ನನ್ನೂರು ಅಜ್ಜಂಪುರದ ಅತ್ಯಂತ ಹಿರಿಯ ಚುನಾಯಿತ ಪ್ರತಿನಿಧಿ ಶ್ರೀ ಗೋಪಾಲಪ್ಪ ಒಬ್ಬರು ಇವರ ಪರಿಚಯ ಈಗಿನ ಬಹುತೇಕ ಜನರಿಗೆ ತಿಳಿದೇ ಇಲ್ಲ ಅಜ್ಜಂಪುರ ಪುರಸಭೆಯ ಇತಿಹಾಸದಲ್ಲಿ ಪ್ರಸ್ತುತ ಇರುವ ಅತಿ ಹಿರಿಯ ಚುನಾಯಿತ ಪ್ರತಿನಿಧಿ ಎಂದರೆ ಶ್ರೀ ಗೋಪಾಲಪ್ಪ ಇವರ ಕಿರು ಪರಿಚಯ ಈ ಬರಹದ ಉದ್ದೇಶ
ರಾಜಕಾರಣಕ್ಕೆ ವಿದ್ಯಾವಂತರು ತೊಡಗಿಸಿಕೊಳ್ಳದ ಕಾಲ ಒಂದಿತ್ತು ದಿವಂಗತ ಶೆಟ್ರು ಸಿದ್ದಪ್ಪನವರ ನಂತರ ಪುರಸಭೆಯ ಅಧ್ಯಕ್ಷರಾದ ಶ್ರೀಕರಿಸಿದ್ದಪ್ಪ ಇವರು ಬಿ. ಎ., ಎಲ್. ಎಲ್. ಬಿ., ಪದವೀಧರರಾಗಿದ್ದರೆ ನಂತರ ಪದವೀಧರ ಚುನಾಯಿತ ಪ್ರತಿನಿಧಿಯನ್ನು ನೋಡಲು ಸುಮಾರು 40 ವರ್ಷಗಳ ಕಾಯ ಬೇಕಾಯಿತು 1993 ರಲ್ಲಿ ಚುನಾಯಿತರಾದ ಬಿಕಾಂ ಪದವೀಧರರಾದ ಎಸಿ ಚಂದ್ರಪ್ಪ ನಂತರದ ಅಧ್ಯಕ್ಷರಾದರೆ ಈ ನಡುವೆ ಡಿಪ್ಲೋಮಾ ಎಂಜಿನಿಯರಿಂಗ್ ಪದವೀಧರರಾದ ಗೋಪಾಲಪ್ಪನವರು 1967 ರಲ್ಲಿ ಚುನಾಯಿತರಾಗಿ 69 ರಲ್ಲಿ ಪುರಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ನನ್ನ ತಂದೆಯ ಬಾಲ್ಯ ಸ್ನೇಹಿತರಾಗಿದ್ದು ಪ್ರಸ್ತುತ ಇವರಿಗೆ 85 ವರ್ಷ ವಯಸ್ಸಾಗಿದ್ದು ಇತ್ತೀಚೆಗೆ ಅವರನ್ನು ಭೇಟಿ ಮಾಡಿದಾಗ ತಮ್ಮ ಕಾಲದ ರಾಜಕೀಯ ದಿನಗಳನ್ನು ನನ್ನೊಂದಿಗೆ ಹಂಚಿಕೊಂಡರು.
ಡಿಪ್ಲೋಮೋ ಅಂತಿಮ ವರ್ಷದ ಪರೀಕ್ಷೆಯನ್ನು ಮುಗಿಸಿ ಊರಿಗೆ ಬಂದಾಗ ಊರಿನಲ್ಲಿ ಪುರಸಭೆ ಚುನಾವಣೆ ಹೊಸ್ತಿಲಿನಲ್ಲಿದ್ದು ಸ್ನೇಹಿತರು ಮತ್ತು ಬಂಧುಗಳು ಒತ್ತಾಯಕ್ಕೆ ಮಣಿದು ಚುನಾವಣೆಗೆ ನಿಂತ ಇವರು ನಾನು ಚುನಾವಣೆಯಲ್ಲಿ ಮತಯಾಚಿಸುವುದಿಲ್ಲ ಮನೆಮನೆಗೆ ಪ್ರಚಾರಕ್ಕೆ ಬರುವುದಿಲ್ಲ ಎಂಬ ಶರತ್ತನ್ನು ಗೆಳೆಯರು ಒಪ್ಪಿದ್ದರಿಂದ ಇವರು ಚುನಾವಣೆಗೆ ಧುಮುಕಿ ಜಯಶೀಲರಾದರು ಮತ್ತು ಮೊದಲನೆಯ ಬಾರಿಗೆ ಉಪಾಧ್ಯಕ್ಷರಾಗಿಯು ಊರಿಗೆ ಉತ್ತಮ ಸೇವೆಯನ್ನು ಮಾಡಿದ ಕೀರ್ತಿ ಇವರದ್ದು.
ಇವರ ಸಮ ಕಾಲಿನರಾದ ಶ್ರೀ ಪುಟ್ಟಪ್ಪ .ಮಂದಲಪ್ಪ. ಬಸಪ್ಪ .ಇವರುಗಳು ಇಂಜಿನಿಯರಿಂಗ್ ಪರೀಕ್ಷೆ ಮುಗಿದ ನಂತರ ಮಹಾರಾಷ್ಟ್ರ ಸರ್ಕಾರದಲ್ಲಿ ಸಬ್ ಓವರ್ಸೀಯರ್ ಆಗಿ ಮಹಾರಾಷ್ಟ್ರದಲ್ಲಿ ಸೇವೆ ಸಲ್ಲಿಸಿದರೆ ಇವರು ಮಾತ್ರ ಅಜ್ಜಂಪುರದಲ್ಲಿ ರಾಜಕೀಯ ಜೀವನವನ್ನು ಪ್ರಾರಂಭಿಸಿ ನಂತರ ರಾಜ್ಯ ಸರ್ಕಾರಿ ಸೇವೆಗೆ ಸೇರಿ ಆರೋಗ್ಯ ಇಲಾಖೆ ಸೇವೆಯನ್ನು ಪೂರ್ಣಗೊಳಿಸಿ ವಯೋ ನಿವೃತ್ತರಾಗಿ ಇಂದು ಬಿ.ಆರ್. ಪ್ರಾಜೆಕ್ಟ್ನಲ್ಲಿ ಸುಖಿ ಜೀವನವನ್ನು ಸಾಗಿಸುತ್ತಿದ್ದಾರೆ.
ಇವರ ಡಿಪ್ಲೋಮೋ ಸಿವಿಲ್ ಇಂಜಿನಿಯರಿಂಗ್ ಜ್ಞಾನದ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ರಿಯಲ್ ಎಸ್ಟೇಟ್ ಉದ್ಯಮ ಅಜ್ಜಂಪುರಕ್ಕೆ ಬರುವ 40 ವರ್ಷ 50 ವರ್ಷಗಳ ಹಿಂದೆಯೇ ನಗರ ಯೋಜನೆಯಂತೆ ನನ್ನೂರಿನಲ್ಲಿ ಸಿದ್ದರಾಮೇಶ್ವರ ವೃತ್ತ ಮೊದಲನೇ ಕ್ರಾಸ್ ಮತ್ತು ಎರಡನೇ ಕ್ರಾಸ್ ಗಳು ನಾಗರಕಲ್ ರಸ್ತೆಗಳ ನಿವೇಶನಗಳನ್ನು ಪುರಸಭೆಯ ವತಿಯಿಂದ ನಿರ್ಮಿಸಿ ಬಡ ಜನರಿಗೆ ಎರಡು ನೂರು ರೂಗಳಿಗೆ ಒಂದರಂತೆ ಹಂಚಿದ ಕೀರ್ತಿ ಇವರಗೆ ಸೇರುತ್ತದೆ
1969ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಇಬ್ಬಾಗವಾದಾಗ ರಾಜ್ಯದಲ್ಲಿಯೂ ಸಹ ಆಡಳಿತ ಪಕ್ಷ ಕಾಂಗ್ರೆಸ್ ಇಬ್ಬಾಗ ವಾಗುತ್ತದೆ. ಅಜ್ಜಂಪುರದ ಸ್ಥಳೀಯ ಮಟ್ಟದಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಇಬ್ಬಾಗವಾಗಿ ಫಲವಾಗಿ ಸ್ಥಳೀಯ ಮಟ್ಟದಲ್ಲಿ ಘರ್ಷಣೆಗೂ ಕೂಡ ಕಾರಣವಾಗುತ್ತದೆ. ಅತಿ ಕಿರಿಯರಾದ ಗೋಪಾಲಪ್ಪನವರು ತಮ್ಮ ಬುದ್ಧಿವಂತಿಕೆಯನ್ನು ಬಳಸಿ ಊರಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠರ ಅನುಮತಿಯನ್ನು ಚಾಕ ಚಕ್ಯತೆಯಿಂದ ಮುಂಜಾಗ್ರತೆಯಲ್ಲಿ ಪಡೆದು ಊರಿನ ಹಿರಿಯರನ್ನು ಮತ್ತು ಬಂಧುಗಳನ್ನು ಎದುರು ಹಾಕಿಕೊಂಡು ಮೀಸಲು ಪೊಲೀಸರ ರಕ್ಷಣೆಯಲ್ಲಿ ಅಜ್ಜಂಪುರದಲ್ಲಿ ಶ್ರೀ ಕಿರಾಳಮ್ಮನವರ ವಾರ್ಷಿಕ ಜಾತ್ರೆ ಮತ್ತು ಕುಸ್ತಿ ಪಂದ್ಯಗಳನ್ನು ನಡೆಸಿ ಊರಿನವರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.
ಇವರ ಸೇವಾ ಅವಧಿಯಲ್ಲಿ ನಿಸ್ವಾರ್ಥತೆಯಿಂದ ಮಾಡಿದಂತಹ ಸೇವೆಯ ಸಾರ್ಥಕತೆಯನ್ನು ಮೆಲುಕು ಹಾಕಿದ ಇವರು 85ರ ಇಳಿ ವಯಸ್ಸಿನಲ್ಲಿ ನನ್ನ ತಂದೆಯವರನ್ನು ಪರಸ್ಪರ ಬಹುವಚನದಿಂದಲೇ ಸಂಬೋಧಿಸುವುದು ನಾನು ಕಾಣುತ್ತೇನೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಟ್ಟಿಗೆ ಓದಿದ ಇವರು ಪರಸ್ಪರ 80 ವರ್ಷಗಳ ಸುದೀರ್ಘ ಸ್ನೇಹಗಳ ಇವರ ಒಡನಾಟ ನೋಡಿದರೆ ಇವರ ಎತ್ತರದ ವ್ಯಕ್ತಿತ್ವ ಇವರನ್ನು ನೋಡಿ ನಾವು ಗೆಳೆತನ ಹೇಗಿರಬೇಕು ಎಂಬುದನ್ನು ಕಲಿಯಬೇಕು ಎನಿಸುತ್ತದೆ.
ಪ್ರಸ್ತುತ ನನ್ನ ಊರಿನ ಚುನಾಯಿತ ಪ್ರತಿನಿಧಿಗಳಲ್ಲಿ ಶ್ರೀ ತಿಪ್ಪೇರುದ್ರಯ್ಯನವರು ವಯಸ್ಸಿನಲ್ಲಿ ಇವರಿಗಿಂತ ಎರಡು ವರ್ಷ ಹಿರಿಯವರಾದರೂ ತಿಪ್ಪೇರುದ್ರಯ್ಯನವರು ಚುನಾಯಿತರಾಗುವುದಕ್ಕೆ ಹತ್ತು ವರ್ಷ ಮುಂಚಿತವಾಗಿಯೇ ಗೋಪಾಲಪ್ಪನವರು ಚುನಾಯಿತರಾಗಿದ್ದರು ಎಂಬುದೇ ಗಮನಾರ್ಹ ವಿಷಯ.
ಪುರಸಭೆ ಮಧ್ಯಂತರ ಮಂಡಲ ಮಂಡಲ ಪಂಚಾಯಿತಿ ನಂತರ ಈಗ ಪಟ್ಟಣ ಪಂಚಾಯತಿಯಾಗಿರುವ ನನ್ನೂರು ಅನೇಕ ಏಳಿಗೆಗೆ ಇಂತಹ ಹಿರಿಯ ಮಹಾನುಭಾವರುಗಳ ಕಾಣಿಕೆ ನಿಜಕ್ಕೂ ಸ್ಮರಣೀಯ ಊರಿನಲ್ಲಿ ಅಂದು ಇದ್ದ ಮೂರು ಗರಡಿ ಮನೆಗಳು ಮತ್ತು ಅದರಲ್ಲಿ ನಾವು ಮಾಡಿದಂತ ವ್ಯಾಯಾಮ ಮತ್ತು ಕುಸ್ತಿಯಿಂದ ಇಂದು ನಮ್ಮ ಆರೋಗ್ಯಕ್ಕೆ ಕಾರಣ ಎಂದು ಈಗ ಈ ಗರಡಿ ಮನೆಗಳ ಇಲ್ಲದೇ ಇರುವ ಸ್ಥಿತಿಯನ್ನು ನೋಡಿ ತಮ್ಮ ಕೊರಗನ್ನು ವ್ಯಕ್ತ ಪಡಿಸಿದರು.
ನಿಸ್ವಾರ್ಥದಿಂದ ಮಾಡಿದ ಊರ ಸೇವೆಯನ್ನು ನಾವು ಸ್ಮರಿಸೋಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ