ಪರ್ವತರಾಯನ ಕೆರೆ

ಆತ್ಮೀಯರೇ,

ಈ ಬಾರಿಯ ಸಂಚಿಕೆಯಲ್ಲಿ ಅಜ್ಜಂಪುರದ ಪರ್ವತರಾಯನ ಕೆರೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಕೆರೆಗೆ ಈ ಹೆಸರು ಬರಲು ಕಾರಣವಾದ ಬಗ್ಗೆ ನಾನು ಮತ್ತು ನನ್ನ ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ) ದೂರವಾಣಿಯಲ್ಲಿ ಚರ್ಚಿಸುತ್ತಿದ್ದೆವು. ಅಜ್ಜಂಪುರ ಸಮೀಪದ ಬುಕ್ಕಾಂಬುಧಿಗೆ ವಿಜಯನಗರದ ಸಂಪರ್ಕದ ಬಗ್ಗೆ ಒಂದು ಹಂತದಲ್ಲಿ ಅವರು ಪ್ರಸ್ತಾಪಿಸಿದರು. ಹೊಯ್ಸಳೋತ್ತರ ದೇವಾಲಯಗಳನ್ನು ವಿಜಯನಗರದ ಅರಸರು ಜೀರ್ಣೋದ್ಧಾರ ಮಾಡಿರುವ ಕುರುಹುಗಳು ಅಜ್ಜಂಪುರದಲ್ಲೂ ಕಂಡುಬರುತ್ತದೆಯಾಗಿ ನಮ್ಮೂರ ಕೆರೆಯನ್ನು ಅಭಿವೃದ್ಧಿಪಡಿಸಿದಾತನು ವಿಜಯನಗರಕ್ಕೆ ಸಂಬಂಧಿಸಿದ ಪರ್ವತರಾಯನೆಂಬ ಊಹೆಗೆ ತಲುಪಿದೆವು. ಓದುಗರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿದ್ದಲ್ಲಿ ಹಂಚಿಕೊಳ್ಳಲು ಕೋರುತ್ತೇನೆ.


(ಚಿತ್ರಕೃಪೆ - ಮಂಜುನಾಥ ಅಜ್ಜಂಪುರ ಮತ್ತು ಜಿ.ಬಿ. ಅಪ್ಪಾಜಿ)

ಪರ್ವತರಾಯನ ಕೆರೆ



ಎಲ್ಲ ಊರುಗಳಿಗಿರುವಂತೆ ಅಜ್ಜಂಪುರಕ್ಕೂ ಒಂದು ಕೆರೆ ಇದೆ. ಅದಕ್ಕೆ ಅದ್ಭುತವಾದ ಹೆಸರೂ ಇದೆ. ಅದರ ಹೆಸರು ಪರ್ವತರಾಯನ ಕೆರೆ. ಈ ಪರ್ವತರಾಯ ವಿಜಯನಗರ ಕಾಲಕ್ಕೆ ಸೇರಿದವನಿರಬೇಕು. ಅಜ್ಜಂಪುರದ ಸಮೀಪದ ಬುಕ್ಕಾಂಬುಧಿ, ವಿಜಯನಗರದ ಇತಿಹಾಸದೊಂದಿಗೆ ತಳುಕುಹಾಕಿಕೊಂಡಿರುವ ದಾಖಲೆಗಳಿವೆ. ಅದೇ ರೀತಿ, ಅಜ್ಜಂಪುರದ ಕೋಟೆಯಲ್ಲಿರುವ 


ಕೆರೆಹಿಂದಿನ ಶಂಕರಲಿಂಗೇಶ್ವರ ದೇವಾಲಯ

ಶ್ರೀ ಪ್ರಸನ್ನ ಸೋಮೇಶ್ವರ ದೇಗುಲದ ಲಿಂಗ ಶಿಲ್ಪ ಮತ್ತು ಎದುರಿನ ಬಸವನ ಮಂಟಪಗಳು ವಿಜಯನಗರದ ಅರಸರ ಉಸ್ತುವಾರಿಯಲ್ಲಿ ಪುನರ್ ನಿರ್ಮಿತವಾಗಿರುವ ಸಂಗತಿಗಳೂ ಗೋಚರಿಸುತ್ತವೆ. ಹೀಗಾಗಿ ಅಜ್ಜಂಪುರಕ್ಕೂ ವಿಜಯನಗರದ ಸಂಸರ್ಗ ಬಂದಿದೆಯೆಂದಾದರೆ ಅದನ್ನು ಅಲ್ಲಗಳೆಯಲಾಗದು. ಅಜ್ಜಂಪುರದ ಸಮೀಪದ ಸ್ಥಳಗಳ ಇತಿಹಾಸದಲ್ಲಿ ಪ್ರಸ್ತಾಪಿತರಾಗುವವರೆಂದರೆ ಸರ್ಜಾ ಮನೆತನದ ನಾಯಕ ಪಾಳೆಯಗಾರರು ಮುಂತಾಗಿ. ಅವರ ಹೆಚ್ಚಿನ ವ್ಯಾಪ್ತಿಯು ತರೀಕೆರೆಗೆ ಹೊಂದಿಕೆಯಾಗುವಂತಿರುತ್ತಿತ್ತು ಎನ್ನಬಹುದು.

ಕೆರೆ ಒಡೆದಾಗಿನ ಪರಿಣಾಮ
ಈಗ ಕೆರೆಯ ಅಸ್ತಿತ್ವ ಚೆನ್ನಾಗಿಯೇ ಕಾಣಿಸುತ್ತಿದೆಯಾದರೆ, ಐದಾರು ದಶಕಗಳ ಹಿಂದಿನ ಪರಿಸ್ಥಿತಿ ಹೀಗಿರಲಿಲ್ಲ. ನನಗೆ ನೆನೆಪಿರುವಂತೆ ಕಳೆದ ಶತಮಾನದ ಅರುವತ್ತರ ದಶಕದಲ್ಲಿ, ಈ ಕೆರೆ ಇರುವ ಜಾಗದ ತುಂಬ, ಎಕರೆಗಟ್ಟಲೆ ಪ್ರದೇಶದಲ್ಲಿ  ಬಳ್ಳಾರಿಜಾಲಿ ಮರಗಳು ಬೆಳೆದಿದ್ದವು. ಆ ಮರಗಳ ಎತ್ತರ, ಗಾತ್ರಗಳಿಂದ ತಿಳಿದುಬರುತ್ತಿದ್ದಂತೆ, ಅವು ಕನಿಷ್ಟವೆಂದರೂ ಮೂವತ್ತು-ನಲವತ್ತು ವರ್ಷಗಳಷ್ಟು ಹಳೆಯವು ಎಂದು ಹೇಳಬಹುದಿತ್ತು. ಎಂದರೆ, ಇಷ್ಟು ಸಮಯದವರೆಗಾದರೂ ಕೆರೆ ಇರಲಿಲ್ಲ ಮತ್ತು ಅದರ ನೀರಾವರಿಯ ಉಪಯುಕ್ತತೆಯನ್ನೂ ಪಡೆದಿರಲಿಲ್ಲವೆಂದು, ಸುತ್ತಮುತ್ತಲಿನ ಜಮೀನುಗಳನ್ನು  ನೋಡುವಾಗ ತಿಳಿಯುವಂತಿತ್ತು. ಕಪ್ಪುಗೋಡಿನ ಕೆರೆ ಮೈದಾನದಲ್ಲಿ ಬೆಳೆದಿರುತ್ತಿದ್ದ ಈ ಮರಗಳ ನಡುವೆಯೇ ಕಾಲುಹಾದಿಯ ಮೂಲಕ ಅಜ್ಜಂಪುರದ ಪಶುಪಾಲನಾ ಕೇಂದ್ರವನ್ನು ತಲುಪಬಹುದಿತ್ತು. 16ನೇ ಶತಮಾನದಲ್ಲಿ ಸ್ಥಾಪಿತವಾದ ಈ ಕೇಂದ್ರದಲ್ಲಿನ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆಂದು ಈ ಕೆರೆಯನ್ನು ನಿರ್ಮಿಸಲಾಯಿತೆಂದೂ ತಿಳಿಯಬಹುದು. ಕೆರೆಯ ಹಿಂದಕ್ಕೆ ಒಂದು ದೇಗುಲವನ್ನು ಕಟ್ಟಲಾಗಿದ್ದು, ಅದಿನ್ನೂ ಹಾಗೇ ಇದೆ. ಇದರ ಬಗ್ಗೆ ಹಿಂದಿನ ಸಂಚಿಕಗಳಲ್ಲಿ ವಿಸ್ತೃತವಾದ ಲೇಖನವನ್ನೂ ಪ್ರಕಟಿಸಲಾಗಿದೆ. 
ಮುಂದೊಮ್ಮೆ ನಮ್ಮೂರ ಕೆರೆಗೂ ಒಳ್ಳೆಯ ಕಾಲ 

ಕೆರೆ ಒಡೆದಾಗಿನ ಪರಿಣಾಮ
ಬಂದಿತೆಂದು ಕಾಣುತ್ತದೆ. ಕೆರೆಯ ಅಂಗಳದಲ್ಲಿ ಬೆಳೆದಿದ್ದ ಜಾಲಿ ಮರಗಳನ್ನು ಕಡಿಯಲಾಯಿತು. ಅವುಗಳ ಬಲಿಷ್ಠ ಕಾಂಡಗಳಿಂದ ಎತ್ತಿನ ಗಾಡಿಗಳ ಗುಂಬವನ್ನು ತಯಾರಿಸಲಾಗುತ್ತಿತ್ತು. ಹೀಗೆ ಕಡಿಯಲಾದ ಮರಗಳ ಚಕ್ಕೆಗಳನ್ನು ಉರುವಲಿಗೆಂದು ಬಳಸಲಾಯಿತು. ಆಧುನಿಕ ಯಂತ್ರೋಪಕರಣಗಳು ಏನೂ ಇರದಿದ್ದ ಆ ದಿನಗಳಲ್ಲಿ, ಅಷ್ಟು ಪ್ರಮಾಣದ ಮರಗಳನ್ನು ಕೆಲವೇ ತಿಂಗಳುಗಳ ಅವಧಿಯಲ್ಲಿ ವಿವಿಧ ಉಪಯೋಗಗಳಿಗೆ ಬಳಸಿ ಖಾಲಿ ಮಾಡಲಾಯಿತು. ಇದು ಇಂಧನಕ್ಕೆ ಅಂದಿದ್ದ ಬೇಡಿಕೆಯನ್ನು ಸೂಚಿಸುತ್ತದೆ.

ಅಷ್ಟು ವರ್ಷಗಳ ಉಪಯೋಗರಹಿತ ಸ್ಥಿತಿಯಲ್ಲೂ ಕೆರೆಯ ಏರಿ ಸುಭದ್ರವಾಗಿಯೇ ಇತ್ತು. ಮುಂದೆ ಕೆರೆ ನಿರ್ಮಾಣವಾಯಿತು. ಸುತ್ತಮುತ್ತಣ ಗುಡ್ಡಗಳಿಂದ ಸಂಗ್ರಹವಾದ ನೀರಿನ ಪ್ರಮಾಣ ಆಶ್ಚರ್ಯಹುಟ್ಟಿಸುವಂತಿತ್ತು. ಕೆರೆಗೆ ನೀರು ತುಂಬಿದ್ದು ಗಾಬರಿಗೆ ಕಾರಣವಾಗುವಂತಿತ್ತು. ಕೆರೆಗೆ ಕೋಡಿಯ ವ್ಯವಸ್ಥೆಯನ್ನು ಸರಿಯಾಗಿ ರೂಪಿಸಿರಲಿಲ್ಲವೆಂದು ಕೇಳಿದ್ದೆವು.  ಏಕೆಂದರೆ ಕೆರೆ ಏರಿ ಒಡೆದು ಹೋದರೆ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಆಗ ಜನರು ಮಾತನಾಡಿಕೊಳ್ಳುತ್ತಿದ್ದುದು ನೆನಪಿದೆ. ಅದೂ ನಡೆದೇ ಹೋಯಿತು. ಕೋಡಿ  ಬೀಳುವುದರ ಬದಲು, ಒಂದು ವರ್ಷ ಏರಿಯೇ ಒಡೆದು ಹೋಯಿತು. ಹರಿಯುವ ನೀರಿನ ಮೊರೆತ ಇಡೀ ಊರಿಗೆ ಕೇಳುವಂತಿತ್ತು. ನೀರಿನ ಅಗಾಧ ಶಕ್ತಿಯನ್ನು ನಾವು ಬಾಲಕರಿದ್ದಾಗ ನೋಡಿದ ನೆನಪು ಇನ್ನೂ ಮಾಸಿಲ್ಲ. ಆದರೆ ನೀರು ಊರಿನತ್ತ ತಿರುಗಿ ಜನವಸತಿ ಪ್ರದೇಶಗಳಿಗೆ ಹಾನಿಯಾದುದಾಗಲೀ, ಜೀವಹಾನಿಯಾಗಲೀ ಸಂಭವಿಸಲಿಲ್ಲ ಎನ್ನುವುದೇ ವಿಶೇಷ. ಕೆರೆಯ ಪಕ್ಕದ ಜಮೀನುಗಳಲ್ಲಿ ಹತ್ತು-
ಕಳೆದ ವರ್ಷ ಕೆರೆ ಕೋಡಿ ಬಿದ್ದಾಗಿನ ದೃಶ್ಯ


ಹದಿನೈದು ಅಡಿಗಳಷ್ಟು ಭೂಮಿ ಕೊಚ್ಚಿಹೋಗಿ ಕಂದಕವನ್ನು ಉಂಟುಮಾಡಿತ್ತು. ಆ ಕೃಷಿ ಜಮೀನಿನ ಅಡಿಯಲ್ಲಿ ಹಾದುಹೋಗಿದ್ದ ಬಂಡೆಗಲ್ಲುಗಳ ನೀಳ ಸಾಲು ತೋರತೊಡಗಿತ್ತು.  ಗಾಯ ನಿಧಾನಕ್ಕೆ ವಾಸಿಯಾದರೂ ಕಲೆ ಉಳಿಯುವಂತೆ ಇಂದಿಗೂ ಆ ಅನಾಹುತದ ಅವಶೇಷಗಳು ಕಾಣುತ್ತಿವೆ. ಹಳೆಯ ಕೋಡಿಯ ದುರಸ್ತಿಕಾರ್ಯವನ್ನು ಅರುವತ್ತರ ದಶಕದಲ್ಲಿ ಕೈಗೆತ್ತಿಕೊಂಡಾಗ, ಅಲ್ಲಿ ಹಳೆಯ ವಜ್ರಗಾರೆಯ ಅವಶೇಷಗಳಿದ್ದವು. ಅದರ ಮೇಲೆಯೇ ಕೈಗೊಂಡ ದುರಸ್ತಿ ಕೆಲವೇ ವರ್ಷಗಳಲ್ಲಿ ನಾಶವಾಗಿ ಹಳೆಯ ಗಾರೆಕಾಣತೊಡಗಿತು. ಸುಣ್ಣ ಮತ್ತು ಮರಳನ್ನು ಮಿಶ್ರಮಾಡಿ ಅರೆದು ಹಾಕುತ್ತಿದ್ದ ಈ ಗಾರೆ ಹಲವಾರು ದಶಕಗಳವರೆಗೆ ಹಾಳಾಗುತ್ತಿರಲಿಲ್ಲವೆನ್ನಲು ಇಲ್ಲೊಂದು ನಿದರ್ಶನವನ್ನು ನೋಡಿದ್ದ ಮಂಜುನಾಥ ಅಜ್ಜಂಪುರ ಅದನ್ನು ನೆನಪಿಸಿದರು.  

ಈಗ ಕೆರೆ ಮಳೆಗಾಲದಲ್ಲಿ ತುಂಬಿರುತ್ತದೆ. ಅದರಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಕೊಂಡಿಲ್ಲ. ಕೆರೆ ದುಸ್ಥಿತಿಯಲ್ಲಿದ್ದ ಕಾಲಕ್ಕೆ, ಕೆರೆ ದಂಡೆಯ ಬಲಭಾಗದಲ್ಲಿ ನೀರು ಸರಬರಾಜು ಯಂತ್ರಗಳನ್ನು ಸ್ಥಾಪಿಸಿದ್ದರು. ಕೆರೆ ದುರಸ್ತಿಯಾದ ನಂತರ ಕೆಲಕಾಲ ಬತ್ತವನ್ನು ಬೆಳೆಯುತ್ತಿದ್ದುದನ್ನು ನೋಡಿದ್ದು ನೆನಪು. ಈಗ ಅವೆಲ್ಲ ಕಾಣಿಸುತ್ತಿಲ್ಲ.

ಕಳೆದ ವರ್ಷ ಕೆರೆ ಕೋಡಿ ಬಿದ್ದಾಗಿನ ದೃಶ್ಯ

ಅಜ್ಜಂಪುರ ಕೆರೆ ಕೋಡಿಯ ನೀರು ಸಮೀಪದ ತುಂಬೆ ಹಳ್ಳಕ್ಕೆ ಹೋಗಿ ಸೇರುತ್ತದೆ. ಇಲ್ಲಿಂದ ಮುಂದೆ ಸಾಗಿ ಹಿರಿಯೂರಿನ ಸಮೀಪವಿರುವ ವಾಣಿವಿಲಾಸ ಸಾಗರ ಅಥವಾ ಮಾರಿಕಣಿವೆಗೆ ಸೇರುತ್ತದೆ. ಅಜ್ಜಂಪುರದ ಕೆರೆಯನ್ನು ನೀರಾವರಿಗಾಗಲೀ, ಕೃಷಿಗಾಗಲೀ ಸದ್ಬಳಕೆ ಮಾಡಿಕೊಂಡಿಲ್ಲವಾದರೂ, ಪರೋಕ್ಷವಾಗಿ ಆದ ಲಾಭವೆಂದರೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲ ಸಂಪನ್ಮೂಲ ಹೆಚ್ಚಾಯಿತು. ಬರಗಾಲದ ಬವಣೆಯಂತೂ ತೀರಿದಂತಾಗಿ, ಊರಿನ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಯಿತು. ಬಾವಿಗಳಿಂದ ನೀರು ಸೇದಿ ಕುಡಿಯುವ ಪದ್ಧತಿ ಎಂದೋ ಮರೆಯಾಗಿ ಹೋಗಿದೆ. ಕುಡಿಯುವ ನೀರಿಗೆಂದು 
ಕೆರೆಯ ತೂಬಿನ ವ್ಯವಸ್ಥೆ
ಖಾಸಗೀ ಜಲ ಪೂರೈಕೆದಾರರನ್ನೇ ಅವಲಂಬಿಸುವಂತಾಗಿರುವುದು ವಿಷಾದಕರ. ಸಮೀಪದಲ್ಲೇ ಇರುವ ಜಲಮೂಲದ ಸದುಪಯೋಗವಾಗುವಂತಾದರೆ, ಊರಿಗಿರುವ ಜಲಕ್ಷಾಮವನ್ನು ಸುಲಭದಲ್ಲಿ ನೀಗಿಸಬಹುದು. ಇದಕ್ಕೆಂದು ಸ್ಥಳೀಯ ಆಡಳಿತ ಗಮನಹರಿಸುವಂತಾಗಬೇಕು.

* * * * * * *















ಕಾಮೆಂಟ್‌ಗಳು

  1. ಈ ಪರ್ವತರಾಯನು ವಿಜಯನಗರಕ್ಕೆ ಸಂಬಂಧಿಸಿದವನಿರಬೇಕೆಂಬ ಊಹೆಯೇ ರೋಮಾಂಚನ ತರುತ್ತಿದೆ. ಸಾಕ್ಷ್ಯಾಧಾರ ಮತ್ತು ಐತಿಹ್ಯಗಳ ಕೊರತೆ ಇರುವಾಗ, ಹೀಗೆ ಸಾಂದರ್ಭಿಕವಾದ ಪ್ರಾದೇಶಿಕ ಹಿನ್ನೆಲೆ ಮತ್ತು ಊಹೆಗಳ ನೆರವು ಪಡೆಯಬಹುದು.
    ತುಂಬ ಸಂತೋಷವಾಯಿತು.
    (ಮಂಜುನಾಥ ಅಜ್ಜಂಪುರ)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ