ಇತಿಹಾಸದ ಪುಟ ಸೇರಿದ ಅಜ್ಜಂಪುರದ ಖಾದಿ ಗ್ರಾಮೋದ್ಯೋಗ ಭಂಡಾರ



ದೇಶದ ಎಲ್ಲ ಚಿಕ್ಕ ಹಳ್ಳಿ, ಪಟ್ಟಣ, ನಗರಗಳಂತೆ ಸ್ವಾತಂತ್ರ್ಯ ಸಂಗ್ರಾಮದ ವಿಷಯದಲ್ಲಿ ಅಜ್ಜಂಪುರದ ಮೇಲೆ ಕೂಡ ಅದರ ಪ್ರಭಾವವಿತ್ತು. ಹೀಗಾಗಿಯೇ ಆ ಚಳವಳಿಯಲ್ಲಿ ಅಜ್ಜಂಪುರದ ಅನೇಕರು ಭಾಗವಹಿಸಿದರು. ಶ್ರೀ ಸುಬ್ರಹ್ಮಣ್ಯ ಶೆಟ್ಚರು ಅಜ್ಜಂಪುರದ ಮಟ್ಟಿಗೆ ಆ ದಿನಗಳಲ್ಲಿ ಸ್ಥಳೀಯ ಗಾಂಧಿಯೇ ಆಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಅವರ ಮಾತಿಗೆ ಆ ಮಟ್ಟಿನ ಮನ್ನಣೆಯಿತ್ತು. ಗಾಂಧೀಜಿಯವರ ಚಿಂತನೆಗಳಲ್ಲಿ ಸ್ವಾವಲಂಬನೆ, ಖಾದಿ, ಕೃಷಿಗೆ ಬೆಂಬಲ ಮುಂತಾದ ಅನೇಕ ಸಂಗತಿಗಳು ಸೇರಿದ್ದವಷ್ಟೇ. ಅದರಲ್ಲಿ ಖಾದಿ ತಯಾರಿಕೆ ಮತ್ತು ಅದರ ಬಳಕೆ ಬಗ್ಗೆ ಅಜ್ಜಂಪುರದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕೂಡ ಸಾಕಷ್ಟು ಕೆಲಸಗಳು ನಡೆದವು.
ನಾನು ಶಿವಮೊಗ್ಗೆಯಲ್ಲಿ ನೆಲೆಸಿದ ನಂತರ ನಿಧಾನವಾಗಿ ನನ್ನ ಬಡಾವಣೆಯ ಜನರ ಪರಿಚಯವಾಗುತ್ತಾ ಬಂದಿತು. ಆ ಹಂತದಲ್ಲಿ ಶ್ರೀ ಹುಚ್ಚಪ್ಪ ಎನ್ನುವವರ ಪರಿಚಯವೂ ಆಯಿತು. ನನ್ನ ಪರಿಚಯ ಹೇಳಿಕೊಳ್ಳುವಾಗ ನಾನು ಅಜ್ಜಂಪುರದವನು ಎಂದು ಹೇಳಿದ್ದೇ ತಡ, ಅವರ ಪ್ರತಿಕ್ರಿಯೆಯಲ್ಲಿ ತುಂಬ ಉತ್ಸಾಹ ಮೂಡಿದ್ದು ಕಾಣಿಸಿತು. ಅವರು ಹೇಳಿದರು – ಸ್ವಾಮೀ, ನಾನು ಕೂಡ ಅಜ್ಜಂಪುರದಲ್ಲಿ ಖಾದಿ ಮಂಡಲಿಯಲ್ಲಿ ಕೆಲಸದಲ್ಲಿದ್ದವ. ಅಂದಿನ ದಿನಗಳನ್ನು ನೆನೆಸಿಕೊಳ್ಳುವುದೇ ಒಂದು ಸಂತಸ, ಏಕೆಂದರೆ, ಯಾವ ಕೈಗಾರಿಕೆಯೂ ಇರದಿದ್ದ ನಿಮ್ಮ ಊರಿನಲ್ಲಿ ನಮ್ಮ ಖಾದಿ ಸಂಸ್ಥೆಯೊಂದೇ ಹೇಳಿಕೊಳ್ಳಬಹುದಾಗಿದ್ದ ಒಂದು ಕೈಗಾರಿಕೆ. ಅದೀಗ ನಶಿಸಿ ಹೋಗಿರುವುದು ಕಾಲದ ಮಹಿಮೆಯಷ್ಟೆ. ಆದರೆ ಆ ದಿನಗಳಲ್ಲಿ ನಮ್ಮ ಖಾದಿ ಮಂಡಲಿ ಅಜ್ಜಂಪುರದಲ್ಲಿ ಕೈಗೊಂಡ ಉಪಕ್ರಮಗಳಿಂದಾಗಿ, ಸಾಕಷ್ಟು ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು. ಗಾಂಧೀಜಿಯವರು ಕನಸು ಕಂಡಿದ್ದ ಸ್ವಾವಲಂಬನೆಯ ಸೂತ್ರ ಇಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಿದ್ದ ನಮಗೆ, ಅವರ ಉದ್ದೇಶವನ್ನು ಸ್ವಲ್ಪವಾದರೂ ಸಾರ್ಥಕ ಮಾಡಿದ್ದೇವೆಂಬ ತೃಪ್ತಿ ಆ ದಿನಗಳಲ್ಲಿ ಬಂದಿದ್ದಾದರೆ, ಅದು ನಿಮ್ಮ ಅಜ್ಜಂಪುರದಲ್ಲೇ ಎಂದು ತುಂಬ ಭಾವುಕರಾಗಿ ಹೇಳಿಕೊಂಡರು.
ತೀರ ಅಲ್ಪ ಸಮಯದ ಪರಿಚಯದಲ್ಲೇ ಅವರು ನನಗೆ ತುಂಬ ಸಮೀಪದವರೆನ್ನಿಸಿದರು. ಹಾಗಾಗಿ ಅವರನ್ನು ಮಾತನಾಡಿಸಿದಾಗ ತಿಳಿದ ವಿವರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ಅವರು ಹೇಳಿದರು  ಬದನವಾಳು ಮೈಸೂರಿನ ಸಮೀಪದ ಗ್ರಾಮ. ಅಲ್ಲಿ ಖಾದಿ ಮಂಡಲಿಯ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಬಂದ ತರುಣದಿನಗಳವು. ನಾವೆಲ್ಲರೂ ಚಿಕ್ಕ ವಯಸ್ಸಿನವರು, ಗಾಂಧೀಜಿಯ ಮಾತಿನ ಮೇಲೆ ನಮಗೆಲ್ಲ ಅಪರಿಮಿತ ಶ್ರದ್ಧೆ. ಸ್ವಾವಲಂಬನೆಯ ದೃಷ್ಟಿಯಿಂದ ಸ್ಥಾಪಿತವಾದ ಮಂಡಲಿಯ ಶಾಖೆಗಳು ರಾಜ್ಯದ ಎಲ್ಲೆಡೆಯೂ ಇರಬೇಕೆಂಬುದು ಸರಕಾರದ ಆಶಯವಾಗಿತ್ತು. ಆಗ ಮೈಸೂರಿನ ಮಹಾರಾಜರು ಸರಕಾರವನ್ನು ಪ್ರತಿನಿಧಿಸಿದ್ದರು. ಅದರಂತೆ ಅಜ್ಜಂಪುರದಲ್ಲೂ ಒಂದು ಶಾಖೆ ಆರಂಭವಾಯಿತು. ಆಗೆಲ್ಲ ಈಗಿನಂತೆ ಸರಕಾರದ ಅನುದಾನವನ್ನಾಗಲೀ, ಬೆಂಬಲವನ್ನಾಗಲೀ ನಿರೀಕ್ಷಿಸುವಂತಿರಲಿಲ್ಲ. ಇದ್ದ ವ್ಯವಸ್ಥೆಯೊಳಗೇ ಕೆಲವು ಅಂಬರ್ ಚರಕಗಳನ್ನು ಕೊಂಡು ನೂಲುವುದನ್ನು ಆರಂಭಿಸಲಾಯಿತು. ಅಂಬರ್ ಚರಕಗಳು ಮಟ್ಟಸವಾಗಿರುತ್ತಿದ್ದವು. ನೂಲು ತೆಗೆಯುವಾಗ ಅದನ್ನು ಪ್ರದಕ್ಷಿಣ ಕ್ರಮದಲ್ಲಿ ಹದವಾಗಿ ಸುತ್ತುವುದನ್ನು ಕಲಿತ ನಂತರವೇ ಸರಾಗವಾಗಿ ನೂಲು ಉತ್ಪತ್ತಿಯಾಗುತ್ತಿತ್ತು.  ಅದು ರೂಢಿಗತವಾಗೇ ಬರಬೇಕಿತ್ತೇ ವಿನಾ ಕೈ ಹಿಡಿದು ಕಲಿಸುವಂಥ ವಿದ್ಯೆಯಾಗಿರಲಿಲ್ಲ. ಮುಂದೆ ಕೈಯಿಂದಲೇ ಸುತ್ತುವ ನೇರವಾದ ಚಕ್ರವುಳ್ಳ ಸುಧಾರಿತ ಚರಕದ ಬಳಕೆ ಬಂದಿತು. ಅದರಲ್ಲೂ ಪರಿಣತಿಯ ಅವಶ್ಯಕತೆಯಿತ್ತಾದರೂ, ನೂಲು ಕೈಗೆ ಹತ್ತಿರದಲ್ಲೇ ಸಿಕ್ಕುವಂತೆ ಇರುತ್ತಿದ್ದುದರಿಂದ ನಿಯಂತ್ರಣ ಸ್ವಲ್ಪ ಸುಲಭವಾಗಿತ್ತು.
ಹತ್ತಿಯನ್ನು ಅಜ್ಜಂಪುರದ ಸುತ್ತಮುತ್ತ ಬೆಳೆಯುತ್ತಿದ್ದರೂ, ಅದೆಲ್ಲ ದಾವಣಗೆರೆಗೆ ಸರಬರಾಜಾಗುತ್ತಿತ್ತು. ಆ ವೇಳೆಗಾಗಲೇ ಮಿಲ್ ಬಟ್ಟೆಯ ಬಳಕೆ ಸಾಮಾನ್ಯವೆಂಬಂತೆ ಆಗಿತ್ತಾದರೂ, ಸ್ವದೇಶಿಯೆಂಬ ಹೆಗ್ಗಳಿಕೆಯನ್ನು ಮೆರೆಸಲೆಂದು ಕೆಲವರು, ಖಾದಿಯ ಬಗ್ಗೆ ನೈಜ ಗೌರವವುಳ್ಳ ಮಂದಿ ಖಾದಿಯತ್ತ ಒಲವು ತೋರುತ್ತಿದ್ದರು. ಖಾದಿ ಒರಟು ಎಂಬುದೇನೋ ವಾಸ್ತವ. ಆದರೆ ಅದರ ಹಿಂದಿದ್ದ ಗಾಂಧೀಜಿಯವರ ಕಳಕಳಿಯನ್ನು ಬಹಳಷ್ಟು ಮಂದಿ ಅರ್ಥಮಾಡಿದ್ದರೆಂದು ಕಾಣುತ್ತದೆ. ಹಾಗಿಲ್ಲದಿದ್ದಲ್ಲಿ, ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಿರುತ್ತಿರಲಿಲ್ಲ. ಕೆಲವು ವರ್ಷಗಳ ನಂತರ ಅಜ್ಜಂಪುರದಲ್ಲಿ ಕೈಮಗ್ಗವನ್ನೂ ಸ್ಥಾಪಿಸಿ, ಬಟ್ಟೆಯನ್ನು ನೇಯುವ ಕೆಲಸವೂ ಆರಂಭವಾಯಿತು. ಅಂದಿನ ಹಣಕಾಸಿನ ಲೆಕ್ಕಾಚಾರಗಳೆಲ್ಲ ಸಾವಿರವನ್ನು ದಾಟುತ್ತಿರಲಿಲ್ಲವಾದರೂ, ಉತ್ಪಾದಿತ ಬಟ್ಟೆಯ ರಾಶಿ ಮಾತ್ರ ಅಗಾಧವಾಗಿ ಕಾಣುತ್ತಿತ್ತು. ಸ್ವಾತಂತ್ರ್ಯ ಬಂದು ಆರು ದಶಕಗಳ ನಂತರ ಈ ಕೈಗಾರಿಕೆ ಸುಧಾರಿಸಿದೆಯೇ, ಜನರು ಅದರ ಹತ್ತಿರ ಆಕರ್ಷಿತರಾಗಿದ್ದಾರೆಯೇ ಎಂದು ನೋಡಿದರೆ, ನಾವು ವ್ಯರ್ಥ ಶ್ರಮಪಟ್ಟೆವೆಂದು ಕೆಲವೊಮ್ಮೆ ಅನ್ನಿಸುತ್ತದೆ, ಆದರೆ ಸ್ವಾವಲಂಬನೆಗೆ ದಾರಿಯಾಗಿ, ಅಂದಿನ ದಿನಗಳಲ್ಲಿ ಬಡ ರೈತರಿಗೆ ಮಾರುಕಟ್ಟೆ ಒದಗಿಸಿದ್ದಲ್ಲದೆ, ದೇಶಭಕ್ತಿಯನ್ನಿಷ್ಟು ಖಾದಿಯ ಮೂಲಕ ಪ್ರಚುರ ಪಡಿಸಿದ್ದರ ಸಾರ್ಥಕತೆಯನ್ನಂತೂ ನಮ್ಮಿಂದ ಯಾರೂ ಕಿತ್ತುಕೊಳ್ಳಲಾರರು ಎಂದು ಮಾತು ಮುಗಿಸಿದರು.

ಈ ಭಂಡಾರವಿದ್ದ ಕಟ್ಟಡದ ಚಿತ್ರವನ್ನಾದರೂ ಈ ಲೇಖನದೊಂದಿಗೆ ಪ್ರಕಟಿಸುವ ಇರಾದೆಯಿತ್ತು. ಆದರೆ ಈ ಕಟ್ಟಡದ ಮುಂದೊಂದು ದೊಡ್ಡ ಕಟ್ಟಡ ನಿರ್ಮಾಣವಾಗುತ್ತಿದ್ದು, ಖಾದಿ ಭಂಡಾರ ಅಕ್ಷರಶಃ ಮರೆಯಾಗಲಿದೆ. ಊರಿನ ಬೆಳವಣಿಗೆಯಲ್ಲಿ, ಸ್ಥಳೀಯರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ, ದೇಶಭಕ್ತಿಯನ್ನು ಪ್ರತಿನಿಧಿಸುತ್ತಿದ್ದ ಸಂಸ್ಥೆಯೊಂದು ನಮ್ಮೂರಿನಲ್ಲಿತ್ತೆಂಬ ನೆನಪು ಮಾತ್ರ ನಮ್ಮದು.

-      ಶಂಕರ ಅಜ್ಜಂಪುರ
    ದೂರವಾಣಿ : 99866 72483
* * * * * * *

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ