21. ಕತ್ತೆ ಕವಾಡಸೌದೆ ಸಂಕಟಕ್ಕೊಂದು ಪರಿಹಾರ ! 

ಈಗ ಎಂಥ ಕುಗ್ರಾಮದಲ್ಲೂ ಅಡಿಗೆ ಅನಿಲ ದೊರೆಯುತ್ತಿದೆ, ವಿದ್ಯುತ್ ಶಕ್ತಿಯಿದೆ. ಈ ಹಂತ ತಲುಪುವ ವೇಳೆಗೆ ಉರುವಲಿಗೆಂದು ನಮ್ಮ ಹಿರಿಯರು ಪಡುತ್ತಿದ್ದ ಕಷ್ಟ-ತೊಂದರೆಗಳನ್ನು ಗಮನಿಸಿದರೆ ನಾವಿಂದು ಸುಖವಾಗಿ ಇದ್ದೇವೆ ಎನ್ನಬೇಕು. ನಾಲ್ಕಾರು ದಶಕಗಳ ಹಿಂದೆ ಇಂಧನಕ್ಕೆಂದು ಜನರು ಸೌದೆಯನ್ನು ಬಳಸುವುದು ಅನಿವಾರ್ಯವಾಗಿತ್ತು. ಹಾಗೆ ಅಂದು ಕಾಡನ್ನು ಕಡಿದು ನೆಲಸಮ ಮಾಡಿದ ಪರಿಣಾಮವೇ ಇಂದು ಪರ್ಯಾಯ ವ್ಯವಸ್ಥೆಗಳು ಬರಲು ಕಾರಣವಾಯಿತು. ಬದಲಾವಣೆ ಸ್ವಾಭಾವಿಕ. ಅದನ್ನು ತಡೆಯಲು ಯಾರಿಂದಲೂ ಆಗದು ಎನ್ನುವುದು ಬೇರೆ ಮಾತು. 

ಅಜ್ಜಂಪುರದಲ್ಲಿ ೬೦ರ ದಶಕದ ಸುಮಾರಿಗೇ ಸೌದೆಯ ಅಭಾವ ಕಾಣಿಸಿಕೊಂಡಿತ್ತು. ಸೌದೆಯ ಸಗಟು ವ್ಯಾಪಾರ ಮಾಡಲಾಗದ ಬಡಜನ, ರಸ್ತೆಗಳ ಬದಿಗಳಲ್ಲಿ ಇರುತ್ತಿದ್ದ ಸಾಲುಮರಗಳಿಂದ ಉರುವಲನ್ನು ಹೊಂದಿಸಿಕೊಳ್ಳುತ್ತಿದ್ದರು. ಅಜ್ಜಂಪುರದ ಅಮೃತಮಹಲ್ ಫಾರಂನ ರಸ್ತೆಯಲ್ಲಿ ಹುಣಸೆ, ಆಲ, ಅತ್ತಿಯ ಮರಗಳನ್ನು ಉದ್ದಕ್ಕೂ ನೆಟ್ಟು ಬೆಳೆಸಲಾಗಿತ್ತು. ೫೦-೬೦ರ ವಯಸ್ಸಿನ ಆ ಹೆಮ್ಮರಗಳ ಮುರಿದ ರೆಂಬೆ-ಕೊಂಬೆಗಳು ಬಡಜನರ ಅಗತ್ಯಗಳನ್ನು ಪೂರೈಸುತ್ತಿದ್ದವು. ಕಾಲ ಬದಲಾದಂತೆ ಜನಸಂಖ್ಯೆ ಹೆಚ್ಚಾದಂತೆ ಅದೇ ಮರಗಳ ಕಾಂಡಗಳನ್ನು ನಿಧಾನವಾಗಿ ಕೆತ್ತಿ ತೆಗೆಯುವ ಕಾಯಕ ಆರಂಭವಾಯಿತು. ಸ್ವಾಭಾವಿಕವಾಗಿ ಒಣಗಿಹೋದ ಮರಗಳು ಮರೆಯಾಗಿ ಹೋದವು.  ಅಜ್ಜಂಪುರ ಭೌಗೋಳಿಕವಾಗಿ ಬಯಲು ಸೀಮೆಗೆ ಸೇರಿದ ಪ್ರದೇಶ. ಇಂಧನದ ಸಮಸ್ಯೆ ಅಲ್ಲಿ ಯಾವ ಕಾಲದಿಂದಲೂ ಇದ್ದದ್ದೇ. ಹಣ್ಣೆಗುಡ್ಡ, ಚನ್ನಗಿರಿ, ಬುಕ್ಕಾಂಬುಧಿ ಮುಂತಾದ ಸಮೀಪದ ಪ್ರದೇಶಗಳಿಂದ ಕಟ್ಟಿಗೆಯನ್ನು ತಂದು ಮಾರುತ್ತಿದ್ದರು.  ಎತ್ತಿನ ಗಾಡಿಗಳಲ್ಲಿ ಸೌದೆಯನ್ನು ಹೇರಿಕೊಂಡು ಬಂದು ಈಗ ಲೈನ್ ಮನೆಗಳಿರುವ ಸಮೀಪ ನಿಲ್ಲಿಸುತ್ತಿದ್ದರು. ಆ ಮನೆಗಳ ಉದ್ದಕ್ಕೂ ಸೌದೆಗಾಡಿಗಳ ಸಾಲನ್ನು ಕಾಣಬಹುದಿತ್ತು. ಅವುಗಳ ವ್ಯಾಪಾರವೇನಿದ್ದರೂ ನಸುಕು ಹರಿಯುವ ಮೊದಲೇ ನಡೆಯಬೇಕಿತ್ತು. ಅರಣ್ಯಾಧಿಕಾರಿಗಳ ಅನುಮತಿ ಪಡೆದೋ, ಪಡೆಯದೇ ಅವರ ಕೈ ಬಿಸಿ ಮಾಡಿಯೋ ಕಟ್ಟಿಗೆಯ ಮಾರಾಟ ನಡೆಯುತ್ತಿತ್ತು. ಅವುಗಳ ವ್ಯಾಪಾರ ವೈಖರಿ ಮತ್ತು ಗಾಡಿಗಳಲ್ಲಿ ಇರುವ ಸೌದೆಯ ಪ್ರಮಾಣ ಮತ್ತು ಗುಣಮಟ್ಟವನ್ನು ನಮ್ಮ ಹಿರಿಯರು ನಿರ್ಧರಿಸುತ್ತಿದ್ದ ವಿಧಾನಗಳು ಸ್ವಾರಸ್ಯಕರವಾಗಿರುತ್ತಿದ್ದವು. ಸೌದೆ ವ್ಯಾಪಾರಿಗಳು ಬೆಳಗಿನ ಜಾವ ನಾಲ್ಕುಗಂಟೆಗೆ ತಮ್ಮ ಸ್ಥಳ ತಲುಪಿರುತ್ತಿದ್ದರು. ಸೌದೆ ಗಾಡಿಯು ಇಂಥ ದಿನ ಹೆಚ್ಚಾಗಿ ಬರುತ್ತದೆಯೆಂದು ಮುಂದಾಗಿಯೇ ಊಹಿಸಿದ ಜನ, ಕಂಬಳಿ, ಕೌದಿಗಳನ್ನು ಹೊದ್ದುಕೊಂಡು ಗಾಡಿಗಳ ಸುತ್ತಲೂ ಒಮ್ಮೆ ಗಿರಕಿ ಹೊಡೆದು ಬಂದು, ಕಣ್ಣಂದಾಜಿನಲ್ಲೇ ಯಾವ ಗಾಡಿಯಲ್ಲಿ ಹೆಚ್ಚು ಸೌದೆ ತುಂಬಿದ್ದಾರೆ ಎಂದು ನಿರ್ಧರಿಸುತ್ತಿದ್ದರು. ಏಕೆಂದರೆ ವ್ಯಾಪಾರಿಗಳು ಅಂಕುಡೊಂಕಾದ ಮರದ ಕೊಂಬೆಗಳುನ್ನು ನಡುವೆ ಹುದುಗಿಸಿ, ಅಕ್ಕಪಕ್ಕಗಳಲ್ಲಿ ನೇರವಾದ ಕೊಂಬೆಗಳನ್ನು ತುಂಬಿಸಿ ಗಾಡಿಯು ಭರ್ತಿಯಾಗಿದೆಯೆಂದು ತೋರುವಂತೆ ಮಾಡಿರುತ್ತಿದ್ದರು. ಅದು ವ್ಯಾಪಾರದ ಹಿಕ್ಮತ್ತು. ಅದು ವ್ಯಾಪಾರಿ, ಗ್ರಾಹಕರೀರ್ವರಿಗೂ ತಿಳಿದಿರುತ್ತಿತ್ತು. ಹೀಗೆ ಗಾಡಿಯಲ್ಲಿರುವ ನೇರವಾದ ಸೌದೆಗಳನ್ನು ಕಡಿಯುತ್ತಿರಲಿಲ್ಲ. ಮರಗಳ ಎಂದು ಕರೆಯಲಾಗುತ್ತಿದ್ದ ಅವನ್ನು ಕೈಬಾಚಿಯಿಂದ ಅವುಗಳ ಮೇಲ್ಮೈಯನ್ನು ಹೆರೆದು ತೆಗೆದು, ಮನೆಗಳಲ್ಲಿ ಹಾಳಾಗಿಹೋಗಿರುತ್ತಿದ್ದ ಬೊಂಬುಗಳ ಬದಲಾಗಿ ಅಲ್ಲಲ್ಲಿ ಕೂಡಿಸುತ್ತಿದ್ದರು. ಇದರಿಂದಾಗಿ ಮಾಡು ಇನ್ನಷ್ಟು ಕಾಲ ಭದ್ರವಾಗಿರಲಿ ಎನ್ನುವುದು ಉದ್ದೇಶ. ಮುಂದೆ ೭೦ರ ದಶಕದ ಸುಮಾರಿಗೆ ಸೌದೆ ಗಾಡಿಗಳ ವ್ಯಾಪಾರ ಹೆಚ್ಚುಕಡಿಮೆ ನಿಂತೇ ಹೋಯಿತು. 

ಆದರೂ ಸೌದೆಯ ಅಗತ್ಯವಂತೂ ಇದ್ದಿತಲ್ಲ. ಆಗ ಸ್ವಲ್ಪ ಕಾಲ ಅಜ್ಜಂಪುರದ ಇಂಧನದ ಸಮಸ್ಯೆಯನ್ನು ನೀಗಿಸಿದ್ದು ಪರ್ವತರಾಯನ ಕೆರೆಯ ಅಂಗಳದಲ್ಲಿ ಬಹುಕಾಲದಿಂದ ಬೆಳೆದು ನಿಂತಿದ್ದ ನಾಲ್ಕಾರು ಮೀಟರ್ ಎತ್ತರವಿದ್ದ ಬಳ್ಳಾರಿ ಜಾಲಿ ಮರಗಳು. ಕೆರೆಯ ಪುನರ್ ನವೀಕರಣ ಕಾರ್ಯ ಆರಂಭವಾಯಿತು. ಆಗ ಕೆರೆಯಂಗಳದಲ್ಲಿ ಎಕರೆಗಟ್ಟಲೆ ಹಬ್ಬಿ ಬೆಳೆದಿದ್ದ ಜಾಲಿಯ ಮರಗಳನ್ನು ಕೆಡವಲಾಯಿತು. ಅದರಿಂದ ಎತ್ತಿನಗಾಡಿಯ ಗುಂಬಗಳನ್ನು ತಯಾರಿಸಲಾಗುತ್ತಿತ್ತು. ಇನ್ನಿತರ ಕೆಲಸಕಾರ್ಯಗಳಿಗೂ ಅವು ಒದಗಿಬಂದವು. ಗಟ್ಟಿಯಾದ, ಉತ್ತಮ ಶಾಖ ಒದಗಿಸುವ ಈ ಮರದ ಚಕ್ಕೆಗಳ ಬಳಕೆ ಸ್ವಲ್ಪಕಾಲ ನಡೆಯಿತು. ಆಶ್ಚರ್ಯವೆಂದರೆ ಆಧುನಿಕ ಯಂತ್ರಸಾಧನಗಳಿಲ್ಲದೆ, ಕೇವಲ ಮಾನವ ಶಕ್ತಿಯನ್ನು ಬಳಸಿ ಅದಿಷ್ಟೂ ಮರಗಳನ್ನು ಕತ್ತರಿಸಿ, ಸಂಸ್ಕರಣೆಗೊಳಿಸಿ, ವಿವಿಧ ಉಪಯೋಗಗಳಿಗೆ ಬಳಸಲಾಯಿತು.  ಕತ್ತೆ ಕವಾಡವು ಅಜ್ಜಂಪುರದಲ್ಲಿ ಜನಪ್ರಿಯವಾಗುವ ವೇಳೆಗೆ ಸುತ್ತಮುತ್ತಲಿನ ಕಾಡುಗಳು ಬರಿದಾಗಿದ್ದವು. ಇಂದಿನ ತಲೆಮಾರಿಗೆ ತಿಳಿಯದಿರಬಹುದಾದ, ಹಿಂದಿನವರು ಮರೆತಿರಬಹುದಾದ ಈ ಪದ ಅಜ್ಜಂಪುರದ ಸುತ್ತಮುತ್ತ ಚಾಲ್ತಿಯಲ್ಲಿತ್ತು. ಹಿಂದೆ ಗಾಡಿಗಳಲ್ಲಿ ಮರಗಳ ಕಾಂಡಗಳ ಭಾಗಗಳು ಮಾತ್ರವೇ ಬರುತ್ತಿತ್ತು. ಅವೆಲ್ಲ ಬರಿದಾದ ಮೇಲೆ ಕುರುಚಲು ಗಿಡಗಳ, ಪೊದೆಗಳ ರೆಂಬೆಗಳನ್ನು ಸೌದೆಯಾಕೃತಿಯಲ್ಲಿ ಕತ್ತರಿಸಿ ಕತ್ತೆಗಳ ಮೇಲೆ ಹೇರಿಕೊಂಡು ಬಂದು ಮನೆಬಾಗಿಲಿಗೆ ಒದಗಿಸುತ್ತಿದ್ದ ಪದ್ಧತಿಯದು. ಬೆಳಿಗ್ಗೆ ಆರುಗಂಟೆಗೂ ಮೊದಲು ಕತ್ತೆಗಳ ಮೆರವಣಿಗೆಯು ತುಂಬೇ ಹಳ್ಳ, ಅತ್ತಿಮೊಗ್ಗೆ ಗ್ರಾಮಗಳ ಮಾರ್ಗವಾಗಿ ಹಣ್ಣೇಗುಡ್ಡವನ್ನು ತಲುಪುತ್ತಿತ್ತು. ಈ ಹಣ್ಣೇ ಗುಡ್ಡವೂ ಅಜ್ಜಂಪುರದ ನಕಾಶೆಯಲ್ಲಿ ಒಂದು ಸ್ಥಾನ ಪಡೆದಿದೆ. ಅದರ ವಿಷಯವನ್ನು ಮುಂದೆಂದಾದರೂ ಬರೆಯುವೆ. ಈ ಗುಡ್ಡದಲ್ಲಿ ಬೆಳೆದಿರುತ್ತಿದ್ದ ಆರೆಂಟು ಅಡಿಗಳ ಗಿಡಗಂಟಿಗಳನ್ನು ಸವರಿ ಸೌದೆಯನ್ನು ಒಟ್ಟುಗೂಡಿಸುತ್ತಿದ್ದರು. ಅವುಗಳ ಕಾಂಡದ ಮಧ್ಯಭಾಗವೇ ಸೌದೆಯೆಂದು ಹೇಳಬಹುದಾದ ಸರಕು. ಮಿಕ್ಕೆಲ್ಲವೂ ರೆಂಬೆಗಳು ಮಾತ್ರವೇ. ಅವುಗಳನ್ನು ಒಂದೂವರೆ ಅಡಿಯ ಉದ್ದಕ್ಕೆ ಕತ್ತರಿಸಿ, ಹಗ್ಗಗಳಿಂದ ಕಟ್ಟಿ ಕತ್ತೆಗಳ ಬೆನ್ನಮೇಲೆ ಸರಿಯಾಗಿ ಎರಡು ಭಾಗವಿರುವಂತೆ ವಿಂಗಡಿಸಿ ಹೇರುತ್ತಿದ್ದರು. ಉಳಿದ ಮಧ್ಯಭಾಗದಲ್ಲಿ ದಪ್ಪನೆಯ ಕೊರಡುಗಳನ್ನು ಇಡುತ್ತಿದ್ದರು. ಅವುಗಳನ್ನು ಯಾರೂ ಕೊಳ್ಳದಿದ್ದರೆ ಮಾತ್ರ ಕವಾಡಿಗರು ತಮ್ಮ ಮನೆಯ ಬಳಕೆಗೆಂದು ಇಟ್ಟುಕೊಳ್ಳುತ್ತಿದ್ದರು. ಮಧ್ಯದ ಕೊರಡುಗಳು ಬೇಕಿದ್ದರೆ ಹೆಚ್ಚು ಬೆಲೆ ನೀಡಬೇಕಾಗುತ್ತಿತ್ತು. ಸೌದೆಯ ಹೊರೆಯನ್ನು ಹೊತ್ತು ಕಡಿಮೆಯೆಂದರೆ ೧೫-೨೦ ಕಿ.ಮೀ.ಗಳನ್ನು ದಿನವೂ ಕ್ರಮಿಸಬೇಕಿದ್ದ ಕತ್ತೆಗಳ ಹಿಂಭಾಗದಿಂದ ಕೆಲವೊಮ್ಮೆ ರಕ್ತ ಸೋರುತ್ತಿತ್ತು. ಹಗುರವಾದ ಒಣಮರದ ತಾಳಿಕೆ ಎಷ್ಟಿದ್ದೀತು. ಪ್ರತಿ ವಾರಕ್ಕೊಮ್ಮೆಯಾದರೂ ಕತ್ತೆ ಕವಾಡದ ಸೌದೆ ವ್ಯಾಪಾರ ಪ್ರತಿ ಮನೆಗಳಲ್ಲಿ ನಡೆಯುತ್ತಿತ್ತು.

ಇದು ಎಲ್ಲ ಊರುಗಳಲ್ಲೂ ಹೀಗೇ ನಡೆದಿರಬಹುದು. ಪ್ರಾಕೃತಿಕವಾಗಿ ಧಾರಾಳವಾಗಿ ದೊರೆಯುತ್ತಿದ್ದ ಮೂಲಭೂತ ಅಗತ್ಯಗಳಾದ ನೀರು, ಉರುವಲುಗಳು, ಹೆಚ್ಚಿದ ಬಳಕೆಯಿಂದ ದಿನಕ್ರಮೇಣ ಕುಸಿಯುತ್ತ ಬಂದು, ಗ್ರಾಮೀಣ ಪ್ರದೇಶಗಳಲ್ಲಿ ಬದುಕು ಭಾರವಾಗುತ್ತ ನಡೆದ ಪರಿಯೇ ಇಲ್ಲಿ ಗಮನಿಸಬೇಕಾದ ಸಂಗತಿ. ಇಂಥ ಪ್ರದೇಶದಿಂದ ಅರುವತ್ತರ ದಶಕದಲ್ಲಿ ಬೆಂಗಳೂರಿಗೆ ಬಂದ ನನಗೆ ಬೆಂಗಳೂರಿನಲ್ಲಿ ಮಿತ್ರನಿಗೆ "ಇಂದೇಕೆ ಊಟ ತಂದಿಲ್ಲ" ಎಂದು ಕೇಳಿದ್ದಕ್ಕೆ ಆತ ಮನೆಯಲ್ಲಿ ಸೀಮೆಯೆಣ್ಣೆಯಿಲ್ಲ" ಎಂದು ಉತ್ತರಿಸಿದಾಗ ಆಶ್ಟರ್ಯವಾಗಿತ್ತು. ಅಡಿಗೆಗೆ ಬೇರೆ ಎಣ್ಣೆಗಳು ಬೇಕು, ಸೀಮೆಯೆಣ್ಣೆಯೇಕೆ ಬೇಕು ಎಂದು ಆಗ ತಿಳಿದಿರಲಿಲ್ಲ. ಬೆಂಗಳೂರಿನಲ್ಲಿ ಸೌದೆ ಬಳಸಿ ಅಡಿಗೆ ಮಾಡುವ ಪದ್ಧತಿ ಎಂದೋ ಮಾಯವಾಗಿತ್ತು ಎಂದು ಅರಿವಾಗುವುದರ ಜತೆಗೆ ಜೀವನದ ಸಂಕೀರ್ಣತೆಯೂ ನಿಧಾನವಾಗಿ ಅರ್ಥವಾಗತೊಡಗಿತ್ತು !.


ಚಿತ್ರ ಕೃಪೆ : ಇಂಟರ್ನೆಟ್  * * * * * * * 

ಕಾಮೆಂಟ್‌ಗಳು

 1. ಆತ್ಮೀಯರೇ, ನೀವು ಬರೆದಿರುವುದೆಲ್ಲ ಸರಿಯಾಗಿಯೇ ಉಳಿದಿದೆ. ಇದಕ್ಕೆ ಪೂರಕವಾಗಿ ನನ್ನ ಕೆಲವು ಅನಿಸಿಕೆಗಳು.ಅಜ್ಜಂಪುರ ಮತ್ತು ಸುತ್ತಮುತ್ತಲಿನವರಿಗೆ ಈ ಕೆಲಸದ ಮೇಲು ಕೀಳು ಗೊತ್ತೇ ಇರಲಿಲ್ಲ. ಇದು ಸೌದೆ ಸರಬರಾಜಿಗೂ ಅನ್ವಯವಾಗುತ್ತಿತ್ತು.ಕೇವಲ ಎರಡು ಉದಾಹರಣೆಗಳು.1) ನಾನು ಅಜ್ಜಂಪುರದಲ್ಲಿ ಇದ್ದಾಗ, ಮದುವೆಯಾದ ಹೊಸದರಲ್ಲಿ ನಮ್ಮ ಮನೆಗೆ ಹಳ್ಳಿಯಿಂದ ಎತ್ತಿನ ಗಾಡಿಮೇಲೆ ಸೌದೆ ತಂದು, ಕೊಡಲಿಯಿಂದ ಒಡೆದು , ಅಟ್ಟದ ಮೇಲೆ ಜೋಡಿಸಿ ಶಾಲೆಯ ಶುಲ್ಕ ತುಂಬಿ ಓದಿದ ಹುಡುಗನೊಬ್ಬ ಇಂದು ಬೆಂಗಳೂರಿನ್ನಿ ಕೋಟ್ಯಧೀಶ.ನಾನು ಬೆಂಗಳೂರಿಗೆ ಬಂದಾಗ ಅಗತ್ಯ ಎಮದಾದರೆ ಅವನನ್ನು ನಿಮಗೆ ಪರಿಚಯಿಸುತ್ತೇನೆ. 2) ನಾನು ಅಲ್ಲಿದ್ದ ಕಾಲದಲ್ಲಿ ಕೊನೆಗೆ ಈ ಕತ್ತೆ ಸೌದೆಗಳೂ ಮಾಯವಾಗಿ,ಎಳನೀರ ಸಿಪ್ಪೆಗಳು ಸೌದೆಗೆ ಪ್ರತಿಸ್ಪರ್ಧೆಗಳಾದವು.ನನಗೆ ಎಂಥ ಪಾಠವಾಯಿತೆಂದರೆ ನಾನು ಪ್ರೌಢಶಾಲೆಯ ಮುಖ್ಯಶಿಕ್ಷಕನಾಗಿದ್ದಾಗಲೂ ಅಜ್ಜಂಪುರದ ಮುಖ್ಯಬಸ್ ನಿಲ್ದಾಣದಿಂದ ( ನಾವೆಲ್ಲ ಪ್ರೀತಿಯಿಂದ ಅಜ್ಜಂಪುರದ 'ಮೆಜಸ್ಟಿಕ್'ಎನ್ನುತ್ತಿದ್ದೆವು) ಎಳನೀರ ಸಿಪ್ಪೆಗಳನ್ನು ತಲೆಮೇಲೆ ಹೊತ್ತು ಮನೆಗೆ ತರುತ್ತಿದ್ದೆ,ಕೂಲಿಯವರ ಕೂಲಿ ದುಬಾರಿಯೆಂದು ಮತ್ತು ಕೆಲಸದಲ್ಲಿ ಮೇಲು ಕೀಳು ಇರಬಾರದೆಂದು.ಹೀಗೆ ಅಜ್ಜಂಪುರದ ಸೌದೆ ಬಗ್ಗೆ ಒಂದು ಇತಿಹಾಸವನ್ನೇ ಬರೆಯಬಲ್ಲೆ.ನನ್ನ ನೆನಪನ್ನು ಹೇಳಲು ಅವಕಾಶಮಾಡಿಕೊಟ್ಟ ನಿಮಗೆ ಧನ್ಯವಾದಗಳು.
  - GT Sreedhara Sharma

  ಪ್ರತ್ಯುತ್ತರಅಳಿಸಿ
 2. ಸೌದೆ ಬಗ್ಗೆ ಒಂದು ಹಾಸ್ಯ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ಸುಮಾರು ನಾಲ್ಕು ದಶಕಗಳ ಹಿಂದೆ, ನಮ್ಮ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣಕ್ಕೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರೊಬ್ಬರು ಬ್ಯಾಂಕ್ ಸೇವೆಯ ನಿಮಿತ್ತ ವರ್ಗವಾಗಿ ಬಂದರು . ಆಗೆಲ್ಲಾ ಗ್ಯಾಸ್ - ವಿದ್ಯುತ್ ಒಲೆ ಏನೂ ಇರಲಿಲ್ಲ. ಅಳೊಬ್ಬನಿಗೆ "ಸೌದೆ ತಾರಯ್ಯಾ", ಎಂದರು. ಆತ "ಬೆಳಿಗ್ಗೆ ಒಂದು ಕತ್ತೆ ತರ್ತೀನಿ" ಎಂದ. ಅವರು ಮತ್ತೊಮ್ಮೆ "ಸೌದೆ ಬೇಕು, ಸೌದೆ ತಾರಯ್ಯಾ ",ಎಂದರು. ಆತ "ಸರಿ ಸ್ವಾಮಿ, ಬೆಳಿಗ್ಗೆ ಒಂದು ಕತ್ತೆ ತರ್ತೀನಿ" ಎಂದ. ಅವರು ಮತ್ತೆ "ಕತ್ತೆ ಬೇಡ, ಸೌದೆ ಬೇಕು' ಎಂದರು. ಆತ ಅದನ್ನೇ ಹೇಳಿದ.
  ಒಬ್ಬರು ಹೇಳಿದ್ದು ಮತ್ತೊಬ್ಬರಿಗೆ ಅರ್ಥವಾಗಲಿಲ್ಲ. ಕತ್ತೆಗೂ ಸೌದೆಗೂ ಏನು ಸಂಬಂಧ ಎಂದು ಅವರಿಗೆ ಆಶ್ಚರ್ಯ.
  ಈ ಸಂಭಾಷಣೆ ಕೇಳಿದ ಬೇರೊಬ್ಬರು ಬಂದು ಇಬ್ಬರಿಗೂ ಸಮಸ್ಯಾ ಪರಿಹಾರ ಮಾಡಿದರು. ತಮಾಷೆಯೆಂದರೆ ಸದರಿ ಬ್ಯಾಂಕಿನವರ ಊರಿನ ಕಡೆ ಕತ್ತೆಗಳೇ ಇರಲಿಲ್ಲವಂತೆ ಮತ್ತು ಕತ್ತೆ ಮೇಲೆ ಸೌದೆ ಹೇರಿಕೊಂಡು ಬರುವ ವಿಷಯ ಅವರು ಕೇಳಿಯೇ ಇರಲಿಲ್ಲವಂತೆ.
  ಕತ್ತೆ ಹೇರು, ಎತ್ತಿನ ಗಾಡಿ ಸೌದೆ, ತಲೆ ಹೊರೆ ಸೌದೆ ಇತ್ಯಾದಿ ನೋಡಿಯೇ ಬೆಳೆದ ನಮಗೆ ಈ ಪ್ರಸಂಗ ಕೇಳಿ ನಗುವೋ ನಗು.
  ಈಗ ಬಿಡಿ, ಇವೆಲ್ಲಾ ಕಾಲಕೋಶಕ್ಕೆ ಸೇರಿಹೋಗಿವೆ.

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ