121. ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿಋಷಿ ಎಸ್.ಚಂದ್ರಶೇಖರ್ ನಾರಣಾಪುರ
ಅಜ್ಜಂಪುರ ತಾಲೂಕು ಆದ ನಂತರ ಸ್ವಾಭಾವಿಕವಾಗಿ ವ್ಯಾಪ್ತಿಯು ವಿಸ್ತಾರವಾಗಿದೆ. ಅಂತೆಯೇ ಅಜ್ಜಂಪುರದ ಸಾಧಕರ ಹಿರಿಮೆಯು ಬೆಳೆಯುತ್ತಿರುವುದು ಸಂತೋಷದ ಸಂಗತಿ.
ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಸುಬ್ರಹ್ಮಣ್ಯ ಶೆಟ್ಟರು ಹಾಗೂ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾದ ಅಜ್ಜಂಪುರ ಮಂಜುನಾಥ್ ಅವರು ಸೇರಿದಂತೆ,
ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಶ್ರೀ ಚಂದ್ರಶೇಖರ್ ಅವರಿಗೆ 2022ನೇ ಸಾಲಿಗೆ ಸಂದಿರುವ ರಾಜ್ಯೋತ್ಸವ ಪ್ರಶಸ್ತಿಯು ಮೂರನೆಯದಾಗಿದೆ.
ಅವರನ್ನು ನೇರವಾಗಿ ಮಾತನಾಡಿಸಿ ಸಂದರ್ಶನ ಪಡೆಯುವ ಅವಕಾಶ ಆಗದಿದ್ದರೂ ಮಿತ್ರ ಅಪ್ಪಾಜಿ ಅಜ್ಜಂಪುರ ಅವರು ಚಿತ್ರ ಮಾಹಿತಿಗಳನ್ನು ಸಂಗ್ರಹಿಸಿ ಈ ಲೇಖನವನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಚಂದ್ರಶೇಖರ ನಾರಣಾಪುರ ಅವರಿಗೆ ಅಭಿನಂದನೆಗಳು.
ಶಂಕರ ಅಜ್ಜಂಪುರ
ಸಂಪಾದಕ
ಅಂತರಜಾಲದಲ್ಲಿ ಅಜ್ಜಂಪುರ
-೦-೦-೦-೦-೦-೦-
ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ :
ಕೃಷಿ ಋಷಿ ಚಂದ್ರಶೇಖರ ನಾರಣಾಪುರ
ಕೃಷಿ ಕ್ಷೇತ್ರದ ಸಾಧನೆಗಾಗಿ ಚಂದ್ರಶೇಖರ ನಾರಣಾಪುರ ಅವರಿಗೆ ೨೦೨೨ನೆಯ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರಕಾರವು ನೀಡಿ ಗೌರವಿಸಿದೆ. ಸಾವಯವ ಕೃಷಿಯಲ್ಲಿ ಅವರು ಪರಿಣತರು. ತಮ್ಮ ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿಯ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ವಿಯೂ ಆಗಿದ್ದಾರೆ. ರಾಜ್ಯ ಕೃಷಿ ಇಲಾಖೆ, ಕೃಷಿ ವಿ.ವಿ.ಗಳು, ಕೃಷಿ ಸಂಶೋಧನಾ ಕೇಂದ್ರಗಳು ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿ ಕ್ಷೇತ್ರಕ್ಕೆ ನೂರಾರು ರೈತರನ್ನು, ವಿದ್ಯಾರ್ಥಿಗಳನ್ನು, ಶಿಕ್ಷಣಾರ್ಥಿಗಳನ್ನು ಶೈಕ್ಷಣಿಕ ಪ್ರವಾಸದಲ್ಲಿ ಕರೆತಂದು, ಸಾವಯವ ಕೃಷಿ ತತ್ತ್ವಗಳ ಬಗ್ಗೆ ಚಂದ್ರಶೇಖರ ಅವರಿಂದ ಮಾರ್ಗದರ್ಶನ ಮಾಡಿಸಿದ್ದಾರೆ.
ಚಂದ್ರಶೇಖರ ನಾರಣಾಪುರ ಅವರ ಕರ್ಮಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿ. ಮೂಲ ಸ್ಥಳ ಅಜ್ಜಂಪುರ ತಾಲೂಕಿನ ನಾರಣಾಪುರ. ಹೊಯ್ಸಳರ ಕಾಲದಲ್ಲಿ ನಾರಾಯಣಸ್ವಾಮಿ ದೇಗುಲವಿದ್ದ ಕಾರಣ ನಾರಯಣಪುರ ಎಂಬ ಹೆಸರು ಬಂದಿರಬೇಕು. ಆ ಹೆಸರು ಆಡುಮಾತಿನಲ್ಲಿ 'ನಾರಣಾಪುರ' ಎಂದಾಗಿರಬೇಕು.ಅದೇನೆ ಇದ್ದರೂ ಮೂಗುತಿಹಳ್ಳಿಯು ಅವರ ಸಾಧನೆಯಿಂದಾಗಿ ರಾಜ್ಯದ ರೈತರ, ಕೃಷಿ ತಂತ್ರಜ್ಞರ ಗಮನ ಸೆಳೆದಿದೆ. ಒಂದು ಕಾಲದಲ್ಲಿ ಬರಡು ಭೂಮಿಯಾಗಿದ್ದ ಅವರ ಕ್ಷೇತ್ರವು ಸಾವಯವ ಕೃಷಿಯಿಂದಾಗಿ ಫಲವತ್ತಾದ ಮಣ್ಣಿಗೆ ಪರಿವರ್ತಿತವಾಗಿದೆ.
ಚಂದ್ರಶೇಖರ ನಾರಣಾಪುರ ಅವರು ಒಂದು ಕಾಲದಲ್ಲಿ ಚಿಕ್ಕಮಗಳೂರಿನ 'ಗೆಳೆಯ' ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ದಶಕಕ್ಕೂ ಮೀರಿ ಪತ್ರಕರ್ತರಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದರು. ಮೂಗುತಿಹಳ್ಳಿ ಜಮೀನಿನಲ್ಲಿ ಮೊದಲ ಬಾರಿಗೆ ಅವರು ಮಾಡಿದ ಜೀವಾಮೃತ(ಬಯೋಡೈಜೆಸ್ಟರ್) ಪ್ರಯೋಗವನ್ನು ಅವರು ರಾಜ್ಯಮಟ್ಟದ ಪತ್ರಿಕೆಯೊಂದು ವಿಸ್ತೃತ ವರದಿ ಮಾಡಿತು. ಸಾವಯವ ಕೃಷಿ ಅವರ ಕೈಹಿಡಿಯಿತು. ದೇಸಿ ಹಸುಗಳನ್ನು ಸಾಕಿ ಹೈನುಗಾರಿಕೆಯ ಸಾಹಸವನ್ನು ಅವರು ಕೈಗೊಂಡರು. ಕೃಷಿ ಬೆಳೆಗಳಲ್ಲದೆ ಬಹು ವಾರ್ಷಿಕ ತೋಟದ ಬೆಳೆಗಳನ್ನು ಅವರು ಮಾಡಿದರು.
ಚಂದ್ರಶೇಖರ ನಾರಣಾಪುರ ಅವರು ಸಾರಸ್ವತ ಲೋಕದಲ್ಲೂ ಒಂದು ದಾಖಲೆಯ ಕಾರ್ಯವನ್ನು ಮಾಡಿದ್ದಾರೆ. ಅಕಾಡೆಮಿಕ್ ವಲಯದ ವಿದ್ವಾಂಸರು ಕೂಡ ಅವರ ಸಾಧನೆಯನ್ನು ಕಂಡು ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವರು. 'ಕರ್ನಾಟಕದ ವೀರಶೈವ ಮಠಗಳು' ಎಂಬ ಬೃಹತ್ ಮಾಹಿತಿ ಕೋಶವು(೧೪೦೬ ಪುಟಗಳು) ಹಿಂದೆಂದೂ ಆಗದ ಆಕರ ಸಾಧನೆಯಾಗಿ ಉಳಿದಿದೆ. ರಾಜ್ಯದ ೨೭ ಜಿಲ್ಲೆಗಳ ೧೭೫ ತಾಲೂಕುಗಳ ವೀರಶೈವ ಮಠಗಳ ಮಾಹಿತಿಯನ್ನು ಸ್ವತಃ ಪ್ರವಾಸ ಮಾಡಿ ಕಲೆಹಾಕಿ ದಾಖಲಿಸಿದ್ದಾರೆ.
ಕನ್ನಡ ವಿ.ವಿ. ಉಪಕುಲಪತಿಗಳಾಗಿದ್ದ ಡಾ. ಎಂ.ಎಂ. ಕಲಬುರ್ಗಿಯವರು, "ನಮ್ಮಲ್ಲಿ ವಿಶ್ವವಿದ್ಯಾಲಯಗಳಿವೆ. ಅಲ್ಲಿ ವಿದ್ವಾಂಸರಿದ್ದಾರೆ. ಅವರಿಗೆ ಕೈತುಂಬ ಸಂಬಳವೂ ಬರುತ್ತದೆ. ಕ್ಷೇತ್ರ ಕಾರ್ಯದ ಅನುಕೂಲತೆಗಳಿವೆ, ಓದು-ಬರಹ-ಪ್ರಕಟಣಾ ಸೌಲಭ್ಯಗಳೂ ಇವೆ. ಅವರು ಕರ್ನಾಟಕ ಸಂಸ್ಕೃತಿಯ ಭಾಗವೇ ಆಗಿರುವ ಈ ಶ್ರಮನಿಷ್ಠ "ಆಕರಶೋಧ ಕೃತಿ"ಯನ್ನು ನೋಡಬೇಕು." ಎಂದು ತಮ್ಮ ಮೌಲಿಕ ಮುನ್ನುಡಿಯಲ್ಲಿ ಸಲಹೆ ನೀಡಿದ್ದಾರೆ.
ಮುಂದುವರೆದು " ಚಂದ್ರಶೇಖರ ನಾರಣಾಪುರ ಅವರು ಕರ್ನಾಟಕದ ೨೭ ಜಿಲ್ಲೆಗಳನ್ನೂ, ಎಲ್ಲ ,೧೭೫ ತಾಲೂಕಗಳನ್ನೂ ಸುತ್ತಿದ್ದಾರೆ. ಬಹುಶಃ ಈ ಶತಮಾನದ ಬಹು ದೊಡ್ಡ ಏಕವ್ಯಕ್ತಿ ಕಾರ್ಯವೆಂಬಂತೆ ಈ ಕೆಲಸವನ್ನು ಪೂರೈಸಿದ್ದಾರೆ." ಎಂದು ಉದ್ಗರಿಸಿದ್ದಾರೆ.
-೦-೦-೦-೦-೦-೦-೦-೦-
ಸಾಧನೆಗಳ ಸಂಕ್ಷಿಪ್ತ ನೋಟ
ಹೆಸರು: ಶ್ರೀ N.S.ಚಂದ್ರಶೇಖರ್
ತಂದೆ: ಶ್ರೀ N.K. ಶಿವರುದ್ರಪ್ಪ
ಹುಟ್ಟಿದ ದಿನಾಂಕ:
ವಿಳಾಸ:
N.S.ಚಂದ್ರಶೇಖರ್
ಕೃಷಿ ನಿವಾಸ.
ಪಿ.ಯು. ಕಾಲೇಜಿನ ಹತ್ತಿರ.
ಮೂಗುತಿಹಳ್ಳಿ
ಚಿಕ್ಕಮಗಳೂರು (ತಾ) - 577 133
ಮೊ.ನಂ. :
9902078988, 9448484024.
ಕೃಷಿಗೆ ಪ್ರವೇಶ:
2009
ಕೃಷಿ ಭೂಮಿ ವಿಸ್ತೀರ್ಣ:
12 ಎಕರೆ.
ಪದ್ದತಿ:
ನೈಸರ್ಗಿಕ ಕೃಷಿ. ಉಳುಮೆ ಇಲ್ಲದೆ, ಯಾವುದೇ ಗೊಬ್ಬರ ಬಳಸದೆ, ಔಷಧ ಸಿಂಪರಣೆ ಮಾಡದೆ ಇವರ ಕೃಷಿ ಭೂಮಿಯಲ್ಲಿ ನೈಸರ್ಗಿಕ ವಾತಾವರಣ ಸೃಷ್ಟಿ ಮಾಡಿ ಸರಾಸರಿ ಉತ್ಪಾದನೆ ತೆಗೆಯಲಾಗುತ್ತಿದೆ. ಅಂದರೆ 10 ರೂಪಾಯಿ ಖರ್ಚು ಮಾಡಿ 100 ರೂಪಾಯಿ ಆದಾಯ ತೆಗೆಯಲಾಗುತ್ತಿದೆ.
ಬೆಳೆಗಳು:
ಅಡಿಕೆ, ಕಾಫಿ, ಕೋಕೊ, ಬಾಳೆ. 10 ವಿಧದ ಹಣ್ಣಿನ ಗಿಡಗಳು. ಜಾಯಿಕಾಯಿ. ಒಂದು ಎಕರೆಯಲ್ಲಿ ದನಗಳಿಗೆ ಮೇವಿನ ಬೆಳೆ.
ನೀರಾವರಿ ವ್ಯವಸ್ಥೆ:
2 ಕೊಳವೆ ಬಾವಿ. ಮತ್ತು 1 ತೆರೆದ ಬಾವಿ.
ಅರಿವು ಹಂಚಿಕೆ:
ತಿಂಗಳಿಗೆ 2 ರಂತೆ 50 ರಿಂದ 100 ಜನರಿಗೆ ನೈಸರ್ಗಿಕ ಕೃಷಿಯ ಬಗ್ಗೆ ತರಬೇತಿ ಕಾರ್ಯಕ್ರಮಗಳು.
ನಿತ್ಯ ಇವರ ತೋಟಕ್ಕೆ ಭೇಟಿ ನೀಡುವ ಆಸಕ್ತ ರೈತರು ಮತ್ತು ರೈತ ಯುವಕರಿಗೆ ಮಾಹಿತಿ ನೀಡುವುದು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ನಬಾರ್ಡ, ಬ್ಯಾಂಕ್ ಗಳು ಹಾಗು N.G.O ಗಳು ನಡೆಸುವ ಕಾರ್ಯಾಗಾರಗಳಲ್ಲಿ ನೈಸರ್ಗಿಕ ಕೃಷಿಯ ವಿಷಯದಲ್ಲಿ ಉಪನ್ಯಾಸ ನೀಡಿ ವರ್ಷದಲ್ಲಿ ಸರಾಸರಿ 1000ದಿಂದ 1500 ರೈತರಿಗೆ ಅರಿವು ಮೂಡಿಸುತ್ತಿದ್ದಾರೆ.
ಸಾಂಸ್ಕೃತಿಕ, ಸಾಹಿತ್ಯ, ಜಾನಪದ ಮತ್ತು ಧಾರ್ಮಿಕ ಸಮ್ಮೇಳನಗಳಲ್ಲಿ ಚಂದ್ರಶೇಖರ್ ಉಪನ್ಯಾಸ ನೀಡಿ ನೈಸರ್ಗಿಕ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪತ್ರಿಕೆಗಳು ಆಕಾಶವಾಣಿ. ದೂರದರ್ಶನ. ಮತ್ತು ವಿವಿಧ ಟಿ.ವಿ. ಚಾನಲ್ ಗಳಲ್ಲಿ ಇವರ ಸಂದರ್ಶನ ಬಿತ್ತರಗೊಂಡಿವೆ ಜೊತೆಗೆ ಯೂಟ್ಯೂಬ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಇವರ ಸಾಧನೆ ಬಗ್ಗೆ 2-3 ಪುಸ್ತಕಗಳಲ್ಲಿ ಇವರ ಯಶೋಗಾಥೆ ಪ್ರಕಟಗೊಂಡಿವೆ.
ಪ್ರಶಸ್ತಿ, ಪುರಸ್ಕಾರಗಳು:
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ "ಪ್ರಗತಿಪರ ಕೃಷಿಕ". ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ "ಶ್ರೇಷ್ಠ ತೋಟಗಾರಿಕ ರೈತ". 2014 ರಲ್ಲಿ ಗುಜರಾತ್ ಸರ್ಕಾರದ "ಶ್ರೇಷ್ಠ ಕೃಷಿಕ" ಪ್ರಶಸ್ತಿ.
ವಂದೇಮಾತರಮ್ ಸಂಸ್ಥೆಯ "ಕೃಷಿ ಋಷಿ" ಪ್ರಶಸ್ತಿ. ವಾರಣಾಸಿ ಜಂಗಮ ವಾಡಿ ಮಠದ ಗುರುಕುಲ ನೀಡಿದ "ಕೃಷಿ ರತ್ನ" ಪ್ರಶಸ್ತಿ.
"ಶ್ರೀ ರೇಣುಕಾಚಾರ್ಯ" ಪ್ರಶಸ್ತಿ. ಕರ್ನಾಟಕ ಸರ್ಕಾರ ಕೊಡುವ 2022 ರ "ಕೃಷಿ ಪಂಡಿತ" ಪ್ರಶಸ್ತಿ.
ರಾಜ್ಯ ಪಶುಸಂಗೋಪನೆ ಇಲಾಖೆ ಪಶುಪಾಲನೆಗಾಗಿ ನೀಡಿದ "ಶ್ರೇಷ್ಠ ಕೃಷಿಕ" ಪ್ರಶಸ್ತಿ. ಗೊ. ರು. ಚ. ಪ್ರತಿಷ್ಠಾನದ "ಸೇವಾ ಪುರಸ್ಕಾರ"
ಜಿಲ್ಲಾ ಸಮಿತಿ:
ಕೃಷಿ ಇಲಾಖೆ ಆತ್ಮ ದ ಜಿಲ್ಲಾ ಸಮಾಲೋಚನ ಸಮಿತಿಯ ಸದಸ್ಯ. ಕೃಷಿ ಇಲಾಖೆಯ ಸಾವಯವ ಯೋಜನೆಯ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯ. ಜಿಲ್ಲೆಯ ಹಾಪ್ ಕಾಮ್ಸ್ ನ ಸದಸ್ಯ.
ರೈತ ಬಳಗ ರಚನೆ:
ಚಿಕ್ಕಮಗಳೂರು ತಾಲ್ಲೂಕಿನ ಮಲೆನಾಡಿನ 20 ಜನ ರೈತರ ಒಕ್ಕೂಟ "ಕಾಯಕ ಬಳಗ" ರಚನೆ ಮಾಡಿ ತಿಂಗಳಿಗೆ ಒಮ್ಮೆ ಅನುಕ್ರಮವಾಗಿ ಒಬ್ಬೊಬ್ಬರ ತೋಟದಲ್ಲಿ ಸಭೆ ಸೇರಿ ಕೃಷಿ ಚಟುವಟಿಕೆಯ ಬಗ್ಗೆ ಚರ್ಚೆ ಮಾಡಲಾಗುತ್ತದೆ.
ಇತರ ವಿಷಯಗಳು:
ಪತ್ರಿಕೋದ್ಯಮದಲ್ಲಿ 15 ವರ್ಷ ಸೇವೆ. ಕರ್ನಾಟಕದ ಧಾರ್ಮಿಕ ಕೇಂದ್ರಗಳ ಬಗ್ಗೆ ಅಧ್ಯಯನ ಇದಕ್ಕಾಗಿ ರಾಜ್ಯದ 24 ಸಾವಿರ ಹಳ್ಳಿಗಳ ವೀಕ್ಷಣೆ.
ಕರ್ನಾಟಕದ ವೀರಶೈವ ಮಠಗಳು ಎಂಬ 1406 ಪುಟಗಳ ಬೃಹತ್ ಗ್ರಂಥ ಸೇರಿದಂತೆ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
-೦-೦-೦-೦-೦-೦-೦-೦-
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ