74. ಅವಿಸ್ಮರಣೀಯ ಅಮೆರಿಕಾ

ಆತ್ಮೀಯರೇ,
ಈ 74ನೇ ಸಂಚಿಕೆಯಲ್ಲಿ ಅಜ್ಜಂಪುರದವರೇ ಆದ ಶ್ರೀ ಎ.ಎಸ್. ಕೃಷ್ಣಮೂರ್ತಿಯವರ ಕೃತಿ "ಅವಿಸ್ಮರಣೀಯ ಅಮೆರಿಕಾ" - ಇದನ್ನು ಪರಿಚಯಿಸಿದ್ದಾರೆ ಮಿತ್ರ ಅಪೂರ್ವ ಬಸು. ಅಜ್ಜಂಪುರದಿಂದ ಅಮೆರಿಕವಲ್ಲದೆ, ನಾನೂ ಸೇರಿದಂತೆ ಇತರ ವಿದೇಶಗಳಿಗೆ ಹೋಗಿಬಂದವರು ನಮ್ಮ ನಡುವೆ ಹಲವರಿದ್ದಾರೆ. ಅವರೆಲ್ಲರೂ ತಮ್ಮ ಅನುಭವಗಳನ್ನು ದಾಖಲಿಸಿರುವುದು ಕಡಿಮೆ. ನಾನು ಎರಡು ಬಾರಿ ಅಮೆರಿಕಕ್ಕೆ ಹೋಗಿಬಂದೆ. ಮೊದಲ ಭೇಟಿಯಲ್ಲಿ 37ಲೇಖನಗಳೂ, ಎರಡನೇ ಭೇಟಿಯಲ್ಲಿ 28 ಲೇಖನಗಳನ್ನುಬರೆದೆನಾದರೂ, ಅವೆಲ್ಲ ಫೇಸ್ ಬುಕ್ ನಲ್ಲಿ ಪ್ರಕಟಗೊಂಡವು. ಪುಸ್ತಕವನ್ನು ಪ್ರಕಟಿಸುವ ಸಾಹಸಕ್ಕೆ ನಾನಿನ್ನೂ ಮುಂದಾಗಿಲ್ಲ. ಅಂಥ ಸಾಹಸ ಮಾಡಿ ಯಶಸ್ವಿಯಾಗಿರುವ ಕೃಷ್ಣಮೂರ್ತಿಯವರಿಗೆ ಅಭಿನಂದನೆಗಳು. 
ಅಪೂರ್ವರು ಗುರುತಿಸಿರುವಂತೆ ಕೃಷ್ಣಮೂರ್ತಿಯವರ ಭಾಷೆ, ನಿರೂಪಣಾ ಶೈಲಿಗಳು ಅತ್ಯಂತ ಸಹಜ ಮತ್ತು ಸರಳವಾಗಿರುವುದರಿಂದ ಎಲ್ಲರ ಮನವನ್ನೂ ರಂಜಿಸುತ್ತದೆ. ಈ ಕೃತಿಯ ಉದ್ದಕ್ಕೂ ಊರಿನ ನೆನಪು ಅಲ್ಲಲ್ಲಿ ದಾಖಲಾಗಿರುವುದು ಅವರ ಅಭಿಮಾನದ ಸಂಕೇತ. ಅವರ ಬಾಲ್ಯದ ನೆನಪುಗಳಿರುವ ಮೊದಲ ಅಧ್ಯಾಯ, ಅಂದಿನ ಅಜ್ಜಂಪುರವನ್ನುತೆರೆದಿಟ್ಟಿದೆ. ಸ್ವಾರಸ್ಯದ, ವಿರಾಮದ ಓದಿಗೆಂದು ಆಯ್ದುಕೊಳ್ಳಬಹುದಾದ ಈ ಕೃತಿಯನ್ನು ಪ್ರೀತಿಯಿಂದ ಅಪೂರ್ವ ಬಸು ಪರಿಚಯಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆಗಳೇ, ಬ್ಲಾಗ್ ನ ಲೇಖಕರಿಗೆ, ಸಂಪಾದಕರಿಗೆ ಸ್ಫೂರ್ತಿ. ನಾಲ್ಕು ಸಾಲು ಬರೆಯುವ ಮನಸ್ಸುಮಾಡಿ. 

ವಂದನೆಗಳು.
- ಶಂಕರ ಅಜ್ಜಂಪುರ
ದೂರವಾಣಿ - 99866 72483
---------------------------------------------------------------------------------------------------------------------------------------


ಲೇಖನ - ಅಪೂರ್ವ ಬಸು

ಚಿತ್ರಗಳು - ಮಲ್ಲಿಕಾರ್ಜುನ ಅಜ್ಜಂಪುರ

ಲೇಖಕ - ಎ.ಎಸ್. ಕೃಷ್ಣಮೂರ್ತಿ
 
    ಪುಸ್ತಕದ ರಕ್ಷಾಪುಟ"ಅವಿಸ್ಮರಣೀಯ ಅಮೆರಿಕಾ" – ಒಂದು ಪ್ರವಾಸಕಥನವಿರುವ ಕೃತಿ. ಕೃತಿಯ ಒಳಹೊಕ್ಕು ಮೊದಲ ಅಧ್ಯಾಯ ಓದುತ್ತಿದ್ದಂತೆ, ಇದು ಎಂದಿನ ಪ್ರವಾಸಕಥನವಲ್ಲ ಎಂದು ಎನಿಸಿತು. ಮೊದಲ ಅಧ್ಯಾಯದಲ್ಲಿ ಅವಿಸ್ಮರಣೀಯ ಅಜ್ಜಂಪುರವೂ ಇದ್ದದ್ದು ನೋಡಿ ಖುಷಿಯಾಯಿತು, ಕುತೂಹಲವೆನಿಸಿತು. ಆ ಅಧ್ಯಾಯ ಓದಿ ಮುಗಿಸುತ್ತಿದ್ದಂತೆ, ನಮ್ಮ ತಲೆಮಾರಿನ ಯಾರೇ ಆದರೂ, ಬಾಲ್ಯಕಾಲದ ಊರಿನ ನೆನಪುಗಳ ಬಗ್ಗೆ ಬರೆದಿದ್ದರೆ ಹೀಗೇ ಇರಬಹುದಿತ್ತು ಎಂದ ಆಲೋಚನೆಯೊಂದು ತೇಲಿಬಂದಿತು.

ನಮ್ಮ ಬ್ಲಾಗ್ ಸಂಪಾದಕರಾದ ಸನ್ಮಿತ್ರ ಶಂಕರ ಅಜ್ಜಂಪುರ ಈ ಪುಸ್ತಕದ ಅವಲೋಕನ ಮಾಡಲು ಕೊಟ್ಟಿರುವುದರ ಉದ್ದೇಶ ಥಟ್ಟನೆ ಹೊಳೆಯಿತು. ಹಾಗಾಗಿ ಎ.ಎಸ್. ಕೃಷ್ಣಮೂರ್ತಿಯವರ ಅವಿಸ್ಮರಣೀಯ ಅಮೆರಿಕಾ ಕೃತಿಯ ಪರಿಚಯ ಇಲ್ಲಿ ಪ್ರಸ್ತುತ. ಕೃಷ್ಣಮೂರ್ತಿ ಅಜ್ಜಂಪುರದವರೇ ಆಗಿದ್ದು, ಅಮೆರಿಕದ ಪ್ರವಾಸದ ಅನುಭವಗಳನ್ನು ವರ್ಣಿಸಿದಂತೆಯೇ ಬಾಲ್ಯಕಾಲದ ನೆನಪಿನ ಅಜ್ಜಂಪುರವನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಅಜ್ಜಂಪುರದ ನೆನಪುಗಳನ್ನು ಆಪ್ತವಾಗಿ, ಸಂಜೆಯ ವಾಕಿಂಗ್ ಸಮಯದಲ್ಲಿ ಪರಸ್ಥಳದ ಗೆಳೆಯನೊಬ್ಬನ ಬಳಿ ಹೇಳಿಕೊಂಡಂತೆ ನಿರೂಪಿಸಿದ್ದಾರೆ.

ಅಜ್ಜಂಪುರದ ಶ್ರೀ ಶಿವಮೂರ್ತಿ ಮತ್ತು ಶ್ರೀಮತಿ ಅನಸೂಯಮ್ಮ ಅವರ ಕಿರಿಯ ಪುತ್ರರಾದ ಕೃಷ್ಣಮೂರ್ತಿ, ಇಂಗ್ಲಿಷ್ ಸ್ನಾತಕೋತ್ತರ ಪದವೀಧರರು. ರಾಮನಗರ ಜಿಲ್ಲೆಯ ಬಿಡದಿಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು. ಅವರ ಪತ್ನಿ ನಳಿನಿ ಅಮೆರಿಕಾದಲ್ಲಿದ್ದಾಗ ಕೃಷ್ಣಮೂರ್ತಿ, ತಮ್ಮ ಮಕ್ಕಳೊಂದಿಗೆ ಹೋಗಿ ಕೆಲವು ಕಾಲ ಇದ್ದು ಬಂದಿದ್ದಾರೆ, ಅಲ್ಲಿನ ಕೆಲವು ಪ್ರವಾಸಿ ತಾಣಗಳನ್ನು ನೋಡಿಬಂದಿದ್ದಾರೆ. ಅದೆಲ್ಲವನ್ನೂ ಶ್ರೀಸಾಮಾನ್ಯನಂತೆ, ಸಂಕೋಚವಿಲ್ಲದೆ ತಮ್ಮ ಅನುಭವಕ್ಕೆ ದಕ್ಕಿದ್ದನ್ನು ಹೇಳಿಕೊಂಡಿದ್ದಾರೆ. ತಮ್ಮ ಅನ್ನಿಸಿಕೆಗಳನ್ನು ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಿದ್ದಾರೆ. ಇದು ಕೃತಿಯ ಮೂಲ-ಸ್ಥೂಲ ಸ್ವರೂಪ ಎನ್ನಬಹುದು. ಪ್ರವಾಸಕಥನಗಳು ಒಂದು ಕಾಲಘಟ್ಟದಲ್ಲಿ ಒಬ್ಬ ಪ್ರವಾಸಿ ಕಂಡುಕೊಂಡ ಸ್ಥಳ, ದೇಶಗಳ ಪರಿಚಯವನ್ನು ಮಾಡಿಕೊಡುತ್ತವೆ. ಐತಿಹಾಸಿಕ ಮತ್ತು ವರ್ತಮಾನಗಳ ಚಿತ್ರಣವನ್ನೂ ಕೊಡಬಹುದು. ಪ್ರಾಸಂಗಿಕವಾಗಿ ಕಲಾಕೃತಿಗಳು, ವಾಸ್ತುಶಿಲ್ಪಗಳು, ನಿಸರ್ಗತಾಣಗಳು, ನಗರಗಳು, ಸ್ಮಾರಕಗಳು, ಆಹಾರಪದ್ಧತಿ, ವೇಷಭೂಷಣ, ಜೀವನಶೈಲಿ ಮುಂತಾದ್ದು ಇಂಥ ಪ್ರವಾಸಕಥನಗಳಲ್ಲಿ ಕಂಡುಬರುತ್ತವೆ. ಕನ್ನಡದಲ್ಲಿ ಎಚ್.ಎಲ್. ನಾಗೇಗೌಡರು ಸಂಪಾದಿಸಿದ ಪ್ರವಾಸಿ ಕಂಡ ಇಂಡಿಯಾ ಇಂದಿಗೂ ಒಂದು ಆಕರಗ್ರಂಥವಾಗಿ ಪ್ರಸಿದ್ಧವಾಗಿದೆ.


ಪುಸ್ತಕದ ಹಿಂದಿನ ರಕ್ಷಾಪುಟ
ಅವಿಸ್ಮರಣೀಯ ಅಮೆರಿಕಾ ಪ್ರವಾಸಕಥನದಲ್ಲಿ ಕೃಷ್ಣಮೂರ್ತಿ ಆ ದೇಶದಲ್ಲಿ ತಾವು ಕಂಡದ್ದನ್ನು ಕಂಡುಂಡದ್ದನ್ನು ಚೇತೋಹಾರಿಯಾಗಿ ನಿರೂಪಿಸಿದ್ದಾರೆ. ಅಮೇರಿಕಾದ ಜತೆ ಅವರ ಬಾಲ್ಯಕಾಲದ ಅಜ್ಜಂಪುರದ ನೆನಪುಗಳ ಚಿತ್ರಣ ಆಸಕ್ತಿ ಹುಟ್ಟಿಸುವಂತಿದೆ. ಆ ನಿರೂಪಣೆಯನ್ನು ಯಥಾವತ್ ನಿಮ್ಮ ಮುಂದೆ ಸಂಕ್ಷಿಪ್ತವಾಗಿ ಇರಿಸುತ್ತೇನೆ.


“.......ಅಲ್ಲಿ ಕಳೆದ ಬಾಲ್ಯದ ನೆನಪುಗಳು ನನ್ನ ಜೀವನದ ಅತ್ಯಂತ ಸುಮಧುರ ಕ್ಷಣಗಳು. ಈಗಲೂ ನನಗೆ ಅಜ್ಜಂಪುರವೆಂದರೆ ಅತೀವ ಆನಂದ. ನನ್ನ ಹಾಗೂ ಅಜ್ಜಂಪುರದ ಸಂಬಂಧ ಒಂದು ರೀತಿಯ ಬಿಡಿಸಲಾಗದ ನಂಟು......... ಆಗ ಅಜ್ಜಂಪುರ ಒಂದು ಪುಟ್ಟ ಪಟ್ಟಣ. ಆದರೂ ಆ ದಿನಗಳಲ್ಲೇ ಹೆಸರುವಾಸಿಯಾಗಿತ್ತು. ಅದಕ್ಕೆ ಕಾರಣ ನಮ್ಮೂರಿನಲ್ಲಿರುವ ಅಮೃತಮಹಲ್ ಪಶುಪಾಲನಾ ಕೇಂದ್ರ. ಆ ಕೇಂದ್ರದಲ್ಲಿ ಆಗ ಭಾರೀ ಗಾತ್ರದ ವಿಶೇಷ ತಳಿಯ ಎಮ್ಮೆ, ಕೋಣ, ದನಕರುಗಳನ್ನು ಸಾಕುತ್ತಿದ್ದರು. ಅವುಗಳನ್ನು ನೋಡುವುದೆಂದರೆ ನಮಗೆಲ್ಲ ತುಂಬ ಖುಷಿ. ................ ಪೂರ್ವಕ್ಕೆ ಊರ ಹೊರಗೆ ಶ್ರೀ ಶಿವಾನಂದಾಶ್ರಮ ಇದೆ. ಅಲ್ಲಿಗೆ ಭೇಟಿ ನೀಡಿದಾಗ ಭಕ್ತಿ ಪರವಶರಾಗುತ್ತಿದ್ದೆವು. ಅಲ್ಲಿಂದ ಮುಂದೆ ಸಾಗಿದರೆ ನಮ್ಮೂರಿನ ರೈಲು ನಿಲ್ದಾಣ. ........... ಆಗೆಲ್ಲ ನಮ್ಮೂರಿನಲ್ಲಿ ವರ್ಷಕ್ಕೊಮ್ಮೆ ಭಾರೀ ದನಗಳ ಜಾತ್ರೆ ನಡೆಯುತ್ತಿತ್ತು. ಆ ದಿನಗಳಲ್ಲಿ ಹಬ್ಬದ ವಾತಾವರಣವಿರುತ್ತಿತ್ತು. ಹಳ್ಳಿಯ ಜನರು ತಮ್ಮ ದನಕರುಗಳು  ಮಾರಾಟವಾಗುವವರೆಗೂ ಅಲ್ಲಿಯೇ ತಂಗಿರುತ್ತಿದ್ದರು. ಅಲ್ಲಿ ತಂಗುತ್ತಿದ್ದವರ ಮನರಂಜನೆಗಾಗಿ ವೇದಿಕೆಯೊಂದನ್ನು ಸಿದ್ಧಪಡಿಸಿ ನಾಟಕ, ನೃತ್ಯ, ಆರ್ಕೆಸ್ಟ್ರಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು..........


“...........ನಮ್ಮೂರಿನಲ್ಲಿ ವರ್ಷಕ್ಕೊಮ್ಮೆ ಗ್ರಾಮದೇವತೆ ಕಿರಾಳಮ್ಮನವರ ಜಾತ್ರೆ. ಜಾತ್ರಾ ದಿನಗಳ ಆ ಸಂಭ್ರಮವನ್ನು ಇನ್ನೂ ಮರೆತಿಲ್ಲ......... ನಾವು ಗೆಳೆಯರೆಲ್ಲ ನಮ್ಮೂರಿನ ಪರ್ವತರಾಯನ ಕೆರೆಗೆ ಆಗಾಗ ಭೇಟಿಕೊಡುತ್ತಿದ್ದೆವು. ಅಲ್ಲಿ ಪುರುಷರು ದನಕರುಗಳನ್ನು ತೊಳೆಯಲು, ಮಹಿಳೆಯರು ಬಟ್ಟೆಗಳನ್ನು ತೊಳೆಯಲು ರಾಗೂ  ಹುಡುಗರು ಈಜಾಡಲು ನೆರೆದಿರುತ್ತಿದ್ದರು. ನನ್ನ ಅನೇಕ ಗೆಳೆಯರು ಈ ಕೆರೆಯಲ್ಲೇ ಈಜುವುದನ್ನು ಕಲಿತದ್ದು............


ಅಜ್ಜಂಪುರದ ಗೆಳಯರೊಂದಿಗೆ
“...........ಈ ರೀತಿ ಪುಟ್ಟ ಊರಿನಲ್ಲಿ, ಹತ್ತಿರದ ನಗರ ಪ್ರದೇಶಗಳನ್ನು ಸರಿಯಾಗಿ ನೋಡದೆ ಬೆಳೆದ ನಾನು, ಮುಂದೆ ಒಂದು ದಿನ ಅಮೇರಿಕಾಗೆ ಹೋಗುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಅಲ್ಲಿದ್ದ (ಅಮೆರಿಕಾದಲ್ಲಿ) ದಿನಗಳಷ್ಟೂ ಒಂದಲ್ಲ ಒಂದು ಕಾರಣಕ್ಕೆ ನನ್ನ ಅಜ್ಜಂಪುರದ ಬಾಲ್ಯದ ನೆನಪುಗಳು ನನ್ನ ಕಣ್ಮುಂದೆ ಹಾದುಹೋಗುತ್ತಿದ್ದವು”.


ಗುಹಾಂತರ್ಗತ ದೇವಾಲಯದಲ್ಲಿ
ಮಿತ್ರಬಳಗದೊಂದಿಗೆ
ಮುಗ್ಧ ನಿರೂಪಣೆ, ತೋರಿಕೆಯಿಲ್ಲದ ಅಭಿವ್ಯಕ್ತಿ, ಮುಚ್ಚುಮರೆಯಿಲ್ಲದ ಮಾತುಗಳು ಅಮೆರಿಕಾ ಪ್ರವಾಸದ ಜತೆಗೆ ಅಜ್ಜಂಪುರದ ಬಗ್ಗೆಯೂ ದಾಖಲಾಗಿರುವುದು ಈ ಕೃತಿಯ ವಿಶೇಷ. ಎ.ಎಸ್. ಕೃಷ್ಣಮೂರ್ತಿ ತೋರಿಕೆ, ಬಿಗುಮಾನಗಳಿಗೆ ಈಡಾಗದೇ, ತಮಗೆ ಅನ್ನಿಸಿದ್ದನ್ನು ನೇರವಾಗಿ ದಾಖಲಿಸಿದ್ದಾರೆ.-0-0-0-0-0-0-0-0-0-0-0-0-


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ