112. ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!


 ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!   'ಯೋಗಿಗಳ ಯೋಗಿ, ಶಿವಯೋಗಿ, ಸಿದ್ಧರಾಮನೊಬ್ಬನೆ ನಿಜಯೋಗಿ' ಎಂದು ಸಮಕಾಲೀನ ಶರಣರಾದ ಸೊಡ್ಡಳ  ಬಾಚಾರಸರಿಂದ ಹೊಗಳಿಸಿಕೊಂಡಿರುವ ಸಿದ್ದರಾಮೇಶ್ವರರು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಸೊಲ್ಲಾಪುರವೆಂಬ ಅಭಿನವಕೈಲಾಸವಾಗಿ ಕಟ್ಟಿದವರು. ಮಹಾನ್ ಕನಸುಗಾರ ಶಿಲ್ಪಿ ಇವರು. ಕೇವಲ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ತಕ್ಷಣವೇ ಕಾರ್ಯರೂಪಕ್ಕೆ ತಂದು ಆದರ್ಶಗಳಿಗೆ ವಾಸ್ತವತೆಯ ಸ್ಪರ್ಷ ನೀಡಿದವರು. 'ಶಿವಯೋಗಿಯ ಶರೀರಂ ವೃಥಾ ಸಮೆಯಲಾಗದು, ಅನುಗೊಂಬನಿತು ಕಾಯಕವನು ನಡೆಸುತಿರಬೇಕು' ಎಂಬುದು ಇವರ ಸಾಧನೆಯ ನಿತ್ಯಮಂತ್ರ. ಇಂಥ ಪವಿತ್ರ ಸಂಕಲ್ಪದಿಂದಲೇ ಸಿದ್ದರಾಮೇಶ್ವರರು ಪರಮತೆಯ ಔನ್ನತ್ಯವನ್ನು ಸಾಧಿಸಿದರು. ಹನಿಮೊಸರನ್ನು  ಮಲ್ಲಯ್ಯನಿಗೆ ಸಮರ್ಪಿಸಲಾಗದ ಏಕೈಕ ಕಾರಣದಿಂದ ಶ್ರೀಶೈಲಪರ್ವತದಲ್ಲಿ ಆತ್ಮಾಹುತಿಯನ್ನು ಮಾಡಿಕೊಳ್ಳಹೊರಟ ಬಾಲಕನನ್ನು  ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ಮಡಿಲಿಗೆ ಆತುಕೊಂಡು ಸಂರಕ್ಷಿಸಿಕೊಂಡ  ಕಥೆಯ ಹಿಂದಿರುವುದೂ ಸಿದ್ದರಾಮರ ದೃಢಸಂಕಲ್ಪ ಮನೋಭಾವವೇ.

      ಈ ಮನೋದೃಢತೆಯೇ ಬಡ ಒಕ್ಕಲಿಗರ ಮನೆಯ ಮಗನಾದ ಧೂಳಿಮಾಕಾಳನನ್ನು ಆದರ್ಶ ಶಿವಯೋಗಿಯಾಗಿ ಬೆಳೆಸಿತು. ಕೆರೆಗಳನ್ನು ಕಟ್ಟಿಸುವ, ದೇವಾಲಯಗಳನ್ನು ನಿರ್ಮಿಸುವ, ಅಗ್ರಹಾರಗಳನ್ನು ರೂಪಿಸುವ ಸಮಾಜಮುಖಿ ಚಟುವಟಿಕೆಗಳು ಅವರ ಉಸಿರಾದವು. ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನ ದೇವಾಲಯ ನಿರ್ಮಿಸಿ ಅಲ್ಲಿ ಸಾಂಗವಾಗಿ ಲಿಂಗಾಭಿಷೇಕ, ಯೋಗಮಜ್ಜನ, ನೈವೇದ್ಯಸಮರ್ಪಣೆ, ದಾನವಿನಿಯೋಗ, ಉತ್ಸವ, ಹೋಮ-ಹವನಗಳನ್ನು ನೆರವೇರಿಸುವ ಪ್ರೀತಿಗೆ ಅಚ್ಚರಿಗೊಂಡ; ಸಿದ್ಧರಾಮರ ಅಲೌಕಿಕ ಶಕ್ತಿಗೆ ಬೆರಗಾದ ನಾಡಿನ ಬೇರೆ ಬೇರೆ ಭಾಗದ ಜನತೆ ಈ ದೇವರಿಗೆ ದಾನದತ್ತಿ  ಬಿಟ್ಟಿರುವುದನ್ನು ಅನೇಕ ಶಾಸನಗಳು ದಾಖಲಿಸಿವೆ.

        

  'ಅರವತ್ತೆಂಟು ಸಾವಿರ ವಚನಗಳನ್ನು ಹಾಡಿ ಹಾಡಿ ಸೋತಿತ್ತೆನ್ನ ಮನ' ಎಂದು ಸಿದ್ದರಾಮಯ್ಯ ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಅವರ ವಚನಗಳಲ್ಲಿ ಸುಪರಿಚಿತವಾದ ಅಂಕಿತ 'ಕಪಿಲಸಿದ್ದಮಲ್ಲಿಕಾರ್ಜುನ'. 'ಯೋಗಿನಾಥ' ಅಂಕಿತವನ್ನು ಅಲ್ಲಮಪ್ರಭು, ಬಸವೇಶ್ವರ ಮುಂತಾದವರ ಪ್ರಭಾವ ದಟ್ಟವಾದ ಮೇಲೆ ಬಳಸಿರಬಹುದು. 'ಭಕ್ತನಾದೊಡೆ ಬಸವಣ್ಣನಂತಾಗಬೇಕು,  ಜಂಗಮವಾದೊಡೆ ಪ್ರಭುವಿನಂತೆ ಆಗಬೇಕು,  ಭೋಗಿಯಾದೊಡೆ ನಮ್ಮ ಗುರು ಚೆನ್ನಬಸವಣ್ಣನಂತಾಗಬೇಕು, ಯೋಗಿಯಾದೊಡೆ ನನ್ನಂತಾಗ ಬೇಕು ನೋಡಯ್ಯ' ಎಂಬ ಅವರ ವಚನದಲ್ಲಿ ಈ  ಸುಳಹನ್ನು ಹುಡುಕಬಹುದು. ಕೆಲವು ವಚನಗಳ ಜೊತೆಗೆ ಸಂಕೀರ್ಣ ತ್ರಿವಿಧಿ, ಬಸವ ಸ್ತೋತ್ರದ ತ್ರಿವಿಧಿ,  ಅಷ್ಟಾವರಣ ಸ್ತೋತ್ರದ ತ್ರಿವಿಧಿಗಳು ಯೋಗಿನಾಥ ಅಂಕಿತದಲ್ಲೇ ಇವೆ.

           ಪವಾಡಗಳನ್ನು ನಿರಾಕರಿಸಿ ಬೆಳೆದರಾದರೂ ಸಿದ್ದರಾಮರ ಹೆಸರಿನಲ್ಲಿ ನಾನಾ ರೀತಿಯ ಪವಾಡಗಳು ತಳುಕು ಹಾಕಿಕೊಂಡಿವೆ. ಹೀಗಾಗಿ ಇಂದಿನ ನಮಗೆ 12ನೇ ಶತಮಾನದ ಭವ್ಯ ವ್ಯಕ್ತಿತ್ವವನ್ನು ಅಜಮಾಯಿಸಿ ನೋಡುವುದು ಒಂದು ದೊಡ್ಡ ಸವಾಲು.

          ಸಿದ್ದರಾಮೇಶ್ವರರ ವಚನಗಳು, ಅವರ ಸಮಕಾಲೀನ ಶರಣರ ವಚನಗಳು ಸಿದ್ಧರಾಮರ ಬದುಕಿನ ಒಂದು ಆಯಾಮವನ್ನು ಕಟ್ಟಿಕೊಟ್ಟರೆ ನಂತರದ ಹರಿಹರನ ರಗಳೆಗಳ ಉಲ್ಲೇಖಗಳು, ರಾಘವಾಂಕನ ಕಾವ್ಯ ಈ ವೇಳೆಗಾಗಲೇ ಸಿದ್ದರಾಮೇಶ್ವರ ಶರಣರು ಅವತಾರಪುರುಷರೆಂದು ಜನಮನದಲ್ಲಿ ಸ್ಥಾನ ಪಡೆದಿದ್ದಕ್ಕೆ  ಸಾಕ್ಷಿ ಒದಗಿಸುತ್ತದೆ. ಶೂನ್ಯ ಸಂಪಾದನೆಗಳು ಸಂಖ್ಯೆಯಲ್ಲಿ ಬೆಳೆಯುವುದಕ್ಕೆ ಮುಖ್ಯ ಕಾರಣವೇ ಸಿದ್ದರಾಮೇಶ್ವರರಿಗೆ ಲಿಂಗದೀಕ್ಷೆ ಕೊಡಿಸುವುದು! 


 ಇಂಥ ಮಹಾನ್ ಯೋಗಿಸಾಧಕ ಸಿದ್ಧರಾಮರ ಜೀವನವನ್ನು ಪೂರ್ವೋಕ್ತ ದಾಖಲೆಗಳ ಸಹಕಾರದಿಂದ ನಾಲ್ಕು ಹಂತಗಳಲ್ಲಿ ಗುರುತಿಸಬಹುದು.

   

1. ಸೊನ್ನಲಿಗೆಯಲ್ಲಿ ಧೂಳಿಮಾಕಾಳನಾಗಿ ಹುಟ್ಟಿ, ಬೆಳೆದು       ಶ್ರೀಶೈಲ ಮುಟ್ಟುವವರೆಗೆ.

2. ಶ್ರೀಶೈಲದಲ್ಲಿ ಸಿದ್ಧಿ ಪಡೆದು ಸೊನ್ನಲಿಗೆಗೆ ಹಿಂದಿರುಗಿ ಸಮಾಜಮುಖಿ ಕಾರ್ಯ ಮಾಡುವವರೆಗೆ.

3. ಅಲ್ಲಮಪ್ರಭುವಿನ ಭೇಟಿಯಿಂದ ತನ್ನೊಳಗಿನ ಅಹಂ ಅನ್ನು ಕರಗಿಸಿಕೊಂಡು ಕಲ್ಯಾಣಕ್ಕೆ ತೆರಳಿ ಶರಣ ಸಮೂಹದ ಸಹವರ್ತಿ ಆಗುವವರೆಗೆ.

4. ಕಲ್ಯಾಣ ಕ್ರಾಂತಿಯಾಗುವ ಮುನ್ಸೂಚನೆ ಪಡೆದು ಶರಣ, ವಚನ ಸಂರಕ್ಷಣೆಯ ಜವಾಬ್ದಾರಿ ಹೊತ್ತು ಸೊನ್ನಲಿಗೆಗೆ ಹಿಂದಿರುಗಿ ಆ  ಸಾಧನೆ ಮಾಡುವವರೆಗೆ.

              ಮೊದಲ ಮೂರು ಹಂತಗಳ ಸಿದ್ಧರಾಮೇಶ್ವರರ ಜೀವನಸಾಧನೆಗಳ ಬಗೆಗೆ ವಚನಗಳು, ಕಾವ್ಯಗಳು ಮಸುಕಾಗಿಯಾದರೂ ದಾರಿ ತೋರುತ್ತವೆ. ಆದರೆ ನಾಲ್ಕನೇ ಹಂತ ಕಲ್ಯಾಣಕ್ರಾಂತಿಯಾಗಿ ಪ್ರಕ್ಷುಬ್ಧ ವಾತಾವರಣದಲ್ಲಿ ಸಿಲುಕಿ ನಲುಗಿ ಹೋಗುತ್ತಿದ್ದ ಶರಣರಿಗೆ ಸ್ಥೈರ್ಯ ತುಂಬಿ ಅಗತ್ಯ ಮಾರ್ಗದರ್ಶಕರಾಗಿ ಮತ್ತು ಅಪಾರ ವಚನಸಾಹಿತ್ಯದ ಸಂರಕ್ಷಕರಾಗಿ ಮಾಡಿದ ಅಗಾಧ ಕಾರ್ಯಗಳು ಸರಿಯಾಗಿ ದಾಖಲಾಗಿಲ್ಲ. ಆದರೆ ಅಂತಹ ವಿಷಮ ಪರಿಸ್ಥಿತಿಯಲ್ಲೂ ಉಳಿದುಬಂದಿರುವ ವಚನಗಳು ಮತ್ತು ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಹಳಷ್ಟು ಕಡೆ ಇರುವ  ಸಿದ್ಧರಾಮೇಶ್ವರರ ಸುಮಾರು 78 ಗದ್ದುಗೆಗಳು ಸಿದ್ದರಾಮೇಶ್ವರರು ಕೈಗೆತ್ತಿಕೊಂಡು ನಿರ್ವಹಿಸಿದ ಅಪಾರ ಕಾರ್ಯಕ್ಷಮತೆಗೆ ನುಡಿಯಾಗುತ್ತವೆ.

      

    ನಮ್ಮ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಕೂಡ ಹೀಗೆ ಸಿದ್ಧರಾಮೇಶ್ವರರ ಗದ್ದುಗೆಯಿಂದ ಪ್ರಸಿದ್ಧಿ ಪಡೆದ ತಾಣ.  ಸಿದ್ದರಾಮೇಶ್ವರರ ಊರಿನ ಹೆಸರನ್ನೂ ತನ್ನೊಳಗೆ  ಸಮೀಕರಿಸಿಕೊಂಡು ಬೆಳೆಯುತ್ತಿರುವ ಅಪೂರ್ವ  ತಾಣ‌. ಸಿದ್ದರಾಮೇಶ್ವರರೇ ಇಲ್ಲಿ ಬಂದು ಒಂದು ದಿನ ತಂಗಿದ್ದರು ಆ ನೆನಪಿಗೆ ಇಲ್ಲಿ ಗದ್ದುಗೆ ನಿರ್ಮಾಣ ಮಾಡಿ ಊರಿಗೆ ಸೊಲ್ಲಾಪುರ ಎಂದು ಕರೆಯಲಾಯಿತು ಎಂಬುದು ಒಂದು ಹೇಳಿಕೆ. ಮತ್ತೊಂದು ಭಾವನೆಯ ಪ್ರಕಾರ ಊರು ಕಟ್ಟಿದ ಹಿರಿಯರು ಸಿದ್ದರಾಮೇಶ್ವರರ ಸನ್ನಿಧಾನಕ್ಕೆ ಹೋಗಿ ಅವರಿಂದ ಪ್ರಭಾವಿತರಾಗಿ ಇಲ್ಲಿ ಬಂದ ಮೇಲೆ ಸಿದ್ದರಾಮೇಶ್ವರರ ಗದ್ದುಗೆ ನಿರ್ಮಿಸಿದರು.


 ಯಾವುದೂ ಸತ್ಯವಾಗಿರಬಹುದು. ಆದರೆ, ನಮ್ಮ ನೆಲದಲ್ಲೇ, ನಮ್ಮ ಸನಿಹದಲ್ಲೇ ಸೊನ್ನಲಿಗೆಯ ಶರಣರನ್ನು ಇರಮಾಡಿಕೊಂಡು ಅವರು ಇಲ್ಲಿಯೇ ಇದ್ದಾರೆ ಎನ್ನುವ ಪವಿತ್ರ ಭಾವನೆಯ ಅಪೂರ್ವತೆಗೆ ಈ ಸೊಲ್ಲಾಪುರ ಸಾಕ್ಷಿಯಾಗಿದೆ.


  ಸೊಲ್ಲಾಪುರವೆಂಬ ಈ ಪುಟ್ಟ ಊರಿಗೆ 14-15ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದಾದ ಸಿದ್ಧರಾಮೇಶ್ವರ ದೇಗುಲದ ಭವ್ಯತೆ ಒಂದು ಅಪೂರ್ವ ಗಾಂಭೀರ್ಯವನ್ನೂ ತೇಜಸ್ಸನ್ನೂ ನೀಡಿದೆ. ದೇಗುಲದ ಬಳಿಯೇ ಇರುವ ವಿಶಾಲವಾದ ಸಿಹಿನೀರಿನ ಕಲ್ಯಾಣಿ ಮತ್ತು ಸ್ವಾಮಿಯ ಕತೆಯನ್ನು ಸಂರಕ್ಷಿಸುವ, ಊರಿನಿಂದ ಅರ್ಧ ಕಿಲೋಮೀಟರ್ ದೂರವಿರುವ ಗಂಗಮ್ಮನ ಕೆರೆ ಎರಡೂ ದೇಗುಲದ ಪವಿತ್ರತೆಯ ಭಾಗವಾಗಿವೆ.

        

  ದಕ್ಷಿಣಾಭಿಮುಖವಾಗಿರುವ ಗರ್ಭಗುಡಿಯಲ್ಲಿ ಲಿಂಗರೂಪದ ಸಿದ್ಧರಾಮೇಶ್ವರರ ಪ್ರತೀಕಕ್ಕೆ ಸಿದ್ಧರಾಮೇಶ್ವರರ ಮುಖವಾಡ ಧರಿಸಿ ನಿತ್ಯ ಪೂಜಿಸಲಾಗುತ್ತದೆ. ಗರ್ಭಗುಡಿಯ ಮುಂದೆ ಗರ್ಭಗುಡಿಯಷ್ಟೇ ಚಿಕ್ಕದಾದ ಸುಕನಾಸಿಯು ವಿಶಾಲವಾದ ನವರಂಗಕ್ಕೆ ಎಡೆಮಾಡಿಕೊಡುತ್ತದೆ. ನವರಂಗದ ಮಧ್ಯಭಾಗದ ಮುಂದಿರುವ ನಂದಿಯದು ಅಪೂರ್ಣ ಶಿಲ್ಪ ಸೌಂದರ್ಯ. ಮಧ್ಯದ ನಾಲ್ಕು ಕಂಬಗಳಲ್ಲೂ ವಿಶೇಷ ಕೆತ್ತನೆಗಳಿವೆ. ನವರಂಗಕ್ಕೆ ದಕ್ಷಿಣ ಮತ್ತು ಪೂರ್ವಭಾಗಗಳಿಂದ ಪ್ರವೇಶ ದ್ವಾರಗಳಿವೆ. ನವರಂಗದ ಹೊರಗೆ ವಿಶಾಲವಾದ ಹೊರ ಆವರಣವಿದ್ದು ಇಲ್ಲಿಯೂ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಪ್ರವೇಶ ದ್ವಾರಗೋಪುರಗಳಿವೆ. ದಕ್ಷಿಣದ ಗೋಪುರ ಪೂರ್ವ ಭಾಗಕ್ಕಿಂತಲೂ ಪ್ರಾಚೀನವಾಗಿರುವುದು ಗಮನಸಾಧ್ಯ.

           ಈ ಭಾಗದ 18 ಮಾಗಣಿಯ ಅಪಾರ ಭಕ್ತ ಜನರು ಶ್ರದ್ಧಾ ಭಕ್ತಿ ಗೌರವಗಳಿಂದ ಸಿದ್ದರಾಮೇಶ್ವರನಿಗೆ ಸೇವೆ ಸಲ್ಲಿಸುತ್ತಾರೆ. ಈ ಎಲ್ಲರಲ್ಲಿ ಸಿದ್ಧರಾಮೇಶ್ವರರು ಇಲ್ಲಿಯೇ ನೆಲೆಸಿದ್ದಾರೆ ಎಂಬ ನಂಬಿಕೆ ಗಟ್ಟಿಯಾಗಿದೆ. 'ಮನಸಿದ್ದಂತೆ ಮಹಾದೇವ!' ಪ್ರತಿವರ್ಷವೂ ನವರಾತ್ರಿಯಲ್ಲಿ ನಡೆಯುವ ಅಂಬು, ದಸರಾ ಮೆರವಣಿಗೆ ಬನ್ನಿಮಂಟಪ ಸೇರಿ ಅಲ್ಲಿ ಸೇರುವ ಭಕ್ತಜನರಿಗೆಲ್ಲ ಫಲಾರ ಹಂಚಿ, ಗುರಿಯಿಟ್ಟು ಅಂಬು ಹೊಡೆಯುವ ಉತ್ಸವ ವಿಶೇಷವಾಗಿ ಭಕ್ತಾದಿಗಳನ್ನು ಸೆಳೆಯುತ್ತದೆ. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ವೈಭವದ ಜಾತ್ರಾ ಮಹೋತ್ಸವ ಈ ಪರಿಸರದಲ್ಲೇ ಹೆಸರುವಾಸಿಯಾಗಿದೆ.

      

   ಗಂಗಮ್ಮನ ಪೊರೇವಿ(ದಾಸೋಹ)ಯಲ್ಲಿ ಪ್ರಸಾದ ಸಿಕ್ಕುವುದು, ಸ್ವಾಮಿಯ ಅಂಬಿನಲ್ಲಿ ಪಲಾರ(ಪ್ರಸಾದ) ಸಿಕ್ಕುವುದು ಬಹು ಪುಣ್ಯವೆಂಬ ನಂಬಿಕೆಯಿದೆ. ನಿತ್ಯವೂ ಸ್ವಾಮಿಗೆ ಸಮರ್ಪಣೆ ಮಾಡುವ ಮತ್ತು ಪೂಜೆಯಾದ ನಂತರ  ಕೊಡಮಾಡುವ ಪ್ರಸಾದವೂ ನೆನಸಿದ ಕಡಲೆಕಾಳು ಮತ್ತು ಹಣ್ಣುಗಳು ಅಷ್ಟೇ. 'ಏಕೆ ಹೀಗೆ?' ಎಂದರೆ, ಅದಕ್ಕೊಂದು ಸ್ವಾರಸ್ಯದ ಕಥೆಯನ್ನು ಸೊಲ್ಲಾಪುರದ ತೊಂಬತ್ತರ ಹರೆಯದ ಲಕ್ಷ್ಮಜ್ಜಿ ಹೇಳುತ್ತಾರೆ:

   ಆಗ ಕಲ್ಯಾಣದಲ್ಲಿ ಲಿಂಗದೀಕ್ಷೆ ಪಡೆಯೋದು ಅಂತ ಆಯ್ತಲ್ಲಾ, ಆಗ  ಶರಣ ಸಮೂಹದ  ಎಲ್ಲರೂ ಆದ ನಂತರ, ಕಡೆಯಲ್ಲಿ ಚನ್ನಬಸವಣ್ಣನವರಿಂದ ದೀಕ್ಷೆ ಪಡೆದರು ನಮ್ಮ ಸಿದ್ದರಾಮೇಶ್ವರರು. ಅವರು ಧ್ಯಾನದಲ್ಲಿ ತಲ್ಲೀನರಾಗಿ ಎಚ್ಚೆತ್ತು ಪ್ರಸಾದ ಪಡೆಯಲು ಮಹಾಮನೆಗೆ ಬಂದಾಗ ಮಾಡಿಟ್ಟ ಅಡುಗೆ ಎಲ್ಲಾ ಹೆಚ್ಚಿಹೋಗಿತ್ತು. ಉಳಿದದ್ದು ಮರುದಿನದ ಅಡುಗೆಗೆ ನೆನೆಸಿಟ್ಟಿದ್ದ ಕಾಳುಗಳು ಮತ್ತು ಸ್ವಲ್ಪ ಹಣ್ಣು. ಸಿದ್ದರಾಮೇಶ್ವರರು ಅದನ್ನೇ ಸ್ವೀಕರಿಸಿ ತೃಪ್ತರಾದರಂತೆ! ಅದಕ್ಕೆ ಈಗಲೂ ಅವರ ಭಕ್ತರಿಗೆ ಅದೇ ಸಿರಿ ತುಂಬಿದ ಕಾಳುಗಳು!

           'ಸೊಲ್ಲಾಪುರದ ಸ್ವಾಮ್ಯಾಡಿದ ಮಾತಿಗೆ ಹುಸಿಯುಂಟೆ!' ಎಂಬ ಹೆಗ್ಗಳಿಕೆಯ ನಮ್ಮ ಸೊಲ್ಲಾಪುರದ ಸಿದ್ದರಾಮೇಶ್ವರರು ಫಲದೇವತೆ, ಮಳೆದೇವತೆಯಾಗಿಯೂ ಈ ಪರಿಸರದಲ್ಲಿ ಖ್ಯಾತರಾಗಿದ್ದಾರೆ. 12 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಹರಕೆ ಹೊತ್ತು ಮಕ್ಕಳ ಫಲ ಪಡೆದ ತಾಯಿಯರ ಕೃತಜ್ಞತಾ ಸೇವೆ ಒಂದೆಡೆ. ಮತ್ತೊಂದು ಕಡೆ ವರುಷ ವರುಷವೂ ಮಳೆ ಬಾರದೇ ತತ್ತರಿಸಿ ಹೋಗುವ ಸಮಯದಲ್ಲಿ ಮಳೆಗಾಗಿ ಭಕ್ತಜನರ ಮಳೆಹರಕೆಸೇವೆ ಮತ್ತೊಂದೆಡೆ. ಮಳೆಗಾಗಿ ಶರಣರ ಅಪ್ಪಣೆ ಕೇಳಿದಾಗ ಶರಣರು ಕೈಲಾಸದಯ್ಯನ ಕಡೆ ಹೋಗಿ ಭಕ್ತರಿಗಾಗಿ "ಮಳೆಬೀಜ" ತಂದು ಬುವಿಗೆಲ್ಲ ಎರಚುತ್ತಾರಂತೆ! ಮಳೆಬೀಜ ಬಿದ್ದ ಕಡೆಯಲ್ಲ ಮಳೆಫಸಲು ಏಳುವುದು ಖಚಿತವೇ! 'ಮಳೆಬೀಜ' ಎನ್ನುವ ಪದವೇ ಎಂಥ ರೋಮಾಂಚನ!!!

     ಪ್ರತಿ ವರ್ಷದ  ಜನವರಿ 14ರಂದು ಸಿದ್ದರಾಮೇಶ್ವರರ ಜಯಂತಿಯನ್ನು ಸೊಲ್ಲಾಪುರದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಆದರೆ,  2020ರಲ್ಲಿ ಜನವರಿ14 ಮತ್ತು15 ರಂದು ಸಿದ್ದರಾಮೇಶ್ವರರ ಎಲ್ಲಾ 77 ಗದ್ದುಗೆಗಳು ಒಂದಾಗಿ ಆಚರಿಸುವ 847ನೆ ಜಯಂತೋತ್ಸವ ಆಚರಿಸುವ ಹಿರಿಮೆ ಸಿಕ್ಕಿದ್ದು ಸೊಲ್ಲಾಪುರದ ಹೆಮ್ಮೆಯ ಕ್ಷಣವಾಗಿತ್ತು. ಈ ಸಂದರ್ಭದಲ್ಲಿ ನಾಡಿಗೆ ನಾಡೇ ಮೆಚ್ಚುವಂತೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇಂದಿಗೂ ಸೊಲ್ಲಾಪುರದ ಜನಮನದಲ್ಲಿ ಹಸಿರಾಗಿದೆ.

        ಮೇ ಒಂದು, ಕಾರ್ಮಿಕ ದಿನಾಚರಣೆ. ಕಾಯಕಕ್ಕೆ ಅಪೂರ್ವ ಘನತೆ ಹಿರಿಮೆ ತಂದ ಶರಣರೆಲ್ಲರ ಸ್ಮರಣೆಯಲ್ಲಿ, ಅದರಲ್ಲೂ ಕಾಯಕದ ಮಹತ್ವವನ್ನು ಸಾರಿ ಸಾರಿ ಹೇಳಿ ಕಾಯಕವನ್ನು ಲೋಕಕಲ್ಯಾಣದ ಹೆಗ್ಗಳಿಕೆಗೆ ಸಮೀಕರಿಸಿದ ಸಿದ್ದರಾಮೇಶ್ವರರ ಸಂಸ್ಮರಣೆಯಲ್ಲಿ ವಿಶ್ವದ ಎಲ್ಲಾ ಕಾರ್ಮಿಕರಿಗೂ ಹಾರ್ದಿಕ ಶುಭಾಶಯಗಳು.


- ಡಾ. ಮಂಜುಳಾ ಹುಲ್ಲಹಳ್ಳಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

84. ರಾಜಕಾರಣಿ, ಕ್ರೀಡಾಪಟು ಶ್ರೀ ಬಿ.ವಿ. ಗುರುಶಾಂತಪ್ಪ

121. ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿಋಷಿ ಎಸ್.ಚಂದ್ರಶೇಖರ್ ನಾರಣಾಪುರ

ಅಜ್ಜಂಪುರ ಸೀತಾರಾಂ