7 ಹಳ್ಳಿ, 18 ಮಾಗಣಿ, ಅಜ್ಜಂಪುರ ಸೀಮೆ !

ಶೀರ್ಷಿಕೆ ಸೇರಿಸಿ

ಏಪ್ರಿಲ್ 23 ರಿಂದ ಮೇ 1ರವರೆಗೆ ಅಜ್ಜಂಪುರಕ್ಕೆ ಏಳು ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಸೊಲ್ಲಾಪುರದಲ್ಲಿ ಶ್ರೀ ಸಿದ್ಧರಾಮೇಶ್ವರ ಜಾತ್ರೆಯ ಸಂಭ್ರಮ. ನನ್ನ 18-20 ವಯಸ್ಸಿನ ವರೆಗೂ ಅಜ್ಜಂಪುರದಲ್ಲೇ ಇದ್ದೆನಾದರೂ, ಒಮ್ಮೆಯೂ ಇಲ್ಲಿಗೆ ಹೋಗಲಾಗಿರಲಿಲ್ಲ. ಆದರೆ ಪ್ರತಿ 12 ವರ್ಷಕ್ಕೆ ನಡೆಯುವ ಈ ಜಾತ್ರೆಗೆ ಅಜ್ಜಂಪುರವೇ ಸೀಮೆಯೆಂಬ ಅಂಶ ತಿಳಿದದ್ದು ಇತ್ತೀಚೆಗೆ. ನನ್ನ ಗುರುಗಳಾದ ಚಂದ್ರಪ್ಪ ಮಾಸ್ತರರು ದೂರದ ಕುಶಾಲನಗರದಿಂದ ಫೋನ್ ಮಾಡಿ ಈ ಜಾತ್ರೆಯ ವಿವರಗಳನ್ನು ತಿಳಿಸಿ, ನೀನು ಅಲ್ಲಿಗೆ ಹೋಗಿ ನೋಡಿಕೊಂಡು ಬಾ ಎಂದಿದ್ದರು. ಹೀಗಾಗಿ ಗೆಳೆಯ ಅಪ್ಪಾಜಿಯೊಡನೆ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿನ ಹಿರಿಯರನ್ನು ಸಂದರ್ಶಿಸಿ, ಸಂಗ್ರಹಿಸಿದ ವಿವರಗಳನ್ನು ಇಲ್ಲಿ ನೀಡಿದ್ದೇನೆ. 
ಉಯ್ಯಾಲೆ ಮಂಟಪ

ಅಜ್ಜಂಪುರ ಮೂಲತಃ ಕೃಷಿ ಪ್ರಧಾನ ಜೀವನಶೈಲಿಯನ್ನು ಹೊಂದಿರುವಂಥದು. ಸ್ವಾಭಾವಿಕವಾಗಿ ಇಲ್ಲಿನ ಕೃಷಿ ಸಂಬಂಧಿತ ಆಚರಣೆಗಳ, ಕಲೆಗಳ ಮೂಲಸತ್ವ ಹಾಗೆಯೇ ಉಳಿದುಬಂದಿದೆ. ಮನುಷ್ಯರಿಗೆ ಇರುವ ಸಾಮುದಾಯಿಕ ಸಂಬಂಧಗಳಂತೆಯೇ, ಇಂಥ ಆಚರಣೆಗಳ ಮೂಲಕ ಸಾಂಪ್ರದಾಯಿಕ ಸಂಬಂಧಗಳ ಕಾರಣದಿಂದ ಊರುಗಳ ನಡುವೆಯೂ ಬಂಧುತ್ವ, ಹೊಂದಾಣಿಕೆಗಳನ್ನು ಸಿದ್ಧರಾಮಣ್ಣನು
ರೂಢಿಸಿರುವುದು ಆತನ ವಿಶಾಲ ದೃಷ್ಟಿಗೆ ಸಾಕ್ಷಿಯಾಗಿದೆ. ಇದಕ್ಕೆ ಉದಾಹರಣೆಯಾಗಿ, ಸೊಲ್ಲಾಪುರದ ಶ್ರೀ ಸಿದ್ಧರಾಮೇಶ್ವರ ಜಾತ್ರೆಯ ಆಚರಣೆಯಲ್ಲಿಯೂ ಈ ಅಂಶಗಳು ಗೋಚರಿಸುತ್ತವೆ.
ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿ
ಶ್ರೀ ಸಿದ್ಧರಾಮೇಶ್ವರ ಗರ್ಭಗೃಹ


ಸೊಲ್ಲಾಪುರ ಗ್ರಾಮವೆನ್ನುವುದೇನೂ 12-13ರ ಶತಮಾನದಲ್ಲಿ ಇರಲಿಲ್ಲ. ಬಸವಣ್ಣನವರ ಕಲ್ಯಾಣ ಕ್ರಾಂತಿಯ ಫಲ ದಕ್ಷಿಣ ಕರ್ನಾಟಕವನ್ನು ತಲುಪಿದ್ದು ಇಲ್ಲಿನ ಆರಾಧ್ಯದೈವ ಸಿದ್ಧರಾಮಣ್ಣನ ಮೂಲಕವೇ. ಐತಿಹ್ಯಗಳಂತೆ, ಈಗಿನ ಸೊಲ್ಲಾಪುರವಿರುವ ಸ್ಥಳ ಭಾರೀ ಕಾಡು ಇದ್ದ ಪ್ರದೇಶ. ಅಲ್ಲಿನ ಹುತ್ತವೊಂದರಿಂದ ಮೆಲುಧ್ವನಿ ಬರುತ್ತಿದ್ದುದನ್ನು ಸಮೀಪದ ಗ್ರಾಮಸ್ಥರು ಗಮನಿಸಿದ್ದರು. ಅಲ್ಲಿದ್ದ ಒಂದು ಹುತ್ತದ ಮೇಲೆ ಹಸುವೊಂದು ಹಾಲು ಸುರಿಸುತ್ತಿದ್ದುದನ್ನು ನೋಡಿದವರಿದ್ದರು. ಇದೊಂದು ಪುಣ್ಯಸ್ಥಳವಿರಬೇಕೆಂದು ಊಹಿಸಿದ ಗ್ರಾಮಸ್ಥರ ಪೈಕಿ ಈರ್ವರು, ಹುತ್ತದ ಸಮೀಪ ದೀಪವನ್ನು ಹೊತ್ತಿಸಿ, ತಾವು ಹತ್ತಿರವಿರುವ ಆಸಂದಿಗ್ರಾಮದಿಂದ ವಾಪಸು ಬರುವವರೆಗೂ ದೀಪವು ನಂದದಿದ್ದಲ್ಲಿ, ಇದು ಪುಣ್ಯಕ್ಷೇತ್ರವೆಂದು ನಿಶ್ಚಯಿಸುವುದು ಎಂದು ಸಂಕಲ್ಪಿಸಿ ಹೊರಟರು. ಅವರು ವಾಪಸಾದ ನಂತರವೂ ದೀಪ ಉರಿಯುತ್ತಿತ್ತು. ಮುಂದೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ಮುಂದೆ ವಿಜಯನಗರದ ಅರಸರ ಕಾಲಕ್ಕೆ ದಳವಾಯಿಗಳ ವಂಶಸ್ಥರು ಇಲ್ಲಿನ ಆಚರಣೆ, ಪೂಜಾ ಕ್ರಮಗಳನ್ನು ವಿಧಿವತ್ತಾಗಿ ರೂಢಿಸಿದರು. ದಳವಾಯಿ ಮನೆತನದ ಜನ ಇಂದಿಗೂ ಸೊಲ್ಲಾಪುರದಲ್ಲಿ ಇದ್ದಾರೆ. 


ನಗಾರಿ ನಂದಿಗಳು

ಅಹಿಂಸೆಯನ್ನು ಬೋಧಿಸಿ, ಅನುಸರಿಸುವುದರೊಂದಿಗೆ, ಇತರರ ಆಹಾರಪದ್ಧತಿಯನ್ನೂ ಗೌರವಿಸುವ ಸತ್ಸಂಪ್ರದಾಯವನ್ನು ಸಿದ್ಧರಾಮಣ್ಣ ಸ್ವತಃ ಆಚರಿಸಿ ತೋರಿಸಿರುವದರ ಕುರಿತು ಇನ್ನೊಂದು ಕಿರು ಐತಿಹ್ಯವಿದೆ. ಹರಿಯಪ್ಪನೆಂಬ ದಳವಾಯಿಗೆ ಸಿದ್ಧರಾಮಣ್ಣನ ತತ್ವಾದರ್ಶಗಳು ತುಂಬ ಮೆಚ್ಚುಗೆಯಾಯಿತು. ಆದರೆ ಆತನಿಗೆ ನಾಲಿಗೆ ಚಪಲದ ಕಾರಣದಿಂದ ಮಾಂಸಾಹಾರವನ್ನು ತ್ಯಜಿಸುವುದು ಕಷ್ಟವಾಗಿತ್ತು. ಆಗ ಸಿದ್ಧರಾಮಣ್ಣ ಹರಿಯಪ್ಪನಿಗೆ ಚಿಕ್ಕದೊಂದು ಷರತ್ತು ವಿಧಿಸಿದ. ಅದೆಂದರೆ ಆತನು ನಿರ್ದಿಷ್ಟ ದಿನದಂದು ಮಾತ್ರ ಮಾಂಸ ಸೇವಿಸಲು ಅವಕಾಶ ನೀಡುತ್ತೇನೆ ಎನ್ನುವುದು. ಅದರಂತೆ ನಿಗದಿತ ದಿನದಂದು ಆತ ಮಾಂಸಕ್ಕೆಂದು ಕುರಿಯನ್ನು ಬಲಿನೀಡಿ ಸೇವಿಸುವ ಸಮಯದಲ್ಲಿ, ಮಾಂಸದ ತಿನಿಸಿದ್ದ ಸ್ಥಳದಲ್ಲಿ ಕುಂಬಳಕಾಯಿ ಪ್ರತ್ಯಕ್ಷವಾಗುವಂತೆ ಮಾಡಿದ. ಆದರೂ ಹರಿಯಪ್ಪನ ಅಪೇಕ್ಷೆಯನ್ನು ತಿರಸ್ಕರಿಸದೇ, ವರ್ಷದ ಒಂದು ದಿನ ಆತನಿಗೆ ಮಾಂಸಾಹಾರಕ್ಕೆ ಅನುವು ಮಾಡಿದ. ಅದರ ಅಂಗವಾಗಿ ಹರಿಯಪ್ಪನ ಸ್ಮರಣಾರ್ಥ ಇಂದಿಗೂ ದೂರದ ಮಹಾರಾಷ್ಟ್ರದಿಂದ  ತಂದ ಕುರಿಯ ಬಲಿಯನ್ನು ನೀಡಿ ಕುಂಬಳವೆಂಬ ಆಚರಣೆಯ ಮೂಲಕ ಈ ಸಂಗತಿಯನ್ನು ಧ್ವನಿಸುವ ವ್ಯವಸ್ಥೆ ಉಳಿದುಬಂದಿದೆ.
ಶ್ರೀ ಸಿದ್ಧರಾಮೇಶ್ವರ ದೇವಾಲಯ ಸಮುಚ್ಚಯ
ಸೊಲ್ಲಾಪುರದ ಈ ಜಾತ್ರೆ ಸುತ್ತಲಿನ ಏಳು ಊರುಗಳಿಗೆ ಸಂಬಂಧಿಸಿದ್ದರೂ, ಅಜ್ಜಂಪುರ ಸೀಮೆಯೇ ಕೇಂದ್ರಸ್ಥಾನವೆಂದು  ಉಲ್ಲೇಖಿತವಾಗಿರುವುದರಿಂದ, ಈ ಧಾರ್ಮಿಕ ಕಾರ್ಯಗಳಿಗೆ ಒಂದು ಪ್ರಾದೇಶಿಕ ಮಿತಿಯನ್ನು ಸೂಚಿಸಿರುವುದನ್ನು ಗುರುತಿಸಬಹುದು. ಆ ಏಳು ಹಳ್ಳಿಗಳೆಂದರೆ 1. ಸೌತೇನಹಳ್ಳಿ, 2, ತಮ್ಮಟದಹಳ್ಳಿ, 3, ಚಿಕ್ಕನಲ್ಲೂರು, 4. ಸಿದ್ನಾಪುರ, 5. ಸೊಲ್ಲಾಪುರ, 6. ಕಾಟಿಗನೆರೆ, 7. ಮಾಳೇನಹಳ್ಳಿ. ಏಳು ಹಳ್ಳಿ, 18 ಮಾಗಣಿ, ಅಜ್ಜಂಪುರ ಸೀಮೆಗಳೆಂದು ಇರುವ  ನಿಗದಿತ ಪ್ರದೇಶದಲ್ಲಿನ ನಿವಾಸಿಗಳು, ತುಂಬ ಶ್ರದ್ಧಾ ಭಕ್ತಿಗಳಿಂದ ಉತ್ಸವವನ್ನು ಆಚರಿಸುತ್ತಾರೆ. ಈಗ ಪ್ರತಿ 12 ವರ್ಷಗಳಿಗೊಮ್ಮೆ ಜಾತ್ರೆ ನಡೆಸುವ ರೂಢಿ ಬಂದಿದೆಯಾದರೂ, ಹಿಂದೆ ಹಾಗಿರಲಿಲ್ಲವೆಂದು ಸೊಲ್ಲಾಪುರದ ಹಿರಿಯರೂ, ವಿದ್ವಾಂಸರೂ ಆದ ಗಂಗಾಧರಯ್ಯ ಮತ್ತು ಶಿವಣ್ಣನವರು ತಿಳಿಸಿದರು. ಅದರ ಹಿಂದಿನ ತರ್ಕವೆಂದರೆ, ಹಿಂದಿನ ದಿನಮಾನಗಳಲ್ಲಿ ಆರೋಗ್ಯದ ಸಮಸ್ಯೆಯೊಂದಿಗೆ ಆರ್ಥಿಕ ಮುಗ್ಗಟ್ಟು ಇರುತ್ತಿದ್ದುದು ಸ್ವಾಭಾವಿಕ. ಹೀಗಾಗಿ ಈ ಪ್ರದೇಶದಲ್ಲಿ ಸುಖ-ಸಮೃದ್ದಿಗಳು ಹೆಚ್ಚಾಗಿರುವಾಗ, ಅದು ಸಿದ್ಧರಾಮಣ್ಣನ ಕೃಪೆಯೆಂದು ತಿಳಿದು, ಆತನು ಮಾಡಿದ ಸಾಮಾಜಿಕ ಉಪಕಾರಗಳಿಗೆ ಕೃತಜ್ಞತೆಯ ದ್ಯೋತಕವಾಗಿ ಎಲ್ಲರೂ ಒಂದೆಡೆ ಸೇರಿ ಪೂಜಾ ಆರಾಧನೆಯ ವ್ಯವಸ್ಥೆಯನ್ನು ಮಾಡಿದರು. ಮುಂದೆ ಅದೇ ಜಾತ್ರೆಯ ರೂಪ ತಳೆಯಿತು. ಈ ಜಾತ್ರೆಯಲ್ಲಿ ಎಲ್ಲ ಏಳು ಹಳ್ಳಿಗಳು ಮಾಗಣಿಗಳ ಜನರಿಗೆಂದು ನಿರ್ದಿಷ್ಟ ಸೇವಾ ಕೈಂಕರ್ಯಗಳಿವೆ. ಅವೆಲ್ಲವನ್ನೂ ತಪ್ಪದೇ ಸ್ವಯಂಪ್ರೇರಿತರಾಗಿ ಮಾಡುವ ವ್ಯವಸ್ಥೆಯಿದೆ. 

ವಿಜಯನಗರ ಕಾಲದ ಗೋಪುರ

ಆಧುನಿಕ ಗೋಪುರ

ನಾನು ಹೋಗಿರುವ ಈ ಸಮಯದಲ್ಲಿ ಹೆಚ್ಚಿನ ಜನಸಂದಣಿಯೇನೂ ಇರಲಿಲ್ಲವಾದರೂ, ಅಲ್ಲಿನ ವ್ಯವಸ್ಥೆಯನ್ನು ನೋಡುವಾಗ ಅದೊಂದು ದೊಡ್ಡ ಸಮಾವೇಶವೇ ಹೌದೆನ್ನುವಂತೆ ಇತ್ತು. ವ್ಯವಸ್ಥಿತ ಅನ್ನದಾನ ದಾಸೋಹದ ಕಾರ್ಯ, ಸ್ವಚ್ಛತೆಗಳು ಮಾದರಿಯೆನ್ನುವಂತಿದೆ. 
ದೇವಾಲಯವು ವಿಜಯನಗರ ಪತನಾನಂತರ ನಿರ್ಮಾಣಗೊಂಡಿದ್ದರೂ, ಅಂದಿನ ಎಲ್ಲ ಲಕ್ಷಣಗಳೂ ಉಳಿದಿವೆ. ಸ್ವಲ್ಪವೂ ಮುಕ್ಕಾಗದ ಸ್ಥಿತಿಯಲ್ಲಿರುವುದು ಸಂತಸದ ಸಂಗತಿ. ಗಾರೆಗಚ್ಚಿನ ಅಂದಿನ ಗೋಪುರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಮತ್ತೆರಡು ಗೋಪುರಗಳನ್ನು ನಿರ್ಮಿಸಲಾಗಿದೆ. ಮೆಚ್ಚುಗೆಯ ಅಂಶವೆಂದರೆ, ಪಾರಂಪರಿಕ ಶೈಲಿಗೆ ಧಕ್ಕೆ ಬಾರದಂತೆ ಅವುಗಳನ್ನು ನಿರ್ಮಿಸಿರುವುದು ಮಂದಿರದ ಶೋಭೆಯನ್ನು ಹೆಚ್ಚಿಸಿದೆ. 

ಸುಂದರ ಪುಷ್ಕರಿಣಿ
ಸಿದ್ಧರಾಮಣ್ಣನಲ್ಲದೆ, ಅಕ್ಕ ನಾಗಮ್ಮ, ಚನ್ನಬಸವಣ್ಣ, ನುಲಿಯ ಚಂದಯ್ಯಗಳು ಈ ಸ್ಥಳದ ಪಾವಿತ್ರ್ಯತೆಯನ್ನು ಹೆಚ್ಚಿಸಿದರು. ಅವರೆಲ್ಲರ ಸ್ಮರಣಾರ್ಥ ಶಿಲ್ಪಗಳು, ಮಂದಿರಗಳು ಕಾಣಸಿಗುತ್ತವೆ. ಇಲ್ಲಿನ ಗದ್ದುಗೆ 74ನೆಯದೆಂದು ಪ್ರತೀತಿ. ತನ್ನ ಕಾರ್ಯಚರಣೆಯ ನಂತರ ಸಿದ್ಧರಾಮಣ್ಣನು ಯೋಗ, ಧ್ಯಾನ ಮುಂತಾದ ಅಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಅವರ ಸಾಮಾಜಿಕ ಕಾಳಜಿಯ ಕುರುಹಾಗಿ ಸುತ್ತಲಿನ ಎಲ್ಲ ಗ್ರಾಮಗಳಲ್ಲೂ ಜಲವಸತಿಗೆಂದು ಕೆರೆ, ಕಲ್ಯಾಣಿಗಳನ್ನು ನಿರ್ಮಿಸಿದರು. ಅಂಥದೇ ಸುಂದರ ಕಲ್ಯಾಣಿಯು ಮಂದಿರದ ಸಮೀಪದಲ್ಲಿದ್ದು, ಇಂದಿಗೂ ಸುಸ್ಥಿತಿಯಲ್ಲಿದೆ. 
ವಿದೇಶೀ ಯಾತ್ರಿಕರ ಅಪರೂಪದ ಶಿಲ್ಪಸಮೀಪದ ಇನ್ನೊಂದು ದೇವಾಲಯ

 
ಪಾರಂಪರಿಕ ನಿರ್ಮಾಣಗಳನ್ನು ಗೌರವಿಸುವುದರ ಜತೆಗೆ ಅವುಗಳನ್ನು ಸುಸ್ಥಿತಿಯಲ್ಲಿ ಕಾಯ್ದಿಟ್ಟುಕೊಂಡಿರುವುದರ ಕಾಳಜಿಯನ್ನು ಎಲ್ಲರೂ ಮೆಚ್ಚಬೇಕು. ನಮ್ಮ ಗ್ರಾಮಗಳ ಜನ ಇಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತಾದರೆ ಸ್ಮಾರಕಗಳೂ ಉಳಿಯುತ್ತವೆ, ಮುಂದಿನ ಪೀಳಿಗೆಗೂ ಅವು ಸ್ಫೂರ್ತಿ ನೀಡುತ್ತವೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ