ಅಜ್ಜಂಪುರ ಜಿ ಸೂರಿ

ನಾನು ಈ ಬ್ಲಾಗ್ ನ್ನು ಆರಂಭಿಸಿದಾಗಿನಿಂದ ಹಲವರು ಅಜ್ಜಂಪುರ ಸೂರಿಯವರ ಬಗ್ಗೆ ನೀವೇಕೆ ಇನ್ನೂ ಲೇಖನ ಪ್ರಕಟಿಸಿಲ್ಲ ಎಂದು ಅನೇಕರು  ನನ್ನನ್ನು ಕೇಳುತ್ತಿದ್ದರು. ನಾನು ಅಜ್ಜಂಪುರದಲ್ಲಿ ಇದ್ದ ಸಮಯದಲ್ಲಿ ಅವರ ಅನುವಾದಿತ ಕಥೆ-ಕಾದಂಬರಿಗಳ ಬಗ್ಗೆ ಕೇಳುತ್ತಿದ್ದೆನಾದರೂ,  ಅವರನ್ನು ಭೇಟಿಮಾಡಿ ಮಾತನಾಡುವಷ್ಟು ಸಂಪರ್ಕವಿರಲಿಲ್ಲ.
ನಮ್ಮೂರಿನ ಹೆಸರನ್ನು ತಮ್ಮ ಸಾಹಿತ್ಯ ಚಟುವಟಿಕೆಗಳಿಂದ ಜನರ ಮನಸ್ಸಿನಲ್ಲಿ ಮೂಡಿಸಿದ ಸೂರಿಯವರ ಬಗ್ಗೆ ಬರೆಯಬೇಕೆಂಬುದು  ಅನೇಕ ವರ್ಷಗಳ ಆಶಯ. ಮುಂದೆ, ಮಿತ್ರ ಮಲ್ಲಿಕಾರ್ಜುನರು, ಸೂರಿಯವರ ಪುತ್ರನನ್ನು ಸಂಪರ್ಕಿಸಿ ಮಾಹಿತಿ ಕೊಡುವುದಾಗಿಯೂ ತಿಳಿಸಿದ್ದರು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಅವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ದೊರೆತ ಸವಿವರ-ಸಚಿತ್ರ ಮಾಹಿತಿಗಿಂತ ಹೆಚ್ಚಿನದೇನೂ ಬೇಕಿರಲಿಲ್ಲ. ಹೀಗಾಗಿ ಕಣಜದಲ್ಲಿ ದೊರೆತ ಈ ಲೇಖನವನ್ನು ಕೃತಜ್ಞತಾಪೂರ್ವಕವಾಗಿ ಇಲ್ಲಿ ಪ್ರಕಟಿಸಿರುವೆ. 
- ಶಂಕರ ಅಜ್ಜಂಪುರ 
ಕವಿ, ವಚನಕಾರ, ಕಾದಂಬರಿಕಾರ, ಅನುವಾದಕ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಸಾಹಿತಿ ಎನಿಸಿಕೊಂಡಿದ್ದ ಜಿ. ಸೂರ್ಯನಾರಾಯಣರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ 1939ರ ಏಪ್ರಿಲ್‌ 17ರಂದು. ತಂದೆ ಗೋವಿಂದಪ್ಪನವರು ಮತ್ತು ತಾಯಿ ಪಾರ್ವತಮ್ಮನವರು. ತಂದೆಯವರದು ಮೂಲತಃ ಬಳೆಮಾರುವ ಕಾಯಕ ಪ್ರವೃತ್ತಿಯಾದರೂ, ದೈಹಿಕ ಸೌಖ್ಯಕ್ಕೆ ಆಯುರ್ವೇದ ಚಿಕಿತ್ಸೆಯನ್ನೂ ಪಾರಮಾರ್ಥಿಕಕ್ಕೆ ಅಧ್ಯಾತ್ಮ ಚಿಕಿತ್ಸೆಯನ್ನೂ ನೀಡುತ್ತ ಗೋವಿಂದಾರ್ಯರೆನಿಸಿದ್ದರು.
ಈ ಪರಿಸರದಲ್ಲಿ ಬೆಳೆದ ಸೂರಿಯವರೂ ತಮ್ಮ ಬದುಕಿನಲ್ಲಿ ಸುಸಂಸ್ಕೃತ ಬದುಕನ್ನು ರೂಢಿಸಿಕೊಂಡಿದ್ದರು. ಅಜ್ಜಂಪುರದಲ್ಲಿ ಪ್ರೌಢಶಾಲೆಯವರೆಗೆ ಓದಿ ನಂತರ ಕೃಷಿಕ್ಷೇತ್ರದಲ್ಲಿ ಡಿಪ್ಲೊಮ ಪಡೆದ ಸೂರಿಯವರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿ ಕ್ಷೇತ್ರಾಭಿವೃದ್ಧಿ ಅಧಿಕಾರಿಯವರೆಗೂ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದರು.
ಬಾಲ್ಯದಿಂದಲೇ ಸಣ್ಣ ಕಥೆ, ಕಾದಂಬರಿ ಬರೆಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಅಜ್ಜಂಪುರ ಸೂರಿ ಅವರು ಹಲವಾರು ಕಾದಂಬರಿಗಳನ್ನು ಬರೆದರು. ಅವರ ಬಹುಪಾಲು ಕಾದಂಬರಿಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಶಾಪ, ಹೊಸಚಿಗುರು, ತೋಟದಮನೆ, ಎರಡು ಮನಸು, ಅನುಬಂಧ ಕಾದಂಬರಿಗಳು ಪ್ರಕಟವಾಗಿದ್ದರೆ ಮಾರ್ಗದರ್ಶಿ, ಶ್ವೇತಾಗ್ನಿ, ವಿಮುಕ್ತಿ, ನೇಗಿಲಗೆರೆ ಮುಂತಾದ ಕಾದಂಬರಿಗಳು ಗಿರಿವಾರ್ತೆ, ‘ಮನ್ವಂತರ’, ‘ಅಭಿಮಾನಿ’, ‘ಗೆಳತಿಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು.
ಸೂರಿಯವರು ಬಾನುಲಿಗಾಗಿ ಬರೆದ ಹಲವಾರು ನಾಟಕಗಳು ಬೆಂಗಳೂರು ಭದ್ರಾವತಿ ನಿಲಯಗಳಿಂದ ಪ್ರಸಾರಗೊಂಡಿವೆ. ಅವುಗಳಲ್ಲಿ ಕೊನೆಯಾಸೆ, ಕುಳ್ಳರು, ಬೋನಿಗೆ ಬಿದ್ದ ಹುಲಿ, ಮರಗಡುಕ, ಪ್ರೇತಗಳು ಸುಮಂಗಲಿಯರು, ಧನ್ಯಭಿಕ್ಷು, ಒಂದೇ ಜನ ಒಂದೇ ಮನ ಹಲವಾರು ಬಾರಿ ಪ್ರಸಾರವಾಗಿದ್ದರೆ ಪರಿವರ್ತನೆಮತ್ತು ಅಂತರರಂಗನಾಟಕಗಳು ಸ್ಪರ್ಧೆಗಳಲ್ಲಿ ಪ್ರದರ್ಶಿತವಾಗಿ ಹಲವಾರು ಬಹುಮಾನಗಳನ್ನೂ ಪಡೆದಿವೆ.
ತೆಲುಗು ಸಾಹಿತ್ಯವನ್ನೂ ಬಾಲ್ಯದಿಂದಲೇ ಓದುತ್ತಿದ್ದ ಅಜ್ಜಂಪುರ ಸೂರಿ ಅವರು, ಅವುಗಳಲ್ಲಿ ತಮಗೆ ಇಷ್ಟವಾಗಿದ್ದನ್ನು ಕನ್ನಡಕ್ಕೆ ಏಕೆ ಅನುವಾದಿಸಬಾರದು ಎಂದೆನಿಸಿ, ತೆಲುಗಿನ ಹಲವಾರು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಅವುಗಳಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಂಸ್ಕರಣಮತ್ತು ಸೀತೆಯ ಕತೆಯಲ್ಲಿ ಸ್ತ್ರೀಪಾತ್ರಗಳುಧಾರಾವಾಹಿಯಾಗಿ ಪ್ರಕಟಗೊಂಡವು. ತರಂಗದಲ್ಲಿ ಮನ್ಮಥರೇಖೆ, ಷಾಂಗ್ರೀಲಾ, ಲೇಡೀಸ್‌ ಹಾಸ್ಟೆಲ್‌, ಅರಣ್ಯ ಮೃದಂಗ, ಜ್ವಾಲಾಮುಖಿ, ಭೂಮಿ ಬಾಯ್ಬಿಟ್ಟಾಗ, ಕ್ರಿಕೆಟ್‌-ಕ್ರಿಕೆಟ್‌ ಕಾದಂಬರಿಗಳು; ಸುಧಾ, ಮಯೂರ ಪತ್ರಿಕೆಗಳಲ್ಲಿ ವೂಡು, ಕಾಲರುದ್ರ, ಒಬ್ಬ ಸೂರ್ಯ ಕಾದಂಬರಿಗಳು; ‘ವಾರಪತ್ರಿಕೆಯಲ್ಲಿ (ವೈಕುಂಠರಾಜುಪತ್ರಿಕೆ) ಕರ್ಮಸಾಕ್ಷಿ, ಕಿನ್ನರಸಾನಿ, ಹಿಮಜ್ವಾಲೆ, ಅನ್ವೇಷಿ ಕಾದಂಬರಿಗಳು ಪ್ರಕಟಗೊಂಡವು. ಇಷ್ಟೇ ಅಲ್ಲದೆ ಪ್ರಜಾಮತ, ಅಭಿಮಾನಿ, ಲೋಕವಾಣಿ, ಮಂಗಳಾ, ಕರ್ಮವೀರ ಮುಂತಾದ ಪತ್ರಿಕೆಗಳೂ ಸೇರಿ ಒಟ್ಟು 40ಕ್ಕೂ ಹೆಚ್ಚು ಸ್ವತಂತ್ರ ಹಾಗೂ ಅನುವಾದಿತ ಕಾದಂಬರಿಗಳು ಧಾರಾವಾಹಿಯಾಗಿಯೇ ಪ್ರಕಟಗೊಂಡು ದಾಖಲೆಯನ್ನೇ ನಿರ್ಮಿಸಿದ್ದಾರೆ.
ಅಲೆಗಳು, ಧ್ವನಿಗಳು, ಸ್ನೇಹವಾರ್ತೆ, ಹಸಿರು ತೋರಣ ಮುಂತಾದ 10ಕ್ಕೂ ಹೆಚ್ಚು ವಿವಿಧ ವಿಷಯಗಳ ಮೇಲೆ ಇತರರೊಡನೆ ಸೇರಿ ಸಂಪಾದಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಸ್ವತಂತ್ರ ಕಥೆಗಳು ಪ್ರಕಟವಾಗಿರುವುದರ ಜೊತೆಗೆ 200ಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ಅನುವಾದಿಸಿದ್ದಾರೆ.
ಹೀಗೆ ಸದಾ ಸಾಹಿತ್ಯ ಚಟುವಟಿಕೆಯಲ್ಲಿಯೇ ತೊಡಗಿಸಿಕೊಂಡಿದ್ದು, ಭಾರ್ಗವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಲೆನಾಡ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಸೂರಿಯವರು ಈ ಲೋಕದಿಂದ ದೂರವಾದದ್ದು 2008ರ ಮೇ 25ರಂದು.

ಮಾಹಿತಿ ಕೃಪೆ: ಕಣಜ

ಕಾಮೆಂಟ್‌ಗಳು

  1. ಸೂರಿ ತಾತ ನಮ್ಮ ಸಂಬಂಧಿಕರು ಎಂದು ಹೇಳುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ ಹಾಗೂ ಅಜ್ಜಂಪುರದ ಹೆಸರನ್ನು ಶಾಶ್ವತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿ ಉಳಿಸಿದ್ದಾರೆ ಎಂದು ಅಜ್ಜಂಪುರದವನಾಗಿ ನಾನು ಹೆಮ್ಮೆಯಿಂದ ಹೇಳುತ್ತೇನೆ
    ಇಂತಿ ನಿಮ್ಮ
    ಉಲ್ಲಾಸ್ ಅಜ್ಜಂಪುರ

    ಪ್ರತ್ಯುತ್ತರಅಳಿಸಿ
  2. ಸೂರಿ ತಾತ ನಮ್ಮ ಸಂಬಂಧಿಕರು ಎಂದು ಹೇಳುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ ಹಾಗೂ ಅಜ್ಜಂಪುರದ ಹೆಸರನ್ನು ಶಾಶ್ವತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿ ಉಳಿಸಿದ್ದಾರೆ ಎಂದು ಅಜ್ಜಂಪುರದವನಾಗಿ ನಾನು ಹೆಮ್ಮೆಯಿಂದ ಹೇಳುತ್ತೇನೆ
    ಇಂತಿ ನಿಮ್ಮ
    ಉಲ್ಲಾಸ್ ಅಜ್ಜಂಪುರ

    ಪ್ರತ್ಯುತ್ತರಅಳಿಸಿ
  3. ಅಜ್ಜಂಪುರ ಜಿ ಸೂರಿಯವರ ಮನ್ಮತ ರೇಖೆ ಕಾದಂಬರಿ ಸಿಗಬಹುದೇ ?\

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ