ಅಜ್ಜಂಪುರದ ಬಸವಣ್ಣ ದೇವರ ಗುಡಿ

ಎಲ್ಲರಿಗೂ 2016 - ಹೊಸ ವರ್ಷದ ಶುಭಾಶಯಗಳು 

ಈ ಲೇಖನದ ಹೊಳಹು ಮೂಡಿದ್ದು ಅಜ್ಜಂಪುರದ ಹಿರಿಯ ಪತ್ರಕರ್ತರಾದ ಶ್ರೀ ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿಯವರಿಂದ. ಒಮ್ಮೆ ಅವರೊಂದಿಗೆ ಅಜ್ಜಂಪುರದಲ್ಲಿರುವ ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾಗ, ಅವರು ಈಗ ಅಜ್ಜಂಪುರದ ಪೇಟೆಬೀದಿಯಲ್ಲಿ ನೆಲೆಗೊಂಡಿರುವ ಬಸವಣ್ಣನ ದೇವಾಲಯವು ಹಿಂದೆ ಕೋಟೆ ಪ್ರದೇಶದಲ್ಲಿತ್ತು ಎಂಬ ಅಪರೂಪದ ಸಂಗತಿಯನ್ನು ಹೊರಗೆಡಹಿದ್ದರು. ಬಹಳ ಕಾಲ ಅದರ ವಿವರಗಳು ದೊರೆಯಲಿಲ್ಲವಾಗಿ ಹಾಗೇ ನೆನೆಗುದಿಯಲ್ಲಿತ್ತು. ನನ್ನ ಮಿತ್ರ ಅಪೂರ್ವ (ಅಪ್ಪಾಜಿ)ಯನ್ನು ಈ ಬಗ್ಗೆ ಸಂಪರ್ಕಿಸಿದಾಗ, ಅವರು ಆಸ್ಥೆತಳೆದು, ಈ ದೇವಾಲಯದ ಚಿತ್ರ ಮತ್ತು ಲೇಖನದ ವಿವರಗಳನ್ನು ಕಳಿಸಿದರು. ನಾನು ಪದೇ ಪದೇ ವಿನಂತಿಸುತ್ತಿರುವಂತೆ, ಊರಿನಲ್ಲಿರುವವರು ಅಪೂರ್ವರಂತೆಯೇ ಆಸಕ್ತಿ ತಳೆದು ಚಿತ್ರ-ಮಾಹಿತಿಗಳನ್ನು ಕಳಿಸುವಂತಾದರೆ, ಈ ಬ್ಲಾಗ್ ನ್ನು ಅಜ್ಜಂಪುರದ ಬಗ್ಗೆ ಮಾಹಿತಿ ಕಣಜವನ್ನಾಗಿಸಬಹುದು. ಹಾಗೆ ಆದೀತೆಂದು ನನ್ನ ಆಶಯ. ಬ್ಲಾಗ್ ಆರಂಭವಾದಂದಿನಿಂದ ಬೆಂಬಲಿಸುತ್ತಿರುವ ಅಜ್ಜಂಪುರ ಮಂಜನಾಥ, ಮಲ್ಲಿಕಾರ್ಜನ ಅಜ್ಜಂಪುರ, ಬಿ.ಎನ್. ಮಾಧವರಾವ್ ಇವರ ಕೊಡುಗೆಯನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ರುದ್ರದೇವರು ಮತ್ತು ವೀರಭದ್ರದೇವರು ದಕ್ಷಪ್ರಜಾಪತಿಯ ಯಜ್ಞಕಾಲದಲ್ಲಿ ಅವತರಣಗೊಂಡ ಶಿವನ ಉಗ್ರರೂಪವೆನ್ನುವುದು ಪೌರಾಣಿಕ ಐತಿಹ್ಯ. ಈ ಕಥಾನಕವನ್ನು ಒಳಗೊಂಡಿರುವ ಜಾನಪದ ಕಲೆ ವೀರಗಾಸೆ ನಮ್ಮೂರ ವಿಶೇಷಗಳಲ್ಲಿ ಒಂದು. ಸತ್ವಯುತ ಸಂಭಾಷಣೆ, ರೋಚಕ ಅಭಿನಯ, ಸುಂದರ ವಸ್ತ್ರವಿನ್ಯಾಸಗಳಿಂದ ಕೂಡಿದ ಈ ಕಲೆಯ ಬಗ್ಗೆ ಮುಂದೊಮ್ಮೆ ವಿಸ್ತಾರವಾಗಿ ಪ್ರಸ್ತಾಪಿಸುವೆ.
- ಶಂಕರ ಅಜ್ಜಂಪುರ 
-------------------------------------------------------------------------------------------------------------------------------------------------------------
ಬಸವಣ್ಣನ ದೇವಾಲಯ
ಬಹಳಷ್ಟು ಊರುಗಳ ಪ್ರಮುಖ ಬೀದಿಗಳು ಇಂದಿಗೂ ಹಾಗೆಯೇ ಉಳಿದಿರಬಹುದು. ಆದರೆ ನಾಲ್ಕುದಶಕಗಳ ಹಿಂದೆ ಅಜ್ಜಂಪುರದ ಪೇಟೆ ಬೀದಿಯನ್ನು ನೋಡಿದ್ದವರು, ಈಗ ಬಂದರೆ ಅದೆಲ್ಲಿದೆಯೆಂದು ಆಶ್ಚರ್ಯಪಡುವಷ್ಟು ಬದಲಾವಣೆಗಳು ಬಂದಿವೆ. ಅಜ್ಜಂಪುರದ ಪೇಟೆ ಬೀದಿ ಈಗ ನಶಿಸಿಹೋಗಿದೆ. ಬದಲಾವಣೆ ಅನಿವಾರ್ಯ, ನಿಜ. ಆದರೆ ಈ ಪರಿಯಲ್ಲಿ ಅಲ್ಲ!
ಪೇಟೆ ಬೀದಿಯಲ್ಲಿ ಆರಂಭದಲ್ಲೇ ಕಂಡುಬರುವುದು ಬಸವಣ್ಣನ ದೇವಾಲಯ. ಒಂದುಕಾಲದಲ್ಲಿ ಈಗಿನ ಬಸವಣ್ಣ ದೇವಾಲಯವಿರುವ ಸ್ಥಳದಲ್ಲಿ ಚಿಕ್ಕದೊಂದು ಬಸವಣ್ಣನ ಗುಡಿಯಿದ್ದಿರಬಹುದು. ಸಾಧಾರಣವಾಗಿ ಎಲ್ಲ ಶಿವಾಲಯಗಳಲ್ಲಿ ಶಿವಲಿಂಗದ ಮುಂದೆ ನವರಂಗದಲ್ಲಿ ಬಸವಣ್ಣನಿರುವುದು ವಾಡಿಕೆ.  ಆದರೆ ಇಲ್ಲಿ ಬಸವಣ್ಣನೇ ಅಧಿಷ್ಠಾತ. ರೈತವರ್ಗವೇ ಹೆಚ್ಚಿರುವ ಅಜ್ಜಂಪುರದಲ್ಲಿ ಬಸವಣ್ಣನಿಗೊಂದು ಗುಡಿ ಕಟ್ಟಿ ಆರಾಧಿಸುತ್ತಿರುವುದು, ಕೃಷಿ ಸಂಬಂಧಿತ ಕೃತಜ್ಞತೆಯ ದ್ಯೋತಕವೂ ಹೌದು.

ರೈತ ವರ್ಗದ ಅಧಿಷ್ಠಾತ - ಬಸವಣ್ಣ ದೇವರು

ಗಣಪನ ಶಿಲ್ಪ 
ರುದ್ರ ದೇವರು
ವೀರಭದ್ರ ದೇವರು
ಕೋಟೆಯ ಆವರಣದಲ್ಲಿ ಅಗಳು ಭಾವಿಯೆಂದು ಕರೆಯಲ್ಪಡುವ ಪಶ್ಚಿಮದಿಕ್ಕಿನ ಪ್ರದೇಶದಲ್ಲಿ ವೀರಭದ್ರನ ದೇವಾಲಯವಿತ್ತೆಂದು ಐತಿಹ್ಯ. ಇದಕ್ಕೆ ಪೂರಕವಾಗಿ ಈ ಪ್ರದೇಶದಲ್ಲಿ ದೇವಾಲಯಗಳ ಪಳೆಯುಳಿಕೆಗಳು ಆಗೀಗ ದೊರೆಯುತ್ತಿವೆ. ಈ ವಿಷಯದಲ್ಲಿ ಶಿಸ್ತುಬದ್ಧ ಅಧ್ಯಯನವು ಸಾಧ್ಯವಾದೀತಾದರೆ, ಇದನ್ನು ಸಾಬೀತುಗೊಳಿಸಬಹುದು. ಅಂಥ ದಿನಗಳು ಬರಲೆಂದು ಆಶಿಸುವುದಷ್ಟೇ ಈಗಿನ ಸಾಧ್ಯತೆ. 

ಕೋಟೆಯಲ್ಲಿ ನೆಲೆಗೊಂಡಿದ್ದ ವೀರಭದ್ರ ಮತ್ತು ರುದ್ರ ದೇವರ ವಿಗ್ರಹಗಳು, ಕಾಲಾಂತರದಲ್ಲಿ ಪೂಜಾದಿಗಳಿಲ್ಲದೆ, ಸೊರಗಿದವು. ಇದನ್ನು ಗಮನಿಸಿದ ಊರ ಹಿರಿಯರಾದ ಶೆಟ್ರ ಸಿದ್ದಪ್ಪನವರು, ಕುಪ್ಪಾಳು ಸಿದ್ದರಾಮಣ್ಣ, ಗಂಗಣ್ಣ, ನಿರ್ವಾಣಶೆಟ್ಟರ ಹಾಲಪ್ಪ, ಜವಳಿ ನಾಗಪ್ಪ, ಗುರುಪಾದಪ್ಪರ ಮಲ್ಲಯ್ಯ, ಭಂಗಿ ಕರಿಬಸಪ್ಪ ಮುಂತಾದವರು, ಈ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದರು. ತತ್ಪರಿಣಾಮವಾಗಿ, ಕೋಟೆಯಲ್ಲಿದ್ದ ಈ ಎರಡು ವಿಗ್ರಹಗಳನ್ನು ತಂದು ೧೯೩೨ರಲ್ಲಿ ಚಿತ್ರದುರ್ಗ ಬೃಹನ್ಮಠದ ಜಯದೇವ ಸ್ವಾಮಿಗಳಿಂದ ಉದ್ಘಾಟಿಸಲ್ಪಟ್ಟಿತು.
ಸಾಮಾನ್ಯವಾಗಿ ಎಲ್ಲ ದೇಗುಲಗಳು ಪೂರ್ವಾಭಿಮುಖವಾಗಿರುವುದು ವಾಡಿಕೆ. ಇಲ್ಲಿನ ಬಸವಣ್ಣನ ದೇಗುಲ ಮಾತ್ರ ಉತ್ತರಾಭಿಮುಖವಾಗಿದೆ. ಇಡೀ ದೇವಾಲಯವನ್ನು ಬಿಳಿಯ ಗ್ರಾನೈಟ್ ಶಿಲೆಯಿಂದ ನಿರ್ಮಿಸಲಾಗಿದೆ. ತೀರ ಇತ್ತೀಚಿನದಾದ್ದರಿಂದ ಶಿಲ್ಪಕಲೆಯ ಅಂಶಗಳೇನೂ ಗೋಚರಿಸುವುದಿಲ್ಲ. ಆದರೆ ಇದನ್ನು ನಿರ್ಮಿಸಲು ಬಳಸಿರುವ ತಂತ್ರಜ್ಞಾನ ಮಾತ್ರ ಪುರಾತನವಾದುದೇ. ಏಕೆಂದರೆ ಸಿಮೆಂಟ್, ಗಾರೆ ಮುಂತಾದ ಪದಾರ್ಥಗಳನ್ನು ಬಳಸದೇ, ಮೇಲಿನ ಮುಚ್ಚಿಗೆಯೂ ಸೇರಿದಂತೆ ಎಲ್ಲವನ್ನೂ ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಮಧ್ಯದಲ್ಲಿ ಬಸವಣ್ಣನಿದ್ದರೆ, ಎಡಭಾಗದಲ್ಲಿ ಗಣಪತಿಯ ವಿಗ್ರಹವಿದೆ. ಇದು ಬಹಳಕಾಲ ಬಸವಣ್ಣನ ಎದುರಿಗಿದ್ದ ಚಿಕ್ಕ ಗೂಡಿನಂಥ ರಚನೆಯಲ್ಲಿ ಪೀಠಸ್ಥವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅದನ್ನು ಪೂರ್ವಭಾಗದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ೧೮-೨೦ ಅಂಗುಲಗಳ ಎತ್ತರದ ಈ ಶಿಲ್ಪದ ರಚನೆಯು ಹೊಯ್ಸಳ ಶೈಲಿಯನ್ನು ಹೋಲುವಂತಿದೆ.
ಪಶ್ಚಿಮಕ್ಕೆ ಇರುವ ಗರ್ಭಗುಡಿಯಲ್ಲಿ ವೀರಭದ್ರ ಮತ್ತು ರುದ್ರದೇವರ ವಿಗ್ರಹಗಳನ್ನು ನೆಲೆಗೊಳಿಸಲಾಗಿದೆ. ಮೇಲುನೋಟಕ್ಕೆ ಒಂದೇ ಆಕಾರ, ಲಕ್ಷಣಗಳನ್ನು ಹೊಂದಿರುವ ಈ ವಿಗ್ರಹಗಳು ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟವು. 

ನನ್ನ ಗೆಳೆಯ ಶಂಕರ ಅಜ್ಜಂಪುರ ಇವುಗಳ ಚಿತ್ರಗಳನ್ನು “Ancient Monuments of India, a photo journey” ಎಂಬ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ, ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶಿಲ್ಪವಿದರಿಂದ ತಿಳಿಯಲು ಅಪೇಕ್ಷಿಸಿದರು. ಅಚ್ಚರಿಯೆನ್ನುವಂತೆ ಜರ್ಮನಿಯಲ್ಲಿರುವ ಭಾರತೀಯ ಶಿಲ್ಪಶಾಸ್ತ್ರ ವಿದ್ವಾಂಸರಾದ ಶ್ರೀಮತಿ ಕೊರಿನಾ ಮೆವಿಸನ್ ತಿಳಿಸಿದಂತೆ, ಇವುಗಳ ನಿರ್ಮಿತಿಯ ಅಂದಾಜು ಕಾಲ ವಿಜಯನಗರ ಪತನಾನಂತರದ್ದು. ಎಂದರೆ ಆರುನೂರು ವರ್ಷಗಳ ಇತಿಹಾಸವಿದೆಯೆಂದು ಹೇಳಬಹುದು. ಇದಲ್ಲದೆ, ಈ ಶಿಲ್ಪಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ಅವರ ಅಭಿಪ್ರಾಯದಲ್ಲಿ ಇಂತಹ ಎರಡು ರಚನೆಗಳು ತಮಿಳುನಾಡಿನ ಮಧುರೈ ಮೀನಾಕ್ಷಿ ಮಂದಿರದಲ್ಲಿ ಕಾಣಸಿಕ್ಕಿವೆ. ಅವುಗಳ ಚಿತ್ರಗಳನ್ನೂ ಇಲ್ಲಿ ನಮೂದಿಸಲಾಗಿದೆ.  ಅವುಗಳನ್ನು ಅಗ್ನಿ ವೀರಭದ್ರ ಮತ್ತು ಅಘೋರ ವೀರಭದ್ರನೆಂದು ಹೆಸರಿಸಲಾಗಿದೆ.
ದೇವಾಲಯಗಳು ಸಮಾಜದ ಸಂಘಟನೆಗೆ ಪ್ರೇರಕವಾಗುತ್ತದೆಯೆನ್ನುವುದು ಆನೂಚಾನವಾಗಿ ನಡೆದುಬಂದಿರುವ ಪ್ರಕ್ರಿಯೆ. ಬಸವಣ್ಣ ದೇವಾಲಯದ ಉದ್ದೇಶದಿಂದ ಸಂಘಟನೆಗೊಂಡ ಪೇಟೆಯ ವೀರಶೈವ ಸಮಾಜವು ಇಂದು ತರೀಕೆರೆ ರಸ್ತೆಯಲ್ಲಿ ಶ್ರೀ ಬಸವೇಶ್ವರ ಸಮುದಾಯ ಭವನವನ್ನು ಹೊಂದಿದೆ. ಬಿ.ಎಂ. ಏಕೋರಾಮಸ್ವಾಮಿ, ಕೆ.ಸಿ. ಜಯಕುಮಾರ್, ಬೆಲ್ಲದ ರಾಜಣ್ಣ, ಬಿ.ಎ. ರಾಜಕುಮಾರ್, ಬಿ.ಎಸ್. ಸದಾಶಿವಪ್ಪ, ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿ, ಜಿ.ಬಿ. ಜಯದೇವಪ್ಪ ಮುಂತಾದವರು ಸಮಾಜದಲ್ಲಿ ಸಕ್ರಿಯರಾಗಿ ಇಂದಿಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.













         

      
 - ಅಪೂರ್ವ, ಅಜ್ಜಂಪುರ 
ದೂರವಾಣಿ : 94810 75410 
* * * * * *




ಕಾಮೆಂಟ್‌ಗಳು

  1. ಪ್ರೀತಿಯ ಶಂಕರ್,
    ನಮ್ಮೂರಿನ ಬಸಣ್ಣ ದೇವರ ಗುಡಿಯಲ್ಲಿರುವ ವೀರಭದ್ರ ಮತ್ತು ರುದ್ರ ದೇವರು ಮೂಲತಃ ಕೊಟೆಯವರೇ ಎಂಬ ಸಂಗತಿ ಅಚ್ಚರಿ ಮತ್ತು ಒಂದು ರೀತಿಯ ಹರ್ಷ- ಹೆಮ್ಮೆಯ ಭಾವ ಮೂಡಿಸಿತು . ನಮ್ಮ ಹಾಗೇ ಮೈಗ್ರೆಟ್ ಆಗೀ ಕೋಟೆ ಬಿಟ್ಟು ನಡೆದರೂ , ಊರು ಬಿಡದೇ ಪೇಟೆ ಬೀದಿಯಲ್ಲಿ ಬಂದು ಬೀಡು ಬಿಟ್ಟ ಇತಿಹಾಸ ಅಲ್ಲೇ ಹುಟ್ಟಿ ಬೆಳೆದ- ಹೋಗುವ ವಯಸಾದ ನಮಗೇ ಈವರೆಗೂ ಗೊತ್ತಿಲ್ಲದ್ದು ನಾಚಿಗೆ ಗೇಡು. ಹಳೆಯ ಗುಡಿ ಬಿದ್ದು - ಬಯಲಲ್ಲಿ ನಿಂತು , ಕೊನೆಗೆ ವಿಗ್ರಹ ಚೋರರ ಕೈ ಚಳಕದಿಂದ ಹಡಗು ಹತ್ತಿ ವಿದೇಶಕ್ಕೆ ಹೊರಟು ಪರದೇಶಿಯಾಗ ಬೇಕಿದ್ದ ಮುದ್ದು ಗಣಪ, ಗ್ರಹಚಾರದಿಂದ ಕಡೂರಿನ ಕೋರ್ಟ್ ಮೆಟ್ಟಿಲಲ್ಲಿ ವರ್ಷಗಟ್ಟಲೆ ಕಾದು ಕಾದು ಕೊನೆಗೆ ಅಲ್ಲೇ ಪ್ರತಿಷ್ಟಿತನಾದ ಕಥೆ ಯಂತಾಗದೆ ನಮ್ಮೂರಿನಲ್ಲಿಯೇ ಉಳಿದ ವೀರಭದ್ರ ದೇವರು ನಿಜಕ್ಕೂ ಪುಣ್ಯವಂತ. ವೀರಭದ್ರನನ್ನೇ ಈಸಿ ಕೊಂಡರೂ - ಕಳೆಕೊಂಡ ಕೋಟೆಯವರು ಕೋಡಂಗಿಗಳಾಗದಂತೆ ಕಾಪಾಡಿದ ಅಂದಿನ ಪ್ರಾತಃ ಸ್ಮರಣೀಯ ಹಿರೇಕರ ಮುನ್ನೆಚ್ಚರಿಕೆಗೆ ಎಷ್ಟು ನಮನಗಳನ್ನು ಸಲ್ಲಿಸಿದರೂ ಕಡಿಮೆಯೇ . ಇಂತಹ ಮಹತ್ವದ ಇತಿಹಾಸಿಕ ಸಂಗತಿಯನ್ನು ತಿಳಿಸಿದ ನಿನ್ನ ಸಧಭಿರುಚಿಗೆ ಮತ್ತು ವಿಷಯವನ್ನು ಅಚ್ಚುಕಟ್ಟಾಗಿ ತಿಳಿಸಿದ ಅಪೂರ್ವರ ಬರಹಗಾರಿಕೆಗೆ ಅಭಿನಂದನೆಗಳು . ವೀರಭದ್ರನ ಚಿತ್ರಣ ನೀಡಿದ ಅಪೂರ್ವ ಇನ್ನಾದರೂ ಜೋಭದ್ರ ಮೋರೆಯ ಚಿತ್ರವನ್ನು ಬದಲಾಯಿಸಿ ಕೊಂಡಲ್ಲಿ ಚಂದ ಕಾಣುತ್ತದೆ . ಲೇಖನದ ಕೆಳಗಿನ ಆರೂ ಸ್ಟಾರ್ ಗಳನ್ನೂ ನಾನು ಅನುಮೋದಿಸಿರುವೆ . _ ಬಿ.ಎಸ್ಸ್.ಲಕ್ಷ್ಮೀ ನಾರಾಯಣ ರಾವ್.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ