15. ಆದರ್ಶ ಶಿಕ್ಷಕ ಶ್ರೀ ಎನ್. ಎಸ್. ಅನಂತರಾವ್


ಶ್ರೀ ಎನ್. ಎಸ್. ಅನಂತರಾವ್


ಕುಳ್ಳನೆಯ ನಿಲುವು, ಕಾಲೇಜಿಗೆ ಹೊರಟಾಗ ಖಾದೀ ಸೂಟು, ಮಿಕ್ಕಂತೆ ಸರಳ ಉಡುಪು, ಸದಾ ಚಿಂತನೆಯಲ್ಲಿ ತೊಡಗಿರುವಂಥ ಮುಖಭಾವ, ವಿದ್ಯಾರ್ಥಿಗಳನ್ನು ಕಂಡರೆ ಅಕ್ಕರೆಯ ಜತೆಗೆ, ಅವರು ಕಲಿಯಬೇಕಾದಷ್ಟನ್ನು ಕಲಿಯುತ್ತಿಲ್ಲವಲ್ಲ ಎಂಬ ಕಳಕಳಿ. ಇದು ನಮ್ಮೂರಿನ ಪ್ರೌಢಶಾಲೆಯ ನಿವೃತ್ತ ಮಖ್ಯೋಪಾಧ್ಯಾಯರಾಗಿದ್ದ  ನಲ್ಲೂರು ಶ್ರೀನಿವಾಸರಾವ್ ಅನಂತರಾವ್ ಅವರ ಬಾಹ್ಯಚರ್ಯೆ. ಅವರು ಗಾಂಧೀವಾದಿ. ಅಹಿಂಸೆಯಲ್ಲಿ ತುಂಬ ನಂಬಿಕೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ, ಅವರನ್ನು ಕುಳ್ಳಿರಿಸಿಕೊಂಡು ಅನುನಯದ ಮಾತನಾಡಿ ಪರಿವರ್ತನೆಗೆ ಒಳಗಾಗುವಂತೆ ಮಾಡುತ್ತಿದ್ದವರು. 

ಅವರು ಅಜ್ಜಂಪುರಕ್ಕೆ ಸಮೀಪವಿರುವ ಶಾಂತಿಸಾಗರದ ಬಳಿಯಲ್ಲಿರುವ ನಲ್ಲೂರಿನಲ್ಲಿ  ೧೯೧೬ರಲ್ಲಿ ಜನಿಸಿದರು. ತಂದೆ ಶ್ರೀನಿವಾಸರಾವ್, ತಾಯಿ ಪದ್ಮಾವತಿ ಬಾಯಿ. ತಮ್ಮ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ರಾಯರು, ಅವರ ಅಣ್ಣ ಅಶ್ವತ್ಥನಾರಾಯಣ ರಾಯರ ನೆರವಿನಿಂದ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದರು. ಅನತಿಕಾಲದಲ್ಲೇ ಅವರ ಅಣ್ಣನೂ ತೀರಿಕೊಂಡಾಗ, ಶಾಲಾ ಮಕ್ಕಳಿಗೆ ಮನೆಪಾಠಮಾಡುತ್ತ, ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, ಮದನಪಲ್ಲಿಯಲ್ಲಿ ಬಿ.ಟಿ. ಅಧ್ಯಾಪಕ ಪದವಿಯನ್ನು ಪಡೆದರು.೧೯೩೬-೩೭ನೇ ಇಸವಿಯು ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾಲ. ಈ ಸಮಯದಲ್ಲಿ ಗೋವಾದ ಟ್ರಿನಿಟಿ ಆಂಗ್ಲಶಾಲೆಯಲ್ಲಿ ಅಧ್ಯಾಪಕರಾಗಿ ನಿಯುಕ್ತರಾದರು. ೧೯೩೯ರ ವೇಳೆಗೆ ಮಹಾಯುದ್ಧದ ಬಿಸಿ ಏರುತ್ತಿದ್ದಂತೆ, ರೈಲು ಸಂಚಾರದಲ್ಲಿ ವ್ಯತ್ಯಯವಾಗುವ ಸೂಚನೆಗಳು ದೊರೆತವು. ದೂರದ ಗೋವಾದಿಂದ ತಮ್ಮೂರಿಗೆ ಸಂಪರ್ಕ ಕಷ್ಟವಾಗುತ್ತದೆಯೆಂದು ಅರಿತ ಅನಂತರಾಯರು ಟ್ರಿನಿಟಿ ಶಾಲೆಯನ್ನು ತೊರೆದು ಕರ್ನಾಟಕಕ್ಕೆ ಬಂದರು. ಅಲ್ಲಿಂದ ಬಂದ ನಂತರ ಅಧ್ಯಾಪಕ ವೃತ್ತಿ ಅವರಿಗೆ ದೊರೆಯದ ಕಾರಣ ಮಂಡ್ಯದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಗುಮಾಸ್ತರಾಗಿ ನೌಕರಿಮಾಡಲು ಆರಂಭಿಸಿದರು. ಇದರ ನಡುವೆಯೂ ಅವರು ತಮ್ಮ ಅಧ್ಯಾಪನವನ್ನು ತೊರೆಯಲಿಲ್ಲ. ಬರವಣಿಗೆಯ ಕೌಶಲವಿದ್ದುದರಿಂದ ಅದೇ ಅವರಿಗೆ ಆಧಾರವಾಯಿತು. ೧೯೫೮ರಲ್ಲಿ ಅಜ್ಜಂಪುರದ ರೈಲುನಿಲ್ದಾಣದ ಬಳಿಯಿದ್ದ ಕಟ್ಟಡದಲ್ಲಿ ರೂರಲ್ ಎಜುಕೇಷನ್ ಸೊಸೈಟಿಯ ಸ್ಥಾಪನೆಯಲ್ಲಿ ಊರಿನವರೊಂದಿಗೆ ಸಹಕರಿಸಿ, ಶಾಲೆಯು ಸ್ಥಾಪನೆಯಾಗಲು ನೆರವಾದರು. ಆ ಶಾಲೆಗೆ ಅವರೇ ಮುಖ್ಯೋಪಾಧ್ಯಾಯರಾಗಿ ನಿಯುಕ್ತರಾದರು.

ಮುಂದೆ ವರ್ಗಾವಣೆಯ ನಿಯಮಗಳಿಗೆ ಒಳಪಟ್ಟು ಅಜ್ಜಂಪುರದಿಂದ ಕೊಡಗನೂರು, ಮರಡಿಹಳ್ಳಿ, ಮಲೆಬೆನ್ನೂರು, ಚನ್ನರಾಯಪಟ್ಟಣದ ಸಮೀಪದ ಕಲ್ಕರೆ ಮುಂತಾದ ಸ್ಥಳಗಳಲ್ಲಿ ಸೇವೆಸಲ್ಲಿಸಿದರು. ಅನಂತರಾಯರ ವೃತ್ತಿ ಜೀವನದಲ್ಲಿ ಒಂದು ವಿಶೇಷವಿದೆ. ಅದು ಬಹುತೇಕರಿಗೆ ಲಭ್ಯವಾಗದ ವಿಶೇಷ. ಅದೆಂದರೆ, ತಾವು ೧೯೫೯ರಲ್ಲಿ ಸ್ಥಾಪಿಸಿ, ವೃತ್ತಿ ಜೀವನವನ್ನು ಆರಂಭಮಾಡಿದ ಶಾಲೆಗೇ ನಿವೃತ್ತಿಯ ಸಮೀಪದ ದಿನಗಳಲ್ಲಿ, ಎಂದರೆ ೧೯೬೪ರಲ್ಲಿ ಬಂದು ಸೇರಿದರು ಮತ್ತು ೧೯೬೯ರಲ್ಲಿ ಅದೇ ಶಾಲೆಯಲ್ಲಿ ನಿವೃತ್ತರಾದರು. ರೂರಲ್ ಎಜುಕೇಷನ್ ಸೊಸೈಟಿಯೆಂದು ಸ್ಥಾಪಿತವಾಗಿದ್ದ ಶಾಲೆಯೀಗ ಶೆಟ್ರು ಸಿದ್ದಪ್ಪನವರ ತಾಲೂಕ್ ಬೋರ್ಡ್ ಪ್ರೌಢಶಾಲೆಯಾಗಿ ಬದಲಾಗಿತ್ತು.

ಅನಂತರಾಯರ ಶಿಕ್ಷಣ ಶೈಲಿಯೆಂದರೆ, ಈಗಿನಂತೆ ವಿದ್ಯಾರ್ಥಿಗಳನ್ನು ಹೆಚ್ಚು ಅಂಕಗಳಿಸುವಂತೆ ತರಬೇತಿಮಾಡಿ, ಸಂಸ್ಥೆಯ ಹೆಸರನ್ನು ಪ್ರಖ್ಯಾತಿಗೊಳಿಸುವ ಉದ್ದೇಶ ಹೊಂದಿರಲಿಲ್ಲ. ಬದಲಾಗಿ ತಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವರು ನೆರವಾದರು. ಅವರ ಬರವಣಿಗೆಯಲ್ಲಿ ಶಿಸ್ತು ಕಂಡುಬರುತ್ತಿತ್ತು. ಕಾಗದದ ಎಡಭಾಗದಲ್ಲಿ ಸಾಕಷ್ಟು ಮಾರ್ಜಿನ್ ಬಿಟ್ಟು ಬರೆಯುವಂತೆ ಒತ್ತಾಯಿಸುತ್ತಿದ್ದರು. ಗಣಿತದ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುತ್ತ, ವಿದ್ಯಾರ್ಥಿಗಳಲ್ಲಿ ಅದರ ಬಗ್ಗೆ ಆಸಕ್ತಿ ಮೂಡುವಂತೆ ಪಾಠಮಾಡುತ್ತಿದ್ದರು. ಸಾಹಿತ್ಯ, ಪತ್ರಿಕೋದ್ಯೋಗ, ಕೃಷಿ, ಜಾಗತಿಕ ವಿದ್ಯಮಾನಗಳು ಮುಂತಾಗಿ ಹಲವಾರು ವಿಷಯಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಬೆಳೆಯುವಂತೆ ನೋಡಿಕೊಂಡರು. ಅವರು ೧೯೬೭-೬೮ರಲ್ಲಿ ಹೊರಡಿಸಿದ ವಿಹಂಗಮ ವೆಂಬ ಕೈಬರಹದ ಪತ್ರಿಕೆಯಲ್ಲಿ ನಾನು ಪುರಂದರದಾಸರನ್ನು ಕುರಿತಾದ ಒಂದು ನಾಟಕವನ್ನು ಬರೆದಿದ್ದೆ. ಆಗ ನನ್ನ ಕೈಬರವಣಿಗೆ ಅಷ್ಟೇನೂ ಚೆನ್ನಾಗಿರಲಿಲ್ಲ. ಆಗೇನು, ಈಗಲೂ ಅಷ್ಟೇ. ಅದಕ್ಕೆಂದು ಬೇರೆಯವರ ನೆರವು ಪಡೆದು ಅದನ್ನು ಪ್ರಕಟಿಸಿದ ನೆನಪು ಈಗಲೂ ಸಂತೋಷಕೊಡುತ್ತದೆ. ಶಾಲೆಯ ಆವರಣದಲ್ಲಿ ಒಂದು ಕೈತೋಟವನ್ನು ಮಾಡಿಸಿದ್ದರು. ನಮಗೆ ಅನೇಕ ಸಸ್ಯಗಳ ಪರಿಚಯವಾದುದು ಆ ತೋಟದಲ್ಲೇ. ವೃತ್ತ ಪತ್ರಿಕೆಗಳನ್ನು ಶಾಲೆಗೆ ತರಿಸಿ ಅದನ್ನು ವಿದ್ಯಾರ್ಥಿಗಳು ಓದುವಂತೆ ಪ್ರೇರೇಪಿಸುತ್ತಿದ್ದರು. ಈಗೆಲ್ಲ ಪಾಠ-ಪ್ರವಚನ, ಮನೆ ಕೆಲಸಗಳ ಒತ್ತಡವೇ ವಿದ್ಯಾರ್ಥಿಗಳಿಗೆ ಹೆಚ್ಚಾಗಿ, ಜೀವನಾವಶ್ಯಕವಾದ ತಿಳುವಳಿಕೆಗಳನ್ನು ಬಾಲ್ಯದಲ್ಲಿ ಪ್ರಾಯೋಗಿಕವಾಗಿ ಬೋಧಿಸುವ ವ್ಯವಸ್ಥೆಯೇ ಮಾಯವಾಗಿದೆ. ವಿಜ್ಞಾನ ಪದವೀಧರರಾದ ಅನಂತರಾಯರು ಇಂಗ್ಲಿಷ್ ಸಾಹಿತ್ಯವನ್ನೂ ಚೆನ್ನಾಗಿ ಓದಿಕೊಂಡಿದ್ದವರು, ಕವಿ, ಕಾವ್ಯ ವಿಷಯಗಳನ್ನು ಚೆನ್ನಾಗಿ ತಿಳಿದು ಅದನ್ನು ಬೋಧಿಸುತ್ತಿದ್ದ ಕ್ರಮಗಳು  ಇಂದಿಗೂ ನನಗೆ ಆಶ್ಚರ್ಯವೆನ್ನಿಸುವ ವಿಷಯ.


ಮಧುಗಿರಿ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಶ್ರೀ ವೇಣುಗೋಪಾಲಸ್ವಾಮಿ ವಿದ್ಯಾಪೀಠವನ್ನು ಸ್ಥಾಪಿಸಿ, ಅಲ್ಲಿ ಹೆಣ್ಣಮಕ್ಕಳ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಅವರ ಪ್ರತಿಭೆಯನ್ನು ಗುರುತಿಸಿದ ಆಗಿನ ವ್ಯವಸಾಯ ಸಚಿವರಾಗಿದ್ದ ಜಿ.ನಾರಾಯಣಗೌಡರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಪ್ರೌಢಶಾಲೆಯನ್ನು ತೆರೆಯಲು ಆಹ್ವಾನಿಸಿದರು. ಅದರಂತೆ ಅಲ್ಲಿಯೂ ಶಾಲೆಯನ್ನು ಸ್ಥಾಪಿಸಿ ಹತ್ತನೇ ತರಗತಿಯವರೆಗಿನ ಮೊದಲ ತಂಡದ ವಿದ್ಯಾರ್ಥಿಗಳು ಶೇಕಡಾ ನೂರರ ಫಲಿತಾಂಶವನ್ನು ಪಡೆಯುವಂತೆ ತರಬೇತಿ ನೀಡಿದರು. ಇದಲ್ಲದೆ ನಿವೃತ್ತಿಯ ನಂತರವೂ ಅಜ್ಜಂಪುರ ಸಮೀಪದ ಆಸಂದಿ, ಬುಕ್ಕಾಂಬುಧಿ ಮುಂತಾದ ಗ್ರಾಮಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸಮಾಡಿದರು.ತಮ್ಮ ಕೊನೆಗಾಲದಲ್ಲಿ ಅವರ ಪುತ್ರ ಸತ್ಯೇಂದ್ರರ ಜತೆ ಗೊರೂರಿನಲ್ಲಿ ವಾಸವಾಗಿದ್ದು, ಅಲ್ಲಿಯೂ ಅಧ್ಯಾಪನದ ಕಾರ್ಯವನ್ನು ಮುಂದುವರೆಸಿ, ೧೯೮೮ರ ಜನವರಿಯಲ್ಲಿ ತಮ್ಮ ೭೪ನೇ ವಯಸ್ಸಿನಲ್ಲಿ  ದೈವಾಧೀನರಾದರು. ಗ್ರಾಮಾಂತರ ಪ್ರದೇಶಗಳಲ್ಲಿನ ಅಧ್ಯಾಪಕರ ಮೇಲೆ ಸ್ಥಳೀಯ ರಾಜಕಾರಿಣಿಗಳ, ಪುಢಾರಿಗಳ ಕಿರುಕುಳ ಸಾಮಾನ್ಯ. ಆದರೆ ತಮ್ಮ ಜೀವಿತ ಬಹುಕಾಲವನ್ನು ಅಧ್ಯಯನ - ಅಧ್ಯಾಪನಗಳಲ್ಲೇ ಕಳೆದ ಅನಂತರಾಯರು ತಾವು ನಂಬಿದ ತತ್ವಗಳನ್ನು ರಾಜಿಮಾಡಿಕೊಳ್ಳಲಿಲ್ಲ.  ಅವರ ವಿದ್ಯೆ, ಶ್ರದ್ಧೆ ಮತ್ತು ವೃತ್ತಿಗೌರವಗಳು ತಂದುಕೊಟ್ಟ ಹಿರಿಮೆಯನ್ನು ಜತನದಿಂದ ಕಾಪಾಡಿಕೊಂಡರು. ನಿಜಕ್ಕೂ ಅವರೊಬ್ಬ ಆದರ್ಶ ಶಿಕ್ಷಕರು. 

ಈ ಲೇಖನದೊಂದಿಗೆ ಪ್ರಕಟವಾಗಿರುವ ಶ್ರೀ ಅನಂತರಾಯರ ಭಾವಚಿತ್ರಕ್ಕಾಗಿ ಅವರ ಕುಟುಂಬ ವರ್ಗದವರು  ಅಜ್ಜಂಪುರಕ್ಕೆ ಭೇಟಿನೀಡಿದ್ದರು. ಕಾರಣಾಂತರಗಳಿಂದ ಅವರಿಗೆ ಅದು ಆಗ ಲಭ್ಯವಾಗಿರಲಿಲ್ಲ. ಮುಂದೆ ನಾನು  ಪ್ರೌಢಶಾಲೆಯ ಪ್ರಾಚಾರ್ಯೆ ಶ್ರೀಮತಿ ಕಮಲಮ್ಮನವರನ್ನು ಸಂಪರ್ಕಿಸಿದಾಗ ಅವರು ಕಟ್ಟಡದ ಸ್ವಚ್ಛತೆಗೆಂದು ತೆಗೆದಿರಿಸಿದ್ದ ಹಳೆಯ ಚಿತ್ರಗಳ ಸಂಗ್ರಹದಲ್ಲಿದ್ದ ಈ ಚಿತ್ರದ ಛಾಯಾಪ್ರತಿಯನ್ನು ತೆಗೆದುಕೊಳ್ಳಲು ಸಮ್ಮತಿಸಿದರು. ಹೀಗಾಗಿ ಚಿತ್ರದ ಪ್ರಕಟಣೆ ಸಾಧ್ಯವಾಯಿತು. ಶ್ರೀಮತಿ ಕಮಲಮ್ಮನವರಿಗೆ ಧನ್ಯವಾದಗಳು. 

ಶ್ರೀ ಅನಂತರಾಯರ ಬಗ್ಗೆ ಸವಿವರ ಮಾಹಿತಿಯನ್ನು ಅವರ ಪುತ್ರ ಶ್ರೀ ಸತ್ಯೇಂದ್ರ ನೀಡಿದ್ದಾರೆ. ಅವರಿಗೂ ಧನ್ಯವಾದಗಳು.


* * * * * * *





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ