ಯಕ್ಷಲೋಕದ ರಸದೌತಣ
ಆತ್ಮೀಯರೇ,
ಏಪ್ರಿಲ್ ತಿಂಗಳ ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ ಆಳ್ವಾಸ್ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯಕ್ರಮವನ್ನು ಕುರಿತಂತೆ ಇದೆ. ಅಜ್ಜಂಪುರದ ಜನತೆಗೆ ಈ ಕಾರ್ಯಕ್ರಮ ವಿಶಿಷ್ಟವೆನಿಸಲು ಕಾರಣವಾದ ಅಂಶಗಳನ್ನು ಆಯ್ದು ನೀಡಿದ್ದಾರೆ, ಲೇಖಕ ಮಿತ್ರ ಅಪೂರ್ವ. ಉತ್ತಮ ಛಾಯಾಚಿತ್ರಗಳೊಂದಿಗೆ ಅತ್ಯುತ್ತಮ ನುಡಿಚಿತ್ರವನ್ನೂ ಕಟ್ಟಿಕೊಟ್ಟಿದ್ದಾರೆ. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉತ್ತಮ ಸಂಸ್ಕಾರ, ಹಿನ್ನೆಲೆಗಳು ಅಜ್ಜಂಪುರದಲ್ಲಿ ಎಂದಿನಿಂದಲೂ ಇರುವುದರಿಂದ ಇಂದಿನ ಪೀಳಿಗೆಯೂ ಅದನ್ನು ಮುಂದುವರೆಸಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
- ಶಂಕರ ಅಜ್ಜಂಪುರ
===========================================================================================================================
ಯಕ್ಷಲೋಕದ ಸಂಭ್ರಮ
|
ಬೃಹತ್ ಜನಸ್ತೋಮ |
2016, ಜನವರಿ 22,
ಶುಕ್ರವಾರ ಸಂಧ್ಯಾಸಮಯ. ಅಜ್ಜಂಪುರದ ಶೆಟ್ರು ಸಿದ್ಧಪ್ಪ ಸರಕಾರೀ ಪದವೀಪೂರ್ವ ಕಾಲೇಜಿನ ಆಟದ
ಮೈದಾನದಲ್ಲಿ ಸಹಸ್ರಾರು ಜನರು ಕುತೂಹಲದಿಂದ ಮುಂದಿನ ಕ್ಷಣಗಳಿಗೆ ಕಾಯುತ್ತಿದ್ದರು. ಅತ್ತ
ಪಡುವಣದಲ್ಲಿ ಸೂರ್ಯ ದಿಗಂತದಲ್ಲಿ ಮರೆಯಾಗುವ ಕ್ಷಣ, ಇತ್ತ ಮೂಡಣ ದಿಕ್ಕಿನಲ್ಲಿ 80 ಅಡಿ 40
ಅಡಿಗಳ ಆಯತಾಕಾರದ ಎತ್ತರದ ಬೃಹತ್ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳುವ
ಕ್ಷಣ. ಅಜ್ಜಂಪುರದ ಇದುವರೆಗಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಇಂತಹ ಬೃಹತ್ ವೇದಿಕೆ,
ಅತ್ಯುತ್ತಮವಾದ ಬೆಳಕು, ಧ್ವನಿವರ್ಧಕಗಳ ವ್ಯವಸ್ಥೆ ಕಂಡುಬಂದಿರಲಿಲ್ಲ. ಪ್ರತಿ ವರ್ಷ
ನಮ್ಮೂರಿನಲ್ಲಿ ನಡೆಯುವ ಗೆಳೆಯರ ಬಳಗದ ನಾಟಕೋತ್ಸವಗಳಲ್ಲಿ ಬೆಳಕು, ಧ್ವನಿ ವ್ಯವಸ್ಥೆಯ ಉತ್ತಮ
ಗುಣಮಟ್ಟದ್ದೇ ಎನ್ನುವುದರಲ್ಲಿ ಎರಡನೆಯ ಮಾತಿಲ್ಲ. ಆದರೆ ಈ ಪ್ರದರ್ಶನಕ್ಕೆ ಮಾಡಿದ ವ್ಯವಸ್ಧೆ
ದಾಖಲೆಗೆ ಅರ್ಹವಾದದ್ದು. ಜನರು ಕೂರಲು ಹತ್ತು ಸಾವಿರ ಕುರ್ಚಿಗಳನ್ನು ಹಾಕಿದ್ದರು. ಕುರ್ಚಿಗಳು
ಖಾಲಿ ಇರಲಿಲ್ಲ, ಜನಜಾತ್ರೆ. ಆದರೆ ಸದ್ದುಗದ್ದಲವಿಲ್ಲ. ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು
ಪ್ರತ್ಯಕ್ಷ ಕಾಣಲು ಕಾತುರದ ನಿರೀಕ್ಷೆಯಲ್ಲಿದ್ದರು.
ಮೋಹನ್ ಆಳ್ವಾರ ಪ್ರಾಸ್ತಾವಿಕ ಭಾಷಣ |
ಮೂಡುಬಿದರೆಯ ಆಳ್ವಾಸ್
ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವಾ ಸ್ವತಃ ಬಂದಿದ್ದರು. ಅವರ ಶಿಕ್ಷಣ
ಸಂಸ್ಥೆಯಲ್ಲಿ ಓದುತ್ತಿರುವ ಮುನ್ನೂರು ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡ ವೇದಿಕೆಯ
ಹಿಂಬದಿಯಲ್ಲಿ ಸಜ್ಜಾಗಿದ್ದರು. ಆಳ್ವಾಸ್ ನುಡಿಸಿರಿ ಸಾಹಿತ್ಯಕ ಚಟುವಟಿಕೆಗಳಿಗೆ ಮೀಸಲಾಗಿದ್ದರೆ,
ಸಾಂಸ್ಕೃತಿಕ ಪ್ರತಿಷ್ಠಾನವು ನಮ್ಮ ದೇಶದ ವೈವಿಧ್ಯತೆಯನ್ನು ರಂಗಕಲೆಗಳ ಮೂಲಕ ಪರಿಚಯಿಸುತ್ತಿದೆ.
ಇಂದು ಟಿವಿ ಮಾಧ್ಯಮದ ಮೂಲಕ ಇಂತಹ ಸಾವಿರಾರು ಕಾರ್ಯಕ್ರಮಗಳು ನಿತ್ಯವೂ
ಪ್ರದರ್ಶಿತವಾಗುತ್ತಿದ್ದರೂ, ಆಳ್ವಾಸ್ ಕಾರ್ಯಕ್ರಮದ ಪರಿಣಾಮ ಅವುಗಳಲ್ಲಿ ಕಾಣಸಿಗದು. ಏಕೆಂದರೆ ಈ
ಗುಣಮಟ್ಟದ ಕಲಾವಿದರು, ವೇಷಭೂಷಗಳು, ಸಾಹಿತ್ಯ, ಸಂಗೀತ, ಧ್ವನಿ-ಬೆಳಕುಗಳ ಅಪೂರ್ವ ಸಂಗಮವು
ಗ್ರಾಮೀಣ ಪ್ರದೇಶದ ಪ್ರೇಕ್ಷಕರಿಗೆ ದೊರೆಯುವುದು ತೀರ ಕಡಿಮೆಯೆನ್ನಬೇಕು. ಅಂಥ ಕೊರತೆಯನ್ನು
ನೀಗಿಸುವ ಈ ಪ್ರತಿಷ್ಠಾನದ ಕಾರ್ಯಕ್ರಮ ವೀಕ್ಷಿಸುವವರಿಗೆ ಭಾರತದ ಕಲೆಗಳ ಸ್ಥೂಲ ಪರಿಚಯವಂತೂ
ದೊರಕುತ್ತದೆ. ಅಜ್ಜಂಪುರದ ಮಟ್ಟಿಗೆ ಇದೊಂದು ಸುವರ್ಣಾವಕಾಶವೆನ್ನಬೇಕು.
ಚಿತ್ರದುರ್ಗದ ಸಂಸದ ಚಂದ್ರಪ್ಪ ನಗಾರಿ ಬಾರಿಸುವ ಮೂಲಕ ಉದ್ಘಾಟನೆ |
ಇದನ್ನು ಸಾಧಿಸಲು
ಶ್ರಮಿಸಿದ ವಿವಿಧ ಸ್ಥಳೀಯ ಸಂಘಟನೆಗಳು ತಾವೊಂದು ಉತ್ತಮ ಕಾರ್ಯ ನಿರ್ವಹಿಸಿ, ಅದು
ಯಶಸ್ವಿಯಾಗುವುದರ ಸೂಚನೆಗಳನ್ನು ಆನಂದಿಸುತ್ತಿದ್ದುದು ಕಂಡುಬರುವಂತಿತ್ತು. ಗೆಳೆಯರ ಬಳಗದ
ಅಧ್ಯಕ್ಷ ಎ.ಸಿ. ಚಂದ್ರಪ್ಪ ನೆರೆದಿದ್ದ ಅಪಾರ ಜನಸಂದಣಿ ನೋಡಿ ಊರಿನ ಕಾರ್ಯಕ್ರಮ ಬಹುಪಾಲು
ಯಶಸ್ವಿಯಾದಂತೆ ಎಂಬ ಧನ್ಯತೆಯಲ್ಲಿ ಅತಿಥಿಗಳನ್ನು ಬರಮಾಡಿಕೊಂಡರು. ಮೆಡಿಕಲ್ ಎಸ್. ಶಿವಾನಂದ್,
ರಾಜ್ಯ ಔಷಧ ವ್ಯಾಪಾರಿಗಳ ಸಂಘದಿಂದ ಕಾರ್ಯಕ್ರಮದ ವ್ಯವಸ್ಥೆಗಾಗಿ ಸಿಂಹಪಾಲಿನ ಆರ್ಥಿಕ
ಸಂಪನ್ಮೂಲವನ್ನು ಕೊಡಿಸಿದ್ದು ಸಾರ್ಥಕವಾಯಿತು ಎಂಬ ಸಡಗರದಲ್ಲಿ ಓಡಾಡುತ್ತಿದ್ದರು. ಹೊಯ್ಸಳ
ಸ್ಪೋರ್ಟ್ ಕ್ಲಬ್ ನ ಎ.ಬಿ. ಶ್ರೀನಿವಾಸ್ ಸಂಗಡಿಗರು ಇಷ್ಟು ದಿನಗಳ ಪರಿಶ್ರಮ ವ್ಯರ್ಥವಾಗಲಿಲ್ಲ
ಎಂಬ ಖುಷಿಯಲ್ಲಿದ್ದರು. ಹೀಗೆ ಕಾರ್ಯಕ್ರಮದ ಸಿದ್ಧತೆಗಾಗಿ ಓಡಾಡಿದ ಎಲ್ಲರೂ
ಹರ್ಷಚಿತ್ತರಾಗಿದ್ದರು. ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹಣ್ಣೆಯ
ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶಾಸಕ ಶ್ರೀನಿವಾಸ್ , ಮಾಜಿ ಶಾಸಕ ಎಸ್.
ಎಂ. ನಾಗರಾಜ್, ಔಷಧ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಹರಿಕೃಷ್ಣ, ಚಿಕ್ಕಮಗಳೂರು ಜಿ.ಪಂ. ಮಾಜಿ
ಅಧ್ಯಕ್ಷ ಎಸ್. ತಿಪ್ಪೇರುದ್ರಯ್ಯ, ಹಿರಿಯ ಲೇಖಕ ಎಸ್. ಸತ್ಯನಾರಾಯಣ ಶ್ರೇಷ್ಠಿ ಮುಂತಾದ ಗಣ್ಯರ
ಉಪಸ್ಥಿತಿಯಲ್ಲಿ ಚಿತ್ರದುರ್ಗದ ಸಂಸದ ಚಂದ್ರಪ್ಪ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.
ಆಳ್ವಾಸ್ ಶಿಕ್ಷಣ
ಪ್ರತಿಷ್ಠಾನದ ಕಾರ್ಯಕ್ರಮವೇನೋ ಉಚಿತ. ಆದರೆ ಬೃಹತ್ ವೇದಿಕೆ, ಪೀಠೋಪಕರಣಗಳು, ಪ್ರದರ್ಶನ ನೀಡುವ
ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಊಟೋಪಚಾರ ಇತ್ಯಾದಿಗಳ ಖರ್ಚು ಲಕ್ಷಗಳ ಲೆಕ್ಕದ್ದು. ಊರಿನ
ನಾಯಕರು ಪಕ್ಷಭೇದ ಮರೆತು ಇದೆಲ್ಲದರ ನಿರ್ವಹಣೆಗೆ ವ್ಯವಸ್ಥೆ ಮಾಡಿದ್ದರು. ಧ್ವನಿ ಬೆಳಕು
ವ್ಯವಸ್ಥೆಗಳಿಗೆ ಸ್ವತಃ ಆಳ್ವಾಸ್ ಸಂಸ್ಥೆಯೇ ಧ್ವನಿವರ್ಧಕ, ಜನರೇಟರುಗಳ ವ್ಯವಸ್ಥೆ ಮತ್ತು ಅವುಗಳ
ನಿರ್ವಹಣೆಯ ಏರ್ಪಾಡನ್ನು ಅದರ ತಂತ್ರಜ್ಞರೇ ಮಾಡಿದ್ದರು.
ಮಲ್ಲಕಂಬ ಮತ್ತು ಹಗ್ಗದ ಮೇಲಿನ ಕಸರತ್ತುಗಳು |
ಸಭಾ ಕಲಾಪ ಮುಗಿದು
ಆಳ್ವಾಸ್ ಸಾಂಸ್ಕೃತಿಕ ವೈಭವದ ವಿವಿಧ ಪ್ರಕಾರದ ನೃತ್ಯಗಳು ಕಡಲ ತೆರೆಗಳಂತೆ ಒಂದೊಂದಾಗಿ
ಪ್ರೇಕ್ಷಕರ ಮುಂದೆ ಹಾಯುತ್ತಾ ಅನಾವರಣಗೊಳ್ಳತೊಡಗಿದವು. ಮೊದಲಿಗೆ ಕೇರಳದ ಮೋಹಿನಿಯಾಟ್ಟಂನ
ಅಷ್ಟಲಕ್ಷ್ಮಿಯರ ಕಥಾವಸ್ತುವಿನ ನೃತ್ಯ ಪ್ರದರ್ಶನವು ಪ್ರೇಕ್ಷಕರನ್ನು ದೇವರ ನಾಡಿಗೇ
ಕರೆದೊಯ್ದಿದ್ದವು. ನಮ್ಮ ಕರಾವಳಿಯ ಬಡಗುತಿಟ್ಟು ಯಕ್ಷ ಪ್ರಯೋಗ, ರಾಸಲೀಲೆ, ತೆಂಕುತಿಟ್ಟು
ಯಕ್ಷಗಾನದ ಮಹಿಷಾಸುರ ಮರ್ದಿನಿ ನಾಡಿನ ಕಲಾಪ್ರಾಕಾರದ ಶ್ರೀಮಂತಿಕೆಯನ್ನು ತೋರಿದವು. ಶ್ರೀಲಂಕಾದ
ಜನರ ಉಡುಗೆ-ತೊಡುಗೆಗಳನ್ನು ತೊಟ್ಟು ನಡೆಸಿಕೊಟ್ಟ ಕ್ಯಾಂಡಿಯನ್ ನೃತ್ಯವು ಅಲ್ಲಿನ
ಸಂಸ್ಕೃತಿಯನ್ನು ಪರಿಚಯಿಸಿತು. ಮಲ್ಲಕಂಬ ಮತ್ತು ಹಗ್ಗದ ಮೇಲಿನ ಕಸರತ್ತುಗಳು ಅತ್ಯಂತ
ರೋಚಕವಾಗಿದ್ದವು. ಮಲ್ಲಕಂಬವನ್ನು ಆಧರಿಸಿ ಬಾಲಕರು ವಿವಿಧ ವಿನ್ಯಾಸಗಳ ಕಸರತ್ತು ಮಾಡುತ್ತಿದ್ದರೆ, ವೇದಿಕೆಯ
ಎರಡು ಬದಿಗಳಲ್ಲಿ ಬಾಲಕಿಯರು ಹಗ್ಗವನ್ನು ಬಳ್ಳಿಗಳಂತೆ ಬಳಸಿ ವಿಭಿನ್ನ ವಿನ್ಯಾಸಗಳನ್ನು
ತೋರಿಸಿದರು.
ಮಣಿಪುರಿಯ ಸ್ಟಿಕ್ ಡಾನ್ಸ್ ನಲ್ಲಿ ಗಾಳಿಯಲ್ಲಿ ಕೋಲುಗಳು ನಿರಂತರವಾಗಿ ತೇಲುವಂತೆ
ನೋಡಿಕೊಳ್ಳುವುದರ ಜತೆಗೆ ಲಯಬದ್ಧವಾಗಿ ಕುಣಿದು ಕಣ್ಮನ ತಣಿಸಿದರು. ಮಣಿಪುರಿ ಜಾನಪದ ನೃತ್ಯ ಡೋಲ್
ಚಲಂ ಇನ್ನಷ್ಟು ರೋಚಕವಾಗಿ ಮೂಡಿಬಂದಿತು. ಡೋಲನ್ನು ಬಡಿಯುತ್ತಲೇ ಗಾಳಿಯಲ್ಲಿ ವೃತ್ತಾಕಾರವಾಗಿ
ಲಾಗಹಾಕುತ್ತಿದ್ದ ಕಲಾವಿದರ ಅಂಗಸಾಧನೆ ಕಂಡು ಪ್ರೇಕ್ಷಕರು ಅಕ್ಷರಶಃ ರೋಮಾಂಚಿತರಾದರು. ಮಣಿಪುರಿಯ
ಶಾಸ್ತ್ರೀಯ ಮಹಾ ರಾಸ್ ನೃತ್ಯವು ಗೋಪಿಕೆಯ ಜತೆಗಿನ ಕೃಷ್ಣ ಲೀಲೆಯನ್ನು ಶೃಂಗಾರಮಯವಾಗಿ
ತೋರಿಸಿತು.
ಗುಜರಾತಿನ ಗಾರ್ಬಾ
ನೃತ್ಯದಲ್ಲಿ ಕೋಲು ಹಿಡಿದು ಅಷ್ಟು ಲಯಬದ್ಧವಾಗಿ ಕುಣಿಯಲು ಸಾಧ್ಯವೆ ಎಂದೆನಿಸುವಂತೆ ಮಾಡಿದರು. ಆಂಧ್ರದ
ಜಾನಪದ ಬಂಜಾರ ನೃತ್ಯದಲ್ಲಿ ಮೂರು ಕುಂಭಗಳ ಕಟ್ಟನ್ನು ತಲೆಯ ಮೇಲೆ ಹೊತ್ತು ಕಲಾವಿದರು ಒಂದಿಷ್ಟೂ
ಆಯತಪ್ಪದೆ ಸೊಗಸಾಗಿ ಕುಣಿದದ್ದು ಪ್ರೇಕ್ಷಕರ ಮನಸೂರೆಗೊಂಡಿತು. ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹ
ನೃತ್ಯದ ಹತ್ತಾರು ಸಿಂಹ ವೇಷಧಾರಿಗಳು ಗತ್ತಿನಿಂದ
ಕುಣಿದು ಗರ್ಜಿಸಿದ ಪರಿ ಪ್ರೇಕ್ಷಕರ ಎದೆ ನಡುಗಿಸುವಂತಿತ್ತು. ಬೃಹತ್ ಗಾತ್ರದ ಸಿಂಹಗಳ ವೇಗವಾದ
ಚಲನೆಗೆ ವಿಶಾಲವಾದ ರಂಗಸಜ್ಜಿಕೆ, ಅವುಗಳ ವರ್ಣಭರಿತ ಮುಖವರ್ಣಿಕೆಯ ಅಲಂಕಾರಗಳು ನೈಜ ಸಿಂಹಗಳ
ದಾಳಿಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದವು. ಬಲು ಸಂಭ್ರಮದಿಂದ ನರ್ತಿಸಿದ ಮಹಿಷ-ಮಹಿಷಿಯರ
ಉನ್ಮಾದಭರಿತ ಜೋಡಿನೃತ್ಯ ಕುತೂಹಲ
ಹುಟ್ಟಿಸುವಂತಿತ್ತು. ಮಹಿಷನನ್ನು ಸಿಂಹಗಳು ಸಂಹರಿಸಿದಾಗ, ಮಹಿಷಿಯ ದುಃಖ ಜನರ ಮನವನ್ನು
ಮುಟ್ಟುವಲ್ಲಿ ಸಫಲವಾಗಿತ್ತು. ಕಥಕ್ ಶೈಲಿಯಲ್ಲಿ ಪ್ರಸ್ತುತಪಡಿಸಲಾದ ನವರಂಗ್ ನೃತ್ಯದಲ್ಲಿ ಭಾರತದ ಎಲ್ಲ ನೃತ್ಯ ಪ್ರಾಕಾರಗಳ ವೈವಿಧ್ಯತೆ ಮೂಡಿಬಂದಿತು. ಮರಾಠಿ ಲಾವಣಿ ನೃತ್ಯ ಮರಾಠಿ ದೇಸೀ ಸೊಗಡನ್ನು ಬಿಂಬಿಸುವಂತಿದ್ದರೆ, ಭರತನಾಟ್ಯ ಶೈಲಿಯ ನವದುರ್ಗಾ ನೃತ್ಯ ಭಕ್ತಿಭಾವವನ್ನು ಮಿಂಚಿಸುವಂತಿತ್ತು. ಮೂರುಗಂಟೆ ಮೂವತ್ತು ನಿಮಿಷಗಳ ಅದ್ಭುತ ಪ್ರದರ್ಶನ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಯಕ್ಷಲೋಕದ ಕಿನ್ನರ-ಕಿನ್ನರಿಯರು ಅಜ್ಜಂಪುರಕ್ಕೆ ಬಂದು ಈ ರಸದೌತಣ ನೀಡಿ ರಂಜಿಸಿದ ಪರಿ ಪ್ರೇಕ್ಷಕರನ್ನು ಮಾಯಾಲೋಕಕ್ಕೆ ಒಯ್ದ ಅನುಭವವಾಗಿತ್ತು. ಜನರ ಮುಖಭಾವಗಳಲ್ಲಿ, ಮಾತುಗಳಲ್ಲಿ ಇಂಥದೊಂದು ಸಾರ್ಥಕ ಸಂಭ್ರಮಕ್ಕೆ ತಾವು ಸಾಕ್ಷಿಯಾದ ಬಗ್ಗೆ ಸಂತೃಪ್ತಿ ಎದ್ದು ಕಾಣುವಂತಿತ್ತು. ಹಾಗೆಂದೇ ಒಬ್ಬ ಹೆಣ್ಣುಮಗಳು ನಮ್ಮೂರಿನ ಶೈಲಿಯಲ್ಲಿ ಹೇಳಿದ ಒಂದು ಮಾತು ಇದಕ್ಕೆ ಪ್ರಾತಿನಿಧಿಕವೆನ್ನುವಂತಿತ್ತು. “ಊರಿನಲ್ಲಿ ಇದ್ದು ಇದನ್ನು ನೋಡದೇ ಇದ್ದೋರೇ ಪಾಪಿಗಳು ಕಣೇ” ಎಂದು ಭಾವಾವೇಶದಿಂದ ತನ್ನ ಸಂಗಾತಿಗೆ ಹೇಳುತ್ತಿದ್ದಳು.
ಸಾಂಸ್ಕೃತಿಕ ವೈಭವದ ವಿವಿಧ ಪ್ರಕಾರದ ನೃತ್ಯಗಳು
ಒಂದು ಅತ್ಯುತ್ತಮ ಕಾರ್ಯಕ್ರಮದ ಅತ್ಯುತ್ತಮ ನಿರೂಪಣೆ. ಚಿದಂಬರ ಸುಶೀಲ.
ಪ್ರತ್ಯುತ್ತರಅಳಿಸಿಒಂದು ಅತ್ಯುತ್ತಮ ಕಾರ್ಯಕ್ರಮದ ಅತ್ಯುತ್ತಮ ನಿರೂಪಣೆ. ಚಿದಂಬರ ಸುಶೀಲ.
ಪ್ರತ್ಯುತ್ತರಅಳಿಸಿ