ಮಹಾರಾಜರ ಕಟ್ಟೆ !
ಅಜ್ಜಂಪುರದ ಶೆಟ್ಟರ ಸಿದ್ಧಪ್ಪನವರ ಪ್ರೌಢಶಾಲೆ, ಕಾಲೇಜು ಆಗಿ ಪರಿವರ್ತನೆಯಾಗಿ ಅರ್ಧ ಶತಮಾನವೇ ಕಳೆದಿದೆ. ಈ ಭವ್ಯ ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆಯೇ ಪ್ರಾಂಗಣದಲ್ಲಿ ಸಿಮೆಂಟಿನಿಂದ ರಚಿಸಿದ ಒಂದು ಕಟ್ಟೆ ಕಾಣುತ್ತದೆ. ಶಾಲೆಯ ಕಟ್ಟಡದ ಸುತ್ತಮುತ್ತ ಅಭಿವೃದ್ಧಿಗೆಂದು ಇದುವರೆಗೆ ಅನೇಕ ಕಾಮಗಾರಿಗಳು ನಡೆದಿವೆಯಾದರೂ, ಕಟ್ಟಡದ ಮುಂಭಾಗವನ್ನು ವಿರೂಪಗೊಳಿಸದೇ, ಅಲ್ಲಿರುವ ಕಟ್ಟೆಯನ್ನು ತೆಗೆಯದೇ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಕಟ್ಟೆಯೊಡನೆ ಶಾಲೆಗೊಂದು ಭಾವನಾತ್ಮಕ ಸಂಬಂಧವಿದೆ.
ಮಹಾರಾಜರ ಕಟ್ಟೆ ! |
ಅದೆಂದರೆ ಅಜ್ಜಂಪುರದ ಪುರಸಭೆಯು 1960ರಲ್ಲಿ ಕುಡಿಯುವ ನೀರು ಸರಬರಾಜಿನ ಉದ್ಘಾಟನೆಗೆಂದು ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಮಹಾರಾಜರು ಉನ್ನತ ಸ್ಥಾನದಲ್ಲಿ ಕಂಗೊಳಿಸಬೇಕೆಂಬ ಉದ್ದೇಶದಿಂದ ಈ ಕಟ್ಟೆಯನ್ನು ನಿರ್ಮಿಸಲಾಯಿತು. ಮಹಾರಾಜರು ಅದರ ಮೇಲೆ ನಿಂತು ತಮ್ಮ ಭಾಷಣವನ್ನು ಮಾಡಿದರು. ಆ ಸವಿನೆನಪಿಗೆಂದು ಅದನ್ನು ಇಂದಿಗೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಊರಿನ ಪ್ರಮುಖರು, ಗಣ್ಯರು ಮಹಾರಾಜರನ್ನು ಸ್ವಾಗತಿಸಿದ್ದರು. ಅವರೆಲ್ಲ ಅಂದಿನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಅಪೂರ್ವ ಚಿತ್ರವನ್ನು ಅಜ್ಜಂಪುರದ ಹಿರಿಯರಾದ ಶ್ರೀ ಸತ್ಯನಾರಾಯಣ ಶೆಟ್ಟರು ಕಾಪಿಟ್ಟಿದ್ದಾರೆ.
ಇತ್ತೀಚೆಗಷ್ಟೇ ಫೇಸ್ ಬುಕ್ ನಲ್ಲಿ ಪ್ರಕಟಿಸಲಾದ ಈ ಚಿತ್ರದಲ್ಲಿರುವ ಹಿರಿಯರನ್ನು ನಾನು ಗುರುತಿಸಿರುವುದೆಂದರೆ :
ಶ್ರೀ ಸುಬ್ರಹ್ಮಣ್ಯ ಶೆಟ್ಟರು, ಶ್ರೀ ಸೀತಾರಾಮ ಭಟ್ಟರು, ಶ್ರೀ ಬಿ.ಎಂ. ಏಕೋರಾಮಸ್ವಾಮಿ, ಶ್ರೀ ಸತ್ಯನಾರಾಯಣ ಶೆಟ್ಟರು, ಶ್ರೀ ಟಿ.ಎನ್. ಕೃಷ್ಣೋಜಿರಾವ್ ಚವ್ಹಾಣ್, ಶ್ರೀ ಗುರುಪಾದಪ್ಪ.
ಇನ್ನುಳಿದಂತೆ ನೀವು ಗುರುತಿಸಬಹುದಾದ ಹಿರಿಯರ ಹೆಸರನ್ನು ನಮೂದಿಸಲು ಕೋರುತ್ತೇನೆ. ಇದನ್ನು ಅತ್ಯಂತ ಸಮರ್ಪಕವಾಗಿ ಮಾಡಬಲ್ಲ ಏಕೈಕ ಹಿರಿಯರೆಂದರೆ ಶ್ರೀ ಸತ್ಯನಾರಾಯಣ ಶೆಟ್ಟರು.
ಇದಲ್ಲದೆ ಇನ್ನೂ ಒಂದು ಚಿತ್ರವಿದೆ. ಇದರಲ್ಲಿ ಊರಿನ ಗಣ್ಯರು ತಮ್ಮ ಎಂದಿನ ಉಡುಗೆಯಲ್ಲಿ ಕಾಣಿಸುತ್ತಾರೆ. ಈ ಚಿತ್ರದಲ್ಲಿ ನಾನು ಗುರುತಿಸಿದ ಹಿರಿಯರೆಂದರೆ ಸರ್ವಶ್ರೀ ಶೆಟ್ಟರ ಸಿದ್ಧಪ್ಪನವರು, ಸುಬ್ರಹ್ಮಣ್ಯ ಶೆಟ್ಟರು, ಮಲ್ಲಪ್ಪ ಶೆಟ್ಟರು, ಜಿ.ಎಂ. ಬಸಪ್ಪನವರು, ಕುಳಿತಿರುವ ಸಾಲಿನಲ್ಲಿ ಕೃಷ್ಣಮೂರ್ತಿ ಹತ್ವಾರರು, ಎಲ್. ಕೃಷ್ಣಪ್ಪನವರು, ಬಿ.ಆರ್. ನರಸಿಂಹಮೂರ್ತಿಗಳು, ಕಾಟಿಗನೆರೆ ಶ್ಯಾನುಭೋಗ್ ಶ್ರೀನಿವಾಸರಾಯರು, ಶ್ಯಾನುಭೋಗ್ ವೆಂಕಟೇಶಯ್ಯನವರು.
ಚಿತ್ರ ಕೃಪೆ : ಶ್ರೀ ಸತ್ಯನಾರಾಯಣ ಶೆಟ್ಟರು.
(ಈ ಲೇಖನದ ಮುಖ್ಯ ಆಶಯವನ್ನು ಸಿದ್ಧಪಡಿಸಿದವರು ಮಿತ್ರ ಶ್ರೀ ಅಜ್ಜಂಪುರ ಮಲ್ಲಿಕಾರ್ಜುನ, ಅವರಿಗೆ ಕೃತಜ್ಞತೆಗಳು)
(ಜೂನ್ ತಿಂಗಳಲ್ಲಿ ಕಾರಣಾಂತರಗಳಿಂದ ಪ್ರಕಟಿಸಲಾಗಲಿಲ್ಲ ಹಾಗೂ ಜುಲೈನ ಸಂಚಿಕೆ ಕೂಡ ತಿಂಗಳ ಮೊದಲ ದಿನದಂದು ಪ್ರಕಟವಾಗಲು ಸಾಧ್ಯವಾಗಲಿಲ್ಲದುದಕ್ಕಾಗಿ ವಿಷಾದಿಸುತ್ತೇನೆ.)
ಮಿತ್ರ ಮಂಜುನಾಥ ಅಜ್ಜಂಪುರ ಅವರು ತಿಳಿಸಿರುವಂತೆ ಈ ಲೇಖನದಲ್ಲಿನ ಮಹಾರಾಜರು ಭಾಗವಹಿಸಿರುವ ಕಾರ್ಯಕ್ರಮದ ಎರಡು ಚಿತ್ರಗಳೂ 1960ರಲ್ಲಿ ತೆಗೆದಂಥವು. ಹಿಂದೆ ಅಜ್ಜಂಪುರದ ಹಿರಿಯರೋರ್ವರು ನೀಡಿದ್ದ ಮಾಹಿತಿಯಂತೆ ಫೋಟೋಷಾಪ್ ನಲ್ಲಿ ಸಂಸ್ಕರಿಸಿ ಸಂಗ್ರಹಿಸಿದ್ದೆ. ಅದು ಕಣ್ತಪ್ಪಿನ ದೋಷದಿಂದಾಗಿ ಹಾಗೇ ಪ್ರಕಟಗೊಂಡಿದೆ. ಅಂತೆಯೇ ಮಧ್ಯದಲ್ಲಿ ಕಾಣುವ ಮಹಾರಾಜರ ಕಟ್ಟೆಯ ಚಿತ್ರವನ್ನು ಒದಗಿಸಿದವರು ಗೆಳೆಯ ಮಂಜುನಾಥ ಅಜ್ಜಂಪುರ, ಅವರಿಗೆ ಕೃತಜ್ಞತೆಗಳು.
ಪ್ರತ್ಯುತ್ತರಅಳಿಸಿ