88. ಅಜ್ಜಂಪುರದಲ್ಲಿ ಕೃಷಿ ಸ್ಥಿತ್ಯಂತರಗಳು – ಒಂದು ಸ್ಥೂಲ ನೋಟ

ಊರಿನ ಬೆಳವಣಿಗೆಯಲ್ಲಿ ಬೇಸಾಯದ ಪಾತ್ರವೂ ಪ್ರಮುಖವಾದುದೇ. ಈ ವಿಷಯವನ್ನು ಕುರಿತಂತೆ, ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಅಜ್ಜಂಪುರದಲ್ಲೇ ನೆಲೆಸಿರುವ ಮಿತ್ರ ಅಪೂರ್ವ ಅಜ್ಜಂಪುರ ಅವರು ಜುಲೈ ತಿಂಗಳ ಈ ಸಂಚಿಕೆಯನ್ನು ಸಿದ್ಧಪಡಿಸಿರುವವರು ಮಿತ್ರ ಅಪೂರ್ವ ಅಜ್ಜಂಪುರ. ಅವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.  
ತಮ್ಮ ವೃತ್ತಿಜೀವನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿ, ರೈತರಿಗೆ ಸರ್ಕಾರ ನೀಡಿದ ಸವಲತ್ತುಗಳನ್ನು ಒದಗಿಸುವುದರ ಜತೆಗೇ, ಕೃಷಿಯ ಏರಿಳಿತಗಳನ್ನು, ಬದಲಾವಣೆಗಳನ್ನು ಕಂಡವರು. ನಾನು ಆಗೀಗ ಅಜ್ಜಂಪುರಕ್ಕೆ ಹೋದಾಗ ಅವರೊಂದಿಗೆ ಸುತ್ತಮುತ್ತಣ ಗ್ರಾಮಗಳಿಗೆ ಹೋಗುವುದುಂಟು. ಅಲ್ಲೆಲ್ಲ ಅವರನ್ನು ಆತ್ಮೀಯತೆಯಿಂದ ಮಾತನಾಡಿಸುವ ಜನರ ಅಭಿಮಾನವನ್ನು ಕಂಡಿದ್ದೇನೆ. ರೈತರೊಂದಿಗಿನ ಘನಿಷ್ಠ ಸಂಪರ್ಕದಿಂದಾಗಿ ರೈತರು ಅವರನ್ನು ಮೆಚ್ಚಿರುವುದು ವ್ಯಕ್ತವಾಗುತ್ತದೆ.

ಅಜ್ಜಂಪುರದ ಕೃಷಿ ಕಾಲಾಂತರದಲ್ಲಿ ಬದಲಾವಣೆಗೊಂಡ ಬಗೆ ಹಾಗೂ ರೈತರ ಬದಲಾದ ಆರ್ಥಿಕ ಪರಿಸ್ಥಿತಿಯನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಇದು ಅಜ್ಜಂಪುರದ ಸ್ಥಿತಿಯನ್ನು ಮಾತ್ರ ಹೇಳದೆ, ವ್ಯವಸಾಯ ಕ್ಷೇತ್ರವು ಯಾಂತ್ರೀಕರಣಗೊಂಡ ಪರಿಯನ್ನು ವಿವರಿಸಿದ್ದಾರೆ. ಇದಕ್ಕೆಂದು ಚಿತ್ರಗಳನ್ನೂ ಒದಗಿಸಿದ್ದಾರೆ.

ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಈ-ಮೈಲ್ - shankarajjampura@gmail.com

--------------------------------------------------------------------------------------------------------------------------



ಅಜ್ಜಂಪುರದಲ್ಲಿ ಕೃಷಿ ಸ್ಥಿತ್ಯಂತರಗಳು – ಒಂದು ಸ್ಥೂಲ ನೋಟ

-      ಅಪೂರ್ವ ಅಜ್ಜಂಪುರ

ಹಲುವೆ ಉಳುಮೆ ಜೀವನಸಂಗಾತಿಯೊಂದಿಗೆ
ಒಂದು ಕಾಲದಲ್ಲಿ ಅಜ್ಜಂಪುರದ ಕೃಷಿಪ್ರದೇಶವು ಈಗಿನಂತಿರಲಿಲ್ಲ. ವೈವಿಧ್ಯಮಯ ಬೆಳೆಗಳನ್ನು ಮುಂಗಾರು-ಹಿಂಗಾರುಗಳ ಹಂಗಾಮುಗಳಲ್ಲಿ ಕಾಣಬಹುದಿತ್ತು. ಮುಂಗಾರಿನಲ್ಲಿ ದೇಸಿತಳಿಯ ಎತ್ತರೆತ್ತರದ ಜೋಳ, ಎಳ್ಳು, ನರುಗಂಪಿನ ಕೊತ್ತಂಬರಿ, ಕಿತ್ತು ತಿನ್ನಬೇಕೆನಿಸುವ ಕಡಲೆಕಾಯಿ, ತೊನೆದಾಡುವ ರಾಗಿಬೆಳೆ, ಅಲ್ಲಲ್ಲಿ, ಹೆಸರು, ಉದ್ದು, ಅಲಸಂದೆ ಅಕ್ಕಡಿ ಬೆಳೆಗಳು ಕಂಗೊಳಿಸುತ್ತಿದ್ದವು. ಹಿಂಗಾರಿನಲ್ಲಿ ಬಿಳಿಜೋಳ, ಮತ್ತೆ ಘಮಘಮಿಸುವ ಕೊತ್ತಂಬರಿ, ಕಡಲೆ, ಕುಸುಬೆ, ಸೊಗಡಿನ ಅವರೆ, ಅಲ್ಲಲ್ಲಿ ತಲೆಯೆತ್ತಿದ ಗೋಧಿ, ಮೆಣಸಿನಕಾಯಿಗಳ ಬೆಳೆಗಳನ್ನು ಕಾಣಬಹುದಿತ್ತು. ಹೀಗೆ ಅಜ್ಜಂಪುರದಲ್ಲಿ ವೈವಿಧ್ಯಮಯ ಕೃಷಿಪದ್ಧತಿ ಜಾರಿಯಲ್ಲಿತ್ತು. ತೆಂಗು ಬೆಳೆ ಮರಳು ಮತ್ತು ಮರಳುಮಿಶ್ರಿತ ಕೆಂಪು ಗೋಡುಮಣ್ಣಿನ ಭೂಮಿಗಳಿಗೆ ಮೀಸಲಾಗಿತ್ತು. ಇನ್ನು ಅಡಕೆ ತೋಟಗಳನ್ನು ಕಾಣಬೇಕೆಂದರೆ ಬುಕ್ಕಾಂಬುಧಿ, ಹುಣಸಘಟ್ಟ ಕಡೆಯ ಕೃಷಿಪ್ರದೇಶಗಳಿಗೆ ಹೋಗಬೇಕಾಗುತ್ತಿತ್ತು. ನಮ್ಮಲ್ಲಿ ತೆಂಗಿನ ತೋಟಗಳೂ ವಿರಳವಾಗಿದ್ದವು. ತೆಂಗಿನತೋಟಗಳ ವಿಹಂಗಮ ನೋಟ ಕಾಣಬೇಕೆಂದರೆ ಯಗಟಿ ಮುಂತಾದೆಡೆಗೆ ಹೋಗಬೇಕಿತ್ತು. ಇಂದು ಈ  ಕಾಲಘಟ್ಟದಲ್ಲಿ ತೆಂಗು, ಅಡಕೆ ತೋಟಗಳನ್ನು ನಮ್ಮಲ್ಲಿಯೂ ಕಾಣಬಹುದು.

ಹರಡಿ ನಿಂತ ಕಡಲೆ ಬೆಳೆ
ಕಳೆದ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಎತ್ತರೆತ್ತರದ ಜೋಳ ಹೋಗಿ ಹೈಬ್ರಿಡ್ (ಸಂಕರಿತ) ಜೋಳ, ಸುಧಾರಿತ ತಳಿಗಳ ರಾಗಿ, ಕೊತ್ತಂಬರಿಯ ಬದಲಿಗೆ ಈರುಳ್ಳಿ, ಮೆಣಸಿನಕಾಯಿ, ಸೂರ್ಯಕಾಂತಿ ಬೆಳೆಗಳು ಮುಂಗಾರಿನಲ್ಲಿ ಸಾಮಾನ್ಯವಾದವು. ಈಗೀಗ ಈರುಳ್ಳಿ ಪ್ರಧಾನಬೆಳೆಯಾಗಿ ರೈತರಿಂದ ರೊಕ್ಕದ ಬೆಳೆ ಎಂದು ಪರಿಗಣಿಸಲ್ಪಟ್ಟಿದೆ. ಕ್ರಮೇಣ ಕಡಲೆಕಾಯಿ, ಬೇಳೆಕಾಳು  ಬೆಳೆಗಳು ಅತ್ಯಂತ ವಿರಳವಾದವು.

ಎಪ್ಪತ್ತರ ದಶಕದಲ್ಲಿ ಈರುಳ್ಳಿ ಬೆಳೆದೆ ಅಜ್ಜಂಪುರದ ರೈತರ ಕಣ್ಣೀರು ಎಂಬ ರಾಜ್ಯಮಟ್ಟದ ಸುದ್ದಿಯಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈರುಳ್ಳಿ ಫಸಲು ಸಮೃದ್ಧವಾಗಿ ಬಂದಿತ್ತು. ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಪಾತಾಳಕ್ಕೆ ಇಳಿದಿತ್ತು. ಮತ್ತೇ ಹಾಗೆಯೇ ಮೇಲೇರಿ ರೈತರಿಗೆ ಖುಷಿ ತಂದಿತ್ತು. ಇದು ಆಗಿದ್ದು 1975-76ರ ತುರ್ತುಪರಿಸ್ಥಿತಿಯ ಹೇರಿಕೆಯ ಕಾಲದಲ್ಲಿ. ಮಸಾಲೆ ದೋಸೆಯಲ್ಲಿ ಈರುಳ್ಳಿ ಕಾಣೆಯಾಗಿತ್ತು. ಹೋಟೆಲುಗಳಲ್ಲಿ ಈರುಳ್ಳಿ ದೋಸೆಯನ್ನು ತಿಂಡಿಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಈರುಳ್ಳಿ ಬೆಳೆ ಬಹುಪಾಲು ಅದೃಷ್ಟಲಕ್ಣ್ಮಿಯಾಗಿ ನಮ್ಮ ರೈತರಿಗೆ ಒಲಿದಿದ್ದು ಅವರ ಆರ್ಥಿಕ ಸ್ಥಿತಿ-ಗತಿ ಸುಧಾರಿಸಲು ಕಾರಣವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.
ಅಜ್ಜಂಪುರ ಧನಿಯಾ ಎಂದು ಸುಪ್ರಸಿದ್ಧವಾದ ಕೊತ್ತಂಬರಿ ಬೆಳೆ ಗತಕಾಲದ ವೈಭವದ ನೆನಪಾಗಿದೆ. ಈ ಬೆಳೆಯ ಕೃಷಿ ನಾಮಾವಶೇಷವಾಗಿತ್ತು. ಮೆಣಸಿನಕಾಯಿ ಬೆಳೆಯುವುದನ್ನು ರೈತರು ಇಂದಿಗೂ ಕೈಬಿಟ್ಟಿಲ್ಲ. ಜೋಳ, ರಾಗಿ, ಕಡಲೆಕಾಯಿ ಬೆಳೆಗಳ ಕೃಷಿ ಅತ್ಯಂತ ವಿರಳವಾಗಿದೆ. ಕೆಂಪುಗೋಡಿನಲ್ಲಿ ಮೆಕ್ಕೆ ಜೋಳದ ಕೃಷಿ ಕಾಲಿಟ್ಟಿದೆ. ಹಿಂಗಾರಿನಲ್ಲಿ ಜೋಳ ಕಡಲೆಗಳ ಬೆಳೆಗಳನ್ನು ಈ ಭಾಗದ ರೈತರು ಪ್ರಧಾನ ಬೆಳೆಯಾಗಿ ರೂಢಿಸಿಕೊಂಡಿದ್ದಾರೆ. ಅಲ್ಲಲ್ಲಿ ಕಾಣುತ್ತಿದ್ದ ಕುಸುಬೆ, ಗೋಧಿಗಳ ವಿಳಾಸವೇ ಇಲ್ಲ. ಅವರೆಕಾಯಿ ಬೆಳೆಯನ್ನು ರಾಗಿಬೆಳೆಯಲ್ಲಿ ಅಕ್ಕಡಿಯಾಗಿ ಬೆಳೆಯತ್ತಿದ್ದ ದಿನಗಳಿದ್ದವು. ಈಗ ಅದು ಕೂಡ ವಿರಳವಾಗಿದೆ. ಅವರೆಕಾಯಿಯ ಪರಿಮಳ ಅಷ್ಟಾಗಿ ಘಮಘಮಿಸುತ್ತಿಲ್ಲ.

 ಗಾತ್ರವಾರು ಈರುಳ್ಳಿ ವಿಂಗಡಣೆಯ ಕಾರ್ಯ

ಈ ರೀತಿಯ ಕೃಷಿ ಪದ್ಧತಿಯ ಸ್ಥಿತ್ಯಂತರ ಅಜ್ಜಂಪುರಕ್ಕೆ ಮಾತ್ರ ಸೀಮಿತವೇನಲ್ಲ. ಎರೆನಾಡಿನ ಯಾವುದೇ ಭಾಗಕ್ಕೆ ಹೋದರೂ ಈ ಸ್ಥಿತ್ಯಂತರದ ಕಥೆಯನ್ನು ಕೇಳಬಹುದು. ಮುಂಗಾರಿನಲ್ಲಿ ಈರುಳ್ಳಿ ಬೆಳೆಯು ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ. 


ಟ್ರಾಕ್ಟರ್ ನಿಂದ ಈರುಳ್ಳಿ ಬಿತ್ತನೆಗೆ ಸಿದ್ಧತೆ
ಹಿಂಗಾರಿನಲ್ಲಿ ಕಡಲೆ ಬೆಳೆ ಜೀವನವೆಚ್ಚಕ್ಕೆ ಕಿರುದಾರಿಯಾಗಿದೆ. ಸದ್ಯಕ್ಕೆ ದನಗಳ ಮೇವಿಗಾಗಿ ರಾಗಿ, ಜೋಳಗಳ ಕೃಷಿ ಚಾಲ್ತಿಯಲ್ಲಿದೆ. ಬೇಸಾಯಕ್ಕೆ ಎತ್ತುಗಳ ಬದಲಿಗೆ ಟ್ರಾಕ್ಟರ್ ಗಳು ಬಂದಿವೆ. ಕೃಷಿಯ ಚಟುವಟಿಕೆಗಳು ಯಾಂತ್ರೀಕರಣಗೊಂಡಿವೆ. ಉಳುಮೆ, ಬಿತ್ತನೆ, ಸುಗ್ಗಿ ಮುಂತಾದ ರೈತರ ಕೆಲಸಕಾರ್ಯಗಳು ಟ್ರಾಕ್ಟರ್ ನಿಂದಲೇ ನಡೆಯುತ್ತಿವೆ. ಹಿಂಗಾರಿನ ಕಡಲೆಕಾಳುಗಳ ಒಕ್ಕಣೆ ಸಂಪೂರ್ಣ ಯಾಂತ್ರೀಕೃತಗೊಂಡಿದೆ. ರೈತರು ಕಡಲೆ ಗಿಡಗಳನ್ನು ಕಿತ್ತು ಕೆಲಕಾಲ ಒಣಗಲು ಹೊಲದಲ್ಲಿಯೇ ಬಿಡುತ್ತಾರೆ. ನಂತರ ಒಕ್ಕಣೆ ಯಂತ್ರಗಳನ್ನು ಬಾಡಿಗೆಗೆ ತಂದು, ಕಾಳುಗಳನ್ನು ಬೇರ್ಪಡಿಸಿ, ಚೀಲಗಳಿಗೆ ಭರ್ತಿಮಾಡಲಾಗುತ್ತದೆ. ಕೆಲವೊಮ್ಮೆ ವ್ಯಾಪಾರಿಗಳು ಕಡಲೆಯನ್ನು ಹೊಲದಲ್ಲಿಯೇ ಖರೀದಿಸುತ್ತಾರೆ. 


ಈರುಳ್ಳಿ ಸಂಗ್ರಹ
ಮುಂಗಾರಿನಲ್ಲಿ ಈರುಳ್ಳಿ ಬೆಲೆಯೇರಿಕೆಯ ವಾಸನೆ ವ್ಯಾಪಾರಿಗಳಿಗೆ ಹತ್ತಿದರೆ, ಹೊಲದಲ್ಲೇ ತುಂಬಿಸಿ ಖರೀದಿಮಾಡುತ್ತಾರೆ. ಈಗೀಗ ವ್ಯಾಪಾರಿಗಳು ಹೊಲದಲ್ಲಿನ ಈರುಳ್ಳಿ ಫಸಲಿನ ಇಳುವರಿ ಅಂದಾಜಿಸಿ, ಗಡ್ಡೆಗಳು ಭೂಮಿಯಲ್ಲಿರುವಾಗಲೇ ದರ ನಿರ್ಧರಿಸುತ್ತಾರೆ. ನಂತರ ಈರುಳ್ಳಿಯನ್ನು ಕೀಳುವುದು, ಒಣಗಿಸುವುದು, ಗಾತ್ರಾನುಸಾರ ಅವುಗಳನ್ನು ವಿಂಗಡಿಸಿ ಚೀಲಕ್ಕೆ ತುಂಬುವ ಎಲ್ಲ ಕೆಲಸಗಳನ್ನೂ ಖರೀದಿದಾರರೇ ಮಾಡಿಕೊಳ್ಳುತ್ತಾರೆ.

ಎತ್ತುಗಳ ಬೇಸಾಯ ಹೂಡಿ ಈರುಳ್ಳಿ ಬಿತ್ತನೆಗೆ ಚಾಲನೆ
ನಾಡಿನ ಎಲ್ಲ ರೈತರಂತೆಯೇ ಈ ಭಾಗದ ರೈತರೂ ಹೊಸ ಬಗೆಯ ಕೃಷಿಗೆ ಹೊಂದಿಕೊಂಡಿದ್ದಾರೆ. ಮೊದಲಿಗಿಂತ ಬದಲಾದ ಕೃಷಿಯಿಂದಾಗಿ ಜನರ ಜೀವನ ಮಟ್ಟವೂ ಸುಧಾರಿಸಿದೆ. ಆದರೆ ನಮ್ಮದು ಸಂಪೂರ್ಣ ಮಳೆಯಾಶ್ರಿತ ಕೃಷಿ. ಜೂನ್ ನಿಂದ ಅಕ್ಟೋಬರ್ ವರೆಗಿನ 150ದಿನಗಳ ಅವಧಿಯಲ್ಲಿ, ವರುಣನ ಕೃಪೆಯಲ್ಲಿ ರೈತನ ಜೀವನ ನಿಂತಿದೆ. ವ್ಯವಸಾಯವೊಂದು ಮಳೆಯೊಂದಿಗಿನ ಜೂಜಾಟದಂತೆ ಎಂದರೆ ಅತಿಶಯೋಕ್ತಿಯಲ್ಲ. ಅದರಲ್ಲೂ ಮುಂಗಾರು ಮಳೆ ಕೈಹಿಡಿಯದಿದ್ದರೆ ರೈತರು ಕಂಗಾಲಾಗುತ್ತಾರೆ. 


ರಾಸಾಯನಿಕ ಗೊಬ್ಬರ ಚೆಲ್ಲುತ್ತಿರುವ ರೈತ
ಸಣ್ಣ ರೈತರು ಹೈನುಗಾರಿಕೆ ರೂಢಿಸಿಕೊಂಡು ಜೀವನೋಪಾಯಕ್ಕೆ ದಾರಿ ಮಾಡಿಕೊಂಡಿರುತ್ತಾರೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಹಸು, ಎಮ್ಮೆಗಳನ್ನು ಪಾಲನೆಮಾಡುವುದು ಸಣ್ಣ ರೈತರ ಪಾಲಿಗೆ ವರದಾನವಾಗಿದೆ. ಒಂದು ಕಾಲದಲ್ಲಿ ಹೇಳುತ್ತಿದ್ದಂತೆ ಬೇಸಾಯ, ನೀ ಸಾಯ, ಮನೆ ಮಂದಿಯೆಲ್ಲ ಸಾಯ ಎಂಬಂಥ ನಾಣ್ಣುಡಿಯಾಗಿ ಉಳಿದಿಲ್ಲ ಇಂದಿನ ಕೃಷಿಜೀವನ.  ಸುಧಾರಣೆ, ಪ್ರಗತಿ, ಸಾಕಷ್ಟು ಆಗಿದೆ. ರೈತ ವೃತ್ತಿಯಲ್ಲಿ, ಜೀವನಮಟ್ಟದಲ್ಲಿ. ಈ ಮಾತಿಗೆ ಅಜ್ಜಂಪುರ ಭಾಗದ ಕೃಷಿ ಚಿತ್ರಣವೂ ಹೊರತಾಗಿಲ್ಲ.


-0-0-0-0-0-0-0-0-0-0-0-0-0-0-0-0-0-0-0-0-




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.