101. ಅಜ್ಜಂಪುರದಲ್ಲಿ ಋಗ್ವೇದ ಪಾರಾಯಣ


ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಲಾಗದು ಎನ್ನುವುದೊಂದು ವಾಡಿಕೆ. ಇದಕ್ಕೆ ಹಲವು ಕಾರಣಗಳನ್ನು ನೀಡುವರು. ಕೃಷಿ ಚಟುವಟಿಕೆಗಳಿಲ್ಲದ ವಿರಾಮದ ಕಾಲವಿದು. ಅಂತೆಯೇ ವೇದಾಧ್ಯಯನಕ್ಕೂ ಬಿಡುವು ಎನ್ನುವುದು ಮತ್ತೊಂದು ಕಾರಣ. ಇದೇ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಲಕ್ಕವಳ್ಳಿಯ ಸಮೀಪದ ಸೋಮಪುರದಲ್ಲಿರುವ ದತ್ತಾಶ್ರಮದ ಆಯೋಜಕರೂ, ವೇದವಿದರೂ ಆದ ಶ್ರೀ ಸೋ.ತಿ. ನಾಗರಾಜರು ಈ ಅವಧಿಯಲ್ಲಿ ವೇದಪಾರಾಯಣದ ಕಾರ್ಯಕ್ರಮವನ್ನು ಹಮ್ಮಿಕೊಂಡು ನಡೆಸುತ್ತಿದ್ದಾರೆ.


ಶ್ರೀ ಸೋ.ತಿ. ನಾಗರಾಜರು ಪ್ರಸ್ತುತ ಸೋಮಪುರದಲ್ಲಿ ನೆಲೆಸಿ, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಗ್ರಾಮಗಳು, ಪಟ್ಟಣಗಳಲ್ಲಿ ವೇದಪಾರಾಯಣದ ವ್ಯವಸ್ಥೆ ಮಾಡುತ್ತಿರುವರು. ಅವರು ನಡೆಸುತ್ತಿರುವ ದತ್ತ ಆಶ್ರಮದ ಪ್ರಾಯೋಜಕತ್ವದೊಡನೆ, ಊರಿನ ಸಂಘ-ಸಂಸ್ಥೆಗಳು ಪಾರಾಯಣಕ್ಕೆ ಬೇಕಿರುವ ಅಗತ್ಯ ವ್ಯವಸ್ಥೆ, ಎಂದರೆ ಪಾರಾಯಣಕರ್ತರಿಗೆ ಊಟ-ವಸತಿಗಳನ್ನು, ದೇವಾಲಯ ಅಥವಾ ಮನೆಗಳಲ್ಲಿ ಮಾಡಿಕೊಡುವಂತಿದ್ದರೆ, ವೇದ ಪಾರಾಯಣ ಸಪ್ತಾಹವನ್ನು ನಡೆಸಿಕೊಡುವರು. ಸಪ್ತಾಹದ ಸಮಾರೋಪದ ದಿನ, ಜನರನ್ನು ಉದ್ದೇಶಿಸಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿಗಳನ್ನು ನೀಡುವರು.

ಕಳೆದ ವರ್ಷ ಅಜ್ಜಂಪುರದ ಸಮೀಪದ ಗ್ರಾಮ ಬುಕ್ಕಾಂಬುಧಿಯಲ್ಲಿ ನಡೆದಿತ್ತು. ಈ ಬಾರಿ ಅಜ್ಜಂಪುರದ ಬ್ರಾಹ್ಮಣ ಸಂಘದ ಸಹಯೋಗದಲ್ಲಿ ದಿನಾಂಕ ಜುಲೈ 9ರಿಂದ ಜುಲೈ 14ರವರೆಗೆ ಅಜ್ಜಂಪುರದ ಶ್ರೀ ಕೋಟೆ ಆಂಜನೇಯ ದೇವಾಲಯದಲ್ಲಿ ಈ ಕಾರ್ಯಕ್ರಮವು ನಡೆಯಿತು. ಪಾರಾಯಣದ ವಿಧಿಗಳನ್ನು ಶ್ರೀ ಸೋ.ತಿ. ನಾಗರಾಜರ ಸಹವರ್ತಿಗಳಾದ ವಿ|ಸಂತೋಷ ಉಡುಪ ಹಾಗೂ ವಿ| ರಮೇಶ ಬಾಯಿರಿ ಇವರು ನಡೆಸಿಕೊಟ್ಟರು. 

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀ ನಾಗರಾಜರು ವೇದಗಳ ಅಧ್ಯಯನಕ್ಕೆ ಕಾರಣ ಎನ್ನುವುದು ಇರದು. ಅದು ಬ್ರಾಹ್ಮಣನ ಕರ್ತವ್ಯಗಳಲ್ಲಿ ಸೇರಿಹೋಗಿರುತ್ತದೆ. ಅದನ್ನು ಸಂತತವಾಗಿ ಮಾಡುವ ಕ್ರಮ ಈಗ ನಶಿಸಿಹೋಗಿದೆ. ಇದಕ್ಕೆ ಬದಲಾದ ಕಾಲಮಾನ, ಅಗತ್ಯಗಳು ಮುಂತಾದ ಅನೇಕ ಕಾರಣಗಳಿವೆ. ಆದರೂ ಇದೇ ಉದ್ದೇಶಕ್ಕೆಂದು ಶ್ರದ್ಧೆವಹಿಸಿ ದುಡಿಯುವವರು ಇನ್ನೂ ಇದ್ದಾರೆ. ಅವರು ಅವಿರತವಾಗಿ ವೇದಾಧ್ಯಯನ ಮಾಡುತ್ತಿರುವರು. ಅಂತಹವರ ಜೀವನ ನಿರ್ವಹಣೆಯನ್ನು ಸಮಾಜ ನೋಡಿಕೊಳ್ಳುವುದೂ ಗೃಹಸ್ಥರ ಕರ್ತವ್ಯವೇ ಸರಿ. ಪರಿಸ್ಥಿತಿ ಹೀಗಿರುವಾಗ ವೇದಾಧ್ಯಾಯಿಗಳನ್ನು ಬೆಂಬಲಿಸಿ, ಪ್ರತಿ ಊರಿನಲ್ಲಿ ವರ್ಷದಲ್ಲಿ ಒಂದು ಬಾರಿಯಾದರೂ ವೇದ ಪಾರಾಯಣದ ವ್ಯವಸ್ಥೆ ಮಾಡುವಂತಾದರೆ, ಅದೊಂದು ಉತ್ತಮ ಸಾಮಾಜಿಕ ಕಾರ್ಯವಾಗಬಲ್ಲದು ಎಂದು ವಿವರಿಸಿದರು. 


ಇಂದು ಮೂಲ ವಿಜ್ಞಾನವನ್ನು ಮರೆತಿದ್ದರೂ, ಅದರ ಸತ್ವವೇನೂ ಕುಂದಿಲ್ಲ. ಅದರ ಆಧಾರದ ಮೇಲೆಯೇ ಇತರ ಎಲ್ಲ ಸಂಶೋಧನೆಗಳೂ, ಆನ್ವಯಿಕ ವಿಧಿ-ವಿಧಾನಗಳು ಜರುಗುತ್ತಿವೆ. ವೇದಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿದೆ. ಹಿಂದೊಮ್ಮೆ ಬರಗಾಲ ಬಂದಾಗ, ನಿತ್ಯ ಜೀವನವೂ ನಡೆಯುವುದೇ ಕಷ್ಟವಾಗಿದ್ದ ಹಂತಗಳನ್ನೆಲ್ಲ ದಾಟಿಕೊಂಡು ಬಂದದ್ದು ಇದೆ. ಈಗ ಇಷ್ಟೆಲ್ಲ ಅನುಕೂಲಗಳು, ವ್ಯವಸ್ಥೆಗಳು ಇರುವ ಕಾಲದಲ್ಲಿ ಇದು ಚೆನ್ನಾಗಿಯೇ ನಡೆಯಬೇಕು. ಆದರೆ ಅದಕ್ಕೆ ಬೇಕಿರುವ ಶ್ರದ್ಧೆ, ವಿಶ್ವಾಸಗಳ ಕೊರತೆಯಿರುವಂತೆ ಭಾಸವಾಗುತ್ತದೆ. ಆದರೆ ಅದೇ ನಿಜವಲ್ಲ. ಇದೇ ಸಾಮತಿಯು ವೇದಗಳ ಪ್ರಾಚುರ್ಯಕ್ಕೂ ಹೊಂದಿಕೆಯಾಗುತ್ತದೆ ಎಂದು ವಿವರಿಸಿದರು.


ಕಾರ್ಯಕ್ರಮದಲ್ಲಿ ಅಜ್ಜಂಪುರ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀ ಮಂಜುನಾಥ್, ಶ್ರೀ ಪಾಂಡುರಂಗಪ್ಪ, ಮಂಜುನಾಥ್, ಬಿ.ಎನ್. ರಾಮಚಂದ್ರ, ಕುಮಾರ್, ಅನೂಪ್, ಅಖಿಲ್ ಮುಂತಾಗಿ ಅನೇಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲೇ, ನನ್ನ ಚಿಕ್ಕ ಸೇವೆಯನ್ನು ಗುರುತಿಸಿ ಅಭಿನಂದಿಸಲಾಯಿತು. ಹುಟ್ಟೂರಿನಲ್ಲಿ ದೊರೆತ ಈ ಆಶೀರ್ವಾದವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇನೆ.










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.