16. ಕುಸಿಯುತ್ತಿರುವ ಅಮೃತ ಸೌಧ


ಅಜ್ಜಂಪುರದ 
ಅಮೃತಮಹಲ್ 
ಪಶು ಸಂವರ್ಧನಾ ಕೇಂದ್ರ 
 ಇತಿಹಾಸ ಮತ್ತು ವಾಸ್ತವ



ಅಜ್ಜಂಪುರದಲ್ಲಿರುವ ಅಮೃತ ಮಹಲ್ ಪಶು ಸಂವರ್ಧನಾ  ಕೇಂದ್ರವು ನಮ್ಮ ದೇಶದ ಸಂದರ್ಭದಲ್ಲಿ ವಿಶಿಷ್ಟವಾದುದು. ಅಜ್ಜಂಪುರದ ಅಮೃತಮಹಲ್ ಪಶು ಸಂವರ್ಧನಾ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಡಾ. ಟಿ.ಎಸ್. ಕೃಷ್ಣಮೂರ್ತಿ, (ನಿವೃತ್ತ ಜಂಟಿ ನಿರ್ದೇಶಕರು, ಪಶುಪಾಲನಾ ಇಲಾಖೆ) ಗಳನ್ನು ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನ ಮತ್ತೀಕೆರೆಯ ಅವರ ನಿವಾಸದಲ್ಲಿ ಸಂದರ್ಶಿಸಿ, ಸಂಗ್ರಹಿಸಿದ ಮಾಹಿತಿಗಳನ್ನು ಇಲ್ಲಿ ನೀಡಿದ್ದೇನೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯಾಲಯದಲ್ಲಿ ಕೆಲಸಮಾಡುತ್ತಿದ್ದಂತೆಯೇ, ಊರಿನ ಪ್ರಗತಿ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯು ವೃತ್ತಿಯ ಅವಶ್ಯಕತೆ ಇರಬಹುದಾದರೂ,  ತಮ್ಮ ಇಲಾಖೆಯು,  ರೈತರೊಡನೆ ಹೊಂದಿದ್ದ   ಸಂಬಂಧವು  ಸಾಮಾಜಿಕ ಆರೋಗ್ಯಕ್ಕೆ ಪೂರಕವಾಗಿ ಹೇಗಿತ್ತೆಂಬುದನ್ನು ನಿರೂಪಿಸಿದರು. ರೈತರಿಂದ ಇಲಾಖೆಯು ಕಲಿಯುವುದಷ್ಟೇ ಅಲ್ಲ, ರೈತರು ಈ ಇಲಾಖೆ ತಮ್ಮದೆಂಬ ಭಾವನೆ ಬೆಳೆಯಲು, ಹಿಂದಿನ ಸರಕಾರಗಳ ನೀತಿಯಿತ್ತು, ಅವುಗಳಲ್ಲಿ ಅಡಗಿದ ವಿಶಾಲ ಭಾವನೆಯನ್ನು ಅವರಿಗೆ ಮನವರಿಕೆ ಮಾಡಿಸಲು, ತಮ್ಮ ಆಡಳಿತಾವಧಿಯಲ್ಲಿ ಹೇಗೆಲ್ಲ ಕೆಲಸಮಾಡಲಾಯಿತೆಂದು ವಿವರಿಸಿದರು. ಅವರ ಕಾರ್ಯಕ್ಷೇತ್ರದ ಪ್ರಮುಖ ವ್ಯಾಪ್ತಿಯು ಪಶುಪಾಲನೆಗೆ ಸಂಬಂಧಿಸಿದ್ದಾದರೂ, ವ್ಯವಸಾಯ ಮತ್ತು ರೈತರ ಜೀವನಕ್ಕೆ ಸಂಬಂಧಿಸಿದ ಅನೇಕ ಪೂರಕ ಅಂಶಗಳನ್ನು ವಿವರಿಸಿ, ಸ್ವಾಭಾವಿಕ ಗೊಬ್ಬರಗಳನ್ನು ನಿರ್ಲಕ್ಷಿಸಿ, ರಾಸಾಯನಿಕಗಳ ಬಳಕೆಯು ಹೆಚ್ಚಿ, ಅದು ರೈತನ ಕುಟುಂಬ ಮತ್ತು ಜೀವನದ ವ್ಯವಸ್ಥೆಗಳನ್ನು ಹಾಳುಮಾಡಿರುವ ಬಗ್ಗೆ ವಿಷಾದಿಸಿದರು. 

ಅಮೃತಮಹಲ್ ನಮ್ಮ ರಾಜ್ಯದ ರೈತೋಪಯೋಗಿ ಜಾನುವಾರು ತಳಿ,  ಹಾಗೂ ಅಮೃತಮಹಲ್ ಕಾವಲುಗಳು  ಇವುಗಳಾಗಿ ಮೇಯಲು ಕಾದಿರಿಸಲಾಗಿದ್ದ ವಿಶಾಲಭೂಮಿ. ಇದರ ಇತಿಹಾಸ ಸುಮಾರು 500 ವರ್ಷಗಳ ಹಿಂದಿನದು.  ವಿಜಯನಗರದ ಪತನಾನಂತರ 1572-1600 ರಲ್ಲಿ ಶ್ರೀರಂಗಪಟ್ಟಣದಲ್ಲಿ ವಿಜಯನಗರದ ವೈಸರಾಯರ ಕರುಹಟ್ಟಿಯಲ್ಲಿ ಮಂದೆಯಲ್ಲಿ ಇವುಗಳು ಸೇರಿದ್ದು, ಇವೇ ಇಂದಿನ ಅಮೃತಮಹಲ್ ಮೂಲ ಎಂದು ಕಂಡುಬರುತ್ತದೆ. ಈ ರಾಸುಗಳು ವಿಜಯನಗರ ಸಾಮ್ರಾಜ್ಯದ ಆಯ್ದ ಕೆಲ ರಾಸುಗಳಾಗಿದ್ದು, ಮೊದಲಿಗೆ  ಕರುಹಟ್ಟಿಯಾಗಿ ನಂತರ ಮೈಸೂರು ಅರಸರ ಆಳ್ವಿಕೆಯಲ್ಲಿ ಬೆಣ್ಣೆಚಾವಡಿಯಾಗಿ, ತದನಂತರ ಅಮೃತಮಹಲ್ ಎಂದು ಕರೆಯಲಾಗಿದೆ. ಈ ರಾಸುಗಳು ಚುರುಕು, ತೀಕ್ಷ್ಣ ಮತ್ತು ನಡಿಗೆ ಹಾಗೂ ಓಟದಲ್ಲಿ ಮುಂದು. ಹಸುಗಳು ಬಿಳಿಯ ಬಣ್ಣದವು ಮತ್ತು ಹೋರಿಗಳು ಸಾಧಾರಣವಾಗಿ ಮುಂದಿನ ಮತ್ತು ಹಿಂದಿನ ಚಪ್ಪೆಯಲ್ಲಿ ಕಂದುಮಿಶ್ರಿತ ಕಪ್ಪುಬಣ್ಣವನ್ನುಹೊಂದಿರುತ್ತವೆ. 


ಮೈಸೂರಿನ ಆಳರಸರ ನೇರಸಂಪರ್ಕದಲ್ಲಿದ್ದ ಅಮೃತಮಹಲ್ ನ ತಳಿ ಸಾಗಿಬಂದ ದಾರಿಯ ಸ್ಥೂಲ ವಿವರಗಳು ಇಂತಿವೆ 

                         ಹೆಸರು                               ಕಾಲ
  ೧. ವಿಜಯನಗರ ಸಾಮ್ರಾಜ್ಯ (ವೈಸರಾಯ್) ೧೫೭೨-೧೬೦೦
  ೨. ಶ್ರೀ ಚಾಮರಾಜ ಒಡೆಯರು ೧೬೧೭-೧೬೩೬
  ೩. ಶ್ರೀ ಕಂಠೀರವ ನರಸರಾಜ ಒಡೆಯರು ೧೬೩೮-೧೬೫೮
  ೪. ಶ್ರೀ ಚಿಕ್ಕದೇವರಾಜ ಒಡೆಯರು ೧೬೭೨-೧೭೦೪
  ೫. ನವಾಬ್ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ೧೭೦೪-೧೭೯೯

ಬ್ರಿಟಿಷ್ ಶಕ

   ೬. ಮೈಸೂರು ರಾಜವಂಶದವರು ೧೭೯೯-೧೮೧೩
  .  ಮದ್ರಾಸಿನ ಕಮೀಷನರ್ ೧೮೧೩-೧೮೪೦
  . ಮೈಸೂರಿನ ಕಮೀಷನರ್ ೧೮೪೦-೧೮೬೦
  ೯. ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ೧೮೬೬-೧೯೨೩
೧೦. ವ್ಯವಸಾಯ ಇಲಾಖೆ, ಮೈಸೂರು ಸರಕಾರ ೧೯೨೩-೧೯೪೫
೧೧. ಪಶುಪಾಲನಾ ಇಲಾಖೆ, ೧೯೪೫ ರಿಂದ ಇಂದಿನವರೆಗೆ.

ಶ್ರೀರಂಗಪಟ್ಟಣದಲ್ಲಿ ಕರುಹಟ್ಟಿ ಎಂಬ ಹೆಸರಿನಿಂದ ಇದ್ದ ರಾಸುಗಳು ಮೈಸೂರು ಒಡೆಯರರ ಅಧೀನಕ್ಕೆ ಬಂದ ನಂತರ ಶ್ರೀ ಚಿಕ್ಕದೇವರಾಜ ಒಡೆಯರ್‌ರವರು ಹೆಚ್ಚಿನ ಕಾಳಜಿಯನ್ನು ತೆಗೆದುಕೊಂಡು ಆಯ್ದ ರಾಸುಗಳನ್ನು ಸೇರಿಸಿದ್ದಲ್ಲದೆ, ಇವುಗಳು ಮೇಯುವುದಕ್ಕೆಂದು ಪ್ರತ್ಯೇಕವಾದ ವಿಶಾಲ ಜಮೀನುಗಳನ್ನು "ಕಾವಲು"ಗಳು ಎಂಬ ಹೆಸರಿನಲ್ಲಿ ನೀಡಿರುವುದು ತಿಳಿದುಬಂದಿದೆ. ಇವರ ಕಾಲದಲ್ಲಿಯೇ ಈ ರಾಸುಗಳಿಗೆಂದು ಪ್ರತ್ಯೇಕ ಆಡಳಿತಾತ್ಮಕ ಇಲಾಖೆಯನ್ನು ಸ್ಥಾಪಿಸಿ, ಅದನ್ನು ಬೆಣ್ಣೆ ಚಾವಡಿ ಎಂದು ಹೆಸರಿಸಲಾಯಿತು. ವಿಶೇಷತಃ ಗ್ರಾಮೀಣ ಜಾನುವಾರು ಅಭಿವೃದ್ಧಿಗಾಗಿ ಬೇಕಾಗಿರುವ ಉತ್ತಮ ತಳಿಯ ಬೀಜದ ಹೋರಿ ಮತ್ತು ಅರಮನೆಗೆ ಬೇಕಾದ ಹಾಲು ಮತ್ತು ಬೆಣ್ಣೆಗಾಗಿ ಅಭಿವೃದ್ಧಿಪಡಿಸಲಾಯಿತು. 


ಈ ರಾಸುಗಳನ್ನು ಕಟ್ಟಿಹಾಕಿ ಬೆಳೆಸದೆ, ಸ್ವಚ್ಛಂದವಾಗಿ ಓಡಾಡಿಕೊಂಡಿರುವಂತೆ ಬೆಳೆಸುತ್ತಿದ್ದು, ಗುರುತಿಗಾಗಿ ಚಪ್ಪೆಯ ಮೇಲೆ (DE) ಮುದ್ರೆಯನ್ನು ಹಾಕಲಾಗುತ್ತಿತ್ತು. ಹೀಗೆ ಅಭಿವೃದ್ಧಿಯಾದ ಹಿಂಡುಗಳು ಮುಂದೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ವಶವಾದವು. ಸರಿಸುಮಾರು ೬೦,೦೦೦ ರಾಸುಗಳನ್ನು ಹೈದರಾಲಿಯು ಸೇನಾ 
ಚಟುವಟಿಕೆಗಳಿಗಾಗಿ ಬಳಸಿಕೊಂಡದ್ದು ಕಂಡುಬರುತ್ತದೆ. ಈ ರಾಸುಗಳು ಯಾವ ದಣಿವೂ ಇಲ್ಲದೆ ದಿನದಲ್ಲಿ ೧೬ ಗಂಟೆಗಳ ಕಾಲ ಕೆಲಸಮಾಡುವ ಕಾರ್ಯಕ್ಷಮತೆಯುಳ್ಳವು. ಇವುಗಳ ಗಟ್ಟಿತನ, ಚುರುಕುತನ, ತೀಕ್ಷ್ಣತೆ ಮತ್ತು ನಡಿಗೆಯಲ್ಲಿರುವ ವೇಗಗಳಿಂದಾಗಿ ಇವುಗಳಿಗೆ ಸೈನ್ಯದಲ್ಲಿ ವಿಶಿಷ್ಟ ಸ್ಧಾನವನ್ನು ಕೊಡಲಾಗಿತ್ತು. ಸೇನೆಯ ಸಾಮಗ್ರಿಗಳು, ಮದ್ದುಗುಂಡುಗಳು, ಮತ್ತಿತರ ವಸ್ತುಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುವ ಉದ್ದೇಶಗಳಿಗೆಂದು ಬಳಸಲಾಗುತ್ತಿತ್ತು. ರಾತ್ರಿವೇಳೆಯಲ್ಲಿ ಇವುಗಳ ಕೋಡುಗಳಿಗೆ ಉರಿಯುವ ಪಂಜನ್ನು ಕಟ್ಟಿ, ಶತ್ರುಪಾಳೆಯದ ಮೇಲೆ ಎರಗುವಂತೆ ಮಾಡಿ, ಶತ್ರುಗಳಲ್ಲಿ ಭಯ ಮತ್ತು ಅರಾಜಕತೆಗಳನ್ನು ಉಂಟುಮಾಡುವುದು ಅಂದಿನ ಯುದ್ಧತಂತ್ರಗಳಲ್ಲಿ ಒಂದಾಗಿತ್ತು. ಹೈದರಾಲಿಯ ನಂತರ ಟಿಪ್ಪುಸುಲ್ತಾನ್ ಈ ರಾಸುಗಳ ಸಂಖ್ಯೆಯನ್ನು ಹೊಸ ಉತ್ತಮ ರಾಸುಗಳ ಸೇರ್ಪಡೆಯಿಂದ ಹೆಚ್ಚು ಮಾಡಿದ್ದು, "ಬೆಣ್ಣೆಛಾವಡಿ" ಎನ್ನುವ ಹೆಸರಿನ ಬದಲಾಗಿ "ಅಮೃತಮಹಲ್" ಎನ್ನುವ ಹೆಸರು ಬಂದು ಇಂದಿಗೂ ಈ ಹೆಸರೇ ಮುಂದುವರೆದು ರಾಜ್ಯದ ವ್ಯವಸಾಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುತ್ತದೆ.

ಜನರಲ್ಲಿ ವಾಡಿಕೆಯಿರುವಂತೆ ಇವಗಳಲ್ಲಿಯೂ ಸಹ ವಂಶಾವಳಿಯ ಪರಿಪಾಠವಿದ್ದು ಹುಟ್ಟಿದ ರಾಸುಗಳನ್ನು ಅವುಗಳ ತಾಯಿಯ ವಂಶದಿಂದ ಗುರ್ತಿಸಲಾಗುತ್ತದೆ. ಅಮೃತಮಹಲ್ ಕೇಂದ್ರಸ್ಥಾನವು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿದ್ದು, ಇದಕ್ಕೆ ಉಪಕೇಂದ್ರಗಳಿವೆ. ಇಲ್ಲಿಯೂ ಅಮೃತಮಹಲ್ ತಳಿಗಳ ಪಾಲನೆ ಮಾಡಲಾಗುತ್ತಿದೆ. ಇವುಗಳನ್ನು  ಅವು ಹುಟ್ಟಿದ ಕೇಂದ್ರ, ಹುಟ್ಟಿದ ವರ್ಷ,  ವರ್ಷದಲ್ಲಿನ ಕ್ರಮಸಂಖ್ಯೆ ಹಾಗೂ ತಾಯಿಯ ವಂಶದಿಂದ ಗುರುತಿಸಲಾಗುತ್ತದೆ.  ಸರಿಸಮಾರು 137 ಹೆಚ್ಚು ವಂಶಗಳಿದ್ದು, ಒಂದು ವಂಶದ ಹೋರಿಯನ್ನು ವಿವಿಧ ರಾಸುಗಳ ನಡುವೆ ಸ್ವತಂತ್ರವಾಗಿ ಬಿಟ್ಟು, ತಳಿ ಅಭಿವೃದ್ಧಿ ಮಾಡಲಾಗುತ್ತದೆ. ಪತ್ರೆ, ಸುಡುಗಾಡು ಸಿದ್ಧಿ, ಸನ್ಯಾಸಿ, ಸಿಂಗಾರಿ ಮತ್ತು ಕಾಳಿಂಗ ಇವು ಈ ಪಶುವಂಶಗಳ ಕೆಲವು ಹೆಸರುಗಳು. ಈ ರೀತಿಯ ವಂಶಾವಳಿಯ ಗುರುತಿಸುವಿಕೆಯು, ಅಮೃತಮಹಲ್ ತಳಿಯ ವಿಶಿಷ್ಟತೆ ಹಾಗೂ ಬೇರೆಲ್ಲೂ ಕಾಣದ ಪದ್ಧತಿ.

ಅಮೃತಮಹಲ್‌ನ ಮತ್ತೊಂದು ವಿಶೇಷತೆಯೆಂದರೆ ವಾರ್ಷಿಕ ಗಣತಿ ಅಥವಾ "ಹುಜೂರ್ ಮಸ್ಟರ್". ಈ ಪದ್ಧತಿ ಈಗ ಜಾರಿಗೆ ತಂದದ್ದಲ್ಲ. ಟಿಪ್ಪೂಸುಲ್ತಾನರ ಕಾಲದಿಂದಲೂ ಇದು ನಡೆದು ಬಂದಿರುವುದರಿಂದ, ಅವರು ಸ್ವತಃ ಹಾಜರಿದ್ದು, ಕಾವಲುಗಳು, ರಾಸುಗಳನ್ನು ವೀಕ್ಷಿಸಿ, ಅವುಗಳ ಪಾಲನೆಯ ದರ್ಜೆಗೆ ಅನುಸಾರವಾಗಿ ಉತ್ತಮ ಗೋಪಾಲಕರಿಗೆ ಬಂಗಾರದ ಬಹುಮಾನಗಳನ್ನು ನೀಡುತ್ತಿದ್ದುದು ಇತಿಹಾಸ. ಹೀಗೆ ಪುರಸ್ಕೃತರಾದವರನ್ನು ಸೇರ್ವೆಗಾರರೆಂದು ಕರೆಯುತ್ತಿದ್ದರು. ಅವರಿಗೆ ತಮ್ಮ ಈ ಪದವಿಯ ಬಗ್ಗೆ ಹೆಮ್ಮೆಯಿರುತ್ತಿತ್ತು.   ಈಗಲೂ ಇಲಾಖೆಯ ಮುಖ್ಯಸ್ಥರೇ ಖುದ್ದು ಅವುಗಳ ಬೆಳವಣಿಗೆ, ಅಭಿವೃದ್ಧಿ ಮತ್ತು ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮವನ್ನು ತೆಗೆದುಕೊಂಡು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಮತ್ತು ಆ ದಿನ ಲಭ್ಯವಾಗುವ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ರಾಸುಗಳ ಸುಸ್ಥಿತಿಗೆ  ಕಾರಣರಾದವರನ್ನು ಅಭಿನಂದಿಸಿ, ಬಹುಮಾನ ವಿತರಣೆ ಮಾಡುತ್ತಿದ್ದ ಪದ್ಧತಿ ಇನ್ನೂ ಜಾರಿಯಲ್ಲಿದೆಯಾದರೂ, ಇತ್ತೀಚೆಗೆ ಈ ವಿಷಯದಲ್ಲಿ ಅನಾಸಕ್ತಿ ಕಂಡುಬರುತ್ತಿದೆ. ಇಲಾಖೆಯ ಮುಖ್ಯಸ್ಥರು ಅಗತ್ಯ ಕಾಳಜಿ ತೋರಿದಲ್ಲಿ ಇದು ಮುಂದುವರೆಯಲಾಗದು ಎನ್ನುವಂತಿಲ್ಲ. ವಾರ್ಷಿಕ ಗಣತಿಯ ಸಂದರ್ಭದಲ್ಲಿ ಕಂಡುಬರುವ ಅಗತ್ಯಕ್ಕಿಂತ ಹೆಚ್ಚಾದ ರಾಸುಗಳು ಮತ್ತು ಒಂದೂವರೆಯಿಂದ ಎರಡು ವರ್ಷದ ಹೋರಿಗರುಗಳನ್ನು ವಿಂಗಡಿಸಿ, ರೈತರ ಉಪಯೋಗಕ್ಕೆಂದು ಬಹಿರಂಗ ಹರಾಜು ಹಾಕಲಾಗುತ್ತಿತ್ತು. ಹೀಗೆ ಹರಾಜಾದ ರಾಸುಗಳ ಬೆಲೆಯು ೧೯೨೦-೨೧ ರಲ್ಲಿ ೧೪೬ ರೂಪಾಯಿಗಳಾಗಿದ್ದು, ಕಳೆದ ವರ್ಷದಲ್ಲಿ ಇದರ ಮೌಲ್ಯವು ಅಂದಾಜು ೧೧,೦೦೦ ರೂಪಾಯಿಗಳಷ್ಟಾಗುತ್ತದೆ.  ಇದರ ಜತೆಗೆ ನಿಗದಿತ ಬೆಲೆಯಲ್ಲಿ ತಳಿ ಅಭಿವೃದ್ಧಿಗಾಗಿ ಉತ್ತಮ ಗುಣಮಟ್ಟದ ಹೋರಿಗರುಗಳಿಗೆ ರೈತರಿಂದ ಉತ್ತಮ ಬೇಡಿಕೆ ಬರುತ್ತಿದೆ. ಇತರ ರಾಜ್ಯಗಳ ರೈತರೂ ಇಲ್ಲಿಂದ ಹೋರಿಕರುಗಳನ್ನು ಪಡೆಯುವುದುಂಟು.

ಅಮೃತಮಹಲ್ ತಳಿಯ ರಾಸುಗಳು ಅಜ್ಜಂಪುರ ಹಾಗೂ ಸಮೀಪದ ಉಪಕೇಂದ್ರಗಳಲ್ಲಿ ಮಾತ್ರವಲ್ಲದೆ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಮತ್ತು ಮಂಡ್ಯ ಜಿಲ್ಲೆಗಳ ರೈತರ ಮನೆಗಳಲ್ಲಿ ಕಾಣಸಿಗುತ್ತವೆ. ಸರ್ಕಾರಿ ಕೇಂದ್ರಗಳಲ್ಲಿ ಇರುವ ರಾಸುಗಳನ್ನು, ಅವುಗಳಿಗೆಂದೇ ಇರುವ ಕಾವಲುಗಳಲ್ಲಿ ಬಿಟ್ಟು ಮೇಯಿಸಲಾಗುತ್ತದೆ. ರಾಜ್ಯದ ರಕ್ಷಣೆ ಮತ್ತು ತದನಂತರ ವ್ಯವಸಾಯ ಕಸುಬುಗಳಿಗೂ ಸಹ ಈ ರಾಸುಗಳ ಆವಶ್ಯಕತೆಯಿದ್ದುದರಿಂದ ಅಂದಿನ ಮೈಸೂರುರಾಜ್ಯದ ಬೆಂಗಳೂರು, ಕೋಲಾರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಅಮೃತಮಹಲ್ ರಾಸುಗಳು ಮೇಯಲೆಂದೇ ವಿಸ್ತಾರವಾದ ಯೋಗ್ಯ ಭೂಪ್ರದೇಶಗಳನ್ನು ಕೆರೆ ಅಂಗಳ, ಸಾಮಾಜಿಕ ಅರಣ್ಯ ಹಾಗೂ ಇನ್ನಿತರ ಫಲವತ್ತಾದ ಜಾಗಗಳನ್ನು ಅಮೃತಮಹಲ್ ಕಾವಲುಗಳೆಂದೇ ಗುರುತಿಸಿ ಕಾದಿರಿಸಲಾಯಿತು. ಈ ಕಾವಲುಗಳಲ್ಲಿ ಋತುಮಾನಗಳಿಗೆ ಅನುಸಾರವಾಗಿ ಇವುಗಳನ್ನು ಮೇಯಿಸಲಾಗುತ್ತದೆ. ಅಮೃತ ಮಹಲ್ ಪೀಳಿಗೆಯ ಸಂರಕ್ಷಣೆಗಾಗಿ ಸೇರ್ವೇಗಾರ ಮತ್ತು ಕಾವಲುಗಾರರ ವ್ಯವಸ್ಥೆಯನ್ನೂ ಅನುಷ್ಠಾನಗೊಳಿಸಲಾಗಿದ್ದು, ಇವರ ಮೇಲ್ವಿಚಾರಣೆ ಮತ್ತು ಅಭಿವೃದ್ಧಿಕಾರ್ಯಗಳನ್ನು ಇಲಾಖೆಯ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಈ ಹಿಂದೆ ಆಯಾಯಾ ಕಾವಲು ಪ್ರದೇಶದ ರಕ್ಷಣೆಗಾಗಿ ಇವುಗಳ ರಕ್ಷಣೆ ಮಾಡಬಲ್ಲ ಶಕ್ತಿಯುಳ್ಳವರನ್ನೇ ನೇಮಿಸಲಾಗುತ್ತಿದ್ದು, ಅವರು ಕೂಡ ಇದನ್ನೊಂದು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿ, ನಿಷ್ಠರಾಗಿರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇಲ್ಲಿಯೂ ರಾಜಕೀಯ ಪಟ್ಟಭದ್ರ ಹಿತಾಸಕ್ತರ ಕೈವಾಡ ಇಲ್ಲದೆ ಇಲ್ಲ.


ಈ ಕಾವಲುಗಳಲ್ಲಿ ಮಳೆಬಂದ ಕೆಲವು ದಿನಗಳ ನಂತರ ಮತ್ತು ಸರ್ಕಾರಿ ಸ್ವಾಮ್ಯದ ಅಮೃತಮಹಲ್ ರಾಸುಗಳು ಮೇಯ್ದು ಹೋದ ನಂತರ ಬನ್ನಿ ಎನ್ನುವ ಹೆಸರಿನಲ್ಲಿ ಸ್ವಲ್ಪ ಶುಲ್ಕದೊಂದಿಗೆ ಗ್ರಾಮಸ್ಥರ ದನಗಳಿಗೂ ಸಹ ಮೇಯುವ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು. ಗ್ರಾಮದ ಜನತೆಗೆ ಕಾವಲುಗಳಲ್ಲಿ ಇನ್ನಿತರ ಸಣ್ಣಪುಟ್ಟ ಸೌಲಭ್ಯಗಳನ್ನು ನೀಡುತ್ತಿದ್ದುದರಿಂದ ಕಾವಲುಗಳನ್ನು ರಕ್ಷಿಸುವುದು ತಮ್ಮ ಕರ್ತವ್ಯೆವೆಂದು ಅವರು ಭಾವಿಸುತ್ತಿದ್ದರು.

೧೯೧೫-೧೬ರಲ್ಲಿ ಸುಮಾರು ೩,೯೫,೦೬೨ ಎಕರೆಗಳಷ್ಟಿದ್ದ ಕಾವಲು ಜಮೀನಿನಲ್ಲಿ, ಕಾಲ ಬದಲಾವಣೆಗೊಂಡಂತೆ ಕೃಷಿ ಉದ್ದೇಶಗಳಿಗೆಂದು ಜಮೀನುಗಳನ್ನು ಸರಕಾರಗಳು ನೀಡತೊಡಗಿದವು. ಇದಲ್ಲದೆ ಪಟ್ಟಭದ್ರ ಹಿತಾಸಕ್ತರು ಅನಧಿಕೃತವಾಗಿ ಸಾಕಷ್ಟು ಕಾವಲು ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡರು. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಎಮ್ಮೆದೊಡ್ಡಿ, ಅಯ್ಯನಕೆರೆ, (ಕಾಮೇನಹಳ್ಳಿ) ಹಾಗೂ ಶಿವಮೊಗ್ಗ ಜಿಲ್ಲೆಯ ಶಾಂತಿಸಾಗರ (ಸೂಳೆಕೆರೆ) ಕಾವಲುಗಳನ್ನು ಹೆಸರಿಸಬಹುದು. ಈಗ ಉಳಿದಿರುವ ಕಾವಲಿನ ವಿಸ್ತೀರ್ಣ ೫೨,೦೦೦ ಎಕರೆಗಳನ್ನು ಮೀರಲಾರದು. ಇದರಲ್ಲೂ ೩೦,೦೦೦ ಎಕರೆ ಒತ್ತುವರಿಯಾಗಿದೆಯೆಂಬುದು ಇತ್ತೀಚಿನ ಮಾಹಿತಿ.

ಅಮೃತಮಹಲ್ ಆರಂಭವಾದಂದಿನಿಂದಲೂ ಬೇರೆ ಬೇರೆ ಆಡಳಿತಗಳಿಗೆ ಒಳಪಡುವಂತಾಗಿ, ವಿವಿಧ ಒತ್ತಡಗಳಿಗೆ ಒಳಗಾಯಿತು. ಹಾಗಿದ್ದರೂ ಇದು ಇನ್ನೂ ಅಸ್ತಿತ್ವದಲ್ಲಿದೆಯೆಂದರೆ ಅದು ಅದರ ಮಹತ್ವದ ಕಾರಣದಿಂದಲೇ ಸರಿ. ಬೇರಾವ ರಾಜ್ಯದಲ್ಲಿಯೂ ಕಂಡುಬರದ ಈ ವ್ಯವಸ್ಥೆ ನಾಶವಾಗಬಾರದು, ಅದು ರೈತರ ಹಿತಕ್ಕೆಂದೇ ರೂಪಿಸಿರುವ ವ್ಯವಸ್ಥೆ.  ಜಾನುವಾರುಗಳ ಸಂಖ್ಯೆಯು ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಇಂಥ ಅಮೂಲ್ಯವಾದ ಉತ್ತಮ ಹಿನ್ನೆಲೆ, ಇತಿಹಾಸಗಳನ್ನುಳ್ಳ ತಳಿಗಳು ನಾಶವಾಗುತ್ತದೆಯಾದರೆ ಅದಕ್ಕಿಂತ ದುರಂತ ವ್ಯವಸಾಯ ಕ್ಷೇತ್ರದಲ್ಲಿ ಇನ್ನೊಂದಿರಲಾರದು. 

ಈ ದೃಷ್ಟಿಕೋನವನ್ನು ಗಮನಿಸಿದ ರಾಜ್ಯ ಶ್ರೇಷ್ಠ ನ್ಯಾಯಾಲಯವು ೩೦ ಮಾರ್ಚ್ ೨೦೦೧ ರಲ್ಲಿ ಒಂದು ಆದೇಶವನ್ನು ಹೊರಡಿಸಿ, ಅದರಂತೆ ಅಮೃತಮಹಲ್‌ ಕಾವಲಿಗೆ ಸೇರಿದ ಯಾವುದೇ ಜಮೀನನ್ನು ಅದರ ಉದ್ದೇಶಕ್ಕೆ ಮಾತ್ರ ಬಳಸಬೇಕಲ್ಲದೆ ಅದನ್ನು ಬೇರೆಯಾರಿಗೂ, ಯಾವ ಉದ್ದೇಶಕ್ಕೂ ನೀಡಬಾರದು ಎಂದು ಹೇಳಿದೆ. ಇದನ್ನು ಸರಿಯಾಗಿ ಜಾರಿಗೆ ತರದಿದ್ದರೆ, ಉಳಿದಿರುವ ಅಲ್ಪ-ಸ್ವಲ್ಪ ಜಮೀನುಗಳು ಕೂಡ ಭೂಕಬಳಿಕೆದಾರರ ವಶವಾಗಿ, ರಾಜ್ಯದ ಅಮೂಲ್ಯ ನಿಧಿಯೊಂದು ನಾಶವಾದಂತಾದೀತು. ಹಾಗಾಗಬಾರದೆನ್ನುವುದೇ ಅಮೃತಮಹಲ್ ತಳಿಯ ಅಭಿಮಾನಿಗಳ, ರೈತರ ಮತ್ತು ಪರಿಸರಾಸಕ್ತರ ಹಂಬಲ.




* * * * * * *

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ