ಕೇಸರಿಬಾತಿನ ಮೇಲಿನ ತುಪ್ಪ, ಅಬ್ಬ ಸಾಕಾಯ್ತಪ್ಪ


ಅಜ್ಜಂಪುರ ಸೂರಿಯವರ ಬಗ್ಗೆ ಈ ಬ್ಲಾಗ್ ನಲ್ಲಿ ಒಂದು ಲೇಖನ ಪ್ರಕಟವಾಗಿದೆ. ಈ ಲೇಖನವನ್ನು ಶಿವಮೊಗ್ಗೆಯಿಂದ ಮಾಹಿತಿಗಳನ್ನು ತರಿಸಿ, ಅಮೆರಿಕದಿಂದ ಪ್ರಕಟಿಸುತ್ತಿರುವೆ. ಈ ಕುರಿತು ಶ್ರೀಮತಿ ಶಾರದಾ ಅವರನ್ನು ಪ್ರಕಟಣೆಯ ಅನುಮತಿಗಾಗಿ ಕೇಳಿದಾಗ ಸಂತೋಷದಿಂದ ಒಪ್ಪಿದರು. ಅವರಿಗೆ ಕೃತಜ್ಞತೆಗಳು. ಇದನ್ನು ಪ್ರಕಟಿಸಿದ ಶಿವಮೊಗ್ಗದ ಸಂಜೆ ಪತ್ರಿಕೆ ಮಲೆನಾಡು ಮಿತ್ರದ  ಕಾರ್ಯನಿರ್ವಾಹಕ ಸಂಪಾದಕ ಶ್ರೀ ಎಸ್.ಆರ್. ಅನಿರುದ್ಧ ಇವರು ಅನುಮತಿ ನೀಡಿ ಸಹಕರಿಸಿದ್ದಾರೆ. ಅವರಿಗೂ ಕೃತಜ್ಞತೆಗಳು. ನಿನ್ನೆಯಷ್ಟೇ ಮಿತ್ರ ಅಪೂರ್ವ ಬಸು ಅವರನ್ನು ಸಂಪರ್ಕಿಸಿ, ಅಜ್ಜಂಪುರ ಜಿ. ಸೂರಿಯವರ ಚಿತ್ರಗಳು ಇದ್ದಲ್ಲಿ ಕಳಿಸಿಕೊಡಿ ಎಂದು ವಿನಂತಿಸಿದ್ದಕ್ಕೆ, ತಕ್ಷಣವೇ ಚಿತ್ರಗಳನ್ನು ಕಳಿಸಿಕೊಟ್ಟರು. ಅವರಿಗೆ ಧನ್ಯವಾದಗಳು.

ಅಜ್ಜಂಪುರ ಸೂರಿ ಹೆಚ್ಚು ಕಾಲ ಕಡೂರಿನಲ್ಲಿ ತಮ್ಮ ವೃತ್ತಿ ಜೀವನದಲ್ಲಿ ತೊಡಗಿಕೊಂಡಿದ್ದರು. ಸ್ಥಳೀಯ ಸಾಹಿತ್ಯಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅವರನ್ನು ನಾನು ಮುಖತಃ ಭೇಟಿ ಮಾಡಲಾಗಲಿಲ್ಲ. ಅವರ ಅನುವಾದಿತ ತೆಲುಗು ಕೃತಿಗಳನ್ನು ನೋಡಿದ್ದೆ. ಅಂತೆಯೇ ಅವರ ವ್ಯಕ್ತಿತ್ವವನ್ನು ಬಿಂಬಿಸುವಂಥ ಪರಿಚಯದ ವ್ಯಕ್ತಿಗಳು ಅಜ್ಜಂಪುರದಲ್ಲಿ ನನಗೆ ಭೇಟಿಯಾಗಲಿಲ್ಲ. ಹೀಗಾಗಿ ಅವರ ಬಗ್ಗೆ ಹೆಚ್ಚಿನ ಪರಿಚಯವೇನೂ ಇರದಿದ್ದರೂ, ನಮ್ಮ ಊರಿನವರಾಗಿ ಅವರು ಕೈಗೊಂಡ ಸಾಹಿತ್ಯಕ ಸೇವೆಯಿಂದಾಗಿ ಅಭಿಮಾನವಂತೂ ಇತ್ತು.

ಇತ್ತೀಚೆಗೆ ಶಿವಮೊಗ್ಗದ ಮಲೆನಾಡು ಮಿತ್ರ ಪತ್ರಿಕೆಯ ಅಂಕಣಕಾರ್ತಿ ಶ್ರೀಮತಿ ಕೆ. ಶಾರದಾ ಉಳುವೆಯವರು ಅಜ್ಜಂಪುರ ಸೂರಿಯವರನ್ನು ತಮ್ಮ  ಅಂಕಣಬರಹದಲ್ಲಿ ನೆನಪಿಸಿಕೊಂಡಿದ್ದಾರೆ. ಅನೇಕ ಸಾಹಿತಿಗಳನ್ನು ಮತ್ತವರ ಸಾಹಿತ್ಯವನ್ನು ಹತ್ತಿರದಿಂದ ಬಲ್ಲ, ಅವರ ಅನುಭವಗಳನ್ನು ಓದುವುದೇ ಒಂದು ಸಂತೋಷ ಅಜ್ಜಂಪುರ ಸೂರಿಯವರನ್ನು ಕುರಿತಾದ ಅವರ ಬರಹವನ್ನು ಓದಿದೊಡನೆ ಅವರ ವ್ಯಕ್ತಿತ್ವ ನಿಚ್ಚಳವಾಯಿತು. ನನ್ನಂತೆಯೇ ಅವರ ಬಗ್ಗೆ ತಿಳಿಯಲು ಆಶಿಸುವ ಓದುಗರಿಗಾಗಿ ಶ್ರೀಮತಿ ಶಾರದಾ ಅವರ ಲೇಖನವನ್ನು ಈ ಕೆಳಗೆ ಪ್ರಕಟಿಸಿರುವೆ. 


- ಶಂಕರ ಅಜ್ಜಂಪುರ

--------------------------------------------------------------------------------------------------------------------------------------------
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 
                                           
ಅಜ್ಜಂಪುರ ಜಿ. ಸೂರಿ
                                                              
ನನಗೆ ಮೊದಲಿನಿಂದಲೂ ಓದುವ ಹವ್ಯಾಸವಿದ್ದಿದ್ದರಿಂದ ಎಲ್ಲ ಪುಸ್ತಕಗಳನ್ನು ಕೊಂಡು ಓದಲು ಸಾಧ್ಯವಾಗದ ಕಾರಣದಿಂದ ಶೃಂಗೇರಿಯ ಲೈಬ್ರರಿಗೆ ಮೆಂಬರ್ ಆಗಿ ಮೂರು ಕಾರ್ಡ್ (ಮನೆಯವರ ಮೂವರ ಹೆಸರಲ್ಲಿ) ಪಡೆದಿದ್ದೆ. ಹದಿನೈದು ದಿನಕ್ಕೆ ಬದಲಾಯಿಸುವಂತಹ ವ್ಯವಸ್ಥೆ ಇದ್ದರೂ ಕೂಡ ನನ್ನ ಓದಿನ ಚಟಕ್ಕೆ ಮೂರು ಪುಸ್ತಕಗಳು ಮೂರು ದಿನಕ್ಕೆ ವಾಪಸ್ಸಾಗುತ್ತಿದ್ದವು. ಒಬ್ಬರಿಗೆ ಅಂಟಿಕೊಳ್ಳದೆ ಎಲ್ಲಾ ಲೇಖಕ-ಲೇಖಕಿಯರ ಬರಹ ಓದುತ್ತಿದ್ದೆ. ಅನುವಾದ ಸಾಹಿತ್ಯ ಭಿನ್ನವಾಗಿದ್ದು ಹೆಚ್ಚಿನ ಗಮನಸೆಳೆಯುತ್ತಿತ್ತು. ವಂಶಿ, ರಾಜಾ ಚೆಂಡೂರ್, ಸರಿತಾ ಹೀಗೆ ಈ ಎಲ್ಲರ ಸಾಲಿನಲ್ಲಿ ಅಜ್ಜಂಪುರ ಸೂರಿ ಕೂಡ ಇದ್ದರು. 


ನಮ್ಮ ಶೃಂಗೇರಿಯಲ್ಲಿ ನಡೆಯುವ ಸಾಹಿತ್ಯೋತ್ಸವಕ್ಕೆ ಅಜ್ಜಂಪುರ ಜಿ.ಸೂರಿ ಬಂದಾಗ ರಾಜಣ್ಣ ಮಾಸ್ತರರು ಪರಿಚಯ ಮಾಡಿಕೊಟ್ಟಿದ್ದರು. ಅಲ್ಲಿಂದ ಯಾವುದೇ ಸಭೆ-ಸಮಾರಂಭಗಳಲ್ಲಿ ಭೇಟಿಯಾದಾಗ ಮೊದಲು ಯೋಗಕ್ಷೇಮ ವಿಚಾರಿಸಿ ನಂತರ ಹೇಳ್ತಿದ್ದರು. ‘ಶಾರದಾ, ಎಲ್ಲರೂ ಪಕ್ಷಿಧಾಮದ ಬಗ್ಗೆ, ಹಾಗೆ ನಿಮ್ಮ ಮನೆಯ ಆತಿಥ್ಯದ ಬಗ್ಗೆ ಮಾತನಾಡುತ್ತಿರುತ್ತಾರೆ. ನಾನು ಕೂಡ ಒಮ್ಮೆ ಬರಬೇಕೆಂದು ಆಸೆಯಾಗ್ತಿದೆ. ಆದರೇಕೊ ನೀನು ಸರಿಯಾಗಿ ಕರೆಯುತ್ತಿಲ್ಲ’ ಎಂದು ತಮಾಷೆ ಮಾಡುತ್ತಿದ್ದರು. 
ಎತ್ತರವಾದ ಮೈಕಟ್ಟಿನ ದುಂಡು ಮುಖದ ಎಣ್ಣೆಗಂಪು ಬಣ್ಣದ ಸೂರಿಯವರು ಸದಾ ನಗುನಗುತ್ತ ಇರುತ್ತಿದ್ದರು. ಕಥೆಗಳ, ಕಾದಂಬರಿಗಳ ಕುರಿತು ಚರ್ಚಿಸುವಾಗ ಪರವಶರಾಗಿ ಅದನ್ನು ಅರೆದು, ಕುಡಿದವರಂತೆ ಒಳಹೊಕ್ಕು ತಿರುಳನ್ನೆಲ್ಲ ಬಿಡಿಸಿ ಈಚೆ ತಂದು ಹಂಚಿಕೊಳ್ಳುತ್ತಿದ್ದರು. ಅನುವಾದ ಸಾಹಿತಿಗೆ ಇರಬೇಕಾದ ಭಾಷಾ ಜ್ಞಾನದ ಜೊತೆಗೆ ಪರಕಾಯ ಪ್ರವೇಶ ಮಾಡುವ ಚಾಣಾಕ್ಷತನವು ಇರಬೇಕು. ಆಗಲೇ ಸುಂದರವಾದ ಬರಹ ಮೂಡಿ ಬರಲು ಸಾಧ್ಯವೆಂದು ಹೇಳುತ್ತಿದ್ದರು. ಹೆಚ್ಚಾಗಿ ತೆಲುಗು ಲೇಖಕರ ಕಾದಂಬರಿಗಳನ್ನೇ ಅನುವಾದ ಮಾಡುತ್ತಿದ್ದುದು ಮೂಲ ಲೇಖಕರ ಭಾವನೆಗಳಿಗೆ ಧಕ್ಕೆಯಾಗದ ಹಾಗೆ ಬರೆಯುವುದು ಸೂರಿಯವರಿಗೆ ಕರಗತವಾಗಿತ್ತು. 

ಒಮ್ಮೆ ಕಡೂರಿನಲ್ಲಿ ನಡೆದ ಸಾಹಿತ್ಯಗೋಷ್ಠಿಗೆ ನಾನು ಪ್ರಬಂಧ ಮಂಡಿಸಲು ಹೋದಾಗ ತಮ್ಮ ಮನೆಗೆ ಕರೆದೊಯ್ದು ಉಪಚರಿಸಿ ಮಕ್ಕಳನ್ನು ಪರಿಚಯಿಸಿ ನಗೆಯಾಡಿದ್ದರು. 

ನಿನ್ಮನೆಗೆ ಬರುವ ಯೋಗ ಯಾವತ್ತು ಬರುತ್ತೋ? ಆ ಶಾರದಾಂಬೆ ಯಾವಾಗ ಕರೆಸಿಕೊಳ್ತಾಳೊ? ಇನ್ನೊಮ್ಮೆ ಶೃಂಗೇರಿಗೆ ಬಂದಾಗ ಖಂಡಿತ ನಿಮ್ಮನೆಗೆ ಭೇಟಿಕೊಟ್ಟೇ ಕೊಡ್ತೀನಿ. ಸರಿ ಸರ್, ಎಂದಿದ್ದೆ. ಇನ್ನೇನು ಹೇಳಲು ಸಾಧ್ಯವಿತ್ತು.
ಮಲೆನಾಡು ಮಿತ್ರದ ಪ್ರಿಯ ಓದುಗರೇ ನಾನಿಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಲೇಬೇಕು. ಯಾವುದೇ ಅಹಂಕಾರದಿಂದಲೋ ಅಥವಾ ಒಣಪ್ರತಿಷ್ಠೆಯಿಂದಲೋ ಹೇಳುತ್ತಿಲ್ಲ. ಶಿವಮೊಗ್ಗವು ಸೇರಿಕೊಂಡಂತೆ ಸಹ್ಯಾದ್ರಿ ತಪ್ಪಲೆಲ್ಲ ಮಲೆನಾಡು ಅನ್ನಿಸಿಕೊಂಡಿತ್ತು. ಹಾಗೆ ಮಲೆನಾಡಿಗರೆಲ್ಲರೂ ಆದರಾತಿಥ್ಯಕ್ಕೆ ಹೆಸರುವಾಸಿಯಾಗಿದ್ದರು. ಪಾಳೇಗಾರರ ಕಾಲದಲ್ಲಿ ದಂಡು ಬಂದ ಹಾಗೆ ಇಪ್ಪತ್ತು- ಮೂವತ್ತು ಮಂದಿ ಒಟ್ಟಾಗಿ ಬಂದರೂ ತಮ್ಮಲ್ಲಿರುವುದನ್ನು ಕೊಟ್ಟು ಉಪಚರಿಸಿ ಇನ್ನೊಮ್ಮೆ ಬನ್ನಿರೆಂದು ಕರೆಯುವ ಸೌಜನ್ಯವಿರುವುದು ಮಾನವೀಯ ಸಂಬಂಧಗಳ ಕಳಚಿಕೊಳ್ಳದೆ ಗಟ್ಟಿಯಾಗಿ ಉಳಿಯುತ್ತಿದೆ ಎಂಬುದಕ್ಕೆ ಸಾಕ್ಷಿ.

ಸೂರಿಯವರು ನಮ್ಮನೆಗೆ ಬಂದಾಗ ಅಪ್ಪನಿಗೆ ಖುಷಿಯೋ ಖುಷಿ. ಕಾರಣ ಅಪ್ಪ ಅನುವಾದ ಸಾಹಿತ್ಯ ತುಂಬಾ ಓದುತ್ತಿದ್ದ. ಅನುವಾದಕರಿಗೆ ಹೆಚ್ಚಿನ ಭಾವನೆಯ ಅವಶ್ಯಕತೆ ಇರುತ್ತದೆಂದು ಅಪ್ಪನ ಅಂಬೋಣ. ನಮ್ಮಲ್ಲಿರುವ ಭಾವನೆಯೊಂದಿಗೆ ಮೂಲ ಲೇಖಕರ ಭಾವನೆಯನ್ನು ತಾಳೆ ಹಾಕಿ ಅವರು ಬಳಸಿದ ಪದಗಳಿಗೆ ನಮ್ಮ ಕನ್ನಡದಲ್ಲಿರುವ ಗಾದೆ ಮಾತು, ನಾಣ್ಣುಡಿ, ಒಗಟುಗಳಲ್ಲಿನ ಜಾಣ್ಮೆ, ಗೂಡಾರ್ಥ ಎಲ್ಲ ಸೇರಿಸಿ ಸಾಹಿತ್ಯದ ರಸದೌತಣ ತಯಾರಿಸಿ ಬಡಿಸುವುದು ಕಷ್ಟದ ಕೆಲಸವೆಂದು ಅಪ್ಪ ಯಾವಾಗಲೂ ಹೇಳುತ್ತಲಿದ್ದರು.

ಮನೆಯಲ್ಲಿಯೇ ಎಂಟು ಎಮ್ಮೆ, ನಾಲ್ಕು ಹಸುಗಳಿದ್ದು ಹಾಲು ಮಾರುತ್ತಿದ್ದರೂ, ಮನೆಗೆ ಬೇಕಾದಷ್ಟಕ್ಕಿಂತ ಸ್ವಲ್ಪ ಹೆಚ್ಚಿಗೆ ಹಾಲನ್ನೆ ಅಮ್ಮ ಇಟ್ಟುಕೊಳ್ಳುತ್ತಿದ್ದರು. ಹಾಗಾಗಿ ಹಾಲು, ಮೊಸರು, ತುಪ್ಪಕ್ಕೆ ಕೊರತೆಯಾಗದೆ ಧಾರಾಳವಾಗಿ ಇರುತ್ತಿತ್ತು.
ಸೂರಿಯವರು ಬಂದಾಗ ಅಮ್ಮ ರವೆ ಕೇಸರಿಬಾತ್ ಮತ್ತು ಅರಳು, ಅಕ್ಕಿಹಿಟ್ಟು ಬೆರೆಸಿದ ರೊಟ್ಟಿ ಮಾಡಿದ್ದಳು. ಸಾಕಷ್ಟು ತುಪ್ಪ ಹಾಕಿ ತಯಾರಿಸಿದ್ದರೂ ಕೊಡುವಾಗ ಮೇಲೆ ಮತ್ತಷ್ಟು ತುಪ್ಪ ಸುರಿಯುತ್ತಿದ್ದಳು ಅಮ್ಮ.

ಇದೇನ್ರಿ ಇದು? ಘಮಗುಟ್ಟುವ ಕೇಸರಿಬಾತ್ ಅದರ ಮೇಲೆ ಈ ಹೆರೆತುಪ್ಪ! ನನಗೆ ಮಧುಮೇಹವಿದೆ ಕಂಡ್ರಿ ಆದರೂ ಇದನ್ನು ಬಿಡಲಾಗ್ತಿಲ್ಲ. ಏನಾದರಾಗಲಿ ತಿಂತೀನಿ. ನಾವು ಕೂಡ ರೊಟ್ಟಿ, ಸಿಹಿತಿಂಡಿ ಎಲ್ಲ ಮಾಡ್ತೀವಿ. ಆದರೆ ಈ ರುಚಿ ಬರೊಲ್ಲವೆಂದಾಗ, ಅಮ್ಮ ಇಂಗು -ತೆಂಗು, ಸಕ್ಕರೆ ತುಪ್ಪವಿದ್ದರೆ ಮಂಗ ಮಾಡಿದ ಅಡುಗೆ ಕೂಡ ಚೆನ್ನಾಗಿರುತ್ತದೆಂದು ಹೇಳಿ ಬಿಡ್ತಿದ್ದಳು.

ಅನುವಾದಕರಾಗಿ ಮಾತ್ರವಲ್ಲದೆ ಸ್ವಂತ ಕೃತಿಗಳು ಕೂಡ ಸೂರಿಯವರ ಖಜಾನೆಯಲ್ಲಿದ್ದವು. ತಾವೊಬ್ಬ ಶ್ರೇಷ್ಠ ಲೇಖಕರಾಗಿದ್ದರೂ ಯಾವುದೇ ಹಮ್ಮ-ಬಿಮ್ಮು ಇಲ್ಲದೆ ಎಲ್ಲರೊಂದಿಗೆ ಸರಳವಾಗಿ ಬೆರೆತು, ಒಂದೆರಡು ಚುಟುಕು ಕವಿತೆ ಬರೆದು ಲೇಖಕರಾದೆವೆಂದು ಬೀಗುವವರನ್ನು ಕೂಡ ಕರೆದು ಮಾತನಾಡುತ್ತಿದ್ದರು. 

ಇಂಥಹವರೇ ನಮ್ಮ ಜನಕರಾಗಬೇಕೆಂದು ನಾವು ಮೊದಲೇ ಕೇಳಿಕೊಂಡು ಹುಟ್ಟಲು ಸಾಧ್ಯವಿಲ್ಲ. ಆದರೆ ನಮ್ಮ ಹುಟ್ಟನ್ನು ಸಾರ್ಥಕಪಡಿಸಿಕೊಳ್ಳುವತ್ತ ನಾವು ಮನ ತೆರೆಯಲು ಸಾಧ್ಯ. ‘ನಿನ್ನೆ ಕಳೆದು ಹೋಗಿದೆ. ಮರೆತು ಬಿಡಿ ಇಂದಿದೆ ಉಪಯೋಗಿಸಿಕೊಳ್ಳಿ, ನಾಳೆ ಬರಲಿದೆ ತಯಾರಾಗಿರಿ ಎಂದು’ ನಮ್ಮ ತತ್ವಜ್ಞಾನಿಗಳು ಹೇಳಿದ್ದಾರೆ. ಈ ದೇಹದಲ್ಲಿ ಉಸಿರಿರುವ ತನಕ ಏನಾದರೂ ಒಳ್ಳೆಯದನ್ನು ಮಾಡಬೇಕು. ಆ ಒಳ್ಳೆಯದು ಬರವಣಿಗೆ ಮಾತ್ರವೇ ಆಗಬೇಕೆಂದಿಲ್ಲ. ಬರಹಗಾರರನ್ನು ಆತ್ಮೀಯವಾಗಿ  ಸ್ವಾಗತಿಸಿ ಹೀಗೆ ಹೆರೆತುಪ್ಪದೊಂದಿಗೆ ಸಿಹಿ ತಿನ್ನಲು ಕೊಟ್ಟರೆ.. ಸಾಕಾಯ್ತಪ್ಪ. ಇನ್ನೂ ಇಲ್ಲೆ ಕುಳಿತಿದ್ದರೆ ಅಲ್ಲಿ ಕಾರ್ಯಕ್ರಮ ಶುರುವಾಗಿ ಗಿಜಿ ಗುಟ್ಟುತ್ತಿರುವ ಜನರನ್ನು ಕಂಡು ಉದ್ದೆನೆ ನಿಲುವಂಗಿ ತೊಟ್ಟು, ಹೆಗಲಲ್ಲೊಂದು ಚಿಂಗಾರಿ ಚೀಲ ಇಳಿಬಿಟ್ಟುಕೊಂಡು ವೇದಿಕೆ ಹತ್ತಿ ಮೈಕ್ ಕೈಯಲ್ಲಿ ಹಿಡಿದು, ಹಲೋ ಮೈಕ್ ಟೆಸ್ಟ್ ಎನ್ನುತ್ತ ಊಫ್ ಎಂದೂದಿ, ಸಭಿಕರಲ್ಲಿ ವಿನಂತಿ, ಯಾರು ಗಲಾಟೆ ಮಾಡಬಾರದು. ನಮ್ಮ ಇಂದಿನ ಮುಖ್ಯ ಅತಿಥಿಗಳು ದಾರಿಯಲ್ಲಿ ಬರ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಂದು ತಲುಪ್ತಾರೆ. ಅಲ್ಲಿಯವರೆಗೆ ತಾಳ್ಮೆಯಿಂದಿದ್ದು ಎಲ್ಲರೂ ಸಹಕರಿಸಬೇಕೆಂದು ಪದೇ ಪದೇ ಕಿರುಚಿಕೊಳ್ತಾರೆ. ಅಂದ್ರೆ ನಾವು ಹೋದ್ಮೇಲೆ ಗಲಾಟೆ ಮಾಡಿ ಪರವಾಗಿಲ್ಲ ಎಂದರ್ಥ. ಸೂರಿಯವರು ಹೇಳಿ ನಗಿಸುತ್ತಿದ್ದರೆ ಆ ಕ್ಷಣ ನಗು ಬರ್ತಿತ್ತು. ವಾಸ್ತವ ನೆನೆದಾಗ ಒಂದು ಕಾರ್ಯಕ್ರಮವನ್ನು ನಿರ್ವಾಹಕರನ್ನು ಎಲ್ಲ ಎಷ್ಟೊಂದು ಕೂಲಂಕಶವಾಗಿ ತಿಳಿದುಕೊಂಡಿದ್ದಾರೆಂದು ಅನ್ನಿಸುತ್ತಿತ್ತು. 

ಚಿಕ್ಕಮಗಳೂರು ಕಡೆ ಅಥವಾ ಜಿಲ್ಲಾ ಸಮ್ಮೇಳನವಾದಾಗ ನಗುಮೊಗದ ಸೂರಿಯವರು ಅಲ್ಲೆಲ್ಲ ತಮ್ಮ ಮನೆಯದೇ ಸಮಾರಂಭವೆಂಬಂತೆ ತಾವಷ್ಟು ದೊಡ್ಡ ಲೇಖಕರೆಂಬ ಯಾವ ಅಹಂ ತೋರದೆ ಸರಳವಾಗಿ ಓಡಾಡಿಕೊಂಡಿರುತ್ತಿದ್ದರು. ನಾನಾಗಲಿ ಅಥವಾ ಅಣ್ಣ, ಅಪ್ಪ ಯಾರಾದರೂ ಕಂಡರೆ ಜೊತೆಯಲ್ಲಿರುವವರಿಗೆ ಪರಿಚಯ ಮಾಡಿಕೊಡುತ್ತ ತಪ್ಪದೇ ಒಂದು ಮಾತನ್ನು ಹೇಳಿಯೇ ಹೇಳುತ್ತಿದ್ದರು.

ಇವರ ಮನೆಗೆ ಯಾವತ್ತಾದರೂ ಹೋಗ್ರೀ. ನಾನು ಹೋದಾಗ ರವೆ ಕೇಸರಿಬಾತ್ ಮಾಡಿದ್ದರು ಇವರಮ್ಮ. ಕೇಸರಿಬಾತ್ ಮಾಡುವಾಗ ನಾವೆಲ್ಲ ತುಪ್ಪ ಹಾಕ್ತೀವಿ. ಆದ್ರೆ ಇವರಮ್ಮ ಕೇಸರಿಬಾತ್ ಮೇಲೆ ತುಪ್ಪ ಹಾಕಿ ಕೊಡ್ತಿದ್ದರು. ಸಾಕಾಯ್ತಪ್ಪ ಇನ್ನು ಮನೆಯಲ್ಲೇ ತಯಾರಿಸಿದ ಕಾಫಿ ಬೀಜದ ಪುಡಿಯ ಕಾಫಿ, ಮನೆಯಲ್ಲೆ ಸಾಕಿದ ಎಮ್ಮೆಯಿಂದ ಕರೆದು ತಂದ ಹಾಲು ಕಾಯಿಸಿ ಗಟ್ಟಿ ಕಾಫಿ ಕೊಡ್ತಾರೆ. ಅಬ್ಬ ಆ ಕಾಫಿಯನ್ನು ಅಂಗೈಯಲ್ಲಿಟ್ಟುಕೊಂಡು ಅಮೆರಿಕಾಕ್ಕೆ ವಿಮಾನದಲ್ಲಿ ಹೋಗಿ ಬರಬಹುದು. ಅದ್ಕೆ ಅವರೆಲ್ಲ ಅಷ್ಟು ಮೈ ಮುರಿದು ಕೆಲಸ ಮಾಡಲು ಸಾಧ್ಯವಾಗುವುದು.

ಸೂರಿಯವರು ಈಗಿಲ್ಲವಾದರೂ ಅವರು ಸಾಹಿತ್ಯದ ಮೂಲಕ ಇನ್ನೂ ಇದ್ದಾರೆ. ಎತ್ತರಕ್ಕೆ ಏರಲು ಮೊದಲು ಮೆಟ್ಟಿಲು ವಿನಯವಂತಿಕೆ ಎಂಬುದನ್ನು ಸೂರಿಯವರಿಂದ ನಾನು ಕಲಿತೆ ಎಂದರೆ ತಪ್ಪಾಗಲಿಕ್ಕಿಲ್ಲ. ಈಗ ಸೂರಿಯವರ ಮಗ ಕೂಡ ತನ್ನ ತಂದೆಯವರ ಹಾಗೆ ವಿನಯವಂತರಾಗಿ ಸಜ್ಜನಿಕೆಯಿಂದ ಎಲ್ಲರೊಂದಿಗೆ ಬೆರೆತು ಸಾಹಿತ್ಯ ಸೇವೆಯಲ್ಲಿ ನಿರತರಾಗಿರುವುದು ಸ್ವಾಗತಾರ್ಹ.
-೦-೦-೦-೦-೦-೦-

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ