ಗೆಳೆಯ ಅಪೂರ್ವ ಅಜ್ಜಂಪುರ ಅವರು ಈ ಬ್ಲಾಗ್ ನ ಆರಂಭದಿಂದಲೂ ಲೇಖನಗಳನ್ನು ಬರೆದು ಸಹಕರಿಸಿದ್ದಾರೆ. ಇತ್ತೀಚೆಗೆ ಅವರು ಅಜ್ಜಂಪುರ ಬದಲಾದ ಪರಿಯನ್ನು ದಾಖಲಿಸಿದ ಬರಹವು ಫೇಸ್ ಬುಕ್ ನಲ್ಲಿ ಚಿತ್ರಗಳ ಸಹಿತ ಪ್ರಕಟವಾಗಿದೆ. ಅದು ಇಲ್ಲಿಯೂ ದಾಖಲಾಗಲಿ ಎಂದು ಪ್ರಕಟಿಸಲಾಗಿದೆ.
- ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ಅಜ್ಜಂಪುರ ಗತವೈಭವ ಮತ್ತು ವರ್ತಮಾನ
ಅಪೂರ್ವ ಅಜ್ಜಂಪುರ
ಗತವೈಭವ!
ಭಗವದ್ಗೀತೆಯನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದ್ದ ಸ್ವಾಮಿ ಶಂಕರಾನಂದರು (ಶಿವಾನಂದಾಶ್ರಮದ ಸ್ಥಾಪಕರು), ಅಜ್ಜಂಪುರ ಸೀತಾರಾಮ್ ( 'ಕ್ಲಾಸಿಕ್' ಸಣ್ಣಕತೆ 'ನಾನು ಕೊಂದ ಹುಡುಗಿ'ಯ ಕತೆಗಾರ ಆನಂದ), ಖ್ಯಾತ ಪರಿಸರ ತಜ್ಞ, ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ( ರಾಜ್ಯ ಅರಣ್ಯ ಇಲಾಖೆಯ ಅತ್ಯುನ್ನತ ಅಧಿಕಾರಿಯಾಗಿದ್ದರು), ಅಜ್ಜಂಪುರ ಜಿ.ಸೂರಿ(ಖ್ಯಾತ ಕಾದಂಬರಿಕಾರ,ತೆಲುಗು ಕಾದಂಬರಿಗಳ ಅನುವಾದಕ), ಸ್ವಾತಂತ್ರ್ಯ ಹೋರಾಟಗಾರ ಎಸ್.ಸುಬ್ರಹ್ಮಣ್ಯ ಶೆಟ್ಟಿ, ಖ್ಯಾತ ದಾನಿಗಳಾದ ಶೆಟ್ರು ಸಿದ್ದಪ್ಪ ಮತ್ತು ಜೋಗಿ ತಿಮ್ಮಯ್ಯ ಇವರಿಂದಲೂ ಅಜ್ಜಂಪುರವು ನಾಡಿನ ಜನರಿಗೆ ಸುಪರಿಚಿತ.
ಮೈಸೂರು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರು ಅಜ್ಜಂಪುರಕ್ಕೆ ಭೇಟಿ ನೀಡಿದ್ದು ಕೂಡ ಒಂದು ಐತಿಹಾಸಿಕ ಸಂಗತಿ. ಆ ಸಂದರ್ಭದಲ್ಲಿ ಪುರ ಪ್ರಮುಖರು ಸಾಂಪ್ರದಾಯಿಕ ದಿರಿಸಿನೊಂದಿಗೆ ಇರುವ ಚಿತ್ರ ಹಿಂದಿನ ಸಂಚಿಕೆಗಳಲ್ಲಿ ಇದೆ.
ಇಲ್ಲಿನ ಕಲಾ ಸೇವಾ ಸಂಘವು ರಾಜ್ಯ ಮಟ್ಟದ ನಾಟಕ, ನೃತ್ಯ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದ ಗತವೈಭವದ ಖ್ಯಾತಿಯೂ ಅಜ್ಜಂಪುರಕ್ಕೆ ಇದೆ.
ಪ್ರತಿ ವರ್ಷ ಉಚಿತ ಪ್ರದರ್ಶನದ ನಾಟಕೋತ್ಸವ ಆಯೋಜಿಸುವ ಗೆಳೆಯ ಬಳಗ ರಂಗತಂಡ(ಎ.ಸಿ.ಚಂದ್ರಪ್ಪ ಇವರ ನೇತೃತ್ವ) ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಈಗ ಅಜ್ಜಂಪುರವು ಒಂದು ತಾಲೂಕು ಕೇಂದ್ರವಾಗಿಯೂ ಅಭಿವೃದ್ಧಿಯ ಹಾದಿಯಲ್ಲಿದೆ.
ಸ್ವಾತಂತ್ರ್ಯಪೂರ್ವದಲ್ಲೇ, ಮೈಸೂರು ಮಹಾರಾಜರ ಸರ್ಕಾರದಿಂದ ಮೈನರ್ ಮುನ್ಸಿಪಾಲಿಟಿಯಾಗಿ ಘೋಷಣೆಯಾಗಿ ಸ್ಥಳೀಯ ಆಡಳಿತ ಇತ್ತು. ನಂತರ ಪುರಸಭೆಯಾಗಿಯೂ ಪ್ರಸಿದ್ಧವಾಗಿತ್ತು. ಈ ಊರು ಇತ್ತೀಚೆಗೆ ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡಿದೆ.
ವರ್ತಮಾನ:
ಶತಮಾನದ ಅಂಚಿಗೆ ತಲುಪಿದ ಪುರಸಭೆಯ ಹಳೆಯ ಕಟ್ಟಡಗಳನ್ನು ಕೆಡವಿ, ನವೀನ ಮಾದರಿಯ ಕಟ್ಟಡಗಳನ್ನು ಕಟ್ಟಲು ಅಜ್ಜಂಪುರ ಪಟ್ಟಣ ಪಂಚಾಯಿತಿ ಮುಂದಾಗಿದೆ. ನಾಲ್ಕು ದಾರಿಗಳು ಕೂಡುತ್ತಿದ್ದ ಚೌಕ(ಸ್ಕ್ವೇರ್)ಅನ್ನು ನೆಹರು ಮರಣಾನಂತರ ನೆಹರು ಸರ್ಕಲ್ ಎಂದು ಹೆಸರಿಸಿದ ನೆನಪು. ಈ ಸರ್ಕಲ್ ನಲ್ಲಿ ಎರಡು ಜೋಡಿ ಆರ್.ಸಿ.ಸಿ. ಕಟ್ಟಡಗಳು ಇದ್ದವು. ಪಶ್ಚಿಮಕ್ಕೆ ಇರುವ ಒಂದು ಕಟ್ಟಡದಲ್ಲಿ ಉಚಿತ ವಾಚನಾಲಯ ಇತ್ತು. ಶೀನಣ್ಣನ ಕಟಿಂಗ್ ಶಾಪ್, ಗಂಗಣ್ಣನ ಇಸ್ತ್ರಿ ಅಂಗಡಿ, ತುಕರಾಂ ರಾವ್ ಟೈಲರಿಂಗ್ ಅಂಗಡಿ ಇತ್ಯಾದಿ ಇದ್ದವು. ಪೂರ್ವಕ್ಕೆ ಇರುವ ಇನ್ನೊಂದು ಕಟ್ಟಡದಲ್ಲಿ ಮೊದಲಿಗೆ ಜನತಾ ಹೋಟೆಲ್ ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ಇದ್ದವು. ಈ ಕಟ್ಟಡದ ಹಿಂಭಾಗದಲ್ಲಿ ಟಿ.ಕೃಷ್ಣೋಜಿರಾವ್ ಚವ್ಹಾಣರ ಚಲನಚಿತ್ರ ಪ್ರದರ್ಶಿಸುವ ಟೂರಿಂಗ್ ಟಾಕೀಸಿನ ಬೃಹತ್ ಟೆಂಟ್ ಇತ್ತು. ಅದರಲ್ಲಿ ನೆಲ, ಬೆಂಚು, ಕುರ್ಚಿ ಎಂಬ ವಿಭಾಗಗಳಿದ್ದವು. ನೆಲದಲ್ಲಿ ಕುಳಿತು ನೋಡುವ ಚಿತ್ರರಸಿಕ ಕುಟುಂಬಗಳ ಕೆಲವು ಮಹಿಳೆಯರು ಚಾಪೆ, ಗೋಣಿಚೀಲಗಳನ್ನು ತಮ್ಮ ಸಂಗಡ ಒಯ್ಯುತ್ತಿದ್ದರು. ಕೆಲವರಿಗೆ ಅದು ಒಂದು ಪ್ರತಿಷ್ಠೆಯ ವಿಷಯವಾಗಿ ಕಾಣಿಸಿದ್ದುಂಟು. ಆದರೆ 'ನೆಲ' ವರ್ಗದಲ್ಲಿ ವಿಪರೀತ ಧೂಳು-ಪುಡಿ ಮಣ್ಣು ಇದ್ದುದರಿಂದ ಉಟ್ಟ ಬಟ್ಟೆ ಮಾಸದಿರಲು ಚಾಪೆ-ಗೋಣಿಚೀಲಗಳ ರಕ್ಷಣೆ ಬೇಕಿತ್ತು. ಚಿತ್ರ ಪ್ರದರ್ಶನದ ವೇಳೆಯಲ್ಲಿ ಎಲ್ಲೇ ಕುಳಿತು ನೋಡಿದರೂ ಬೀಡಿಗಳ ಹೊಗೆ ತುಂಬಿಕೊಂಡು ಮೋಡಗಳು ದಟ್ಟೈಸಿದಂತೆ ಕಾಣಿಸುತ್ತಿತ್ತು! ಚಿತ್ರ ಸಾಮಾಜಿಕವೋ ಪೌರಾಣಿಕವೂ ತಿಳಿಯದಂತಾಗುತ್ತಿತ್ತು. ಏಕೆಂದರೆ ದೇವತೆಗಳು, ನಾರದರು ಆಕಾಶದಲ್ಲಿ ವಿಹರಿಸುವಂತೆ ತೋರಿಸಲು ಮೋಡಗಳ ಸೆಟ್ಟಿಂಗ್ ಇರುತ್ತಿದ್ದುದರಿಂದ, ಬೀಡಿ ಸೇದುಗರ 'ಹೊಗೆಗಳು' ರಜತಪರದೆಯ ಮೇಲೆ ಮೋಡಗಳಂತೆ ಕಾಣಿಸಿ ಚಿತ್ರ ಸಾಮಾಜಿಕವೋ ಪೌರಾಣಿಕವೋ ಎಂದು ಗೊಂದಲವಾಗುತ್ತಿತ್ತು!!
ಕನ್ನಡ ಚಿತ್ರಗಳು ಅಪರೂಪವಾಗಿದ್ದ ಆ ಕಾಲದಲ್ಲಿ ತಮಿಳು ಚಿತ್ರಗಳನ್ನು ನೋಡುವುದೂ ನಮ್ಮೂರಿನ ಜನರಿಗೆ ಅಭ್ಯಾಸವಾಗಿತ್ತು. ಎಂಜಿಆರ್, ತಾಯ್ ನಾಗೇಶ್, ಶಿವಾಜಿ ಗಣೇಶನ್ ಇವರೆಲ್ಲ ರಾಜಕುಮಾರ್, ನರಸಿಂಹರಾಜು, ಉದಯಕುಮಾರ್, ಅಶ್ವಥ್ ರಷ್ಟೇ ಮನೆಮಾತಾಗಿದ್ದರು!
ಇದೀಗ ೨೦೨೫ ಜುಲೈ-ಆಗಸ್ಟ್ ತಿಂಗಳಲ್ಲಿ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯ ನಡೆದಿದೆ. ಮುಂದೆ ಪಟ್ಟಣ ಪಂಚಾಯಿತಿ ನವೀನ ಮಾದರಿಯ ಕಟ್ಟಡಗಳನ್ನು ನಿರ್ಮಿಸುವ ಯೋಜನೆಗಳನ್ನು ಹೊಂದಿದೆ.
ಒಂದು ಕಾಲಕ್ಕೆ ವರ್ತಮಾನ ಪತ್ರಿಕೆಗಳನ್ನು ಸುಧಾರಿತ ಮಧ್ಯಮ ವರ್ಗದ ಜನರು ಮಾತ್ರವೇ ತರಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟ, ನಾಡು, ದೇಶ, ವಿದೇಶ ಸುದ್ದಿಗಳನ್ನು ಓದುವ ಹವ್ಯಾಸವು ಇದ್ದ ಇವರನ್ನು ಅಂದಿನ ಸಮಾಜದಲ್ಲಿ ಸುಶಿಕ್ಷಿತ ನಾಗರಿಕರು ಎಂದು ಗೌರವಿಸುತ್ತಿದ್ದ ದಿನಗಳೂ ಇದ್ದವು. ಉಳಿದ ಅಕ್ಷರಸ್ಥ ಯುವಜನರಿಗೆ ಉಚಿತ ವಾಚನಾಲಯ ಒಂದು ಆಕರ್ಷಣೆಯ ಕೇಂದ್ರವಾಗಿತ್ತು.
-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ