ಪ್ರತಿಷ್ಠೆಯ ಪ್ರಶ್ನೆಯಾದ ಪ್ರತಿಷ್ಠಾಪನಾ ಪ್ರಸಂಗ !


ಈ ಹಿಂದೆ ಅಜ್ಜಂಪುರದ ಬಸವೇಶ್ವರ ದೇವಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ. ಅದರಲ್ಲಿ ನಮೂದಿಸಿರುವಂತೆ ದೇವಾಲಯದ ಪ್ರತಿಷ್ಠಾಪನೆಯ ಕಾರ್ಯ ೧೯೩೨ರಲ್ಲಿ ನಡೆಯಿತು. ಈ ಕಾರ್ಯವು ನಡೆಯಬೇಕಾದ ಸಂದರ್ಭದಲ್ಲಿ ಉಂಟಾದ ಚಿಕ್ಕ ಗೊಂದಲದ ಮಾಹಿತಿ ಇತ್ತೀಚೆಗೆ ದೊರೆಯಿತು. ಎಲ್ಲೆಡೆಯೂ ಇದೆಲ್ಲ ಸಾಮಾನ್ಯವೇ ಸರಿ. ಅಜ್ಜಂಪುರದ ಬೆಳವಣಿಗೆಗೆ ಕಾರಣರಾದ ಹಿರಿಯರು ಶ್ರೀ ಶೆಟ್ಟರ ಶಿದ್ದಪ್ಪನವರು.  ಅವರ ಬರವಣಿಗೆಯ ಶೈಲಿಯನ್ನು ಆನಂದಿಸುವ ಜತೆಗೆ, ವಿಷಯ ಪ್ರತಿಪಾದನೆಯಲ್ಲಿ ಖಾಚಿತ್ಯದ ದೃಷ್ಟಿಯಿಂದ ೧೯೩೨ ಅವರ ಪತ್ರ ಮಹತ್ವದ್ದೆನ್ನಿಸಿ, ಅದನ್ನಿಲ್ಲಿ ನೀಡಲಾಗಿದೆ. ಗೆಳೆಯ, ಲೇಖಕ ಮಿತ್ರ ಅಪೂರ್ವ ಇವರ ಸಂಗ್ರಹದಲ್ಲಿ ದೊರೆತ ಶ್ರೀ ಶೆಟ್ಟರ ಶಿದ್ದಪ್ಪನವರ ಪತ್ರದ ಯಥಾ ನಕಲನ್ನು ಹಾಗೆಯೇ ಪ್ರಸ್ತುತಪಡಿಸಲಾಗಿದೆ.
ಧರ್ಮಸಂಮಂಧಿ ಶ್ರೀ ಬಸವೇಶ್ವರ ವೀರಭದ್ರ ಸ್ವಾಮಿಯವರ ಪ್ರತಿಷ್ಠಾಪನ ಆಮಂತ್ರಣ ಪತ್ರಿಕಾ ಪ್ರಿಂಟು ಮಾಡಿ ಹಂಚಿರುವ ವ್ಯವಸ್ಥಾಪಕರು ಕಾರ್ಯದರ್ಶಿಗಳು ಇವರಿಗೆ –
ಈ ಕೆಳಗೆ ಸಹಿ ಮಾಡಿರುವವರು ಸೂಚಿಸುವುದೇನೆಂದರೆ – ತಾ ೮-೧೧-೩೨ರಿಂದ ತಾ. ೧೧-೧೧-೩೨ರವರೆಗೆ ಶ್ರೀಮನ್ ಮಹಾರಾಜ ನಿರಂಜನ  ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಆಗಮನ ಮಹೋತ್ಸವದ ಅಧ್ಯಕ್ಷತೆಯಲ್ಲಿ ನೆರವೇರಿಸುವ ಕಾರ್ಯಕ್ರಮದ ಸದರಿ ಆಹವಾನಪತ್ರಿಕೆಯು ಶ್ರೀ ಕಂನ್ಯಕಾಪರಮೇಶ್ವರಿ ಪ್ರಿಂಟಿಸುವವರ ಚಿತ್ರದುರ್ಗದಲ್ಲಿ ಪ್ರೆಸ್ಸಿನಲ್ಲಿ ಪ್ರಿಂಟಾಗಿ ಹೊರಟಿರುವ ಪತ್ರಿಕೆ ಪರಸ್ಪರ ಹಸ್ತದಿಂದ ಅವಲೋಕಿಸಲಾಯ್ತು.
ಆದರೆ ಸಾರ್ವಜನಿಕ ಸಾರ್ವಭೋಂಮ್ಯರಂತೆ ಮಾದರಿಯಾಗಿರುವ ಮಹಾ ಮಹಾ ಜಗದ್ಗುರುಗಳವರು ಮೇಲ್ಕಂಡ ಸಾರ್ವಜನಿಕ ದೇವಾಲಯ ಪ್ರತಿಷ್ಠಾಪನೆ ಕಾರ್ಯಗಳಿಗೆ ದಯಮಾಡ್ಸಿರುವುದು ಅಭೂತಪೂರ್ವಕವಾದ ಸಂತೋಷಪ್ರದವಾದ ವಿಶಯವಾಗಿರುತ್ತದೆ.
ಆದರೆ ಮೇಲ್ಕಂಡ ಬಸವೇಶ್ವರ ದೇವರ ದೇವಸ್ಥಾನ ಸಾರ್ವಜನಿಕವಾದ ಈ ಲೇಖಕರಿಗೂ ಸೇರಿದ್ದಾಗಿರುತ್ತೆ.
ವ್ಯವಸ್ಥಾಪಕರು ಕಾರ್ಯದರ್ಶಿಗಳ ಮಟ್ಟಿಗೆ ಸೇರಿದ್ದಾ ಗಿರುತ್ತೆಂಬುದನ್ನು ಜ್ಞಾಪಕಮಾಡಿಕೊಳ್ಳಿ.
ಶ್ರೀಮನ್ಮಹಾರಾಜರವರ ಸರ್ಕಾರದಿಂದಲೂ, ಈ ಜಗದ್ಗುರು ಮಹಮತಸ್ಥಾಪಕರಿಂದಲೂ ಗೌರವಿಸಲ್ಪಟ್ಟು, ಪ್ಯಾಟಿ ಮಹಾಜನಗಳಿಂದಲೂ ಸನ್ಮಾನಿತರಾಗಿರುವ ಮೂಲ ಹಿರೆಮಠದವರಂನು ಮಾಲೀಕರಾದ ಪ್ಯಾಟಿ ದೈವಾಚಾರದ ಶೆಟ್ಟರಂನೂ ಸಹಾ ಮೇಲ್ಕಂಡ ದೇವತಾ ಪ್ರತಿಷ್ಠಾಪನೆಗಳಿಗೆ ಸಲಹೆ ವಗೈರೆ ಅನುಮತಿ ಪಡಿಯದೇ ಬಹುಭಾಗದ ಸ್ಥಲವಂದಿಗರ ಅನುಮೋದನೆಯ ಮೀಟಿಂಗು ಮಾಡದೇ, ಮನಸ್ಸಿಗೆ ಬಂದಂತೆ ಅಲೌಕಿಕ ರೀತಿ ಪತ್ರಿಕೆಗಳನ್ನು ಪ್ರಿಂಟು ಮಾಡಿರುವುದಕ್ಕೆ ಸ್ಥಳದ ಮಾಲಿಕರಾದ ಮಠಸ್ತರಿಗೂ, ಶೆಟ್ರಾದವರಿಗೂ ಸಂಮತಿಯಾಗಿರುವುದಿಲ್ಲ. ಈ ದೈವಸ್ಥಾನಕ್ಕೆ ಪೂರ್ವಾಪರ ಪೇಟೆಯ ಶೈವಾಚಾರದ ಶೆಟ್ಟರಿಗೂ ಪಟ್ಟಣಶೆಟ್ಟರ ಗ್ರೇಡಿನವರಾದ ವ್ಯವಸ್ಥಾಪಕರಿಗೂ ತಾಂಬೂಲಾದಿ ಮರಿಯಾದೆಗಳಲ್ಲಿ ಪೇಟೆಯಲ್ಲಿ ವಿವಾದ ಇರುವುದು ಇದ್ದೆ ಇರುತ್ತೆ. ಯಿಂತಾದ್ದರಲ್ಲಿ ಅಜ್ಜಂಪುರದ ಶೆಟ್ರು ಯಂತಾ ವ್ಯವಸ್ಥಾಪಕರು ತಂಮ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಹಾಕಿಕೊಂಡಿರುವರು.
ಪ್ಯಾಟೆಗೆ ಪೂರ್ವಪರಾ ಹಕ್ಕುದಾರರಾದ ಶೆಟ್ಟರ ವಂಶೀಕರನ್ನು ಮೂಲಿಗೆ ವತ್ತಿ ಈ ಕಾರ್ಯದಲ್ಲಿ ತಮ್ಮ ದರ್ಪವನ್ನು ಮುಂದುವರಿಶಿಕೊಳ್ಳುವ ಅಹಂಪ್ರತಿಷ್ಟೆಯಲ್ಲಿರುವುದರಿಂದ ಈ ದೇವತಾ ಪ್ರತಿಷ್ಠಾಪನೆಗಾಗಿ ಹೊರಟಿರುವ ಪತ್ರಗಳನ್ನು ರದ್ದುಪಡ್ಸಿರುತ್ತೆ. ಗೈರ್ ಮಾಮೂಲ್ ಆಗಿ ಶ್ರೀ ವೀರಭದ್ರ ದೇವರ ಪ್ರತಿಷ್ಟೆಯಂತಾ ಕಾಣಿಶಿರುವುದು ಕೋಟೆವಳಗೆ ಬ್ರಾಹ್ಮಣರ ಕೇರಿಯಂನು ನಿರ್ಮೂಲಗೊಳಿಸಿ ಈಗ ಧೂರ್ತವಾಗಿ ಈ ಪೇಟೆಗೆ ಕುಂದುಕಪಡಿಸುತ್ತಿರುವದಕ್ಕಾಗಿ ಮಾಮೂಲ್ ಆಗಿ ವಿರೋಧವಾಗಿ ವೀರಭದ್ರದೇವರ ಪ್ರತಿಷ್ಟೆಮಾಡ್ಸುವುದು ಮುಂದೆ ದುರ್ಗತಿಗೆ ಕಾರಣಮಾಡಿಕೊಂಡಿರುತ್ತೀರಿ.
ನೀವು ಮುಂದುವರಿದು ದೇವತಾಕಾರ್ಯಾದಿ ಸತ್ಕಾರ್ಯಾದಿಗಳನ್ನು ಮಾಡುವ ಬಗ್ಗೆ ನಾವು  ಆತಂಕಪಡಿಸಲಾರೆವು. ನೀವು ಹೊರಡಿಶಿರುವ ಆಹ್ವಾನಪತ್ರಿಕೆಯ ಬಹುಭಾಗವು ನಂಮಗಳ ಅಸಂಮತಿಗೆ ಕಾರಣವಾಗಿರುತ್ತೆ.
ಈ ಕಾರ್ಯವಂನು ವಳ್ಳೆ ಬೇಶಿಗೆ ಕಾಲದಲ್ಲಿ ಸಾರ್ವಜನಿಕ ಮೀಟಿಂಗ್ ಮಾಡಿ ಧರ್ಮಸಂಮಂಧಿ ಪ್ರಕಾರ ಯಾರು-ಯಾರು, ಯಾವ ಯಾವ ಕಾರ್ಯದಲ್ಲಿ ಜವಾಬ್ದಾರರಾಗಿರಬೇಕೆಂದು ನಿರ್ಣಯಿಸದೆ ಸ್ವೇಚ್ಛಾಚಾರ ಪ್ರವರ್ತಕರಾಗಿ ವುದ್ದಿಶ್ಯಪೂರ್ವಕ ಮಾಲಿಕರಾದ ಶೆಟ್ಟರಿಗೆ ಅವಮಾನಗೊಳಿಸುವ ಕಾರ್ಯಾಸಕ್ತರಾಗಿರುವುದರಿಂದಲೂ ನೀವು ನಡೆಸುವ ಸ್ವತಂತ್ರವಾದ ಪ್ರತಿಷ್ಟಾಪನೆಯ ಕಾರ್ಯಕ್ಕೆ ಪುನಹಾ ನಾವೂ ೨ನೇ ಪ್ರತಿಷ್ಟಾಪನಾದಿ ಕಾರ್ಯಗಳನ್ನು  ಕಾಲಕ್ರಮೇಣ ಮಾಡಬೇಕಾದ ಪ್ರಮೇಯ ಈ ದೆಶೆಯಿಂದ ವದಗಿರುವುದಕ್ಕಾಗಿ ತುಂಬಾ ವಿಶಾದಿಸುತ್ತೇವೆ.
ಇದಿಷ್ಟು ನಡೆದ ನಂತರ ಅಂತಿಮ ಭಾಗದಲ್ಲಿ ಶ್ರೀ ಮಹಾಸ್ವಾಮಿಗಳಿಗೆ ಟೆಲಿಗ್ರಾಂ ನೀಡುವ ಬಗ್ಗೆ, ಕಡೂರು ಡಿಪ್ಯುಟಿ ಕಮೀಷನರ್ ಸಾಹೇಬರ ಹುಜೂರು ಜನಾಬಿಗೆ ದೂರು ನೀಡಿದ ಬಗ್ಗೆಯೂ ದಾಖಲೆಯಿದೆ. ಅವರ ಕೋರಿಕೆಯಂತೆ  ಮಾಮೂಲ್ ಪದ್ಧತಿ ಅನುಸರಿಸಿ ಯಾರ ನೆಮ್ಮದಿಗೂ ಭಂಗಬಾರದಂತೆ ದೇವತಾ ಪ್ರತಿಷ್ಟಾಪನೆಯ ಕಾರ್ಯ ಪೂರೈಶಿಕೊಳ್ಳುವಂತೆ ಅಪ್ಪಣೆ ಮಾಡಬೇಕೆಂತಲೂ, ವ್ಯವಸ್ಥಾಪಕರು ಕಾರ್ಯದರ್ಶಿಗಳು ಹೊರಡಿಸಿರುವ ಪತ್ರಿಕೆಯನ್ನು ತಾವು ರದ್ದುಪಡಿಸಿ ನಿಶೇಧಿಸಬೇಕೆಂತಲೂ ಅಪ್ಪಣೆ ಪಡೆಯುತ್ತೇವೆ ಮಹಾಸ್ವಾಮೀ.

ಶ್ರೀ ಶೆಟ್ರ ಶಿದ್ದಪ್ಪನವರ ಹಸ್ತಾಕ್ಷರಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ