87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

ಪರ್ವತರಾಯನ ಕೆರೆಯ ದಂಡೆಯ
ಮೇಲಿನಿಂದ ಕಾಣುವ ಹಣ್ಣೆಗುಡ್ಡದ ದೃಶ್ಯ
87ನೇ ಲೇಖನವಾಗಿ ಹೊರಬರುತ್ತಿರುವ ಜೂನ್ ತಿಂಗಳ ಈ ಸಂಚಿಕೆಯನ್ನು ಅಮೆರಿಕಾದಿಂದ ಪ್ರಕಟಿಸುತ್ತಿದ್ದೇನೆ. ನಾನು ಊರಿನಲ್ಲಿರುವಾಗ ಬ್ಲಾಗ್ ಗೆಂದು ಮಾಹಿತಿ ಸಂಗ್ರಹಿಸುವುದು ಸುಲಭವಾಗಿರುವಂತೆಯೇ, ಅಮೆರಿಕಾದಲ್ಲಿ ಕುಳಿತೂ ಆ ಕೆಲಸ ಮಾಡಬಹುದು. ಮುಂದುವರೆದ ತಂತ್ರಜ್ಞಾನದ ನೆರವಿನಿಂದ, ಮಿತ್ರರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಹಾಗೆ ನೆರವಾದವರು ಆರ್ಯಮಿತ್ರ. ಭಾರತದಲ್ಲಿ ನನ್ನ ಅನುಪಸ್ಥಿತಿಯ ಕಾಲಕ್ಕೆ ಮಾಹಿತಿ-ಚಿತ್ರಗಳನ್ನು ಒದಗಿಸಿ, ಈ ಲೇಖನ ಮಾಲೆ ಮುಂದುವರೆಯಲು ನೆರವಾಗಬೇಕು ಎಂಬ ಕೋರಿಕೆಗೆ ಸ್ಪಂದಿಸಿ, ಮೂರು-ನಾಲ್ಕು ಲೇಖನಗಳನ್ನು ಕಳಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ನಿಮ್ಮಲ್ಲಿ ಯಾರಿಗಾದರೂ ಈ ಬಗೆಯಲ್ಲಿ ನೆರವು ನೀಡಬಹುದೆಂದರೆ,  ಕೈಬರವಣಿಗೆಯಲ್ಲಿ ಲೇಖನ ಬರೆದು, ಅದರ ಚಿತ್ರ ತೆಗೆದು, ಲೇಖನಕ್ಕೆ ಸಂಬಂಧಿಸಿದ ಚಿತ್ರಗಳಿದ್ದರೆ ಅದನ್ನು ನನ್ನ ವಾಟ್ಸಾಪ್ ನಂಬರಿಗೆ ಕಳಿಸಲು ವಿನಂತಿ.

ಕೆಲವು ತಿಂಗಳ ಹಿಂದೆ ಈ ಬ್ಲಾಗ್ ನಲ್ಲಿ ಅಜ್ಜಂಪುರದ ಸಮೀಪವಿರುವ ಪುಟ್ಟ ಗ್ರಾಮ ಹಣ್ಣೆಯಲ್ಲಿರುವ ಹೊಯ್ಸಳ ದೇಗುಲದ ಬಗ್ಗೆ ಪರಿಚಯಿಸಲಾಗಿತ್ತು. ಈ ಗ್ರಾಮದ ಸಮೀಪವೇ ಇರುವ ಗುಡ್ಡಕ್ಕೆ ಹಣ್ಣೆಗುಡ್ಡವೆಂಬ ಹೆಸರಿದೆ. 

ಅಜ್ಜಂಪುರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಈ ಗುಡ್ಡದೊಂದಿಗೆ ನಂಟು ಇದೆ. ಪ್ರತಿವರ್ಷ ನಡೆಯುವ ಪರೇವು, ಮಳೆಗೆಂದು ಪ್ರಾರ್ಥನೆ ಸಲ್ಲಿಸುವಾಗ ನಡೆಸುವ ಪೂಜಾರಾಧನೆಗಳ ಸ್ಥಳ ಹಣ್ಣೆ ಗುಡ್ಡ. ಅಲ್ಲಿಗೆ ಸೊಲ್ಲಾಪುರದ ಮಳೆದೇವರು ಎಂದು ಖ್ಯಾತವಾಗಿರುವ ಸಿದ್ಧರಾಮೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೊಂಡೊಯ್ದು, ಪೂಜಾದಿಗಳನ್ನು ನಡೆಸಿ, ಸುತ್ತಮುತ್ತಣ ಪ್ರದೇಶಕ್ಕೆ ತಂಪೆರೆಯುವ ಮಳೆಯಾಗುವಂತೆ ಪ್ರಾರ್ಥಿಸುವ ಪದ್ಧತಿ ತುಂಬ ಹಿಂದಿನಿಂದಲೂ ನಡೆದುಬಂದಿದೆ. ಇಂದಿಗೂ ಅದೇ ನಂಬಿಕೆಯಂತೆ ನಡೆಯುತ್ತಿದೆ.

ನಮ್ಮ ಬಾಲ್ಯದ ಕುತೂಹಲದ ತಾಣಗಳಲ್ಲಿ ಹಣ್ಣೆಗುಡ್ಡಕ್ಕೆ ಮಹತ್ವದ ಸ್ಥಾನವಿತ್ತು. ಆರೆಂಟು ದಶಕಗಳ ಹಿಂದೆ ಚಾರಣ, ಹಿಲ್ ಕ್ಲೈಂಬಿಂಗ್ ಮುಂತಾದ ಪದಗಳು ಚಾಲ್ತಿಯಲ್ಲಿ ಇರಲಿಲ್ಲವಾದರೂ, ಮಾಡುತ್ತಿದ್ದುದು ಅದೇ ಆಗಿತ್ತು. ಶಾಲೆಯ ಮಕ್ಕಳನ್ನು ಸ್ಥಳೀಯ ಉಪಾಧ್ಯಾಯರು ಈ ಗುಡ್ಡಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ದೊರೆಯುವ ಗೋಪಿ ಮಣ್ಣು ಎಂದು ಕರೆಯುವ ಹಳದಿ ಬಣ್ಣದ ಮಣ್ಣನ್ನು ಹೊತ್ತುತರುತ್ತಿದ್ದರು. ಮಕ್ಕಳಲ್ಲಿ ಸಾಹಸದ ಸ್ವಭಾವ ಬೆಳೆಸುವುದು, ಪ್ರಕೃತಿಯೊಂದಿಗಿನ ಒಡನಾಟಕ್ಕೆ ಹೇಳಿಮಾಡಿಸಿಂಥ ತಾಣವಾದ ಈ ಗುಡ್ಡ ಇಂದಿಗೂ ಅನೇಕರ ಸ್ಮೃತಿಗಳಲ್ಲಿ ಉಳಿದಿದೆ.

ಕುರುಚಲು ಪೊದೆಗಳೇ ಹೆಚ್ಚಾಗಿರುವ ಈ ಗುಡ್ಡದಲ್ಲಿ ಪ್ರಾಣಿ-ಪಕ್ಷಿಗಳ ವಾಸ ವಿರಳವೇ ಸರಿ. ಪೊದೆಗಳಲ್ಲಿ ದೊರಕುವ ಚಿಕ್ಕ-ಪುಟ್ಟ ಗಿಡಗಳ ಕಾಂಡಗಳನ್ನು ಸೌದೆಯ ಆಕಾರಕ್ಕೆ ಕತ್ತರಿಸಿ ಕತ್ತೆಗಳ ಮೇಲೆ ಹೇರಿಕೊಂಡು ಬಂದು ಮನೆಗೆ ಉರುವಲು ಒದಗಿಸುವ ಪದ್ಧತಿ ಹಿಂದೆ ಇತ್ತು. ಅದನ್ನು ಕತ್ತೆ ಕವಾಡ ಎಂದು ಕರೆಯಲಾಗುತ್ತಿತ್ತು. ಈ ಬಗ್ಗೆಯೂ ಒಂದು ಲೇಖನ ಈ ಬ್ಲಾಗ್ ನಲ್ಲಿ ಪ್ರಕಟವಾಗಿದೆ.
ಇದೆಲ್ಲಕ್ಕಿಂತ ಕುತೂಹಲದ, ಸರಕಾರ ಮನಸ್ಸು ಮಾಡದ ಸಂಗತಿ - ಗುಡ್ಡದಲ್ಲಿ ಇದೆಯೆನ್ನಲಾದ ಚಿನ್ನದ ನಿಕ್ಷೇಪದ ಬಗ್ಗೆ ಕುರಿತು ಶ್ರೀಮತಿ ರೋಹಿಣಿ ಶರ್ಮಾ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಕೇವಲ ಊಹಾಪೋಹಗಳಲ್ಲೇ ನಿಂತುಹೋಗಿರುವ, ಬ್ರಿಟಿಷ್ ಸರಕಾರದ ಸಂಶೋಧನೆಗೆ ಒಳಗಾದ ಈ ಚಿನ್ನದ ಯೋಜನೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಇದನ್ನು ದೃಢಪಡಿಸಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಈ ಬಗ್ಗೆ ಗಮನಹರಿಸಿಲ್ಲ. ಒಂದೊಮ್ಮೆ ಚಿನ್ನದ ಅದಿರು ಇದ್ದು, ಅದು  ವ್ಯಾವಹಾರಿಕವಾಗಿಯೂ ಲಾಭದಾಯಕವಾಗುವುದಿದ್ದರೆ, ಅಜ್ಜಂಪುರವೂ ಸೇರಿದಂತೆ ಸುತ್ತಮುತ್ತಣ ಪರಿಸರವೇ ಗುರುತಿಸಲಾಗದಷ್ಟು ಬದಲಾದೀತು. ಇಷ್ಟು ವರುಷ ನಡೆಯದ ಈ ಕಾರ್ಯ ಮುಂದೆ ನಡೆದರೆ, ಈ ಲೇಖನವೂ ಒಂದು ದಾಖಲೆಯಾದೀತು ಎನ್ನುವುದು ಒಂದು ಆಶೆ!
--------------------------------------------------------------------------------------------------------------------------
ಲೇಖಕಿ ಶ್ರೀಮತಿ ಎಸ್. ರೋಹಿಣಿ ಶರ್ಮಾ ಇವರು ಈ ಬ್ಲಾಗ್ ನ ಓದುಗರಿಗೆ ಪರಿಚಿತರು. ಅವರು ಅಜ್ಜಂಪುರದಲ್ಲೇ ನೆಲೆಸಿದ್ದವರು. ಅವರು ನಾಡಿನ ವಿವಿಧ ದಿನಪತ್ರಿಕೆ, ಮಾಸಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಪ್ರಕಟಿಸಿರುವರು. ಊರಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗ ಆಸಕ್ತಿ ತಳೆದು 80-90ರ ದಶಕದಲ್ಲಿ ಲೇಖನಗಳನ್ನು ಪ್ರಕಟಿಸಿದರು. ಅವರ ಸಂಗ್ರಹದಿಂದ ಆಯ್ದ ಈ ಲೇಖನ ಇಂದಿಗೂ ಪ್ರಸ್ತುತ. ಏಕೆಂದರೆ ಹಣ್ಣೆ ಗುಡ್ಡದ ಚಿನ್ನದ ನಿಕ್ಷೇಪಕ್ಕೆ ಸಂಬಂಧಿಸಿದ ವಿಷಯಗಳು ಇನ್ನೂ ಅಂತಿಮ ರೂಪ ಪಡೆದಿಲ್ಲ.  ಅವರ ಬರಹಗಳನ್ನು ಸಂಗ್ರಹಿಸಿಟ್ಟು ಇಲ್ಲಿ ದೊರೆಯುವಂತೆ ಮಾಡಿರುವ ಅವರ ಪುತ್ರ ಶ್ರೀ ಆರ್ಯಮಿತ್ರ ಹಾಗೂ ಲೇಖನವನ್ನು ಬಳಸಿಕೊಳ್ಳಲು ಅನುಮತಿ ನೀಡಿರುವುದಕ್ಕೆ ಲೇಖಕಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ಚಿತ್ರಗಳನ್ನು ಗೆಳೆಯ ಮಂಜುನಾಥ ಅಜ್ಜಂಪುರ ಇವರ ಸಂಗ್ರಹದಿಂದ ಆರಿಸಲಾಗಿದೆ. ಅವರಿಗೆ ಧನ್ಯವಾದಗಳು.
-0-0-0-0-0-0-0-0-0-0-0-0-0-
ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಈ-ಮೈಲ್ - shankarajjampura@gmail.com
--------------------------------------------------------------------------------------------------------------------------

ಸುಂದರ ಪ್ರಕೃತಿಯ ದೃಶ್ಯ
ಭಾರತೀಯರಿಗೆ, ಅದರಲ್ಲೂ ಮಹಿಳೆಯರಿಗೆ ಚಿನ್ನದ ಮೇಲಿನ ವ್ಯಾಮೋಹ ಅತಿ ಹೆಚ್ಚಿನದೆಂದು ಅಂತರಾರಾಷ್ಟ್ರೀಯ ಅಧ್ಯಯನದಿಂದಲೇ ತಿಳಿದುಬಂದಿದೆ. ಇಂದ ಬರ್ಬರ ಕಾಲದಲ್ಲಿಯೂ ಚಿನ್ನಾಭರಣಗಳ ಮೋಹ ದಿನೇ ದಿನೇ ಏರುತ್ತಲೇ ಹೋಗುತ್ತಿದೆ. ಇತರ ದೇಶಗಳ ಚಿನ್ನದ ಉತ್ಪಾದನೆಯೊಂದಿಗೆ ಭಾರತದ ಉತ್ಪಾದನೆಯನ್ನು ಹೋಲಿಸಿದಾಗ ಇಲ್ಲಿನದು ತುಂಬಾ ಕಡಿಮೆ. 1980ರಲ್ಲಿ 2.6 ಟನ್ ಗೆ ಏರಿದ್ದ ಚಿನ್ನ 1988ರಲ್ಲಿ ಕೇವಲ 1.8 ಟನ್ನಿಗೆ ಇಳಿದಿದೆ. ಉತ್ಪಾದನೆ ವೆಚ್ಚ ಕೆಳಮಟ್ಟಕ್ಕಿಳಿದಿರುವುದರಿಂದ ಹೊರದೇಶಗಳಿಂದ ಆಮದು ಮಾಡಿಕೊಂಡು ಆಭರಣ ತಯಾರಿಸಿ ಅಮೆರಿಕ, ಇಂಗ್ಲೆಂಡ್, ಮಧ್ಯ ಹಾಗೂ ಪಶ್ಚಿಮ ದೇಶಗಳಿಗೆ ರಫ್ತು ಮಾಡುತ್ತಿದೆ.

ಪ್ರಪಂಚದಲ್ಲಿ ಸುಮಾರು ಎಪ್ಪತ್ತೈದು ದೇಶಗಳಲ್ಲಿ ಚಿನ್ನ ದೊರೆಯುತ್ತದೆ. ಭಾರತದಲ್ಲಿ ಕೋಲಾರ, ಹಟ್ಟಿ, ವೈನಾಡು, ಛೋಟಾ ನಾಗಪುರ, ಧಾರವಾಡ ಮತ್ತು ಅನಂತಪುರದಲ್ಲಿ ಚಿನ್ನದ ಗಣಿಗಳು ಇವೆ.  ಇನ್ನೂ ಕೆಲವು ಕಡೆ ಚಿನ್ನದ ಅದಿರು ನಿಕ್ಷೇಪಗಳ ಪತ್ತೆ ಕಾರ್ಯ ನಡೆಯಬೇಕಾಗಿದೆ. ಇಂಥ ನಿಕ್ಷೇಪಗಳಲ್ಲಿ ಹಣ್ಣೆಗುಡ್ಡ ಎಂಬ ಪ್ರದೇಶವೂ ಒಂದು.

ಅಜ್ಜಂಪುರ – ಕಾಫಿ ಕಣಜವೆಂದು ಸುಪ್ರಸಿದ್ಧವಾದ ಚಿಕ್ಕಮಗಳೂರು ಜಿಲ್ಲೆಯ ಒಂದು ಪುಟ್ಟ ಹೋಬಳಿ ಕೇಂದ್ರ. ಆದರೆ ಇದು ಎಲ್ಲ ಹೋಬಳಿ ಕೇಂದ್ರಗಳಂತಿರದೆ ಕಲೆ, ಸಾಹಿತ್ಯ, ನಾಟಕ, ಆಧ್ಯಾತ್ಮಿಕತೆ, ರಾಜಕೀಯ ಪ್ರಚೋದನೆಯೇ ಮುಂತಾಗಿ ಹತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಇವೆಲ್ಲಕ್ಕೂ ಮಿಗಿಲೆನಿಸುವಂತೆ ಈಗ ಅಜ್ಜಂಪುರದಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಹಣ್ಣೆಗುಡ್ಡದಲ್ಲಿ ಬಂಗಾರ ಸಿಗುವುದೆಂಬ ಮಾತಿಗೆ ಚಾಲನೆ ಸಿಕ್ಕಿರುವುದು ಅಜ್ಜಂಪುರಕ್ಕೇ ಏಕೆ, ಕರ್ನಾಟಕಕ್ಕೇ ಹೆಮ್ಮೆಯ ಸಂಗತಿ.

ಅತ್ತಿಮೊಗ್ಗೆ ಮಂಡಲ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಣ್ಣೆ ಗ್ರಾಮದ ಸರ್ವೇ ನಂಬರು ಒಂದರಲ್ಲಿ ಸುಮಾರು ಮೂರು ನೂರು ಎಕರೆ ಪ್ರದೇಶದಲ್ಲಿ ಈ ಹಣ್ಣೆಗುಡ್ಡವಿದೆ. ದಟ್ಟವಾದ ಅಡವಿಯಿಂದ ಆವೃತವಾದ ಈ ಹಣ್ಣೆಗುಡ್ಡದ ಒಂದು ನೂರ ಅರವತ್ತೈದು ಎಕರೆ ಅರಣ್ಯ ಇಲಾಖೆಗೂ, ಒಂದು ನೂರ ಮೂವತ್ತೈದು ಎಕರೆ ಕಂದಾಯ ಇಲಾಖೆಗೂ ಸೇರಿಹೋಗಿದೆ. ಇಂಥ ಇಬ್ಬಂದಿಯ ವಿಸ್ತೀರ್ಣದಲ್ಲಿಯೇ ಈಗ ಬಂಗಾರ ಸಿಗುತ್ತದೆ ಎನ್ನಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಚಿನ್ನದ ನಿಕ್ಷೇಪವಿದೆಯೆಂದು ಬ್ರಿಟಿಷರು ಸಮೀಕ್ಷೆ ನಡೆಸಿ ಅದು ಯೋಗ್ಯವಲ್ಲವೆಂದು ಅಭಿಪ್ರಾಯಪಟ್ಟಿದ್ದರಾಗಿ ಬಲ್ಲವರ ಅಂಬೋಣ. 1980ರಲ್ಲಿ ಕೇಂದ್ರ ಸರ್ಕಾರ ಇದರ ಬಗ್ಗೆ ವಿಚಾರ ಮಾಡಲು ಮುಂದಾಯಿತಾದರೂ ಇಂತಹ ಹಲವು ವಿಷಯಗಳಂತೆ ಇದೂ ಮೂಲೆಗುಂಪಾಗಿದ್ದು ಆಶ್ಚರ್ಯವೇನಲ್ಲ. ಬ್ರಿಟಿಷರು ಅಂದು ಸಮೀಕ್ಷೆ ನಡೆಸಿದ ಸ್ಥಳ, ಅದಿರಿನ ಬಂಡೆಗಳು, ಪರೀಕ್ಷೆಗೆ ಒಳಪಟ್ಟ ಗವಿಗಳೆಲ್ಲಾ ಇಂದು ಮೂಕಸಾಕ್ಷಿಗಳಾಗಿ ಅಲ್ಲೇ ಬಿದ್ದಿವೆ.

ಕುರುಚಲು ಗಿಡಗಳ ತಾಣ
ಅಂದಿನ ರಾಜ್ಯ ಸಚಿವರಾಗಿದ್ದ ಮಾರ್ಗದ ಮಲ್ಲಪ್ಪನವರು, ಚಿನ್ನದ ಗಣಿಯನ್ನು ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ಕೊಡಿಸುವುದಾಗಿ ಇತ್ತ  ಆಶ್ವಾಸನೆ ಈಡೇರಲಿಲ್ಲವೆನ್ನುವುದು ಅಪ್ರಿಯ ಸತ್ಯ. ಈಗ ಸ್ಥಳೀಯರು, ಶಾಸಕರು ಒತ್ತಡ ತಂದು ರಾಜ್ಯ, ಕೇಂದ್ರ ಸರ್ಕಾರಗಳೆರಡೂ ಕಾರ್ಯಪ್ರವೃತ್ತರಾದರೆ ಖಂಡಿತವಾಗಿಯೂ ಚಿನ್ನ ಸಿಕ್ಕಿ ಸಾವಿರಾರು ಜನರಿಗೆ ಉದ್ಯೋಗವೂ ಸಿಕ್ಕೀತೆಂದು ಸ್ಥಳೀಯ ಹಿರಿಯರು ಹೆಮ್ಮೆಯಿಂದ ಹೇಳುತ್ತಾರೆ.


ಚಿನ್ನದ ಅದಿರು ನಿಕ್ಷೇಪದ ಮಾದರಿ
ಸಂಗ್ರಹಣೆಗೆಂದು ಮಾಡಿದ ಉತ್ಖನನ
ಜ್ಜಂಪುರದ ಎಸ್. ಶಿವಾನಂದ ಮತ್ತಿತರರು ಕಚೇರಿಯಿಂದ ಕಚೇರಿಗೆ, ಹಳ್ಳಿಯಿಂದ ದಿಲ್ಲಿಯ ತನಕ ಭಾರವಾದ ಕಡತಗಳನ್ನು ಕೊಂಡೊಯ್ದು ಅಹವಾಲು ಪ್ರಾರ್ಥನೆಗಳನ್ನು ತರುತ್ತಲೇ, ಛಲ ಬಿಡದ ತ್ರಿವಿಕ್ರಮನಂತೆ  ಹೋರಾಡುತ್ತಲೇ ಬಂದಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾತ್ರವಲ್ಲದೆ, ರಾಜ್ಯ-ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳವರೆಗೂ ಪ್ರಾರ್ಥನೆ ಸಲ್ಲಿಸಿ ಅಗತ್ಯವಿರುವಷ್ಟು ಮಾಹಿತಿಗಳನ್ನು ಒದಗಿಸಿದ್ದಾರೆ. 


ಕರ್ನಾಟಕದವರೂ, ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ರಾಮಕೃಷ್ಣ ಹೆಗ್ಗಡೆಯವರಿಗೆ ಈ ಬಗ್ಗೆ ವಿವರ ಸಲ್ಲಿಸಿರುವುದರ ಜತೆಗೆ ಮಾದರಿಗಾಗಿ ಇಲ್ಲಿನ ಮಣ್ಣನ್ನೂ ಕಳಿಸಲಾಗಿದೆ. ಎಂಟನೇ ಆಯೋಗದಲ್ಲಿ ಇದನ್ನು ಸೇರಿಸಬೇಕೆಂದು ಸ್ಥಳೀಯರು ಆದರಪೂರ್ವಕ ಒತ್ತಾಯ ತಂದಿರುತ್ತಾರೆ.


ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ (ಮಂಗಳೂರು) ಹಿರಿಯ ವಿಜ್ಞಾನಿ ಟಿ. ತಿಪ್ಪೇಸ್ವಾಮಿಯವರು ಮೇ 22ರಂದು ತಮ್ಮ ಕಚೇರಿಯ ಸಿಬ್ಬಂದಿಯೊಡನೆ ಹಣ್ಣೆಗುಡ್ಡಕ್ಕೆ ಭೇಟಿ ನೀಡಿರುತ್ತಾರೆ. ಮೇಲುನೋಟಕ್ಕೆ ಚಿನ್ನದಂತೆ ಕಂಡು ಬಂದಿರುವ ನಿಕ್ಷೇಪದ ಅದಿರನ್ನು ಪ್ರಯೋಗಾಲಯಕ್ಕೆ ಕಳಿಸಿರುವುದಾಗಿ ಅವರು ತಿಳಿಸಿದ್ದಾರೆ. ಸದ್ಯ ಚಿನ್ನ ದೊರಕುವ ಪ್ರಮಾಣವನ್ನು ನಿಗದಿಪಡಿಸುವುದು ಸಾಧ್ಯವಿಲ್ಲವಾದರೂ ಫಲಿತಾಂಶ ತಿಳಿದೊಡನೆ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದ್ದಾರೆ.

ನಮ್ಮ ವ್ಯವಸ್ಥೆಯ ಒಂದು ಪ್ರಮಾದವೆಂದರೆ ಪ್ರತಿಯೊಂದಕ್ಕೂ ಹಿಡಿದಿರುವ ಜಡತ್ವ, ಪ್ರತಿಯೊಂದರಲ್ಲೂ ತೀವ್ರ  ನಿರಾಸಕ್ತಿ. ಬಹುಶಃ ಹಣ್ಣೆಗುಡ್ಡಕ್ಕೂ ಇದೇ ಗತಿಯಾಗಿರಬೇಕು. ಬ್ರಿಟಿಷರ ಕಾಲದಲ್ಲೇ ಪ್ರಸ್ತಾಪಕ್ಕೆ ಬಂದು ಮಾರ್ಗದ ಮಲ್ಲಪ್ಪನವರ ಕಾಲದಲ್ಲಿ ಆಶ್ವಾಸನೆ ಪಡೆದರೂ ಇಷ್ಟು ದಿನವಾದರೂ ಸರ್ಕಾರದ ಗಮನ ಇದರ ಕಡೆಗೆ ಹರಿದು ಬಂಗಾರ ಬರಲಿಲ್ಲವೇಕೆ ಎಂದರೆ "ಮೇಡಂ, ಯಾವ ಕಚೇರಿಯಲ್ಲೂ ಇದರ ಪ್ರಸ್ತಾಪವೇ ಇಲ್ಲ. ಮೊದಲಿನಿಂದಲೂ ಅಜ್ಜಂಪುರದ ಹಿರಿಯರು ದೂರದಲ್ಲಿರುವ ಹಣ್ಣೆಗುಡ್ಡ ತೋರಿಸಿ ಅಲ್ಲಿ ಬಂಗಾರ ಸಿಗುತ್ತದೆ, ಇನ್ನೂ ಎಳಸು ಎಂದು ಹೇಳುತ್ತಿದ್ದರು. ಬುದ್ಧಿ ಬಲಿತ ಮೇಲೆ ಒಂದು ದಿನ ಅಲ್ಲಿಗೇ ಹೋಗಿ ನೋಡಿದೆ. ಪ್ರಯತ್ನಿಸಬಾರದೇಕೆ ಎನಿಸಿತು. ಈಗ ನಾವಂತೂ ಆಕಾಶ ಭೂಮಿ ಒಂದಾಗಿ ಇದರ ಕಾರ್ಯ ಆರಂಭವಾಗುವವರೆಗೂ ಹೋರಾಡುತ್ತೇವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸುಮ್ಮನಾದರೆ ಅವರನ್ನು ಎಚ್ಚರಿಸುತ್ತೇವೆ. ಮತ್ತೆ ಮುಂದೆಯೂ ಹೋಗುತ್ತೇವೆ" ಎಂದು ಶಿವಾನಂದ ಅವರು ಭಾವುಕರಾಗಿ ನುಡಿಯುತ್ತಾರೆ. ಒಂದು ದೃಷ್ಟಿಯಲ್ಲಿ ಅವರು ಹೇಳುವುದು ಸರಿಯೆನಿಸುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಜನತೆಯೇ ಸರ್ಕಾರಕ್ಕೆ ಒತ್ತಾಯ-ಒತ್ತಡ ಹೇರಿದಾಗಲೇ ಕೆಲಸ ಮುಂದೆ ಸಾಗಲು ಸಾಧ್ಯವಾದೀತು.

ಬೃಹತ್ ಗಾತ್ರದ ಕೋಡುಗಲ್ಲುಗಳು
ಬಂಗಾರದ ಬೆಲೆ ಗಗನಕ್ಕೇರಿರುವಾಗ ಕೊಳ್ಳುವವರೂ ಸಾಲು ಸಾಲಾಗಿರುವಾಗ ಬಂಗಾರ ದೊರಕುವ ಸೂಚನೆ ಸಿಕ್ಕೂ ಸುಮ್ಮನಿರುವುದೆಂದರೆ ಮೂರ್ಖತನವೇ ಸರಿ. ಆದ್ದರಿಂದ ಸರ್ಕಾರ-ಸಾರ್ವಜನಿಕರು, ಅಧಿಕಾರಿಗಳು ಒಟ್ಟಾಗಿ ಒಂದಾಗಿ ಕಾರ್ಯಪ್ರವೃತ್ತರಾದರೆ ಇಂದಲ್ಲ ನಾಳೆಯಾದರೂ ಹಣ್ಣೆಗುಡ್ಡದಲ್ಲಿ ಸಾಕಷ್ಟು ಬಂಗಾರ ದೊರಕೀತು.

0-0-0-0-0-0-0-0-0-0


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ