80. ಅನನ್ಯ ಪ್ರತಿಭೆಯ ರಂಗಕರ್ಮಿ - ಎ.ಎಸ್. ಕೃಷ್ಣಮೂರ್ತಿ





ಆತ್ಮೀಯ ಓದುಗರೇ,

ಎಲ್ಲರಿಗೂ 62ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

ಕನ್ನಡದ ಬೆಳವಣಿಗೆಯಲ್ಲಿ ಭಾಷೆಯ ಬಳಕೆ ಮತ್ತು ಸಂವಹನಗಳಿಗೆ ಪ್ರಾಮುಖ್ಯತೆಯಿದೆಯಷ್ಟೆ. ಈ ನಿಟ್ಟಿನಲ್ಲಿ "ಅಂತರಜಾಲದಲ್ಲಿ ಅಜ್ಜಂಪುರ" ಬ್ಲಾಗ್ ಮೂಲಕ  ನನ್ನೂರು ಅಜ್ಜಂಪುರದ ಸಾಧಕರು,  ದೇವಾಲಯಗಳು, ಆಚರಣೆಗಳು, ಹಬ್ಬ-ಹರಿದಿನಗಳು, ಸಂಘ-ಸಂಸ್ಥೆಗಳು ಮುಂತಾದ ವಿಶೇಷಗಳ ಹಲವು ಆಯಾಮಗಳನ್ನು ದಾಖಲಿಸುವ ಕಾರ್ಯವು ನನ್ನ ಅನೇಕ ಮಿತ್ರರ ಸಹಾಯ ಸಹಕಾರಗಳಿಂದ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ನೀವು ಕೂಡ ಊರಿನ ಅನೇಕ ವಿಶೇಷಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ, ಸಂಘ-ಸಂಸ್ಥೆಗಳ ಬಗ್ಗೆ ಚಿತ್ರಸಹಿತ ಮಾಹಿತಿಯನ್ನು ಕೆಳಕಂಡ ಈ-ಮೇಲ್ ವಿಳಾಸಕ್ಕೆ ಕಳಿಸಿ ಸಹಕರಿಸಲು ಕೋರುತ್ತೇನೆ.

ಪ್ರಸ್ತುತ ರಾಜ್ಯೋತ್ಸವದ  ಈ ಸಂಚಿಕೆಯಲ್ಲಿ ಅಜ್ಜಂಪುರದ ಪ್ರಸಿದ್ಧ ರಂಗಕರ್ಮಿ ಶ್ರೀ ಎ.ಎಸ್. ಕೃಷ್ಣಮೂರ್ತಿಯವರನ್ನು ಕುರಿತಂತೆ ಲೇಖನ-ಚಿತ್ರಗಳನ್ನು ಪ್ರಕಟಿಸಲಾಗಿದೆ. 

ವಂದನೆಗಳೊಡನೆ.
- ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ಬ್ಲಾಗ್
ಈ-ಮೇಲ್ ವಿಳಾಸ -shankarajp@gmail.com
ದೂರವಾಣಿ - 99866 72483
-------------------------------------------------------------------------------------------------------------------------------------------------------------------

ಎ.ಎಸ್. ಕೃಷ್ಣಮೂರ್ತಿಯವರಿಗೆ ಅಭಿನಂದನಾ ಪತ್ರ ಸಮರ್ಪಣೆ

ರಂಗಕರ್ಮಿಗಳಲ್ಲಿ ನಟರು ಜನಪ್ರಿಯರಾಗುವುದು ಸ್ವಾಭಾವಿಕ. ಅವರು ತಮ್ಮ ಅಭಿನಯಕಲೆಯಿಂದ ಜನರೆದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆಯುತ್ತಾರೆ. ಆದರೆ ರಂಗಕಲೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನೇಪಥ್ಯದಲ್ಲಿರುವ ರಂಗಕರ್ಮಿಗಳ ಸಹಕಾರ, ಕುಶಲತೆಗಳಿಲ್ಲದೆ ಪೂರ್ಣವಾಗದು. ನೈಜ ಅರ್ಥದಲ್ಲಿ ಅವರು ಎಲೆಮರೆಯಲ್ಲಿಯೇ ಇರುತ್ತಾರೆ. 

ಅಜ್ಜಂಪುರದ ರಂಗಚಟುವಟಿಕೆಗಳಲ್ಲಿನ ಅಂಥ ಅದ್ಭುತ ಪ್ರತಿಭೆ ಶ್ರೀ ಅಜ್ಜಂಪುರ ಶಂಕರಪ್ಪ ಕೃಷ್ಣಮೂರ್ತಿ ಅಥವಾ ಎ.ಎಸ್. ಕೃಷ್ಣಮೂರ್ತಿ. ರಂಗಕ್ಕೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಲ್ಲೂ ಅವರದು ಸಮಾನ ಆಸಕ್ತಿ. ಹೀಗಾಗಿ ರಂಗನಟರಾಗಿ ಅಭಿನಯಿಸಿರುವಂತೆಯೇ, ನಿರ್ದೇಶನ ಹಾಗೂ ನೇಪಥ್ಯದ ನಿರ್ವಹಣೆಯಂಥ ಎಲ್ಲದರಲ್ಲೂ ಭಾಗಿಯಾಗುತ್ತಾರೆ. ಚಿಕ್ಕವಯಸ್ಸಿನಿಂದಲೇ ರಂಗದ ಮೋಹ ಹೊಂದಿರುವ ಕೃಷ್ಣಮೂರ್ತಿ, ಅಜ್ಜಂಪುರದ ಕಲಾ ಸೇವಾ ಸಂಘ ಹಾಗೂ ಗೆಳೆಯರ ಬಳಗದ ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅಜ್ಜಂಪುರದಲ್ಲಿ ಕಲಾ ಸೇವಾ ಸಂಘದ ನಂತರ ರಂಗಕಾರ್ಯಗಳು ಗೆಳೆಯರ ಬಳಗದ ಆಶ್ರಯದಲ್ಲಿ ನಡೆದವು.  ಊರಿನಲ್ಲಿ  ಆಧುನಿಕ ನಾಟಕಗಳನ್ನು ಕುರಿತಂತೆ ಜನರಲ್ಲಿ ಆಸಕ್ತಿ ಬೆಳೆಯಲು ಕೃಷ್ಣಮೂರ್ತಿಯವರ ಸಂಘಟನಾ ಶಕ್ತಿಯೂ ಕಾರಣವೆಂದು ಹೇಳಬಹುದು. ಹುನಗುಂದದ ಧೃವ ಸಂಚಾರ ಹಾಗೂ ಅಜ್ಜಂಪುರಕ್ಕೆ ಸಮೀಪದಲ್ಲಿರುವ ಇನ್ನೊಂದು ರಂಗಾಭಿಮಾನಿ ಕ್ಷೇತ್ರ ಸಾಣೇಹಳ್ಳಿಯ ಶಿವಸಂಚಾರದೊಡನೆ ಕೈ ಜೋಡಿಸಿ, ರಾಜ್ಯಾದ್ಯಂತ ಅನೇಕ ನಾಟಕ ಶಿಬಿರಗಳನ್ನು ಆಯೋಜಿಸಿದ್ದಾರೆ. 


ರಂಗಾಯಣದ ಪ್ರಶಾಂತ ಹಿರೇಮಠ, ಹಿರಿಯ ರಂಗಕರ್ಮಿ
ಶ್ರೀಕಂಠ ಗುಂಡಪ್ಪ ಹಾಗೂ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಮಲಾ ಮಠಪತಿ
ಇವರಿಂದ ಸನ್ಮಾನಿತರಾದ ಎ.ಎಸ್. ಕೃಷ್ಣಮೂರ್ತಿ
ಕೇವಲ ನಾಟಕಗಳನ್ನು ಆಡಿಸಿದರಷ್ಟೇ ಸಾಲದು, ಇದನ್ನೊಂದು ದಾಖಲೆಗಳ ರೂಪದಲ್ಲಿ ಸಂಗ್ರಹಿಸಿಟ್ಟರೆ, ಅದಕ್ಕೊಂದು ಐತಿಹಾಸಿಕ ಮಹತ್ವವಿರುತ್ತದೆ ಎಂಬ ದೂರದೃಷ್ಟಿಯಿಂದ 1975ರಲ್ಲಿ ಅನನ್ಯ ರಂಗ ದಾಖಲಾತಿ ಕೇಂದ್ರವನ್ನು ಸ್ಥಾಪಿಸಿದರು. ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ನಡೆದ ನಾಟಕೋತ್ಸವಗಳ ಹಲವಾರು ಚಿತ್ರಗಳು, ರಂಗಸಾಧನಗಳ ಚಿತ್ರಗಳು, ಪೋಸ್ಟರುಗಳು, ನಟ-ನಟಿಯರ ಚಿತ್ರಗಳು ಮುಂತಾಗಿ, ರಂಗಕಲೆಗೆ ಸಂಬಂಧಿಸಿದ ಬಹಳಷ್ಟು ವಿಷಯಗಳನ್ನು ಬರಹ ಮತ್ತು ಚಿತ್ರ ರೂಪದಲ್ಲಿ ವ್ಯವಸ್ಥಿತವಾಗಿ ಸಂಗ್ರಹಿಸಿದ್ದಾರೆ. ಆಗಾಗ್ಗೆ ಇವುಗಳ ಪ್ರದರ್ಶನವನ್ನೂ ಏರ್ಪಡಿಸುತ್ತಾರೆ. ಇದು ರಂಗ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ರಂಗ ಇತಿಹಾಸವನ್ನು ದಾಖಲಿಸುವವರಿಗೆ ಆಕರ ಸಾಮಗ್ರಿಯಾಗಿ ಬಳಕೆಯಾಗುತ್ತಿದೆ. ಕೃಷ್ಣಮೂರ್ತಿಯವರ ಈ ಸೇವೆಯನ್ನು ಕರ್ನಾಟಕ ನಾಟಕ ಅಕಾದೆಮಿಯು ಅಂದಿನ ಅಧ್ಯಕ್ಷ ಬಿ.ವಿ. ರಾಜಾರಾಮ್ ರ ನೇತೃತ್ವದಲ್ಲಿ ಅಭಿನಂದಿಸಿ ಗೌರವಾರ್ಪಣೆ ಮಾಡಿರುವುದು  ಈ ರಂಗ ಪ್ರತಿಭೆಗೆ ಸಂದ ಹೆಮ್ಮೆಯಾಗಿ ರುವಂತೆ ಅಜ್ಜಂಪುರದ ಹೆಮ್ಮೆಯೇ ಸರಿ. 




ರಂಗಾಯಣ ಕರ್ನಾಟಕದ ದೊಡ್ಡ ರಂಗಸಂಸ್ಥೆಯು  ರಂಗಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಹಸಿರು ದಸರಾ ನಾಟಕೋತ್ಸವದಲ್ಲಿ ರಾಜ್ಯದ ಒಂಭತ್ತು ರಂಗಸಾಧಕರನ್ನು ಸನ್ಮಾನಿಸಲಾಯಿತುಈ ಕಾರ್ಯಕ್ರಮ ದಿನಾಂಕ 09-10-2106ರಂದು ಲ್ಲಿ ಮೈಸೂರಿನಲ್ಲಿ ನವರಾತ್ರಿ ರಂಗೋತ್ಸವದಲ್ಲಿ ನಡೆಯಿತು. ರಂಗದಾಖಲೆಗಳ ಸಂಗ್ರಹಕಾರ, ರಂಗಕರ್ಮಿ, ಕಲಾವಿದ ಎಂದು ಗುರುತಿಸಿ ಮೈಸೂರಿನ ರಂಗಾಯಣವು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿತು. ಈ ಸಂದರ್ಭದಲ್ಲಿ ರಂಗಾಯಣದ ಪ್ರಶಾಂತ ಹಿರೇಮಠ, ಹಿರಿಯ ರಂಗಕರ್ಮಿ ಶ್ರೀಕಂಠ ಗುಂಡಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಮಲಾ ಮಠಪತಿ ಉಪಸ್ಥಿತರಿದ್ದು ಆತ್ಮೀಯವಾಗಿ ಸನ್ಮಾನಿಸಿರುವ ಕೆಲವು ಚಿತ್ರಗಳು ಇಲ್ಲಿವೆ.

-0-0-0-0-0-0-0-0-0-0-






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.