ಅಮೃತಮಹಲ್ ಕಾವಲು ಉಳಿಸಿ - ಅವಿರತ ಹೋರಾಟದ ಕ್ರೋಡೀಕೃತ ವರದಿ - ಭಾಗ 3



ಇದು "ಅಮೃತಮಹಲ್ ಕಾವಲು ಉಳಿಸಿ" ಹೋರಾಟದ ಇದುವರೆಗಿನ ವರದಿಯ ಕೊನೆಯ ಕಂತು. ಇಷ್ಟಾಗಿಯೂ ಹೋರಾಟ ತಾರ್ಕಿಕ ಅಂತ್ಯವನ್ನೇನೂ ಕಂಡಿಲ್ಲ. ಆದರೆ ರಾಜ್ಯದ ಹೆಮ್ಮೆಯ ಜಾನುವಾರು ತಳಿ ಸಂವರ್ಧನಾ ಕೇಂದ್ರವು ತನ್ನ ಸ್ಥಾಪಿತ ಉದ್ದೇಶಕ್ಕೆಂದು ಮುಂದುವರೆಯಬೇಕೆಂಬ ಕಳಕಳಿ ಹೋರಾಟಗಾರರದು. ಅವರ ಯತ್ನ ಯಶಸ್ವಿಯಾಗಲೆಂದು ಹಾರೈಸೋಣ. 


ಈ ಎಲ್ಲ ವರದಿಗಳನ್ನೂ ದಿನಾಂಕ ಸಹಿತ
, ಚಿತ್ರ-ಸಹಿತ ಅನುಕ್ರಮಣಿಕೆಯಲ್ಲಿ ಕಳಿಸಿದ ಪವಿತ್ರಾ ಪ್ರಿಂಟರ್ಸ್ ನ ಮಾಲಕ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಸ್ಥಳೀಯ ವರದಿಗಾರ ಶ್ರೀ ವೆಂಕಟೇಶ್ ರಿಗೆ ಧನ್ಯವಾದಗಳು. ಈ ಬ್ಲಾಗ್ ನಲ್ಲಿ ಅಜ್ಜಂಪುರದ ಎಲ್ಲ ಬೆಳವಣಿಗೆಗಳನ್ನು ದಾಖಲಿಸಲು ಅವಕಾಶವಿದೆ. ಲೇಖಕರು ತಮ್ಮ ಬರಹಗಳನ್ನು shankarajp@gmail.com ಈ ವಿಳಾಸಕ್ಕಾಗಲೀ, ದೂರವಾಣಿ ಸಂಖ್ಯೆ 99866 72483 ಇಲ್ಲಿಗಾಗಲೀ ತಿಳಿಸಲು ಕೋರುತ್ತೇನೆ.

-ಶಂಕರ ಅಜ್ಜಂಪುರ
---------------------------------------------------------------------------------------------------------------------------------------------------------------------------------------------



ಈ ಸಭೆಯಲ್ಲಿ ಅಂದು ಹಾಜರಿದ್ದ ಕೇಂದ್ರದ ಉಪ ನಿರ್ದೇಶಕ, ಡಾ. ಸುರೇಶ್, ನಿರ್ದೇಶಕ ಡಾ. ರಂಗನಾಥ್, ಸಮಾಜ ಸೇವಕ ಜಿ. ಚನ್ನಪ್ಪ, ಉಪನ್ಯಾಸಕ ಅರವಿಂದ ಐರಣಿ, ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಶಿಕ್ಷಕ ಹ. ಪುಟ್ಟಸ್ವಾಮಿ ಮತ್ತು ಸೇರಿದ್ದ ಇತರ ಜನಸಂದಣಿಗೆ ಒಂದು ವಿಶೇಷ ಅನುಭವವಾಗಿರಬೇಕು. ಮಾನವೀಯ ಮೌಲ್ಯಗಳ ಬೆಲೆ ಏನೆಂಬುದು ಸರಕಾರ ನೇಮಿಸಿದ ಸಮಿತಿಗೂ ಮನವರಿಕೆಯಾಗಿರಬೇಕು. ಏಕೆಂದರೆ ಮಾಜಿ ನಿರ್ದೇಶಕರಾಗಿದ್ದ ಡಾ. ಟಿ.ಎಸ್. ಕೃಷ್ಣಮೂರ್ತಿಯವರು ಬರುತ್ತಾರೆಂದು ತಿಳಿದಿದ್ದ ನಿವೃತ್ತ ನೌಕರ ಬಸಪ್ಪ ಓಡಿಬಂದು ಕೃಷ್ಣಮೂರ್ತಿಯವರ ಕೈ ಹಿಡಿದುಕೊಂಡು ಹೇಗಾದರೂ ಮಾಡಿ ಅಮೃತಮಹಲ್ ನ್ನು ಉಳಿಸಿ ಎಂದು ಕಣ್ಣೀರಿಟ್ಟು ಕೇಳಿಕೊಂಡರು. ಅದೊಂದು ನಿಜವಾಗಿಯೂ ಭಾವನಾತ್ಮಕ ಕ್ಷಣ. ಇಬ್ಬರೂ ನಿವೃತ್ತರಾದವರೇ. ಅವರಿಗೆ ಸಂಸ್ಥೆಯ ಹಂಗು ಏನೂ ಇರದು. ಹಾಗಿದ್ದರೂ, ತಾವು ಕೆಲಸ ಮಾಡಿದ ಸಂಸ್ಥೆಯ ದುರವಸ್ಥೆಯನ್ನು ಸಹಿಸಿಕೊಳ್ಳಲಾಗದೇ, ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದು, ಇಂದು ಮರೆಯಾಗುತ್ತಿರುವ ಮಾನವೀಯತೆ, ಸಹೃದಯತೆಗಳ ಸಂಕೇತವಾಗಿತ್ತು.
      ಬಸಪ್ಪನವರ ನೆನಪಿನ ಸಂಗ್ರಹದಲ್ಲಿ ಅವರು ಕಂಡಿದ್ದ ಹೋರಿಗಳು ಒಮ್ಮೆ ಗುಟುರು ಹಾಕಿ ನೆಲವನ್ನು ಒದ್ದರೆ, ಮೊಳಕೈ ಉದ್ದದ ಗುಂಡಿ ಬೀಳುತ್ತಿತ್ತು. ಅಜ್ಜಂಪುರಕ್ಕೆ ಹಂಚಿ ಉಳಿದ ಹಾಲನ್ನು ರಾಸುಗಳ ಗೋದಲಿಗೇ ಸುರಿಯುತ್ತಿದ್ದ ದಿನಗಳಿದ್ದವು, ರಾಸುಗಳ ಓಟದ ಸ್ಪರ್ಧೆಯಲ್ಲಿ 250 ಮೀ. ದೂರವನ್ನು ಕೇವಲ 10 ಸೆಕೆಂಡ್ ಗಳಲ್ಲಿ ಸಾಮರ್ಥ್ಯ ಅವುಗಳಿಗಿತ್ತು ಎಂದು ನೆನಪಿಸಿಕೊಂಡರು.

ತಹಶೀಲ್ದಾರ್ ಭೇಟಿ
ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ವಾರದ ಗಡುವು ನೀಡಿದ್ದರ ಪರಿಣಾಮವನ್ನು ಪರಿಶೀಲಿಸಲು ತಹಶೀಲ್ದಾರ್ ಶಿವಕುಮಾರ್ ರಿಗೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಆದೇಶ ನೀಡಿದ್ದರು. ಆದರೂ ಪರಿಸ್ಥಿತಿಯೇನೂ ಸುಧಾರಿಸಿರಲಿಲ್ಲ.
      ರಾಸುಗಳನ್ನು ಕೂಡಿಹಾಕುವ ಸ್ಥಳದಲ್ಲಿ ಎರಡು ಅಡಿಯಷ್ಟು ದಪ್ಪಕ್ಕೆ ಸಗಣಿ ಸಂಗ್ರಹಗೊಂಡಿದ್ದನ್ನು ಸ್ವತಃ ತಹಶೀಲ್ದಾರರೇ ಅಳೆದು, ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ರಾಸುಗಳ ಸ್ಥಿತಿ ಜಿಲ್ಲಾಧಿಕಾರಿಗಳು ಬಂದಾಗ ಹೇಗಿತ್ತೋ ಹಾಗೇ ಇತ್ತು. ಅವು ತಮ್ಮ ಸಗಣಿಯ ಕೆಸರಿನಲ್ಲೇ ಜೀವನ ನಡೆಸುವುದು ಅನಿವಾರ್ಯವಾಗಿದ್ದುದರಿಂದ, ಅವುಗಳಿಗೆ ಕಾಲು-ಬಾಯಿ ರೋಗ ತಗುಲಿತ್ತು. ಅವ್ಯವಸ್ಥೆಯ ಪರಮಾವಧಿಯೆಂದರೆ ಮೇವಿನ ಬಾನಿಯೂ ಸಗಣಿಯಿಂದ ತುಂಬಿರುವುದು. ಇದೆಲ್ಲದರ ನಡುವೆ ಉಪಲೋಕಾಯುಕ್ತರ ಭೇಟಿಯ ಹಿನ್ನೆಲೆಯಲ್ಲಿ ಉಪನಿರ್ದೇಶಕರ ಆದ್ಯತೆಯಂತೆ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯ ಮಾತ್ರ ಸರಾಗವಾಗಿ ಸಾಗಿತ್ತು.

ಅಮೃತಮಹಲ್ ಉಳಿಸಲು ಅಭಯ ನೀಡಿದ ಅಭಯ ಚಂದ್ರ ಜೈನ್
        ಅ.ಕಾ.ಉ.ಹೋ.ಸ. ತನ್ನ ಹೋರಾಟದ ಮುಂದುವರೆದ ಭಾಗವಾಗಿ ಜಿಲ್ಲೆಯ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ರಿಗೆ ಇಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡಲು ಪ್ರಯತ್ನಿಸಿತು. 501 ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯ ದುಸ್ಥಿತಿಯನ್ನು ನೋಡಿ ಮರುಗಿದರು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಇದನ್ನು ಸರಿಪಡಿಸುವುದು ತನ್ನ ಕರ್ತವ್ಯವೆಂದು ಭಾವಿಸಿದ ಅವರು, ದಸರಾದ ನಂತರ ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿಗಳ ಗಮನಕ್ಕೆ ಇದನ್ನು ತಂದು, ಅವರನ್ನು ಇಲ್ಲಿಗೆ ಕರೆತರಲಾಗುವುದು ಎಂಬ ಆಶ್ವಾಸನೆ ನೀಡಿದರು. ಅಮಾನತುಗೊಂಡಿರುವ ಈರ್ವರು ನೌಕರರನ್ನು ಪುನಃ ಸೇರಿಸಿಕೊಳ್ಳಲು ಆದೇಶ ನೀಡಿದರು. ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಅವರಿಗೂ ಇಲ್ಲಿನ ಸ್ಥಿತಿಯನ್ನು ನೋಡಿ ತಿಳಿಯಲು ಹೇಳುತ್ತೇನೆ ಎಂದರು.
      ಲೋಕಾಯುಕ್ತರಿಗೆ ಸಲ್ಲಿಸಬೇಕಿರುವ ಮಾಹಿತಿಯನ್ನೇ ಕಂತಿನಲ್ಲಿ ನೀಡುತ್ತಿರುವ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮಾತಿಗೆ ಅಗೌರವ ತೋರಿದರು. ಸ್ಥಳೀಯ ಶಾಸಕ ಜಿ.ಎಚ್. ಶ್ರೀನಿವಾಸರ ಮಾತಿಗೂ ಬಗ್ಗಲಿಲ್ಲದ್ದಕ್ಕೆ ಅವರ ಅಸಮಾಧಾನವೂ ಸಭೆಯಲ್ಲಿ ವ್ಯಕ್ತವಾಯಿತು.ಮಂಜೂರಾದ 4.85 ಕೋಟಿ ಅನುದಾನವನ್ನು ಸದ್ಬಳಕೆಮಾಡದ ಬಗ್ಗೆ ಪ್ರಸ್ತಾಪಿಸಿ, ಜಿ.ಪಂ ಮಾಜಿ ಅಧ್ಯಕ್ಷ ಅಜ್ಜಂಪುರದವರೇ ಆದ ತಿಪ್ಪೇರುದ್ರಯ್ಯ ಅಮೃತಮಹಲ್ ಮೃತಮಹಲ್ ಆಗುತ್ತಿದೆ ವಿಷಾದ ವ್ಯಕ್ತಪಡಿಸಿದರು. ಕರುಗಳನ್ನು ಮಿಶ್ರತಳಿಗಳಿಂದಿಗೆ ವಿನಿಮಯ ಮಾಡಿಕೊಳ್ಳುತ್ತಿರುವುದು ಈ ಕೇಂದ್ರದಲ್ಲಿ ನಡೆಯುತ್ತಿರುವ ಎಲ್ಲಕ್ಕಿಂತ ಅಪಾಯಕಾರಿ ಬೆಳವಣಿಗೆ.  ರಾಜ್ಯವು ನಿಜವಾಗಲೂ ಹೆಮ್ಮೆಪಡಬಹುದಾದ ಈ ತಳಿ ಸಂವರ್ಧನಾ ಕೇಂದ್ರವೀಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಇದರ ಪರಿಹಾರಕ್ಕೆಂದು ಯತ್ನಿಸುತ್ತಿರುವ ಹೋರಾಟ ಸಮಿತಿಯ ಯತ್ನಗಳು ಇನ್ನೂ ಮುಂದುವರೆಯುತ್ತಿದೆ.   ಹೋರಾಟದ ಅವಶ್ಯಕತೆಯಿಲ್ಲದೆ, ಸರ್ಕಾರವು ಸ್ವಯಂಪ್ರೇರಿತವಾಗಿ ಮಾಡಬಹುದಾಗಿರುವ ಕಾರ್ಯಗಳಿಗೆ, ಅಧಿಕಾರಿಗಳ ಆಲಸ್ಯತನ ತೊಲಗಿ, ದೂರದೃಷ್ಟಿಯುಳ್ಳ ಉತ್ತಮ ಅಧಿಕಾರಿಗಳು ಬಂದು ಈ ಕೇಂದ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತಾಗಲಿ ಎಂಬುದು ಹಾರೈಕೆ.

* * * * * * *

















ಕಾಮೆಂಟ್‌ಗಳು

  1. ಸ್ಠಳೀಯ ಅಧಿಕಾರಿಗಳು ಹಾಗೂ ರಾಜಕಾರಿಣಿಗಳು ಇತ್ತಗಮನಹರಿಸಿದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಣೆಗೊಳ್ಳಬಹುದೇನೋ?

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.