿಸದೆ ಮುಚ್ಚಿಡುತ್ತಿದ್ದುದನ್ನು ಗಮನಿಸಿದ ಸ್ನೇಹಿತರು, ಟಿ.ಎಸ್‌. ವೆಂಕಣ್ಣಯ್ಯನವರ ಗಮನಕ್ಕೆ ತಂದಾಗ, ಓದಿ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಿಸಿದರು. ಹೀಗೆ ಆನಂದ ಎಂಬ ಕಾವ್ಯನಾಮದಿಂದ ಪ್ರಕಟವಾದ ಮೊದಲ ಕತೆ ‘ಭವತಿ ಭಿಕ್ಷಾಂದೇಹಿ’. ನಂತರ ಪ್ರಬುದ್ಧ ಕರ್ನಾಟಕವಲ್ಲದೆ ಕತೆಗಾರ (ಎಂ.ಎನ್‌.ಗೋಪಾಲರಾಯರು), ಜಯಂತಿ (ಬೆಟಗೇರಿ ಕೃಷ್ಣಶರ್ಮ), ಜಯಕರ್ನಾಟಕ (ಆಲೂರು ವೆಂಕಟರಾಯರು) ಪತ್ರಿಕೆಗಳಲ್ಲೂ ಪ್ರಕಟಗೊಂಡವು. ನಿಟ್ಟೂರು ಶ್ರೀನಿವಾಸರಾಯರು ಪ್ರಾರಂಭಿಸಿದ್ದ ‘ಸತ್ಯಶೋಧನ ಪ್ರಕಟಣಾಲಯ’ದಿಂದ ಆನಂದರ ಮೊದಲ ಕಥಾ ಸಂಕಲನವು ‘ಕೆಲವು ಕಥೆಗಳು’ ಎಂಬ ಹೆಸರಿನಿಂದ ಪ್ರಕಟವಾಯಿತು.

1935 ರಲ್ಲಿ ಅಕಾಲಮರಣಕ್ಕೆ ತುತ್ತಾದ ಮಗಳು ಲೀಲಾವತಿಯ ನೆನಪಿಗೆ ಬರೆದ ಈ ಸಾಲುಗಳಲ್ಲಿ ಹೃದಯ ಕಲಕುವ ಭಾವಗಳು ತುಂಬಿವೆ. ಪ್ರಕೃತಿ ಪ್ರೀತಿ, ಮಗಳ ನೆನಪುಗಳು ಒತ್ತರಿಸಿ ಬಂದಿರುವ ತಮ್ಮ "ಪಕ್ಷಿಗಾನ" ಕೃತಿಯ ಈ ಅರ್ಪಣೆ ಕನ್ನಡದ ವಿಶಿಷ್ಟ ಅರ್ಪಣೆಗಳಲ್ಲಿ ಒಂದು.

         "ಹನ್ನೆರೆಡು ವರ್ಷದ ಹಿಂದೊಂದು ಸಂಜೆಯಲಿ
         ಮೂಡುತಿರೆ ತಾರೆಗಳು ಕೃತ್ತಿಕೋತ್ಸವಕೆಳಸಿ ನೀಲಿಮಾ ಗಗನದಲಿ,
         ಮಾಯವಾಯ್ತು ಎಮ್ಮೊಲವ 
         ಮಲ್ಲಿಕಾಲತೆಯ ಎಳೆಯ ಮುದ್ದು ಮುಗುಳೊಂದು,
         ಆ ಮಲ್ಲಿಕಕುಟ್ಮಲ ಸಮ ಶಿಶುತಾರೆಯನು ಕರೆಯುತ್ತಿದ್ದೆವು ಲೀಲಾ,
         ಮುದ್ದುಲೀಲಾ ಎಂದು.
         ದೇಹ ಮೃತವಾದರೂ ನೋವಾಂತ 
         ಎಮ್ಮ ಚಿತ್ತಪಟದಲೂರಿ ನೆಲಸಿ,ಕೊನೆಯುಸಿರವರೆಗೂ
         ಎಮ್ಮ ಹಿಂಬಾಲಿಸುವಾ ಮೂರು ವರುಷಗಳ 
         ಮುದ್ದು ಮೋಹಕ ಮೂರುತಿಯ 
         ಅಮೃತಮಯ ನೆನಪಿಗವಳ ತಾಯ್ತಂದೆಗಳ 
         ಕಂಬನಿಗಳ ಮುಡಿಪು--ಈ ಕಿರುಕೃತಿ".

ಕುವೆಂಪುರವರೆಂದರೆ ಅಪರಿಮಿತ ಸ್ನೇಹ. ಕವನವಾಚನ, ಪ್ರಕೃತಿ  ಉಪಾಸನೆ ಇವರೀರ್ವರನ್ನೂ ನಿಕಟರನ್ನಾಗಿಸಿತ್ತು. ಆನಂದರ ಕಥೆಗಾರಿಕೆ, ಚಿತ್ರಕಲೆ, ಹಾಸ್ಯಪ್ರವೃತ್ತಿಯನ್ನೂ ಕುವೆಂಪುರವರು ಮೆಚ್ಚಿಕೊಂಡಿದ್ದರು. ಕುವೆಂಪುರವರ ಅನೇಕ ಪುಸ್ತಕಗಳಿಗೆ ಆನಂದರೇ ಮುಖಚಿತ್ರ ಬಿಡಿಸಿದ್ದು, ಕಾನೂರು ಹೆಗ್ಗಡತಿ ಕಾದಂಬರಿಗೆ ರಚಿಸಿದ ಕಾಜಾಣದ ಚಿತ್ರವೇ ಕುವೆಂಪುರವರ ಉದಯ ರವಿ ಪ್ರಕಾಶನದ ಚಿಹ್ನೆಯಾಗಿಯೂ ಆಯ್ಕೆಮಾಡಿಕೊಂಡರು.


ಕಥೆಗಾರ ಆನಂದರ ಕುರಿತಾದ ಹೆಚ್ಚಿನ ಮಾಹಿತಿಗೆ

ಅಜ್ಜಂಪುರ ಸೀತಾರಾಂ
ಲೇಖಕರು:ಡಾ||ಎಂ.ಎಸ್.ವಿಜಯಹರನ್
ಪ್ರಕಟಣೆ:ಹೊಯ್ಸಳ ಕರ್ನಾಟಕ ಸಂಘ
ಬೆಂಗಳೂರು

ಸಂಗ್ರಹ: ಸುನೀಲ್ ಹಳೆಯೂರು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ