24. ಶ್ರೀ ಅಜ್ಜಂಪುರ ಲಕ್ಷ್ಮಣಶಾಸ್ತ್ರಿ ಸುಬ್ರಹ್ಮಣ್ಯ ಶಾಸ್ತ್ರಿಗಳು




ಶ್ರೀ ಅ.ಲ.ಸು. ಶಾಸ್ತ್ರಿ ದಂಪತಿಗಳು 

ಶ್ರೀ ಶಾಸ್ತ್ರಿಗಳ ಜತೆ ಸಂದರ್ಶನ 

ನಮ್ಮೊಡನಿರುವ ಅಜ್ಜಂಪುರದ ಅತ್ಯಂತ ಹಿರಿಯರೆಂದರೆ ಬಹುಶಃ ಶ್ರೀ ಅಜ್ಜಂಪುರ ಲಕ್ಷ್ಮಣಶಾಸ್ತ್ರಿ ಸುಬ್ರಹ್ಮಣ್ಯ ಶಾಸ್ತ್ರಿಗಳು. ಅಗಸ್ಟ್ ೧೦, ೧೯೧೯ರಲ್ಲಿ ಜನಿಸಿದ ೯೪ರ ಹರೆಯದ ಶಾಸ್ತ್ರಿಗಳು ಮೂಲತಃ ಅಜ್ಜಂಪುರದವರೆನ್ನುವುದು ಇಂದಿನ ತಲೆಮಾರಿಗೆ ತಿಳಿಯದಿರುವ ಸಂಗತಿ. ನಾನು ಅವರನ್ನು ಹಿಂದೊಮ್ಮೆ ನೋಡಿದ್ದೆ ಮತ್ತು ಅವರ ಬಗ್ಗೆ ಕೇಳಿದ್ದೆನಾದರೂ, ಅವರ ಸಾಧನೆಯ ಹಲವು ಮುಖಗಳ ಪರಿಚಯವಿರಲಿಲ್ಲ.  ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಈ ವಿದ್ವಾಂಸರನ್ನು ಪರಿಚಯಿಸುವ ಉದ್ದೇಶದಿಂದ ಅವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ತಂದೆಯನ್ನು ಕುರಿತಾದ ಮಾಹಿತಿಗಳನ್ನು ನೀಡಿದರು. ಇದಲ್ಲದೆ ನಾನು ಇತ್ತೀಚೆಗೆ ಕಡೂರಿಗೆ ತೆರಳಿ ಶಾಸ್ತ್ರಿಗಳನ್ನು ಸಂದರ್ಶಿಸಿದೆ.  ಅದನ್ನಿಲ್ಲಿ ಪ್ರಕಟಿಸಿರುವೆ.


ಶ್ರೀ ಅಳಸಿಂಗ ಪ್ರಶಸ್ತಿ 
ಶಾಸ್ತ್ರಿಗಳು ತಮ್ಮ ಬಾಲ್ಯವನ್ನು ಮಚ್ಚೇರಿಯ ಸಮೀಪದ ವಗ್ಗನಹಳ್ಳಿ ಎಂಬಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಕಡೂರಿನ ಸರಕಾರೀ ಶಾಲೆಯಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದರು. ಅಂದಿನ ದಿನಗಳಲ್ಲಿ ವೇದಜ್ಞಾನಕ್ಕೆ ತುಂಬ ಮಹತ್ವವಿತ್ತು. ವೇದವಿದರಾದ ಜನರೂ ಹೆಚ್ಚಿದ್ದ ವಾತಾವರಣದಲ್ಲಿ ವೇದಪಾಠವನ್ನು ಬೇಲೂರಿನಲ್ಲಿ ಸತತ ಏಳು ವರ್ಷಗಳ ಕಾಲ ಅಧ್ಯಯನ ನಡೆಸಿದರು. ನಂತರ ೧ ವರ್ಷ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಒಂದು ವರ್ಷ ಸಂಸ್ಕೃತದ ಕ್ರಮಬದ್ಧ ಅಧ್ಯಯನ ಮುಗಿಸಿ, ಬೆಂಗಳೂರಿನ ಚಾಮರಾಜ ಸಂಸ್ಕೃತ ವಿದ್ಯಾಲಯದಲ್ಲಿ ಏಳು ವರ್ಷಗಳ ಕಾಲ ಮಹಾಮಹೋಪಾಧ್ಯಾಯ ಶ್ರೀ ರಂಗನಾಥ ಶರ್ಮರಲ್ಲಿ ಸಿದ್ಧಾಂತ ಕೌಮುದಿ ಹಾಗೂ ಕಾವ್ಯಪಾಠ  ಹಾಗೂ  ಪಾಲಘಾಟ್  ನಾರಾಯಣ  ಶಾಸ್ತ್ರಿಗಳಲ್ಲಿ  ವ್ಯಾಕರಣವನ್ನು ವಿದ್ವತ್  ಮಟ್ಟದಲ್ಲಿ  ಅಧ್ಯಯನ     ಡೆಸಿದರು. ಆ ದಿನಗಳಲ್ಲಿ ಸಂಸ್ಕೃತವಿದರು ಜ್ಯೋತಿಷ್ಯದಲ್ಲೂ ಪರಿಣತರಾಗಬೇಕಾದ ಅವಶ್ಯಕತೆಯಿತ್ತು. ಹೀಗಾಗಿ ಸುಬ್ರಹ್ಮಣ್ಯಶಾಸ್ತ್ರಿಗಳು ಕುಂಭಕೋಣಕ್ಕೆ ತೆರಳಿ, ಅಲ್ಲಿನ ಪ್ರಸಿದ್ಧ ವಿದ್ವಾಂಸ ದಂಡಪಾಣಿ ದೀಕ್ಷಿತರಲ್ಲಿ ಮಹಾಭಾಷ್ಯ ವ್ಯಾಕರಣ ಮತ್ತು ಉನ್ನತ ಜ್ಯೋತಿಷದ ಬಗ್ಗೆ ಜ್ಞಾನ ಸಂಪಾದಿಸಿದರು. ೧೯೮೮ರಲ್ಲಿ ಋಕ್ಸಂಹಿತಾ ಯಾಗದ ನೇತೃತ್ವವನ್ನು ವಹಿಸಿದ್ದರು.

ವೃತ್ತಿ ಜೀವನಕ್ಕೆ ಬಂದಾಗ ಅವರು ಬೆಂಗಳೂರಿನ ಕರಣಿಕರ ಪಾಠಶಾಲೆಯಲ್ಲಿ ನಾಲ್ಕು ವರ್ಷ ವ್ಯಾಕರಣ, ಧರ್ಮಶಾಸ್ತ್ರ ಮತ್ತು ಕನ್ನಡ ಸಾಹಿತ್ಯಗಳನ್ನು ಬೋಧಿಸಿದರು. ಕಡೂರಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಗೂ ಶಿಕಾರಿಪುರಗಳಲ್ಲಿ ಮೂವತ್ತು ವರ್ಷಗಳ ಕಾಲ  ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಸಂಸ್ಕೃತ ಭಾಷೆಯ ಬಗ್ಗೆ ಅಪಾರ ಅಭಿಮಾನ ಮತ್ತು ಗೌರವಾದರಗಳನ್ನು ಹೊಂದಿರುವ ಶಾಸ್ತ್ರಿಗಳು ಶೃಂಗೇರಿಯ ಶಾರದಾ ಪೀಠ ಸ್ಥಾಪಿಸಿದ ಸುರ ಸರಸ್ವತೀ ಸಭಾದ ಪ್ರಚಾರ ಕಾರ್ಯದಲ್ಲಿ ಒಂದು ದಶಕದ ಕಾಲ  ತಮ್ಮನ್ನು ತೊಡಗಿಸಿಕೊಂಡರು. ಬೆಂಗಳೂರು, ಧಾರವಾಡ ಮತ್ತು ಭದ್ರಾವತಿ ಆಕಾಶವಾಣಿ ನಿಲಯಗಳಿಂದ "ಚಿಂತನ" ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಮಾಜಿ ಅಧ್ಯಕ್ಷ
 ಶ್ರೀ ಬಿ.ಏನ್.ವಿ. ಸುಬ್ರಹ್ಮಣ್ಯರಿಂದಸನ್ಮಾನ  
ದೇವಾಲಯಗಳು ನಮ್ಮ ಜನರ ಶ್ರದ್ಧಾಕೇಂದ್ರಗಳು. ಅನೇಕ ಪುರಾತನ ಮಂದಿರಗಳು ನಶಿಸುತ್ತಿವೆ. ಅವುಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಆಸಕ್ತಿ ತಳೆದ ಶಾಸ್ತ್ರಿಗಳು ಚಿಕ್ಕಮಗಳೂರು ಜಿಲ್ಲೆಯ ಕೂದುವಳ್ಳಿ ಗ್ರಾಮದ ಶಿವ ಮಂದಿರ, ಎಮ್ಮೆದೊಡ್ಡಿಯ ಶಿವಮಂದಿರ ಮತ್ತು ಕಡೂರಿನ ಶಿವ ದೇವಾಲಯ ಹಾಗೂ ಹಾರೇಕೊಪ್ಪದ ಹನುಮಾನ್ ದೇವಾಲಯಗಳ ಜೀರ್ಣೋದ್ಧಾರವನ್ನು ಕೈಗೊಂಡರು. ಅವರು ಕೈಗೊಂಡ ಸೇವೆಯನ್ನು ಸಮಾಜವೂ ಗುರುತಿಸಿದೆ. ಕೂಡಲೀ ಶೃಂಗೇರಿ ಮಠ, ಬಾಳೆಹೊನ್ನೂರಿನ ರಂಭಾಪುರಿ ಮಠ, ಸಂಡೂರಿನ ಮಹಾರಾಜರು, ಹಾಸನ ಬ್ರಾಹ್ಮಣ ಸಭಾ ಹಾಗೂ ಅಳಸಿಂಗಾಚಾರ್ಯ ವೇದಿಕೆಗಳು ಶಾಸ್ತ್ರಿಗಳನ್ನು ಸನ್ಮಾನಿಸಿವೆ.

ಶಾಸ್ತ್ರಿಗಳ ಸಂಗ್ರಹದಲ್ಲಿರುವ ಹೊಯ್ಸಳ

 ಬಲ್ಲಾಳ ಕಾಲದ ತಾಮ್ರ ಶಾಸನ 
ಸುಬ್ರಹ್ಮಣ್ಯ ಶಾಸ್ತ್ರಿಗಳು ವೇದಧ್ಯಾಯಿಗಳಲ್ಲದೆ, ಪುರಾತನ ಇತಿಹಾಸದಲ್ಲೂ ಆಸಕ್ತರು. ಹೀಗಾಗಿ ತಮ್ಮ ಊರಿನ ಸಮೀಪದ ದೇವಾಲಯಗಳ ಇತಿಹಾಸ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕಡೂರಿನ ಸಮೀಪವಿರುವ ಮಲ್ಲೇಶ್ವರ ಗ್ರಾಮದ ಸ್ವರ್ಣಾಂಬಾ ದೇವಾಲಯ, ಸಖರಾಯಪಟ್ಟಣ ಶಕುನಿ ರಂಗನಾಥ ದೇವಾಲಯ ಹಾಗೂ ಕೊರಟೀಕೆರೆಯ ರಂಗನಾಥ ದೇವಾಲಯಗಳ ಇತಿಹಾಸವನ್ನು ಅವರು ರಚಿಸಿದ್ದಾರೆ. ಯತಿಗಳು, ಮಠಾಧೀಶರು ಬಂದಾಗ ಅವರನ್ನು ಸ್ವಾಗತಿಸಲು ಹಿಂದೆ ಪದ್ಯರಚನೆಯ ಮೂಲಕ ಅವರನ್ನು ಸ್ವಾಗತಿಸುವ ಸಂಪ್ರದಾಯವಿತ್ತು. ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥರು, ಶೃಂಗೇರಿಯ ವಿದ್ಯಾತೀರ್ಥ ಸ್ವಾಮಿಗಳು ಹಾಗೂ ಕೂಡಲಿಯ ವಾಲುಕೇಶ್ವರ ಸ್ವಾಮಿಗಳನ್ನು ಕುರಿತು ಸಂಸ್ಕೃತದಲ್ಲಿ ಸ್ವಾಗತ ಕವನಗಳನ್ನು ರಚಿಸಿರುವರು.

ನನಗೆ ನೆನಪಿರುವಂತೆ ಅಜ್ಜಂಪುರದಲ್ಲಿ ಬ್ರಾಹ್ಮಣ ಸಂಘವು ಆಯೋಜಿಸುತ್ತಿದ್ದ ಉಪಾಕರ್ಮ ಪ್ರಯೋಗವನ್ನು ನಿರಂತರವಾಗಿ ಶ್ರೀ ಶಾಸ್ತ್ರಿಗಳೇ ಅನೇಕ ವರ್ಷಕಾಲ ನಿರ್ವಹಿಸಿದರು. ಆ ಸಂದರ್ಭದಲ್ಲಿ ಅವರು ಋಣತ್ರಯಗಳ ಬಗ್ಗೆ ಮಾತನಾಡಿದ್ದು ಇನ್ನೂ ನೆನಪಿದೆ. ಉಪಾಕರ್ಮವೆಂದರೆ ಕೇವಲ ಜನಿವಾರವನ್ನು ಬದಲಾಯಿಸಿಕೊಳ್ಳುವ ಕ್ರಿಯೆಯಷ್ಟೇ ಅಲ್ಲ, ಅದರ ಉದ್ದೇಶ ಮತ್ತು ಅದರ ಸಾಂಕೇತಿಕತೆಯ ಹಿಂದೆ ಅಡಗಿರುವ ತತ್ವಗಳನ್ನು ತಿಳಿದರೆ ಅದು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿ, ಈ ತರ್ಪಣ ವಿಧಿಯಲ್ಲಿ ಕೇಳಿ ಬರುವ ಋಷಿಗಳ ಹೆಸರು, ನದಿಗಳು, ಪರ್ವತಗಳು, ದೇಶದ ಪ್ರಾಕೃತಿಕ ಸಂಪತ್ತಿನ ಮೂಲಗಳು ಇವೆಲ್ಲವನ್ನೂ ಗಮನಿಸಿದರೆ, ನಾವು ಮಾಡುತ್ತಿರುವ ಕ್ರಿಯೆಗೆ ಸಮಗ್ರ ಅರ್ಥಬಂದಂತಾಗುತ್ತದೆ ಎಂದು ಹೇಳಿದ್ದು ನೆನಪಿದೆ. ಸುಬ್ರಹ್ಮಣ್ಯಶಾಸ್ತ್ರಿಗಳು ಕೇವಲ ಕರ್ಮಠತೆಗೆ ಗಂಟುಬಿದ್ದವರಲ್ಲ, ಬದಲಾಗಿ, ನಮ್ಮ ಆಚಾರಗಳ ಹಿಂದಿನ ತತ್ವಗಳನ್ನು ತಮ್ಮದೇ ಆದ ರೀತಿಯಲ್ಲಿ ಪ್ರಚುರಪಡಿಸುವ ಕಾಯಕವನ್ನು ಇಂದಿಗೂ ಮುಂದುವರೆಸುತ್ತಿರುವರು. ಈ ಇಳಿವಯಸ್ಸಿನಲ್ಲಿ ಖುರಾನ್ ಅಧ್ಯಯನ ಮಾಡುತ್ತಿರುವರು. "ಧಾರ್ಮಿಕ ಮೌಲ್ಯಗಳು ಎಲ್ಲ ಧರ್ಮಗಳಲ್ಲೂ ಒಂದೇ ಆದರೂ, ಅದರ ವ್ಯಾಖ್ಯಾನಗಳನ್ನು ಮತಾಂತರಕ್ಕೆ ಬಳಸಲಾಗುತ್ತಿರುವುದೇ ಇಸ್ಲಾಂ ಧರ್ಮದ ದುರಂತ. ಈ ಬಗ್ಗೆ ಮುಕ್ತ ಚರ್ಚೆ ನಡೆಸಲು ಯಾರೂ ಮುಂದೆ ಬರುತ್ತಿಲ್ಲದಿರುವುದೂ ವಿಷಾದನೀಯ. ವೇದವು  ಅಪೌರುಷೇಯವಲ್ಲ, ಅದು  ಮಾನವ ಬೌದ್ಧಿಕ ಶಕ್ತಿಯ ನಿರ್ಮಿತಿ. ಪುರೋಹಿತವರ್ಗವು ವೇದದ ಆಂತರ್ಯಕ್ಕೆ ಇಳಿಯದೆ, ಕೇವಲ ಅದರ ಬಾಹ್ಯ ರೂಪವನ್ನು, ಅದೂ ಅರ-ಬೆರಕೆಯೆನ್ನುವಂತೆ  ತಪ್ಪು ಬೋಧೆ ಮಾಡುವ ಅಪಚಾರ ನಿಲ್ಲಬೇಕು" ಎನ್ನುವುದು ಅವರ ಕಳಕಳಿಯ ಮನವಿ. ಅವರಂಥ ಹಿರಿಯರ ಮಾರ್ಗದರ್ಶನ ನಮಗೆ ಇನ್ನಷ್ಟು ಲಭಿಸುವಂತಾಗಲಿ ಎನ್ನುವುದು ಆಶಯ.


* * * * * *










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ