19. ಕಲಾ ಸೇವಾ ಸಂಘ, ಅಜ್ಜಂಪುರ
ಕಲಾಮಾತೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಾಳೆ.

ಆದರೆ ಕೆಲವರನ್ನು ಮಾತ್ರ ಎತ್ತಿಕೊಳ್ಳುತ್ತಾಳೆ.   - ಅ.ನ.ಕೃ.

ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಅಂದು ಅನಕೃ ಹೇಳಿದ್ದ ಈ ಮಾತು ಒಂದು ಊರಿನ ಮಟ್ಟಿಗೆ ನಿಜವಾಗಿದ್ದರ ಉದಾಹರಣೆಯು ಅಜ್ಜಂಪುರಕ್ಕೆ ಸರಿಯಾಗಿ ಹೊಂದಿ ಕೊಳ್ಳುತ್ತದೆ. ಏಕೆಂದರೆ ೧೯೩೫ರ ಹಿಂದಕ್ಕೆ ನಮ್ಮೂರಿನಲ್ಲಿ ರಂಗಚಟುವಟಿಕೆಗಳು ನಡೆದ ದಾಖಲೆಗಳಿಲ್ಲ. ಹೇಳಿಕೊಳ್ಳುವಂತಹ ಕಲಾಭಿರುಚಿಯ ವಾತಾವರಣ ವಾಗಲೀ, ಅದಕ್ಕೆ ಪೂರಕವಾದ ಅವಕಾಶಗಳಾಗಲೀ ಇಲ್ಲದಿದ್ದ ಕಾಲವದು. ಆಗ ಊರು ಈಗಿರುವುದಕ್ಕಿಂತ ಚಿಕ್ಕದಾಗಿದ್ದುದೂ ಸ್ವಾಭಾವಿಕ. ಇಂಥ ಹಿನ್ನೆಲೆಯಲ್ಲಿ ಅಜ್ಜಂಪುರದ ಕಲಾ ಸೇವಾ ಸಂಘದ ಆರಂಭದ ದಿನಗಳಿಂದ ಹಿಡಿದು ಇಂದಿನವರೆಗೆ ಪ್ರತ್ಯಕ್ಷಸಾಕ್ಷಿಯಾಗಿದ್ದು, ಅದರ ಉನ್ನತಿಗೆ ದುಡಿದ ಅಜ್ಜಂಪುರದ ಹಿರಿಯ ವರ್ತಕ, ಕಲಾಭಿಮಾನಿ ಶ್ರೀ ಸತ್ಯನಾರಾಯಣ ಶೆಟ್ಟರ ನಿರೂಪಣೆ ಇಲ್ಲಿದೆ. ೯೧ ವರ್ಷಗಳ ಹಿರಿಯರಾದ ಅವರ ನೆನಪಿನ ಬುತ್ತಿಯಲ್ಲಿ ಊರಿಗೆ ಸಂಬಂಧಿಸಿದ ಹಲವಾರು ಸಂಗತಿಗಳಿವೆ. ತಾವು ಕಂಡ ಜನರು, ಭಾಗವಹಿಸಿದ ಕಾರ್ಯಕ್ರಮಗಳು, ಅವರ ನೆನಪಿನಲ್ಲಿ ಸಂಗ್ರಹಿತವಾಗಿವೆ. ಉತ್ತಮ ನಿರೂಪಕರಾಗಿರುವ ಅವರ ಸಂದರ್ಶನದ ಭಾಗವನ್ನು ಅವರದೇ ನುಡಿಯಲ್ಲಿ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಅವರ ಧ್ವನಿಯನ್ನು ಮುದ್ರಣಮಾಡಿ ಒದಗಿಸಿದ ಗೆಳೆಯ ರಮಾನಂದರಿಗೆ  ಕೃತಜ್ಞತೆಗಳು. 

 ಚಿತ್ರ-ಲೇಖನ : ಶಂಕರ ಅಜ್ಜಂಪುರ 

ಹೀಗೊಂದು ಸವಾಲು


೧೯೩೫ರ ಸುಮಾರಿನಲ್ಲಿ ಅಜ್ಜಂಪುರಕ್ಕೆ ಒಂದು ನಾಟಕ ಕಂಪೆನಿ ಬಂದಿತ್ತು.  ಕಿರಾಳಮ್ಮ ದೇವಾಲಯದ ಸಿಡಿ ಅಂಗಳದಲ್ಲಿ  ರಂಗಮಂದಿರವಿತ್ತು. ಅದರ ಮಾಲಿಕರು ಶ್ರೀ ಶಾಸ್ತ್ರಿ ಎನ್ನುವವರು. ಅವರು ನಾಟಕವನ್ನು ಆರಂಭಿಸಿದ ಮೊದಲ ದಿನವೇ ಪ್ರೇಕ್ಷಕರು ಇರಲಿಲ್ಲ. ಇದರಿಂದ ನಿರಾಶರಾದ ಅವರು "ಅಜ್ಜಂಪುರದಲ್ಲಿ ಜನರಿಗೆ ಕಲಾಭಿರುಚಿಯಿಲ್ಲ, ಇಲ್ಲಿ ಕಲೆಗೆ ಪ್ರೋತ್ಸಾಹವೇ ಇಲ್ಲ" ಎಂದು ನಿರಾಶೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದರಿಂದ ಅಲ್ಲಿಯೇ ಇದ್ದ ಸುಬ್ರಹ್ಮಣ್ಯ ಶೆಟ್ಟರಿಗೆ ತುಂಬ ಮುಜುಗರವಾಯಿತು. ಮಾರನೆಯ ದಿನ, ತಮ್ಮ ಗೆಳೆಯರ ಗುಂಪನ್ನು ಉದ್ದೇಶಿಸಿ, "ನಿನ್ನೆ ಶಾಸ್ತ್ರಿಗಳ ಅಭಿಪ್ರಾಯವನ್ನು ಕೇಳಿದರಲ್ಲವೆ? ಇದು ಊರಿನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಸಂಗತಿ. ಇದು ಹೀಗಾಗಬಾರದು. ನಾವೇ ಒಂದು ನಾಟಕವನ್ನು ಆಯ್ದುಕೊಂಡು ಅದರ ಪ್ರದರ್ಶನಗಳನ್ನು ಏರ್ಪಡಿಸ ಶಾಸ್ತ್ರಿಗಳಿಂದಲೇ ಶಹಭಾಸುಗಿರಿ ಪಡೆಯೋಣ" ಎಂದು ಹೇಳಿದರು. ಕಲಾಭಿರುಚಿಯಿದ್ದ ಅಜ್ಜಂಪುರದ ಜನರಿಗೆ ಆಗ ನಾಯಕತ್ವದ ಕೊರತೆಯಿತ್ತು. ಯಾರೂ ತಾವಾಗಿಯೇ ಮುಂದೆ ಬಂದು ಇಂಥ ಸಾಹಸಕ್ಕೆ ತೊಡಗುವ ಇರಾದೆಯಿರಲಿಲ್ಲ. ಮನ್ಮಥ ವಿಜಯವೆಂಬ ನಾಟಕವನ್ನು ಆಡುವ ಸಿದ್ಧತೆ ನಡೆಸಲಾಯಿತು. ಪೌರಾಣಿಕ ನಾಟಕದಲ್ಲಿ ಹಾಡುಗಳಿರಬೇಕಾದದ್ದು ಅತ್ಯವಶ್ಯಕ. ಆದರೆ ಅಜ್ಜಂಪುರದಲ್ಲಿ ರಂಗಮಂಚದ ಮೇಲೆ ಹಾಡುವಂಥ ಹಾಡುಗಾರರು ಯಾರೂ ಇರಲಿಲ್ಲ. ಹೀಗಾಗಿ ಶೆಟ್ಟರು ಬೆಂಗಳೂರಿನಿಂದ ರಾಮಯ್ಯ ಎಂಬುವವರನ್ನು ಕರೆಸಿದರು. ಅವರಿಗೆ ಊಟ, ವಸತಿಗಳನ್ನು ಏರ್ಪಡಿಸಿದರು. ಪಾತ್ರಗಳ ಹಂಚಿಕೆಯೂ ಆಯಿತು. ರಾಮಯ್ಯನವರಿಗೆ  ಮನ್ಮಥನ ಪಾತ್ರವೆಂದು ನಿರ್ಧರಿಸಿದರು. ಎ.ಪಿ. ನಾಗರಾಜ ಶೆಟ್ಟರೂ ಪಾತ್ರ ವಹಿಸಿದರು. ಶಾಸ್ತ್ರಿಗಳೊಂದಿಗೆ ಮಾತನಾಡಿ ನಾಟಕದ ದಿನಾಂಕವನ್ನು ನಿಶ್ಚಯಿಸಿದರು. ಹೀಗೆ ಅಜ್ಜಂಪುರದಲ್ಲಿ ಆಡಲಾದ ಪ್ರಪ್ರಥಮ ನಾಟಕ ಮನ್ಮಥ ವಿಜಯ. ಅಜ್ಜಂಪುರದವರು ಮಾಡುವ ಈ ನಾಟಕವನ್ನು ನೋಡುವ ಉತ್ಸಾಹದಿಂದ ಊರಿನ ಜನರು, ಸುತ್ತಮುತ್ತಲ ಗ್ರಾಮಸ್ಥರು ಸೇರಿದರು. ರಾಮಯ್ಯನವರ ಕಂಚಿನ ಕಂಠದಲ್ಲಿ ಮೂಡಿಬಂದ ಹಾಡುಗಳನ್ನು ಜನರು ಆನಂದಿಸಿದರು. ಅವರ ಧ್ವನಿಗೆ ಹಾರ್ಮೋನಿಯಂನ ಶ್ರುತಿ ಸಾಕಾಗುತ್ತಿರಲಿಲ್ಲ. ಹನುಮಯ್ಯನವರು ಶಂಬರಾಸುರನ ಪಾತ್ರವನ್ನು ಮಾಡಿದರು. ನಾನು ನಾರದನ ಪಾತ್ರದಲ್ಲಿ ಅಭಿನಯಿಸಿದೆ. ನಾಟಕ ನಾವು ನಿರೀಕ್ಷಿಸಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದದ್ದರಿಂದ ಶಾಸ್ತ್ರಿಗಳಿಗೆ ತುಂಬ ಸಂತೋಷವಾಯಿತು. ಗುಣಕ್ಕೆ ಮತ್ಸರವಿರದು. ಅವರು ಕಲಾವಿದರನ್ನು, ಆಯೋಜಕ ಸುಬ್ರಹ್ಮಣ್ಯ ಶೆಟ್ಟರನ್ನು ಮನಸಾರೆ ಹೊಗಳಿದರು. ಕಲಾವಿದರ ಸಾಧನೆಯನ್ನು ಮೆಚ್ಚಿದರು. 

ಸಂಘದ ಉದಯ

ತಮ್ಮ ಸಾಧನೆಗೆ ಮಾನ್ಯತೆ ದೊರೆತದ್ದರಿಂದ ಉತ್ಸಾಹಿತರಾದ ಶೆಟ್ಟರು ಗೆಳೆಯರ ಗುಂಪಿಗೆ "ನಾವೊಂದು ಸಂಘವನ್ನು ಕಟ್ಟೋಣ, ಅದರ ಹೆಸರು ಕಲಾ ಸೇವಾ ಸಂಘ ಎಂದಿರಲಿ" ಎಂದು ಸೂಚಿಸಿದರು. ಈ ಗುಂಪಿನಲ್ಲಿ ನಾನು, ಎ.ಪಿ. ನಾಗರಾಜ ಶೆಟ್ಟರು, ಪಿ. ವೆಂಕಟರಾಮಯ್ಯ, ಕೃಷ್ಣೋಜಿ ರಾವ್ ಚವಾಣ್, ಬಿ.ಎಂ. ಏಕೋರಾಮಸ್ವಾಮಿ, ಪಾಂಡುರಂಗ ರಾವ್, ಕೆ.ಜಿ. ವೀರಣ್ಣ ಮುಂತಾದವರಿದ್ದರು. ಆಗ ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅದು ರೇಷನ್ ಯುಗ. ಉತ್ತರ ಕರ್ನಾಟಕದಲ್ಲಿ ಈ ವಿಷಯದ ಬಗ್ಗೆ ಒಂದು ನಾಟಕ ಪ್ರಚಲಿತವಾಗಿತ್ತು. ಅದರ ಹೆಸರು ಬ್ಲಾಕ್ ಮಾರ್ಕೆಟ್. ಕಾಳಸಂತೆಯ ದಂಧೆಯನ್ನು ವಿಡಂಬನೆ ಮಾಡಿ ಬರೆದ ಅ ನಾಟಕ ತುಂಬಾ ಜನಪ್ರಿಯವಾಗಿತ್ತು. ಇದನ್ನೇ ಪ್ರದರ್ಶಿಸಬೇಕೆಂದು ನಿರ್ಧಾರವಾಯಿತು. ಹೀಗಾಗಿ  ಬ್ಲಾಕ್ ಮಾರ್ಕೆಟ್ ನಾಟಕವೇ ಕಲಾ ಸೇವಾ ಸಂಘದ ಚೊಚ್ಚಲ ನಾಟಕ. ಕೆ.ಜಿ. ವೀರಣ್ಣ ಪ್ರಧಾನ ಪಾತ್ರದಲ್ಲಿದ್ದರು, ರಾಮಸ್ವಾಮಿ ಶೆಟ್ಟರು ಒಂದು ಪಾತ್ರ ವಹಿಸಿದ್ದರು. ಹೆಚ್ಚಿನ ಕಲಾವಿದರ ಹೆಸರುಗಳು ಮರೆತಿವೆ. ರಂಗ ನಿರ್ದೇಶಕರಾಗಿ ಎ.ಪಿ. ನಾಗರಾಜ ಶೆಟ್ಟರು ದುಡಿದರು. ರೇಷನ್ ಕಾಲದ ಕಷ್ಟನಷ್ಟಗಳನ್ನು ಬಿಂಬಿಸಿದ ಈ ನಾಟಕ ಜನರ ಮನಸ್ಸಿಗೆ ತುಂಬ ಹತ್ತಿರವಾಗಿದ್ದರಿಂದ ಈ ನಾಟಕವೂ ಜನಪ್ರಿಯವಾಯಿತು. ಇದು ಅನೇಕ ಪ್ರದರ್ಶನಗಳನ್ನು ಕಂಡಿತು. ಮಾಸ್ಟರ್ ಹಿರಣ್ಣಯ್ಯನವರು ಲಂಚಾವತಾರ, ಭ್ರಷ್ಟಾಚಾರಗಳನ್ನು ಪ್ರದರ್ಶಿಸುವ ಮುನ್ನವೇ ನಡೆದ ಈ ಪ್ರಯತ್ನಕ್ಕೆ ಯಶ ಸಿಕ್ಕಿತು. ಕೃಷ್ಣೋಜಿ ರಾವ್ ಚವಾಣರಿಗೆ ನಾಟಕದ ಹಿನ್ನೆಲೆಯಿತ್ತು. ಅವರ ದೊಡ್ಡಪ್ಪ ಯಕ್ಷಗಾನ ಕಲಾವಿದರು. ಮುಂದೆ 20-25 ನಾಟಕಗಳನ್ನು ಪ್ರದರ್ಶಿದ ನೆನಪು. ಈ ಎಲ್ಲ ಚಟುವಟಿಕೆಗಳೂ ಪೇಟೆ ಬೀದಿಯಲ್ಲಿದ್ದ ವೀರಣ್ಣಾಚಾರ್ ಎಂಬುವವರ ದೊಡ್ಡ ಮನೆಯ ಆಟ್ಟದ ಮೇಲೆ ಈ ನಾಟಕಗಳು ಪ್ರದರ್ಶನಗೊಂಡವು. ಪಕ್ಕದಲ್ಲೇ ಇದ್ದ ರಾಮ ಮಂದಿರದ ಆವರಣದಲ್ಲೂ ನಡೆಯಿತು.

ರಂಗಮಂದಿರದ ನಿರ್ಮಾಣ 
ಮುಂದೆ ನಾಟಕದ ಯಶಸ್ಸು ಅಜ್ಜಂಪುರದಲ್ಲಿ ಕಲಾಭಿರುಚಿ ಬೆಳೆಯಲು ತುಂಬ ನೆರವಾಯಿತು. ಕೃಷ್ಣೋಜಿ ರಾವ್ ಚವಾಣರ ಮನೆಯ ಪಕ್ಕದಲ್ಲಿ ಒಂದು ಖಾಲಿ ನಿವೇಶನವಿತ್ತು. ಅಲ್ಲಿ ರಂಗಮಂದಿರ ನಿರ್ಮಿಸುವ ಆಲೋಚನೆ ಗುಂಪಿನ ಸದಸ್ಯರಿಗೆ ಬಂದಿತು. ಅವರೆಲ್ಲರೂ ಯಾವ ಸಂಭಾವನೆಯನ್ನೂ ಅಪೇಕ್ಷಿಸಿದೇ ಸ್ವಯಂಸೇವಕರಾಗಿ ಭಾಗವಹಿಸಿ ತಮ್ಮ ಸೇವೆಯನ್ನು ಸಲ್ಲಿಸಿದರು. ಅಡಿಕೆ ದಬ್ಬೆ, ತೆಂಗಿನಗರಿಗಳ ನಾಟಕದ ಥಿಯೇಟರ್ ಸ್ವಲ್ಪಕಾಲದಲ್ಲೇ ಸಿದ್ಧವಾಯಿತು. ನಾಟಕಕ್ಕೆ ಪರದೆಗಳು ಬೇಕಾಯಿತು. ಸಮೀಪದ ರಾಮಗಿರಿಯಲ್ಲಿ ಬಾಡಿಗೆಗೆ ದೊರೆಯುತ್ತಿದ್ದ ಪರದೆಗಳನ್ನು ತಂದು ನಾಟಕ ಆಡಲಾಯಿತು. ವಿದ್ಯುಚ್ಛಕ್ತಿ ಇರದ ಆ ಕಾಲದಲ್ಲಿ ಗ್ಯಾಸ್ ಲೈಟ್‌ನ್ನು ಬಳಸಿ ಬೆಳಕಿನ ವ್ಯವಸ್ಥೆಮಾಡಿಕೊಳ್ಳಲಾಯಿತು. ಪಾತ್ರಧಾರಿಗಳು ತಮ್ಮ ದೊಡ್ಡ ಧ್ವನಿಯಿಂದಲೇ ಪ್ರೇಕ್ಷಕರನ್ನು ತಲುಪಬೇಕಾಗುತ್ತಿತ್ತು. ಕೋಟೆಯಲ್ಲಿದ್ದ ಎಚ್.ವಿ. ರಾಮಸ್ವಾಮಿಗಳು ಮತ್ತು ಸೀತಾರಾಮ ಭಟ್ಟರು ತುಂಬ ಚಟುವಟಿಕೆಯ ಮತ್ತು ಪ್ರಾಮಾಣಿಕ ವ್ಯಕ್ತಿಗಳಾಗಿದ್ದರು. ಇವರೀರ್ವರೂ ಕಾರ್ಯಕ್ರಮಗಳ ಆಯೋಜನೆ, ಲೆಕ್ಕ ಪತ್ರಗಳ ನಿರ್ವಹಣೆ ಮಾಡುತ್ತಿದ್ದರು.  ಜಾತಿಮತಗಳ ಪ್ರಶ್ನೆ ಅಲ್ಲಿ ಸುಳಿಯುತ್ತಿರಲಿಲ್ಲ. ಮಳೆಗಾಲದಲ್ಲಿ ಥಿಯೇಟರ್ ಕುಸಿದು ಬೀಳುತಿತ್ತು. ಮಳೆಗಾಲದ ನಂತರ ಅದನ್ನು ದುರಸ್ತಿ ಪಡಿಸಿ ನಾಟಕ ಮಾಡಬೇಕಾಗುತ್ತಿತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರದ ಯೋಚನೆ ಬಂದಾಗ 1945ರ ಸುಮಾರಿನಲ್ಲಿ ಹೊಸ ರಂಗಮಂದಿರವನ್ನು ನಿರ್ಮಿಸಲು ಸಂಘ ಮುಂದಾಯಿತು. ಈಗ ಕಲಾ ಸೇವಾ ಸಂಘ ವಿರುವ ಜಾಗದಲ್ಲಿ ಕೋಟೆಯ ಅಗಳು ಇತ್ತು. ಅದು ಸುಮಾರು 20 ಅಡಿಗಳ ಆಳದ ತಗ್ಗು. ಈ ಗುಂಡಿಯನ್ನ ಮುಚ್ಚಿ ಅಲ್ಲಿ ರಂಗಮಂದಿರ ನಿರ್ಮಿಸುವ ಪ್ರಸ್ತಾಪವನ್ನು ಕೃಷ್ಣೋಜಿರಾಯರು ಮುಂದಿಟ್ಟರು. ಆಗೆಲ್ಲ ದಿನಗೂಲಿದರಗಳು ಹೆಣ್ಣಾಳಿಗೆ ೫೦ ಪೈಸೆ, ಗಂಡಾಳಿಗೆ 75 ಪೈಸೆಗಳಷ್ಟಿತ್ತು. ತೇಗದ ಮರಕ್ಕೆ 1 ಅಡಿಗೆ 7 ರೂಪಾಯಿಗಳು, ತಗಡಿಗೆ ಏಳೂವರೆ ರೂಪಾಯಿಗಳು ಇದ್ದ ಕಾಲವದು. ಸಿಮೆಂಟಿನ ಬೆಲೆ ಆರೇಳು ರೂಪಾಯಿಗಳಷ್ಟಿತ್ತು. ರಾಮಸ್ವಾಮಿಗಳು ಗುತ್ತಿಗೆದಾರರು. ಅವರ ನೇತೃತ್ವದಲ್ಲಿ ಕಟ್ಟಡದ ನಿರ್ಮಾಣವೂ ಆಯಿತು. ಆಗ ನಿರ್ಮಿಸಿದ್ದು ಕೇವಲ ರಂಗಮಂದಿರ ಮಾತ್ರ. ಪ್ರೇಕ್ಷಕರ ಸಲುವಾಗಿ ತೆಂಗಿನಗರಿಯ ಚಾವಣಿ ಇರುತ್ತಿತ್ತು. 

ಅಂದಿನ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರಪಾಟೀಲರ ಸಮ್ಮುಖದಲ್ಲಿ ಒಂದು ನಾಟಕವನ್ನು ಪ್ರದರ್ಶಿಸಿದೆವು. ಸ್ವತಃ ಕಲಾರಸಿಕರಾಗಿದ್ದ  ಪಾಟೀಲರು 25,000 ರೂಪಾಯಿಗಳ ಸಹಾಯಧನ ನೀಡಿದರು. ಇದರಿಂದ ಪ್ರೇಕ್ಷಕರಿಗಾಗಿ ವಿಶಾಲವಾದ ಅಂಗಣ, ಆಸನದ ವ್ಯವಸ್ಥೆಗಳನ್ನು ಮಾಡಲಾಯಿತು. 


ಜಗಜ್ಯೋತಿ ಬಸವೇಶ್ವರ

ನಾಟಕಗಳ ಪ್ರದರ್ಶನದಿಂದ ಹಣಕಾಸು ಪರಿಸ್ಥಿತಿ ಸುಧಾರಿಸಿತ್ತು. ಆಗ ಬಸವೇಶ್ವರ ನಾಟಕವನ್ನು ಮಾಡುವ ಯೋಜನೆ ತಯಾರಾಯಿತು. ಆಗ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಅಪ್ರತಿಮ ನಾಟಕರಚನಕಾರರಾಗಿದ್ದರು. ಅವರ ಅನೇಕ ನಾಟಕಗಳನ್ನು ಗುಬ್ಬಿವೀರಣ್ಣನವರ ತಂಡ ಪ್ರದರ್ಶಿಸುತ್ತಿತ್ತು. ಅವರು ಮಹಾತ್ಮಾ ಬಸವೇಶ್ವರ ಎಂಬ ನಾಟಕವನ್ನು ಮುದ್ರಿಸಿದ್ದರು. ಅಜ್ಜಂಪುರ ಹಾಗೂ ಸುತ್ತಮುತ್ತಲಲ್ಲಿ ವೀರಶೈವರ ಸಂಖ್ಯೆ ಹೆಚ್ಚಿರುವುದರಿಂದ ಈ ನಾಟಕವು ಹೆಚ್ಚು ಜನರನ್ನು ತಲುಪುತ್ತದೆಯೆಂಬ ಆಶಯದಿಂದ ಆ ನಾಟಕವನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡಿಕೊಳ್ಳಲಾಯಿತು. ನಾವು ಈ ನಾಟಕದ ಹೆಸರನ್ನು ಜಗಜ್ಯೋತಿ ಬಸವೇಶ್ವರ ಎಂದು ಬದಲಾಯಿಸಿದೆವು. ಈ ನಾಟಕದಲ್ಲಿ ವಚನಗಳ ಬಳಕೆ ಅಗತ್ಯವಿತ್ತು. ವಚನಗಳನ್ನು ಕರ್ನಾಟಕಿ ರಾಗಗಳಿಗಿಂತ ಹಿಂದೂಸ್ತಾನಿ ರಾಗಗಳಲ್ಲಿ ಹಾಡಿದರೆ ಹೆಚ್ಚು ಶೋಭೆಯಿರುತ್ತದೆಯೆಂದು ಆಲೋಚಿಸಿ, ಶಾಲಾ ಶಿಕ್ಷಕರಾಗಿದ್ದ, ಮತ್ತು ಸಂಗೀತ ಜ್ಞಾನವೂ ಇದ್ದ ಗಿರಿಯಾಪುರದ ಜಿ.ಸಿ. ಸಿದ್ದಪ್ಪ ಎನ್ನುವವರನ್ನು ಪ್ರಧಾನ ಪಾತ್ರಕ್ಕೆ ಆರಿಸಲಾಯಿತು. ಈ ನಾಟಕದಲ್ಲಿ ೨೫ ಪಾತ್ರಗಳಿದ್ದವು. ಬಸವೇಶ್ವರರೇ ಹೆಚ್ಚು ವಚನಗಳನ್ನು ಪ್ರಸ್ತುತಪಡಿಸಬೇಕಿತ್ತು. ಅದಕ್ಕೆ ಹಾರ್ಮೋನಿಯಂ ವಾದಕರು ಇರಲಿಲ್ಲ. ಆಗ ನಾನು ಅಭ್ಯಾಸ  ಮಾಡಿಕೊಳ್ಳುವುದು ಅನಿವಾರ್ಯವಾಯಿತು. ಉತ್ತಮ ದೇಹಧಾರ್ಡ್ಯ, ಧ್ವನಿಗಳನ್ನು ಹೊಂದಿದ್ದ ಕೆ.ಜಿ. ವೀರಣ್ಣ ಬಿಜ್ಜಳನ ಪಾತ್ರ ಮಾಡಿದರು. ಕೃಷ್ಣೋಜಿ ಮಧುವರಸನ ಪಾತ್ರ ಮಾಡಿದರು. ಪಿ. ವೆಂಕಟರಾಮಯ್ಯ ಉತ್ತಮ ನಟ, ದಿಗ್ದರ್ಶಕ ಹಾಗೂ ನಾಟಕ ರಚನಕಾರರಾಗಿದ್ದರು. ಅವರು ಹರಳಯ್ಯನೆಂಬ ಅಂತ್ಯಜನ ಪಾತ್ರ ಮಾಡಿದರು. ಈ ಪ್ರಸ್ತಾಪ ಏಕೆಂದರೆ, ಜಾತಿಪದ್ಧತಿ ಅಂದು ಬಲವಾಗಿತ್ತು. ಈ ಪಾತ್ರವನ್ನು ಮಾಡಲು ಯಾರೂ ಮುಂದೆ ಬರಲಿಲ್ಲ. ಅವರು ಜಾತಿಯಲ್ಲಿ ಬ್ರಾಹ್ಮಣರಾಗಿದ್ದರೂ,  ಹರಳಯ್ಯನ ಪಾತ್ರ ವಹಿಸಲು ಹಿಂದೆಮುಂದೆ ನೋಡಲಿಲ್ಲ. ಉತ್ತಮ ಅಭಿನಯ ನೀಡಿದರು. ಹರಳಯ್ಯನ ಪತ್ನಿ ಕಲ್ಯಾಣಿಯ ಪಾತ್ರ ಮಾಡಲು ಸ್ತ್ರೀಯರಾರೂ ಮುಂದೆ ಬರುತ್ತಿರಲಿಲ್ಲ. ಹೀಗಾಗಿ ಗಂಡಸರೇ ಪಾತ್ರ ಮಾಡುತ್ತಿದ್ದರು. ಈ ನಾಟಕ ೧೩೦ ಪ್ರಯೋಗಗಳನ್ನು ಅಜ್ಜಂಪುರದಲ್ಲಿ ಕಂಡಿದ್ದು ದಾಖಲೆಯ ಇತಿಹಾಸ. ಪ್ರಸಾಧನ ಮಾಡಲು ಕೃಷ್ಣೋಜಿ ಇರುತ್ತಿದ್ದರು. ರಾಮಗಿರಿಯಿಂದ ಪ್ರಸಾಧನ ಸಾಮಗ್ರಿಗಳು ಬರುತ್ತಿದ್ದವು. ಈ ವೇಳೆಗೆ ವಿದ್ಯುತ್ ಬಂದಿತ್ತು. ಅಜ್ಜಂಪುರಕ್ಕೆ ಬಂದಿದ್ದ ಗುಬ್ಬಿ ಕಂಪೆನಿಯ ಕಲಾವಿದರು ನಾಟಕದ ಪರದೆಗಳನ್ನು ರಚಿಸಿದರು. ಅನುಭವ ಮಂಟಪ, ಬಸವಣ್ಣನವರು ಐಕ್ಯವಾದ ಸ್ಥಳಗಳ ಸುಂದರ ಚಿತ್ರಗಳನ್ನು ಅವರು ತಯಾರಿಸಿಕೊಟ್ಟರು. ಅಂದಿನವರೆಗೂ ಅಜ್ಜಂಪುರದ ಜನತೆಗೆ ಪರಿಪೂರ್ಣ ರಂಗಮಂದಿರದ ಕಲ್ಪನೆ, ಬಸವಣ್ಣನವರ ಜೀವನ ಚರಿತ್ರೆ ತಿಳಿದಿರಲಿಲ್ಲವಾದ್ದರಿಂದ, ನಮ್ಮ ಪ್ರಯೋಗಗಳನ್ನು ಬೆಂಬಲಿಸಿ ಸಂತೋಷಪಟ್ಟರು. ಜಿ.ಸಿ. ಸಿದ್ಧಪ್ಪ,  ೪೫ ಪ್ರಯೋಗಗಳಲ್ಲಿ ಭಾಗವಹಿಸಿದರು. ಮುಂದೆ ಅವರು ಅನಿವಾರ್ಯ ಕಾರಣಗಳಿಂದ ಹಿಂದೆ ಸರಿದಾಗ ರಾಮಶೆಟ್ಟರು ಬಿಜ್ಜಳನ ಪಾತ್ರಮಾಡಲು ಮುಂದೆ ಬಂದರು. ಅವರಿಗೆ ಪಾತ್ರದ ಚೆನ್ನಾದ ಪರಿಚಯವಿತ್ತು. ಹೀಗಾಗಿ ಅವರು ಸರಾಗವಾಗಿ ಅಭಿನಯಿಸಿದರು.

ದಿಗ್ಗಜರ ಆಗಮನ

ನಾಟಕದ ಜತೆ ಜತೆಗೇ ಸಾಹಿತ್ಯ ರಂಗದ ದಿಗ್ಗಜರನ್ನು ಜನರಿಗೆ ಪರಿಚಯಿಸುವ ಉತ್ಸಾಹ ಬಂದಿತು. ನಾಡಿನ ಹೆಸರಾಂತ ಸಾಹಿತಿಗಳು, ನಟರು ಅಜ್ಜಂಪುರಕ್ಕೆ ಬಂದರು.  ಡಾ. ಶಿವರಾಮ ಕಾರಂತ, ಬೀಚಿ, ಕೆ. ಎಸ್. ಧರಣೇಂದ್ರಯ್ಯ, ಚಲನಚಿತ್ರ ನಟರಾದ ಡಾ. ರಾಜಕುಮಾರ್, ಉದಯಕುಮಾರ್, ನರಸಿಂಹರಾಜು, ಹರಿಣಿ, ಶೈಲಶ್ರೀ, ಎಂ.ಪಿ. ಶಂಕರ್, ಬಾಳಪ್ಪ ಹುಕ್ಕೇರಿ, ಗುಬ್ಬಿವೀರಣ್ಣನವರು ಮಾಸ್ಟರ್ ಹಿರಣ್ಣಯ್ಯ  ಮುಂತಾಗಿ ಗಣ್ಯ ನಟ-ನಟಿಯರು ಬಂದು ನಾಟಕಗಳನ್ನು ನೋಡಿ ಹರಸಿದರು. 

ವೀರೇಂದ್ರ ಹೆಗ್ಗಡೆಯವರು ರಂಗ ಮಂದಿರದ ಪ್ರಾರಂಭೋತ್ಸವವನ್ನು ನೆರವೇರಿಸಿದರು. ಅಜ್ಜಂಪುರದ ಸುತ್ತ ಮುತ್ತ ರಂಗ ಚಟುವಟಿಕೆಗಳು ಆಗ ಇರಲಿಲ್ಲವಾದ್ದರಿಂದ ಇಲ್ಲಿನ ಕಲಾ ತಂಡ ಹೆಸರುವಾಸಿಯಾಯಿತು. ಅಂದಿನ ಸರಕಾರ ಈ ಸಂಘದ ಬಗ್ಗೆ ಶಾಲಾ ಪಠ್ಯ ಪುಸ್ತಕದಲ್ಲಿ ಒಂದು ಪಾಠವನ್ನು ಸೇರಿಸಿತು. ಹಂಸಭಾವಿ ಎಂಬ ಉತ್ತರ ಕರ್ನಾಟಕದ ಊರಿನಲ್ಲಿ ನಾಟಕ ಮಾಡಲು ಆಹ್ವಾನ ಬಂದಿತು. ಬೆರಳ್ಗೆ ಕೊರಳ್ ನಾಟಕ ಹಳೆಗನ್ನಡದ್ದು ಅದನ್ನು ಮಾಡಿದೆವು. ಕೆ. ರಾಮಚಂದ್ರ ಎಂಬುವವರು ಅಭಿನಯಿಸಿ ರಾಜ್ಯ ಪ್ರಶಸ್ತಿ ಗಳಿಸಿದರು. ಭರತನ ಭ್ರಾತೃಪ್ರೇಮವೆಂಬ ನಾಟಕವನ್ನು ನಾನೇ ರಚಿಸಿದೆ. ಮರಾಠಾ ಯುವಕ ಕೃಷ್ಣೋಜಿ ರಾಮನ ಪಾತ್ರ ವಹಿಸಿದ್ದರು. ಡಾ. ರಾಜಕುಮಾರ್‌ರನ್ನು ಆಹ್ವಾನಿಸಿದೆವು. ಅವರು ಬಂದುದರಿಂದ ಹೆಚ್ಚಿನ ಜನ ಸೇರಿದ್ದರು. ಪೊಲೀಸರ ಪ್ರವೇಶ ಅನಿವಾರ್ಯವಾಯಿತು. ಡಾ. ರಾಜಕುಮಾರರು ಕಲಾವಿದರನ್ನು, ಸಂಘವನ್ನು ಮುಕ್ತಕಂಠದಿಂದ ಹೊಗಳಿದರು. ರಾಮನ ದರ್ಶನ ಮಾಡಿಸಿದಿರಿ ಎಂದು ಕೃಷ್ಣೋಜಿಯವರನ್ನು ಅಭಿನಂದಿಸಿದರು. ಮುಂದೆ ಉದಯಕುಮಾರ್ ನಮ್ಮ ಕಲಾವಿದರೊಡನೆ ಎಚ್ಚಮ ನಾಯಕ ನಾಟಕ ಪ್ರದರ್ಶಿಸಿದರು. 

ರಾಜ್ಯಮಟ್ಟದ ನಾಟಕ ಸ್ಪರ್ಧೆ

ಈ ಎಲ್ಲ ಪ್ರೋತ್ಸಾಹದಿಂದಾಗಿ ಒಂದು ವಾರದ ಕಾಲ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳನ್ನು ಏರ್ಪಡಿಸುವ ವಿಚಾರ ಬಂದಿತು. ಈ ವೇಳೆಗೆ ರಂಗಮಂದಿರದಲ್ಲಿ ಎಲ್ಲ ಪರಿಕರಗಳೂ ಸಿದ್ಧವಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ನಾಟಕ ತಂಡಗಳು ಬರುವಂತಾಯಿತು. ದಿನಕ್ಕೆ 2-3 ನಾಟಕಗಳ ಪ್ರದರ್ಶನವಿರುತ್ತಿತ್ತು. ಕಲಾವಿದರಾಗಿ ರೂಪುಗೊಂಡ ನಮ್ಮ ತಂಡದ ನುರಿತ ನಟರು, ಕಾರ್ಯಕರ್ತರು ತೀರ್ಪುಗಾರರಾದರು. ಈ ಚಟುವಟಿಕೆಗಳು 8-10 ವರ್ಷಗಳ ಕಾಲ ತುಂಬ ಚೆನ್ನಾಗಿ ನಡೆಯಿತು. 

ಸಾಧನೆಯ ಹಿನ್ನೋಟ 

60-70ರ ದಶಕದ ನಂತರ ಸಂಘದ ಚಟುವಟಿಕೆಗಳಲ್ಲಿ ಹಿನ್ನೆಡೆ ಕಾಣಲಾರಂಭಿಸಿತು. ಅದಕ್ಕೆ ಬದಲಾದ ಮನರಂಜನಾ ಮಾಧ್ಯಮಗಳೂ ಕಾರಣವೆನ್ನಬಹುದು. ಸಿನೆಮಾ ಆರಂಭವಾದ ಮೇಲೆ ಎಲ್ಲೆಡೆ ನಡೆದಂತೆ ನಾಟಕ ಹಿಂದೆ ಸರಿಯುವುದು ಅನಿವಾರ್ಯವಾಯಿತು. ಈ ವೇಳೆಗೆ ನಮಗೂ ವಯಸ್ಸಾಗಿದ್ದರಿಂದ ಸಕ್ರಿಯವಾಗಿ ಭಾಗವಹಿಸುವುದು ಕಷ್ಟವಾಗತೊಡಗಿತು. ಕೃಷ್ಣೋಜಿ ರಾಜಕೀಯ ಪ್ರವೇಶ ಮಾಡಿದರು. ಆದರೂ ಈ ಸಾಧನೆ ನಮಗೆ ಸಮಾಧಾನ ತಂದಿತ್ತು. ಏಕೆಂದರೆ ಆಗಿದ್ದ 19 ಜಿಲ್ಲೆಗಳಲ್ಲಿ ಅಜ್ಜಂಪುರವನ್ನು ಹೊರತುಪಡಿಸಿದರೆ ಬೇರೆಲ್ಲಿಯೂ ರಂಗಮಂದಿರವೆನ್ನುವುದು ಇರಲಿಲ್ಲ. ಕಲಾಶ್ರೀ ರಂಗಮಂದಿರ 1500 ಜನರನ್ನು ಸೇರಿಸಬಹುದಾದ ದೊಡ್ಡ ರಂಗಮಂಟಪ. ಅಲ್ಲಿ ಗುಬ್ಬಿ ವೀರಣ್ಣನವರು, ಚಿಂದೋಡಿ ವೀರಪ್ಪ, ಲೀಲಾ ಮುಂತಾದ ಉತ್ತರ ಕರ್ನಾಟಕದ ಹಲವಾರು ವೃತ್ತಿ ರಂಗ ಸಂಸ್ಥೆಗಳು ನಾಟಕ ಪ್ರದರ್ಶನ ಮಾಡುವಂತೆ ಸಾಧ್ಯವಾಗಿದ್ದು ನಮಗೆ ತೃಪ್ತಿ ತಂದಿತ್ತು. ರಂಗಚಟುವಟಿಕೆಯೆಂದರೆ ಏನೆಂದು ತಿಳಿಯದ ಊರಿನಲ್ಲಿ ಕಲಾಭಿರುಚಿಯನ್ನು ಮೂಡಿಸಿದ್ದರ ಪರಿಣಾಮವೆಂದರೆ, ಜನರು ನಾಟಕಗಳನ್ನು ಆಸ್ವಾದಿಸುವ, ವಿಮರ್ಶಿಸುವ ಶಕ್ತಿಯನ್ನು ಪಡೆದರು. ಕಲಾವಿದರನ್ನು ಪೋಷಿಸಿದರು. ಕಲಾ ಸೇವಾ ಸಂಘದ ಮತ್ತೊಂದು ಸಾಧನೆಯೆಂದರೆ, ಗಣಪತಿ ವಾರ್ಷಿಕ ಉತ್ಸವವನ್ನು ನಡೆಸಿದೆವು. ಇದು ೫-೬ ವರ್ಷಗಳ ಕಾಲ ನಡೆಯಿತು. ಮತ್ತೊಂದು ಹೆಜ್ಜೆಯಾಗಿ ಕಲಾ ಸೇವಾ ಸಂಘ ಬಾಲಿಕಾ ಪ್ರೌಢಶಾಲೆಯನ್ನು ಸ್ಥಾಪನೆಯಾಯಿತು. ಇದಕ್ಕೆ ಮುರುಘಾ ಮಠದ ಸ್ವಾಮಿಗಳ ಆಶೀರ್ವಾದ ದೊರೆಯಿತು. ಕಾಂಗ್ರೆಸ್ಸಿನ ಧುರೀಣರಾದ ಊರಿನವರೇ ಆದ ಪಾಂಡುರಂಗಪ್ಪನವರ ಪುತ್ರರಾದ ಪುಟ್ಟರಂಗಪ್ಪ ನವರು ಉನ್ನತ ಹುದ್ದೆಯಲ್ಲಿದ್ದರು. ಅವರ ತಂದೆಯವರ ಹೆಸರಿನಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲಾಯಿತು. ಪ್ರಗತಿ ಎಲ್ಲ ಕಾಲಕ್ಕೂ ಮುನ್ನಡೆಯದೇ ಇರಬಹುದು. ಆದರೆ ಈ ಸಂಸ್ಥೆ ಅಜ್ಜಂಪುರದಲ್ಲಿ ಮಾಡಿದ ಸಾಧನೆ ಅಪಾರ. ಅದರ ಕುರುಹುಗಳಾಗಿ, ರಂಗಮಂದಿರ ಮತ್ತು ಬಾಲಿಕಾ ಪ್ರೌಢಶಾಲೆಗಳು ನಮ್ಮ ಕಣ್ಣಮುಂದಿವೆ. 

* * * * * * *


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ