98. ಮಠದ ಮನೆ


ಆತ್ಮೀಯ ಓದುಗರೇ, 
ಅಜ್ಜಂಪುರಕ್ಕೆ ಭೇಟಿ ನೀಡಿದಾಗಲೆಲ್ಲ ಒಂದಲ್ಲ ಒಂದು ಮಾಹಿತಿ ದೊರೆಯುತ್ತಿರುತ್ತದೆ. ಅದಕ್ಕೆ ಅಲ್ಲಿನ ಗೆಳೆಯರೂ ನೆರವಾಗುತ್ತಾರೆ. ಇಲ್ಲಿನ ಮಠದ ಮನೆಗೊಂದು ಚಿಕ್ಕ ಇತಿಹಾಸವಿದೆ. ಅಲ್ಲಿಗೆ ಕರೆದೊಯ್ದು, ಮಾಹಿತಿಗಳನ್ನು ವಿವರಿಸಿದವರು ಸಮಾನ ಮನಸ್ಕ ಮಿತ್ರ ಅಪ್ಪಾಜಿ. ನಮ್ಮೂರಿಗೂ ಒಂದು ಶಾಸನವಿದೆ ಎಂದು ತಿಳಿದದ್ದೇ ಈಗ. ಅದನ್ನು ಓದಲು ಪ್ರಯತ್ನಿಸೋಣವೆಂದರೆ, ಅದರಲ್ಲಿನ ಅಕ್ಷರಗಳೆಲ್ಲ ನಷ್ಟವಾಗಿದೆ. ಗ್ರಾಮದೇವತೆ ಕಿರಾಳಮ್ಮ ದೇವಾಲಯದಲ್ಲಿರುವ ಬರಹಕ್ಕೂ ತೀರ ಹಿಂದಿನದು ಎಂದು ಹೇಳಬಹುದಾದ ಇದು ಹೊಯ್ಸಳೋತ್ತರ ಶಾಸನವಿದ್ದೀತು ಎಂದು ಭಾವಿಸಬಹುದು. 

ಶತಕವನ್ನು ಸಮೀಪಿಸುತ್ತಿರುವ ಈ ಬರಹದ ಮಾಲಿಕೆಗೆ ಇನ್ನೆರಡು ಸಂಚಿಕೆಗಳ ನಂತರ ವಿರಾಮ ಘೋಷಿಸುವ ಸಮಯ ಬಂದಿದೆಯೆಂದು ಭಾವಿಸುವೆ. ಹಾಗೆಂದು ಇದು ಸಂಪೂರ್ಣ ನಿಂತುಹೋದೀತೆಂದಲ್ಲ. ಮಾಹಿತಿಗಳು ದೊರೆತಂತೆ, ಲೇಖಕರು ಆಸಕ್ತಿ ವಹಿಸಿ ಲೇಖನಗಳನ್ನು ಕಳಿಸಿದಾಗಲೆಲ್ಲ ಪ್ರಕಟವಾದೀತು. 
ನಿಮ್ಮೆಲ್ಲರ ಸಹಕಾರಕ್ಕೆ ವಂದನೆಗಳು.
- ಶಂಕರ ಅಜ್ಜಂಪುರ


ಮಠದ ಮನೆಯ ಆವರಣದಲ್ಲಿರುವ ನಂದಿಯ ವಿಗ್ರಹ



ಪೆ.23ರಂದು ಅಜ್ಜಂಪುರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಲನ ನಡೆಯಿತು. ಈ ಸಂದರ್ಭದಲ್ಲಿ ಗೋಷ್ಠಿಯೊಂದರಲ್ಲಿ ಭಾಗವಹಿಸಲು ತೆರಳಿದ್ದೆ. ಮಿತ್ರ ಅಪ್ಪಾಜಿ, ಊರಿಗೆ ಹೋದಾಗಲೆಲ್ಲ ಯಾವುದಾದರೊಂದು ವಿಶೇಷದ ಬಗ್ಗೆ ನೆನಪಿಸಿ, ಆ ಸ್ಥಳಕ್ಕೆ ಕರೆದೊಯ್ದು, ಅಲ್ಲಿನ ಮಾಹಿತಿಗಳನ್ನು ನೀಡುತ್ತಾರೆ. ಈ ಬಾರಿಯೂ ಹಾಗೇ ಆಯಿತು.
         
                ದೇಗುಲದ ಸಮೀಪ ಇರುವ ಸ್ತ್ರೀ ವಿಗ್ರಹ                                ಶಿವಲಿಂಗದ ಮುದ್ರೆ ಇರುವ ಕಲ್ಲು                                                                                                                                                        



 ಒಂದು ಅಂಕಣದ ಗುಡಿ. ಇದರಲ್ಲೊದು ನಂದಿಯ ವಿಗ್ರಹವಿದೆ.






ಗ್ರಾಮದೇವತೆ ಕಿರಾಳಮ್ಮನ ದೇವಾಲಯದ ಮುಂದೆ ಒಂದು ನವೀಕೃತ ಕಟ್ಟಡವಿದೆ. ಚೌಕಾಕಾರದ ಈ ಕಟ್ಟಡದ ನಾಲ್ಕು ಮೂಲೆಗಳಲ್ಲಿ ಶಿವಲಿಂಗದ ಶಿಲ್ಪವಿರುವ ಮುದ್ರೆಕಲ್ಲುಗಳನ್ನುನಿಲ್ಲಿಸಲಾಗಿದೆ.  


ಅದನ್ನು ಮಠದ ಮನೆ ಎಂದು ಕರೆಯಲಾಗುತ್ತದೆ. ಈಗ ಈ ಸ್ಥಳವನ್ನು ಸಮೀಪದ ಸೊಲ್ಲಾಪುರದ ಸಿದ್ದರಾಮೇಶ್ವರ ಸ್ವಾಮಿಯ ಉತ್ಸವಮೂರ್ತಿಯು ಬಂದಾಗ ಅದನ್ನು ಇಲ್ಲಿ ಇರಿಸಿ ಪೂಜಿಸಲೆಂದು ಬಳಸಲಾಗುತ್ತಿದೆ.   

ಅದರ ಹಿಂಬದಿಯಲ್ಲಿ ಹಿಂದೆ  ಊರಿನಲ್ಲಿದ್ದ ಒಂದು ಬಸವನ ಸಮಾಧಿಯಿದೆ. ಅದರ ಪಕ್ಕದಲ್ಲೇ ಒಂದು ಅಂಕಣದ ಕಿರು ದೇವಾಲಯವಿದೆ. ಅದನ್ನು ನೋಡಿದರೆ ವಿಜಯನಗರದ ಕಾಲದ ನಿರ್ಮಾಣವೆಂಬಂತೆ ತೋರುತ್ತದೆ. ದೇವಾಲಯದ ಒಳಭಾಗದಲ್ಲಿ ಒಂದು ನಂದಿಯ ವಿಗ್ರಹವನ್ನು ಇರಿಸಲಾಗಿದೆ. ಅಲ್ಲಿ ಶಿವಲಿಂಗ ಇದ್ದಿರಬಹುದು ಎಂದು ಸೂಚಿಸುವಂತೆ, ಹೊಯ್ಸಳರ ಕಾಲದ ಕೆತ್ತನೆಯಿರುವ ಪಾಣಿಪೀಠವನ್ನು ಕಾಣಬಹುದು.

 ಹೊಯ್ಸಳ ಶೈಲಿಯ ನಂದಿಯ ಇನ್ನೊಂದು ನೋಟ

ಈ ಶಿವಲಿಂಗ ಮತ್ತು ನಂದಿಗಳಿಗೆ ಸಾಮ್ಯತೆಯಿರುವುದರಿಂದ, ಹೊಯ್ಸಳರ ಕಾಲದ ಒಂದು ದೇಗುಲ ಅಜ್ಜಂಪುರದಲ್ಲಿ ಇದ್ದಿತೆನ್ನುವುದನ್ನು ತಳ್ಳಿಹಾಕಲಾಗದು. ಏಕೆಂದರೆ, ಈಗಾಗಲೇ ಅಂತರಜಾಲದಲ್ಲಿ ಅಜ್ಜಂಪುರ ಬ್ಲಾಗ್ ನಲ್ಲಿ ಪ್ರಕಟಿಸಿರುವಂತೆ, ಅನೇಕ ಹೊಯ್ಸಳ ಶಿಲ್ಪಗಳನ್ನು ಗುರುತಿಸಲಾಗಿದೆ.

ಅಜ್ಜಂಪುರದಲ್ಲಿ ಇದುವರೆಗೆ ದೊರಕಿರುವ
ಏಕಮಾತ್ರ ಶಿಲಾಶಾಸನ

ದೇವಾಲಯದ ಪಕ್ಕದಲ್ಲಿ ಒಂದು ಶಿಲಾ ಶಾಸನವನ್ನು ನಿಲ್ಲಿಸಲಾಗಿದೆ. ಅದರಲ್ಲಿನ ಅಕ್ಷರಗಳು ಸವೆದಿರುವುದರಿಂದ ಓದಲು ಸ್ಪಷ್ಟವಾಗಿ ತೋರುತ್ತಿಲ್ಲ. ಗರ್ಭಗುಡಿಯ ಬಲಭಾಗದಲ್ಲಿ ಹೊರಗೆ, ಕತ್ತಿಯನ್ನು ಹಿಡಿದಿರುವ ಸ್ತ್ರೀ ವಿಗ್ರಹವಿದೆ. ಇತಿಹಾಸ ತಜ್ಞರು ಮೇಲ್ಕಂಡ ಮಾಹಿತಿಗಳನ್ನು ಆಧರಿಸಿ, ವಿಶ್ಲೇಷಿಸಿದರೆ ಅಜ್ಜಂಪುರಕ್ಕೆ ಸಂಬಂಧಿಸಿದಂತೆ ಹೊಸ ಸಂಗತಿಗಳು ಹೊರಬಂದೀತು.
           


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ