05. ಶ್ರೀ ಎ. ಸೀತಾರಾಮ ಭಟ್ಟರು


ಶ್ರೀ ಎ. ಸೀತಾರಾಮ ಭಟ್ಟರು

"ಇವರು ನಮ್ಮ ಹಿರಿಯರು" ಮಾಲಿಕೆಯಲ್ಲಿನ ನಾಲ್ಕನೆಯ ಲೇಖನವಿದು. ೫೦-೬೦ರ ದಶಕದಲ್ಲಿ ಅಜ್ಜಂಪುರದ ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ಕೆಲಸಮಾಡಿದ ಈ ಹಿರಿಯರು ತಮ್ಮ ಸರಳ ಜೀವನ ಶೈಲಿಯಿಂದ ಜನರ ಮನಸ್ಸನ್ನು ಗೆದ್ದವರು. ಇಂದಿನ ರಾಜಕೀಯಕ್ಕೆ ಹೋಲಿಸಿದರೆ, ಅವರದು ರಾಜಕೀಯವೇ ಅಲ್ಲ. ಅವರಿಗೆ ಅದೊಂದು ಜನಸಂಪರ್ಕದ ಮಾಧ್ಯಮವಾಗಿದ್ದಿತು. ಅವರ ವಿಶೇಷ ಶೈಲಿ, ಉಡುಪು ಮತ್ತು ರಾಜಕೀಯ ಚಟುವಟಿಕೆಗಳನ್ನು ಮಿತ್ರ ಮಂಜುನಾಥ ಅಜ್ಜಂಪುರ ಇಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೀ ಸೀತಾರಾಮಭಟ್ಟರ ಪರಿಚಯವಿರುವ ಜನರು ಇದನ್ನು ನಿಶ್ಚಿತವಾಗಿ ಆನಂದಿಸುವರು.


ನಮ್ಮೂರಿನ "ಕುಲಪುರೋಹಿತ"ರೆಂಬ ಅಭಿದಾನವಿದ್ದ ಸೀತಾರಾಮ ಭಟ್ಟರು ನಿಜಕ್ಕೂ ವಿಶಿಷ್ಟ ವ್ಯಕ್ತಿತ್ವ ಉಳ್ಳವರು. ನಗುಮುಖ,ಒಂದಿಷ್ಟು ತುಂಟತನ, ಸರಳತೆ ಅವರ ವ್ಯಕ್ತಿತ್ವದ ಗುಣಲಕ್ಷಣಗಳಾಗಿದ್ದವು.  ನಿಜವಾಗಿಯೂ ಅವರೊಬ್ಬ Born Leader. ಇವತ್ತಿನ ಪರಿಭಾಷೆಯಲ್ಲಿ ಅವರೊಬ್ಬ Crowd Puller. 1950 ಮತ್ತು 1960ರ ದಶಕಗಳಲ್ಲಿ, ಅವರು ಊರಿನ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿದ್ದರು.

ಅಜ್ಜಂಪುರದಲ್ಲಿ ಅತಿ ಹೆಚ್ಚು ಸಮುದಾಯಗಳಿರುವುದು ವಿಶೇಷವೇ. ಲಿಂಗಾಯತರು, ಕುರುಬರು ಹೆಚ್ಚು ಜನ ಇದ್ದರು ಎಂದರೂ ಬ್ರಾಹ್ಮಣ, ಆರ್ಯವೈಶ್ಯ, ಮರಾಠ, ಭಾವಸಾರ ಕ್ಷತ್ರಿಯದೇವಾಂಗ, ವಿಶ್ವಕರ್ಮ, ಹೀಗೆ ಅನೇಕ ಜಾತಿಗಳ ಜನರಿದ್ದರು. ಮುಸ್ಲಿಮರನ್ನೂ ಒಳಗೊಂಡಂತೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಡೀ ಊರಿನ ನಾಯಕರಾಗಿದ್ದ ಸುಬ್ರಹ್ಮಣ್ಯ ಶೆಟ್ಟರ  ಮುಂದೆ ಉಳಿದವರು ನಾಯಕರಾಗಿ ಬೆಳೆಯುವುದು ಅಷ್ಟು ಸುಲಭದ ವಿಷಯವಲ್ಲ. ಸೀತಾರಾಮ ಭಟ್ಟರು ಅಂತಹ ಸವಾಲೆಂಬಂತಹ ಕಾಲದಲ್ಲಿ (ಇಂದು ಅಜ್ಜಂಪುರವು ಗ್ರಾಮ ಪಂಚಾಯತಿಯಾದರೂ, 60 ವರ್ಷಗಳಿಗಿಂತಲೂ ಹೆಚ್ಚು ಅವಧಿಅಲ್ಲಿ ಮುನಿಸಿಪಾಲಿಟಿ ಇದ್ದುದು, ಸಣ್ಣ ಸಂಗತಿಯಲ್ಲ.)  ಪುರಸಭಾ ಸದಸ್ಯರಾಗಿದ್ದರು, ಅಧ್ಯಕ್ಷರೂ ಆಗಿದ್ದರು ಎಂಬುದಕ್ಕಿಂತ, ಅವರು ಅಘೋಷಿತ ನಾಯಕರಾಗಿದ್ದರು ಎಂಬುದು ವಿಶೇಷ.  ಸುಬ್ರಹ್ಮಣ್ಯ ಶೆಟ್ಟರ ಕಾರಣದಿಂದ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯ ಹೋರಾಟಗಳು 1930ರ ದಶಕದ ಹೊತ್ತಿಗೇ  ಅಜ್ಜಂಪುರದ ಜನರಿಗೆ ಪರಿಚಿತವಾಗಿದ್ದವು. ಶೆಟ್ಟರು 1942ರ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಿಗೆ, ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ರೂಪಿಸಿದ್ದರು. 1947ರಲ್ಲಿ ಸ್ವಾತಂತ್ರ್ಯ ಬಂದಮೇಲೆ, ಮಹಾರಾಜರ ಪ್ರಭುತ್ವ ಹೋಗಬೇಕು, ಮೈಸೂರು ರಾಜ್ಯವು ಭಾರತದ ಒಕ್ಕೂಟದಲ್ಲಿ ಸೇರಬೇಕು, ಎಂಬ ಚಳವಳಿ ನಮ್ಮೂರಿನಲ್ಲಿ ಹೆಚ್ಚು ಜನ ಪಾಲ್ಗೊಂಡ ಚಳವಳಿಯೂ ಆಯಿತು.

ಈ ಎಲ್ಲ ಚಟುವಟಿಕೆಗಳಲ್ಲಿ ಸೀತಾರಾಮ ಭಟ್ಟರ ಪಾಲೂ ಇತ್ತು ಎಂಬುದನ್ನು ಹೇಳಬೇಕಿಲ್ಲ. ಶಿವಾನಂದಾಶ್ರಮವಿರಲಿ, ಕಲಾ ಸೇವಾ ಸಂಘವಿರಲಿ, ಬೇರೆ ಸಾರ್ವಜನಿಕ ಸಮಾರಂಭವಿರಲಿಭಟ್ಟರು ಇದ್ದರು ಎಂದೇ ಅರ್ಥ. 1950 ಮತ್ತು 1960ರ ದಶಕಗಳಲ್ಲಿ, ಇಡೀ ಊರು ಸ್ವಾತಂತ್ರ್ಯ ದಿನಾಚರಣೆಯಲ್ಲಿ, ಗಣರಾಜ್ಯೋತ್ಸವದಲ್ಲಿ, ಗಾಂಧೀ ಜಯಂತಿಯಲ್ಲಿ, ಮಕ್ಕಳ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿತ್ತು ಮತ್ತು ಅಲ್ಲಿ ಭಟ್ಟರ ಮುಖ್ಯ ಪಾತ್ರವಿರುತ್ತಿತ್ತು. ಅವರೇ ಊರಿನ ಪುರೋಹಿತರಾದುದರಿಂದ ಅದು ಭಾರತಮಾತೆಯ ಪೂಜೆಯಿರಲಿ, ಗ್ರಾಮ ದೇವತೆಯ ಜಾತ್ರೆಯಿರಲಿ, ರಾಷ್ಟ್ರೀಯ ಉತ್ಸವಗಳಿರಲಿ, ಸೀತಾರಾಮ ಭಟ್ಟರದೇ ಪೂಜೆ, ಅವರದೇ ಓಡಾಟ.  ಮಕ್ಕಳು, ಜನ ಗಲಾಟೆ ಮಾಡುತ್ತಿದ್ದಾರೆ, ಮಾತನಾಡುತ್ತಿದ್ದಾರೆ ಎಂದರೆ, ಭಟ್ಟರು "ಬೋಲೋ ಭಾರತಮಾತಾಕೀ ಜೈ" ಎಂದೋ "ಮಹಾತ್ಮಾ ಗಾಂಧೀ ಕೀ ಜೈ", ಎಂದೋ,   ಕೂಗಿಯೋ ಕೂಗಿಸಿಯೋ ಜನಸಂದಣಿಯನ್ನು ತಹಬಂದಿಗೆ ತರುತ್ತಿದ್ದರು. ಒಂದಿಷ್ಟು ಹಾಸ್ಯ ಸೇರಿಸಿ ಅವರು ಅಂತಹ ರಾಷ್ಟ್ರೀಯ ಉತ್ಸವಗಳಲ್ಲಿ ಭಾಷಣ ಮಾಡಿ ರಂಜಿಸುತ್ತಿದ್ದುದೂ ಉಂಟು.

ಎಲ್ಲಕ್ಕಿಂತ ವಿಶೇಷವಾದುದು ಅವರ "ವಸ್ತ್ರ ವಿನ್ಯಾಸ"!  ದಿನದ ಬಹುಪಾಲು ಅವರು ಸ್ನಾನದ ಪಂಚೆಯಲ್ಲಿಯೇ ಇರುತ್ತಿದ್ದರು. ಪಂಚೆ - ಜನಿವಾರ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಅವರು 24 Hours ಪುರೋಹಿತರೇ. ಪೌರೋಹಿತ್ಯ ಅವರಿಗೆ ಬರಿಯ ಪಾರ್ಟ್‌ಟೈಮ್ ಪ್ರೊಫೆಷನ್  ಆಗಿರಲಿಲ್ಲ. ಅವರು ಸದಾ ಪೂಜೆಗೂ ರೆಡಿ, ಭಾಷಣಕ್ಕೂ ರೆಡಿ, ಕೆಲಸಕ್ಕೂ ರೆಡಿ. ಅವರು ಬೇರೆ ಊರಿಗೆ ಹೊರಟಾಗ ಖಾದಿ ಪಂಚೆ, ಅಂಗಿ, ಟೋಪಿ ಇತ್ಯಾದಿಗಳಿಂದ ಕಂಗೊಳಿಸುತ್ತಿದ್ದರು.  ಉಳಿದಂತೆ, ಮಹಾತ್ಮಾ ಗಾಂಧೀಜಿಯವರೂ ನಾಚುವಂತೆ, ಬರಿಯ ಒಂದು ಪಂಚೆಯಲ್ಲಿರುತ್ತಿದ್ದರು.

ಒಮ್ಮೆ ದೊಡ್ಡ ಸರಕಾರೀ ಅತಿಥಿಗಳು ಯಾರೋ ಬಂದಿದ್ದರು. ಪುರಸಭಾ ಕಛೇರಿಯಲ್ಲಿ ಪೂಜೆಯಿತ್ತು. ಸೀತಾರಾಮ ಭಟ್ಟರದೇ ಓಡಾಟ. ಆ ಅಧಿಕಾರಿಗಳು, "ಪೂಜೆಗೆ ಪುರಸಭಾ ಅಧ್ಯಕ್ಷರನ್ನೂ ಕರೆಯಿರಿ, ಎಲ್ಲಿದ್ದಾರೆ, ಏಕಿನ್ನೂ ಬಂದಿಲ್ಲ?", ಎಂದರು.  ಪೂಜೆಗೆ ಅಣಿ ಮಾಡುತ್ತಿದ್ದ, ಪಾದರಸದಂತೆ ಅಲ್ಲಿ ಓಡಾಡುತ್ತಿದ್ದ  ಪುರೋಹಿತ ಸೀತಾರಾಮ ಭಟ್ಟರೇ ಪುರಸಭಾ ಅಧ್ಯಕ್ಷರು ಎಂದಾಗ, ಆ ಅಧಿಕಾರಿಗಳು ಮೂರ್ಛೆ ಹೋಗುವುದೊಂದೇ ಬಾಕಿ. ಏಕೆಂದರೆ, ಪುರಸಭಾ ಅಧ್ಯಕ್ಷರಾಗಿದ್ದಾಗಲೂ ಅವರು ಅದೇ ಸ್ನಾನದ ಪಂಚೆಯಲ್ಲಿದ್ದರು, ಎಂದಿನಂತೆ ಅತ್ಯಂತ ಸರಳವಾಗಿ ಓಡಾಡುತ್ತಿದ್ದರು.

ಸೀತಾರಾಮ ಭಟ್ಟರಿಗೆ ಸೀತಾರಾಮ ಭಟ್ಟರೇ ಸಾಟಿ.

ಸೀತಾರಾಮಭಟ್ಟರ ಮನೆಗೆ ತೇರಿನ ಸಮಯದಲ್ಲಿ ಗ್ರಾಮದೇವತೆ ಕಿರಾಳಮ್ಮ ಬರುತ್ತಿದ್ದುದು, ಅವರ ಮನೆಯಲ್ಲಿ ನಡೆಯುತ್ತಿದ್ದ ಗೌರೀಪೂಜೆ, ಭಟ್ಟರು ಮಾಡಿಸುತ್ತಿದ್ದ ಮದುವೆಗಳು ನೆನಪಾಗುತ್ತವೆ. ಯಾರಾದರೂ ತೀರಿಹೋದರೂ ಅವರದೇ ಪಾರುಪತ್ಯ, ಓಡಾಟ. ಪಂಡಿತ್ ಜವಾಹರಲಾಲ ನೆಹರೂ ಮರಣ, ಲಾಲ್ ಬಹದ್ದೂರ್ ಶಾಸ್ತ್ರಿಯವರ ಅಕಾಲಿಕ ಸಾವಿನ ದುರ್ಭರ ಸನ್ನಿವೇಶಗಳಲ್ಲಿ ಸುಬ್ರಹ್ಮಣ್ಯ ಶೆಟ್ಟರು - ಸೀತಾರಾಮ ಭಟ್ಟರು ಎಷ್ಟು ಓಡಾಡಿದರು, ಹೇಗೆ ಊರಿನ ತುಂಬ ಮೌನ ಮೆರವಣಿಗೆ ಮಾಡಿಸಿದರು ಎಂದರೆ, ಚಿಕ್ಕ ಹುಡುಗನಾಗಿ ಆ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದ ನನಗೆ,   ನೆಹರೂ - ಶಾಸ್ತ್ರೀಜಿ ನಮ್ಮೂರಿನಲ್ಲಿಯೇ ತೀರಿಹೋಗಿರಬಹುದೆನ್ನಿಸುತ್ತಿತ್ತು. ಅಂತಹ ಸನ್ನಿವೇಶಗಳ ನೆನಪಾದಾಗ ಲೋಕನಾಯಕರನ್ನು ನಮ್ಮ ಜನ ಎಷ್ಟು ಗೌರವಿಸುತ್ತಿದ್ದರು - ಅವರ ನಿಧನದಿಂದ ಅಂತಹ ವ್ಯಕ್ತಿತ್ವಗಳನ್ನು ಇವರೆಲ್ಲಾ ಎಷ್ಟೊಂದು ಮಿಸ್ ಮಾಡಿಕೊಳ್ಳುತ್ತಿದ್ದರು ಎಂದೆನ್ನಿಸುತ್ತದೆ.

ನಾನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತನಾಗಿದ್ದೇನೆ. ಹಿಂದೆ 1980ರಲ್ಲಿ, ನಾನು ಪ್ರಧಾನ ಕಛೇರಿಯ ಲೆಕ್ಕ ಪರಿಶೋಧನಾ ವಿಭಾಗದಲ್ಲಿ (Audit) ಕೆಲಸ ಮಾಡುತ್ತಿದ್ದಾಗ, ದೆಹಲಿಯಲ್ಲಿ ಎರಡು ತಿಂಗಳ ಕಾಲ ಇದ್ದೆ. ಅದು ಡಿಸೆಂಬರ್ ತಿಂಗಳ ಕಾಲ. ಕೊರೆಯುವ ಛಳಿ. ಅದೇನೇ ಇದ್ದರೂ ಬೆಳಿಗ್ಗೆ ಎದ್ದು ವಾಕ್ ಹೋಗಿ ದೆಹಲಿಯ ಪರಿಚಯ ಮಾಡಿಕೊಳ್ಳುತ್ತಿದ್ದೆ. ಒಂದುದಿನ ಅಲ್ಲೊಂದು ಪುಟ್ಟ ದೇವಾಲಯದ ಬಳಿ ನಿಂತು, ಬಂದು ಹೋಗುವ ಭಕ್ತಾದಿಗಳನ್ನು ನೋಡುತ್ತಿದ್ದೆ. ಅಲ್ಲೊಬ್ಬ ವಾಚ್‌ಮನ್ ಇದ್ದ. ಪ್ಯಾಂಟು, ಷರ್ಟು, ಕೋಟು, ಮಫ್ಲರ್ಶೂ, ಕೈಗವಸು ಹಾಕಿಕೊಂಡು ಬೀಡಿ ಸೇದುತ್ತ ನಿಂತಿದ್ದ. ದೆಹಲಿಯ ಆ ಛಳಿಯಲ್ಲಿ ಅವನು ಹಾಗಿದ್ದುದು ಸಹಜವೇ. ಸ್ವಲ್ಪ ಹತ್ತಿರ ಹೋಗಿ ಗಮನಿಸಿದಾಗ, ಅವನೇ ಮಂಗಳಾರತಿ ಮಾಡುತ್ತಿದ್ದುದೂ, ಪೂಜೆ ಮಾಡುತ್ತಿದ್ದುದೂ ನೋಡಿಇವನೇಕೆ ಪೂಜೆ ಮಾಡುತ್ತಿದ್ದಾನೆ, ಎಂದುಕೊಂಡೆ.  ಕೊಂಚ ಹೊತ್ತಿನಲ್ಲಿ ಅವನೇ ಪೂಜಾರಿ ಎಂಬ ಕಠೋರಸತ್ಯದ ಅರಿವಾಗಿ,. ನಾನು ಪ್ರಜ್ಞೆ ತಪ್ಪುವುದೊಂದೇ ಬಾಕಿ ಇತ್ತು. ಪೂಜೆ ಎಂದರೆ ನಮ್ಮ ಸೀತಾರಾಮ ಭಟ್ಟರ ಒಂಟಿ ಪಂಚೆಯ ಸರಳ ವಸ್ತ್ರ ವಿನ್ಯಾಸದ ಪುರೋಹಿತರು, ಎಂಬ ಪರಿಕಲ್ಪನೆಯಲ್ಲಿಯೇ ಬೆಳೆದ ನನಗೆ, ಈ ವಾಚ್‌ಮನ್ ಉಡುಪಿನ ಪೂಜಾರಿ ಪೂಜಾರಿಯೆಂದೇ ಅನ್ನಿಸಲಿಲ್ಲ. ಆ ದಿಕ್ಕಿನಲ್ಲಿ ಓಡಾಡುವಾಗೆಲ್ಲ ನನಗೆ ಈ ವಾಚ್‌ಮನ್ ವೇಷಧಾರಿ ಪೂಜಾರಿಯನ್ನು ನೋಡಿ ನಗು ತಡೆಯಲಾಗುತ್ತಿರಲಿಲ್ಲ. ಆಡಿಟ್ ಮುಗಿಸಿಕೊಂಡು, ಒಮ್ಮೆ ಊರಿಗೆ ಬಂದಿದ್ದಾಗನಮ್ಮ ತಂದೆ ಎ.ಪಿ.ನಾಗರಾಜ ಶೆಟ್ಟರೊಂದಿಗೆ, ಈ ವಿಷಯ ಹೇಳಿದಾಗ, "ನಮ್ಮ ಸೀತಾರಾಮ ಭಟ್ಟರಂತೆ ಅವನು ಒಂಟಿ ಪಂಚೆಯಲ್ಲಿದ್ದರೆ, ದೆಹಲಿಯ ಆ ಛಳಿಗೆ ಸತ್ತೇ ಹೋಗುತ್ತಿದ್ದ", ಎಂದು ಹೇಳಿ ಅವರೂ ತುಂಬಾ ನಕ್ಕರು.  ದೆಹಲಿ ಆ ವಾಸ್ತವ್ಯದಲ್ಲಿ ನಾನು ಸೀತಾರಾಮ ಭಟ್ಟರನ್ನು ತುಂಬ ಮಿಸ್ ಮಾಡುತ್ತಿದ್ದುದಂತೂ ನಿಜ.

ಹಬ್ಬ, ಹರಿದಿನಗಳಲ್ಲಿ ತುಂಬ ಜನ ಪುರೋಹಿತರ ಮನೆಯವರಿಗೆ ಬಾಗಿಣ ಕೊಡುತ್ತಿದ್ದರು. ಒಮ್ಮೆ, ನನ್ನ ಪ್ರೀತಿಯ ಸ್ನೇಹಿತನೊಬ್ಬ ಅಳುತ್ತಾ ಬಂದ. ನೋಡಿದರೆ ಅವನ ಕಣ್ಣಿನಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿದೆ. ನನಗೋ ಗಾಬರಿ. ಏನಾಯಿತೋ ಏನೋ, ಎಂದು.  ಅವನ ತಾಯಿ ಸಹ ಸೀತಾರಾಮ ಭಟ್ಟರ ಹೆಂಡತಿಗೆ ಬಾಗಿಣ ಕೊಟ್ಟಿದ್ದರು. ಮುಂದೊಂದು ದಿನ, ನನ್ನ ಗೆಳೆಯನ ಕಣ್ಣೆದುರಿಗೇ ಸೀತಾರಾಮ ಭಟ್ಟರು ಆ ಬಾಗಿಣಗಳ ಮೊರಗಳನ್ನು ಹರಾಜು ಹಾಕುತ್ತಿದ್ದರು, ಮಾರುತ್ತಿದ್ದರು. ಸಹಜವಾಗಿ, ನನ್ನ ಗೆಳೆಯನ ತಾಯಿ ಕೊಟ್ಟ ಬಾಗಿಣದ ಮೊರಗಳೂ ಅಲ್ಲಿ ಮಾರಲ್ಪಟ್ಟವು.  ಇವನಿಗೆ ತಡೆಯಲಾರದಷ್ಟು ಕೋಪ, ದುಃಖ. ನಾನು ಅವನಿಗೆ "ಪುರೋಹಿತರ ಮನೆಗೆ ಪ್ರತಿವರ್ಷ ನೂರಾರು ಮೊರಗಳು ಬಾಗಿಣದ ರೂಪದಲ್ಲಿ ಬರುತ್ತವೆ. ಅವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವೇ? ಎರಡು - ಮೂರು ವರ್ಷಗಳಲ್ಲಿ ಎಂತಹ ದೊಡ್ಡ ಮನೆಯೇ ಆದರೂ ತುಂಬಿ ಹೋಗುತ್ತದೆ. ಬಾಗಿಣ ಬರಿಯ ಸಂಕೇತ ಮಾತ್ರ. ಮಾರಲಿ ಬಿಡು, ಅದು ಸಹಜ", ಎಂದು ಎಷ್ಟೇ ಸಮಾಧಾನ ಮಾಡಿದರೂ ಅವನ ಅಳು - ದುಃಖಗಳು ಉಪಶಮನಗೊಳ್ಳಲು ತುಂಬ ಸಮಯವೇ ಬೇಕಾಯಿತು.

ಸೀತಾರಾಮ ಭಟ್ಟರು ಕಾಲವಾಗಿ ತುಂಬ ವರ್ಷಗಳೇ ಉರುಳಿವೆ.  ವರ್ಷಗಳೇನು, ದಶಕಗಳೇ ಉರುಳಿವೆ. ಆದರೇನು. ನನಗಂತೂ ಪುರೋಹಿತರೆಂದರೆ ನನ್ನ ಬಾಲ್ಯದ ಸ್ಮೃತಿಕೋಶಗಳ ಭಾಗವಾಗಿಹೋಗಿರುವ ನಮ್ಮ ಸೀತಾರಾಮ ಭಟ್ಟರ ಸರಳ ಉಡುಪು, ನಗುಮುಖ, ಹಾಸ್ಯಗಳೇ ನೆನಪಾಗುತ್ತವೆ. ಈಗಲೂ ಬೇರೆಯವರನ್ನು, ಬೇರೆ ವಸ್ತ್ರವಿನ್ಯಾಸದವರನ್ನುಪುರೋಹಿತರೆಂದುಕೊಳ್ಳಲು ಕಷ್ಟವೇ ಆಗುತ್ತದೆ.

-ಮಂಜುನಾಥ ಅಜ್ಜಂಪುರ, ಬೆಂಗಳೂರು.

21.08.2011

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ