82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ


2018
ಓದುಗರೆಲ್ಲರಿಗೂ ಹೊಸವರ್ಷದ ಶುಭಾಶಯಗಳು


ಶ್ರೀ ಎ. ವೆಂಕಟೇಶಮೂರ್ತಿಗಳು ಅತ್ಯುತ್ತಮ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಳೆದ ಶತಮಾನದ 60-70ರ ದಶಕಗಳಲ್ಲಿ ತುಂಬ ಜನಪ್ರಿಯರು, ಆದರಣೀಯರೂ ಆಗಿದ್ದರು. ಅಜ್ಜಂಪುರದ ಶೈಕ್ಷಣಿಕ ಇತಿಹಾಸದ ಆರಂಭದ ದಿನಗಳಲ್ಲಿ ಶ್ರಮವಹಿಸಿ ದುಡಿದವರು. 

ಉತ್ತಮ ಕಾರ್ಯಗಳನ್ನು ಮಾಡಿದವರನ್ನು ಸ್ಮರಿಸುವುದೇ ಅಪರೂಪ. ಅಂಥದರಲ್ಲಿ ಅವರ ನಿಧನಾನಂತರವೂ ಸ್ಮರಣಸಂಚಿಕೆಯಲ್ಲಿ ನೆನಪಿಸಿಕೊಂಡು ತಮ್ಮ ಕೃತಜ್ಞತೆಯನ್ನು ಹೇಳಿರುವುದನ್ನು ದಾಖಲಿಸಿರುವುದು ಅವರ ವ್ಯಕ್ತಿತ್ವದ ಪ್ರಭಾವವನ್ನು ಎತ್ತಿ ತೋರುವಂತಿದೆ.   ಇಂಥ ಸ್ಮರಣೀಯ ಹಿರಿಯರನ್ನು ಕುರಿತು, ನರಸಿಂಹರಾಜಪುರದ ಅವರ ವಿದ್ಯಾರ್ಥಿಗಳು ಹೊರತಂದಿರುವ ಸ್ಮರಣಸಂಚಿಕೆಯ ಪುಟವೊಂದನ್ನು ನಮ್ಮೊಂದಿಗೆ ಹಂಚಿಕೊಂಡಿರುವವರು, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅವರ ಪುತ್ರಿ ಶ್ರೀಮತಿ ಗಾಯತ್ರಿ ಶಿವಸ್ವಾಮಿ. 

ಅಂತರಜಾಲದಲ್ಲಿ ಅಜ್ಜಂಪುರ ಬ್ಲಾಗ್ ನ ಅಜ್ಜಂಪುರದ ಹಿರಿಯರ ಕುರಿತ ಲೇಖನಗಳನ್ನು ಓದಿ ಪ್ರಭಾವಿತರಾಗಿ,  ಚಿತ್ರ-ಮಾಹಿತಿಗಳನ್ನು ಒದಗಿಸಿದ್ದಾರೆ. ನಾನು ನಮ್ಮ ಓದುಗರಲ್ಲಿ ಸದಾ ಮಾಡಿಕೊಳ್ಳುತ್ತಿದ್ದ ಮನವಿಗೆ ಓರ್ವರಾದರೂ ಸ್ಪಂದಿಸಿದರೆನ್ನುವ ಸಂತೋಷ ನನ್ನದು. ಈ ವಿವರಣೆ ಇತರರಿಗೂ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತೇನೆ.

ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ – 99866 72484
ಈ-ಮೇಲ್ – shankarajp@gmail.com
********************************************************************************************************


ಶ್ರೀಮತಿ ಗಾಯತ್ರಿ ಶಿವಸ್ವಾಮಿ
ಸಂಸಾರದ ಭದ್ರ ಬುನಾದಿ ತಂದೆ. ಅವರ ಪ್ರೀತಿಯ ಸವಿಯನ್ನುಂಡು ಬಾಳುವ ಮಕ್ಕಳ ಸಂತಸಕ್ಕೆ ಎಣೆಯುಂಟೇ. ನನ್ನ ತಾತ ಅಜ್ಜಂಪುರದಲ್ಲಿ ಕಾಟಿಗನೆರೆ ಶ್ರೀನಿವಾಸರಾಯರೆಂದೇ ಪ್ರಸಿದ್ಧರಾಗಿದ್ದರು. ಅವರು ಶಾನುಭೋಗರಾಗಿದ್ದವರು. ಸಮಾಜದಲ್ಲಿ, ಗ್ರಾಮಸ್ಥರಲ್ಲಿ ಅವರ ಬಗ್ಗೆ ತುಂಬ ಗೌರವಾದರಗಳಿದ್ದವು. ನನ್ನ ತಂದೆ ಎ. ವೆಂಕಟೇಶಮೂರ್ತಿ ಅವರ ಹಿರಿಯ ಪುತ್ರ. ವಿದ್ಯಾಭ್ಯಾಸದ ನಂತರ ಅವರು ತಮ್ಮ ವೃತ್ತಿಜೀವನವನ್ನು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಆರಂಭಿಸಿದರು. ಅವರಿಗೆ ತಾಂತ್ರಿಕ ವೃತ್ತಿಗಳಿಗಿಂತ ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. ಹೀಗಾಗಿ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ಅಜ್ಜಂಪುರದಲ್ಲಿ ಆಗಷ್ಟೇ ಆರಂಭವಾಗಿದ್ದ ಆರ್.ಇ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇರಿದರು. ಆಗಿನ ದಿನಗಳಲ್ಲಿ ಶಾಲೆ ನೀಡುವ ಸಂಬಳವನ್ನು ನೆಚ್ಚಿಕೊಂಡು ಜೀವನಮಾಡುವ ಪರಿಸ್ಥಿತಿ ಇರಲಿಲ್ಲ. ಆದರೂ ವೃತ್ತಿಯ ಮೇಲಿನ ಅಭಿಮಾನ ಅವರನ್ನು ಅದರಲ್ಲೇ ಮುಂದುವರೆಯುವಂತೆ ಮಾಡಿತು.

ತೋರಿಕೆ, ಆಡಂಬರಗಳೆಂದೂ ಅವರಿಗೆ ಒಗ್ಗದ ಸಂಗತಿ. ಸರಳವಾದ ಉಡುಗೆ ತೊಡುಗೆ. ಕರ್ತವ್ಯ ಮತ್ತು ಪ್ರಾಮಾಣಿಕತೆಗಳಿಗೆ ತುಂಬ ಬೆಲೆ ನೀಡುತ್ತಿದ್ದರು. ತಮ್ಮ ವೃತ್ತಿ ಜೀವನದ ಬಹುಭಾಗವನ್ನು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಕಳೆದರು. ಅಲ್ಲಿನ ಜನರಲ್ಲಿ ಗೌರವಾದರಗಳನ್ನು ಸಂಪಾದಿಸಿದರು. ಇಂಥ ತಂದೆಯನ್ನು ಪಡೆದ ನನಗೆ ತುಂಬ ಹೆಮ್ಮೆ. ಅಜ್ಜಂಪುರದ ಹಿಂದಿನ ತಲೆಮಾರಿನ ಜನರಿಗೆ ಅವರ ಪರಿಚಯ ಚೆನ್ನಾಗಿಯೇ ಇರುತ್ತದೆ. ನನ್ನ ತಂದೆಯ ಸೋದರಲ್ಲಿ ಎ. ರಾಮರಾವ್ ಅಜ್ಜಂಪುರದಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದರು. ಇನ್ನೋರ್ವ ಸೋದರ ಎ. ರಾಜೀವಲೋಚನರು ಕೂಡ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಅವರೆಲ್ಲರ ಬದುಕು ನಮ್ಮಂಥ ಕಿರಿಯರಿಗೆ ಸ್ಫೂರ್ತಿದಾಯಕ.

ನನ್ನ ತಂದೆ ನರಸಿಂಹರಾಜಪುರದಲ್ಲಿ 1978ರಲ್ಲಿ ನಿಧನರಾದ ಸಂದರ್ಭದಲ್ಲಿ, ಅವರ ಸಹೋದ್ಯೋಗಿಗಳು ಅಭಿಮಾನಪೂರ್ವಕ ರಚಿಸಿ ಪ್ರಕಟಿಸಿದ ಪದ್ಯ ಹಾಗೂ ಕಿರು ಲೇಖನಗಳು "ಸಮರ್ಪಣ" ಎಂಬ ಅಭಿನಂದನಾ ಸಂಚಿಕೆಯಲ್ಲಿ ಪ್ರಕಟವಾಯಿತು. ಅವುಗಳನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.

********************************************************************************************************

ನಾ ಕಂಡ ಮೂರ್ತಿ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದೊಂದು ಮಾತಿದೆ, ಆದರೆ ನಾ ಕಂಡ ಮೂರ್ತಿಯೂ ದೊಡ್ಡದು, ಕೀರ್ತಿಯೂ ದೊಡ್ಡದು ಹಾಗೂ ಅವರ ವ್ಯಕ್ತಿತ್ವವೂ ದೊಡ್ಡದು.
ವೆಂಕಟೇಶಮೂರ್ತಿಗಳು ಹೆಸರಿಗೆ ತಕ್ಕಹಾಗೆ ಪುಣ್ಯಮೂರ್ತಿಗಳು, ಪುಣ್ಯಚರಿತ್ರರು. ಆರು ಅಡಿಗಳಿಗೂ ಮೀರಿದ ಎತ್ತರದ ಆಜಾನುಬಾಹು. ಎಂಟಡಿ ಎತ್ತರದ ಹಲಗೆಯ ಮೇಲ್ತುದಿಯಲ್ಲಿ ಬರೆಯಲು ಹೇಳಿಮಾಡಿಸಿಟ್ಟ ನಿಲುವು. ವಿಶಾಲವಾದ ಹಣೆ, ತೀಕ್ಷ್ಣವಾದ ಕಣ್ಣುಗಳು ಅವರ ದಕ್ಷತೆ ಮತ್ತು ವಿದ್ವತ್ತುಗಳನ್ನು ಎತ್ತಿತೋರಿಸಿದರೆ, ಸಾಮಾನ್ಯವಾದ ಅವರ ಷರಟು, ಅವರ ಸರಳತೆಯನ್ನು ಸೂಚಿಸುತ್ತಿತ್ತು. ಎಲೆ-ಅಡಿಕೆ, ಸಿಗರೇಟುಗಳು ಅವರ ಸಂಗಾತಿ. ಅವು ಅವರ ಬಾಹ್ಯ ಸ್ವರೂಪ. ಅಂತಃಸ್ವರೂಪದ ಬಗ್ಗೆ ಹೇಳುವುದಾದರೆ, ಯಾರಿಗೂ ಬಗ್ಗದ ಹಠ. ಅವರು ಯಾರಿಗೂ ಕೇಡನ್ನು ಬಯಸದ ಹೃದಯ ಅವರದು. ಚಿಕ್ಕ ವಯಸ್ಸಿನಲ್ಲೇ ಪ್ರೌಢಶಾಲೆಯ ಅಧ್ಯಾಪಕರಾಗಿ ಪಂಚನ ಹಳ್ಳಿಯಲ್ಲಿ ವೃತ್ತಿಗೆ ಸೇರಿದ ಅವರು, ಅಜ್ಜಂಪುರದಲ್ಲಿ ಮುಖ್ಯೋಪಾಧ್ಯಾಯರಾಗಿ "ಬಾರ್ನ್ ಹೆಡ್ಮಾಸ್ಟರ್" ಎಂದು ಹೆಸರು ಗಳಿಸಿದರು. ಮುಂದೆ ಶೃಂಗೇರಿಯಲ್ಲಿ ಕೆಲಕಾಲವಿದ್ದು, ನರಸಿಂಹರಾಜಪುರದಲ್ಲಿ 1964ರಿಂದ 1975ರ ವರೆಗೆ ಪೂರ್ಣವಿದ್ದು ನಿವೃತ್ತರಾದರು. ಕೇರಿಯವರಿಗೆಲ್ಲ ಅಣ್ಣಯ್ಯ ಮಾಸ್ತರರು ಬಲು ಬಿಗಿ, ಮಾತು ಕಡಿಮೆ, ಆಡುವ ಮಾತೂ ಗಂಭೀರ, ಅಷ್ಟೇ ಹಾಸ್ಯಭರಿತ. ತರಗತಿಯಲ್ಲೂ, ಕಛೇರಿಯಲ್ಲೂ ಬಿಗಿಯಿದ್ದರೂ, ಎಲ್ಲ ಕಾರ್ಯಗಳೂ ಚೊಕ್ಕ ಹಾಗೂ ಚುರುಕು. ಮೇಲಧಿಕಾರಿಗಳಿಗಾಗಲೀ, ಪುಢಾರಿಗಳಿಗಾಗಲೀ ಸೊಪ್ಪು ಹಾಕದ, ಕರ್ತವ್ಯವೇ ದಿವ್ಯ ದೀಕ್ಷೆ ಎಂದು ನಡೆದ ಧೀರ ಪುರುಷ. ಯಾರನ್ನೂ ನೇರವಾಗಿ ಆಕ್ಷೇಪಿಸದೇ, ಮಾರ್ಗದರ್ಶನ, ತಿಳುವಳಿಕೆ ನೀಡುವುದು ಅವರ ಸ್ವಭಾವ.
ತರಗತಿಯಲ್ಲಿ ಇಂಗ್ಲಿಷ್ ಬೋಧಕರಾದ ಇವರಿಗೆ ಅನ್ಯಭಾಷೆಗಳೂ ಕರತಲಾಮಲಕ. ವಿದ್ಯಾರ್ಥಿಗಳಿಗೆ ಅದರ ಗಾಂಭೀರ್ಯವನ್ನು ತಿಳಿಸುವುದು ಅವರ ಗುರಿ. ಮಿಸುಕಾಡಿದರೂ ಕಷ್ಟವೆನಿಸುವ ಬಿಗಿ ವಾತಾವರಣ ತರಗತಿಯಲ್ಲಿದ್ದರೂ, ಹಾಸ್ಯದ ಹೊನಲು ಆಗಾಗ ಹರಿಯುತ್ತಿತ್ತು.
ರಾಜ್ಯ, ರಾಷ್ಟ್ರ ಪ್ರಶಸ್ತಿಗಳಿಗೆ ಬಾಯ್ಬಿಡುವ ಜನರಿರುವ ಈ ಕಾಲದಲ್ಲೂ, ಬಂದ ಪ್ರಶಸ್ತಿಯನ್ನು ಸದ್ದುಗದ್ದಲವಿಲ್ಲದೆ ನಿರಾಕರಿಸಿದ ನಿಸ್ಪೃಹ, ನಿಷ್ಠಾವಂತ ವ್ಯಕ್ತಿ.
ಹನ್ನೊಂದು ವರ್ಷ ನರಸಿಂಹರಾಜಪುರದ ಪ್ರೌಢಶಾಲೆಯ ಚುಕ್ಕಾಣಿ ಹಿಡಿದ ಇವರ ಕಾಲದಲ್ಲಿ ಯಾವ ಬಿರುಗಾಳಿಗೂ ಶಾಲೆಯ ಶಿಸ್ತು ಹಾರಿಹೋಗಲಿಲ್ಲ. ಪಾಠ-ಪ್ರವಚನಗಳಂತೂ ದೇವ ಪೂಜೆಗೂ ಮಿಗಿಲು.
1976ರ ಏಪ್ರಿಲ್ ನಲ್ಲಿ ನಿವೃತ್ತಿ ಹೊಂದಿದ ಇವರು, 1978ನೇ ಅಕ್ಟೋಬರ್ 17ರಂದು ಲೌಕಿಕ ಜಂಜಡಗಳಿಂದಲೇ ದೂರವಾದರು. ಹೃದಯಾಘಾತ ಇವರನ್ನು ದೂರವಾಗಿಸಿತು.
ಕುಲಪತಿ ಸದೃಶರಾದ ಇವರಿಗೆ ನರಸಿಂಹರಾಜಪುರವೊಂದರಲ್ಲೇ ಸುಮಾರು ಮೂರ್ನಾಲ್ಕು ಸಾವಿರ ಶಿಷ್ಯರಿದ್ದಾರೆ. ಇಂಥ ಗುರವರೇಣ್ಯರ ಪುಣ್ಯಸ್ಮರಣೆಯು ಶಿಷ್ಯವೃಂದದ ದೊಡ್ಡ ಕರ್ತವ್ಯ.
ಈ ದಿಸೆಯಲ್ಲಿ ಅವರ ಅಭಿಮಾನಿ ಸಂಘ ಯೋಗ್ಯ ಕೆಲಸವನ್ನೇ ಮಾಡಿದೆ. ಅಪಾರ ಮಹಿಮರ ಕಾರ್ಯತತ್ಪರತೆ, ವಿದ್ವತ್ತು, ದಕ್ಷತೆಗಳು ಕಿರಿಯರಿಗೆ ದಾರಿದೀಪವಾಗಲೆಂದು ಹಾರೈಸುತ್ತೇನೆ.
ಕೊನೆಯದಾಗಿ ಆ ಮಹಾ ಜೀವಕ್ಕೆ ನಾನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಆದಾಗ್ಯೂ ಇಷ್ಟು ಸ್ಮರಿಸಲು ಪ್ರಚೋದಿಸಿದ ನನ್ನ ಕಿರಿಯ ಮಿತ್ರರಿಗೆ ನಾನು ಆಭಾರಿ. ಕೊನೆಯದಾಗಿ ಆ ಭವ್ಯಮೂರ್ತಿಯನ್ನು ಮನಸಾರೆ ನೆನೆದು ವಿರಮಿಸುತ್ತೇನೆ.
ವಿ.ಎಸ್.ಕೃಷ್ಣಭಟ್,
ಪ್ರಧಾನ ಸಂಪಾದಕ


 ಅರ್ಪಣೆ 
ಯಾರ ಜೀವನಾದರ್ಶ,
ಕರ್ತವ್ಯವೇ ಪರಮಶ್ರೇಷ್ಠ,
ಪ್ರಾಮಾಣಿಕತೆಯೇ ನಿಜದ ಬದುಕು ಎಂದು ಸಾರಿತೋ
ಯಾರ ನಿಸ್ವಾರ್ಥ ಸೇವೆಯುಇಂದು ನಾಡು-ನುಡಿಗಳ 
ಹತ್ತು ಸಮರ್ಥರನ್ನು ಕಡೆದು ನಿಲ್ಲಿಸಿತೋ
ಯಾರ ಪುಣ್ಯಾಶೀರ್ವಾದ
ಒಂದು ಕಾಲದ ಇಂದು ಇಲ್ಲಿನ ವಿದ್ಯಾರ್ಥಿಗಳನ್ನು ಅಧ್ಯಾಪನಕ್ಕೆ ಸಲ್ಲಿಸಿತೋ
ಅನನ್ಯ ಶ್ರದ್ದಾ ಚೇತನವೆನಿಸಿ
ಅಸಂಖ್ಯಾತ ಜ್ಞಾನಜ್ಯೋತಿಗಳನ್ನು ಬೆಳಗಿಸಿ, ಕಣ್ಮರೆಯಾದ
ಪೂಜ್ಯ ದಿವಂಗತ ಪ್ರಾಚಾರ್ಯ ಶ್ರೀ ಎ. ವೆಂಕಟೇಶಮೂರ್ತಿ, ಎಂ.ಎ., ಬಿ.ಟಿ.,
ಇವರಿಗೆ ಭಕ್ತಿಪೂರ್ವಕ ಸಮರ್ಪಣೆ.
ಜನನ – 3ನೇ ಫೆಬ್ರವರಿ 1921
ನಿಧನ – 17ನೇ ಅಕ್ಟೋಬರ್ 1978.
********************************************************************************************************



ಹನುಮ ಜಯಂತಿಯ ವೈಭವಯುತ ಆಚರಣೆ

ಕಳೆದ ತಿಂಗಳು ಅಜ್ಜಂಪುರದ ಕೋಟೆ ಆಂಜನೇಯಸ್ವಾಮಿಯ ದೇಗುಲದಲ್ಲಿ ನಡೆದ ಪೂಜಾ ವೈಭವವನ್ನು "ನ ಭೂತೋ" ಎಂದಿಷ್ಟೇ ಹೇಳಬಹುದು, "ನ ಭವಿಷ್ಯತಿ" ಎನ್ನಲಾಗದು. ಅವಧೂತ ಬಳಗದವರು ಆಯೋಜಿಸಿದ್ದ ಈ ಕಾರ್ಯಕ್ರಮದ  ಸಡಗರ, ದೃಶ್ಯವೈಭವದ ಅಲಂಕಾರಗಳಾಗಲೀ, ಹೂವಿನ ಸಿಂಗಾರವಾಗಲೀ, ಸ್ವಾಗತ ಮಂಟಪ, ರಥದ ಮೆರವಣಿಗೆಗಳಾಗಲೀ ಹಿಂದೆ ಈ ಪ್ರಮಾಣದ ಅದ್ದೂರಿತನದಲ್ಲಿ ನಡೆದುದಿಲ್ಲ. ಈಗ ನಡೆದುದನ್ನು ನೋಡಿದರೆ ಮುಂದೆ ಇದಕ್ಕಿಂತ ಅಮೋಘವಾಗಿ ನಡೆದರೆ ಆಶ್ಚರ್ಯವೂ ಇಲ್ಲವೆನ್ನಬಹುದು. 
ಇಂಥದೊಂದು ಕಾರ್ಯಕ್ರಮ ತೀರ ಅನಿರೀಕ್ಷಿತವಾಗಿಯೆಂಬಂತೆ ನಡೆದದ್ದು ವಿಶೇಷವಾಗಿರುವಂತೆಯೇ, ಜನರು ಮನಸ್ಸು ಮಾಡಿದರೆ, ಒಗ್ಗಟ್ಟಿನಿಂದ ಸಹಕರಿಸಿದರೆ, ಅಲ್ಲಿ ಸಮಯದ, ಹಣದ, ಆಯೋಜನೆಯ ಪ್ರಶ್ನೆಗಳು ಉದ್ಭವಿಸಲಾರವು ಎನ್ನಲು ಇದೊಂದು ಉದಾಹರಣೆಯೆನ್ನಬಹುದು. ಗೆಳೆಯ ಅಪೂರ್ವ ಅಜ್ಜಂಪುರ ಅವರು ಒದಗಿಸಿರುವ ಈ ಕಾರ್ಯಕ್ರಮದ ವರ್ಣರಂಜಿತ ಚಿತ್ರಗಳು ಇಲ್ಲಿವೆ. 




ಕಾಮೆಂಟ್‌ಗಳು

  1. Sorry instead of shankar it came I beg your apology.sorry sorry...recently I have eye problem.please sorry.
    LikeShow more reactions · Reply · 1 · January 1 at 9:19pm
    Manage

    Keshavamurthy Hathwar
    Keshavamurthy Hathwar
    LikeShow more reactions · Reply · 1 · January 2 at 5:41am
    Manage
    Deepthi Shivaswamy
    Deepthi Shivaswamy · 9 mutual friends
    Shankar Ajjampura avare, Very well composed write up on my Grand father. Thanks a lot from the bottom of my heart for putting this all together & sharing with us
    all.
    We used to hear about my grand father from my mom Gayathri Shivaswamy, feel very proud & blessed to be part of a great family!
    LikeShow more reactions · Reply · January 2 at 9:32am
    Manage
    Shankar Ajjampura
    Shankar Ajjampura This is my second experience to get appreciation from their grand children ! His greatness lies in the fact that he is still remembered by his students. I can see here by their comments. Though I was at Ajjampura, I couldn't interact with him, since at that time he was at NR Pura, my birthplace !
    Like · Reply · January 2 at 9:38am
    Manage
    Deepthi Shivaswamy
    Deepthi Shivaswamy · 9 mutual friends
    Very true, though I never got a chance to see him.. I have heard so much about him through his students, family & people who knew him. Such a noble soul & an ever guiding force! Thanks again!!
    Like · Reply · January 2 at 2:04pm · Edited
    Manage
    Shankar Ajjampura

    Write a reply...

    Choose File
    Shruti Murthy
    Shruti Murthy Uncle very nice to read about my grandfather.Thanks a lot for sharing with us.We heard about him from my mother but not seen him,we r proud about my grandfather.
    LikeShow more reactions · Reply · 1 · January 2 at 10:08am
    Manage
    Sandhya Murthy
    Sandhya Murthy Shankar ajjampur avarige manna Ananta abinandanegalu nanna pujya pitajigala bagegina barahagalannu odi hradaya tumbi Bantu idakkagi nanna krutagnategalu
    LikeShow more reactions · Reply · January 2 at 11:58am
    Manage
    Appaji Ajjampura
    Appaji Ajjampura ಈ ಲೇಖನ ಬ್ಲಾಗ್ನಲ್ಲಿ ಓದಿದ್ದೇನೆ. ನರಸಿಂಹರಾಜಪುರದಲ್ಲಿ ೧೯೭೮-೭೯ರಲ್ಲಿ ಇರುವಾಗ ಅಲ್ಲಿನ ಎಷ್ಟೋ ಜನ ಮಧ್ಯವಯಸ್ಕರು ಅಣ್ಣಯ್ಯ ಮೇಷ್ಟ್ರ ಬಗ್ಗೆ ಮಾತಾನಾಡಿದ್ದನ್ನು ಕೇಳಿದ್ದೇನೆ. ಅವರಿಗೆ ಮೇಷ್ಷ್ರ ಬಗ್ಗೆ ಭಯಮಿಶ್ರಿತ ಗೌರವಾದರಗಳು ಇತ್ತು. ಅಂಥವರ ವಿಚಾರ ಬ್ಲಾಗ್ನಲ್ಲಿ ಬಂದದ್ದು ಒಳ್ಳೆಯ ಸಂಗತಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಕೇಶವ ಹತ್ವಾರ್ ತಮ್ಮ ಅಭಿಪ್ರಾಯವನ್ನು ಹೀಗೆ ನಮೂದಿಸಿದ್ದಾರೆ.
    ಅಣ್ಣಯ್ಯ ಮಾಸ್ತರರೆಂದು ಜನಪ್ರಿಯರಾಗಿದ್ದ ಶ್ರೀ ವೆಂಕಟೇಶಮೂರ್ತಿಗಳು 1964-65ರವರೆಗೆ ಅಜ್ಜಂಪುರದ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಶಿಸ್ತಿಗೆ ತುಂಬ ಹೆಸರುವಾಸಿ, ಪಾಠ ಪ್ರವಚನಗಳಲ್ಲಿ ಅಮಾತ್ಯ ರಾಕ್ಷಸ. ಅವರು ಅಜ್ಜಂಪುರದಲ್ಲಿದ್ದಾಗ ಪ್ರಾರ್ಥನೆಯ ವೇಳೆಯಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಎಲ್ಲರೂ ಹಾಜರಿರಬೇಕಾದದ್ದು ಅತ್ಯವಶ್ಯವಾಗಿತ್ತು. ತಾವೂ ಅದನ್ನು ಪಾಲಿಸುತ್ತಿದ್ದರು. ವಿದ್ಯಾರ್ಥಿಗಳು ತಡವಾಗಿ ಬಂದರೆ ಶಾಲೆಯ ಸುತ್ತ ಓಡಬೇಕಿದ್ದ ಶಿಕ್ಷೆಯನ್ನು ನೀಡುತ್ತಿದ್ದರು. ಗ್ರಾಮಾಂತರದ ವಿದ್ಯಾರ್ಥಿಗಳಿಗೆ ಇದಕ್ಕೆ ವಿನಾಯಿತಿಯಿತ್ತು. ಶಿಕ್ಷಕರು ತಡವಾಗಿ ಬಂದಾಗ ಅರ್ಧದಿನ ರಜೆ ಹಾಕಬೇಕಾಗುತ್ತಿತ್ತು. ಮೇಲಧಿಕಾರಿಗಳೂ ಹೊತ್ತುತಪ್ಪಿ ಬಂದರೆ, ಅವರು ಮಾರನೇ ದಿನವೇ ಬರಬೇಕಾಗಿತ್ತು. ಅಂಥ ಕಟ್ಟುನಿಟ್ಟಿನ ಶಿಸ್ತು ಅವರದು. ಇಂಗ್ಲಿಷ್ ಭಾಷಾ ವಿಷಯವನ್ನು ಕೊನೆಯ ಪಿರಿಯಡ್ ನಲ್ಲಿ ತೆಗೆದುಕೊಂಡು, ಸಮಯವಾದನಂತರವೂ ಬೋಧಿಸುತ್ತಿದ್ದರು. ಇಂದು ಆ ಪರಿಯ ಶಿಸ್ತನ್ನು ತರಬೇಕೆಂಬ ಅಪೇಕ್ಷೆಯುಳ್ಳವರು ಕೂಡ, ಅದನ್ನು ಜಾರಿಗೆ ತರಲಾಗದಂಥ ಪರಿಸ್ಥಿತಿಯಿರುವುದು ವಿಷಾದನೀಯವೇ ಸರಿ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ