ಋಜುತ್ವ - ಕಠಿಣ ಪರಿಶ್ರಮಗಳ ಸಂಕೇತ ಎ.ಪಿ.ನಾಗರಾಜ ಶೆಟ್ಟರು.
-ಶಂಕರ ಅಜ್ಜಂಪುರ
ನಾಗರಾಜ ಶೆಟ್ಟರ ಮಂಡಿ, ಮುದ್ರಣಾಲಯಗಳು ನಮ್ಮ ಮನೆಯೆದುರಿಗೇ ಇದ್ದುದರಿಂದ ನಾನು ಅವರನ್ನು ತುಂಬ ಶೈಶವದಿಂದಲೇ ಬಲ್ಲೆ. ಅವರ ಮಗ ಮಂಜುನಾಥ ಅಜ್ಜಂಪುರ - ನನ್ನ ಆಪ್ತಸ್ನೇಹಿತನಾಗುವುದಕ್ಕೆ ತುಂಬ ಮುಂಚೆಯೇ, ನನಗೆ ಅವರ ವ್ಯವಸ್ಥಿತ ಜೀವನಶೈಲಿಯ ಪರಿಚಯವಾಗಿತ್ತು.
ಅವರ ತಂದೆ ಫಣಿಯಪ್ಪ ಶೆಟ್ಟರು ಜವಳಿ ವ್ಯಾಪಾರಿಯಾಗಿ, ಅಡಿಕೆ ಚೇಣಿ ಇತ್ಯಾದಿ ಮಾಡಿದಂತಹವರು. ನೂರು ವರ್ಷಗಳ ಹಿಂದೆಯೇ ಮದ್ರಾಸಿನಿಂದ ರಾಮಾಯಣ - ಮಹಾಭಾರತ - ಭಾಗವತಗಳ ಕನ್ನಡ ಗ್ರಂಥಗಳನ್ನು ತರಿಸಿ ಪಾರಾಯಣ ಮಾಡಿಸಿ, ಉತ್ಸವ ನಡೆಸುತ್ತಿದ್ದ ವಿಶಿಷ್ಟ ವ್ಯಕ್ತಿ. ತಂದೆ ಫಣಿಯಪ್ಪ ಶೆಟ್ಟರ ಅಕಾಲಿಕ ನಿಧನದಿಂದ, ಅವರ ಏಕಮಾತ್ರ ಪುತ್ರ ನಾಗರಾಜ ಶೆಟ್ಟರು ಬಡತನ-ಕಷ್ಟಗಳ ಸರಮಾಲೆ ಯನ್ನೇ ಎದುರಿಸಬೇಕಾಯಿತು. ತಂದೆಯ ಭೌತಿಕ ಸಂಪತ್ತು ಬಾರದಿದ್ದರೇನಂತೆ, ಸಾಂಸ್ಕೃತಿಕ ವ್ಯಕ್ತಿತ್ವವನ್ನು ಅವರು ಮೈಗೂಡಿಸಿಕೊಂಡರು. ಹಣ, ಆಸ್ತಿಪಾಸ್ತಿಗಿಂತ ಕಲೆ-ಸಾಹಿತ್ಯ-ಸಂಸ್ಕೃತಿಗಳು ಮುಂದೆ ನಾಗರಾಜ ಶೆಟ್ಟರ (1913-2000) ಜೀವನದ ಆದ್ಯತೆ ಪಡೆದವು.
ನಾಗರಾಜ ಶೆಟ್ಟರ ಪುಸ್ತಕ ಪ್ರೀತಿ ವಿಸ್ಮಯ ಹುಟ್ಟಿಸುವಂತಹುದು. 1936ರಲ್ಲಿ ಶಿವರಾಮ ಕಾರಂತರು 'ಬಾಲ ಪ್ರಪಂಚ'ದ ಮೂರು ಸಂಪುಟಗಳನ್ನು ಕನ್ನಡದಲ್ಲಿ ಹೊರತಂದರು. ಅಂದಿನ ಭಾರತದಲ್ಲಿಯೇ ಕಾರಂತರ ಈ ವಿಶ್ವಕೋಶ ಯೋಜನೆಯು ಅದ್ವಿತೀಯ ಸಾಹಸವೆನಿಸಿತ್ತು. ಬಡತನ-ತೊಂದರೆಗಳ ನಡುವೆಯೂ ನಾಗರಾಜ ಶೆಟ್ಟರು ಆ ಸಂಪುಟಗಳನ್ನು ತರಿಸಿದರು ಮತ್ತು ಅವು ಇಂದಿಗೂ ದಾಖಲೆಯ ಸಂಗತಿಗಳಾಗಿವೆ. ಅಂದಿನ ಕಾಲದಲ್ಲಿ ಆ ಸಂಪುಟಗಳ ಬೆಲೆ ಮೂವತ್ತು ರೂಪಾಯಿ. ಇಂದಿನ ಮೌಲ್ಯದಲ್ಲಿ ಅದೆಷ್ಟು ಸಾವಿರಗಳಾಗುತ್ತದೆಯೋ! ಈ 'ಬಾಲಪ್ರಪಂಚ' ಸಂಪುಟಗಳನ್ನು ಶೆಟ್ಟರು ಸಾಲ ಮಾಡಿ ತರಿಸಿದರಂತೆ ಮತ್ತು ಆ ಸಾಲ ತೀರಿಸಲು ಮೂರು ವರ್ಷಗಳೇ ಬೇಕಾದುವಂತೆ. ಆಗ ಶೆಟ್ಟರಿಗೆ ಬರಿಯ ಇಪ್ಪತ್ಮೂರು ವರ್ಷ ಎನ್ನುವುದೂ ವಿಶೇಷವೇ. ಅಂತಹ ಪುಸ್ತಕ ಪ್ರೀತಿ, ಜ್ಞಾನದಾಹ ನಾಗರಾಜ ಶೆಟ್ಟರದು.
ಗುಬ್ಬಿ ವೀರಣ್ಣನವರೆಂದರೆ ದಕ್ಷಿಣಭಾರತದಲ್ಲಿಯೇ ಕಂಪನಿ ನಾಟಕಗಳ ಇತಿಹಾಸವನ್ನು ಪುನರ್ಲೇಖಿಸಿದವರು. ಅವರ ನಾಟಕಗಳು, ಅವರ ಶಿಸ್ತು, ಅವರ ಉದ್ಯಮಶೀಲತೆಗಳು ನಾಗರಾಜ ಶೆಟ್ಟರನ್ನೂ ಪ್ರಭಾವಿಸಿದವು. ಮುಂದೆ ಅಜ್ಜಂಪುರದಲ್ಲಿ ಕಲಾ ಸೇವಾ ಸಂಘವು ಹುಟ್ಟಿ ಬೆಳೆಯಲು ಈ ಅಂಶಗಳೇ ಕಾರಣವಾದವು. ಕಲಾ ಸೇವಾ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಬೇರೆ ಬೇರೆ ಹಿರಿಯರು ಕೆಲಸ ಮಾಡಿದರೂ, ಹಿಂದೆ ನಿಂತು ಸಂಸ್ಥೆಯ ನಿರ್ವಹಣೆ-ಬೆಳವಣಿಗೆಗಳಿಗೆ ಕಾರಣರಾದವರು ನಾಗರಾಜ ಶೆಟ್ಟರೇ. ಅವರೇ ನಿರ್ದೇಶಕರಾಗಿ ಅದೆಷ್ಟೋ ನಾಟಕಗಳ ಯಶಸ್ಸಿಗೆ ಮುನ್ನುಡಿ ಬರೆದರು. ಹವ್ಯಾಸಿ ಕಲಾವಿದರ ನಾಟಕ-ನೃತ್ಯ-ಸಂಗೀತಗಳ ಅಖಿಲ ಕರ್ನಾಟಕ ಮಟ್ಟದ ಪರ್ಯಾಯ ಪಾರಿತೋಷಕ, ಬಹುಮಾನಗಳ ಸ್ಪರ್ಧೆಯು ನಾಗರಾಜ ಶೆಟ್ಟರ ಕನಸಿನ ಕೂಸು. ಸ್ವಾಮಿ ಶಂಕರಾನಂದರ, ಸುಬ್ರಹ್ಮಣ್ಯ ಶೆಟ್ಟರ ಆಶೀರ್ವಾದ - ಬೆಂಬಲಗಳಿಂದ ಈ ಸ್ಪರ್ಧೆಗಳು ತುಂಬ ಹೆಸರು ಮಾಡಿದವು. ಇಂತಹ ಸ್ಪರ್ಧೆಗಳ ಯೋಜನೆ, ವ್ಯವಸ್ಥೆಗಳು ಕಠಿಣ ಪರಿಶ್ರಮವನ್ನು ಬೇಡುತ್ತವೆ. ಅಜ್ಜಂಪುರದಂತಹ ಪುಟ್ಟಗ್ರಾಮದಲ್ಲಿ ಕಲಾವಿದರು, ಸಂಗೀತಕಾರರು ಉಳಿಯಲು - ಊಟ ಮಾಡಲು ವ್ಯವಸ್ಥೆ ಮಾಡುವುದು ಕಷ್ಟ ಸಾಧ್ಯ. ಒಂದು ತಂಡವನ್ನು ಸಿದ್ಧಪಡಿಸಿ, ಇವೆಲ್ಲವನ್ನು ಕಾರ್ಯಸಾಧ್ಯ ಮಾಡಿದ ಶ್ರೇಯಸ್ಸು ನಾಗರಾಜ ಶೆಟ್ಟರದು.
ಕಲಾ ಸೇವಾ ಸಂಘದ ಈ ಸ್ಪರ್ಧೆಗಳ ಮೌಲ್ಯಮಾಪನಕ್ಕಾಗಿ ಒಂದು ಪದ್ಧತಿಯನ್ನೇ ಶೆಟ್ಟರು ರೂಪಿಸಿದರು. ಅಭಿನಯ, ರಂಗಸಜ್ಜಿಕೆ, ನಿರ್ದೇಶನ, ಪ್ರಸಾಧನಗಳಿಗೆ ಅಂಕಗಳನ್ನು ನೀಡುವ ಮತ್ತು ಪ್ರತ್ಯೇಕವಾಗಿ ಮೂರು ಜನ ತೀರ್ಪುಗಾರರು ಮೌಲ್ಯಮಾಪನ ಮಾಡುವ ಪದ್ಧತಿ ತಂದರು. ನಂತರ ಒಟ್ಟಾರೆಯಾಗಿ ಈ ಅಂಕಗಳ ಆಧಾರದ ಮೇಲೆ ಪಾರಿತೋಷಕ ಬಹುಮಾನಗಳನ್ನು ಅರ್ಹತೆಯ ಮೇಲೆಯೇ ಪ್ರಕಟಿಸುತ್ತಿದ್ದರು. ಬೆಂಗಳೂರಿನಿಂದ ಬಂದ ನಾಟಕಕರ್ತರು, ಅಧಿಕಾರಿಗಳು ಈ ಪದ್ಧತಿ ನೋಡಿ ಮೆಚ್ಚಿದುದಿದೆ. ನಲವತ್ತರ - ಐವತ್ತರ ದಶಕಗಳಲ್ಲಿ ಅಜ್ಜಂಪುರದ ಹೆಸರು ಕರ್ನಾಟಕ ರಾಜ್ಯದಾದ್ಯಂತ ಪರಿಚಯವಾಗಲು, ಈ ಕಲಾ ಸೇವಾ ಸಂಘ, ಶಿವಾನಂದಾಶ್ರಮಗಳೇ ಕಾರಣವಾದವು. ಆಗ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿಗಳೇ ಹುಟ್ಟಿರಲಿಲ್ಲ. ರವೀಂದ್ರ ಕಲಾಕ್ಷೇತ್ರವೇ ನಿರ್ಮಾಣ ವಾಗಿರಲಿಲ್ಲ. ಹೆಗ್ಗೋಡಿನ ಹೆಸರೇ ಯಾರೂ ಕೇಳಿರಲಿಲ್ಲ. ಸೂಕ್ತ ಸಹಕಾರ, ಅವಕಾಶ, ಸರ್ಕಾರದ ನೆರವು ದೊರೆತಿದ್ದರೆ ಹೀಗೆ ಕಲಾ ಸೇವಾ ಸಂಘವು ಇತಿಹಾಸದ ಪುಟಗಳಿಗೆ ಸೇರುತ್ತಿರಲಿಲ್ಲ, ಎಂದು ನಾಗರಾಜ ಶೆಟ್ಟರು ಮುಂದೊಮ್ಮೆ ವಿಷಾದಿಸಿದ್ದೂ ಉಂಟು.
ಮೂವತ್ತರ ದಶಕದಲ್ಲಿ ಸರ್ಕಾರಿ ಸೇವೆಗೆ ಸೇರಿ ಮುನಿಸಿಪಲ್ ಕ್ಲರ್ಕ್, ಹೆಡ್ ಕ್ಲರ್ಕ್ ಆಗಿ ಇಪ್ಪತ್ತು ವರ್ಷ ಸೇವೆ ಸಲ್ಲಿಸಿ ಸ್ವಯಂ-ನಿವೃತ್ತಿ ಪಡೆದ ಶೆಟ್ಟರು, 1944-1948ರ ಅವಧಿಯಲ್ಲಿ ನರಸಿಂಹರಾಜಪುರದಲ್ಲಿ ಸಲ್ಲಿಸಿದ ಸೇವಾವಧಿಯು ತಮ್ಮ ಜೀವಮಾನದ ಅತ್ಯುತ್ತಮ ಅವಧಿ, ಎನ್ನುತ್ತಿದ್ದರು. ಅಲ್ಲಿನ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ತುಂಬ ತುಂಬ ಕಾರ್ಯಕ್ರಮಗಳನ್ನು ನಡೆಸಿದರು. ಶಿವರಾಮ ಕಾರಂತರು, ಅ.ನ.ಕೃ., ನಾಡಿಗೇರ ಕೃಷ್ಣರಾಯರು, ಎಸ್.ಕೆ. ಕರೀಮ್ ಖಾನ್ ಮುಂತಾದ ಹಿರಿಯರನ್ನು ಕರೆಸಿದ್ದರು. 1947ರ ಸ್ವಾತಂತ್ರ್ಯ, ದೇಶವಿಭಜನೆ, ಮುಸ್ಲಿಮರ ಗಲಭೆಗಳು, ಇತ್ಯಾದಿಗಳನ್ನು ನಿನ್ನೆ-ಮೊನ್ನೆ ನಡೆದಂತೆ ವಿವರಿಸುತ್ತಿದ್ದರು. ಅವರ ಅಚ್ಚುಕಟ್ಟು, ಶಿಸ್ತುಗಳಂತೆಯೇ ಅವರ ಸ್ಮರಣಶಕ್ತಿ, ನಿರೂಪಣಾ ಕೌಶಲ್ಯಗಳೂ ಅದ್ಭುತವೇ. ನರಸಿಂಹರಾಜಪುರದಲ್ಲಿ ಅವರು ಎಷ್ಟು ಹೆಸರು ಮಾಡಿದ್ದರು, ಎಂತಹ ಸೇವೆ ಸಲ್ಲಿಸಿದ್ದರೆಂದರೆ; 1948ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ, ಅವರ ಚಿತಾಭಸ್ಮವನ್ನು ಭದ್ರಾ ನದಿಗೆ ಸಮರ್ಪಿಸುವ ಸಂದರ್ಭದಲ್ಲಿ, ಆ ಚಿತಾಭಸ್ಮದ ಕರಂಡಕವನ್ನು ಒಯ್ಯುವ ಗೌರವ ಯಾರಿಗೆ ಸಲ್ಲಬೇಕು, ಎಂಬ ಪ್ರಶ್ನೆಯು ಉದ್ಭವಿಸಿದಾಗ ಆ ಊರಿನ ಹಿರಿಯರು ನಾಗರಾಜ ಶೆಟ್ಟರಿಗೇ ಈ ಗೌರವ, ಎಂದು ನಿರ್ಧರಿಸಿದರು. ಇವೆಲ್ಲ ತುಂಬ ವಿಶೇಷ ಸಂಗತಿಗಳಾಗಿವೆ.
ಐವತ್ತರ ದಶಕದಲ್ಲಿ ಕನ್ನಡ ಸಾಹಿತ್ಯದ ದಿಗ್ಗಜರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು, ತಮ್ಮ ಗ್ರಾಮವಾದ ಗೊರೂರಿನಲ್ಲಿ ಪ್ರಿಂಟಿಂಗ್ ಪ್ರೆಸ್ ಒಂದನ್ನು ಸ್ಥಾಪಿಸಿದ್ದರು. ಕೆಲಸಗಾರರ ಅಭಾವ ಮತ್ತಿತರ ತೊಂದರೆಗಳಿಂದ ಬೇಸರಗೊಂಡ ಅವರು ಈ ಮುದ್ರಣ ಯಂತ್ರ ಮತ್ತಿತರ ಸಾಮಗ್ರಿಗಳನ್ನು ಮಾರಾಟ ಮಾಡಲು ನಿರ್ಧರಿಸಿ, ಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದ್ದರು. ಅದನ್ನು ನೋಡಿ ಶೆಟ್ಟರು ಅವರಲ್ಲಿಗೇ ಹೋಗಿ ಆ ಜರ್ಮನ್ ನಿರ್ಮಿತ ಮುದ್ರಣ ಯಂತ್ರವನ್ನು ಖರೀದಿಸಿ, 1959ರಲ್ಲಿ ಗೀತಾ ಪ್ರಿಂಟರ್ಸ್ ಪ್ರಾರಂಭಿಸಿದರು. ಆ ಯಂತ್ರ, ಪೇಪರ್ ಕಟ್ಟಿಂಗ್ ಮಶಿನ್, ಅಚ್ಚಿನ ಮೊಳೆಗಳು ತುಂಬ ಚಿಕ್ಕವರಾದ ನಮ್ಮಲ್ಲಿ ಕುತೂಹಲ ಮೂಡಿಸಿದ್ದವು.
ನವ ಅಜ್ಜಂಪುರ ನಿರ್ಮಾತೃ, ಕನಸುಗಾರ, ಉದ್ಯಮಿ, ಅಪರೂಪದ ರಾಜಕಾರಣಿ ಎಂದೇ ಖ್ಯಾತಿ ಪಡೆದ ಎಸ್. ಸುಬ್ರಹ್ಮಣ್ಯ ಶೆಟ್ಟರ ಸಾಧನೆಯ ಹಿಂದಿನ ಶಕ್ತಿಯೇ ನಾಗರಾಜ ಶೆಟ್ಟರು. ಅವರ ಆಪ್ತ ಕಾರ್ಯ ದರ್ಶಿಯಂತೆ, ಸಲಹೆಗಾರರಂತೆ ನಾಗರಾಜ ಶೆಟ್ಟರು ಅನೇಕ ದಶಕಗಳ ಸಾಲ ನಿಸ್ವಾರ್ಥ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲ, ಅವರ ಪತ್ರವ್ಯವಹಾರ, ಭಾಷಣದ ಸಿದ್ಧತೆಗಳಿಗೂ ನೆರವಾಗುತ್ತಿದ್ದರು.
ಮಹಾತ್ಮ ಗಾಂಧೀಜಿಯವರ ಜನ್ಮ ಶತಾಬ್ದ (1968-1969), ಸುಬ್ರಹ್ಮಣ್ಯ ಶೆಟ್ಟರ ಷಷ್ಟ್ಯಬ್ದ (1969-70) ಮುಂತಾದ ಸಂದರ್ಭಗಳಲ್ಲಿ ನಾಗರಾಜ ಶೆಟ್ಟರ ಕಠಿಣ ಪರಿಶ್ರಮ, ಅಭಿನಂದನ ಗ್ರಂಥವೊಂದನ್ನು ಹೊರತಂದಿದ್ದು, ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದ್ದು, ಉಳಿದ ವ್ಯವಸ್ಥೆಗಳನ್ನು ನಿಭಾಯಿಸಿದ್ದು, ಎಲ್ಲವೂ ನನಗೆ ಆ ಕಾಲದಲ್ಲಿ ಅಚ್ಚರಿಗೆ ಕಾರಣವಾಗಿದ್ದವು.
ಪ್ರವಾಸ, ಯಾತ್ರೆಗಳೆಂದರೆ ನಾಗರಾಜ ಶೆಟ್ಟರಿಗೆ ತುಂಬ ಇಷ್ಟ. ಅವುಗಳ ಕಥನವನ್ನು-ವಿವರಗಳನ್ನು ಅವರ ಬಾಯಿಂದಲೇ ಕೇಳಬೇಕು; ಹಾಗಿರುತ್ತಿತ್ತು. ರಾಷ್ಟ್ರಪತಿ, ಲೋಕಸಭಾಧ್ಯಕ್ಷರು, ಕಲಾವಿದರು ಹೀಗೆ ಅನೇಕರ ಹಸ್ತಾಕ್ಷರಗಳನ್ನು ಶೆಟ್ಟರು ಸಂಗ್ರಹಿಸಿದ್ದರು. ಯಾವ ವಸ್ತು, ಯಾವ ದಾಖಲೆಯನ್ನು ಕೇಳಿದರೂ, ನಾಗರಾಜ ಶೆಟ್ಟರು ಕಣ್ಮುಚ್ಚಿಕೊಂಡು ಸಹ ತೆಗೆದುಕೊಡುತ್ತಾರೆ ಎಂಬ ಮಾತು ನಮ್ಮೂರಿನಲ್ಲಿ ಜನಜನಿತ ವಾಗಿತ್ತು. ಅದಕ್ಕೆ ನಾನು ಸಹ ಸಾಕ್ಷಿ.
ನಮ್ಮ ಚಿಕ್ಕಮಗಳೂರು ಜಿಲ್ಲೆಯ ಸೀನಿಯರ್ ಪತ್ರಕರ್ತರಲ್ಲೊಬ್ಬರೆಂದರೆ, ನಾಗರಾಜ ಶೆಟ್ಟರು. ಮೂವತ್ತರ ದಶಕದಲ್ಲಿಯೇ, 'ವಿಶ್ವ ಕರ್ನಾಟಕ', 'ತಾಯಿನಾಡು' ಪತ್ರಿಕೆಗಳಿಗೆ ಸುದ್ದಿ ಕಳುಹಿಸುತ್ತಿದ್ದರು, ವರದಿ ಬರೆಯುತ್ತಿದ್ದರು. ನಾಗರಾಜಶೆಟ್ಟರು ತರಿಸುತ್ತಿದ್ದ, ಓದುತ್ತಿದ್ದ ಪತ್ರಿಕೆಗಳ-ನಿಯತಕಾಲಿಕಗಳ, ಪುಸ್ತಕಗಳ ಪಟ್ಟಿ ಬಹಳ ದೊಡ್ಡದು. ಈಗಲೂ ಅವರ ಅಮೂಲ್ಯ ಗ್ರಂಥಾಲಯವನ್ನು ನೋಡಿದರೆ, ಅವರು ಸಂಗ್ರಹಿಸಿದ್ದ ಮಾಹಿತಿ ನೋಡಿದರೆ ಅಚ್ಚರಿಯಾಗುತ್ತದೆ.
1970-1980-1990ರ ದಶಕಗಳಲ್ಲಿ ನವ್ಯ-ದಲಿತ-ಬಂಡಾಯ, ಹೀಗೆ ಹೊಸ ವಿಚಾರಗಳ ಅಲೆ ಬಂದಾಗ ನಮ್ಮೊಂದಿಗೆ ಶೆಟ್ಟರು ಸಕ್ರಿಯವಾಗಿ ಸಂವಾದ-ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹೊಸ ಪರಿಕಲ್ಪನೆಗಳಿಗೆ, ವೈಜ್ಞಾನಿಕ ಸಂಗತಿಗಳಿಗೆ ಶೆಟ್ಟರು ಮುಕ್ತ ಮನಸ್ಸಿನಿಂದ ಸ್ಪಂದಿಸುತ್ತಿದ್ದರು. ನಾವೆಲ್ಲ ಅವರ ಕಣ್ಣೆದುರಿಗೇ ಹುಟ್ಟಿ ಬೆಳೆದವರಾದರೂ, ಒಂದು ವಯಸ್ಸು ದಾಟಿದ ಮೇಲೆ, ಬಹುವಚನದಲ್ಲಿ - ಗೌರವ ಪೂರ್ಣವಾಗಿ ಮಾತನಾಡಿಸುತ್ತಿದ್ದರು.
ಮನಸ್ಸು ಮಾಡಿದ್ದರೆ, ನ್ಯಾಯವಾದ ಮಾರ್ಗದಲ್ಲಿಯೇ ತುಂಬ ಆಸ್ತಿ-ಪಾಸ್ತಿ ಜಮೀನು ಮಾಡಬಹುದಿತ್ತು. ಆದರೆ, ನಾಗರಾಜ ಶೆಟ್ಟರು ಭೌತಿಕ ಆಸ್ತಿಗೆ ಗಮನ ಕೊಡದೆ, ಕಲೆ-ಸಾಹಿತ್ಯ-ಸಂಸ್ಕೃತಿ-ಶಿಸ್ತು-ಅಧ್ಯಾತ್ಮ-ಪರಿಶ್ರಮಗಳಿಗೆ ಆದ್ಯತೆ ನೀಡಿದ್ದರು, ಎಂಬುದು ಅವರ ಬಗೆಗಿನ ನನ್ನ ಗೌರವವನ್ನು ಹೆಚ್ಚಿಸಿದೆ.
- ಅಪೂರ್ವ, ಅಜ್ಜಂಪುರ
ದೂರವಾಣಿ : 94810 75410
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ