103. ನನ್ನ ನೆನಪಿನ ಅಜ್ಜಂಪುರ - ಕೆ.ಎಸ್. ರಾಘವನ್ ರ ನೆನಪುಗಳು


6 ನವೆಂಬರ್ 2019
ಮೇಲ್ಕಂಡ ದಿನಾಂಕದಂದು ನನಗೆ ತಲುಪಿದ ಈ-ಪತ್ರದ ಪಠ್ಯ ಇಲ್ಲಿದೆ.
ಸ್ವಾಮಿನಾನು ಇಂದು ಮೇಲ್ಕಂಡ ಬ್ಲಾಗ್‍ಸೈಟನ್ನು ಮೊದಲ ಬಾರಿ ನೋಡಿದೆ. ಮನಕ್ಕೆ ತುಂಬಾ ಸಂತೋಷವಾಯಿತು. ಆಶ್ಚ್ಚರ್ಯ ಕೂಡಾ.  ನನ್ನ ಜೀವನದಲ್ಲಿ ಅಜ್ಜಂಪುರದ ಬಹು ಮಹತ್ವವಾದ ಪಾತ್ರವಿದೆ. ನನ್ನ ಬಾಲ್ಯ ಅಲ್ಲೇ ಕಳೆಯಿತು. ನಮ್ಮ ತಂದೆ ಅಜ್ಜಂಪುರಕ್ಕೆ ಬಂದಾಗ ನನಗೆ ಮೂರು ತಿಂಗಳು ಮಾತ್ರ. ಅದು 1946 ರಲ್ಲಿ. ನನ್ನ SSLC ವರೆಗಿನ ವಿದ್ಯಾಬ್ಯಾಸ ಅಲ್ಲೇ. ನಮ್ಮ ತಂದೆಗೆ CBS (ಅಮೃತಮಹಲ್) ನಲ್ಲಿ ಕೆಲಸ. ಅವರ ಹೆಸರು ಕೆ ಎ ಶ್ರೀನಿವಾಸನ್. 1960 ರಲ್ಲಿ ಅವರಿಗೆ ಕುಣಿಗಲ್‍ಗೆ ವರ್ಗವಾಯಿತು. ನನ್ನ ನಂತರದ ಒಬ್ಬ ತಮ್ಮ ಮತ್ತು ಐದು ತಂಗಿಯರು ಜನಿಸಿದ್ದು ಅಜ್ಜಂಪುರದಲ್ಲೇ.
ಕಳೆದ 60 ವರ್ಷಗಳಲ್ಲಿ ಅಜ್ಜಂಪುರವನ್ನು ಮತ್ತೆ ನೋಡುವ ಅವಕಾಶ ನನಗೆ ಸಿಗಲಿಲ್ಲ.
ಪೋಸ್ಟ್ ಗಳನ್ನು ಓದುತ್ತಿದ್ದಂತೆ ನನ್ನ ಬಾಲ್ಯದಹಲವು  ನೆನಪುಗಳು ಕಣ್ಣಮುಂದೆ ಸುಳಿದು ಬಂದವು. ವಿಶೇಷವಾಗಿ ಸುಬ್ರಮಣ್ಯ ಶೆಟ್ಟಿಸತ್ಯನಾರಾಯಣ ಶೆಟ್ಟಿಶೆಟ್ರ ಸಿದ್ದಪ್ಪ ಹಾಗೂ ಕಲಾ ಸೇವಾ ಸಂಘ.
ನನಗೆ ಒಂದು ಮಾಹಿತಿ ಬೇಕು. ಅಜ್ಜಂಪುರ ಕೃಷ್ಣಸ್ವಾಮಿಯವರ ತಂದೆಯ ಹೆಸರೇನು?
ನೀವು ಸಲ್ಲಿಸುತ್ತರುವ ಸೇವೆಗಾಗಿ ವಂದನೆಗಳು. ನಿಮ್ಮ ಈ ಬ್ಲಾಗ್‍ಗೆ ಲೇಖನಗಳನ್ನು ಹೇಗೆ ಕಳಿಸುವುದು?

6 ನವೆಂಬರ್ 2019
ಆತ್ಮೀಯ ರಾಘವನ್ ರಿಗೆ ನಮಸ್ಕಾರಗಳು.
ನಾನು ಬ್ಲಾಗ್ ಮಾಡಿದ್ದು ಇಂದು ಸಾರ್ಥಕ ಎನಿಸಿತು. ಅದೇ ಹೊತ್ತಿಗೆ ತಂತ್ರಜ್ಞಾನಕ್ಕೆ ಕೂಡ ಧನ್ಯವಾದ. ಕೃಷ್ಣಸ್ವಾಮಿಯವರ ಬಗೆಗಿನ ವಿವರಗಳು ಮೇಲಿನ ಕೊಂಡಿಯಲ್ಲಿ ದೊರಕುವುದು. ನಾಳೆ ಕರೆ ಮಾಡುವೆ. 

ಶ್ರೀ ರಾಘವನ್ ರಿಗೆ ಈ ಬ್ಲಾಗ್ ದೊರಕಿದಾಗ ಉಂಟಾದ ಸಂತಸವು ಅವರ ಪತ್ರದಲ್ಲಿ ವ್ಯಕ್ತವಾಗಿದೆ. ಈ ಕಾರಣಕ್ಕೆ ಸಂಭಾಷಣೆಯನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ. ಕನ್ನಡದಲ್ಲಿ ಟೈಪ್ ಮಾಡುವುದನ್ನೂ ಇತ್ತೀಚಿಗೆ ಕಲಿತು, ತಮ್ಮ ನೆನಪುಗಳನ್ನು ಸುಂದರವಾಗಿ ದಾಖಲಿಸಿದ್ದಾರೆ. ರಾಜ್ಯೋತ್ಸವದ ಮಾಸದಲ್ಲಿ ಇದೊಂದು ವಿಶೇಷವೇ ಸರಿ. ಅವರು ಮಾತು ನೀಡಿದಂತೆ, ತಮ್ಮ ಲೇಖನವನ್ನೂ ಕಳಿಸಿದ್ದಾರೆ. ಪ್ರತಿ ತಿಂಗಳ 1ನೇ ದಿನಾಂಕ ಲೇಖನವನ್ನು ಪ್ರಕಟಿಸುವುದಾಗಿ ತಿಳಿಸಿದ್ದೆ. ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎನ್ನುವುದೇನು ಸುಳ್ಳಲ್ಲ. ಅಂಥ ಭಾವನೆಗಳು ಎಲ್ಲರಲ್ಲಿಯೂ ಇರುತ್ತವೆ. ಶ್ರೀ ರಾಘವನ್ ರ ಅಭಿಮಾನ ದೊಡ್ಡದು. ಈ ಬ್ಲಾಗ್ ನ ಪ್ರಕಟಣಾ ಕಾರ್ಯದಲ್ಲಿ ಇದರ ಸವಿನೆನಪು ನನ್ನ ಸ್ಮರಣೆಯಲ್ಲಿ ಸದಾ ಇರುತ್ತದೆ.
-      ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ

-0-0-0-0-0-0-0-0-0-0-

ನನ್ನ ನೆನಪಿನ ಅಜ್ಜಂಫುರ

ಕೆ ಎಸ್ ರಾಘವನ್


ಕೆಲವು ವೈಯಕ್ತಿಕ ವಿವರಗಳು
ಶಾಲಾ ವಿದ್ಯಾಭಾಸ ಅಜ್ಜಂಪುರ, ಎಸ್ ಎಸ್ ಎಲ್ ಸಿ:
1959 ರಲ್ಲಿ ಎಸ್ ಎಸ್ ಡಿ ಬಿ ಹೈ ಸ್ಕೂಲ್ ನಿಂದ
ಬಿ ಇ , ಮೆಕ್ಯಾನಿಕಲ್,1966 ರಲ್ಲಿ, ಬಿ ಡಿ ಟಿ ಕಾಲೇಜ್, ದಾವಣಗೆರೆ
ಪ್ರಥಮ ಹುದ್ದೆ: ಮಣಿಪಾಲ್ ಇಂಜಿನಿಯರಿಂಗ್ ಕಾಲೆಜ್,ಅಧ್ಯಾಪಕನಾಗಿ
ಎಮ್ ಟೆಕ್, ಐ ಐ ಟಿ , ಕಾನ್ಪುರ , 1971
ಪಿ ಎಚ್ ಡಿ , ಐ ಐ ಟಿ ಕಾನ್ಪುರ 1976
ವಿಶೇಷತೆ: Structural Mechanics
1978 ರಿಂದ ಇಂದಿನ ವರೆಗೆ ಹೈದರಾಬಾದ್‍ನಲ್ಲಿ ನಿವಾಸ
2001ರ ವರೆಗೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ನಲ್ಲಿ ಕೆಲಸ
2002ರಿಂದ ಇಂದಿನವರೆಗೆ ಸೈಂಟ್ (CYIENT) ಲಿಮಿಟೆಡ್ ಅನ್ನುವ ಸಂಸ್ಥೆಯಲ್ಲಿ ಕೆಲಸ
ಪತ್ನಿ: ಡಾ| ಕುಮುದ ರಾಘವನ್, ಖಾಸಗಿ ವೈದ್ಯೆ
ಮಗಳು ಮಾನಸ ಅಮೆರಿಕಾದಲ್ಲಿ, ಮಗ ಅಪೂರ್ವ್ ನಮ್ಮ ಜೊತೆಯಲ್ಲಿ

-0-0-0-0-0-0-0-0-0-0-

ನಮ್ಮ ತಂದೆಗೆ ಅಜ್ಜಂಪುರಕ್ಕೆ ವರ್ಗವಾದಾಗ ನಾನು ಆರು ತಿಂಗಳ ಮಗುಅದು 1946ನೇ ಇಸವಿಯಲ್ಲಿ.ನಮ್ಮತಂದೆ, ಕೆ ಎ ಶ್ರೀನಿವಾಸನ್, ಮೈಸೂರು ಸರ್ಕಾರದ ಪಶುಪಾಲನಾ ವಿಭಾಗದಲ್ಲಿ ಕೆಲಸದಲ್ಲಿದ್ದರು. ಕಛೇರಿ ತರೀಕೆರೆ ರಸ್ತೆಯಲ್ಲಿರುವ ಅಮೃತಮಹಲ್ ಫ಼ಾರ್ಮ್‍ನಲ್ಲಿ. ನನ್ನ ಬಾಲ್ಯ ಅಲ್ಲೇ ಕಳೆಯಿತು. 1959ರಲ್ಲಿ ಕಾಲೇಜ್  ವಿದ್ಯಾಭಾಸಕ್ಕಾಗಿ ನಾನು ಬೆಂಗಳೂರಿಗೆ ಹೋಗಬೇಕಾಯ್ತು. ಅದೇ ವರ್ಷದಲ್ಲಿ ನಮ್ಮತಂದೆಗೆ ಕುಣಿಗಲ್ಗೆ ವರ್ಗವಾಯಿತು. ಕಳೆದ ಅರವತ್ತು ವರ್ಷಗಳಲ್ಲಿ ನನಗೆ ಅಜ್ಜಂಪುರವನ್ನುಮತ್ತೆನೋಡುವಅವಕಾಶಕೂಡಿಬರಲಿಲ್ಲ. (ಪ್ರಯತ್ನ ಕೂಡ ಮಾಡಲಿಲ್ಲ).

ಆ ಕಾಲದಲ್ಲಿ ಅಜ್ಜಂಪುರ ಸುಮಾರು 5000 ಜನಸಂಖ್ಯೆಯ ಹೋಬ್ಳಿ. ಎರಡು ವಿಭಾಗಗಳುಪೇಟೆ ಮತ್ತು ಕೋಟೆ. ಚಿಕ್ಕಊರು. ಎಲ್ಲರಿಗೂ ಎಲ್ಲರೂ ಗೊತ್ತು. ಅವಶ್ಯಕತೆಯ ವ್ಯವಸ್ಥೆಗಳು ತುಂಬಾಕಡಿಮೆ. ಆಗಾಗ ಟೆಂಟ್ಸಿನೆಮಾ – ವರ್ಷಕ್ಕೆ ಮೂರು ಅಥವಾ ನಾಲ್ಕು ತಿಂಗಳು ಮಾತ್ರಬೇಡರ ಕಣ್ಣಪ್ಪ, ಹರಿಭಕ್ತ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಪ್ರೇಮದ ಪುತ್ರಿ ಮೊದಲಾದ ಆ ಕಾಲದ ಪ್ರಸಿದ್ಧ ಚಲನಚಿತ್ರಗಳನ್ನು ನಾನು ನೊಡಿದ್ದು ಟೆಂಟ್ ಸಿನೆಮಾದಲ್ಲಿಯೇ.

ಹತ್ತಿರದ ಪೆಟ್ರೋಲ್ಬಂಕ್ ಇರೋ ಊರು ಎಂದರೆ ಕಡೂರು. .ಹತ್ತಿರದ ಕೋರ್ಟ್ ತರೀಕೆರೆಯಲ್ಲಿ. ಊರನ್ನು ಗಾಳಿ ಅಜ್ಜಂಪುರ ಎಂದು ಕರೆಯುತ್ತಿದ್ದರು (ಜೊತೆಗೆ ಸುಳ್ಳು ಬಾಣಾವರ, ಕಳ್ಳ ಅರಸೀಕೆರೆ)

ಪ್ರತಿ ದಿವಸ ಎರಡು ರೈಲು ಬೆಂಗಳೂರಿನ ಕಡೆಗೆ ಮತ್ತು ಎರಡು ರೈಲುಗಳು ದಾವಣಗೆರೆಯ ಕಡೆಗೆ ಅಜ್ಜಂಪುರದ ಮೂಲಕ ಹೋಗುತ್ತಿದ್ದವು. ಆಮೇಲೆಮೀರಜ್ಎಕ್ಸ್ಪ್ರೆಸ್ ಬಂತು. ಆದರೆ ಅದು ಅಜ್ಜಂಪುರದಲ್ಲಿ ನಿಲ್ಲುತ್ತಿರಲಿಲ್ಲ.
ಮಂಗಳವಾರಸಂತೆ. ಸೊಕ್ಕೆಗೊಂಡೇದಹಳ್ಳಿಬಗ್ಗವಳ್ಳಿಚೆನ್ನಾಪುರ, ಬುಕ್ಕಾಂಬುದಿ ಮೊದಲಾದ ಸುತ್ತಮುತ್ತಲಿನ ಹಳ್ಳಿಗಳಿಂದ ತರಕಾರಿ ಮತ್ತು ಇತರ ಖಾದ್ಯಪದಾರ್ಥಗಳು ಮಾರಾಟಕ್ಕೆ ಬರುತ್ತಿದ್ದವು. ಉಳಿದ ದಿನಗಳಲ್ಲಿ ದಿನನಿತ್ಯದ ಅವಶ್ಯಕತೆಗಳಿಗೆ ನಾಲ್ಕೋಐದೋ ದಿನಸಿ ಅಂಗಡಿಗಳಿದ್ದವು.

ಆ ಅಂಗಡಿಗಳಲ್ಲಿ ಅತಿದೊಡ್ಡದು ಮತ್ತು ಪ್ರಾಮುಖ್ಯವಾದುದು ಸುಬ್ರಮಣ್ಯಶೆಟ್ಟಿ ಮತ್ತು ಸಹೋದರರಿಗೆ ಸೇರಿದ್ದು. ನನಗೆ ಜ್ಞಾಪಕವಿರುವ ಹಾಗೆ ಸುಬ್ರಮಣ್ಯಶೆಟ್ಟಿಸತ್ಯನಾರಾಯಣಶೆಟ್ಟಿ ಮತ್ತು ಲಕ್ಷ್ಮಣ ಮೂರು ಸಹೋದರರು ಅಂಗಡಿಯ ಜಂಟಿ ಮಾಲೀಕರು. ಅವರದು ಒಂದು ಪುಸ್ತಕದ ಅಂಗಡಿ ಕೂಡಾ ಇತ್ತು. ಓದುಗರಿಗೆ ತಿಳಿದಿರುವಂತೆ 50ರ ದಶಕದಲ್ಲಿ (ನಂತರವೂ ಕೂಡಾ) ಸುಬ್ರಮಣ್ಯ ಶೆಟ್ಟರನ್ನು ಊರಿನ ಪ್ರಥಮ ನಾಗರಿಕ ಎಂದು ಪರಿಗಣಿಸಲಾಗಿತ್ತು. ಅವರ ಮನಸ್ಸು ಯಾವಾಗಲೂ ಸಮಾಜ ಸೇವೆ ಮತ್ತು ಊರಿನ ಅಭಿವೃದ್ಧಿಗಳ ಕಡೆ ಇರುತ್ತಿತ್ತು. 

ಅವರು ಬಹುಕಾಲ ಊರಿನ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ನಮ್ಮ ತಂದೆಯ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದರು (ನಮ್ಮ ತಂದೆ ಶೆಟ್ಟರಿಗಿಂತ ಮೂರು ವರ್ಷ ಚಿಕ್ಕವರು). ನಮ್ಮ ತಂದೆಯನ್ನು ಅವರ ಅನಧಿಕೃತ ಟೈಪಿಸ್ಟ್ ಎಂದೇ ಹೇಳಬಹುದು. ಶೆಟ್ಟರುಜಿಲ್ಲೆಯ ಹಾಗೂ ರಾಜ್ಯದ ಮೇಲಿನ ಅಧಿಕಾರಿಗಳಿಗೆ ಪತ್ರಗಳನ್ನು ಬರೆಯುವ ಪದ್ದತಿಯಿಟ್ಟುಕೊಂಡಿದ್ದರು.  ಈ ಪತ್ರಗಳು ಅಜ್ಜಂಪುರಕ್ಕೆ ಬೇಕಾಗುವಂತಹ ಸುಧಾರಣೆಗಳ ಬಗ್ಗೆ ಇರುತ್ತಿದ್ದವು. ಅಜ್ಜಂಪುರಕ್ಕೆ ಟಾರ್ ರಸ್ತೆ ಬಂದಿದ್ದು ಅವರ ಇಂತಹ ಒಂದು ಪ್ರಯತ್ನದಿಂದಲೇ ಎಂದು ಹೇಳಬಹುದು.  ಬರೆಯ ಬೇಕಾದ ವಿಷಯವನ್ನು ಕನ್ನಡದಲ್ಲಿ ಬರೆದು ಕೊಡುತ್ತಿದ್ದರು. ಅದನ್ನು ನಮ್ಮ ತಂದೆ ಅನುವಾದಿಸಿಕೊಂಡು ಇಂಗ್ಲೀಷ್‍ನಲ್ಲಿ ಟೈಪ್ ಮಾಡುತ್ತಿದ್ದರು. ಸುಬ್ರಮಣ್ಯ ಶೆಟ್ಟರ ತಮ್ಮ ಸತ್ಯನಾರಯಣ ಶೆಟ್ಟರು ಸಂಗೀತ ಪ್ರೇಮಿ. ಊರಿನಲ್ಲಿ ಪ್ರದರ್ಶಿತವಾಗುವ ನಾಟಕಗಳಲ್ಲೆಲ್ಲಾ ಹಾರ್ಮೋನಿಯಮ್ ವಾದನ ಅವರದೇ.
ಮತ್ತೊಬ್ಬ ಗಣ್ಯ ವ್ಯಕ್ತಿ ಶೆಟ್ರ ಸಿದ್ದಪ್ಪನವರು. ಅವರು ಉದಾರಶೀಲ ಮನಸ್ಸಿನ ಲೋಕೋಪಕಾರಿ ಮನುಷ್ಯರು. ಅವರ ಹೆಸರಿನ ಪ್ರೌಢಶಾಲೆಯಲ್ಲೇ (SSDBHS) ನನ್ನ ಮೂರು ವರ್ಷದ ಪ್ರೌಢ ವಿದ್ಯಾಭಾಸ ಸಾಗಿದ್ದು. 1956ರಲ್ಲಿ ಹೊಸ ಕಟ್ಟಡ ಪ್ರಾರಂಭವಾದಾಗ ನಾನು ಒಂಬತ್ತನೇ ತರಗತಿಯಲ್ಲಿದ್ದೆ.

ಆಗ ಎಸ್ ವಿ ನರಸಿಂಹ ಮೂರ್ತಿಯವರು ಮುಖ್ಯೋಪಧ್ಯಾಯರಾಗಿದ್ದರು. ಅವರು ವಿಜ್ಞಾನ ಕಲಿಸುತ್ತಿದ್ದರು. ಅವರು ಪಾಠಮಾಡುವ ರೀತಿ ತುಂಬಾ ವಿಶಿಷ್ಟವಾಗಿತ್ತು. ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಉಂಟಾಗುವ ಹಾಗೆ ಕಲಿಸುತಿದ್ದರು. ಅವರು ಕ್ರಿಕೆಟ್ ಆಟದ ಅಭಿಮಾನಿ ಹಾಗು ಸ್ವತಃ ಒಳ್ಳೆ ಆಟಗಾರರು.  ಅವರಿಂದ ಕಲಿತ ಕೆಲವು ಭೌತಶಾಸ್ತ್ರದ ಪಾಠಗಳು ನನಗೆ ಈಗಲೂ ನೆನಪಿದೆ.

ಕನ್ನಡ ಪಂಡಿತರಾದ ಕೃಷ್ಣಭಟ್ಟರನ್ನು ನಾನು ಯಾವಗಲೂ ಮರೆಯಲಾರೆ. ಯಾಕೆಂದರೆ ನನ್ನಮೇಲೆ ಅವರಿಗೆ ಯಾವಾಗಲೂ ಕೋಪ. ಕಾರಣ: ನಾನು ಕನ್ನಡ ಪಾಠಗಳ ಕಡೆ ಸಾಕಷ್ಟು ಗಮನ ಕೊಡುತ್ತಿರಲಿಲ್ಲ. ಚರಿತ್ರೆ ಭೂಗೋಳದ  ಮೇಷ್ಟ್ರು ಡಿ ಎಸ್ ಚಂದ್ರಶೇಖರ್ ಹಾಗು ವಿಜ್ಞಾನದ ಮತ್ತೊಬ್ಬ ಮೇಷ್ಟ್ರು ಎಸ್ ಕೃಷ್ಣಮೂರ್ತಿ ಯವರನ್ನು ನಾನು ಯಾವಾಗಲೂ ನೆನೆಸಿಕೊಳ್ಳಿರುತ್ತೇನೆ. ಹಿಂದಿ ಪಂಡಿತರು ಎಚ್ ಜಿ ಶಾಸ್ತ್ರಿ ಮತ್ತು ಗಣಿತದ ಮೇಷ್ಟ್ರು ಎಸ್ ಆರ್ ಈಶ್ವರಪ್ಪ ಕೂಡ ನನಗೆ ಜ್ಞಾಪಕವಿರುವ ಇತರ ಅಧ್ಯಾಪಕರು.

ನನಗೆ ಜ್ಞಾಪಕವಿರುವ ಸಹಪಾಠಿಗಳು ಎಸ್ ಎನ್ ಮೂರ್ತಿ, ಮಹೇಶ್ವರಪ್ಪ, ಎ ಪಿ ನಾಗರಾಜ, ಕೆ ನಾರಾಯಣ, ಎ ವಿ ರಾಜಗೋಪಾಲ್, ಆರ್ ಟಿ ವೆಂಕಟೇಶ ಮೂರ್ತಿ. ಇವರಲ್ಲಿ ಯಾರ ಬಗ್ಗೆಯೂ ಈಗ ನನಗೆ ಯಾವ ಮಾಹಿತಿಯೂ ಇಲ್ಲ. ಇವರಲ್ಲಿ ಎಸ್ ಎನ್ ಮೂರ್ತಿ ತುಂಬಾ ಬುದ್ಧಿಶಾಲಿ. ದಾವಣಗೆರೆಯಲ್ಲಿ ಡಿಪ್ಲೊಮಾ ವಿದ್ಯಾಭಾಸ ಮಾಡಿದ. ಎ ಪಿ ನಾಗರಾಜನ ತಂದೆ ಎ ಪುಟ್ಟಪ್ಪ ಮಾಧ್ಯಮಿಕ ಶಾಲೆಯಲ್ಲಿ ಮೇಷ್ಟ್ರು. ನಾರಾಯಣನ ತಂದೆಯವರ ಜವಳಿ ಅಂಗಡಿಯಿತ್ತು. ಮಹೇರ್ಶ್ವರಪ್ಪನ ತಂದೆಯವರದೂ ಒಂದು ದಿನಸಿ ಅಂಗಡಿಯಿತ್ತು.

ಊರಲ್ಲಿ ಒಂದು ಆಸ್ಪತ್ರೆ. ಚಿಕ್ಕ ಆಸ್ಪತ್ರೆಯಾದರೂ ಜನಗಳಿಗೆ ಒಳ್ಳೆಯ ಸೇವೆ ದೊರಕುತ್ತಿತ್ತು. ಅಲ್ಲಿ ಸೇವೆ ಸಲ್ಲಿಸಿದಇಬ್ಬರು ಒಳ್ಳೆ ವೈದ್ಯರ ಜ್ಞಾಪಕ ಚೆನ್ನಾಗಿ ಇದೆ ನಂಗೆ. ಒಬ್ಬರು ಎಚ್ ಎಸ್ ಅಯ್ಯರ್. ಅವರು ನಮ್ಮ ಮನೆಗೆ ಒಳ್ಳೆ ಸ್ನೇಹಿತರಾಗಿದ್ದರು.ಇನ್ನೊಬ್ಬರು ಶ್ರೀಮತಿ ಗೌರಮ್ಮ. ಅವರದು ತುಂಬಾ ಮೃದು ಮನಸ್ಸು ಮತ್ತು ಒಳ್ಳೆ ಕೈಗುಣ. ನನ್ನ ನಂತರ ಹುಟ್ಟಿದ ಒಬ್ಬ ತಮ್ಮ ಮತ್ತು ಐದು ತಂಗಿಯರನ್ನು ಪ್ರಪಂಚಕ್ಕೆ ತಂದವರು ಗೌರಮ್ಮನವರೇ.

ಕಲಾಭಿಮಾನಿಗಳಿಗಾಗಿ ಕಲಾ ಸೇವಾ ಸಂಘ ಸ್ಥಾಪಿತವಾಗಿತ್ತು. ಸಂಘದ ತನ್ನದೇಆದ ಒಂದು ಶಾಶ್ವತ ಕಟ್ಟಡ ವಿತ್ತು. ವರ್ಷಕ್ಕೊಮ್ಮೆ ರಾಜ್ಯ ಮಟ್ಟದ ನಾಟಕ ಸ್ಪರ್ದೆ ನಡೆಯುತ್ತಿತ್ತು. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ ದೂರದ ಊರುಗಳಿಗೆ ಸೇರಿದ ಅನೇಕ ನಾಟಕ ಕಂಪನಿಗಳು ಭಾಗವಹಿಸುತ್ತಿದ್ದವು. ಇಷ್ಟೇ ಅಲ್ಲದೆ ಸಂಘವು ಕೂಡ ಬೇರೆ ಊರಿನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿತ್ತು. ನಮ್ಮ ಪ್ರೌಢಶಾಲೆಯ ಡ್ರಿಲ್ ಮೇಷ್ಟ್ರು ಎಮ್ ಎಮ್ ಈಶ್ವರಪ್ಪನವರು ಮುಖ್ಯ ಕಾರ್ಯನಿರ್ವಾಹಕರಾಗಿದ್ದರು.ಪ್ರತಿವರ್ಷ ಗಣೇಶೋತ್ಸವ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸಂಗೀತ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು.

ಊರಿನ ಗ್ರಾಮದೇವತೆ ಕಿರಾಳಮ್ಮ. ಪ್ರತಿವರ್ಷ ಮೂರು ದಿವಸದ ಜಾತ್ರೆ ನಡೆಯುತ್ತಿತ್ತು. ಅದಕ್ಕಿಂತ ಹೆಚ್ಚಿನದಾಗಿ ಸುಮಾರು ಎಂಟು ಮೈಲಿ ದೂರದಲ್ಲಿರುವ ಅಂತರಗಟ್ಟೆ ಜಾತ್ರೆ ತುಂಬಾ ಜನಪ್ರಿಯವಾಗಿತ್ತು. ಆ ಜಾತ್ರೆ ಚಿಕ್ಕಮಗಳೂರು ಜಿಲ್ಲೆಯ ದೊಡ್ಡ ಜಾತ್ರೆಗಳಲ್ಲಿ ಒಂದಾಗಿತ್ತು. ಒಂದು ವಾರದ ಕಾಲ ನಡೆಯುವ ಈ ಜಾತ್ರೆಗೆ ಊರಿನ ಬಹುಪಾಲು ಜನಗಳು ಒಮ್ಮೆಯಾದರೂ ಹೋಗಿ ಬರುತ್ತಿದ್ದರು. 1958ನೇ ಇಸವಿಯಲ್ಲಿ ನಮ್ಮ ಮನೆಯವರೆಲ್ಲಾ ಅಲ್ಲಿಗೆ ಮಾಯಾ ಬಜ಼ಾರ್ (ಕನ್ನಡ ಡಬ್) ಚಿತ್ರ ನೋಡಲು ಹೋಗಿದ್ದು ಈಗಲೂ ಜ್ಞಾಪಕವಿದೆ.

ನಾನು ಅಜ್ಜಂಪುರದಲ್ಲಿದ್ದ ಕಾಲಾವಧಿಯೆಲ್ಲ ಸಿ ಬಿ ಎಸ್ (ಅಮೃತಮಹಲ್) ಫ಼ಾರ್ಮ್‍ನಲ್ಲೇ  ಕಳೆದಿದ್ದು. ಶಾಲೆಗೆ ಹೋಗಿಬರುವುದು ಫ಼ಾರ್ಮ್‍ನ ಎತ್ತಿನಗಾಡಿಯಲ್ಲಿ. ಫ಼ಾರ್ಮ್ ತುಂಬಾ ಚಿಕ್ಕ ಸ್ಥಳ. ಎಂಟು ಮನೆಗಳು ಮಾತ್ರ. ಅಜ್ಜಂಪುರದ ದಾರಿಯಲ್ಲಿ ಬಲಗಡೆಗೆ ಬಗ್ಗವಳ್ಳಿಗೆ ಹೋಗೊ ಒಂದು ಕಾಲುದಾರಿಯಿತ್ತು.  ಆ ಜಾಗದ ಒಂದು ಕೆಟ್ಟ ನೆನಪು ಯಾವಾಗಲೂ ಬರುತ್ತಿರುತ್ತೆ. ನಮ್ಮ ತಾತ ಅಲ್ಲಿ ನಡೆದು ಹೋಗುತ್ತಿದ್ದಾಗ ಬಗ್ಗವಳ್ಳಿಯಿಂದ ವೇಗದಿಂದ ಬರುತ್ತಿದ್ದ ಒಂದು ಎತ್ತಿನ ಗಾಡಿ ಅವರ ಮೇಲೆಹಾದು ಅವರ ಮೃತ್ಯುವಿಗೆ ಕಾರಣವಾಯಿತು.ಫ಼ಾರ್ಮ್‍ನಲ್ಲಿದ್ದ  ಸುಮಾರು ಹತ್ತು ಹನ್ನೆರಡು ಹುಡಗರು ಚಿಕ್ಕ ಪುಟ್ಟ ಆಟಗಳಲ್ಲಿ ಕಾಲಕಳೆಯತ್ತಿದ್ದೆವು. ಆ ಕಾಲದಲ್ಲಿ ಫ಼ಾರ್ಮ್‍ನಲ್ಲಿದ್ದ ಎಲ್ಲ ಹುಡುಗರೂ ಚೆನ್ನಾಗಿ ಓದಿ ಓಳ್ಳೆಯ ಪದವಿಗಳನ್ನು ಗಳಿಸಿ ಜೀವನದಲ್ಲಿ ಸಾಫಲ್ಯಗಳಿಸಿದರು.

ನನ್ನ ಹಾಗೆಯೇ ನನ್ನ ಅಣ್ಣನ  ಕಾಲೇಜ್‍ವರೆಗಿನ ವಿದ್ಯಾಭ್ಯಾಸ ಅಜ್ಜಂಪುರದಲ್ಲೇ. ಅವರೂ ನನ್ನ ಹಾಗೆಯೇ ಡಾಕ್ಟರೇಟ್ ಪದವಿ ಗಳಿಸಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದರು. ಈಗ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಇದನ್ನು ಮುಗಿಸುವ ಮುಂಚೆ ಅಜ್ಜಂಪುರದ ನೀರಿನ ಬಗ್ಗೆ ಒಂದು ಮಾತು ಹೇಳಲೇ ಬೇಕು. ಫ಼ಾರ್ಮ್‍ನಲ್ಲಿ ಬಾವಿ ನೀರು ಟ್ಯಾಂಕ್ ಮೂಲಕವಾಗಿ ಮನೆಗಳಿಗೆ ಸರಬರಾಜು ಆಗುತ್ತಿತ್ತು. ಸ್ನಾನಕ್ಕೆ ಹಾಗೂ ಅಡಿಗೆಗೆ ಹಾಗೂ ಕುಡಿಯಲು ಅದೇ ನೀರು. ಆ ಕಾಲದಲ್ಲಿ ನೀರನ್ನು ಪ್ರಾಕೃತಿಕ ರೂಪದಲ್ಲೇ ಉಪಯೋಗಿಸಬೇಕಾಗಿತ್ತು. ಯಾವ ಉಪಚಾರಕ್ಕೂ ಅವಕಾಶವಿರುತ್ತಿರಲಿಲ್ಲ. ನಾವು ಅಜ್ಜಂಪುರದಲ್ಲಿ ಬಳಸಿದ ನೀರು ತುಂಬಾ ಕ್ಷಾರ ಮತ್ತು ತುಂಬಾ ಗಡಸು. ಅಷ್ಟು ಕ್ಷಾರದ ನೀರನ್ನು ನಾನು ಜೀವನದಲ್ಲಿ ಮತ್ತೆ ಯಾವಾಗಲೂ ಬಳಸಿಲ್ಲ.

ಆ ನೀರಿನಲ್ಲಿ ಎಷ್ಟು ಫ಼್ಲೋರೈಡ್ ಅಂಶ ಇತ್ತೋ, ಯಾವ್ಯಾವ ರಾಸಾಯನಿಕ ಪದಾರ್ಥಗಳಿದ್ದವೋ ಅದು ದೇವರಿಗೇ ಗೊತ್ತು. ಏನೇ ಆಗ್ಲಿ, ಆ ನೀರಿನಿಂದ ನಮ್ಮ ಮನೆಯವರಿಗೆಲ್ಲಾ ಹಾನಿ ಎಷ್ಟೋ ಅಷ್ಟೇ ಉಪಕಾರವೂ ಆಗಿದೆ ಅನ್ನಿಸುತ್ತೆ. ಆ ನೀರಿನಿಂದ ನಮಗೆಲ್ಲಾ ರೋಗ ನಿರೋಧಕ ಶಕ್ತಿ ಬಂದಿರಬಹುದು. ನಾನು ಮತ್ತು ನನ್ನ ಒಡಹುಟ್ಟಿದ ಏಳು ಜನ ಈಗಲೂ ತುಂಬಾ ಆರೋಗ್ಯ ವಾಗಿದ್ದೀವಿ. ಈಗ ನನ್ನ ಅಣ್ಣನಿಗೆ ಎಂಬತ್ತು ವರ್ಷ. ನನ್ನ ಕೊನೇ ತಂಗಿಗೆ ಅರವತ್ತೆರಡು ವರ್ಷ.

          ಇದು ನನಗೆ ನೆನಪಿರುವ ನಾನು ಬಾಲ್ಯವನ್ನು ಕಳೆದ ಅಜ್ಜಂಪುರ. ನನ್ನ ಜೀವನಕ್ಕೆ ಬುನಾದಿಯಾದ ಅಜ್ಜಂಪುರ. ಇದನ್ನು ಬರೆಯಲು ಪ್ರೋತ್ಸಾಹಿಸಿದ ಶಂಕರ‍್ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.

-0-0-0-0-0-0-0-0-0-0-0-0-0-0-0-0-0-0-

ಕಾಮೆಂಟ್‌ಗಳು

  1. 9902872948
    ತುಂಬಸಿಗಸಾಗಿ ಬಿಡಿಸಿಕೊಂದಿದೆ
    ನೆನಪು.
    ನನಗೆ ಅಲ್ಲಿನ ಸರ್ಕಾರಿ
    ಪ್ರಥಮಿಕಶಾಲಿಗೆ
    ನನ್ನ ಶಿಕ್ಷಕಿಯ ಅನುಭವವನ್ನು
    ಹಂಚಿಕೊಳ್ಳಬೇಕೆಂಬ ಆಸೆ.
    ನಾನುELT ಪರಿಣಿತಿ ಹೊಂದಿದ್ದೇನೆ.
    ನಾನು ಅಲ್ಲೇ ಪ್ರಥಮಿಕಶಾಲೆ ಓದಿದ್ದು

    ಪ್ರತ್ಯುತ್ತರಅಳಿಸಿ
  2. ನಿಮ್ಮ ಸಾಮಯಿಕ ಪ್ರತಿಕ್ರಿಯೆಗೆ ಧನ್ಯವಾದಗಳು, ನಿಮ್ಮ ಫೋನ್ ನಂಬರನ್ನು ನಮೂದಿಸಿದ್ದೀರಿ. ಅದು ತುಂಬ ಸಹಾಯಕ. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಲು ಈ ವೇದಿಕೆ ಮುಕ್ತವಾಗಿದೆ. ನಿಮ್ಮ ಬರಹ ಹಾಗೂ ನಿಮ್ಮ ಚಿತ್ರ /ಊರಿಗೆ ಸಂಬಂಧಿಸಿದಂತೆ ಏನಾದರೂ ಚಿತ್ರಗಳಿದ್ದಲ್ಲಿ ಅದನ್ನೂ ನನ್ನ ಈ-ಮೇಲ್ ವಿಳಾಸ shankarajp@gmail.com ಇದಕ್ಕೆ ಕಳಿಸಿ. ನನ್ನ ಫೋನ್ ನಂಬರು 91485 72483.

    ಪ್ರತ್ಯುತ್ತರಅಳಿಸಿ
  3. ಶ್ರೀ ರಾಘವನ್ ರವರ ಅಜ್ಜಂಪುರದ ಬಾಲ್ಯದ ನೆನಪುಗಳು ಓದಿ ಖುಷಿಯಾಯಿತು. ಬದುಕಲ್ಲಿ ತಾವೆಷ್ಟೇ ದೊಡ್ಡವರಾಗಿ ಬೆಳೆದರೂ, ನಮ್ಮೂರಿನಲ್ಲಿ ತಮಗಾದ ತಮ್ಮ ಬಾಲ್ಯದ ಅನುಭವಗಳನ್ನು, ನೆನಪುಗಳನ್ನು, ತಮ್ಮ ಜೀವನದ ಹೆಮ್ಮೆ ಮತ್ತು ಅಮೌಲ್ಯಗಳೆಂಬ ಭಾವನೆಗಳಿಂದ ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ಹಂಚಿ ಕೊಂಡಿದ್ದಾರೆ. ಅದನ್ನು ಅವರ ಮಾತು,ಬರಹಗಳಲ್ಲಿ ನೋಡಿ ಅವರ ಬಗ್ಗೆ ಗೌರವ ಹೆಮ್ಮೆ ಮೂಡಿತು. ಅವರಂತೆಯೇ ನಮಗೆಲ್ಲರಿಗೂ ಹಾಗೇ. ನಮ್ಮೂರಿನ ನಮ್ಮ ಅನುಭವಗಳು ಅದೆಷ್ಟೇ ಸೀಮಿತವಾಗಿದ್ದರೂ ನಮ್ಮೂರಿನ ನೆನಪು, ನಮ್ಮ ತಂದೆ ತಾಯಿ, ಹತ್ತಿರದ ಬಂಧುಗಳ ಪ್ರೀತಿಯಷ್ಟೇ ಸಂತಸ ನೀಡುವಂತಹದ್ದು. ಅವರ ಆ ಭಾವನೆಯಲ್ಲಿ ನಾವೂ ಸಂತಸದಲ್ಲಿ ಪಾಲ್ಗೊಂಡಿದ್ದೇವೆ. ಅವರೂ ನಮ್ಮವರೆಂಬ ಬಂಧುಭಾವ ಈ ಬ್ಲಾಗ್ ನೀಡಿದೆ. ನಿಮಗೂ,ಶ್ರೀ ರಾಘವನ್ ರವರಿಗೂ ಪ್ರೀತಿಪೂರ್ವಕ ನಮನಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಲಕ್ಷ್ಮೀನಾರಾಯಣರವರೇ, ನನ್ನ ಲೇಖನದ ಬಗ್ಗೆ ನೀವು ತುಂಬಾ ಸವಿಮಾತುಗಳನ್ನು ಹೇಳಿದ್ದೀರ. ನಿಮಗೆ ಹೃದಯಪೂರ್ವಕ ಧನ್ಯವಾದಗಳು. ಜೀವನದ ಮೊದಲ ಹದಿಮೂರು ವರ್ಷಗಳನ್ನು ಕಳೆದ ಜಾಗದ ಮುಖ್ಯ ನೆನೆಪುಗಳು ಯಾವಾಗಲೂ ಹಸಿರಾಗೆ ಇರುತ್ತವೆ. ನನ್ನ ಬಗ್ಗೆ ನಿಮಗೆ ಗೌರವ ಮತ್ತು ಹೆಮ್ಮೆ ಮೂಡಿದ್ದು ನಿಮ್ಮ ದೊಡ್ಡ ಮನಸ್ಸಿನಿಂದಾಗಿ. ನಿಮ್ಮ ಬಗ್ಗೆ ಕೂಡ ನನಗೆ ಅಷ್ಟೇ ಗೌರವ ಮೂಡಿದೆ. ಮತ್ತೊಮ್ಮೆ ವಂದನೆಗಳೂ

      ಅಳಿಸಿ
  4. ರಾಘವನ್ : ಅಜ್ಜಂಪುರದಜೀವನಾನುಭವ  :

    ಒಳ್ಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ, ರಾಘವನ್. ಅವರಿಗೆ ಹೃತ್ಪೂರ್ವಕ ಅಭಿವಂದನೆಗಳು.
    ಸಾಹಿತ್ಯದ ಪರಿಭಾಷೆಯಲ್ಲಿ, ಇಂತಹ ಬರೆಹಗಳನ್ನು ಹಸಿ-ಹಸಿ ವರ್ಣನೆ, ಬರೆಹ ಎನ್ನುವುದಿದೆ. ಇಂತಹ ಬರೆಹಗಳ ಸೊಗಸೇ ಬೇರೆ. ಸೊಗಡೇ ಬೇರೆ. ಲೋಕವೇ ಬೇರೆ.

    ಅಜ್ಜಂಪುರದಲ್ಲಿ ಹುಟ್ಟಿ, ಶಿಕ್ಷಣ - ಉದ್ಯೋಗ - ಜೀವನದ ಪ್ರವಾಹಗಳಲ್ಲಿ ಯಾವುದೋ "ದಡ" ಸೇರಿಬಿಟ್ಟಿರುವ ನನ್ನಂತಹವರ ಜೀವನಾನುಭವಗಳಿಗೂ - ರಾಘವನ್ ಅಂತಹವರ ನೆನಪುಗಳಿಗೂ ಸಾಮ್ಯವೂ ಇರುತ್ತದೆ. ರಾಘವನ್ ಅಜ್ಜಂಪುರದಲ್ಲಿ ಹುಟ್ಟದಿದ್ದರೇನಂತೆ, ಅವರ ನೇಟೀವ್ ಪ್ಲೇಸ್ ಅಜ್ಜಂಪುರವೇ. ಅವರ ಒಡಹುಟ್ಟಿದವರನೇಕರ ಜನ್ಮಸ್ಥಳ ಅಜ್ಜಂಪುರವೇ ಆಗಿಬಿಟ್ಟಿರುತ್ತದೆ.

    ಶಂಕರ ಅಜ್ಜಂಪುರ ಅವರು ಫೋನ್ ಮಾಡಿ ರಾಘವನ್ ಅವರ ಬರೆಹ ಕುರಿತಂತೆ ಹೇಳಿದಾಗ, ಕುತೂಹಲದಿಂದ ನಾನು ಕೇಳಿದ್ದು ಅವರ ಕ್ಲಾಸ್‌ಮೇಟ್ಸ್ ಬಗ್ಗೆಯೇ. ನನ್ನ ದಾಯಾದಿಗಳೂ ಅವರ ಕ್ಲಾಸ್‌ಮೇಟ್ಸ್ ಆಗಿದ್ದಿರಬಹುದು, ಆದರೆ ಎಲ್ಲ ಕ್ಲಾಸ್‌ಮೇಟ್ಸ್ ಹೆಸರುಗಳನ್ನೂ ಬರೆಯಲು ಸಾಧ್ಯವಿಲ್ಲವಲ್ಲ. "ಕೆ.ನಾರಾಯಣ" ಎಂದರೆ ಪಿ.ಖಂಡೋಜಿರಾಯರ ಮಗ ನಾರಾಯಣ ರಾವ್ ಇರಬಹುದು (ಅವರು ಕೆ.ಎಸ್.ಎಸ್.ಬಾಲಿಕಾ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ). "ಎಸ್.ಆರ್.ಈಶ್ವರಪ್ಪ" ನವರು ನಮಗೂ (ನನಗೆ, ಶಂಕರ ಅಜ್ಜಂಪುರ, ಇತ್ಯಾದಿ ಗೆಳೆಯರಿಗೆ) ಅಧ್ಯಾಪಕರಾಗಿದ್ದರು. ಅವರ ವಿಶಿಷ್ಟ ವ್ಯಕ್ತಿತ್ವ ಅವರನ್ನು ಎಲ್ಲ ವಿದ್ಯಾರ್ಥಿಗಳೂ ನೆನಪಿಟ್ಟುಕೊಳ್ಳುವಂತೆ ಮಾಡಿದೆ.
    ಕಲಾ ಸೇವಾ ಸಂಘ, ಕಿರಾಳಮ್ಮನ ತೇರು, ಪ್ರಖ್ಯಾತ ಅಂತರಘಟ್ಟೆಯ ಜಾತ್ರೆ (ಅಲ್ಲಿ ನೋಡಿದ ಟೆಂಟ್ ಸಿನೇಮಾಗಳು) ರಾಘವನ್ ಅವರಂತೆಯೇ ನಾವು ಯಾರೂ ಮರೆಯಲಾಗುವುದಿಲ್ಲ.
    ನಿಜ, ನಮ್ಮೂರಿನ ನೀರಿನ ವಿಷಯ ಭಯಾನಕವಾದುದೇ. ಅಲ್ಲಿಯೇ ಹುಟ್ಟಿ ಬೆಳೆದ ನಮಗೆ ನದೀ ನೀರಿನ ಊರುಗಳಿಗೆ ಹೋದರೆ, ಆ ನೀರು ಹೊಸ ಅನುಭವವನ್ನೇ ನೀಡುತ್ತಿತ್ತು. ಮೈಮೇಲೆ ಹಾಕಿಕೊಂಡ ಸೋಪು ಎಷ್ಟು ನೀರು ಹಾಕಿಕೊಂಡರೂ ಹೋಗುತ್ತಲೇ ಇರಲಿಲ್ಲ. ನಮ್ಮೂರಿನ "ಉಪ್ಪು" ನೀರಿಗೆ ಎಷ್ಟೆಷ್ಟು ಸೋಪು ಹಾಕಿಕೊಂಡರೂ, ಅದಷ್ಟನ್ನೂ ಆಪೋಶನ ತೆಗೆದುಕೊಳ್ಳಲು ಒಂದೇ ತಂಬಿಗೆ ನೀರು ಸಾಕಾಗುತ್ತಿತ್ತು. ನದೀ ನೀರಿನ ಊರುಗಳಿಂದ ಬಂದ ಬಂಧು-ಮಿತ್ರರಂತೂ ನಮ್ಮೂರಿನಲ್ಲಿ ಇದ್ದಷ್ಟು ದಿನವೂ ಬೈದುಕೊಳ್ಳುತ್ತಿದ್ದರು.
    ಶ್ರೀಯುತ ಎಸ್.ಸುಬ್ರಹ್ಮಣ್ಯ ಶೆಟ್ಟರಿಗೆ ಟೈಪಿಂಗ್ ಮಾಡಿಕೊಟ್ಟು (ಜೊತೆಗೆ ಅನುವಾದವನ್ನೂ ಮಾಡಿ) ಸಮಾಜೋಪಯೋಗಿ ಕೆಲಸಗಳಲ್ಲಿ ಸಹಕಾರ ನೀಡಿದ (ರಾಘವನ್ ಅವರ ತಂದೆ) ಕೆ.ಎ.ಶ್ರೀನಿವಾಸನ್ ಅವರ ಮತ್ತು ಅಂತಹವರ ಸೇವೆ ಸ್ಮರಣೀಯ.
    ೯೮ ವರ್ಷ ವಯಸ್ಸಿನ ನಮ್ಮ ಚಿಕ್ಕಪ್ಪ ಎಸ್. ಸತ್ಯನಾರಾಯಣ ಶೆಟ್ಟರು (ಇಂದಿಗೂ ಕಣ್ಣು - ಕಿವಿ - ನೆನಪಿನ ಶಕ್ತಿ ಚೆನ್ನಾಗಿಯೇ ಇರುವ ಆರೋಗ್ಯದ) ಹಿರಿಯ ಜೀವ. ಅವರಿಗೆ ಮಾತ್ರ ಕೆ.ಎ.ಶ್ರೀನಿವಾಸನ್ ಅವರ ನೆನಪು ಚೆನ್ನಾಗಿರಬಹುದು.

    ಅಜ್ಜಂಪುರ ನೋಡಲು, ಕಳೆದ ಅರವತ್ತು ವರ್ಷಗಳಲ್ಲಿ ರಾಘವನ್ ಅವರಿಗೆ ಅವಕಾಶವೇ ಆಗಿಲ್ಲ. ಸಹಜ. ಬಂಧುಗಳಿದ್ದಿದ್ದರೆ, ಅಂತಹ ಸಂದರ್ಭಗಳು ಇರುತ್ತಿದ್ದವೋ ಏನೋ.
    ಏನೇ ಇರಲಿ, ರಾಘವನ್ ಅವರ ನೆನಪುಗಳು ಚೇತೋಹಾರಿಯಾಗಿವೆ. ಓದಿ ತುಂಬ ಸಂತೋಷವಾಯಿತು. ಇಂದಿನ ಈ ಕಂಪ್ಯೂಟರ್ ಯುಗಕ್ಕೆ - ಅತ್ಯದ್ಭುತ ಮೊಬೈಲ್ ಫೋನ್ ಮತ್ತು ಅಂತರಜಾಲದ ವ್ಯವಸ್ಥೆಗೆ ನಮೋ ನಮಃ.
    - ಮಂಜುನಾಥ ಅಜ್ಜಂಪುರ,
    (WhatsApp 8762558050)
    {Mobile: 9901055998}
    (Email : anmanjunath@gmail.com)

    ಗೌರವ ಸಂಪಾದಕರು :
    "ವಾಯ್ಸ್ ಆಫ್ ಇಂಡಿಯಾ" ಸಾಹಿತ್ಯ ಸರಣಿ
    ಮತ್ತು ಅರುಣ್ ಶೌರಿ ಸಾಹಿತ್ಯ ಸರಣಿ,
    ಸೇವಾಸೌಧ 3ನೆಯ ಮಹಡಿ,
    ರಾಷ್ಟ್ರೋತ್ಥಾನ ಪರಿಷತ್, ಕೇಶವಶಿಲ್ಪ,
    ಕೆಂಪೇಗೌಡ ನಗರ,
    ಬೆಂಗಳೂರು 560019.
    3.12.2019

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರಿಯ ಮಂಜುನಾಥ್, ಮೊಟ್ಟಮೊದಲ ಬಾರಿಗೆ ಈ ಬ್ಲಾಗನ್ನು ನೋಡಿದಾಗ ತುಂಬಾ ಸಂತೋಷವಾಯಿತು. ಶಂಕರ ಅವರ ಕೋರಿಕೆಯ ಮೇರೆಗೆ ನನ್ನ ನೆನಪುಗಳನ್ನು ಬರೆದಾಗ ಇನ್ನಷ್ಟು ಸಂತೋಷವಾಯಿತು. ಅದಕ್ಕಿಂತ ಹೆಚ್ಚಿನ ಸಂತೋಷವಾಗಿದ್ದು ನಿಮ್ಮ ಕಾಮೆಂಟ್ ಓದಿದನಂತರ. ತುಂಬಾ ಆತ್ಮೀಯವಾಗಿ ನನ್ನ ಹಾಗೂ ನನ್ನ ಲೇಖನದ ಬಗ್ಗೆ ಬರೆದಿದ್ದೀರ. ಅನಂತ ವಂದನೆಗಳು. ಮೊನ್ನೆಯ ದಿನ ನಿಮ್ಮೊಡನೆ ಮಾತಾಡಿದಾಗ ತುಂಬಾ ಖುಶಿಯಾಯ್ತು. ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೆಲ್ಲ ಅಜ್ಜಂಪುರದ ಬಗ್ಗೆ ಹೆಚ್ಚಿನ ಅಭಿಮಾನವಿದೆ. ಅದಿ ಸಂತಸದ ವಿಷಯ.

      ನನ್ನಸಹಪಾಠಿ ನಾರಾಯಣನ ತಂದೆಯ ಹೆಸರು ಖಂಡೊಜಿ ರಾವ್. ನನಗೆ ಕೆ ರಾವ್ ಎಂಬುದು ಮಾತ್ರ ನೆನಪಿತ್ತು. ನಾರಾಯಣನನ್ನು ಸಂಪರ್ಕಿಸಬಹುದೇ?

      ನಿಮ್ಮ ಕುಟುಂಬದ ಒಬ್ಬರು ನನ್ನ ಸಹಪಾಠಿಯಾಗಿದ್ದರು. ಅದರೆ ಹೆಸರು ಜ್ಞಾಪಕಕ್ಕೆ ಬರುತ್ತಿಲ್ಲ.

      ನನಗೆ ಕನ್ನಡದಲ್ಲಿ ಬರೆಯುವ ಅಭ್ಯಾಸ ತಪ್ಪಿಹೋಗಿದೆ. ಕೆಲವೊಮ್ಮೆ ಒಂದೊಂದು ವಾಕ್ಯ ಬರೆಯುವುದಕ್ಕೂ ಹೆಚ್ಚಿನ ಪ್ರಯಾಸ ಪಡಬೇಕಾಗುತ್ತೆ. ಆದರೂ ಸಹ ಗೂಗಲೇಶ್ವರನ್ ಕೃಪೆಯಿರುವುವುದರಿಂದ ಕಷ್ಟಪರಿಹಾರ ವಾಗುವುದು.

      ನಾನು ಮುಂದೆ ಯಾವಾಗ ಬೆಂಗಳೂರು ಕಡೆ ಬಂದಾಗ ನಿಮಗೆ ಸೂಚನೆ ಕೊಡುತ್ತೆನೆ. ಸಾಧ್ಯವಾದಲ್ಲಿ ಭೇಟಿಯಾಗುವ.

      . ರಾಘವನ್

      ಅಳಿಸಿ
  5. ನಿಮ್ಮ ನಿನಪು ಒಂದು ಅದ್ಭುತ ಶಕ್ತಿ ನಮ್ಮ ಅಜ್ಜಂಪುರದ ನಿಮ್ಮ ಹಳೆಯ ನೆನಪುಗಳನ್ನು ಜೋಡಿಸಿ ಆಗಿನ ನಮ್ಮ ಊರಿನ ಇತಿಹಾಸವನ್ನು ಸ್ವಲ್ಪ ಮೆಲಕು ಹಾಕಿ ನಮಗೆ ನೆನಪಿಸಿದ ನಿಮ್ಮ ಒಂದು ಪದಗಳ ಜೋಡಣೆಗೆ ನನ್ನದು ಒಂದು ಸಲಾಂ

    ಪ್ರತ್ಯುತ್ತರಅಳಿಸಿ
  6. ನಿಮ್ಮ ನಿನಪು ಒಂದು ಅದ್ಭುತ ಶಕ್ತಿ ನಮ್ಮ ಅಜ್ಜಂಪುರದ ನಿಮ್ಮ ಹಳೆಯ ನೆನಪುಗಳನ್ನು ಜೋಡಿಸಿ ಆಗಿನ ನಮ್ಮ ಊರಿನ ಇತಿಹಾಸವನ್ನು ಸ್ವಲ್ಪ ಮೆಲಕು ಹಾಕಿ ನಮಗೆ ನೆನಪಿಸಿದ ನಿಮ್ಮ ಒಂದು ಪದಗಳ ಜೋಡಣೆಗೆ ನನ್ನದು ಒಂದು ಸಲಾಂ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ