18. ನಮ್ಮ ಶಾಲೆ
ಅಜ್ಜಂಪುರದ
ಆರ್.ಇ.ಎ. ಪ್ರೌಢಶಾಲೆಯಿಂದ
ಶೆಟ್ರು ಸಿದ್ದಪ್ಪನವರ
ಸರಕಾರೀ ಪದವೀ ಪೂರ್ವಕಾಲೇಜಿನವರೆಗೆ
-ಅಪೂರ್ವ
ಈ ಲೇಖನವನ್ನು ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ)ಯವರು ಅಜ್ಜಂಪುರದ ಶೆಟ್ಟರ ಸಿದ್ಧಪ್ಪ ಪ್ರೌಢಶಾಲೆಯ
ಸ್ವರ್ಣಮಹೋತ್ಸವದ ಸಂದರ್ಭದಲ್ಲಿ ರಚಿಸಿದರು. ಇದನ್ನು ಬರೆಯುವ ಕಾಲಕ್ಕೆ ಅವರು ಅನೇಕರಿಂದ ಮಾಹಿತಿಗಳನ್ನು
ಪಡೆದು, ಬಹಳ ಶ್ರಮವಹಿಸಿ ಸಿದ್ಧಪಡಿಸಿದರು. ಕಾರಣಾಂತರಗಳಿಂದ ಆ ಉತ್ಸವ ನಡೆಯಲಿಲ್ಲ.
ಅದು ಇಲ್ಲಿ ಪ್ರಕಟವಾಗುತ್ತಿದೆ.
ಈ ಪ್ರೌಢಶಾಲೆಗೆ ಮಹತ್ವದ ದಾನಿಗಳಾಗಿದ್ದ ಶ್ರೀ ಶೆಟ್ಟರ ಸಿದ್ಧಪ್ಪನವರ ಬಗ್ಗೆ ಈಗಾಗಲೇ ಒಂದು ಲೇಖನ
ಪ್ರಕಟಗೊಂಡಿರುವುದನ್ನು ತಾವೆಲ್ಲರೂ ಗಮನಿಸಿರಬಹುದು. ಪ್ರಸ್ತುತ ಲೇಖನದಲ್ಲಿ ಶಾಲೆಯ ಇತಿಹಾಸವನ್ನು ವಿಸ್ತಾರವಾಗಿ
ವಿವರಿಸಲಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಈಗ ದೇಶ ವಿದೇಶಗಳಲ್ಲಿ ಹರಡಿದ್ದಾರೆ. ಅವರು ತಮ್ಮ ಶಾಲೆಯ
ಇತಿಹಾಸವನ್ನು ಮನಗಾಣಲಿ, ಹಳೆಯ ನೆನಪುಗಳು ಮರುಕಳಿಸಲಿ ಎಂಬ ಸದಾಶಯದಿಂದ ಬರೆದಿರುವ ಈ ಲೇಖನಕ್ಕೆ
ನಿಮ್ಮೆಲ್ಲರಿಂದ ಪ್ರತಿಕ್ರಿಯೆಗಳು ಬರುವಂತಾಗಲಿ. ಅಂತೆಯೇ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಜನಪ್ರಿಯವಾಗಿದ್ದ
ಅದೀಗ ಪ್ರಥಮ ದರ್ಜೆಯ ಕಾಲೇಜು ಆಗಿ ಪರಿವರ್ತಿತವಾಗಿದೆ.
ನಿಮ್ಮ ಕಾಲಾವಧಿಯಲ್ಲಿದ್ದ ಅಧ್ಯಾಪಕರು, ವಿಶೇಷಗಳು, ಆಟೋಟಗಳು, ಶಾಲಾ ಚಟುವಟಿಕೆಗಳ ಬಗ್ಗೆ ನಿಮ್ಮ
ಅನುಭವಗಳನ್ನು ಹಂಚಿಕೊಳ್ಳಿ.
ಶಾಲೆಯ ಹಳೆಯ-ಹೊಸ ವಿದ್ಯಾರ್ಥಿಗಳೆಲ್ಲರಿಗೂ ಇದು ಸ್ಫೂರ್ತಿ ತುಂಬಲಿ.
-ಶಂಕರ ಅಜ್ಜಂಪುರ
ಲೇಖಕ ಅಪ್ಪಾಜಿ (ಅಪೂರ್ವ) ತನ್ನ ಗೆಳೆಯರು ಎಂ.ಬಿ. ಕೇಸರಿ ಮತ್ತು ಸತ್ಯನಾರಾಯಣ ಇವರೊಂದಿಗೆ |
ಅಜ್ಜಂಪುರದಲ್ಲಿ ೧೯೪೬ರಲ್ಲಿ ಶಿವಾನಂದಾಶ್ರಮದ ಆವರಣದಲ್ಲಿ ಒಂದು ಪ್ರೌಢಶಾಲೆ ಸ್ಥಾಪನೆಯಾಯಿತು. ಅದು ಅಜ್ಜಂಪುರದವರ ಪಾಲಿಗೆ ಒಂದು ಮಹತ್ತರ ಘಟನೆಯಾಗಿತ್ತು. ಊರಿನ ಅಕ್ಷರಸ್ಥರ ಕನಸು ನನಸಾಗಿತ್ತು. ನಮ್ಮ ಹುಡುಗರು ಇನ್ನುಮುಂದೆ ಹೈಸ್ಕೂಲು ಓದಲೆಂದು ಪರಸ್ಥಳಗಳಿಗೆ ಹೋಗಬೇಕಾದ್ದಿಲ್ಲವೆಂದು ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮಂಗಳೂರು ಹೆಂಚಿನ ಮಾಡು ಇದ್ದ, ಭಗವದ್ಗೀತೆಯ ಪ್ರಚಾರ ಪ್ರಸಾರಕ್ಕೆಂದು ಇದ್ದ ಆಶ್ರಮದ ಕಟ್ಟಡವು ಶಿವಾನಂದಾಶ್ರಮದ ಶ್ರೀ ಶಂಕರಾನಂದರ ಕೃಪೆಯಿಂದಾಗಿ ವಿದ್ಯಾಪ್ರಸಾರಕ್ಕೆ ಒದಗಿ ಬಂದಿತು. ಆಗ ಬರಗಾಲ, ಆಹಾರ ಧಾನ್ಯಗಳ ಅಭಾವ. ಹೀಗಿದ್ದೂ ಮಕ್ಕಳ
ಅಕ್ಷರ ದಾಹವನ್ನು ತಣಿಸಲು ಅಜ್ಜಂಪುರಕ್ಕೆ ಹೈಸ್ಕೂಲು ಕಾಲಿಟ್ಟಿತು. ಆ ದಿನಗಳಲ್ಲಿ ಅದಕ್ಕೆ ಇದ್ದ ಹೆಸರು "ರೂರಲ್ ಎಜುಕೇಷನ್ ಅಸೋಸಿಯೇಷನ್" (ಆರ್.ಎ.ಇ.) . ಈ ಸಂಘಟನೆಯ ಅಧ್ಯಕ್ಷರಾಗಿದ್ದವರು ಶೆಟ್ಟರು ಸಿದ್ದಪ್ಪನವರು, ಕಾರ್ಯದರ್ಶಿಯಾಗಿ ಎಸ್. ಸುಬ್ರಹ್ಮಣ್ಯ ಶೆಟ್ಟರು, ಉಪಾಧ್ಯಕ್ಷರಾಗಿ ಲಾಯರ್ ಕರಿಸಿದ್ದಪ್ಪ, ಮತ್ತು ಬಿ. ಮಹೇಶ್ವರಪ್ಪ, ಹಾಗೂ ನಿರ್ದೇಶಕರಾಗಿ ಜಿ.ಕೆ. ಮಹಾದೇವಪ್ಪ, ನಾಗಣ್ಣಶೆಟ್ಟಿ ಮುಂತಾದವರು ಇದ್ದರು. ಇವರಿಗೆ ಬೆಂಬಲವಾಗಿದ್ದವರು ಶ್ರೀ ಶಂಕರಾನಂದ ಸ್ವಾಮೀಜಿ, ಅಮಲ್ದಾರ್ ಹಾಲಪ್ಪ ಮತ್ತು ಗ್ರಾಮಸ್ಥರು ಬೆಂಬಲಕ್ಕಿದ್ದರು. ಈ ಸಂಸ್ಥೆಗೆ ಬೇಕಿದ್ದ ಮೂಲಬಂಡವಾಳಕ್ಕೆಂದು ಎಲ್ಲರೂ ಕಟ್ಟಡನಿಧಿಗೆ ನೆರವಾದರು.ಗೋವಾದ ಮಿಷನರಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಗಾಂಧೀ ತತ್ವಾನುಯಾಯಿ ಶ್ರೀ ಎನ್. ಎಸ್. ಅನಂತರಾವ್, ಬಿ.ಎಸ್ಸಿ., ಬಿ.ಟಿ. ಇವರು ಅಜ್ಜಂಪುರಕ್ಕೆ ಬಂದು ನೂತನ ಶಾಲೆಯ ಬೋಧಕವರ್ಗದ ಸಾರಥಿಯಾದರು.
ಆಗ ಕಾರ್ಯದರ್ಶಿಯಾಗಿದ್ದ ಜಿ.ಕೆ. ಮಹಾದೇವಪ್ಪನವರು ಮಿಸಲೇನಿಯಸ್ ಅರ್ಜಿ ಸಲ್ಲಿಸಿ ಪ್ರಕರಣವನ್ನು ರಾಜಿ ಹಂತಕ್ಕೆ ತಂದರು. ಹಣಕಾಸಿನ ಮುಗ್ಗಟ್ಟು ಹೆಚ್ಚಾದುದರಿಂದ ಶೆಟ್ರು ಸಿದ್ದಪ್ಪನವರು ಹಾಗೂ ಜಿ.ಕೆ. ಮಹಾದೇವಪ್ಪನವರು ಅಂದಿನ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ಎಚ್.ಜಿ. ಗೋವಿಂದೇಗೌಡರನ್ನು ಸಂಪರ್ಕಿಸಿ, ಹೈಸ್ಕೂಲನ್ನು ಜಿಲ್ಲಾ ಬೋರ್ಡ್ ವಹಿಸಿಕೊಳ್ಳುವಂತೆ ಮನವಿ ಸಲ್ಲಿಸಿದರು. 1953ರಲ್ಲಿ ಜಿಲ್ಲಾ ಬೋರ್ಡಿನ ಅನುಮತಿ ದೊರೆತಿದ್ದರಿಂದ ಅದು ಆರ್.ಇ.ಎ. ಜಿಲ್ಲಾ ಬೋರ್ಡ್ ಪ್ರೌಢಶಾಲೆಯೆಂದು ಪರಿವರ್ತಿತವಾಯಿತು. ನಂತರ ಕಟ್ಟಡ ನಿರ್ಮಾಣ ಭರದಿಂದ ಸಾಗಿತು. ಈಗ ಇರುವ ಸುಂದರ ಭವ್ಯ ಕಟ್ಟಡದ ನಿರ್ಮಾಣಕಾರ್ಯದಲ್ಲಿ ಶೆಟ್ರು ಸಿದ್ದಪ್ಪನವರ ಕೊಡುಗೆ ಅಪಾರ. ಇದರ ನಿರ್ಮಿತಿಗೆಂದು ಅವರು ತಮ್ಮ ಜಮೀನನ್ನು ಮಾರಿ ಹಣ ಹೊಂದಿಸಿದರು. ಅವರ ಮಕ್ಕಳಾದ ಶ್ರೀ ಮುರುಗೇಂದ್ರಪ್ಪನವರು ಮೇಲ್ವಿಚಾರಕರಾಗಿ ನಿಂತು ಕಟ್ಟಡವನ್ನು ಪೂರ್ಣಗೊಳಿಸಿದರು. ಮುಂದೆ ೧೯೬೨ರಲ್ಲಿ ತರೀಕೆರೆ ತಾಲ್ಲೂಕ್ ಬೋರ್ಡ್‌ನ ಆಡಳಿತಕ್ಕೆ ಒಳಪಟ್ಟಿತು.
ಹೀಗೆ ಅಜ್ಜಂಪುರದ ಪ್ರೌಢಶಾಲೆ ಇನ್ನೂ ಖಾಸಗಿ ಆಡಳಿತದಲ್ಲಿರುವಾಗ, ಶಾಲೆಗೆಂದು ದುಡಿದ ಶ್ರೀ ಎನ್. ಎಸ್. ಅನಂತರಾವ್ ಮತ್ತು ಅವರ ಸಹ ಅಧ್ಯಾಪಕ ವೃಂದದ ಕಾರ್ಯತತ್ಪರತೆ ಮೆಚ್ಚುವಂಥದು. 50ರ ದಶಕದಲ್ಲೇ ಎರೆಡೆರೆಡು ಪದವಿಗಳನ್ನು ಹೊಂದಿದ್ದ ಅನಂತರಾಯರಿಗೆ ಬೇರೆಡೆ ಕೈತುಂಬ ಸಂಬಳದ ಕೆಲಸ ಸಿಕ್ಕುತ್ತಿತ್ತೋ ಏನೋ !
ಅನಿಶ್ಚಿತ ನೆಲೆಯ ಹೊಸ ಖಾಸಗಿ ಶಾಲೆಯಲ್ಲಿ ತೊಡಗಿಸಿಕೊಂಡ ಅವರ ಸೇವೆಯನ್ನು ಸ್ಮರಿಸಬೇಕು. ಸರಳ, ಸಂಪನ್ನ, ಗಾಂಧೀವಾದಿ, ಖಾದೀಧಾರಿಯಾದ ಅನಂತರಾಯರ ನೇತೃತ್ವ ಪ್ರೋತ್ಸಾಹದಾಯಕವಾಗಿತ್ತು. ಅನೇಕ ಸ್ತಂಭಗಳ ಆಧಾರದಮೇಲೆ, ಸುಂದರವಾದ ಮುಂಚಾಚನ್ನು ಹೊಂದಿರುವ ಈ ಭವ್ಯ ಕಟ್ಟಡದ ಉದ್ಘಾಟನೆಯು ಸಿದ್ಧಗಂಗೆಯ ಸಂತ ಶ್ರೀ ಶಿವಕುಮಾರಸ್ವಾಮಿಗಳಿಂದ ನಡೆಯಿತು. ಶತಾಯುಷಿಗಳಾದ ಅವರು ಶಾಲೆಯು ಸ್ವರ್ಣ ಮಹೋತ್ಸವವನ್ನು ಆಚರಿಸುವಾಗಲೂ ಶುಭ ಸಂದೇಶ ಹಾರೈಸಿದ್ದು ವಿಶೇಷದ ಸಂಗತಿಯೇ ಸರಿ. ೧೯೭೧ರಿಂದ ಸರಕಾರದ ಆಶ್ರಯದಲ್ಲಿ ನಡೆಯುತ್ತಬಂದು ಅದೀಗ ಶೆಟ್ರು ಸಿದ್ದಪ್ಪ ಸರಕಾರೀ ಪದವೀ ಪೂರ್ವ ಕಾಲೇಜು ಆಗಿ, ತನ್ನ ಅಸ್ತಿತ್ವದ ಅರ್ಧ ಶತಮಾನವನ್ನು ಪೂರೈಸಿದೆ.
ಅಂದಿನ ಸಂಸ್ಥೆಯ ಆಡಳಿತವರ್ಗದಲ್ಲಿದ್ದವರಾರೂ ಈಗ ನಮ್ಮ ನಡುವೆ ಇಲ್ಲವಾದರೂ, ಆರ್.ಇ.ಎ.ದ ಆರಂಭಿಕ ವಿದ್ಯಾರ್ಥಿ, ಆಸಂದಿಯ ಕೃಷ್ಣಪ್ಪನವರನ್ನು ಶಾಲಾಸ್ವರ್ಣಮಹೋತ್ಸವದ ಸಂದರ್ಭದಲ್ಲಿ ಸಂಪರ್ಕಿಸಿದಾಗ ಒಂದು ಅಪೂರ್ವವಾದ ಮಾಹಿತಿಯನ್ನು ನೀಡಿದರು. ಹರಿಜನರ ಹುಡುಗಿ ಹನುಮಕ್ಕ ಎಂಬಾಕೆ ಅವರ ಸಹಪಾಠಿಯಾಗಿದ್ದರಂತೆ. ನಾವು ಕಂಡು, ಬಲ್ಲ ವ್ಯಕ್ತಿಗಳನ್ನು, ಪ್ರತಿಷ್ಠಿತರನ್ನು ನೆನೆಪಿಸಿಕೊಳ್ಳುತ್ತೇವೆ. ೪೦ರ ದಶಕಗಳಲ್ಲಿ ಓರ್ವ ಹರಿಜನ ವಿದ್ಯಾರ್ಥಿನಿ ಪ್ರೌಢಶಾಲೆಯವರೆಗೂ ತಲುಪಿದ್ದಳೆಂದರೆ ಅದೊಂದು ಸಾಧನೆಯೇ ಸರಿ. ಆಕೆಯಿನ್ನೂ ಇರಬಹುದು, ಆಕೆಯೂ ಸ್ವರ್ಣಮಹೋತ್ಸವದ ಶುಭಸಂದರ್ಭದಲ್ಲಿ ತನ್ನ ನೆನಪುಗಳನ್ನು ಕೆದಕಿ, ಹೆಕ್ಕಿ ಹೆಣೆದು ನಿಮ್ಮ ಮುಂದೆ ಇರಿಸುವಂತಾಗಿದ್ದರೆ ಅದು - ನಿಜಕ್ಕೂ ಸರಿದ ಕಾಲದ ನೈಜ ಅನುಭವವಾಗುವಂತೆ ಇರುತ್ತಿತ್ತು.
ಚಿತ್ರ ಕೃಪೆ : ಮಂಜುನಾಥ ಅಜ್ಜಂಪುರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ