89. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೊಂದು ನುಡಿನಮನ
ಹಣ್ಣೆ – ಅಜ್ಜಂಪುರ ಸಮೀಪದ ಪುಟ್ಟ
ಗ್ರಾಮ. ಅಲ್ಲೊಂದು ವೀರಶೈವ ಪರಂಪರೆಯ ಮಠ ಹಾಗೂ ಹೊಯ್ಸಳ ನಿರ್ಮಿತ ಮಂದಿರಗಳಿವೆಯೆನ್ನುವುದೇ ಅದರ
ಹೆಚ್ಚುಗಾರಿಕೆ. ನಾನು ಅಜ್ಜಂಪುರದಲ್ಲಿ ನನ್ನ ಬಾಲ್ಯವನ್ನು ಕಳೆದು 1968ರ ನಂತರ ವಿದ್ಯಾಭ್ಯಾಸ,
ಉದ್ಯೋಗಗಳಿಗಾಗಿ ಊರನ್ನು ಬಿಡುವವರೆಗೂ ಹಣ್ಣೆ ಗ್ರಾಮದ ಬಗ್ಗೆ ನನಗೇನೂ ತಿಳಿದಿರಲಿಲ್ಲ ಮತ್ತು
ಅಲ್ಲಿಗೆ ಹೋಗಿದ್ದೂ ಇಲ್ಲ. ಆಗೆಲ್ಲ ಆಗದ ಸಂಗತಿಗಳು ವಯಸ್ಸು 64ನ್ನು ತಲುಪುವಾಗ
ಸಂಭವಿಸಿತೆನ್ನುವುದು ನಿಜವಾದರೂ, ಹಣ್ಣೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳನ್ನು ಭೇಟಿಯಾಗುವುದು
ಸಾಧ್ಯವೇ ಆಗಲಿಲ್ಲವೆಂಬ ವಿಷಾದ ಇನ್ನೂ ಆವರಿಸಿದೆ.
ಅವರ ಬಗ್ಗೆ ಅಲ್ಪಸ್ವಲ್ಪ ಕೇಳಿ
ತಿಳಿದಿದ್ದೆನಾದರೂ,ಅವರನ್ನು 2007ರಲ್ಲಿ ನಡೆದ, ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್
ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕದ ಸಂದರ್ಭದಲ್ಲಿ ನೋಡಿ, ಮಾತನಾಡಿಸಿದ್ದೆ. ಅವರೊಬ್ಬ
ಪರಿಸರಪ್ರೇಮಿ, ಸಾಹಿತ್ಯದಲ್ಲಿ ಅಭಿರುಚಿಯಿದ್ದವರು ಹಾಗೂ ಮತಧರ್ಮಕ್ಕೆ
ಸಂಬಂಧಿಸಿದಂತೆ ಜಿಗುಟು ನಿಲುವು ಹೊಂದಿದವರಲ್ಲ ಎಂಬ ಕಾರಣಗಳಿಗೆ ಅವರ ಬಗ್ಗೆ ಅಭಿಮಾನ.
ಕುಂಭಾಭಿಷೇಕದ ಸಂದರ್ಭದಲ್ಲಿ 'ವರ್ಣ ಮಾತ್ರ ಕಲಿಸಿದಾತಂ ಗುರು' ಎಂದು ಅವರು ನನ್ನ ತಂದೆ ಅಜ್ಜಂಪುರ
ಕ್ಷೇತ್ರಪಾಲಯ್ಯನವರನ್ನು ನೆನಪಿಸಿಕೊಂಡರು. 'ಅವರ ಮಗ ಬಂದಿದ್ದಾರೆಂದು ಕೇಳಿದೆ' ಎಂದು ನನ್ನನ್ನು
ಕುರಿತು ಹೇಳಿ ವೇದಿಕೆಗೆ ಆಹ್ವಾನಿಸಿದ್ದರು.
ಅವರ ಸ್ನೇಹಭಾವ ಮತ್ತು ವೈಜ್ಞಾನಿಕ
ಚಿಂತನೆಗಳಿಂದಾಗಿ ನನಗೆ ಗೌರವಭಾವ. ಕಳೆದ ವರ್ಷ, ನನ್ನ ಮಿತ್ರರಾದ ಅಪ್ಪಾಜಿ, ಎನ್.ಎಸ್.
ಸ್ವಾಮಿಯವರೊಡನೆ ಹಣ್ಣೆ ಗ್ರಾಮಕ್ಕೆ ಹೋಗಿ, ಅಲ್ಲಿನ ಹೊಯ್ಸಳ ದೇವಾಲಯದ ಬಗ್ಗೆ ಚಿತ್ರ
ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ಅವರ ಮಠಕ್ಕೆ ಹೋದಾಗ, ಅವರು ಪ್ರವಾಸದಲ್ಲಿದ್ದ ಕಾರಣಕ್ಕೆ
ಭೇಟಿಯಾಗಲಿಲ್ಲ. ನಂತರದ ಕೆಲ ತಿಂಗಳುಗಳಲ್ಲಿ ಅವರ ನಿಧನವಾರ್ತೆ ತಲುಪಿತು.
ಜಿ.ಬಿ. ಅಪ್ಪಾಜಿ (ಅಪೂರ್ವ) |
ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಈ-ಮೈಲ್ - shankarajjampura@gmail.com
--------------------------------------------------------------------------------------------------------------------------
ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೊಂದು ನುಡಿನಮನ
ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು |
ಇರಲಿ, ಹಿರೇಮಠದಲ್ಲಿದ್ದ ಈ ಯುವ ಸ್ವಾಮಿಗಳನ್ನು ಆ ದಿನ ಭೇಟಿಯಾದೆ. ಒಂದಿಷ್ಟು ಸಾಹಿತ್ಯ, ಸಂಸ್ಕೃತಿಗಳ ವಿಚಾರ ಮಾತನಾಡಿದೆ. ಆಗ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನೂರಾರು ಪುಟಗಳಿದ್ದ ಹಸ್ತಪ್ರತಿಯನ್ನು ಕೈಗಿತ್ತರು. ಮುತ್ತು ಪೋಣಿಸಿದಂತಿದ್ದ ಮುದ್ದಾದ ಬರವಣಿಗೆಯಿದ್ದ ಆ ಪುಟಗಳನ್ನು ತಿರುವಿಹಾಕಿದೆ. ಸೊಗಸಾದ ನಿರೂಪಣೆ ಅಲ್ಲಿತ್ತು. ಆ ಹಸ್ತಪ್ರತಿಯ ಲೇಖಕರು ಆ ಸ್ವಾಮಿಗಳೇ ಆಗಿದ್ದನ್ನು ತಿಳಿದು ಚಕಿತನಾದೆ. "ನೋಡಿ, ಉತ್ತರ ಭಾರತ ಪ್ರವಾಸ ಮಾಡಿದ ಅನುಭವಗಳನ್ನು ಇಲ್ಲಿ ಬರೆದಿದ್ದೇನೆ, ನಾಡಿನ ಒಂದೆರಡು ಪ್ರಸಿದ್ಧ ಪತ್ರಿಕೆಗಳಿಗೆ ಕಳಿಸಿದೆ. ಯಾರೂ ಆಸಕ್ತಿ ತೋರಿಸಲಿಲ್ಲ. ಈಗಾಗಲೇ ಹೆಸರಾಗಿರುವ ಲೇಖಕರಿಗೆ ಮಾತ್ರ ಮಣೆ ಹಾಕುತ್ತಾರೆ" ಎಂದರು.
ಅವರ ಮಾತಿನಿಂದ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಆಗ ಪತ್ರಿಕೆಗಳು ಇದ್ದುದೇ ಹಾಗೆ. ಚಾಲ್ತಿಯಲ್ಲಿರುವವರು ಅದೇನೇ ಬರೆದರೂ ಪ್ರಕಟಿಸುತ್ತಿದ್ದರು. "ಸ್ವಾಮೀಜಿ, ನೀವು ಬರೆದಿರುವ ಉದ್ದೇಶವೇನು, ಒಂದು ನಿಮ್ಮ ಆತ್ಮತೃಪ್ತಿಗೆಂದಿರಬಹುದು, ಇನ್ನೊಂದು, ನೀವು ಪ್ರವಾಸ ಮಾಡಿದ ಕಥನ ನಾಲ್ಕಾರು ಜನ ಓದುವಂತಾಗಲಿ ಎಂದಲ್ಲವೆ" ಎಂದೆ. ಅವರು ಅದಕ್ಕೆ ಸಹಮತ ವ್ಯಕ್ತಪಡಿಸಿದರು. "ರಾಜ್ಯಮಟ್ಟದ ಪತ್ರಿಕೆಯೇ ಆಗಬೇಕೆಂದಿಲ್ಲ, ಜಿಲ್ಲಾಮಟ್ಟದ ಪತ್ರಿಕೆಯಲ್ಲಿ ಪ್ರಕಟಿಸಿದರೂ, ನೂರಾರು ಜನ ಓದುತ್ತಾರೆ. ನಿಮಗೆ ಒಪ್ಪಿಗೆಯಿದ್ದರೆ ಈ ಹಸ್ತಪ್ರತಿ ನನಗೆ ಕೊಡಿ, ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಲು ಕೊಡುತ್ತೇನೆ" ಎಂದೆ. "ಸರಿ, ಹಾಗೇ ಮಾಡಿ" ಎಂದರು. ಅದು ಅಂಚೆವಾರ್ತೆಯೆಂಬ ವಾರಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಸಾಕಷ್ಟು ಓದುಗರು ಸ್ವಾಮೀಜಿಯವರ "ಗಂಗೆಯ ತಡಿಯಲ್ಲಿ" ಎಂಬ ಕೃತಿಯನ್ನು ಧಾರಾವಾಹಿಯಾಗಿ ಓದಿ ಸಂತೋಷಪಟ್ಟರು. ಆ ಪತ್ರಿಕೆಯ ಸಂಪಾದಕರಿಗೂ ಓದುಗರಿಂದ ಉತ್ತಮ ಪ್ರತಿಕ್ರಿಯೆಗಳು ಪತ್ರರೂಪದಲ್ಲಿ ಹರಿದುಬಂದವು.
-0-0-0-0-0-0-0-0-0-0-0-0-0-0-
ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ತಮ್ಮ ಉಪನ್ಯಾಸ, ಲೇಖನಗಳಿಂದ ಮನೆಮಾತಾದರು.
ಪ್ರವಾಸ ಕಥನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಪ್ರಾಯೋಜಕರೂ ದೊರೆತರು. ಆದರೆ ಸ್ಥಳೀಯ
ಪತ್ರಿಕೆಯಲ್ಲಿ ಅವರ ಪ್ರವಾಸ ಕಥನ ಪ್ರಕಟವಾಗಿದ್ದಕ್ಕೂ, ಮುಂದಿನ ಬೆಳವಣಿಗೆಗಳಿಗೂ ಸಂಬಂಧವಿಲ್ಲ.
ಆ ಬೆಳವಣಿಗೆಗಳು ಸಹಜವಾಗಿ ಆದವು. ಅವರು ಸಾಂಸ್ಕೃತಿಕವಾಗಿ, ಲೌಕಿಕವಾಗಿ ಆಲೋಚಿಸಿದ ವಿಚಾರಗಳು
ಚಿಂತನ ರೂಪದಲ್ಲಿ ಭದ್ರಾವತಿ ಆಕಾಶವಾಣಿಯಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಸಾರವಾದವು. 'ಗಂಗೆಯ
ತಡಿಯಲ್ಲಿ', 'ನಾ ಕಂಡ ದಕ್ಷಿಣ ಭಾರತ', 'ಸಮಗ್ರ ಭಾರತ ದರ್ಶನ', 'ವಿಂಧ್ಯಾಚಲದಿಂದ ಹೈಮಾಚಲಕ್ಕೆ', 'ಚಿಂತನಶ್ರೀ' ಮುಂತಾದ ಕೃತಿಗಳಲ್ಲದೆ, ಧಾರ್ಮಿಕ, ಆಧ್ಯಾತ್ಮಿಕ ಆಯಾಮವುಳ್ಳ 'ತಮಸೋಮಾ
ಜ್ಯೋತಿರ್ಗಮಯ', 'ಕರುಣಾಳು ಬಾ ಬೆಳಕೆ', 'ಅಮೃತಬಿಂದು', 'ಲಿಂಗದೀಕ್ಷೆ', 'ಮಡಿವಾಳ ಮಾಚಿದೇವ' (ಮುದ್ರಣ
ಹಂತದಲ್ಲಿದೆ) ಮುಂತಾದ ಗ್ರಂಥಗಳನ್ನು ಪ್ರಕಟಿಸಿದರು.
-0-0-0-0-0-0-0-0-0-0-0-0-0-0-
ಶ್ರೀ ಆಂಜನೇಯ ದೇಗುಲದ ಕುಂಭಾಭೀಷೇಕ ಕಾರ್ಯಕ್ರಮದಲ್ಲಿ |
ಲಿಂಗಾಯತ ಅಲ್ಪ ಸಂಖ್ಯಾತ ಘೋಷಣೆಯ ವಿವಾದದ ಬಗ್ಗೆ ನಾನು ಪ್ರಶ್ನಿಸಿದಾಗ ಅತ್ಯಂತ ಸೂಕ್ತ ಉತ್ತರವನ್ನು ನೀಡಿದ್ದರು. ವೀರಶೈವ ಎಂಬುದು ಸಂಸ್ಕೃತಿ, ಲಿಂಗಾಯತ ಎನ್ನುವುದು ಸಂಸ್ಕಾರ ಎಂದು ಉತ್ತರಿಸಿದ್ದರು. ಇಷ್ಟಲಿಂಗ ಧಾರಣೆಯು ಒಂದು ಸಂಪ್ರದಾಯವೆಂದು ಅವರಿಗೆ ಗೊತ್ತಿತ್ತು. ವೀರಶೈವ, ಲಿಂಗಾಯತ ಎಂಬ ಭೇದವನ್ನು ಅವರು ಒಪ್ಪುತ್ತಿರಲಿಲ್ಲ. ಎರಡೂ ಒಂದೇ ಪಂಥದ ಸಂವಾದೀ ಪದಗಳೆಂದು ಹೇಳಿದ್ದರು.
-0-0-0-0-0-0-0-0-0-0-0-0-0-0-
ಪುಸ್ತಕಗಳನ್ನು ಓದುವ ಒಳ್ಳೆಯ ಹವ್ಯಾಸ ಅವರಲ್ಲಿತ್ತು. ಆಧುನಿಕ ಕನ್ನಡ ಸಾಹಿತ್ಯ ಪ್ರಾಕಾರಗಳಲ್ಲದೆ, ತತ್ತ್ವ ಸಿದ್ಧಾಂತಗಳ ಕೃತಿಗಳು, ಪರಿಸರ ಕಾಳಜಿಯ ಲೇಖನಗಳು, ಗ್ರೀಕ್ ತತ್ತ್ವಜ್ಞಾನಿಗಳಲ್ಲದೆ, ಸ್ವಾಮಿ ವಿವೇಕಾನಂದ, ನಿಜಗುಣ ಶಿವಯೋಗಿ, ಅಲ್ಲಮಪ್ರಭುಗಳಂಥವರ ವಿಚಾರಧಾರೆಯನ್ನು ಅಧ್ಯಯನ ಮಾಡಿದ್ದರು. ಪ್ರಾಚೀನ ದೇಗುಲಗಳಿಗೆ ಭೇಟಿನೀಡಿದಾಗ ಶೈವ, ವೈಷ್ಣವ, ಬೌದ್ಧ ಭೇದವಿಲ್ಲದೆ ತನ್ಮಯರಾಗಿ ವರ್ಣಿಸುತ್ತಿದ್ದರು. ಮಹಾದೇವನನ್ನು ಕಂಡಂತೆಯೇ ಮಹಾಲಕ್ಷ್ಮಿಯನ್ನು ಬೆರಗಗಣ್ಣುಗಳಿಂದ ನೋಡಿ ಆನಂದಿಸುವ ದ್ವಂದ್ವವಿಲ್ಲದ ಮನಸ್ಸಿನವರಾಗಿದ್ದರು. ಬಹುದೇವತಾರಾಧನೆಯನ್ನು ಗೌರವಿಸುತ್ತಿದ್ದರು.
ಶ್ರೀ ರಂಭಾಪುರಿ ಜಗದ್ಗುರುಗಳು |
ನಿಯೋಜಿತ ಪಟ್ಟಾಧಿಕಾರಿ ಶ್ರೀ ಸಂತೋಷ ದೇವರು |
ಹಣ್ಣೆ ಮಠವು ಪುತ್ರ ಪರಂಪರೆಯ ಪೀಠವಾಗಿದ್ದು, ಅದರಂತೆ ಶ್ರೀ ಶಿವಾನಂದ ಶಿವಾಚಾರ್ಯ
ಸ್ವಾಮಿಗಳ ಪೂರ್ವಾಶ್ರಮದ ಹಿರಿಯ ಸಹೋದರರ ಪುತ್ರ ಸಂತೋಷ ದೇವರನ್ನು ಶ್ರೀ ರಂಭಾಪುರಿ ಪೀಠದ
ಜಗದ್ಗುರುಗಳು ಉತ್ತರಾಧಿಕಾರಿಯನ್ನಾಗಿ ನಿಯೋಜಿಸಿದ್ದಾರೆ. ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಅವರು
ವಿಧ್ಯುಕ್ತವಾಗಿ ಪಟ್ಟಾಧ್ಯಕ್ಷರಾಗಲಿರುವರು.
-0-0-0-0-0-0-0-0-0-0-0-0-0-0-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ