113. ಆಸಂದಿ ನಾಡು: ಸಂಸ್ಕೃತಿ, ಪರಂಪರೆ, ಇತಿಹಾಸದ ಬೀಡು!ನಾನು
 ಅಜ್ಜಂಪುರದಲ್ಲಿ ಬಾಲ್ಯವನ್ನು ಕಳೆದೆನಾದರೂ ಸುತ್ತಮುತ್ತಲಿನ ಗ್ರಾಮಗಳನ್ನು ನೋಡಿರಲಿಲ್ಲ. ಅದಕ್ಕೆ ಸಂದರ್ಭಗಳಿರಲಿಲ್ಲ ಎನ್ನುವುದೇ ಸರಿಯಾದೀತು. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲೇ ನಾಲ್ಕು ದಶಕಗಳನ್ನು ಕಳೆದುದಾಯಿತು. ಹಾಗೆಂದು ಊರಿನ ಸಂಪರ್ಕವೇನೂ ತಪ್ಪಿರಲಿಲ್ಲ. ನಿವೃತ್ತಿಯ ನಂತರ ಹಣ್ಣೆ, ಸೊಲ್ಲಾಪುರ, ಗಡಿಹಳ್ಳಿ, ಅಮೃತಾಪುರ, ಬಗ್ಗವಳ್ಳಿ, ಹಿರೇನಲ್ಲೂರು ಮುಂತಾದ ಗ್ರಾಮಗಳನ್ನು ನೋಡಿದೆ. ಅದೂ ನಾನು ಸಂಪಾದಿಸುತ್ತಿರುವ "ಹೊಯ್ಸಳ ವಾಸ್ತುಶಿಲ್ಪ ಅವಲೋ ಕನ"ದ ಸಲುವಾಗಿ.

ಈಗ ಅಜ್ಜಂಪುರ ತಾಲೂಕಾಗಿದೆ. ಅದರ ವ್ಯಾಪ್ತಿಯಲ್ಲಿನ ದೇಗುಲಗಳನ್ನು ನನ್ನ "ಅಂತರಜಾಲದಲ್ಲಿ ಅಜ್ಜಂಪುರ" ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ.

ಇದು ಅಜ್ಜಂಪುರ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಇದರ ಇತಿಹಾಸದ ರೋಚಕತೆಯನ್ನು ಊಹಿಸಬೇಕೆಂದರೆ, ಇಲ್ಲಿರುವ ದೇವಾಲಯಗಳ ಸಂಖ್ಯೆಯನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯವಾಗಿ ಹೊಯ್ಸಳರ ಕಾಲದಿಂದ ಪ್ರಸಿದ್ಧಿಯಲ್ಲಿದ್ದ ಈ ಊರಿನ ಮಹತ್ವ ಕುಂದಿರಬಹುದು. ಆದರೆ ಐತಿಹಾಸಿಕವಾಗಿ ಶ್ರೀಮಂತ ಊರು ಹೌದು.

ನನ್ನ ಈ ಯತ್ನಕ್ಕೆ ಬೆಂಬಲವಾಗಿ ಸೋದರಿ ಶ್ರೀಮತಿ ಮಂಜುಳಾ ಹುಲ್ಲಹಳ್ಳಿಯವರು ತಮ್ಮ ಲೇಖನಗಳನ್ನು ನೀಡಿ ಸಹಕರಿಸಿರುವರು. ಅವರಿಗೆ ಕೃತಜ್ಞತೆಗಳು.

ಇಲ್ಲಿ ಪ್ರಕಟಿಸಿರುವ ಎಲ್ಲ ಚಿತ್ರಗಳನ್ನು ಆಸಂದಿಯಲ್ಲಿ ನೆಲೆಸಿ ಕನ್ನಡದ ಕಾರ್ಯಕ್ರಮಗಳಿಗೆ ಒತ್ತಾಸೆಯಾಗಿ ನಿಂತು ದುಡಿಯುತ್ತಿರುವ ಶ್ರೀ ಹನುಮಂತಾಚಾರ್ಯರು ಒದಗಿಸಿದ್ದಾರೆ. ಅವರು ಇಲ್ಲಿನ ದೇಗುಲಗಳು ಮತ್ತು ಗ್ರಾಮದ ಇತಿಹಾಸದ ಬಗ್ಗೆ ಅತೀವ ಪ್ರೀತಿ ಹೊಂದಿರುವರು. ನಾನು ಕೇಳಿದ ಎಲ್ಲ ಚಿತ್ರಗಳನ್ನು ಶೀರ್ಷಿಕೆ ಸಹಿತ ಒದಗಿಸಿ ನನ್ನ ಕೆಲಸವನ್ನು ಹಗುರ ಮಾಡಿದ್ದಾರೆ. ಅವರ ಸಹಕಾರಕ್ಕೆ ಧನ್ಯವಾದಗಳು.

ವಂದನೆಗಳೊಡನೆ,

ಶಂಕರ ಅಜ್ಜಂಪುರ
ಸಂಪಾದಕ
"ಅಂತರಜಾಲದಲ್ಲಿ ಅಜ್ಜಂಪುರ"
25 ಮೇ 2021

                                 -0-0-0-0-0--0-0-0-0-0-0-0-0-0-0-0-ಆಸಂದಿ ನಾಡು: ಸಂಸ್ಕೃತಿ, ಪರಂಪರೆ, ಇತಿಹಾಸದ ಬೀಡು!

       ನಮ್ಮ ಕರ್ನಾಟಕದ ಇತಿಹಾಸದಲ್ಲಿ ಆಸಂದಿನಾಡು  ಅಮೂಲ್ಯ ಸ್ಥಾನ ಪಡೆದಿದೆ. ಕ್ರಿಸ್ತಶಕ ನಾಲ್ಕರಿಂದ ಐದನೇ ಶತಮಾನದ ಕದಂಬರ ಆಳ್ವಿಕೆಯಿಂದಲೇ ಪ್ರಮುಖ ಆಯಕಟ್ಟಿನ ಸ್ಥಳವಾಗಿದ್ದು ವಿಶೇಷ ರಾಜಮನ್ನಣೆ ಪಡೆದಿದ್ದಕ್ಕೆ ಆಸಂದಿಯಲ್ಲಿ ದೊರೆತ 17 ಶಾಸನಗಳ ಜೊತೆಗೆ ಹಲವಾರು ಇನ್ನಿತರೆಡೆಗಳಲ್ಲಿನ ಶಾಸನಗಳು ಸಾಕ್ಷಿಯಾಗಿವೆ. ಆಸಂದಿನಾಡು ಸಂಸ್ಕೃತಿ, ಪರಂಪರೆ, ಇತಿಹಾಸಗಳ ನೆಲೆಬೀಡಾಗಿತ್ತು ಎಂಬುದಕ್ಕೆ ಕುಸಿದು ಕುಗ್ಗಿಹೋಗಿದ್ದರೂ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ತಮ್ಮ ಅಸ್ತಿತ್ವಕ್ಕೆ ತಳಮಳಿಸುತ್ತಿರುವ ದೇಗುಲಗಳು ತಮ್ಮನ್ನೇ ಜೀವಂತ ಸಾಕ್ಷಿಯಾಗಿ ನಿವೇದಿಸಿಕೊಳ್ಳುತ್ತಿವೆ.

  ಹಿಂದಿನ ಭವ್ಯ ಆಸಂದಿನಾಡೆಂದರೆ ಇಂದಿನ ಆಸಂದಿ ಊರೂ ಸೇರಿದಂತೆ ಮುದುಗೆರೆ, ಅಂತರಗಟ್ಟೆ, ಬೇಗೂರು, ಹಿರೇನಲ್ಲೂರು ಎಲ್ಲವೂ ಸೇರಿದ ಹಿರಿಯ ನಾಡು.

     ಆಸಂದಿ ಶ್ರೀರಾಜಪ್ಪನವರ ವಶದಲ್ಲಿದ್ದ ಎರಡು ತಾಮ್ರ ಶಾಸನಗಳು ಗಂಗವಂಶಕ್ಕೆ ಸೇರಿದ್ದು, ಒಂದು ಶಾಸನವು ಗಂಗವಂಶದ ದೊರೆಗಳಲ್ಲಿ ಕಟ್ಟಾಣಿ ಅಥವಾ ಶ್ರೀವಲ್ಲಭ ಮಹಾರಾಜನ ಮಗ ಆರಸಾಣೆ ಮಹಾರಾಜನ ಹೆಸರನ್ನು ಹೇಳುವ ಮೂಲಕ ಗಂಗ ವಂಶದ ವಂಶಾವಳಿಯಲ್ಲಿ ಇದ್ದ ಗ್ಯಾಪ್ ಅನ್ನು ತುಂಬಿಕೊಟ್ಟಿದೆ. ಆರಸಾಣೆಯನ್ನು ನೀತಿಶಾಸ್ತ್ರಕುಶಲ, ಅನೇಕ ತರ್ಕಸಮಯ, ವ್ಯಾಕರಣ, ನಾಟಕ, ಇತಿಹಾಸ, ಪುರಾಣಕೋಶಲ ಎಂದೆಲ್ಲ ಇದು ವರ್ಣಿಸಿದೆ. ಇದನ್ನು ಏಳನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ.

    ಮತ್ತೊಂದು ತಾಮ್ರಶಾಸನ ಕ್ರಿ.ಶ. 795ರ ಅವಧಿಯದು. ಅಂದವಾದ ಅಕ್ಷರಗಳ ಕಂಡರೆಣೆಯಿಂದ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ರಚಿತವಾಗಿರುವ ಈ ಶಾಸನವು ಗಂಗದೊರೆ ಶಿವಕುಮಾರನಿಗೆ ಜಯಸಿಂಹ ಎಂಬ ಹೆಸರಿನ ಮಗನಿದ್ದ ಅಂಶವನ್ನು ಹೊಸದಾಗಿ ತಿಳಿಸುತ್ತದೆ.

   ತನ್ನ ಹಿರಿಯರಿಂದ ಪ್ರಾಪ್ತವಾದ ಗುಣಗಳೆಲ್ಲದರ ಆಶ್ರಯವಾಗಿದ್ದ, ಜ್ಯೋತಿಜ್ಞಾನ ಪ್ರವೀಣನಾಗಿದ್ದ ಜಯಸಿಂಹ ನಾರಾಯಣನ ಭಕ್ತನೂ ಆಗಿದ್ದನು. ಇವನ ವಿಜ್ಞಾಪನೆಯ ಮೇರೆಗೆ ಶಿವಮಾರನು ಆಸಂದಿವಿಷಯಕ್ಕೆ ಸೇರಿದ್ದ ತೋರುಗಲ್ಲು ಗ್ರಾಮವನ್ನು ಅನೇಕ ವೃತ್ತಗಳಾಗಿ ವಿಂಗಡಿಸಿ ಗಂಗವಾಡಿ 96000 ಪ್ರದೇಶದ ಪ್ರಜೆಗಳ ಸಾಕ್ಷಿಯಾಗಿ ನಂದಿ,  ಪರಂತೂರು, ಕುಮುಳೂರು, ಅಳಂಪೋರು, ಮುದುಂಬಿ, ಬಾದಾಮಿ ಮುಂತಾದ ಊರುಗಳಲ್ಲಿನ ಬ್ರಾಹ್ಮಣರಿಗೆ ದಾನ ಮಾಡಿದ ವಿವರಗಳು ಈ ಶಾಸನದಲ್ಲಿದೆ.

    ಕ್ರಿ.ಶ 899ರ ಅವಧಿಯ ಎರಡನೇ ಗಂಗರಾಜಮಲ್ಲನ ಕಾಲದ ವೀರಗಲ್ಲಿನಲ್ಲಿ  ಗಂಗದೊರೆ ಶ್ರೀಪುರುಷ ಮತ್ತು ಇವನ ಮಗ ವಿಜಯಾದಿತ್ಯನ ಹೆಸರುಗಳ ಉಲ್ಲೇಖವಿದೆ. ಕ್ರಿ.ಶ. 972ರ ಅವಧಿಯ ವೀರಗಲ್ಲು ತುರುಗಾಳಗದಲ್ಲಿ ಮಾರಸಿಂಹ ಎಂಬ ವೀರನು ನರಗ ಎಂಬುವನ ವಿರುದ್ಧ ಹೋರಾಡಿ ಆತನನ್ನು ಕೊಂದು ಅವನ ಕುಟುಂಬವನ್ನು ನಿರ್ಮೂಲ ಮಾಡಿದ ವಿಷಯವನ್ನು ನಿರೂಪಿಸುತ್ತದೆ. ಈ ನರಗನ ದಬ್ಬಾಳಿಕೆಯ ವಿರುದ್ಧ ತಗರನಾಡಿನ ಮಹಾಜನರು ಗಂಗದೊರೆಗೆ ಮನವಿಯನ್ನೂ ಸಲ್ಲಿಸಿದ್ದರು.

       ಕಾಲಕ್ರಮೇಣ ಗಂಗರಸರು ತಮ್ಮ ಎಲ್ಲಾ ಪ್ರದೇಶಗಳನ್ನು ಕಳೆದುಕೊಂಡು ಹೊಯ್ಸಳರ ಸಾಮಂತರಾಗುವ ಸಂಧರ್ಭ ಬಂದಾಗ ಅವರು ತಮ್ಮ ನೆಲೆಯಾಗಿ ಆಯ್ದುಕೊಂಡದ್ದು ಆಸಂದಿ ಆಡಳಿತ ಕೇಂದ್ರವಾಗಿದ್ದ ಈ ಆಸಂದಿನಾಡನ್ನೇ.  ಕ್ರಿ.ಶ 1091ರ ಅರುವನಹಳ್ಳಿ ಶಾಸನವು ಗಂಗವಂಶದ ಆಸಂದಿ ಶಾಖೆಗೆ ಸೇರಿದ ಪ್ರಾಚೀನ ದಾಖಲೆ.

   ಮಹಾಮಂಡಳಿಕ ವೈಜರಸ, ಇವನ ಹಿರಿಯ ರಾಣಿ ವೈಜಲದೇವಿ. ಇವನ  ಮಗ ಬಮ್ಮರಸನು ಅರಘಟ್ಟದಲ್ಲಿ ಕೆರೆಯನ್ನು ತೋಡಿಸಿ ರಾಮೇಶ್ವರ ದೇವಾಲಯವನ್ನು ಕಟ್ಟಿಸಿ ದೇವರ ಸೇವೆಗೆ ಭೂಮಿ ದಾನ ನೀಡಿದ ವಿವರವನ್ನು ಬುಕ್ಕಾಂಬುಧಿಯ ಕ್ರಿ.ಶ. 1129ರ ಶಾಸನ ವರ್ಣಿಸುತ್ತದೆ. ಈ ಬಮ್ಮರಸನು ಮರಣಿಸಿದಾಗ ಈತನ ಸೇವಕ ಲೆಂಕರಗಂಡ ಎನಿಸಿದ ಬೊಮ್ಮಯ್ಯನಾಯಕನು ಇವನಿಗೆ ಸಗ್ಗದ ಹಾದಿ ತೋರಿಸಿದ್ದನ್ನು ಆಸಂದಿಯ ಮತ್ತೊಂದು ವೀರಗಲ್ಲು ವರ್ಣಿಸಿದೆ

         ಕ್ರಿ.ಶ. 1191ರಲ್ಲಿ ಈ ಬಮ್ಮರಸನ ಮಗ ನರಸಿಂಹನ ಆಳ್ವಿಕೆಯ ಆಸಂದಿಯ ಈಶ್ವರ ದೇವಾಲಯದ ರಂಗಮಂಟಪದಲ್ಲಿರುವ ಶಾಸನವು ಆಸಂದಿನಾಡನ್ನು ಆಳಿದ ವೈಜರಸರಿಂದ ಆರಂಭವಾಗಿ ನಾರಸಿಂಗರವರೆಗಿನ ವಿವರವಾದ ಸಾಧನೆಗಳನ್ನು ವರ್ಣಿಸುತ್ತದೆ.

     ಅಗ್ಗದರಾಯ ಎಂಬುವವನು ಬೇಡರ ಬಂಕಿ ಅರಣ್ಯದೊಳಗೆ ಓಡಿಹೋದಾಗ ನೆಡೆದ ಯುದ್ಧದಲ್ಲಿ ಚಾಲುಕ್ಯರಾಜನ ಸಮ್ಮುಖದಲ್ಲಿ ವೈಜರಸನು ತನ್ನ ಬಿಲ್ಲಿನಿಂದ ಬಿಟ್ಟ ಬಾಣವು ಅಗ್ಗದರಾಯನ ತಲೆಯನ್ನು ಉರುಳಿಸಿದುದಷ್ಟೇ ಅಲ್ಲ, ಮುಂದಕ್ಕೆ ಹಾಯ್ದು ಆಕಾಶದಲ್ಲಿ ಹಾರುತ್ತಿದ್ದ ಹದ್ದಿನ ಕಣ್ಣಿಗೂ ಹೊಡೆಯಿತಂತೆ!  ಜನರೆಲ್ಲಾ ವೈಜರಸನ ಪರಾಕ್ರಮಕ್ಕೆ ಬೆರಗಾದರೆ ರಾಜ 'ಕಣ್ನಂಬು' ಬಿರುದು ನೀಡಿ ಗೌರವಿಸಿದನಂತೆ. ಈ ಶಾಸನ ದಾಖಲಿಸುವಂತೆ ಆಸಂದಿ ದೊರೆಗಳ ವಂಶಾವಳಿ ಹೀಗಿದೆ.

   ವೈಜರಸ~ ಶ್ರೀನಾಥ+ನಾಗಲೇ ~ ವೈಜರಸ + ವೈಜಲ ದೇವಿ~ ಬೊಮ್ಮರಸ+ಗಂಗಮಾದೇವಿ~ ನರಸಿಂಹ.

  ಈ ನರಸಿಂಹನು ಅತ್ಯಂತ ಪರಾಕ್ರಮಿಯಾಗಿದ್ದ ದೊರೆ. ಗೂಜನರು, ಚೋಳರು, ಮಾಲವರು, ಲಾಳರಾಜರ ವಿರುದ್ಧ ಹೋರಾಡಿ ಗೆಲುವು ಸಾಧಿಸಿದವನು. ಇವನ ತಂದೆತಾಯಿ ಬೊಮ್ಮರಸ ಮತ್ತು ಗಂಗಮಾದೇವಿ ಇವರು ಸ್ವರ್ಗಸ್ಥರಾದಾಗ ಅವರ ಉತ್ತರಕ್ರಿಯೆ ಮಾಡಿ ಶ್ರೀಪರ್ವತ ಶ್ರೀಶೈಲದ ಪಾತಾಳಗಂಗೆಗೆ ಜನರನ್ನು ಕಳಿಸಿ ಲಕ್ಷಣವಾದ ಲಿಂಗಸಲಾಕೆ ತರಿಸಿ, ಈ ಲಿಂಗಗಳನ್ನು ಆಸಂದಿಯಲ್ಲಿ 1191ರಲ್ಲಿ ತಂದೆತಾಯಿಯರ ಹೆಸರಿನಲ್ಲಿ ನಿರ್ಮಿಸಿದ ಗಂಗೇಶ್ವರ, ಬೊಮ್ಮೇಶ್ವರ ಜೋಡಿ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಿಸಿ ರಾಜಗುರು ಕ್ರಿಯಾಶಕ್ತಿದೇವ ಮತ್ತು ಸೇನಬೋವ ಕಲ್ಯಾಣದೇವರಿಗೆ ಸಮರ್ಪಿಸಿದಂತೆ. 

 ಇದೇ ಅವಧಿಯ ಮತ್ತೊಂದು ಶಾಸನ ಗಂಗೇಶ್ವರ ದೇವಾಲಯದ ಒಳಬಾಗಿಲ ಬಳಿಯ ಉತ್ತರದ ಹೊರಭಿತ್ತಿಯ ಮೇಲೆ ಕಂಡರಿತವಾಗಿದ್ದು ಇದು ಆಸಂದಿಯ ದೊರೆ ನರಸಿಂಹನು ಪ್ರತಿಷ್ಠಾಪಿಸಿದ ಶ್ರೀ ಗಂಗೇಶ್ವರ ಬ್ರಹ್ಮೇಶ್ವರ ದೇವರ ಅಂಗಭೋಗ ರಂಗಭೋಗಗಳಿಗೆ ಆಸಂದಿಯ ದಕ್ಷಿಣಭಾಗದ ಗ್ರಾಮಗಳನ್ನು ದತ್ತಿ ನೀಡಿದುದನ್ನು ಹೇಳುತ್ತದೆ. ನಂತರ  1216ರಲ್ಲಿ ಆಸಂದಿಯ ಪ್ರಭುಗೌಡರು ಬ್ರಹ್ಮೇಶ್ವರನ ನಂದಾದೀವಿಗೆ ನೈವೇದ್ಯದ ಶ್ರೀಕಾರ್ಯಕ್ಕೆ ಚಿಕ್ಕನೆಲ್ಲೂರಿನಿಂದ ಪೂರ್ವದ ಹಳ್ಳಿಗಳನ್ನು ದತ್ತಿ ಬಿಟ್ಟಿರುವ ಮಾಹಿತಿಯನ್ನು ಶಾಸನದ ಮುಂದುವರೆದ ಭಾಗ ತಿಳಿಸುತ್ತದೆ.

      ಆಸಂದಿ ಕೆರೆಯ ಏರಿಯ ಮೇಲಣ ಒಂದು ಶಾಸನವು ಕ್ರಿಸ್ತಶಕ 1202ರದ್ದಾಗಿದ್ದು ಇದರಲ್ಲಿ ಇದೇ ನರಸಿಂಗನು ಸೂರ್ಯದೇವರ ನೈವೇದ್ಯಕ್ಕೆ ಮಲ್ಲಿಕಾರ್ಜುನ ಗುರುಗಳ ಶ್ರೀಪಾದ ಪ್ರಕ್ಷಾಳನ ಮಾಡಿ ಧಾರಾಪೂರ್ವಕ ದಾನ ನೀಡಿದುದನ್ನು ತಿಳಿಸುತ್ತದೆ.

         ಮಾರ್ಚ್ 12, 1206ರವೇಳೆಗೆ ಮರಳು ಮಾರ್ಕಂಡದೇವನು ಆಸಂದಿ ನಾಡನ್ನು ಆಳುತ್ತಿದ್ದುದನ್ನು ಗಂಗೇಶ್ವರ ದೇವಾಲಯದ ರಂಗಮಂಟಪದ ಮುಂದಿನ ತೊಲೆಯ ಮೇಲಿರುವ ಶಾಸನ ವಿವರಿಸುತ್ತದೆ. ಆ ವೇಳೆಗೆ ಆಸಂದಿಯಲ್ಲಿ ಗಂಗೇಶ್ವರ, ಬ್ರಹ್ಮೇಶ್ವರ, ವೇದೇಶ್ವರ, ನಖರೇಶ್ವರ, ವೀರಬ್ರಹ್ಮೇಶ್ವರ, ದೇಕೇಶ್ವರ, ಬಲ್ಲೇಶ್ವರ, ಮಾದೇಶ್ವರ, ಜಗದೀಶ್ವರ, ಒಳಗಣ ಬಲ್ಲೇಶ್ವರ, ಅನಾದಿ ಸಂಸ್ಥೆಯ ಕೋಟೇಶ್ವರ, ಸೂರ್ಯದೇವರು ಮೊದಲಾದ ಶಿವಸ್ಥಾನ ದೇಗುಲಗಳಿದ್ದುದನ್ನೂ ಈ ಶಾಸನ ವರ್ಣಿಸುತ್ತದೆ. ಎಲ್ಲಾ ದೇಗುಲಗಳ ನಂದಾದೀವಿಗೆಗೆ ಆ ಸ್ಥಳದ ರಾಜಗುರು ಕ್ರಿಯಾಶಕ್ತಿದೇವರು, ಸೂರ್ಯಭರಣದೇವರೇ ಮುಖ್ಯವಾದವರ  ಕಾಲು ತೊಳೆದು ಧಾರಾಪೂರ್ವಕವಾಗಿ ರಾಜ ಮತ್ತು ಸಮಸ್ತ ಪ್ರಭುಗೌಡರು ಸೇರಿ ದತ್ತಿ ನೀಡಿದುದನ್ನು ಈ ಶಾಸನ ವಿವರಿಸುತ್ತದೆ.

    ಕ್ರಿಸ್ತಶಕ 1206ರಲ್ಲಿ ಹೊಯ್ಸಳ ಮಹಾಸಂಸ್ಥಾನದ ಪ್ರಧಾನನಾಗಿದ್ದ ಅರಹ ಸಾಹಣಿಯು ಆಸಂದಿಯಲ್ಲಿ ಬಲ್ಲೇಶ್ವರ ದೇವಾಲಯವನ್ನು ನಿರ್ಮಿಸಿ ಬಲ್ಲೇಶ್ವರನನ್ನು ಪ್ರತಿಷ್ಠಾಪಿಸಿ ದೇವರ ಸೇವೆಗೆ  ತಾಂಡಗೆರೆಯನ್ನು ಬಲ್ಲೇಶ್ವರಪುರವೆಂದು ಹೆಸರಿಸಿ ದತ್ತಿ ಬಿಟ್ಟಿರುವುದನ್ನು ವೀರಭದ್ರ ದೇಗುಲದ ಮುಂದಿರುವ ಶಾಸನ ಹೇಳುತ್ತದೆ. ಈ ಶಾಸನಶಿಲೆಯಲ್ಲಿಯೇ ಮುಂದುವರಿದ ಭಾಗವು 1216 -17ರ ಅವಧಿಯದಾಗಿದ್ದು ಆ ಸಮಯದ ಆಸಂದಿನಾಡಿನ ಪ್ರಭು ಮಾರ್ಕಂಡೇದೇವನು ಈ ದತ್ತಿಯನ್ನು ಮತ್ತೆ ಊರ್ಜಿತ ಮಾಡಿದುದನ್ನು ಹೇಳಿದೆ.

       ಕ್ರಿಸ್ತಶಕ 1283ರ ಅವಧಿಯ ವೀರಗಲ್ಲು ರಾಮನಾಥ ಎಂಬ ವೀರ ಹೋರಾಡಿ ಮಡಿದುದನ್ನೂ, ಅವನ ಸಹಧರ್ಮಿಣಿ ಲಕ್ಕುಮಾದೇವಿ ಸಹಗಮನ ಮಾಡಿದುದನ್ನೂ ತಿಳಿಸಿದರೆ ಮತ್ತೊಂದು ಶಾಸನವು 13ನೇ ಶತಮಾನಕ್ಕೆ ಸೇರಿದ ವೀರಗಲ್ಲಾಗಿದ್ದು ಮರಾಠಿ ಭಾಷೆಯಲ್ಲಿರುವುದು ವಿಶೇಷ. ದೇವಗೊಯಿ ಎನ್ನುವ ರಾಹುತನ ವೀರಮರಣವನ್ನು ಈ ಶಾಸನ ಉಲ್ಲೇಖಿಸುತ್ತದೆ.

      ವೀರಭದ್ರ ದೇವಾಲಯದ ಮುಖಮಂಟಪದ ದಕ್ಷಿಣ ತೊಲೆಯ ಮೇಲಿರುವ ಕ್ರಿಸ್ತಶಕ 1235ರ ಶಾಸನ ಆ ಕಾಲದ ವಿಶಿಷ್ಟವಾದ ಸಾಮಾಜಿಕ ಅನುಬಂಧಕ್ಕೂ ಸಾಕ್ಷಿಯಾಗಿದೆ.

    ಆಸಂದಿಯ ರಾಜಗುರು ನಾರಸಿಂಹಗುರುಗಳು, ವಾಮಶಿವದೇವರು, ಬೈಚಯ್ಯ, ಚೌಡಯ್ಯ,  ಕಡಊರ ಕಾಮಯ್ಯ, ಮುಂತಾದ ಹಲವರು ಗಣ್ಯರ ಸನ್ನಿಧಿಯಲ್ಲಿ ದೂಚವೇಯ ಮಗಳು ನಾಗಮ್ಮ, ಆಕೆಯ ಮಗ ಹೊನ್ನ ಮತ್ತು ಮಗಳು ಸಿರಿಯವ್ವ ಈ ಮೂರು ಜನರು ವಿವಾದ ಪರಿಹರಿಸಿಕೊಂಡದ್ದನ್ನು ಈ ಶಾಸನ ತಿಳಿಸುತ್ತದೆ.  ಬಲ್ಲೇಶ್ವರ ದೇಗುಲದ ಕಲ್ಲಜೀಯ ಮತ್ತು ನಾಗಜೀಯರ ಜೊತೆಗೆ ನಾಗಮ್ಮ ಮತ್ತು ಮಕ್ಕಳಿಗೆ ವಿವಾದವಾಯಿತು. ಆಗ ಅವರಿಂದ ಎಂಟು ಹೊನ್ನನ್ನು ಪಡೆದು ವೃತ್ತಿಸಂಬಂಧ ವಾದ, ವಿವಾದ ಉಳಿದಿಲ್ಲವೆಂದು ಅವರ ಕಾಲು ತೊಳೆದು ಬಲ್ಲೇಶ್ವರದೇವರ ಸನ್ನಿಧಿಯಲ್ಲಿ ನಾಗಮ್ಮ, ಹೊನ್ನ, ಸಿರಿಯವ್ವೆಯರು ವಿವಾದ ಪರಿಹರಿಸಿಕೊಂಡರಂತೆ.

        ಮುಂದೆ ಆಸಂದಿಯ ಗಂಗರ ಆಳ್ವಿಕೆಯೂ ಹೊಯ್ಸಳರೊಡನೆ ಅವನತಿ ಹೊಂದಿ ಇಲ್ಲಿಯೂ ವಿಜಯನಗರದ ಅರಸರ ಪ್ರಾಬಲ್ಯ ಮುಂದುವರೆದುದಕ್ಕೆ ಕ್ರಿ.ಶ. 1542ರಲ್ಲಿ ಅಚ್ಚುತರಾಯ ಮಹಾರಾಜರು ಆಸಂದಿನಾಡಿನ ಗ್ರಾಮಗಳಿಗೆ ಮದುವೆಸುಂಕ ವಿನಾಯ್ತಿ ಕೊಟ್ಟಿದುದನ್ನು ಒಂದು ಶಾಸನ ತಿಳಿಸಿದರೆ ಇದೇ ಅವಧಿಯ ವೀರಗಲ್ಲು ಆಸಂದಿಯ ರಾಜಗುರುಗಳ ಹೆಸರನ್ನು ಉಲ್ಲೇಖಿಸುತ್ತದೆ.

    ನಂತರದ ದಿನಗಳಲ್ಲಿ ಆಸಂದಿಯ ಭಾಗ್ಯ ಮಸುಕಾಗುತ್ತಾ ಬಂದಿತು. ಅದಕ್ಕೆ ಪೂರಕವಾಗಿ ಸಮೀಪದ ಅಂತರಘಟ್ಟೆಯ ಅಂತರಘಟ್ಟಮ್ಮನ ಕೋಪಶಾಪ ಕಾರಣವೆಂದು ಜನಪದರ ಅಭಿವ್ಯಕ್ತಿಯೂ ಜೊತೆಯಾಯಿತು. ಒಟ್ಟಿನಲ್ಲಿ ಆಸಂದಿನಾಡು ಹಾಳುನಗರವಾಗಿ, ಪಾಲು ದೇಗುಲಗಳ ಆಗರವಾಗಿ ಆ ಸಂದಿ, ಈ ಸಂದಿ, ಯಾವ್ಯಾವ ಸಂಧಿಗಳಲ್ಲೂ ಪರಂಪರೆ ಇತಿಹಾಸಗಳ ಮುರುಕು ಮಿಣುಕುಗಳು ರಕ್ತಕಣ್ಣೀರು ಹನಿಸುವಂತಾಯಿತು.

     ಹಂಪೆಯ ಮಿನಿಯೇಚರ್ ಎನ್ನಬಹುದಾದ ಇಂದಿನ ಅಳಿದುಳಿದಿರುವ ಆಸಂದಿಯು ಹಿಂದಿನ ವೈಭವಪೂರ್ಣ ಆಸಂದಿಯ ಅವಶೇಷ ಮಾತ್ರವಾಗಿದೆ. ಈಗ ಅಜ್ಜಂಪುರ ತಾಲೂಕಿಗೆ ಸೇರಿರುವ ಆಸಂದಿಯನ್ನು ಪ್ರವೇಶಿಸಿದ ಕೂಡಲೇ ಬ್ರಹ್ಮೇಶ್ವರ, ಗಂಗೇಶ್ವರ ಜೋಡಿದೇಗುಲಗಳ ಅಸ್ತಿಪಂಜರದ ಕುರುಹುಗಳು ಭವ್ಯ ಶಾಸನಶಿಲೆಗಳ ಜೊತೆಗೆ ಎದುರಾಗುತ್ತವೆ. ನಂಬಬೇಕು, ಪಾಳುಪಾಳಾಗಿರುವ ದೇಗುಲದ ಅಸ್ತಿಕುಸುಮವೇ ಮನ ಸೆಳೆದುಕೊಳ್ಳುವಷ್ಟು ಆಕರ್ಷಕವಾಗಿದೆ. ಇನ್ನು ಉಚ್ಛ್ರಾಯ ಸ್ಥಿತಿಯಲ್ಲಿ ಹೇಗಿದ್ದಿರಬಹುದು! ಶ್ರೀಶೈಲದ ಪಾತಾಳಗಂಗೆಯಿಂದ ತರಸಿ ಪ್ರತಿಷ್ಠಾಪಿಸಿದ ಲಿಂಗಗಳ ಗುರುತುಗಳೂ ಈಗ ಉಳಿದಿಲ್ಲ. ದೇಗುಲಕ್ಕೆ ಯಾವುದೇ ರಕ್ಷಣೆ ಇಲ್ಲದಿದ್ದರೂ ಹೊಳೆಯುವ ಕಂಬ, ಅಲಂಕಾರಿಕ ಗೋಡೆ, ಆಸರೆಯ ಜಗುಲಿಗಳು ಸುಸ್ಥಿತಿಯಲ್ಲಿವೆ.  ಕೊಂಚ ಶ್ರಮ ವಹಿಸಿದರೂ ದೇಗುಲಕ್ಕೆ ಸುಸ್ವರೂಪ ನೀಡಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ. 

    ಊರ ನಡುವಿನಲ್ಲಿರುವ, ಊರಿನ ಸೇವೆ ಪಡೆಯುತ್ತಿರುವ  ತ್ರಿಕೂಟಾಚಲ ವೀರಭದ್ರ ದೇವಾಲಯವೇ ಹಿಂದಿನ ಬಲ್ಲೇಶ್ವರ ದೇಗುಲ ಆಗಿದ್ದಿರಬಹುದು. ಊರ ನಡುವೆ ಹಾಳುಬಿದ್ದು ಕುಸಿದು ಕುಗ್ಗಿ ಹೋಗಿರುವ ಮೂರು ಸಮಾನಾಂತರ ಗರ್ಭಗುಡಿಯಿರುವ, ಈಗ ಚಂಡಿಕೇಶ್ವರಿದೇಗುಲ ಎಂದು ಗುರುತಿಸಿಕೊಳ್ಳುತ್ತಿರುವ ಆಲಯ ನಗರೇಶ್ವರ ದೇಗುಲ ಆಗಿದ್ದಿರಬಹುದು. ಅಲ್ಲಿನ ಎಡ ಗರ್ಭಗುಡಿಯ ಹೊರ ಆವರಣದಲ್ಲಿರುವ ಚಂಡಿಕೇಶ್ವರಿಯ ಸುಂದರ ವಿಗ್ರಹವನ್ನು ಸಂರಕ್ಷಿಸಿಕೊಂಡಿರುವ ಆಸಂದಿ ಹನುಮಂತಾಚಾರ್ ಮತ್ತು ಗೆಳೆಯರ ತಂಡ ಈ ದೇವತೆಗೆ ವರ್ಷಕ್ಕೊಮ್ಮೆ ಉತ್ಸವ ಮಾಡಿ ತಣಿಯುತ್ತಿದ್ದಾರೆ. 

   ಕಲ್ಲೇಶ್ವರ ದೇವಾಲಯವು ಊರ ಹೊರಗಿನ ಗುಡ್ಡದ ಮೇಲೆ ತನ್ನ ಇತಿಹಾಸದ ಭವ್ಯತೆಯನ್ನು ಸ್ಮರಿಸುತ್ತಾ ಒಂಟಿಯಾಗಿ ನಿಂತಿದೆ. ಇದರ ಸಮೀಪದ ದೃಷ್ಟಿಸ್ತಂಭದ ವೈಶಾಲ್ಯತೆ ನೂರಾರು ಕಥೆಗಳನ್ನು ಹೇಳುತ್ತದೆ. ಸಿದ್ದೇಶ್ವರ, ಮೈಲಾರಲಿಂಗೇಶ್ವರ, ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಸಾವಂತ್ರಮ್ಮ, ಕಾಳಿಕಾಂಬ, ಕರಿಯಮ್ಮ, ಸಪ್ತಮಾತೃಕೆಯರು ಇಂತಹ ಹಲವು ಹತ್ತು ದೇಗುಲಗಳು ನಿತ್ಯಪೂಜೆ ಪಡೆಯುತ್ತಿವೆ. ಗೌರಿಹಬ್ಬದ ಸ್ವರ್ಣಗೌರಿ ವಿಶೇಷ ಪೂಜೆಉತ್ಸವ ಪಡೆದುಕೊಳ್ಳುತ್ತಾಳೆ. ಊರಿನ ಜನರಲ್ಲಿ ತಮ್ಮ ಊರು ಮಹತ್ವದ ನೆಲೆಬೀಡಾಗಿತ್ತೆಂಬ ಭಾವ ಇದೆ. ಆದರೆ, ಏನು, ಹೇಗೆ ಎಂಬ ಖಚಿತತೆ ಇಲ್ಲ. ಮಕ್ಕಳ ಮನದಲ್ಲೇ ಊರು ಕೇರಿಯ ಪರಂಪರೆ, ಇತಿಹಾಸದ ಮಹತ್ವ ಮನಗಾಣಿಸುವ ಪ್ರಯತ್ನಗಳು ಆಗಲೇಬೇಕಿವೆ.

   ಪ್ರಸ್ತುತ ಪುರಾತತ್ವ ಇಲಾಖೆಯ ಮೂಲಕ ಬ್ರಹ್ಮೇಶ್ವರ- ಗಂಗೇಶ್ವರ, ವೀರಭದ್ರ, ಚಂಡಿಕೇಶ್ವರ ದೇಗುಲಗಳ ಸರ್ವೇ ಆಗಿದ್ದು ಕಾಯಕಲ್ಪಕ್ಕೆ ಕಾಯುತ್ತಿವೆ. ಊರಿನ ಹಿರಿತನಕ್ಕೆ ಸಾಕ್ಷಿಯಾಗಿದ್ದ ಆಸಂದಿಯ ದೊಡ್ಡಕೆರೆ ನೀರಿಲ್ಲದೆ ಒಣಗುತ್ತಿರುವಂತೆ ಊರಿನ ನಿರೀಕ್ಷೆಗಳು ಹುಸಿಯಾಗದಿರಲಿ. ಅಲ್ಲಲ್ಲಿ ಶಿಥಿಲವಾದ ರೂಪದಲ್ಲಿ ಕಂಗೊಳಿಸುತ್ತಿರುವ ಬತ್ತೇರಿ ಕೋಟೆ ಗೋಡೆಗಳು ಹಿಂದಿನ ಮಹಾವೈಭವವನ್ನು ಮತ್ತೆ ಸಾಕ್ಷಾತ್ಕಾರ ಮಾಡಿಕೊಳ್ಳುವಂತಾಗಲಿ.

-ಡಾ. ಮಂಜುಳಾ ಹುಲ್ಲಹಳ್ಳಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

118. ಮರುಕಳಿಸಿದ ನೆನಪುಗಳು

105. "ಅಜ್ಜಂಪುರ" ಸ್ಥಳನಾಮದ ಸುತ್ತ...........!

108. ಭಾರತದಲ್ಲಿ ಬೇರುಗಳು, ಆಫ್ರಿಕಾದಲ್ಲಿ ಬೆಳವಣಿಗೆ