ಅಮೃತಮಹಲ್ ಕಾವಲು ಉಳಿಸಿ -ಅವಿರತ ಹೋರಾಟದ ಕ್ರೋಢೀಕೃತ ವರದಿ ಸಂಗ್ರಹ - ಭಾಗ ೧





ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರ, ಅಜ್ಜಂಪುರ

ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 

ಈ ಲೇಖನ ಸರಣಿ ಮೂರು ಸಂಚಿಕೆಗಳಲ್ಲಿದೆ. ಅಜ್ಜಂಪುರದಲ್ಲಿರುವ ಯುವ ಪತ್ರಕರ್ತ ಶ್ರೀ ಎನ್. ವೆಂಕಟೇಶ ಹಾಗೂ ಅಮೃತಮಹಲ್ ಕಾವಲು ಉಳಿಸಿ ಹೋರಾಟ ಸಮಿತಿಯವರ ಅವಿರತ ಶ್ರಮ ಮತ್ತು ಹೋರಾಟದ ಫಲವಾಗಿ ಅಜ್ಜಂಪುರದ ಅಮೃತಮಹಲ್ ಪಶು ಸಂವರ್ಧನಾ ಕ್ಷೇತ್ರದ ಅಸ್ತಿತ್ವ ನಾಶವಾಗದಂಥ ನೆಲೆ ಕಂಡಿದೆ.
ಡಾ. ಟಿ.ಎಸ್. ಕೃಷ್ಣಮೂರ್ತಿಯವರ ಕಳಕಳಿಯುಕ್ತ ಸಲಹೆ
ತಮ್ಮ  ಸಗಣಿಯ ರಾಶಿಯಲ್ಲೇ ಮಲಗಿರುವ ಗೋ-ಕುಲ
ಈ ಸಂಸ್ಥೆಯನ್ನು ಅಷ್ಟುದ್ದ ಹೆಸರು ಹಿಡಿದು ಯಾರೂ ಕರೆಯುವುದಿಲ್ಲ, ಬದಲಾಗಿ ಫಾರಂ ಎನ್ನುವುದೇ ಹೆಚ್ಚು ಬಳಕೆಯಲ್ಲಿದೆ. ಫಾರಂನ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ ಮತ್ತು ಪ್ರೀತಿ. ಏಕೆಂದರೆ ಬಾಲ್ಯದಲ್ಲಿ ಅಲ್ಲಿನ ಅಮೃತಮಹಲ್ ತಳಿಯ ಹಸುಗಳ ಹಾಲನ್ನು ಕುಡಿದೇ ಬೆಳೆದವರು ನಾವೆಲ್ಲ. ಅದರ ಉತ್ತುಂಗ ಸ್ಥಿತಿಯಿದ್ದುದು 60-70ರ ದಶಕಗಳಲ್ಲಿ. ಆಗ ಈ ಕೇಂದ್ರದ ವ್ಯವಸ್ಥಾಪಕರಾಗಿದ್ದ ಶ್ರೀ ಟಿ. ಎಸ್. ಕೃಷ್ಣಮೂರ್ತಿಯವರು ಅದನ್ನು ವ್ಯವಸ್ಥಿತ ರೂಪದಲ್ಲಿಟ್ಟಿದ್ದರು. ಮೊಲ ಸಾಕಾಣಿಕೆಯಂಥ ಹೊಸ ಆಯಾಮವನ್ನು ಅಜ್ಜಂಪುರಕ್ಕೆ ಪರಿಚಯಿಸಿದರು. ಸರಕಾರದಿಂದ ದೊರೆಯುತ್ತಿದ್ದ ಅನುದಾನದಲ್ಲಿ ತಮ್ಮಿಂದ ಸಾಧ್ಯವಿದ್ದುದನ್ನೆಲ್ಲ ಪ್ರಾಮಾಣಿಕವಾಗಿ ಮಾಡಿದರು. ತಮ್ಮ ವೃತ್ತಿ ಮತ್ತು ಸಂಸ್ಥೆಯ ಬಗ್ಗೆ ಅವರಿಗೆ ಭಾವನಾತ್ಮಕ ಸಂಬಂಧಗಳಿದ್ದವು. ಅವರು ನಿವೃತ್ತರಾದರು. ಇಡೀ ಸಂಸ್ಥೆಯ ಆಡಳಿತ ಹದಗೆಟ್ಟಿತು, ಭ್ರಷ್ಟ ಅಧಿಕಾರಿಗಳು ತೂರಿಕೊಂಡರು. ನಾನು ಅಜ್ಜಂಪುರ ಬಿಟ್ಟು ನಾಲ್ಕು ದಶಕಗಳೇ ಆದರೂ, ನನಗೆ ಊರಿನ ಸಂಪರ್ಕ ತಪ್ಪಿಹೋಗಲಿಲ್ಲ. ಊರಿಗೆ ಹೋದಾಗಲೆಲ್ಲ, ಕಾಲು ಫಾರಂನತ್ತ ತಿರುಗುತ್ತಿದ್ದವು. ಅಲ್ಲಿನ ದುಸ್ಥಿತಿಯನ್ನು ನೋಡಿ ಹಲವಾರು ಬಾರಿ ಮರುಗಿ, ದುಃಖಿಸಿ ಬಂದದ್ದಿದೆ. ಅದರ ಫಲವೇ ೨೦೧೨ರ ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನವು ಈ ಕೇಂದ್ರದ ವ್ಯವಸ್ಥಾಪಕರಾಗಿದ್ದ ಶ್ರೀ ಟಿ. ಎಸ್. ಕೃಷ್ಣಮೂರ್ತಿಯವರ ಸಂದರ್ಶನವನ್ನು ಆಧರಿಸಿತ್ತು. ಇದಾದ ನಂತರ ಅಕ್ಟೋಬರ್ ೨೦೧೩ರಲ್ಲಿ ಈ ಸಂಸ್ಥೆಯನ್ನು ಕುರಿತಾದ ಇನ್ನೊಂದು ದೀರ್ಘ ವರದಿ ಪ್ರಕಟವಾಗಿತ್ತು.

ಕೋಡು ಮುರಿದು...... ಹುಳುವು ಸುರಿದು.....
ಮಲಗಿದಲ್ಲೇ ಮರಣ....
ಈ ಕೇಂದ್ರದ ಸದ್ಯದ ದುರವಸ್ಥೆಯನ್ನು ಕಂಡು ಕೇಳಿ ತಿಳಿದಿದ್ದ ನಾನು ಸಂದರ್ಶನದ ವೇಳೆಯಲ್ಲಿ ತೀರ ಅಪರೂಪದ ಪಶುಸಂಪತ್ತನ್ನು, ಅವುಗಳಿಗೆಂದು ಮೀಸಲಾದ ಭೂಮಿಯನ್ನು ನಾಶಮಾಡುತ್ತಿದ್ದಾರೆ, ಹೀಗೇಕೆ ಆಯಿತು ಡಾಕ್ಟರೇ, ಎಂದು ಅವರನ್ನು ಪ್ರಶ್ನಿಸಿದ್ದೆ. ಅವರು ಹೇಳಿದ್ದರು, ನೋಡಿ ಶಂಕರ್, ಎಲ್ಲಕ್ಕೂ ಉಚ್ಛ್ರಾಯ-ಅವನತಿಗಳು ಇದ್ದೇ ಇರುತ್ತವೆ, ಅಂಥ ವಿಜಯನಗರ ಸಾಮ್ರಾಜ್ಯವೇ ಉರುಳಿಹೋಯಿತು, ಇನ್ನು ಇದೆಲ್ಲಿಯ ಲೆಕ್ಕ, ಕಾಲದ ಹರಿವಿನಲ್ಲಿ ಹೀಗೆಲ್ಲ ನಡೆಯುತ್ತಲೇ ಇರುತ್ತದೆ. ಇರುವುದನ್ನು ಉಳಿಸಿಕೊಂಡು ಹೋಗುವ ತಿಳುವಳಿಕೆ ಸ್ಥಳೀಕರಿಗೆ, ರೈತರಿಗೆ, ನಾಗರಿಕರಿಗೆ ಬರುವವರೆಗೂ ಇದು ಹೀಗೆಯೇ. ಸುಧಾರಣೆ ಬಂದೀತು ಎಂದು ಆಶಿಸೋಣ ಎಂದು ಉತ್ತರಿಸಿದ್ದರು.
ಕಲ್ಲನ್ನು ಕುಡಿಯಲಾದೀತೇ.........


ಅವರ ಆಶಯ ಹುಸಿಯಾಗಲಿಲ್ಲ. ಅನತಿಕಾಲದಲ್ಲಿಯೇ ಈ ಕೇಂದ್ರದ ಪರಿಸ್ಥಿತಿ ಬಿಗಡಾಯಿಸಿದ್ದು ಜನರ ಅರಿವಿಗೆ ಬಂದಿತು. ತಮ್ಮ ಊರಿನ ಹೆಮ್ಮೆಯ ಸಂಕೇತವಾದ ಈ ಕೇಂದ್ರವನ್ನು ಸಮೀಪದ ಬೀರೂರಿಗೆ ವರ್ಗಾವಣೆ ಮಾಡಬೇಕೆಂಬ ಹುನ್ನಾರವೂ ತಿಳಿಯಿತು. ಆದರೆ ಇದರ ಹಿಂದೆ ಇದ್ದ ತರ್ಕವೆಂದರೆ ಚಪ್ಪಲಿಗೆ ತಕ್ಕಂತೆ ಕಾಲನ್ನೇ ಕತ್ತರಿಸಿಕೊಳ್ಳುವ ನೀತಿಯಿದು.  ಹೊಸದಾಗಿ ಮಂಜೂರಾಗಿರುವ ಜಂಟಿ ನಿರ್ದೇಶಕ ಹುದ್ದೆಯನ್ನು ತುಂಬಿದಾಗ ಅಲ್ಲಿಗೆ ಬರುವ ಅಧಿಕಾರಿಗಳಿಗೆ, ರಸ್ತೆ ಮತ್ತು ರೈಲು ಸೌಕರ್ಯಗಳಿರುವ ಬೀರೂರು ಅನುಕೂಲವೆನ್ನಿಸಿದಾಗ, ಕೇಂದ್ರವನ್ನೇ ಸ್ಥಳಾಂತರ ಮಾಡುವ ಆಲೋಚನೆ ಹೊಳೆಯಿತು.
ಮರಣೋತ್ತರ ಮರ್ಯಾದೆ.........
ಎದ್ದು ನಿಂತ ಅ.ಕಾ.ಉ.ಹೋ.ಸ.........







ಕೇಂದ್ರ ಸ್ಥಾನ ಬೀರೂರಿಗೆ - ವಿರೋಧ

ಈ ಹಿನ್ನೆಲೆಯಲ್ಲಿ ಜಾಗೃತಗೊಂಡ ಅಮೃತಮಹಲ್ ಕಾವಲು ಉಳಿಸಿ ಹೋರಾಟ ಸಮಿತಿ (ಅ.ಕಾ.ಉ.ಹೋ.ಸ.) ಹೀಗಾಗದಂತೆ ತಡೆಯಲು ಮಾಡಿದ ಪ್ರಯತ್ನವನ್ನು ತಡೆಯಲು ಪಕ್ಷಾತೀತವಾದ ಹೋರಾಟ ನಡೆಯಿತು. ಅದರಲ್ಲಿ ಕಾವಲು ಉಳಿಸಿ ಹೋರಾಟ ಸಮಿತಿಯ ರವೀಶ ಬಸಪ್ಪ, ಜಾತ್ಯತೀತ ಜನತಾ ದಳದ ಮುಖಂಡ ಎಸ್. ಶಿವಾನಂದ, ರೈತ ಸಂಘದ ಉಪಾಧ್ಯಕ್ಷ ಗುರುಶಾಂತಪ್ಪ, ಅಮ್ಜದ್, ನಟ, ಕಲಾವಿದ ಮಹಾವೀರ ಜೈನ್, ಗೆಳೆಯರ ಬಳಗ ವಿದ್ಯಾಸಂಸ್ಥೆಯ ಅಧ್ಯಕ್ಷ, ಎ.ಸಿ. ಚಂದ್ರಪ್ಪ ಇವರ ಆಗ್ರಹದಂತೆ ಯಾವ ಕಾರಣಕ್ಕೂ ಈ ಸಂವರ್ಧನಾ ಕೇಂದ್ರವು ಬೀರೂರಿಗೆ ವರ್ಗಾವಣೆಗೆ ಪ್ರತಿಭಟನೆ ವ್ಯಕ್ತವಾಯಿತು.
ದೂರದೃಷ್ಟಿಯಿದ್ದ ಹಿಂದಿನ ಆಡಳಿತಗಾರರು ಅಜ್ಜಂಪುರದಲ್ಲೇ ನೌಕರರು ಮತ್ತು ಅಧಿಕಾರಿಗಳಿಗೆ ಅಗತ್ಯವಾದ ವಸತಿಗೃಹಗಳನ್ನು ನಿರ್ಮಿಸಿದ್ದಾರೆ. ಸೂಕ್ತ ನಿರ್ವಹಣೆಯಿಲ್ಲದೆ ಅವು ಹಾಳಾಗಿವೆ, ನಿಜ. ಅದನ್ನು ಸರಿಪಡಿಸಿಕೊಂಡು ಈ ಸಂಸ್ಥೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗಲಾರದು. ಈ ಕ್ಷೇತ್ರವು ಅಜ್ಜಂಪುರ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಉಪನಿರ್ದೇಶಕರು, ಸಹ ನಿರ್ದೇಶಕರು, ಹತ್ತು ಜನ ಸಿಬ್ಬಂದಿ, ದಿನಗೂಲಿ ನೌಕರರು – ಹೀಗೆ  ಆಡಳಿತ ವ್ಯವಸ್ಥೆಗೂ ಕೊರತೆಯಿಲ್ಲ. ಇದರ ಅಡಿಯಲ್ಲಿ ಬೀರೂರು, ಬಾಸೂರು, ಲಿಂಗದಹಳ್ಳಿ, ರಾಮಗಿರಿ, ಚಿಕ್ಕಎಮ್ಮಿಗನೂರು, ಹಬ್ಬನಘಟ್ಟ ಈ ಕ್ಷೇತ್ರಗಳಲ್ಲಿ ಪಶು ಸಂವರ್ಧನೆ ಮತ್ತು ತಳಿಗಳನ್ನು ಸಾಕಿ ಬೆಳೆಸುವ ಕಾರ್ಯ ಎಂದಿನಿಂದಲೂ ನಡೆಯುತ್ತಲೇ ಬಂದಿದೆ.
ಅ.ಕಾ.ಉ.ಹೋ.ಸ. ತನ್ನ ಹೋರಾಟವನ್ನು ಅಧಿಕಾರಿಗಳ ಮಟ್ಟದಿಂದ ಆರಂಭಿಸಿದರೂ, ಅದು ದಿನಗಳೆದಂತೆ ಅದು ಉಪ ಲೋಕಾಯುಕ್ತರ ಗಮನ ಸೆಳೆಯುವಂತೆ ಮಾಡುವಲ್ಲಿ, ಈ ಸಮಿತಿಯು ಯಶಸ್ವಿಯಾಯಿತು. ಈ ಹೋರಾಟದ ಹಾದಿಯ ವಿವರಗಳನ್ನು ಕೇಳಿ ಶ್ರೀ ಎನ್. ವೆಂಕಟೇಶ್ ಗೆ ಮಿಂಚಂಚೆ ಬರೆದಾಗ ತಡವಿಲ್ಲದೇ ಸ್ಪಂದಿಸಿ, ಎಲ್ಲ ವಿವರಗಳನ್ನೂ, ಚಿತ್ರಗಳನ್ನೂ ದಿನಾಂಕ ಸಹಿತ ಕಳುಹಿಸಿದರು. ಅವರ ಈ ವ್ಯವಸ್ಥಿತ ಪದ್ಧತಿ ನನಗೆ ತುಂಬ ಇಷ್ಟವಾಯಿತು. ಅವರ ಮಾಹಿತಿ ಸಂಗ್ರಹದ ಅನುಕ್ರಮಣಿಕೆಯಲ್ಲಿ 17 ಸುದೀರ್ಘ ವರದಿಗಳಿವೆ, 33 ಚಿತ್ರಗಳಿವೆ. 

ಇವುಗಳಲ್ಲಿ ಹೋರಾಟ ಸಾಗಿಬಂದ ಹಾದಿ ಹಾಗೂ ಅಮೃತಮಹಲ್ ರಾಸುಗಳ ದಯನೀಯ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ.  ಇವುಗಳನ್ನು ಯಥಾವತ್ತಾಗಿ ಪ್ರಕಟಿಸುವುದಕ್ಕಿಂತ, ಅವುಗಳ ಸಂಗ್ರಹ ರೂಪವನ್ನು ನೀಡುವುದರಿಂದ, ಅಜ್ಜಂಪುರದಲ್ಲಿ ನಡೆಸಲಾದ ಅ.ಕಾ.ಉ.ಹೋ.ಸ. ಹೋರಾಟದ ಚಿತ್ರ ಸ್ಪಷ್ಟವಾಗಿ ಮೂಡುತ್ತದೆಯೆಂದು ಭಾವಿಸಿ ಅದನ್ನಿಲ್ಲಿ ನೀಡಿದ್ದೇನೆ.  ಇಷ್ಟಾಗಿಯೂ ಅವರ ಹೋರಾಟ ತಾರ್ಕಿಕ ಅಂತ್ಯವನ್ನೇನೂ ಕಂಡಿಲ್ಲ. ಆದರೆ ವ್ಯವಸ್ಥೆಯ ವಿರುದ್ಧ ಹೋರಾಡುವ, ತಮ್ಮ ಊರಿನ ಹೆಮ್ಮೆಯ ಸಂಸ್ಥೆಯ ಉಳಿವಿಗಾಗಿ ಈ ಸಮಿತಿ ಮಾಡುತ್ತಿರುವ ಹೋರಾಟವನ್ನು ಮೆಚ್ಚದೇ ಇರಲಾಗದು. ದೂರದೃಷ್ಟಿಯುಳ್ಳ ಅದರ ಸದಸ್ಯರಿಗೆ ಬೆಂಬಲ ಸೂಚಿಸೋಣ, ಅಭಿನಂದಿಸೋಣ.

ಮೀಟಿಂಗ್, ಮೀಟಿಂಗ್......

ಈ ಪಶು ಸಂವರ್ಧನಾ ಕ್ಷೇತ್ರಕ್ಕೆ ಡಾ. ಟಿ.ಎಸ್. ಕೃಷ್ಣಮೂರ್ತಿಯವರ ನಂತರ ಅನೇಕ ಅಧಿಕಾರಿಗಳು ಬಂದರು. ಆದರೆ ನಿಷ್ಠೆ ಮತ್ತು ಪ್ರಾಮಾಣಿಕತೆಗಳು ಮರೆಯಾಗುತ್ತಾ ಬಂದಿತು. ಹಾಗೆ ಬಂದವರಲ್ಲಿ ಇತ್ತೀಚೆಗೆ ಅಧಿಕಾರದಲ್ಲಿದ್ದ ಉಪನಿರ್ದೇಶಕ ಡಾ. ಜಿ.ಎಂ. ಸುರೇಶ್ ರ ಕರ್ತವ್ಯನಿಷ್ಠೆ, ಎಷ್ಟಿತ್ತೆಂದರೆ, ಸರಕಾರ ಅವರ ಉಪಟಳ ತಡೆಯಲಾರದೇ ಅವರನ್ನು ಅಮಾನತ್ತುಗೊಳಿಸುವುದು ಅನಿವಾರ್ಯವಾಯಿತು. ಕಾಮಗಾರಿಗಳಲ್ಲಿ ಹಣ ದೋಚುವುದು, ಕಳಪೆ ಕಾಮಗಾರಿಗಳಿಗೆ ಪ್ರೋತ್ಸಾಹ, ಪಶುಗಳ ಚಿಕಿತ್ಸೆಯ ಬಗ್ಗೆ ನಿರ್ಲಕ್ಷ್ಯ ಮುಂತಾದ ಹಲವಾರು ಕಾರಣಗಳಿಂದಾಗಿ ಹಲವು ಸರಕಾರೀ ವಿಚಾರಣೆಗಳಿಗೆ ಒಳಗಾಗಬೇಕಾಯಿತು. ಇವರ ನಂತರ ಡಾ. ಸಿ.ವಿ. ರಾಮಚಂದ್ರ ಅವರು 30 ನವೆಂಬರ್ 2013 ರಂದು ಪ್ರಭಾರಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ತಮ್ಮ ಅಧಿಕಾರಗ್ರಹಣದ ಪ್ರಥಮ ಪತ್ರಿಕಾ ಗೋಷ್ಠಿಯಲ್ಲಿ ಡಾ. ರಾಮಚಂದ್ರ ಹಲವು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ತಮಗೆ ಈ ಕ್ಷೇತ್ರದಲ್ಲಿ ಅನುಭವ ಕಡಿಮೆಯೆಂದು ಆರಂಭದಲ್ಲಿ ಒಪ್ಪಿಕೊಂಡ ಡಾ. ರಾಮಚಂದ್ರ, ದಿನಗಳೆದಂತೆ ಹೆಚ್ಚು ಸುಧಾರಣೆಗಳನ್ನು ತರುವುದಾಗಿ ಆಶ್ವಾಸನೆ ನೀಡಿದರು.
..........ಮುಂದುವರೆಯುವುದು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ