106. ಮೇಜರ್ ಜನರಲ್ ಬಿ.ಎಸ್. ರಾಜು, ಬಗ್ಗವಳ್ಳಿ


ಭಾರತೀಯ ಸೈನ್ಯದಲ್ಲಿ ಸೇರಿ ಸೇವೆ ಸಲ್ಲಿಸುತ್ತಿರುವವರಲ್ಲಿ ಅಜ್ಜಂಪುರ ತಾಲೂಕಿನ ಜನರ ಕೊಡುಗೆಯೂ ಇದೆ ಎನ್ನುವುದು ಹೆಮ್ಮೆಯ ವಿಷಯ. ಅನೇಕರು ಸಿಪಾಯಿಗಳಾಗಿ ದುಡಿಯುತ್ತಿರುವಂತೆ, ಅಜ್ಜಂಪುರ ಸಮೀಪದ ಗ್ರಾಮ ಬಗ್ಗವಳ್ಳಿಯಿಂದ ಸೈನ್ಯಕ್ಕೆ ಸೇರಿ, ಉನ್ನತ ಹುದ್ದೆಗೆ ಏರಿರುವ ಶ್ರೀ ಬಿ.ಎಸ್. ರಾಜು ಇವರನ್ನು 16-04-2018 ರಲ್ಲಿ ಬಗ್ಗವಳ್ಳಿಯ ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಮಿತ್ರ ಜಿ.ಬಿ. ಅಪ್ಪಾಜಿ ರಾಜು ಅವರೊಂದಿಗೆ ಮಾತನಾಡಿದ್ದರು. ಅದರ ವಿವರಗಳು ಈ ಸಂಚಿಕೆಯಲ್ಲಿದೆ.
ಶಂಕರ  ಅಜ್ಜಂಪುರ
ಸಂಪಾದಕರು, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 91485 72483






ಹನ್ನೆರಡನೆಯ ಶತಮಾನದ ಪ್ರಾರಂಭ ಕಾಲದಲ್ಲಿ‌ ಹೊಯ್ಸಳ ಸಾಮ್ರಾಜ್ಯದ ದೊರೆ ಕಟ್ಟಿಸಿದ ಯೋಗನರಸಿಂಹ ದೇವಾಲಯವಿರುವ ಬಗ್ಗವಳ್ಳಿಗೆ ಐತಿಹಾಸಿಕತೆ ಗರಿಮೆ‌ ಇದೆ. ಈಗ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರ ಧೀರೋದಾತ್ತ ವ್ಯಕ್ತಿತ್ವದಿಂದಾಗಿ ಇನ್ನೊಂದು ಬಗೆಯ ಹಿರಿಮೆಯೂ ಕೂಡಿಬಂದಿದೆ. ಅವರು ಬಗ್ಗವಳ್ಳಿ ಅಷ್ಟೇ ಏಕೆ ಕನ್ನಡಿಗರೆಲ್ಲ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. 

ಇತ್ತೀಚೆಗೆ ಮೇಜರ್ ಜನರಲ್ ಆಗಿ ನಿವೃತ್ತಿ ಹೊಂದಿದ ಬಗ್ಗವಳ್ಳಿ ಸೋಮಶೇಖರ್ ರಾಜು  (ಬಿ.ಎಸ್. ರಾಜು) ಬಗ್ಗವಳ್ಳಿಯ ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಾನೂ ಅಲ್ಲಿದ್ದೆನಾದ್ದರಿಂದ, ರಾಜು ಅವರೊಂದಿಗೆ ಮಾತನಾಡುವ ಸದವಕಾಶ ದೊರೆಯಿತು.  ಸರಳ ಸಜ್ಜನರಾದ ಶ್ರೀ ರಾಜು ತಮ್ಮ ಸಂದರ್ಶನದಲ್ಲಿ ಸೈನ್ಯ ಸೇವೆಯ ಅನೇಕ ಅಂಶಗಳನ್ನು ತೆರೆದಿಟ್ಟರು. 

ಬಗ್ಗವಳ್ಳಿ ದೊಡ್ಡಸೋಮಪ್ಪನವರ ವಂಶದ ಕುಡಿ ಬಿ.ಎಸ್. ರಾಜು ಇತ್ತೀಚೆಗೆ ಕಾಶ್ಮೀರ ಕಣಿವೆಯ ಚಿನಾರ್ ಕೋರ್, 15ನೇ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಅಧಿಕಾರ ಸ್ವೀಕರಿಸಿದರು. 

ಬಾಲ್ಯದಲ್ಲೇ ಸೈನಿಕ ಶಾಲೆ ಸೇರಿ, ಕಠಿಣ ಶ್ರಮದಿಂದ ಹಂತ ಹಂತವಾಗಿ ಮೇಲೆ ಬಂದ ರಾಜು ಸೈನ್ಯ ಸೇವೆ ಅದೇಕೆ ಮುಖ್ಯವಾಗುತ್ತದೆ ಎಂದು ವಿವರಿಸಿದರು. ಸಾಧಾರಣವಾಗಿ ಉತ್ತರ ಭಾರತದ ಮಂದಿ ಸೈನ್ಯಕ್ಕೆ ಸೇರುವುದು ಹೆಚ್ಚಾಗಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಕೊಡಗಿನ ಜನರು ಸೈನ್ಯಕ್ಕೆ ಸೇರಿ ಅಮೂಲ್ಯ ಸೇವೆ ಸಲ್ಲಿಸಿರುವುದನ್ನು ಹೊರತುಪಡಿಸಿದರೆ, ಕರ್ನಾಟಕದ ಇತರ ಜಿಲ್ಲೆಗಳ ಜನ ಈ ಬಗ್ಗೆ ಆಸಕ್ತಿ ತಳೆದಿರುವುದು ಕಡಿಮೆ ಎಂದರು.

ಅತಿ ವಿಶಿಷ್ಟ ಸೇವಾ ಪದಕ ಪುರಸ್ಕೃತರಾದ ರಾಜು, ತಮ್ಮ 10ನೇ ವಯಸ್ಸಿನಲ್ಲಿಯೇ ವಿಜಯಪುರದ ಸೈನ್ಯಶಾಲೆಯಲ್ಲಿ ಸೇರಿದವರು. 1973ರಲ್ಲಿ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾದೆಮಿಯಲ್ಲಿ ಮೂರು ವರ್ಷ ತರಬೇತಿಪಡೆದು ಸೆಕೆಂಡ್ ಲೆಫ್ಟಿನೆಂಟ್ ಹುದ್ದೆಗೆ ತಲುಪಿದರು. ನಂತರದ ಸೇವಾವಧಿಯಲ್ಲಿ ಅವರು ಕ್ಯಾಪ್ಟನ್, ಮೇಜರ್, ಮೇಜರ್ ಜನರಲ್ ಹುದ್ದೆಗಳನ್ನು ಅಲಂಕರಿಸಿದರು. 

ಸೇನಾ ಸೇವೆಯಲ್ಲಿ ಎದುರಾಗುವ ಅಪಾಯಗಳನ್ನು ಅರಿತೇ ಕಾರ್ಯ ನಿರ್ವಹಿಸಬೇಕಾದ ಸವಾಲುಗಳು ಇರುತ್ತವೆ. ಕರ್ನಾಟಕದ ವೀರಯೋಧ ಹನುಮಂತಪ್ಪ ಹಿಮಪಾತದಲ್ಲಿ ಸಿಲುಕಿ ಕೆಲವಾರು ದಿನ ಬದುಕಿದ್ದರೂ, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಇಂಥ ಸವಾಲುಗಳು ಸೈನಿಕನ ಜೀವನದಲ್ಲಿ ದಿನನಿತ್ಯ ಎದುರಾಗುತ್ತವೆ. 19000 ಅಡಿ ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ಮನಸ್ಥೈರ್ಯದ ಅಗತ್ಯವಿರುತ್ತದೆ ಎಂದು ತಿಳಿಸಿದರು.

ಅದೇ ರೀತಿ ನಾಗರಿಕರ ನಡುವೆಯೂ ಸೈನಿಕರ ಸೇವೆ ಸುಲಲಿತವಾಗಿರದ ಸಂದರ್ಭಗಳೂ ಇರುತ್ತವೆ. ಅದರಲ್ಲೂ ಕಾಶ್ಮೀರದಂಥ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವಾಗ, ನಮ್ಮ ನಾಗರಿಕರೇ ನಮ್ಮನ್ನು ಒಪ್ಪದಂಥ ಪರಿಸ್ಥಿತಿ ಇರುವುದುಂಟು ಎಂದು ವಿಶ್ಲೇಷಿಸಿದರು.  

ಭಾರತೀಯ ಸೇನೆಯ ಕಾರ್ಯಸಾಮರ್ಥ್ಯವನ್ನು ಅರಿತಿರುವ ವಿಶ್ವಸಂಸ್ಥೆಯು, ನಮ್ಮ ಸೇವೆಯನ್ನು ಅಪೇಕ್ಷಿಸಿರುವುದುಂಟು. ಸೇನೆಯ ಕೆಲಸವೇ ಹಾಗೆ. ಹೊಸ ಹೊಸ ಸವಾಲುಗಳನ್ನು ಎದುರಿಸುವ ಸಂದರ್ಭಗಳು ಬಂದಾಗ ಹಿಂದೆಗೆಯದೇ ಕಾರ್ಯ ನಿರ್ವಹಿಸಿದ್ದನ್ನು ಸ್ಮರಿಸಿದರು. ಸೇನೆಯ ಕೆಲಸ ತಮಗೆ ತೃಪ್ತಿ ತಂದಿದೆ ಎಂದು ತಿಳಿಸಿದರು.

ಬಗ್ಗವಳ್ಳಿಗೆ ಶಾಲೆಯ ಸೌಲಭ್ಯಗಳು ದೊರಕುವಂತಾಗಲು ಅವರ ತಂದೆ ಶ್ರೀ ಸೋಮಶೇಖರ್ ಅವರೇ ಕಾರಣವೆಂದು, ಗ್ರಾಮದ ನಿವೃತ್ತ  ಶಿಕ್ಷಕ ಚಂದ್ರಶೇಖರ್ ಅವರು ಸ್ಮರಿಸಿದರು. ರಾಜು ಅವರ ಪುತ್ರ ಐಐಟಿ ಪದವೀಧರ. ಉನ್ನತ ಹುದ್ದೆಯಲ್ಲಿರುವ ಅವರಿಗೂ, ಗ್ರಾಮದ ಈ ಶಾಲೆಗೆ ನೆರವಾಗುವಂತೆ ಸಲಹೆ ನೀಡಿರುವೆ ಎಂದು ರಾಜು ತಿಳಿಸಿದರು. 

ಅವರ ಪತ್ನಿ ಕೂಡ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಸೇವಾವಧಿಯಲ್ಲಿ ವಾಸವಿದ್ದ ಅನೇಕ ಸ್ಥಳಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ತಂದೆ ಬಗ್ಗವಳ್ಳಿ ಸೋಮಶೇಖರ್ ಸ್ವತಃ ಇಂಜಿನಿಯರ್ ಆಗಿದ್ದು, ಶಾಲೆಯ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
-0-0-0-0-0-0-0-0-0-0-0-0-




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.