ಅಜ್ಜಂಪುರದ ಹೆಮ್ಮೆಯ ಪುತ್ರ ಮತ್ತು ಸೊಸೆ :ಅಜ್ಜಂಪುರ ರಂಗಪ್ಪ ಘನಶ್ಯಾಮ್, ಐ.ಎಫ್.ಎಸ್. ಹಾಗೂ ಶ್ರೀಮತಿ ರುಚಿ ಘನಶ್ಯಾಮ್. ಐ.ಎಫ಼್.ಎಸ್.

ಆತ್ಮೀಯ ಓದುಗರೇ,

ನಮ್ಮ ನಡುವೆ ಇರುವ ಅನೇಕರ ಸಾಧನೆಗಳ ಪರಿಚಯ ನಮಗಿರುವುದಿಲ್ಲ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಿಂದ ಬಂದವರ ಸಾಧನೆಗಳು ಪ್ರಕಟವಾಗಬೇಕಾದರೆ, ಅದಕ್ಕೆ ವಿಶೇಷ ಬೆಂಬಲಗಳು ಬೇಕಾಗುತ್ತದೆಯೆನ್ನುವುದು ವಾಸ್ತವ. ಆದರೆ ಸಾಧನೆಗೆ ಮನ್ನಣೆಯಂತೂ ದೊರೆಯುತ್ತದೆಯೆನ್ನುವುದು ನಿಶ್ಚಿತ. ಹಾಗೆ ನಮ್ಮ ಊರಿನ ಘನತೆಯನ್ನು ಹೆಚ್ಚಿಸಿದವರ ಸಂಖ್ಯೆ ಬೇಕಾದಷ್ಟಿದೆ. ಅಜ್ಜಂಪುರದ ಸಾಧಕರನ್ನು ಗುರುತಿಸಿ, ಪರಿಚಯಿಸುವುದೇ ಈ ಬ್ಲಾಗ್ ನ ಉದ್ದೇಶವಾಗಿರುವುದರಿಂದ, ಓದುಗರ ಸಹಕಾರ ಈ ನಿಟ್ಟಿನಲ್ಲಿ ಅತ್ಯವಶ್ಯ. ಅಂಥ ಕೆಲಸವನ್ನು ನನ್ನ ಕೆಲವಾರು ಗೆಳೆಯರು ಮಾಡಿದ್ದಾರೆ, ಮಾಡುತ್ತಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಲಿ ಎನ್ನುವುದು ಆಶಯ.  ಪ್ರಸ್ತುತ ಚಿತ್ರ ಸಹಿತ  ಲೇಖನವನ್ನು ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ ಅವರು ಸಿದ್ಧಪಡಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಊರಿನ ಬಗ್ಗೆ ಅಪಾರ ಅಭಿಮಾನ ತಳೆದವರು. ಅಜ್ಜಂಪುರದ ಬಗ್ಗೆ ಅವರು ಬರೆದಿರುವ ಕೆಲವು ಕಿರುಬರಹಗಳು ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವುಗಳನ್ನೂ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ನೀವು ಅವರಿಗೊಂದು ಅಭಿನಂದನೆ ಹೇಳಲು ಅವರ ಸಂಪರ್ಕ ಸಂಖ್ಯೆ 9480150542.

-ಶಂಕರ ಅಜ್ಜಂಪುರ



ಬ್ಲಾಗ್ ನ ಹಿಂದಿನ ಸಂಚಿಕೆಗಳಲ್ಲಿ ಶತಾಯುಷಿಯಾಗುವ ಹಾದಿಯಲ್ಲಿರುವ ಹಿರಿಯರಾದ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ (ಭಾರತೀಯ ಅರಣ್ಯ ಸೇವೆ)(ಐ.ಎಫ್.ಎಸ್.) ಗಳ ಬಗ್ಗೆ ವಿಸ್ತೃತ ಲೇಖನ ಪ್ರಕಟವಾಗಿದೆ. ಅಜ್ಜಂಪುರದ ಇನ್ನೋರ್ವ ಹೆಮ್ಮೆಯ ಭಾರತೀಯ ವಿದೇಶಾಂಗ  ಸೇವೆ (ಐ.ಎಫ್.ಎಸ್.) ಅಧಿಕಾರಿ ಶ್ರೀ ಅಜ್ಜಂಪುರ ರಂಗಪ್ಪ ಘನಶ್ಯಾಮ್ ರ ಬಗೆಗಿನ ಲೇಖನ ಇಲ್ಲಿದೆ.  ೧೯೮೨ನೇ ತಂಡದ ಹಿರಿಯ ವಿದೇಶಾಂಗ ಸೇವಾ ಅಧಿಕಾರಿ  ಎ. ಆರ್ .  ಘನಶ್ಯಾಮ್ ಪ್ರಸ್ತುತ  ವಿದೇಶಾಂಗ ಸಚಿವಾಲಯದಲ್ಲಿ ಕೊಲ್ಲಿ ರಾಷ್ಟ್ರಗಳ ಮತ್ತು ಹಜ್ ವಿಭಾಗದ ಹೆಚ್ಚುವರಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಶ್ರೀ  ಎ. ಆರ್ .  ಘನಶ್ಯಾಮ್ 
ಶ್ರೀ ಘನಶ್ಯಾಮ್ ಮೂಲತಃ ಅಜ್ಜಂಪುರದವರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಜ್ಜಂಪುರದಲ್ಲೇ ಪೂರೈಸಿ ಉನ್ನತ ವ್ಯಾಸಂಗಕ್ಕೆಂದು ಬೆಂಗಳೂರಿಗೆ ತೆರಳಿ, ಅಲ್ಲಿ ಭೌತಶಾಸ್ತ್ರದಲ್ಲಿ (ಸಾಲಿಡ್ ಸ್ಟೇಟ್ ಫಿಸಿಕ್ಸ್) ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಅಹಮದಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಎಂ.ಬಿ.ಎ. ಪದವಿಯನ್ನು ಪಡೆದರು.ಇವರು ನೇಪಾಳ ಮತ್ತು ಭೂತಾನ್ ದೇಶಗಳ ಗಡಿ ಗುರುತಿಸುವಲ್ಲಿ ಹಾಗೂ   ಪ್ರಾಕೃತಿಕ ಸಂಪನ್ಮೂಲಗಳಾದ  ನೀರು ಮತ್ತು ಇಂಧನ ಗಳ ಹಂಚಿಕೆಯಲ್ಲಿ  ಇವರು  ಮಹತ್ವದ  ಪಾತ್ರವಹಿಸಿದ್ದಾರೆ. 

ಇರಾನ್ ಇರಾಕ್ ಗಳ ಯುದ್ಧ ತಾರಕಕ್ಕೆ ಏರಿದ ಕಾಲವದು. ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ತೈಲಕ್ಕೆ ಅಭಾವವುಂಟಾದುದು ಸ್ವಾಭಾವಿಕ. ಘನಶ್ಯಾಮ್ ಕೊಲ್ಲಿರಾಷ್ಟ್ರಗಳಿಂದ ಭಾರತೀಯ ತೈಲಾಗಾರಗಳಿಗೆ ಟ್ಯಾಂಕರ್ ಗಳು ಸಕಾಲಕ್ಕೆ ತಲುಪುವಂತಾಗಲು ಅಪರೂಪದ ನಿರ್ಣಾಯಕ ಪಾತ್ರ ವಹಿಸಿದ್ದರು. ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರಿಂದ ಹಿಡಿದು ಇಂದಿನ ಪ್ರಧಾನಿ ಶ್ರೀ ಮನಮೋಹನಸಿಂಗರವರೆಗಿನ ಎಲ್ಲ ಪ್ರಧಾನಿಗಳಿಗೆ ವಿದೇಶಾಂಗ ವ್ಯವಹಾರಗಳಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವರು. ಮುಖ್ಯವಾಗಿ ಕೊಲ್ಲಿ ರಾಷ್ಟ್ರಗಳ ವಿದೇಶಾಂಗ ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಘನಶ್ಯಾಮ್, ತಮ್ಮ ಅರೇಬಿಕ್ ಭಾಷೆಯ ಪರಿಣತಿಗೆ, ಬಾಲ್ಯದಲ್ಲಿ ಮುಸ್ಲಿಂ ಬಾಲಕರ ಜತೆ ಅವರ ಭಾಷೆಯನ್ನು ಕಲಿತದ್ದು ನೆರವಾಯಿತೆಂದು ಸ್ಮರಿಸುತ್ತಾರೆ.

ಶ್ರೀ ಘನಶ್ಯಾಮ್ ವಿಶ್ವಸಂಸ್ಥೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಹಾರ್ವರ್ಡ್, ಯಾಲೆ, ಕೊಲಂಬಿಯಾ, ಬೋಸ್ಟನ್ ಮುಂತಾದ ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಉಪನ್ಯಾಸವನ್ನು ನೀಡಿದ್ದಾರೆ. ಘನಶ್ಯಾಮ್ ಭಾರತದ ರಾಯಭಾರಿಯಾಗಿ ನೇಪಾಳ, ಸಿರಿಯಾ, ಬೆಲ್ಜಿಯಂ, ಪಾಕಿಸ್ತಾನ ಮತ್ತು ಅಂಗೋಲಾ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

೧೯೯೯ರಲ್ಲಿ ಕಂದಹಾರ್ ನ ವಿಮಾನ ಅಪಹರಣದ ಪ್ರಕರಣ ಹಲವರಿಗೆ ನೆನಪಿರಬಹುದು. ಆಗ ಭಾರತೀಯ ವಿಮಾನ ಐಸಿ ೮೧೪ನ್ನು ಉಗ್ರರು ಅಪಹರಣ ಮಾಡಿ, ಅದರಲ್ಲಿದ್ದ ವಿಮಾನ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಉಗ್ರರು ಸಂಧಾನಕ್ಕೆ ಕರೆನೀಡಿದಾಗ, ಅದನ್ನು ಧೈರ್ಯದಿಂದ ಸ್ವೀಕರಿಸಿ ಅವರೊಂದಿಗೆ ಮಾತುಕತೆಯಾಡಲು ಯಾವ ರಾಜಕೀಯ ನಾಯಕರೂ ಮುಂದೆ ಬರಲಿಲ್ಲ. ಆಗ ಶ್ರೀ ಘನಶ್ಯಾಮ್ ತಾವಾಗಿಯೇ ಮುಂದುವರೆದು ಉಗ್ರರೊಂದಿಗೆ ಮಾತುಕತೆಯಾಡಲು ಭಾರತ ಸರಕಾರದ ಪರವಾಗಿ ಹೊರಟರು. ತಮ್ಮ ಗುರಿಯಲ್ಲಿ ಯಶಸ್ವಿಯಾಗಿ ಇನ್ನೂರು ಮಂದಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಪಾರುಮಾಡಿದ ಕೀರ್ತಿ ಘನಶ್ಯಾಮ್ ರಿಗೆ ಸಲ್ಲುತ್ತದೆ. ಸ್ವಾರಸ್ಯದ ವಿಷಯವೆಂದರೆ ಇವರಿಗೆ ಸಂಗೀತದಲ್ಲೂ ಆಸಕ್ತಿಯಿದೆ. ಸಿತಾರ್ ವಾದ್ಯ ನುಡಿಸುವಿಕೆಯಲ್ಲಿ ಪದವಿ ಪಡೆದಿರುವ ಮ್ಯಾಂಡೊಲಿನ್ ವಾದ್ಯದಲ್ಲೂ ಪರಿಣಿತರು. 



ಇನ್ನೊಂದು ವಿಶೇಷವೆಂದರೆ ಘನಶ್ಯಾಮ್ ರ ಪತ್ನಿ ರುಚಿ ಘನಶ್ಯಾಮ್ ಕೂಡ ವಿದೇಶಾಂಗ ಸೇವೆಯಲ್ಲಿದ್ದಾರೆ.  ೧೯೮೨ರ ತಂಡದ ಐ.ಎಫ್.ಎಸ್. ಅಧಿಕಾರಿಯಾಗಿದ್ದುಪ್ರಸ್ತುತ ಘಾನಾ ದೇಶದಲ್ಲಿ ಭಾರತದ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವರು.  ಅವರ ಆರಂಭಿಕ ಶಿಕ್ಷಣ ಹರಿದ್ವಾರದಲ್ಲಿ ನಡೆದು, ನಂತರ ಭೋಪಾಲ್ ನಲ್ಲಿ ಮನಶ್ಯಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಆರಂಭದಿಂದಲೂ ದೇಶ-ವಿದೇಶಗಳನ್ನು ಸುತ್ತುವ ಹಂಬಲ ಹೊಂದಿದ್ದ ಇವರು ೧೯೮೨ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ  (ಐ.ಎಫ್.ಎಸ್.) ಸೇರಿದರು. ಅಲ್ಲಿ ಪರಿಚಯವಾದ ಕನ್ನಡಿಗ ಶ್ರೀ ಘನಶ್ಯಾಮ್ ರನ್ನು ವಿವಾಹವಾದರು. ಅವರ ಮೊದಲ ಸೇವೆ ಸಿರಿಯಾದಿಂದ ಆರಂಭವಾಯಿತು. ಅಂದಿನ ದಿನಗಳಲ್ಲಿ ಮಹಿಳೆಯರು ಇಷ್ಟು ಉನ್ನತ ಹುದ್ದೆಗೆ ಏರಿದ್ದು ತುಂಬ ಕಡಿಮೆಯೆನ್ನಬೇಕು. ಮತ್ತೋರ್ವ ಕನ್ನಡತಿ ಕೊಡಗಿನ ಮುತ್ತಮ್ಮ ಮೊದಲ ಮಹಿಳಾ ಐ.ಎಫ್.ಎಸ್. ಅಧಿಕಾರಿ. ಅವರ ಆಡಳಿತಾವಧಿಯಲ್ಲಿ ಲಿಂಗ ತಾರತಮ್ಯದಿಂದಾಗಿ, ಅನೇಕ ಅವಕಾಶಗಳು, ಬಡ್ತಿಗಳು ನಿಂತು ಹೋಗುತ್ತಿದ್ದವು. ವಿವಾಹವಾದವರು ಸೇವೆಗೆ ಸೇರುವಂತಿರಲಿಲ್ಲ. ಇದೆಲ್ಲವನ್ನೂ ಸಮರ್ಥವಾಗಿ ಎದುರಿಸಿ, ಮುಂದಿನ ಪೀಳಿಗೆಯವರಿಗೆ ದಾರಿಮಾಡಿಕೊಟ್ಟ ಈ ಕನ್ನಡತಿಯನ್ನು ಶ್ರೀಮತಿ ರುಚಿ ಸ್ಮರಿಸುತ್ತಾರೆ. ನಂತರ ನೇಪಾಳ, ಬೆಲ್ಜಿಯಮ್, ಇಸ್ಲಾಮಾಬಾದ್, ನ್ಯೂಯಾರ್ಕ್ ಗಳಲ್ಲಿ ಸೇವೆ ಸಲ್ಲಿಸಿದರು. ವೃತ್ತಿ ಜೀವನದ ಬಹುಭಾಗವನ್ನು ದಂಪತಿಗಳು ಒಟ್ಟಿಗೆ ಕಳೆಯುವಂತಾದುದು ನಮ್ಮ ಅದೃಷ್ಟವೆಂದು ಅವರು ಸ್ಮರಿಸುತ್ತಾರೆ. 

ಈರ್ವರು ಮಕ್ಕಳನ್ನು ಹೊಂದಿರುವ ಈ ದಂಪತಿಯ ಹಿರಿಯ ಮಗ ದೆಹಲಿಯಲ್ಲಿ ಸ್ವಂತ ಉದ್ಯಮವನ್ನು ನಡೆಸುತ್ತಿದ್ದು, ಎರಡನೆಯ ಮಗ ಅಮೆರಿಕೆಯ ಫಿಲಡೆಲ್ಫಿಯಾದಲ್ಲಿ ಪರಿಸರ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿಗೆ ಓದುತ್ತಿದ್ದಾನೆ. 

ಕಠಿಣ ಪರಿಶ್ರಮ, ದೇಶ-ವಿದೇಶಗಳನ್ನು ಸುತ್ತುವ ಅದಮ್ಯ ಹಂಬಲವೇ ಈ ವೃತ್ತಿಯಲ್ಲಿ ಯಶಸ್ಸುಗಳಿಸಲು ಸಾಧ್ಯವಾಯಿತು ಎಂದು ಹೇಳುವ ರುಚಿ ಘನಶ್ಯಾಮ್, ಮಹಿಳೆಯರು ಮಹಿಳೆಯರು ಆಡಳಿತಗಾರ್ತಿಯರಾಗಬಲ್ಲರು ಎಂದು ನಿರೂಪಿಸಿದ್ದಾರೆ.


ಚಿತ್ರ-ಲೇಖನ : ಅಜ್ಜಂಪುರ ಮಲ್ಲಿಕಾರ್ಜುನ


 


* * * * * * *


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ