108. ಭಾರತದಲ್ಲಿ ಬೇರುಗಳು, ಆಫ್ರಿಕಾದಲ್ಲಿ ಬೆಳವಣಿಗೆ

ಆತ್ಮೀಯ ಓದುಗರೇ,

ಅಜ್ಜಂಪುರವು ತಾಲೂಕು ಆದ ನಂತರ ಈ ಬ್ಲಾಗ್ ನಲ್ಲಿ ಪ್ರಕಟವಾಗುತ್ತಿರುವ ಮೊದಲ ಲೇಖನವಿದು. ಈಗ ವ್ಯಾಪ್ತಿಯು ಸಹಜವಾಗಿಯೇ ಹೆಚ್ಚಾಗಿರುವುದರಿಂದ, ತಾಲೂಕಿಗೆ ಸೇರಿದ ಗ್ರಾಮಗಳಲ್ಲಿನ ಪ್ರತಿಭಾನ್ವಿತರನ್ನು, ಪ್ರಾಚೀನ ಸ್ಮಾರಕಗಳು, ದೇವಾಲಯಗಳ ಬಗ್ಗೆ ಪ್ರಕಟಣೆಗೆ ಹೆಚ್ಚಿನ ಅವಕಾಶ ಒದಗಿದೆ. ಹೀಗಾಗಿ ಮುಂದಿನ ಸಂಚಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಲಾಗುವುದು. ಇದಕ್ಕೆ ಓದುಗರು ಮಾಹಿತಿ, ಚಿತ್ರಗಳನ್ನು ನೀಡಿ, ಸಹಕರಿಸಬೇಕೆಂದು ವಿನಂತಿಸುತ್ತೇನೆ.

ಭಾರತದಲ್ಲಿ ಬೇರುಗಳು, ಆಫ್ರಿಕಾದಲ್ಲಿ ಬೆಳವಣಿಗೆ (Roots in India, Growth in Africa) ಶೀರ್ಷಿಕೆಯೇ ಈ ಕೃತಿಯ ಹರಹನ್ನು ತೋರುವಂತಿದೆ. ನನ್ನ ಮಿತ್ರ ಎನ್. ಎಸ್. ಸ್ವಾಮಿ, ಈ ಪುಸ್ತಕವನ್ನು ನನಗೆ ನೀಡಿ ಬಹಳ ದಿನಗಳೇ ಆಗಿದ್ದವು. ಅದನ್ನು ಓದಿ, ಆ ಬಗ್ಗೆ ಬರೆಯುವ ಆಲೋಚನೆ ಇದ್ದಿತಾದರೂ, ಅದು ಸಾಧ್ಯವಾಗಿರಲಿಲ್ಲ. ಇಂದು ಫೇಸ್ ಬುಕ್ ನ ಪುಟ ತೆರೆದಾಗ, ಇದರ ಬಗ್ಗೆ ಗೆಳೆಯ ಜಿ.ಬಿ. ಅಪ್ಪಾಜಿ, ಇದರ ಅವಲೋಕನವನ್ನು ಪ್ರಕಟಿಸಿರುವುದು ಕಾಣಿಸಿತು. ಯಾವ ಪರಿಷ್ಕಾರಗಳಿಲ್ಲದೇ ಆ ಲೇಖನವನ್ನು ಇಲ್ಲಿಯೂ ಪ್ರಕಟಿಸಿದ್ದೇನೆ. ಅವರ ಸಹಕಾರಕ್ಕೆ ವಂದನೆಗಳು.


- ಶಂಕರ ಅಜ್ಜಂಪುರ

ಸಂಪಾದಕ,

ಅಂತರಜಾಲದಲ್ಲಿ ಅಜ್ಜಂಪುರ

---------------------------------------------------------------------------------------------------------------

ಪುಸ್ತಕ ಪರಿಚಯ

- ಅಪೂರ್ವ ಅಜ್ಜಂಪುರ

ಭಾರತದಲ್ಲಿ ಬೇರುಗಳು, ಆಫ್ರಿಕಾದಲ್ಲಿ ಬೆಳವಣಿಗೆ

(Roots in India, Growth in Africa



ಟಿ.ವಿ. ಧಾರಾವಾಹಿಯೊಂದರ ವೀಕ್ಷಣೆಯು ಒಂದು ಅದ್ಭುತ ಇತಿಹಾಸ ಶೋಧ ಸಾಹಸಕ್ಕೆ ತೊಡಗಲು ಕಾರಣವಾದೀತು ಎಂಬುದು ಊಹೆಗೆ ನಿಲುಕದ್ದು. ಅವರೊಬ್ಬ ಭಾರತೀಯ ತಂತ್ರಜ್ಞ ಅರ್ಥಾತ್ ಎಂಜಿನಿಯರ್. ಇದ್ದದ್ದು ವಿದೇಶದಲ್ಲಿ -ಪೂರ್ವ ಆಫ್ರಿಕಾದ ಕೀನ್ಯಾ ಎಂಬ ದೇಶದಲ್ಲಿ. ತಮ್ಮ ಹೆಂಡತಿ ಮತ್ತು ಐದು-ಹತ್ತರ ನಡುವಿನ ಮೂವರು ಗಂಡು ಮಕ್ಕಳೊಂದಿಗೆ. ಅವರು ನೋಡಿದ ಧಾರಾವಾಹಿ 'ರೂಟ್ಸ್'! ಅಲೆಕ್ಸ್ ಹ್ಯಾಲಿ ಎಂಬ ಕಪ್ಪು ವರ್ಣೀಯ ಲೇಖಕನ ಅದೇ ಹೆಸರಿನ ಕಾದಂಬರಿ ಆಧಾರಿತ 'ರೂಟ್ಸ್' ಧಾರಾವಾಹಿ. ಅಮೆರಿಕೆಯಲ್ಲಿ‌ ನೆಲೆಸಿದ್ದ ವ್ಯಕ್ತಿಯೊಬ್ಬ ತನ್ನ ಪೂರ್ವಜರ ಬೇರುಗಳನ್ನು ಹುಡುಕಿದ ವಸ್ತುವುಳ್ಳ ಕಾದಂಬರಿ. ಕಥೆ ಹೃದಯ ವಿದ್ರಾವಕ. ಅವನ ಪೂರ್ವಜರು ಗ್ಯಾಂಬಿಯಾ ಎಂಬ ಆಫ್ರಿಕಾದ ಪಶ್ಚಿಮ ಕರಾವಳಿಯ ಒಂದು ದೇಶದವರು. ಅಲ್ಲಿನ ಜನರನ್ನು ಶ್ವೇತವರ್ಣೀಯ ವ್ಯಾಪಾರಿಗಳು ಅಮೇರಿಕಕ್ಕೆ ಸಾಗಿಸಿ, ಗುಲಾಮರಾಗಿ ಮಾರಾಟ ಮಾಡುತ್ತಿದ್ದರು.

ಕೀನ್ಯಾದಲ್ಲಿದ್ದ ಎಂಜಿನಿಯರಿಂಗ್ ಪ್ರಾಧ್ಯಾಪಕರು ನಿವೃತ್ತಿಯ ನಂತರ ಮಾತೃಭೂಮಿಗೆ ಬಂದಾಗ ಬೆಂಗಳೂರಿನ ರಸ್ತೆಬದಿಯಲ್ಲಿ ಹಳೆಯ ಪುಸ್ತಕದಂಗಡಿಯಲ್ಲಿ ಅಲೆಕ್ಸ್ ಹ್ಯಾಲಿಯ 'ರೂಟ್ಸ್' ಕಾದಂಬರಿ ಸಿಗುತ್ತದೆ. ಧಾರಾವಾಹಿ ನೋಡಿದ್ದ ಅವರು ಆ ಪುಸ್ತಕವನ್ನು ಕೊಂಡು ಓದುತ್ತಾರೆ. ಭಾರತೀಯ ಧಾರ್ಮಿಕ ಗ್ರಂಥಗಳು ಮತ್ತು ಆಫ್ರಿಕಾದ ಹಲವು ದೇಶಗಳಿಗೆ ವಲಸೆ ಹೋದ ಲಕ್ಷ ಲಕ್ಷ ಭಾರತೀಯರ ಬಗ್ಗೆ ಅಧ್ಯಯನ ಮಾಡಲು ಆ ಎರಡು ಘಟನೆಗಳು ಪ್ರೇರೇಪಿಸುತ್ತವೆ. ಅದರ ಪರಿಣಾಮವೇ "ರೂಟ್ಸ್ ಇನ್ ಇಂಡಿಯಾ ಅಂಡ್ ಗ್ರೋತ್ ಇನ್ ಆಫ್ರಿಕಾ" ಎಂಬ ಕೃತಿ.
ಈ ಕೃತಿಯ ಲೇಖಕರು ಪ್ರೊ. ಜಿ.ಎಚ್. ಕುಮಾರ್. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಇದೀಗ ಅಜ್ಜಂಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಗಿರಿಯಾಪುರದವರು. ೩೫೪ ಪುಟಗಳ ಈ ಬೃಹತ್ ಗ್ರಂಥದಲ್ಲಿ ಎರಡು ವಿಭಾಗಗಳಿವೆ. ಒಂಭತ್ತು ಅಧ್ಯಾಯಗಳಲ್ಲಿ ಭಾರತದ ಧಾರ್ಮಿಕ ಆಚಾರ -ವಿಚಾರಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದ್ದಾರೆ. ಆ ಅಧ್ಯಾಯಗಳು ಸನಾತನ ಧರ್ಮದ ತತ್ತ್ವ-ಸಿದ್ಧಾಂತಗಳ ಇತಿಹಾಸವನ್ನು ಹೇಳುತ್ತವೆ. ನಂತರ ಹತ್ತು ಅಧ್ಯಾಯಗಳಲ್ಲಿ ಭಾರತದಿಂದ ವಲಸೆ ಹೋದವರ ಕಥೆ ಇದೆ.

ಆಕರ ಗ್ರಂಥಗಳ ಪಟ್ಟಿ ನೋಡಿದರೆ ಸಾಕು, ಲೇಖಕ ಪ್ರೊ. ಜಿ.ಎಚ್. ಕುಮಾರ್ ಅವರ ಪರಿಶ್ರಮ, ಅಧ್ಯಯನದ ವ್ಯಾಪ್ತಿ ಹಾಗೂ ಆಳಗಳ ಪರಿಚಯವಾಗುತ್ತದೆ. ಕೀನ್ಯಾದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತಿಯ ನಂತರ ಭಾರತಕ್ಕೆ ಬಂದು ಗಿರಿಯಾಪುರದಲ್ಲಿ ನೆಲೆಸಿ, ತಮ್ಮ ಎಂಭತ್ತರ ಹರೆಯದಲ್ಲಿ ಈ ಕೃತಿಯ ರಚನೆಯನ್ನು ಮುಗಿಸಿ, ಪ್ರಕಟಿಸಿದ್ದಾರೆ(೨೦೧೫).
ಈ ಮೊದಲು ಕೃತಿ ರಚನೆಗಾಗಿ ಅಧ್ಯಯನ ಮಾಡುವುದರ ಜೊತೆಗೆ ಅನೇಕ ಸ್ಥಳ, ವ್ಯಕ್ತಿಗಳನ್ನು ಸಂಧಿಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಸನಾತನ ಧರ್ಮದ ವ್ಯಾಪಕತೆಯ ಅನೇಕ ಆಯಾಮಗಳನ್ನು ಗ್ರಹಿಸಿ, ಕೃತಿಯಲ್ಲಿ ಅತ್ಯಂತ ಸಮರ್ಥವಾಗಿ ಭಾರತೀಯ ಸಂಸ್ಕೃತಿ-ಪರಂಪರೆಗಳನ್ನು ಅನಾವರಣಗೊಳಿಸಿದ್ದಾರೆ. ಜೊತೆಗೆ ಆಫ್ರಿಕಾ ಖಂಡದ ದೇಶಗಳಿಗೆ ವಲಸೆ ಹೋದ ಅಸಂಖ್ಯಾತ ಭಾರತೀಯರ ಸ್ಥಿತಿಗತಿಗಳ ಬಗ್ಗೆ ದಾಖಲಿಸಿದ್ದಾರೆ. ಬರವಣಿಗೆಯ ಹರಹು ದೊಡ್ಡದು, ಅದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಅವರೇ ಮುನ್ನುಡಿಯಲ್ಲಿ ಹೇಳಿಕೊಂಡಂತೆ ಆಫ್ರಿಕಾದ ದೇಶಗಳಲ್ಲಿ ನೆಲೆಸಿರುವ ವಲಸೆ ಮೂಲದ ಯುವ ಜನರಿಗೆ ತಮ್ಮ ಪೂರ್ವಜರ ಸಂಸ್ಕೃತಿ ಹಾಗೂ ಪರಂಪರೆಗಳ ಮಹತ್ವವನ್ನು ತಿಳಿಸುವ ಉದ್ದೇಶವೂ ಈ ಗ್ರಂಥ ರಚನೆಯಲ್ಲಿದೆ. ಶ್ರೀ ಜಿ.ಎಚ್.ಕುಮಾರ್ ಅವರ ಸಂಶೋಧನೆ ಹಾಗೂ ತಪಸ್ಸಿನ ಫಲ : ರೂಟ್ಸ್ ಇನ್ ಇಂಡಿಯಾ ಅಂಡ್ ಗ್ರೋತ್ ಇನ್ ಆಫ್ರಿಕಾ. ಈ ಕೃತಿಯಲ್ಲಿ ಆಫ್ರಿಕನ್ ದೇಶಗಳ ಪ್ರಜೆಗಳಾದ ಭಾರತೀಯ ಸಮುದಾಯದ ಮೂಲ, ಸಂಸ್ಕೃತಿ-ಪರಂಪರೆ, ವಲಸೆಯ ಕಥೆ-ವ್ಯಥೆ ಮತ್ತು ಏಳು-ಬೀಳುಗಳನ್ನು ಚಿತ್ರಿಸಿದ್ದಾರೆ.


Roots in India & Growth in Africa
Author : Prof. G. H. KUMAR
Published by: Shri Lalgibhai Ruda Pindola Charitable Trust, Kundanpur(KERA)-370430.
Dist Bhuj : KUCHCHH,Gujarat.

ಪುಸ್ತಕ ಪರಿಚಯ - ಚಿತ್ರ, ಲೇಖನ, ಅಪ್ಪಾಜಿ ಅಜ್ಜಂಪುರ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ