ಅಭಿಜಾತ ಪ್ರತಿಭೆಯ ರಂಗಕರ್ಮಿ : ಮಹಾವೀರ ಜೈನ್



ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು.


ಲೇಖನ : ಅಪೂರ್ವ

ಚಿತ್ರಗಳು : ಶಂಕರ ಅಜ್ಜಂಪುರ

ಅಜ್ಜಂಪುರದಲ್ಲಿ ಹಲವು ಜಾತಿ-ವಿಜಾತಿಗಳ ಸಮುದಾಯಗಳಿವೆ. ಪ್ರಾತಿನಿಧ್ಯದ ವಿಷಯಕ್ಕೆ ಬಂದರೆ ಅವರು ತಮ್ಮ ಸಾಧನೆಗಳಿಂದಲೇ ಮೇಲೆ ಬಂದವರು. ಅಂಥ ಹಲವಾರು ಮಹನೀಯರನ್ನು ಈಗಾಗಲೇ ಬ್ಲಾಗ್ ನ ಹಲವು ಲೇಖನಗಳಲ್ಲಿ ಗಮನಿಸಿರುವಿರಿ. ವಿಶೇಷವೆಂದರೆ ಇಲ್ಲಿನ ಮಹಾವೀರ ಜೈನ್ ಅಜ್ಜಂಪುರದ ಏಕಮಾತ್ರ ಜೈನ ಸಮುದಾಯದ ಕುಟುಂಬದ ಪ್ರಮುಖ. ಆದರೆ ಅವರೆಂದೂ ತಮ್ಮ ಧರ್ಮದೊಂದಿಗಾಗಲೀ, ಸಮುದಾಯದೊಂದಿಗಾಗಲೀ ತಮ್ಮನ್ನು ಗುರುತಿಸಿಕೊಂಡವರಲ್ಲ. ಊರಿನ ಸಂಸ್ಕೃತಿ, ಆಚಾರ -ವಿಚಾರ, ವ್ಯವಹಾರಗಳಲ್ಲಿ ಸಮೀಚೀನವಾಗಿ ಬೆರೆತುಹೋಗಿದ್ದಾರೆ. ಹಾಗಾಗಿ ಅವರ ಹೆಸರನ್ನು ಉಲ್ಲೇಖಿಸುವಾಗ ಮಾತ್ರ ಮಹಾವೀರ ಜೈನ್ ಎಂದು ಬರೆಯಬೇಕಲ್ಲದೆ, ಉಳಿದಂತೆ ಅವರು ಬರಿಯ ಮಹಾವೀರ.

ಜೀವನ ಸಂಗ್ರಾಮದಲ್ಲೂ ಆತ ಮಹಾವೀರನೇ ಸರಿ. ಏಕೆಂದರೆ ಜೀವನಕ್ಕೆಂದು ಯಾವುದೇ ನಿರ್ದಿಷ್ಟ ವೃತ್ತಿಯನ್ನು ಹಿಡಿಯದೇ, ಆಯಾ ವೃತ್ತಿಗಳು ಕೊಟ್ಟಷ್ಟು ಅನ್ನವನ್ನು ಸಂಪಾದಿಸಿ, ಕಲಾರಾಧಕರಾಗಿ ಮುಂದುವರೆಯುತ್ತಿರುವರು. ಇಂದಿನ ದಿನಗಳಲ್ಲಿ ಅಂಥ ಮೌಲ್ಯಗಳಿಗೆ ಗೌರವ ಇಲ್ಲದಿರಬಹುದು. ಆದರೆ ಕಲೆಯನ್ನು ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡು, ಅದರ ಮೂಲಕ ಹಂತ ಹಂತವಾಗಿ ಬೆಳೆದು ನಾಟಕ ಕ್ಷೇತ್ರದ ಅಂತರಾಳವನ್ನು ಬಿಡಿಸಿಡುವಷ್ಟು ಅನುಭವವನ್ನು ಹೊಂದಿದ್ದಾರೆ.

ಅವರ ರಂಗ ಪ್ರವೇಶವೂ ಆಕಸ್ಮಿಕ. ಹನ್ನೊಂದನೇ ವಯಸ್ಸಿನಲ್ಲಿ ಶಾಲಾ ವಾರ್ಷಿಕೋತ್ಸವದ ನಾಟಕಕ್ಕೆ  ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ರಂಗಮಂಚವನ್ನು ಏರುವಂತೆ ಮಾಡಿದವರು ಚಂದ್ರಪ್ಪ ಮಾಸ್ತರರು. ಶಾಲೆಯಲ್ಲಿ ಮಹಾವೀರನ ಚಟುವಟಿಕೆಗಳನ್ನು ಗಮನಿಸುತ್ತಿದ್ದ, ಆತನ ಅಣಕು ಪ್ರವೃತ್ತಿಯನ್ನು ಗುರುತಿಸಿದ್ದ ಅವರು ಈತನೊಬ್ಬ ಸಮರ್ಥ ನಟನಾಗಬಲ್ಲ ಎಂದು ಗ್ರಹಿಸಿದರು. ಅನ್ ಎಂಪ್ಲಾಯ್ಡ್ ಅಳಿಯ ಎಂಬ ನಾಟಕದಲ್ಲಿ ಮಹಾವೀರರ ಅಭಿನಯ ವಯಸ್ಸಿಗೆ ಮೀರಿದ್ದಾಗಿತ್ತು. ಇದೇ ಹವ್ಯಾಸ ಮುಂದುವರೆಯಿತು. ಪ್ರೌಢಶಾಲೆಗೆ ಬಂದಾಗ ಅಂದಿನ ಜೀವಶಾಸ್ತ್ರದ ಉಪಾಧ್ಯಾಯರಾದ ಎಂ. ಆರ್. ರಾಘವೇಂದ್ರರಾಯರು, ಶಾಲೆಯ ರಂಗ ಚಟುವಟಿಗಳತ್ತ ತುಂಬ ಆಸಕ್ತಿಯುಳ್ಳವರಾಗಿದ್ದರು. ಅವರ ನಿರ್ದೇಶನದಲ್ಲಿ ಗುಂಡಣ್ಣ, ಬೇಲೂರು ಕೃಷ್ಣಮೂರ್ತಿ ಮುಂತಾದವರ ಏಕಾಂಕ ನಾಟಕಗಳಲ್ಲಿ ಮಹಾವೀರ ಅಭಿನಯಿಸಿದರು. ಅನುಕರಣೆಯು ಆರಂಭದ ದಿನಗಳಲ್ಲಿ ಅನಿವಾರ್ಯವಾಗಿರಬಹುದು. ಆಗ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಕನ್ನಡದ ಸದಭಿರುಚಿಯ ಹಾಸ್ಯನಟ ಬಾಲಕೃಷ್ಣರ ಅಭಿಮಾನಿಯಾಗಿದ್ದ ಮಹಾವೀರ, ಅವರನ್ನು ಅನುಕರಿಸುತ್ತಿದ್ದುದುಂಟು. ವರ್ಷಗಳು ಕಳೆದಂತೆ ಮಹಾವೀರ ಚಾರ್ಲಿ ಚಾಪ್ಲಿನ್ ನ ಆರಾಧಕರಾದರು.  ಸಹಕಲಾವಿದರಿಗೆ ಮಾತು ಮರೆತು ಹೋದಾಗ ಅವರ ಸಮಯಸ್ಫೂರ್ತಿಯಿಂದ  ಸಂಭಾಷಣೆಯನ್ನು ಮುಂದುವರೆಸುವಂತೆ ನೀಡುತ್ತಿದ್ದ ಸೂಚನೆಗಳಿಂದ ಅನೇಕ ಕಿರಿಯ ಕಲಾವಿದರಲ್ಲಿ ವಿಶ್ವಾಸವನ್ನು ತುಂಬಿದರು.
ಅಜ್ಜಂಪುರದ ಕಲಾಸೇವಾ ಸಂಘದ ಬಗ್ಗೆ ಈ ಹಿಂದಿನ ಸಂಚಿಕೆಗಳಲ್ಲಿ ಓದಿರುತ್ತೀರಿ. ಅಲ್ಲಿನ ಹಿರಿಯ ಕಲಾವಿದರಲ್ಲಿ ಕೃಷ್ಣೋಜಿರಾಯರು, ಪಿ.ವೆಂಕಟರಾಮಯ್ಯನವರು, ಸತ್ಯನಾರಾಯಣ ಶೆಟ್ಟರು ಈ ಹುಡುಗನ ಪ್ರತಿಭೆಯನ್ನು ಗುರುತಿಸಿ, ಅಂದು ಅಜ್ಜಂಪುರದಲ್ಲಿ ತುಂಬ ಜನಪ್ರಿಯವಾಗಿದ್ದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಹಾಸ್ಯಪಾತ್ರವೊಂದನ್ನು ಅಳವಡಿಸಿ, ಅದನ್ನು ಮಹಾವೀರ ನಿರ್ವಹಿಸಲು ಹೇಳಿದರು. ಅತ್ಯಂತ ಯಶಸ್ವಿಯಾದ ಈ ಪಾತ್ರದಿಂದ ಮಹಾವೀರ ಶಾಲೆಯ ನಾಟಕ ಅಂಗಳದಿಂದ ನೇರ ರಂಗಭೂಮಿಗೆ ಬರುವಂತಾಯಿತು. ಅಜ್ಜಂಪುರದ ದನಗಳ ಜಾತ್ರೆ ಕೂಡ ಪ್ರಸಿದ್ಧವಾದದ್ದು. ಹಿಂದೆ ಅಲ್ಲಿನ ರಂಗದ ಮೇಲೆ ಹಲವಾರು ಬಗೆಯ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಜಾತ್ರೆಯಲ್ಲ ಭಾಗವಹಿಸುತ್ತಿದ್ದ ಗ್ರಾಮೀಣ ಜನರಿಗೆ ಉತ್ತಮ ಮನರಂಜನೆಯ, ಮಹಾವೀರರು ಮಾಡುತ್ತಿದ್ದ ಪಾತ್ರಗಳನ್ನು ಈಗಲೂ ಸ್ಮರಿಸುತ್ತಾರೆ.

ಮಹಾವೀರರಲ್ಲಿ ಸುಪ್ತವಾಗಿದ್ದ ಕಲಾವಿದನಿಗೆ ಅಜ್ಜಂಪುರದ ಕಲಾ ವಲಯ ನೀಡಿದ ಪ್ರೋತ್ಸಾಹವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಅಜ್ಜಂಪುರದ ಇನ್ನೊಂದು ಸಾರ್ವಜನಿಕ ಸಂಸ್ಥೆ ಫ್ರೆಂಡ್ಸ್ ಯೂನಿಯನ್ ಕೂಡ ಮಹಾವೀರರ ಕಲಾ ಪ್ರದರ್ಶನಗಳಿಗೆ ಬೆಂಬಲ ನೀಡಿತು. ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳನ್ನು ಈ ಸಂಸ್ಥೆಯ ಆಶ್ರಯದಲ್ಲಿ ನಡೆಸಲಾಗುತ್ತಿತ್ತು. ಇವೆಲ್ಲದರಲ್ಲಿ ಮಹಾವೀರರ ಸಕ್ರಿಯ ಪಾತ್ರವಂತೂ ಇರುತ್ತಿತ್ತು.
 
ಆಕಸ್ಮಿಕವಾಗಿ ಆರಂಭವಾದ ಅವರ ರಂಗಯಾತ್ರೆಯನ್ನು ಗಂಭೀರವಾಗಿ ತೆಗೆದುಕೊಂಡ ಪರಿಣಾಮವಾಗಿಯೇ, ಅವರು ಅದರ ಹೊಸ ಸಾಧ್ಯತೆಗಳತ್ತ ಗಮನಹರಿಸಲು ನೆರವಾಯಿತು. ತತ್ಪರಿಣಾಮವಾಗಿ ಅವರ ಗಮನ ಬೆಂಗಳೂರಿನತ್ತ ತಿರುಗಿತು. ಎಪ್ಪತ್ತು ಎಂಭತ್ತರ ದಶಕದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹೊಸ ಅಲೆಯ ನಾಟಕಗಳು ಆರಂಭವಾಗಿದ್ದವು. ಅವುಗಳ ಪ್ರತಿಫಲನವೆಂಬಂತೆ ಅಜ್ಜಂಪುರದಲ್ಲೂ ಅಂಥ ಪ್ರಯೋಗಗಳು ನಡೆದವು. ಹೀಗಾಗಿ ಮಹಾವೀರರ ಕಾರ್ಯಪಟುತ್ವದಿಂದ ಸ್ವಾಮಿಗಳ ಸ್ವಾಮಾರ”, “ಹಕ್ಕಿ ಹಾರುತಿದೆ ನೋಡಿದಿರಾ ಇಂಥ ನಾಟಕಗಳು ಪ್ರದರ್ಶಿತವಾದುವು.

ಮುಂದೆ ಹೆಗ್ಗೋಡಿನ ನೀನಾಸಂನ ತಿರುಗಾಟಕ್ಕೆ ಆಯ್ಕೆಯಾಗಿ, ೧೯೯೧ರಲ್ಲಿ ನಾಟಕ ತಂಡದ ಮೇಲ್ವಿಚಾರಕನಾಗಿ, ತಂತ್ರಜ್ಞನಾಗಿ ದುಡಿದು ಸಂಪಾದಿಸಿದ ಅಪಾರ ರಂಗ ಅನುಭವವನ್ನು ಮರೆಯಲಾಗದು ಎನ್ನುತ್ತಾರೆ ಮಹಾವೀರ. ತುಘಲಕ್”, “ಚಿದಂಬರ ರಹಸ್ಯ”, “ಕಿಂಗ್ ಲಿಯರ್”, “ಸಾಹೇಬರು ಬರುತ್ತಾರೆ”, “ಸೆಜುವಾನ್ ನಗರದ ಸಾಧ್ವಿ”, “ಧಾಂಧೂಂ ಸುಂಟರಗಾಳಿ”, “ಹುಚ್ಚ”, “ಟಿಪ್ಪುಸುಲ್ತಾನ್”, “ಎಚ್ಚಮನಾಯಕ ಮುಂತಾದ ಹಲವಾರು ನಾಟಕಗಳಲ್ಲಿ ಅಭಿನಯನೀಡಿದ್ದಾರೆಂದರೆ, ಇವರ ಅಭಿನಯದ ವ್ಯಾಪ್ತಿ ಮತ್ತು ಎಲ್ಲೆಗಳನ್ನು ಊಹಿಸಲಾಗದು.
ಮುಂದೆ ಈ ರಂಗಾನುಭವವೇ ಅವರನ್ನು ಚಲನಚಿತ್ರ ಕ್ಷೇತ್ರದತ್ತಲೂ ಮುಂದುವರೆಸಿತು. ಆದರೆ ಅಲ್ಲಿ ಸಿಕ್ಕ ಅವಕಾಶಗಲು ಇವರ ಪ್ರತಿಭೆ ಮತ್ತು ವೈವಿಧ್ಯಮಯ ರಂಗಾನುಭವಗಳಿಗೆ ಸವಾಲುಗಳಾಗಲಿಲ್ಲವೆನ್ನುವುದು ಬೇರೆಯದೇ ಮಾತು. ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ರ ಎರಡು ರೇಖೆಗಳು ತೆರೆಕಂಡ ಇವರ ಪ್ರಥಮ ಚಿತ್ರ. ನಂತರ ಉಂಡೂಹೋದ, ಕೊಂಡೂ ಹೋದ”, “ಕೊಟ್ರೇಶಿಯ ಕನಸು”, “ಒರು ಊಮೈಯಿನ್ ರಾಗಂ ಚಿತ್ರಗಳಲ್ಲಿ ಅಭಿನಯಿಸಿದರು. ಆದರೆ ಅಲ್ಲಿಯೂ ಅದೃಷ್ಟ ಕೈಹಿಡಿಯಲಿಲ್ಲ. ಇದಾದ ನಂತರ ಕಿರುತೆರೆಯಲ್ಲಿಯೂ ಪ್ರವೇಶಪಡೆದರು. ಚಂದ್ರಶೇಖರ ಕಂಬಾರರ ಪುಷ್ಪರಾಣಿ”, “ಕದಡಿದ ನೀರು”, “ಬೆಪ್ಪುತಕ್ಕಡಿ ಭೋಳೆ ಶಂಕರ ಮುಂತಾದ ದೂರದರ್ಶನ ಪ್ರಸ್ತುತಿಯ ಅನೇಕ ನಾಟಕಗಳಲ್ಲಿ ನಟಿಸಿದರು. ಆದರೆ ಈ ಅಭಿಜಾತ ಕಲಾವಿದನನ್ನು ಚಿತ್ರರಂಗವಾಗಲೀ, ಕಿರುತೆರೆಯಾಗಲೀ ಸಮರ್ಥವಾಗಿ ಬಳಸಿಕೊಳ್ಳದಿದ್ದುದು ನಷ್ಟವೇ ಸರಿ ಎಂದು ಅಭಿನಯವನ್ನು ನೋಡಿದವರು ಮರುಗುತ್ತಾರೆ. ವೃತ್ತಿ ರಂಗಭೂಮಿಯಿನ್ನೂ ಜೀವಂತವಾಗಿದ್ದ ಕಾಲವದು. ಚಿಂದೋಡಿ ಲೀಲಾರ ಕೆ.ಬಿ.ಆರ್. ಡ್ರಾಮಾ ಕಂಪೆನಿ, ಹುಚ್ಚೇಶ್ವರ ನಾಟ್ಯ ಸಂಘಗಳಂಥ ದೊಡ್ಡ ಸಂಸ್ಥೆಗಳಲ್ಲಿ ಅತಿಥಿ ನಟನಾಗಿ ನಟಿಸಿದರು. ಬೆಳಗಾವಿಯಲ್ಲಿ ಪ್ರಸಿದ್ಧ ನಟ ಎಲಿವಾಳು ಸಿದ್ಧಯ್ಯಸ್ವಾಮಿ ಅವರ ಟಿಪ್ಪು ಸುಲ್ತಾನ್ ಪಾತ್ರದ ಎದುರು ಮೀರ್ ಸಾದಿಕ್ ನಾಗಿ ಸ್ಮರಣೀಯ ಅಭಿನಯ ನೀಡಿದರು. ಅವರ ಆಂಗಿಕ ಅಭಿನಯ, ಭಾಷೆಯ ಮೇಲಿನ ಹಿಡಿತಗಳು ಆ ನಾಟಕದಲ್ಲಿ ಚೆನ್ನಾಗಿ ವ್ಯಕ್ತವಾಗಿತ್ತು. ಅಜ್ಜಂಪುರದ ಕಲಾಸೇವಾ ಸಂಘದ ನಾಟಕೋತ್ಸವಗಳಲ್ಲಿ ಭಾಗವಹಿಸಿದ ಹಿರಿಯ ಚಿತ್ರನಟರಾದ ಉದಯಕುಮಾರ್, ಶಕ್ತಿಪ್ರಸಾದ್, ರಾಜಾನಂದ್ ಇಂಥ ದಿಗ್ಗಜರೊಡನೆ ಅಭಿನಯಿಸಿದ ಕೀರ್ತಿ ಮಹಾವೀರರದು.

ಹೀಗೆ ನೂರಾರು ನಾಟಕಗಳಲ್ಲಿ ಅಭಿನಯಿಸಿರುವ ಮಹಾವೀರರಿಗೆ ಧ್ರುವರಂಗದ ಶಿಬಿರಗಳಲ್ಲಿ, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಇವರು ನಡೆಸಿದ ಬಾಲೋತ್ಸವಗಳಲ್ಲಿ ತಂತ್ರಜ್ಞರಾಗಿ ದುಡಿದ ಅನುಭವವಿದೆ. ಇಷ್ಟೆಲ್ಲ ಅನುಭವಗಳಿರುವ, ನಾಟಕವನ್ನೇ ನಂಬಿ ನಡೆದ ಮಹಾವೀರರನ್ನು ರಂಗಮಂಚ ಸರಿಯಾಗಿ ದುಡಿಸಿಕೊಳ್ಳಲಿಲ್ಲವೆನ್ನುವುದೇ ಸರಿಯಾದ ಮಾತಾದೀತು. ಆದರೂ ಆ ಬಗ್ಗೆ ಯಾವ ದ್ವೇಷಭಾವವಾಗಲೀ, ವಿಷಾದವಾಗಲೀ ಇಲ್ಲದ ಮಹಾವೀರ ಇಂದಿಗೂ ನಾಟಕಗಳೆಂದರೆ ಪುಳಕಿತರಾಗುತ್ತಾರೆ, ಬಣ್ಣಹಚ್ಚಲು ಸಿದ್ಧರಾಗುತ್ತಾರೆ. ಅಂಥ ಸ್ಫೂರ್ತಿ, ಮನೋಧರ್ಮ ಮೂಡಿಬಂದುದರ ಕಾರಣ, ಡಾ. ಶಿವರಾಮ ಕಾರಂತರ ಜೀವನವನ್ನು ಅಧ್ಯಯನ ಮಾಡಿದುದರ ಫಲ ಎಂದು ಸ್ಮರಿಸುತ್ತಾರೆ. ಎಲ್ಲರಿಗೂ ಎಲ್ಲ ಕಾಲಕ್ಕೂ ಒಳ್ಳೆಯದೇ ಆಗಬೇಕೆಂದಿಲ್ಲ, ಆದರೆ ಆಯ್ದುಕೊಂಡ ಕ್ಷೇತ್ರದಲ್ಲಿ ಸಾಧ್ಯವಿದ್ದುದನ್ನು ನಿರ್ವಂಚನೆಯಿಂದ ಮಾಡಿದ ನೆಮ್ಮದಿ ಮಹಾವೀರರಿಗೆ ಇದೆಯಾದರೆ, ಅದಕ್ಕೆ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಸಂಗವೇ ಕಾರಣ ಎಂದು ಹೇಳುತ್ತಾರೆ.

* * * * * *


ಕಾಮೆಂಟ್‌ಗಳು

  1. ಪ್ರಿಯರೇ, ಮಹಾವೀರನಂತಹ ಹುಟ್ಟು ಕಲಾವಿದ, ನನ್ನ ಸಹಪಾಠಿ ಎಂಬುದು ನನಗೆ ಹೆಮ್ಮೆಯ ವಿಷಯ. ಶಾಲಾ ದಿನಗಳಲ್ಲಿಯೇ, ಆತ ರಸಭರಿತವಾಗಿ ಕಥೆ ಹೇಳುತ್ತಿದ್ದ. ಹವ್ಯಾಸಿ ರಂಗಭೂಮಿ - ವೃತ್ತಿ ರಂಗಭೂಮಿ - ಚಲನಚಿತ್ರ ರಂಗ - ಕಿರುತೆರೆ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ದಶಕಗಳ ಕಾಲ ಆತ ದುಡಿದಿದ್ದಾನೆ. ಅವನಲ್ಲಿರುವ ಕಲಾವಿದನನ್ನು ಪೂರ್ಣವಾಗಿ ದುಡಿಸಿಕೊಳ್ಳುವಂತಹ ಮತ್ತು ಅವನ ಪ್ರತಿಭೆಗೆ ಒಳ್ಳೆಯ ಅವಕಾಶ ದೊರೆಯುವಂತಹ Break ಸಿಕ್ಕಲಿಲ್ಲವೆನ್ನುವುದು ನಮ್ಮೆಲ್ಲ ಗೆಳೆಯರಿಗೂ ಬೇಸರದ ಸಂಗತಿಯೇ. ಆದರೆ, ಮಹಾವೀರನಿಗೆ ಅಂತಹ ವಿಷಾದಭಾವ, ಬೇಸರ ಇಲ್ಲ. "ಕರ್ಮಣ್ಯೇವಾಧಿಕಾರಸ್ತೇ.." ಎನ್ನುವಂತಹ ನಿರುಮ್ಮಳ ಭಾವ. ಅದೇ ಅವನ ಬತ್ತದ ಉತ್ಸಾಹ, ಚೈತನ್ಯಗಳ ಹಿಂದಿನ ಅಂತಶ್ಶಕ್ತಿ.
    ನಮ್ಮ ಪ್ರೀತಿಯ "ಅಂತರಜಾಲದಲ್ಲಿ ಅಜ್ಜಂಪುರ" ಜಾಲತಾಣದ ಅರ್ಥಪೂರ್ಣ ಅಧ್ಯಾಯವಿದು.
    - ಮಂಜುನಾಥ ಅಜ್ಜಂಪುರ, ಬೆಂಗಳೂರು, 9901055998

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ